ಶುಕ್ರವಾರ, ಸೆಪ್ಟೆಂಬರ್ 14, 2007

ವಿದಾಯ ಹೇಳಿದ 'ನಾಯಕ' ಫ್ಲೆಮಿಂಗ್

ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ನಾಯಕ ಯಾರು ಎಂಬ ಪ್ರಶ್ನೆ ಎದುರಾದಾಗ ಎರಡು ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತವೆ. ಆಸ್ಟ್ರೇಲಿಯಾ ತಂಡದ ನಾಯಕ 'ರಿಕಿ ಪಾಟಿಂಗ್' ಮತ್ತು ನ್ಯೂಜಿಲೆಂಡ್ ತಂಡದ 'ಸ್ಟೀಫನ್ ಫ್ಲೆಮಿಂಗ್'.

ಆದರೆ, ಇವರಿಬ್ಬರಲ್ಲೂ ಯಾರು ಉತ್ತಮರು ಎಂದು ಪ್ರಶ್ನಿಸಿದಾಗ, ಕ್ರಿಕೆಟ್ ಪಂಡಿತರು ಫ್ಲೆಮಿಂಗ್‌ನತ್ತ ಬೆರಳು ಮಾಡುತ್ತಾರೆ. ಯಾಕೆಂದರೆ, ಆಸ್ಟ್ರೇಲಿಯಾ ತಂಡದಲ್ಲಿ ಅನೇಕ ಸ್ಟಾರ್ ಆಟಗಾರರಿದ್ದಾರೆ. ಹೀಗಿರುವಾಗ ನಾಯಕ ತನ್ನ ಕೆಲಸವನ್ನು ಯಾವುದೇ ಆಯಾಸವಿಲ್ಲದೇ ನಿರ್ವಹಿಸಬಹುದು. ಆದರೆ, ಯಾವುದೇ ಸ್ಟಾರ್ ಆಟಗಾರರಿಲ್ಲದೇ ಎದುರಾಳಿಗಳನ್ನು ತಬ್ಬಿಬ್ಬುಗೊಳಿಸುವಂಥ ತಂತ್ರಗಳನ್ನು ಹೆಣಿದು ಖೆಡ್ಡಾಗೆ ಕೆಡವುವುದು ಫ್ಲೆಮಿಂಗ್‌‌ನಂತಹ ಚಾಣಾಕ್ಷರಿಗೆ ಮಾತ್ರ ಸಾಧ್ಯ.

ಇಂಥ ಆಟಗಾರ ಮತ್ತು ನಾಯಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿ, ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್‌ ತಂಡದ ನಾಯಕನ ಸ್ಥಾನವನ್ನು ಕೂಡಾ ಬಿಟ್ಟುಕೊಡುವ ಮೂಲಕ, ಕ್ರಿಕೆಟ್‌ನಿಂದ ನಿವೃತ್ತಿಯ ಅಂಚಿನವರೆಗ ಬಂದಿರುವುದನ್ನು ಸೂಕ್ಷ್ಮವಾಗಿ ಹೊರಗೆಡುವಿದ್ದಾರೆ. ಆದರೆ, ಇದು ಅವರ ಅಭಿಮಾನಿಗಳಿಗಂತೂ ನಿರಾಶೆ ತಂದಿರುವುದರಲ್ಲಿ ಸಂಶಯವೇ ಇಲ್ಲ.

ನ್ಯೂಜಿಲೆಂಡ್ ಪರ ಅತಿ ಹೆಚ್ಚು ಯಶಸ್ಸು ಗಳಿಸಿದ ನಾಯಕರ ಹೆಸರು ಸಾಲಿನಲ್ಲಿ ಫ್ಲೆಮಿಂಗ್ ಹೆಸರು ಢಾಳವಾಗಿ ಕಾಣಿಸುತ್ತದೆ. ಇಂಥ ಮಹಾನ್ ಆಟಗಾರ ಇನ್ನೂ ಮುಂದೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಬೇಸರ ಸಂಗತಿಯಾದರೂ, ಅರಗಿಸಿಕೊಳ್ಳಲೇಬೇಕು. ಯಾಕೆಂದರೆ, ಪ್ರತಿಯೊಂದು ಆರಂಭಕ್ಕೂ ಅಂತ್ಯವಿದ್ದೇ ಇರುತ್ತದೆ.

ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪಾಟಿಂಗ್, ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್, ಸ್ಪಿನ್ ಮೋಡಿಗಾರ ಮುರಳೀಧರನ್ ಆಗಲಿ ಒಂದು ದಿನ ಅಂಕಣದಿಂದ ಹೊರಹೋಗಲೇಬೇಕು. ಅಂತಹುದೇ ಸ್ಥಿತಿಗೆ ಫ್ಲೆಮಿಂಗ್ ತಲುಪಿದ್ದಾರಷ್ಟೆ. ಅವರು ಟೆಸ್ಟ್‌ಗೆ ಲಭ್ಯವಿರುವುದಾಗಿ ಹೇಳಿದ್ದಾರಾದರೂ, "ಹೊಸ ನೀರು ಬಂದಾಗ, ಹಳೇ ನೀರು ಕೊಚ್ಚಿಕೊಂಡು ಹೋಗಲೇ ಬೇಕು" ಎನ್ನುವ ಹಾಗೆ, ನ್ಯೂಜೆಲಿಂಡ್ ತಂಡದಲ್ಲಿ ಬಿಸಿ ರಕ್ತದ ಯುವಕರ ಆಗಮನವಾಗುತ್ತಿರುವಾಗ ಫ್ಲೆಮಿಂಗ್ ಟೆಸ್ಟ್ ಕ್ರಿಕೆಟ್‌ನಿಂದ ನೇಪಥ್ಯಕ್ಕೆ ಸರಿಯುವ ದಿನಗಳು ಕೂಡಾ ಬಹಳ ದೂರವಿಲ್ಲ ಎಂದು ಹೇಳಬಹುದು.

ಫ್ಲೆಮಿಂಗ್ ಪೂರ್ಣ ಹೆಸರು, ಸ್ಟೀಫನ್ ಪೌಲ್ ಫ್ಲೆಮಿಂಗ್. ಇವರು 1973 ಏಪ್ರಿಲ್ 1 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಜನಿಸಿದರು. ಫ್ಲೆಮಿಂಗ್ ತಂದೆ ಕ್ರೈಸ್ಟ್‌ಚರ್ಚ್‌ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷರಾಗಿದ್ದರು. ಅತಿ ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಫ್ಲೆಮಿಂಗ್, ನೋಡು ನೋಡುತ್ತಿದ್ದಂತೆ ತಂಡದ ಅವಿಭಾಜ್ಯ ಅಂಗವಾಗಿ ಬೆಳೆದರು.

ಎಡಗೈ ಬ್ಯಾಟ್ಸ್‌ಮನ್‌ರಾದ ಫ್ಲೆಮಿಂಗ್, 1994ರಲ್ಲಿ ಭಾರತ ವಿರುದ್ಧ ಟೆಸ್ಟ್ ಆಡುವ ಮೂಲಕ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ತಾವಾಡಿದ ಪ್ರಥಮ ಪಂದ್ಯದಲ್ಲಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದಿದ್ದು ವಿಶೇಷ. ಈ ಪಂದ್ಯದಲ್ಲಿ ಅವರು 92 ರನ್ ಗಳಿಸಿದ್ದರು.

ಇದೇ ಪ್ರವಾಸದಲ್ಲಿ ಅವರು ಭಾರತದ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಕ್ಕೂ ಕಾಲಿಟ್ಟರು. ಈ ಪಂದ್ಯದಲ್ಲಿ ಅವರು 90 ರನ್ ಗಳಿಸಿ ರನ್ ಔಟ್‌ಗೆ ಬಲಿಯಾದರು.

ಫ್ಲೆಮಿಂಗ್ ಆಟದ ತಂತ್ರಗಾರಿಕೆ ಹೆಸರುವಾಸಿಯಾದಂತೆ ಕೆಲವು ವಿವಾದಗಳಿಗೂ ಸಿಕ್ಕಿಹಾಕಿಕೊಂಡಿದ್ದಾರೆ. 1995 ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ತಂಡದ ಸಹ ಸದಸ್ಯರೊಂದಿಗೆ ಹೊಟೇಲೊಂದರಲ್ಲಿ ಮಾರಿಜುನಾ ಸೇದುವಾಗ ಸಿಕ್ಕಿಬಿದ್ದಿದ್ದು ವಿವಾದಕ್ಕ ಕಾರಣವಾಗಿತ್ತು. ಮುಂದೆ 1996-97ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ಜೀವನ ಮೊದಲ ಶತಕ ದಾಖಲಿಸಿದ ಫ್ಲೆಮಿಂಗ್, ಮೂರನೇ ಟೆಸ್ಟ್ ಪಂದ್ಯದಲ್ಲಿ ಲೀ ಜೊರ್ಮನ್ ಅವರಿಂದ ನಾಯಕನ ಜವಾಬ್ದಾರಿ ವಹಿಸಿಕೊಂಡರು. ಆಗ ಅವರ ವಯಸ್ಸು 23 ವರ್ಷ 320 ದಿನಗಳು. ಹೀಗಾಗಿ ನ್ಯೂಜಿಲೆಂಡ್ ಕಂಡ ಅತ್ಯಂತ ಕಿರಿಯ ನಾಯಕ ಎಂದು ಗುರುತಿಸಿಕೊಂಡರು.

2000ರಲ್ಲಿ ಜಿಂಬಾಬ್ವೆ ವಿರುದ್ಧ ಗೆಲವು ಸಾಧಿಸುವ ಮೂಲಕ ನ್ಯೂಜಿಲೆಂಡ್ ಕ್ರಿಕೆಟ್‌‌ನ ಅತ್ಯಂತ ಯಶಸ್ವಿ ನಾಯಕರೆನಿಸಿಕೊಂಡರು. ಅವರ ನಾಯಕತ್ವದಲ್ಲಿ 12ನೇ ಗೆಲವು ಇದಾಗಿತ್ತು. ಇದಕ್ಕೂ ಮೊದಲು ಈ ದಾಖಲೆ ಗಫ್ ಹೊವರ್ತ್ ಅವರ ಹೆಸರಿನಲ್ಲಿತ್ತು.

ನಾಯಕನಾಗಿ ಫ್ಲೆಮಿಂಗ್
ಕಳೆದ ಹತ್ತು ವರ್ಷಗಳಲ್ಲಿ ಸುಮಾರು 80 ಟೆಸ್ಟ್ ಪಂದ್ಯಗಳಲ್ಲಿ 25 ಪಂದ್ಯಗಳಲ್ಲಿ ಗೆಲವು ಸಾಧಿಸಿದ್ದು, 25 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಒಂದು ದಿನ ಕ್ರಿಕೆಟ್ ತಂಡದ ನಾಯಕರಾಗಿ ಫ್ಲೆಮಿಂಗ್, ಕಳೆದ ಹತ್ತು ವರ್ಷಗಳಲ್ಲಿ 218 ಪಂದ್ಯಗಳಲ್ಲಿ 98 ಸಾರಿ ಗೆಲುವು ಕಂಡಿದ್ದಾರೆ.

ಅಂಕಿ ಅಂಶಗಳು
ಫ್ಲೆಮಿಂಗ್ ಇದುವರೆಗೆ 104 ಟೆಸ್ಟ್ ಪಂದ್ಯ ಆಡಿ 177 ಇನಿಂಗ್ಸ್‌ನಲ್ಲಿ 36.64 ಸರಾಸರಿಯಲ್ಲಿ 6620 ರನ್ನಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 9 ಶತಕಗಳು ಮತ್ತು 41 ಅರ್ಧ ಶಕತಕಗಳು ಸೇರಿವೆ.

ಅದೇ ರೀತಿಯಾಗಿ 280 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿ 269 ಇನಿಂಗ್ಸ್‌ಗಳಲ್ಲಿ 32.40 ಸರಾಸರಿಯಂತೆ 8037 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 8 ಶತಕ ಮತ್ತು 49 ಅರ್ಧ ಶತಕಗಳು ಸೇರಿವೆ.

(ಈ ಲೇಖನ ಯಾಹೂ(in.kannada.yahoo.com) ಕನ್ನಡದಲ್ಲಿ ಪ್ರಕಟಗೊಂಡಿದೆ. ಲಿಂಕ್-http://in.kannada.yahoo.com/News/Sports/0709/13/1070913053_1.htm)

ಕಾಮೆಂಟ್‌ಗಳಿಲ್ಲ: