ಸೋಮವಾರ, ಮಾರ್ಚ್ 4, 2019

ಇಬ್ಬರು ಸ್ಪೀಕರ್‌ ಕಂಡ ನಾಲ್ಕನೇ ಲೋಕಸಭೆ

1967ರಲ್ಲಿ ನಡೆದ ಚುನಾವಣೆಯು ಹಲವು ದೃಷ್ಟಿಗಳಿಂದ ಮಹತ್ವ ಪಡೆದುಕೊಂಡಿದೆ. ಈ ಚುನಾವಣೆಯ ಹೊತ್ತಿಗೆ ಲೋಕಸಭೆಸ್ಥಾನಗಳು 520ಕ್ಕೆ ಏರಿಕೆಯಾಗಿದವು. 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡವು. ನೆಹರು ಯುಗ ಮುಗಿದು ಇಂದಿರಾ ಯುಗಕ್ಕೆ ಬುನಾದಿ ಹಾಕಿದ ಚುನಾವಣೆ ಇದು. ಇಂದಿರಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌, ಶೇ.40ರಷ್ಟು ಮತ ಪಡೆದ 283 ಸ್ಥಾನಗಳನ್ನು ಗೆದ್ದುಕೊಂಡು ಸಿಂಪಲ್‌ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಆದರೆ, ಈ ಹಿಂದಿನ ಮೂರು ಚುನಾವಣೆಗಳಿಗೆ ಹೋಲಿಸಿದರೆ, ಅದ್ಭುತ ಗೆಲವು ಏನಲ್ಲ. ಈ ಚುನಾವಣೆಯಲ್ಲೂ ರಾಜ್ಯಸಭೆಯ 13 ಸದಸ್ಯರು ಕೆಳಮನೆಗೆ ಆಯ್ಕೆಯಾದರು. ವಿಶೇಷ ಎಂದರೆ, ರಾಜಗೋಪಾಲಚಾರಿ ಅವರ ಸ್ವತಂತ್ರ ಪಾರ್ಟಿ ಕಾಂಗ್ರೆಸ್‌ ನಂತರ ಅತಿ ದೊಡ್ಡ ಪಕ್ಷ ವಾಯಿತು. ಅದು ಒಟ್ಟು 44 ಸ್ಥಾನ ಗೆದ್ದುಕೊಂಡಿತು. 35 ಸ್ಥಾನಗಳೊಂದಿಗೆ ಬಿಜೆಎಸ್‌ ಮೂರನೇ ಸ್ಥಾನದಲ್ಲಿ ಉಳಿಯಿತು. ಗುಜರಾತ್‌, ಮದ್ರಾಸ್‌, ಒಡಿಶಾ, ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳ, ದಿಲ್ಲಿಯಲ್ಲಿ ಕಾಂಗ್ರೆಸ್‌ ಭಾರಿ ಸೋಲು ಎದುರಾಯಿತು. ಅಂದಿನ ರಾಜಕಾರಣದಲ್ಲಿ ಕಾಂಗ್ರೆಸ್‌ನದ್ದು ದೊಡ್ಡಣ್ಣ ಆ್ಯಟಿಟ್ಯೂಡ್‌. ಆದರೆ, ನೆಹರು ಮತ್ತು ಶಾಸ್ತ್ರಿ ಸಾವಿನ ನಂತರ ಕಾಂಗ್ರೆಸ್‌ನೊಳಗಿದ್ದ ಏಕತೆ ಮಾಯವಾಗಿ, ಒಳಜಗಳ ಶುರುವಾದವು. ಆದರೂ ಅದೆಲ್ಲವನ್ನೂ ಸಂಭಾಳಿಸುವಲ್ಲಿ ಇಂದಿರಾ ಯಶಸ್ವಿಯಾದರು. ಇದೇ ಅವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಕೂಡ ಗಣನೀಯವಾಗಿ ಇಳಿಜಾರಿನಲ್ಲಿತ್ತು. ಪಂಚವಾರ್ಷಿಕ ಯೋಜನೆ ಮೂಲಕ ಶೇ.5.6ರಷ್ಟು ಜಿಡಿಪಿ ಸಾಧಿಸುವ ಗುರಿ ಇತ್ತು. ವಾಸ್ತವದಲ್ಲಿ ಗುರಿಸಾಧನೆಯಾಗಿದ್ದು ಕೇವಲ ಶೇ.2.4 ಅಷ್ಟೆ. ಆಡಳಿತಾತ್ಮಕ ಮತ್ತು ರಾಜಕೀಯ ವೈಫಲ್ಯಗಳ ಒಟ್ಟು ಪರಿಣಾಮ ಮುಂದಿನ ಐದು ವರ್ಷಗಳಲ್ಲಿ ಕಾಣಬೇಕಾಯಿತು. ನಾಲ್ಕನೇ ಲೋಕಸಭೆಯ ಮತ್ತೊಂದು ವಿಶೇಷ ಎಂದರೆ, ಇಬ್ಬರು ಸ್ಪೀಕರ್‌ಗಳನ್ನು ಕಂಡಿತು. 1967ರಿಂದ 1969ರವರೆಗೆ ನೀಲಂ ಸಂಜೀವ್‌ ರೆಡ್ಡಿ ಹಾಗೂ 1969ರಿಂದ 71ವರೆಗೆ ಜಿ.ಎಸ್‌.ಧಿಲ್ಲೋನ್‌ ಅವರು ಸ್ಪೀಕರ್‌ ಆಗಿ ಕಾರ್ಯನಿರ್ವಹಿಸಿದರು. ಕಾಂಗ್ರೆಸ್‌ ತೊರೆದಿದ್ದರಿಂದ ಸಂಜೀವ್‌ ರೆಡ್ಡಿ ಅವರು ಸ್ಪೀಕರ್‌ ಹುದ್ದೆಯನ್ನು ಬಿಟ್ಟುಕೊಡಬೇಕಾಯಿತು. 
- ತಿಪ್ಪಾರ 

ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ

ಎಸ್‌ಪಿ ಜನತಾ ಪರಿವಾರದ ಮತ್ತೊಂದು ಟಿಸಿಲು

ಕಾಂಗ್ರೆಸ್‌ ಮತ್ತು ಬಿಜೆಪಿಯ ಹೊರತಾಗಿ ಸದ್ದು ಮಾಡುವ ಪ್ರಾದೇಶಿಕ ಪಕ್ಷ ಗಳ ಪೈಕಿ ಸಮಾಜವಾದಿ ಪಾರ್ಟಿ(ಎಸ್‌ಪಿ)ಯೂ ಒಂದು. ಉತ್ತರ ಪ್ರದೇಶದಲ್ಲಿ ಬುನಾದಿ ಹೊಂದಿರುವ ಎಸ್‌ಪಿ, ತನ್ನನ್ನು ತಾನು ಪ್ರಜಾಸತ್ತಾತ್ಮಕ ಸಮಾಜವಾದಿ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಭಾರತದ ರಾಜಕಾರಣದಲ್ಲಿ ಉತ್ತರ ಪ್ರದೇಶಕ್ಕೆ ವಿಶೇಷ ಸ್ಥಾನವಿದೆ. ಯಾಕೆಂದರೆ, ಈ ರಾಜ್ಯವೊಂದೇ 80 ಸೀಟುಗಳನ್ನು ತನ್ನ ಮಡಿಲೊಳಗೆ ಇಟ್ಟುಕೊಂಡಿದೆ. ಹಾಗಾಗಿ, ತಮ್ಮದೇ ಆದ ಅಸ್ತಿತ್ವ ಹೊಂದಿರು ಎಸ್‌ಪಿ, ಬಿಎಸ್‌ಪಿ ಕೇಂದ್ರದಲ್ಲಿ ಸಮ್ಮಿಶ್ರ ಸರಕಾರಗಳು ರಚನೆಯಾದಾಗಲೆಲ್ಲ ಪ್ರಮುಖ ಪಾತ್ರ ನಿರ್ವಹಿಸಿವೆ. 2019ರ ಚುನಾವಣೆಯಲ್ಲೂ ಉಭಯ ಪಕ್ಷ ಗಳು ಮೈತ್ರಿಯೊಂದಿಗೆ ಕಣಕ್ಕಿಳಿಯುತ್ತಿರುವುದು ಇದಕ್ಕೆ ಸಾಕ್ಷಿ. ಜಯಪ್ರಕಾಶ್‌ ನಾರಾಯಣ್‌ ಅವರ ಚಳವಳಿಯಿಂದ ಉದಯಿಸಿದ್ದ ಜನತಾ ಪಾರ್ಟಿ ಮೂರು ವರ್ಷದ ಅಧಿಕಾರದ ಬಳಿಕ ಛಿದ್ರವಾಗಿ ಹೋಯಿತು. ಆಗ ಅನೇಕ ಪಕ್ಷ ಗಳು ತಲೆ ಎತ್ತಿದವು. ಆ ಪೈಕಿ ಎಸ್‌ಪಿಯೂ ಒಂದು. ತಮ್ಮ ಕಾರ್ಯಕರ್ತರಿಂದ ಪ್ರೀತಿಯಿಂದ 'ನೇತಾಜಿ' ಎಂದು ಕರೆಯಿಸಿಕೊಳ್ಳುವ ಮುಲಾಯಂ ಸಿಂಗ್‌ ಯಾದವ್‌ ಉತ್ತರ ಪ್ರದೇಶದಲ್ಲಿ ಪಕ್ಷ ವನ್ನು ಸಂಘಟಿಸಿ ಅದನ್ನು ಅಧಿಕಾರದವರೆಗೂ ಕೊಂಡೊಯ್ದರು. ನಾಲ್ಕು ಬಾರಿ ಬೇರೆ ಪಕ್ಷ ಗಳ ನೆರವಿನೊಂದಿಗೆ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೂ ಬಂದರು. ಹಾಗೆಯೇ, ದೇವೇಗೌಡ ಮತ್ತು ಐ.ಕೆ.ಗುಜ್ರಾಲ್‌ ನೇತೃತ್ವದ ಕೇಂದ್ರ ಸರಕಾರದಲ್ಲೂ ಎಸ್‌ಪಿ ಪ್ರಮುಖ ಪಾತ್ರ ನಿರ್ವಹಿಸಿತ್ತು. 2012ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆ ಹುಸಿಗೊಳಿಸಿದ ಎಸ್‌ಪಿ, ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಈ ಬಾರಿಯೂ ನೇತಾಜಿ ಸಿಎಂ ಆಗುತ್ತಾರೆಂದು ಎಲ್ಲರೂ ಭಾವಿಸಿದ್ದರು. ಆದರೆ, ಮುಲಾಯಂ ಸಿಂಗ್‌ ಅವರು ತಮ್ಮ ಪುತ್ರ ಅಖಿಲೇಶ್‌ ಸಿಂಗ್‌ ಯಾದವರ್‌ ಅವರಿಗೆ ಪಟ್ಟ ಕಟ್ಟಿ ಮುಖ್ಯಮಂತ್ರಿ ಮಾಡಿದರು. ಅಂದ ಹಾಗೆ, ಮೊದಲ ಬಾರಿಗೆ ಎಸ್‌ಪಿ ಐದು ವರ್ಷಗಳ ಪೂರ್ತಿ ಉತ್ತರ ಪ್ರದೇಶದಲ್ಲಿ ಅಧಿಕಾರ ಚಲಾಯಿಸಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಎಸ್‌ಪಿಯೊಳಗೇ ದೊಡ್ಡ ಮಟ್ಟದ ಕೋಲಾಹಲ ಕೂಡ ನಡೆಯಿತು. ಸೈದ್ಧಾಂತಿಕವಾಗಿ ಎಸ್‌ಪಿ ಜಾತ್ಯತೀತ, ಸಮಾಜವಾದ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಎಸ್‌ಪಿ ಚುನಾವಣಾ ಗುರುತು ಸೈಕಲ್‌. ಅಖಿಲೇಶ್‌ ಸಿಂಗ್‌ ಯಾದವ್‌ ಈಗ ಪಕ್ಷ ವನ್ನು ಮುನ್ನಡೆಸುತ್ತಿದ್ದಾರೆ. 

ಈ ಲೇಖನವು ವಿಜಯಕರ್ನಾಟಕದಲ್ಲಿ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.

ಎಡ ರಾಜಕಾರಣದ ಮುಂಚೂಣಿ ಪಕ್ಷ ಸಿಪಿಐ

ಮ್ಯುನಿಸ್ಟ್‌ ಪಾರ್ಟಿ ಇಂಡಿಯಾ(ಸಿಪಿಐ) ಭಾರತೀಯ ರಾಜಕಾರಣದಲ್ಲಿ ತನ್ನದೇ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಭಾರತದಲ್ಲಿ ಸಿಪಿಐ ಯಾವಾಗ ಆರಂಭವಾಯಿತು ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ 1925 ಡಿಸೆಂಬರ್‌ 26ರಂದು ಹೇಳಲಾಗುತ್ತದೆ. ಹಾಗೆಯೇ ಪ್ರತಿ ವರ್ಷ 26ರಂದು ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತದೆ. ಸ್ವಾತಂತ್ರ್ಯಪೂರ್ವದಿಂದಲೂ ಎಡಪಕ್ಷ ಗಳು ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ಹೊಂದಿದ್ದರೂ ಅವುಗಳ ಪ್ರಾಮುಖ್ಯತೆ ಸ್ವಾತಂತ್ರ್ಯದ ನಂತರವೇ ಹೆಚ್ಚು ಎದ್ದು ಕಂಡಿತು. ಎಡಪಂಥೀಯ ವಿಚಾರಧಾರೆ ನಮ್ಮ ನೆಲದ್ದಲ್ಲ. ಹಾಗಾಗಿ, ಚೀನಾ ಮತ್ತು ಸೋವಿಯತ್‌ ರಷ್ಯಾ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯವು ಭಾರತದಲ್ಲಿನ ಎಡಪಕ್ಷ ದ ಮೇಲೂ ಪರಿಣಾಮ ಬೀರಿ, 1964ರಲ್ಲಿ ಸಿಪಿಐ ಇಬ್ಭಾಗವಾಯಿತು. ಸಿಪಿಐ(ಮಾರ್ಕ್ಸ್‌ವಾದ) ಪ್ರತ್ಯೇಕವಾಗಿ ಪಕ್ಷ ದ ಸ್ಥಾನಮಾನ ಪಡೆದುಕೊಂಡಿತು. ಎಸ್‌.ಸುಧಾಕರ ರೆಡ್ಡಿ ಸಿಪಿಐನ ಪ್ರಸಕ್ತ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ಎಡಪಕ್ಷ ಗಳ ಜತೆ ಸಿಪಿಐ ಅಧಿಕಾರದಲ್ಲಿತ್ತು. ಕೇರಳದಲ್ಲಿ 19, ಪಶ್ಚಿಮ ಬಂಗಾಳದಲ್ಲಿ ಒಬ್ಬರು ವಿಧಾನಸಭೆ ಸದಸ್ಯರಿದ್ದಾರೆ. ಲೋಕಸಭೆಯಲ್ಲಿ ಒಬ್ಬ ಹಾಗೂ ರಾಜ್ಯಸಭೆಯಲ್ಲಿ ಇಬ್ಬರು ಪ್ರತಿನಿಧಿಗಳಿದ್ದಾರೆ.ಘ್ಕಿ ಆರಂಭಿಕ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್‌ ನಂತರ ಅತ್ಯುತ್ತಮ ಪ್ರದರ್ಶನ ತೋರಿದ ಪಕ್ಷ ಎಂದರೆ ಸಿಪಿಐ ಮಾತ್ರ. ಭಾರತದಲ್ಲೂ ಈಗಲೂ ಕಮ್ಯುನಿಸ್ಟ್‌ ಪಾರ್ಟಿಗೆ ಫಾಲೋ ಮಾಡುವ ಅಸಂಖ್ಯೆ ಜನರಿದ್ದಾರೆ. ಆದರೆ, ಅವರನ್ನು ಮುನ್ನಡೆಸಬಲ್ಲ ಸರ್ವ ಒಪ್ಪಿಗೆಯಾಗಬಲ್ಲ ನಾಯಕತ್ವದ ಕೊರತೆ ಇದೆ. ಇಡೀ ದೇಶವನ್ನು ಪ್ರಭಾವಿಸಬಲ್ಲ ನಾಯಕರು ಎಡಪಕ್ಷ ಗಳಿಂದ ಹೊರಬೀಳಲಿಲ್ಲ. ಹಾಗಾಗಿ, ಸಿಪಿಐ 1960ರ ದಶಕದ ನಂತರ, ಮೇಲ್ಮುಖದ ಬೆಳವಣಿಗೆಯನ್ನು ಕಾಣಲೇ ಇಲ್ಲ. ಸಿಪಿಐನಿಂದ ಛಿದ್ರವಾಗಿ ಹೊರಹೋಗಿದ್ದ ಸಿಪಿಎಂ ತುಸು ಬೆಳವಣಿಗೆಯನ್ನು ಕಂಡಿತಾದರೂ ಅದು ಕೂಡ ಇತ್ತೀಚಿನ ವರ್ಷಗಳಲ್ಲಿ ನೆಲಕಚ್ಚುತ್ತಾ ಬಂದಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯವಾದ ರಾಜಕಾರಣವನ್ನು ಕಟ್ಟಿ ಬೆಳೆಸುವ ಸಾಮರ್ಥ್ಯ ಇದ್ದರೂ ಅದನ್ನು ಹೊಣೆ ಹೊತ್ತು ಕೊಳ್ಳುವ ನಾಯಕರಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. 

ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ. ಲಿಂಕ್ ಮೇಲೆ ಕ್ಲಿಕ್ಮ ಮಾಡಿ
https://vijaykarnataka.indiatimes.com/elections/lok-sabha/news/a-history-of-communist-party-of-india-cpi/articleshow/68232805.cms