ಬುಧವಾರ, ಜನವರಿ 13, 2021

Is Signal more secure than Whatsapp?- ವಾಟ್ಸ್‌ಆ್ಯಪ್‌ಗಿಂತ ಸಿಗ್ನಲ್‌ ಹೇಗೆ ಬೆಸ್ಟು?

- ಮಲ್ಲಿಕಾರ್ಜುನ ತಿಪ್ಪಾರ
ಜಗತ್ತಿನ ನಂಬರ್‌ 1 ಶ್ರೀಮಂತ, ಟೆಸ್ಲಾ ಕಂಪನಿಯ ಮಾಲೀಕ ಎಲಾನ್ಮಸ್ಕ್ಆ ಒಂದು ಟ್ವೀಟ್ಮಾಡ­ದಿದ್ದರೆ ಈ ಜಗತ್ತುಸಿಗ್ನಲ್‌’ ಎಂಬ ಆ್ಯಪ್ಹಿಂದೆ ಬೀಳುತ್ತಿರ­ಲಿಲ್ಲವೇನೋ? ವಾಟ್ಸ್ಆ್ಯಪ್ಹೊಸ ಪ್ರೈವೆಸಿ ನೀತಿಯನ್ನು ಜಾರಿಗೆ ತರಲು ಮುಂದಾಗುತ್ತಿದ್ದಂತೆ ಎಲಾನ್ಮಸ್ಕ್Use Signal ಅಂತಾ ಸಿಂಪಲ್ಆಗಿ ಮಾಡಿದ ಈ ಟ್ವೀಟ್ಸಿಗ್ನಲ್ಫೌಂಡೇಷನ್ನ ಸರ್ವರ್ ಕ್ರ್ಯಾಶ್ಆಗುವಂತೆ ಮಾಡಿತು! ಐದಾರು ದಿನಗಳಲ್ಲಿಸಿಗ್ನಲ್ಗೆ ಸೈನ್ಇನ್ಆಗುತ್ತಿರುವವರ ಸಂಖ್ಯೆಯಲ್ಲಿವಿಪರೀತ ಹೆಚ್ಚಳವಾಗಿದೆ. ಜಗತ್ತು ಈಗ ಸಿಗ್ನಲ್ಸಮೂಹ ಸನ್ನಿಗೆ ಒಳಗಾಗಿದೆ.

ಜಗತ್ತಿನಾದ್ಯಂತ ಪತ್ರಕರ್ತರು, ಕಾರ್ಯಕರ್ತರು, ವಕೀಲರು, ಸಂಶೋಧ­ಕರು, ರಾಜ­­ಕಾರ­ಣಿ­ಗಳು, ಸುರಕ್ಷತಾ ತಜ್ಞರು ಹೆಚ್ಚಾಗಿ ಈ ಸಿಗ್ನಲ್ಆ್ಯಪ್ಬಳಸು­­ತ್ತಿದ್ದರು. ಆದರೆ ಈಗ ಸಾಮಾ­ನ್ಯರೂ ಸಿಗ್ನಲ್ಗೆ ಅಡಿಯಿಡುತ್ತಿದ್ದಾರೆ. ಲಾಭ­ರಹಿತ ಸಂಸ್ಥೆಯಾಗಿರುವ ಸಿಗ್ನಲ್ಫೌಂಡೇ­­ಷನ್ಒಡೆತನದ ಸಿಗ್ನಲ್ಆ್ಯಪ್‌,  ಸುರ­­­­­­ಕ್ಷ­ತೆಯ ದೃಷ್ಟಿಯಿಂದ ಮಜಬೂತ್ಆಗಿದೆ. ನಿಮ್ಮ ಯಾವ ಮಾಹಿತಿಯೂ 3ನೇ ವ್ಯಕ್ತಿಯ ಪಾಲಾಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಡೇಟಾ ಯಾವುದೇ ಅನ್ಯ ಉದ್ದೇಶಕ್ಕೆ ಬಳಕೆಯಾಗುವುದಿಲ್ಲ. ಹಾಗಾಗಿ, ಹೆಚ್ಚಿನವರು ಸಿಗ್ನಲ್ಮೇಲೆ ವಿಶ್ವಾಸ ಇಡುವಂತಾಗಿದೆ. ಹಾಗಾದರೆ, ಸಿಗ್ನಲ್ನಲ್ಲಿ ಏನಿದೆ, ವಾಟ್ಸ್ಆ್ಯಪ್ಗಿಂತಲೂ ಹೇಗೆ ಬೆಸ್ಟು?

ಲಾಭರಹಿತ ಸಂಸ್ಥೆಯ ಒಡೆತನ
ವಾಟ್ಸ್ಆ್ಯಪ್ಗಿಂತ ಸಿಗ್ನಲ್ಯಾಕೆ ಮುಖ್ಯವಾಗುತ್ತದೆ ಎಂದರೆ, ಈ ಆ್ಯಪ್ಯಾವುದೇ ದೊಡ್ಡ ಟೆಕ್ಕಂಪನಿಯದ್ದಲ್ಲ. ಬದಲಿಗೆ, ಲಾಭರಹಿತ ಸಿಗ್ನಲ್ಫೌಂಡೇಷನ್ಗೆ ಸೇರಿದೆ. ಹಾಗಾಗಿ, ಬಳಕೆದಾರರ ಡೇಟಾ­ವನ್ನು ಅದು ವಾಣಿಜ್ಯ ಕಾರಣಕ್ಕೆ ಬಳಸಿಕೊಳ್ಳಲಾರದು. ಜೊತೆಗೆ, ಈ ಆ್ಯಪ್ನಿಗೂಢ ಪಠ್ಯವನ್ನು ಯಾರೂ ಡಿಕೋಡ್ಮಾಡಲು ಆಗೋದಿಲ್ಲ. ಫೌಂಡೇಶನ್ಗೆ ಬರುವ ಡೊನೇಷನ್ಮತ್ತು ಬಳಕೆದಾರರು ನೀಡುವ ಹಣವೇ ಇವರಿಗೆ ಆಧಾರ.

ಎಲ್ಲ ಖುಲ್ಲಂ ಖುಲ್ಲಾ

ಸಿಗ್ನಲ್ಆ್ಯಪ್ಒಂದು ರೀತಿಯಲ್ಲಿ ತೆರೆದ ಪುಸ್ತಕ. ಇಲ್ಲಿ ಯಾವ ಮುಚ್ಚುಮರೆಯೂ ಇಲ್ಲ. ನೀವು ಈ ಆ್ಯಪ್ನ ಸೋರ್ಸ್ಕೋಡ್ನೋಡಬಹುದು. ಅದು ಸಾರ್ವಜನಿಕವಾಗಿ ಲಭ್ಯವಿದೆ. ಅಂದರೆ, ಜಗತ್ತಿನಾದ್ಯಂತ ತಜ್ಞರು ಈ ಕೋಡ್ನೋಡುವುದರಿಂದ ಏನಾದರೂ ಸಮಸ್ಯೆ ಎದುರಾದರೆ ಮೆಸೆಂಜರ್ ಮತ್ತು ವಾಟ್ಸ್ಆ್ಯಪ್ಗಿಂತಲೂ ಫಾಸ್ಟ್ಆಗಿ ಸರಿಪಡಿಸಲು ಸಾಧ್ಯವಾಗುತ್ತದೆ. ಮತ್ತು ಯಾವುದೂ ರಹಸ್ಯವಾಗಿ ಉಳಿಯುವುದಿಲ್ಲ. ಇದೇ ಮಾತನ್ನು ನೀವು ವಾಟ್ಸ್ಆ್ಯಪ್ಗೆ ಹೇಳುವಂತಿಲ್ಲ.

ಎಲ್ಲವೂ ನಿಗೂಢ ಲಿಪಿ
ನಿಮ್ಮ ಪ್ರೊಫೈಲ್ಫೋಟೊ, ನಿಮ್ಮ ಧ್ವನಿ, ವಿಡಿಯೋ ಕಾಲ್ಸ್‌, ಫೋಟೊ ಅಟ್ಯಾಚ್ಮೆಂಟ್ಸ್‌, ಸ್ಟಿಕರ್ಸ್‌, ಲೊಕೇಷನ್ಪಿನ್ಸ್‌. ಅಷ್ಟೇ ಯಾಕೆ ನೀವು ಕಳುಹಿಸುವ ಜಿಐಎಫ್ಕೂಡ ಎನ್ಕ್ರಿಪ್ಟೆಡ್ಆಗಿರುತ್ತದೆ. ಈ ವಿಷಯದಲ್ಲಿ ವಾಟ್ಸ್ಆ್ಯಪ್ಗಿಂತಲೂ ಸಿಗ್ನಲ್ಹೆಚ್ಚು ನಂಬಿಕೆಗೆ ಅರ್ಹವಾಗಿದೆ. ಬಳಕೆದಾರರ ಮಾಹಿತಿ ಸುರಕ್ಷತೆಯ ವಿಷಯದಲ್ಲಿ ಸಿಗ್ನಲ್ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.

ಎಲ್ಲವೂ ಸುರಕ್ಷಿತ
ಸಿಗ್ನಲ್ನ ಇನ್ನೊಂದು ಖಾಸಿಯತ್ಏನೆಂದರೆ, ಇಲ್ಲಿ ಎಲ್ಲವೂ ಸುರಕ್ಷಿತ. ನಿಮ್ಮ ಸುರಕ್ಷಿತ ಮೆಸೆಜ್ಗಳನ್ನು ಸಿಗ್ನಲ್ಕ್ಲೌಡ್ಗೆ ಕಳುಹಿಸು­ವುದಿಲ್ಲ. ಯಾಕೆಂದರೆ, ಈ ಕ್ಲೌಡ್ನಲ್ಲಿರುವ ಸಂದೇಶಗಳನ್ನು

ವಾಟ್ಸ್ಆ್ಯಪ್‌, ಗೂಗಲ್ಸೇರಿದಂತೆ ಯಾರು ಬೇಕಿದ್ದರೂ ಅವುಗಳನ್ನು ಓದಬಹುದು. ಬದಲಿಗೆ, ಇಂಥ ಬ್ಯಾಕ್ಅಪ್ಗಳನ್ನು ನಿಮ್ಮ ಫೋನ್ನ ಡೇಟಾಬೇಸ್ನಲ್ಲಿ ನಿಗೂಢಲಿಪಿ­ಯಲ್ಲಿ ಸಿಗ್ನಲ್ಸೇವ್ಮಾಡುತ್ತದೆ ಮತ್ತು ಅದನ್ನು ನೀವು ಮಾತ್ರ ನೋಡಲು ಸಾಧ್ಯವಾಗುತ್ತದೆ. ಇನ್ನೂ ಆಶ್ಚರ್ಯ ಎಂದರೆ, ಇದು ನಿಮ್ಮ ಫೋನ್ನಲ್ಲಿರುವ ಸಂಪರ್ಕ ಸಂಖ್ಯೆಗಳನ್ನೂ ತನ್ನ ಸರ್ವರ್ನಲ್ಲಿ ಉಳಿಸಿಕೊಳ್ಳುವುದಿಲ್ಲ!

ಕಣ್ಮರೆಯಾಗುವ ಮೆಸೆಜ್
ಇದರಲ್ಲೇನು ವಿಶೇಷ ಎನ್ನಬೇಡಿ. ವಾಟ್ಸ್ಆ್ಯಪ್ನಲ್ಲಿ ಈ ಫೀಚರ್ಇದೆಯಲ್ಲ ಅನ್ನಬಹುದು. ಆದರೆ, ಈ ಫೀಚರ್ಸಿಗ್ನಲ್ನ ಅತ್ಯಂತ ಹಳೆಯ ಮತ್ತು ಅತ್ಯಂತ ಉಪಯುಕ್ತ ಫೀಚರ್ಆಗಿದೆ. ವಾಟ್ಸ್ಆ್ಯಪ್ನಲ್ಲಿ ಅದು ಇತ್ತೀಚೆಗಷ್ಟೇ ಬಂದಿದೆ. ಬಳಕೆದಾರರು ತಮ್ಮ ಸಂದೇಶಕ್ಕೆ ಹತ್ತು ಸೆಕೆಂಡ್ನಿಂದ ವಾರದವರೆಗೂ ಟೈಮರ್ಅಳವಡಿಸ­ಬಹುದು. ಆ ಬಳಿಕ ಅದು ಸ್ವಯಂ ಆಗಿ ಕಣ್ಮರೆಯಾಗುತ್ತದೆ. ಒಂದು ಬಾರಿ ವೀಕ್ಷಿಸಬಹುದಾದ ಮೀಡಿಯಾ ಮತ್ತು ಮೆಸೆಜ್ರಿಕ್ವೆಸ್ಟ್ಗಳು ವಾಟ್ಸ್ಆ್ಯಪ್ನಲ್ಲೂ ಇಲ್ಲ.

ಬೇರೆ ಆ್ಯಪ್ಗಳು ಕನ್ನ ಹಾಕುವಂಗಿಲ್ಲ
ಈ ಫೀಚರ್ ವಾಟ್ಸ್ಆ್ಯಪ್ಸೇರಿದಂತೆ ಸೇರಿದಂತೆ ಇತರ ಯಾವುದೇ ಪ್ರಮುಖ ಮೆಸೆಂಜರ್ಆ್ಯಪ್ಗಳಲ್ಲೂ ಇಲ್ಲ. ಸಿಗ್ನಲ್ನಲ್ಲಿ ಇನ್ಕಾಗ್ನಿಟೋ ಕೀಬೋರ್ಡ್ಆಪ್ಷನ್ಇದ್ದು, ಇದು ನೀವು ಏನನ್ನು ಟೈಪ್ಮಾಡುತ್ತಿದ್ದೀರಿ ಎಂಬುದನ್ನು ಗುರುತಿಸುವುದಿಲ್ಲ. ಸ್ಕ್ರೀನ್ಸೆಕ್ಯುರಿಟಿ ಫೀಚರ್‌, ನಿಮ್ಮ ಸಿಗ್ನಲ್ಆ್ಯಪ್ನಲ್ಲಿರುವ ಮಾಹಿತಿಯನ್ನು ಕದ್ದು ನೋಡುವುದನ್ನು ತಪ್ಪಿಸುತ್ತದೆ. ಇದನ್ನು ಗಮನಿಸಿದರೆ ಜಗತ್ತಿನಲ್ಲೇ ಸಿಗ್ನಲ್ಅತ್ಯಂತ ಸೆಕ್ಯೂರ್ಆಗಿರುವ ಮೆಸೆಂಜರ್ಆ್ಯಪ್ಎನ್ನುವುದು ತಿಳಿಯು­ತ್ತದೆ. ಆದರೆ, ದುರದೃಷ್ಟವಶಾತ್ಈ ಆ್ಯಪ್ಬಗ್ಗೆ ಜಗತ್ತು ತೀರಾ ಇತ್ತೀಚಿನವರೆಗೂ ಅಪರಿಚಿತವಾಗಿರುವುದು ಚೋದ್ಯವೇ ಸರಿ!



ಸೋಮವಾರ, ಜನವರಿ 4, 2021

Former home minister Buta Singh: ನಿರ್ದಯ ನಡೆಯ ಬೂಟಾ ಸಿಂಗ್‌

ತಮ್ಮ ಅನಿಯಂತ್ರಿತ ಅಧಿಕಾರದ ಚಲಾವಣೆ ಮೂಲಕ ಪ್ರಜಾಪ್ರಭುತ್ವದ ಲೋಪಗಳನ್ನು ಎತ್ತಿ ತೋರಿಸಿದ, ಆ ನೆಪದಲ್ಲಿಅದನ್ನು ಗಟ್ಟಿಗೊಳಿಸಲು ಕಾರಣರಾದ ಬೂಟಾ ಸಿಂಗ್‌ ಅವರನ್ನು ನೆನಪಿಟ್ಟುಕೊಳ್ಳಲೇಬೇಕು.


- ಮಲ್ಲಿಕಾರ್ಜುನ ತಿಪ್ಪಾರ

ಏಳು ವರ್ಷದ ಬಾಲಕನೊಬ್ಬನಿಗೆ ಆತನ ಚಿಕ್ಕಪ್ಪ, ಕಣಜದ ಗೂಡು ತೋರಿಸಿ ಅದರಲ್ಲಿಜೇನು ಇದೆ ಎಂದು ಹೇಳುತ್ತಾರೆ. ಆ ಬಾಲಕ, ಹಿಂದೆ ಮುಂದೆ ಯೋಚಿಸದೇ ಮರ ಏರಿ, ನಿರ್ದಯವಾಗಿ ಈ ಕಣಜದ ಗೂಡನ್ನು ಕೆಡವುತ್ತಾನೆ. ಗೂಡಿನಲ್ಲಿದ್ದ ಕಣಜದ ಹಾರುಹುಳಗಳು ಬೆನ್ನ ಹತ್ತಿದ್ದರಿಂದ ಮರ ಮೇಲಿಂದ ಬಿದ್ದು ಕಾಲು ಮುರಿದುಕೊಳ್ಳುತ್ತಾನೆ. 

ಆ ಬಾಲಕನೇ ಮುಂದೆ ‘ನಿರ್ದಯಿ’ ರಾಜಕಾರಣಿಯಾಗಿ ರೂಪುಗೊಂಡ ಬೂಟಾ ಸಿಂಗ್‌. ಅವರ ಈ ಸ್ವಭಾವದ ಪರಿಣಾಮಗಳು ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಕಾಲದಲ್ಲಿಢಾಳಾಗಿ ಎದ್ದು ಕಂಡಿತು.  ಇಂದಿರಾ ಮತ್ತು ರಾಜೀವ್‌ ಅವರ ‘ಪರಮ ನಿಷ್ಠ’ರಾಗಿದ್ದ ಬೂಟಾ, ಅವರ ಎಲ್ಲಕಾರ್ಯಗಳನ್ನು ಯಾವುದನ್ನೂ ಲೆಕ್ಕಿಸದೇ ಮಾಡಿ ಬಿಡುತ್ತಿದ್ದರು. ಪರಿಣಾಮ­ವಾಗಿ ಅವರನ್ನು ಮಾಧ್ಯಮಗಳು ಅತ್ಯಂತ ವಿವಾದಿತ ರಾಜಕಾರಣಿ, ರಾಜೀವ್‌ ಬಂಟ ಎಂದು ಇಂದಿಗೂ ಗುರುತಿಸುತ್ತವೆ. ಅಂಥ ಬೂಟಾ ಸಿಂಗ್‌ ಅವರು, ಕಾಂಗ್ರೆಸ್‌ಗೆ ಏನೆಲ್ಲಮಾಡಿದೆ. ತನ್ನ ನಿಷ್ಠೆಯನ್ನು ಯಾರೂ ಪರಿಗಣಿ ಸಲೇ ಇಲ್ಲಎಂಬ ಕೊರಗಿನಲ್ಲೇ 86ನೇ ವಯಸ್ಸಿನಲ್ಲಿಕೊನೆಯುಸಿರೆಳೆದಿದ್ದಾರೆ. 

ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ಅಕ್ಷ ರಶಃ ಅವರು ಕ್ಯಾಬಿನೆಟ್‌ನಲ್ಲಿಎರಡನೇ ಸ್ಥಾನದಲ್ಲಿ­ದ್ದರು. ಇತರ ಎಲ್ಲಸಚಿವರಿಗಿಂತಲೂ ರಾಜೀವ್‌ ಅವರನ್ನು ಬಹಳ ಸಲೀಸಾಗಿ ಭೇಟಿಯಾಗುತ್ತಿದ್ದರು. ದೇಶದ ಗೃಹ ಮಂತ್ರಿಯಾಗಿದ್ದಾಗ ರಾಜ್ಯ ಸರಕಾರಗಳನ್ನು ಕಣ್ಣು ಮಿಟುಕಿಸುವಷ್ಟರಲ್ಲಿಕೆಡವಿ ಬಿಡುತ್ತಿದ್ದರು. ಅಂಥ ನಿರ್ದಯಿ ರಾಜಕಾರಣಿ ಬೂಟಾ ಸಿಂಗ್‌. 

ರಾಜೀವ್‌ ಕಾಲದಲ್ಲಿಕಾಂಗ್ರೆಸ್‌ನ ದಲಿತ ಹಾಗೂ ಏಕೈಕ ಸಿಖ್‌ ಮುಖವಾಗಿದ್ದ ಬೂಟಾ ಸಿಂಗ್‌ ರಾಜಕಾರಣದ ಹಿನ್ನೆಲೆಯಲ್ಲಿಬೆಳೆದು ಬಂದವರಲ್ಲ. ಪಂಜಾಬ್‌ನ ಜಲಂಧರ್‌ ಜಿಲ್ಲೆಯ ಮುಸ್ತಫಾಪುರದಲ್ಲಿ1934 ಮಾರ್ಚ್‌ 21ರಂದು ಬೂಟಾ ಸಿಂಗ್‌ ಜನಿಸಿದರು. ಬೂಟಾ ಅವರದ್ದು ಸಾಧಾರಣ ಹಿನ್ನೆಲೆಯ ಕುಟುಂಬ. ಲಿಯಾಲ್‌ಪುರ ಖಾಲ್ಸಾ ಕಾಲೇಜ್‌ನಿಂದ ಬಿ.ಎ(ಆನರ್ಸ್‌) ಮತ್ತು ಬಾಂಬೆಯ ಗುರು ನಾನಾಕ್‌ ಖಾಲ್ಸಾ ಕಾಲೇಜ್‌ನಲ್ಲಿಎಂಎ ಪದವಿ ಪಡೆದುಕೊಂಡರು. ಬಳಿಕ ಬುಂದೇಲ್‌ಖಂಡ್‌ ವಿವಿಯಲ್ಲಿಪಿಎಚ್‌ಡಿ ಮಾಡಿದರು. 1964ರಲ್ಲಿಮಂಜಿತ್‌ ಕೌರ್‌ ಅವರನ್ನು ವಿವಾಹವಾದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. 

ಬೂಟಾ ಸಿಂಗ್‌ ಅವರು ರಾಜಕಾರಣಕ್ಕೆ ಪ್ರವೇಶ ಪಡೆಯುವ ಮುಂಚೆ ಪತ್ರಕರ್ತರಾಗಿದ್ದರು. ಅಕಾಲಿ ದಳದ ಮೂಲಕ ರಾಜಕಾರಣ ಆರಂಭಿಸಿ ಕಾಂಗ್ರೆಸ್‌ನಲ್ಲಿಉತ್ತುಂಗಕ್ಕೇರಿ, ಬಿಜೆಪಿಯಲ್ಲೂಸ್ವಲ್ಪ ಕಾಲ ಇದ್ದು ಮತ್ತೆ ಕಾಂಗ್ರೆಸ್‌ಗೆ ಮರಳಿ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು. 

ಬೂಟಾ ಅವರು ಅಕಾಲಿದಳ ಸೇರುವ ಮುಂಚೆ ಮಾರ್ಕ್ಸ್‌ ವಿಚಾರಗಳಿಗೆ ಮಾರು ಹೋಗಿದ್ದರು. ಬಾಂಬೆಯ ಖಾಲ್ಸಾ ಕಾಲೇಜ್‌ನಲ್ಲಿಇತಿಹಾಸ ಓದುತ್ತಿದ್ದಾಗ ಅವರು ಬೊಲ್ಶೆವಿಕ್‌ ಸಾಹಿತ್ಯದ ಕಟ್ಟಾ ಓದುಗರು. ‘ಫೂಲ್‌ವಾರಿ’ ಮ್ಯಾಗ್‌ಜಿನ್‌ನಲ್ಲಿಪ್ರೂಫ್‌ರೀಡರ್‌ ಆಗಿ ಕೆಲಸ ಮಾಡುತ್ತಿದ್ದಾಗ, 1953ರಲ್ಲಿಜೋಸೆಫ್‌ ಸ್ಟಾಲಿನ್‌ ನಿಧನದ ಸುದ್ದಿ ತಿಳಿದಾಗ ಕಣ್ಣೀರಿಟ್ಟಿದ್ದರು. ಅಂದರೆ, ಮಾರ್ಕ್ಸ್‌ವಾದ ಅವರನ್ನು ಅಷ್ಟೊಂದು ಆವರಿಸಿಕೊಂಡಿತ್ತು. ‘ಅಕಾಲಿ ಪತ್ರಿಕಾ’ದಲ್ಲಿಉಪ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. 1962ರಲ್ಲಿಅಕಾಲಿ ದಳ ಬೂಟಾ ಅವರನ್ನು ರೋಪರ್‌ ಮೀಸಲು ಕ್ಷೇತ್ರದಿಂದ ಲೋಕಸಭೆಗೆ ಚುನಾವಣೆಗೆ ಕಣಕ್ಕಿಳಿಸಿತು. ಮುಂದೆ ಅಕಾಲಿ ಇಬ್ಭಾಗ ಆದಾಗ ಅವರು ತಾರಾ ಸಿಂಗ್‌ ಅವರೊಂದಿಗೆ ಹೆಜ್ಜೆ ಹಾಕಿದರಾದರೂ ಅವರೊಂದಿಗೆ ಬಹಳ ದಿನ ನಿಲ್ಲಲಿಲ್ಲ. ಇಂದಿರಾ ಅವರ ಪರಿಚಯವಾದ ಮೇಲೆ ಕಾಂಗ್ರೆಸ್‌ ಸೇರಿದರು. ಆನಂತರ ನಡೆದಿದ್ದೆಲ್ಲಇತಿಹಾಸ. 

ಇಂದಿರಾ ಗಾಂಧಿ ಅವರು ‘ಆಪರೇಷನ್‌ ಬ್ಲೂಸ್ಟಾರ್‌’ ಕಾರ್ಯಾಚರಣೆ ಕೈಗೊಂಡಾಗ ಅದರ ಎಲ್ಲನಿರ್ವಹಣೆ ಮಾಡಿವರು ಇದೇ ಬೂಟಾ ಸಿಂಗ್‌. ಸಚಿವರಾಗಿ ‘ಗೋಲ್ಡನ್‌ ಟೆಂಪಲ್‌’ನ ಪುನರ್‌ ನಿರ್ಮಾಣವನ್ನು ನೋಡಿಕೊಂಡರು. ಆದರೆ, ಸಿಖ್‌ ಧಾರ್ಮಿಕ ಗುರುಗಳು ಇವರನ್ನು ‘ಧರ್ಮಭ್ರಷ್ಟ’ ಎಂದು ಘೋಷಿಸಿದರು. ಬೂಟಾ ಸಿಂಗ್‌ ಆ ಬಳಿಕ ಸ್ವರ್ಣಮಂದಿರದಲ್ಲಿಭಕ್ತರ ಚಪ್ಪಲಿ ಕ್ಲೀನ್‌ ಮಾಡಿ ಪ್ರಾಯಶ್ಚಿತ್ತ ಕೂಡ ಮಾಡಿಕೊಂಡರೆನ್ನಿ. 

ರಾಜೀವ್‌ ಗಾಂಧಿ ಅವಧಿಯಲ್ಲಿಬೂಟಾ ಸಿಂಗ್‌ ರಾಜಕಾರಣಿಯಾಗಿ, ಆಡಳಿತಗಾರನಾಗಿ ಗ್ರಾಫ್‌ ಏರುಗತಿಯಲ್ಲಿತ್ತು; ಜೊತೆಗೆ ವಿವಾದಗಳೂ. ರಾಜೀವ್‌ ಸಂಪುಟದಲ್ಲಿಪಿ.ವಿ.ನರಸಿಂಹ ರಾವ್‌ ಮತ್ತು ಪಿ ಶಿವಶಂಕರ್‌ ಅವರಂಥ ಹಿರಿಯರಿದ್ದರೂ ಬೂಟಾ ಸಿಂಗ್‌ ಅಕ್ಷ ರಶಃ ರಾಜೀವ್‌ ನಂತರದ ಸ್ಥಾನದಲ್ಲಿವಿರಾಜಮಾನರಾದರು. ರಾಜೀವ್‌ ಅವರ ಬಂಟ ಎಂದೇ ಖ್ಯಾತರಾದರು. ಈ ಅವಧಿಯಲ್ಲಿಅವರು ಪ್ರತಿಕ್ಷ ಗಳ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿಪ್ರಮುಖ ಪಾತ್ರ ವಹಿಸಿದರು. 1988ರಲ್ಲಿಜಾನಕಿ ರಾಮಚಂದ್ರನ್‌ ಸರಕಾರ ವಜಾಗೊಳಿಸಿದರು. ಕಾಂಗ್ರೆಸ್‌ನ ಅನೇಕ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ದೂರ ಸರಿಸುವ ಕಾರ್ಯವನ್ನು ಬೂಟಾ ನಿರ್ದಯಿಯಾಗಿ ಮಾಡಿದರು. ರಾಜಸ್ಥಾನದಲ್ಲಿಹರಿದೇವ್‌ ಜೋಶಿ, ಮಧ್ಯ ಪ್ರದೇಶದಲ್ಲಿಮೋತಿಲಾಲ್‌ ವೋರಾ ಇದಕ್ಕೆ ಉದಾಹಣೆಯಾಗಿ ನೀಡಬಹುದು. ರಾಜೀವ್‌ ಗಾಂಧಿ 1989ರಲ್ಲಿಅಯೋಧ್ಯೆಯ ವಿವಾದಿತ ಜಾಗದಲ್ಲಿರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಅದರ ಹಿಂದೆ ಬೂಟಾ ಸಿಂಗ್‌ ಇದ್ದರು ಎಂದು ಇಂದಿಗೂ ಕಾಂಗ್ರೆಸ್‌ನವರು ಮಾತನಾಡಿಕೊಳ್ಳುತ್ತಾರೆ. 

1985ರಿಂದ 89ರ ಅವಧಿಯಲ್ಲಿಕೇಂದ್ರ ಗೃಹ ಸಚಿವರಾಗಿ ಬೂಟಾ ಸಿಂಗ್‌, ಅನೇಕ ರಾಜ್ಯ ಸರಕಾರಗಳನ್ನು ಉರುಳಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಿ­ದರು. ‘‘ಬೂಟಾ ಸಿಂಗ್‌ಜೀ, ನಿಮ್ಮ ಕೃಪಾಣ್‌(ಕತ್ತಿ) ಒಳಗಿಡಿ,’’ ಎಂದು ರಾಜೀವ್‌ ಅವರು ಹೇಳಿಧಿದ್ದರಂತೆ. ಅಷ್ಟೊತ್ತಿಗೆ, ಮಧ್ಯ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ತ್ರಿಪುರಾ, ರಾಜಸ್ಥಾನ, ಬಿಹಾರ ಮತ್ತಿತರ ರಾಜ್ಯ ಸರಕಾರಗಳನ್ನು ಬುಡಮೇಲು ಮಾಡಿಯಾಗಿತ್ತು. ಬಿಹಾರದ ರಾಜ್ಯಪಾಲರಾಗಿ­ದ್ದಾಗ ಅವರ ನಡೆದುಕೊಂಡ ರೀತಿ ಸುಪ್ರೀಂ ಕೋರ್ಟ್‌ ತೀಕ್ಷ ್ಣ ಟೀಕೆಗೂ ಗುರಿಯಾಗಿತ್ತು. 2005ರಲ್ಲಿಜೆಡಿಎಯು-­ಬಿಜೆಪಿಗೆ ಸರಕಾರ ರಚಿಸಲು ಆಹ್ವಾನ ನೀಡುವ ಬದಲು ಅಸೆಂಬ್ಲಿಯನ್ನೇ ವಿಸರ್ಜಿಸಿ ಬಿಟ್ಟಿದ್ದರು. ಕೇಂದ್ರ ಸಂಪುಟಕ್ಕೆ ತಪ್ಪು ಮಾಹಿತಿ, ಸಂಸದೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದೀರಿ ಎಂದು ಸುಪ್ರೀಂ ಕೋರ್ಟ್‌ ತಪರಾಕಿ ಹಾಕಿತ್ತು. ಇದು ಬಹಳ ಚರ್ಚೆ ಕಾರಣವಾಗಿತ್ತು. ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. 

ರಾಜೀವ್‌ ಬಳಿಕ ಕಾಂಗ್ರೆಸ್‌ನಲ್ಲಾದ ಬದಲಾ­ವಣೆಗಳು ಬೂಟಾ ಸಿಂಗ್‌ ಅವರನ್ನು ತೆರೆಮರೆಗೆ ಸರಿಯುವಂತೆ ಮಾಡಿದವು. ಆಗ ಅವರು ಬಿಜೆಪಿ ಸೇರಿ ವಾಜಪೇಯಿ ಸರಕಾರದಲ್ಲಿಸಚಿವರೂ ಆದರು. ಆದರೆ, ಜೆಎಂಎಂ ಲಂಚ ಪ್ರಕರಣದಲ್ಲಿಕೋರ್ಟ್‌ ಬೂಟಾ ಅವರ ವಿರುದ್ಧ ದೋಷಾರೋಪಣೆ ಮಾಡಿದ ಹಿನ್ನೆಲೆಯಲ್ಲಿಅವರನ್ನು ವಾಜಪೇಯಿ ಅವರು ಸಂಪುಟದಿಂದ ಕೈ ಬಿಟ್ಟ ಬಳಿಕ ಮತ್ತೆ ಮರಳಿ ಕಾಂಗ್ರೆಸ್‌ ಗೂಡು ಸೇರಿಕೊಂಡರು. ತಮ್ಮ ಅನಿಯಂತ್ರಿತ ಅಧಿಕಾರದ ಚಲಾವಣೆಯ ಮೂಲಕ ಭಾರತೀಯ ಪ್ರಜಾಪ್ರಭುತ್ವದ ಲೋಪಗ­ಳನ್ನು ಎತ್ತಿ ತೋರಿಸಿದ್ದಕ್ಕಾಗಿ ಮತ್ತು ಅದನ್ನು ಗಟ್ಟಿಗೊಳಿಸಲು ಪರೋಕ್ಷ ವಾಗಿ ಕಾರಣರಾದ ಬೂಟಾ ಸಿಂಗ್‌ ಅವರನ್ನು ನೆನಪಿಟ್ಟುಕೊಳ್ಳಲೇಬೇಕು!

ಸುಮಾರು ಐದು ದಶಕಗಳ ರಾಜಕೀಯ ಜೀವನದಲ್ಲಿಬೂಟಾ ಸಿಂಗ್‌ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ವಿವಾದಗಳನ್ನೇ ಮೈಮೇಲೆ ಎಳೆದುಕೊಂಡಷ್ಟೇ ವೇಗವಾಗಿ ಅವುಗಳಿಂದ  ಹೊರಗೆ ಬರುವ ಕಲೆಯ ಅವರಿಗೆ ಗೊತ್ತಿತ್ತು. ಹಾಗಾಗಿಯೇ ಎಂಥದ್ದೇ ವಿವಾದಗಳು ಎದುರಾದರೂ ಎಲ್ಲವನ್ನು ನುಂಗಿಬಿಡುವ ಧಿಮಾಕು ಅವರಲ್ಲಿತ್ತು. ಎಂಟು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಬೂಟಾ ಸಿಂಗ್‌, ಕೇಂದ್ರ ಗೃಹ, ರೈಲ್ವೆ, ವಾಣಿಜ್ಯ, ಬಂದರು ಮತ್ತು ಹೆದ್ದಾರಿ, ಸಂಸದೀಯ ವ್ಯವಹಾರ, ಕ್ರೀಡೆ, ಹೌಸಿಂಗ್‌, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ನಾಗರಿಕ ಪೂರೈಕೆ-ಗ್ರಾಹಕ ವ್ಯವಹಾರ,  ಸಂವಹನ ಸೇರಿ ಹಲವು ಇಲಾಖೆಗಳನ್ನು ನಿರ್ವಹಿಸಿದ ಕಸುಬುದಾರರು. ತೀರಾ ಇತ್ತೀಚೆಗೆ ಅಂದರೆ, 2007ರಿಂದ 10ರವರೆಗೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ರಾಗಿಯೂ ಕೆಲಸ ಮಾಡಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿಅನೇಕ ಜನೋಪಕಾರಿ ಕೆಲಸ ಮಾಡಿದ್ದರೂ ಜನರು ಅವುಗಳನ್ನು ನೆನಪಿನಲ್ಲಿಟ್ಟುಕೊಂಡಿಲ್ಲ. ಯಾಕೆಂದರೆ, ಬೂಟಾ ಸಿಂಗ್‌ ಈಗಲೂ, ಇಂದಿರಾ ಅವರ ನೆಚ್ಚಿಗ ಮತ್ತು ರಾಜೀವ್‌ ಅವರ ಭಂಟ. ಎಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ವಿವಾದಿತ ರಾಜಕಾರಣಿ ಎಂಬುದು ನಿರ್ವಿವಾದ. ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿ ಪಕ್ಷ  ಸಂಘಟನೆಯಲ್ಲಿಅಮೂಲ್ಯ ಕೊಡುಗೆ ನೀಡಿದ್ದ ಬೂಟಾ ಸಿಂಗ್‌ ಅವರಿಗೆ ಕೊನೆಯ ದಿನಗಳಲ್ಲಿತಮ್ಮ ನಿಷ್ಠೆಯನ್ನು ಯಾರೂ ಪರಿಗಣಿಸುತ್ತಿಲ್ಲಎಂಬ ಚಿಂತೆ ಕಾಡುತ್ತಿತ್ತು. ತಮ್ಮ ಆಪ್ತರ ಬಳಿಯೂ ಹೇಳಿಕೊಂಡಿದ್ದರು. 



ಬುಧವಾರ, ಡಿಸೆಂಬರ್ 30, 2020

Jhumka Earring- ನೀನೇ ಗೆಲ್ಲುವೆ ಬಿಡು

ಹೇ ಜುಮುಕಿಯೇ, ಅವಳ ಕಿವಿಯಲ್ಲಿ ಓಲಾಡಲು ಲೈಸೆನ್ಸ್ ಯಾರು ಕೊಟ್ಟರು ನಿನಗೆ ?

ಅವಳು ಕೂದಲು
ತೀಡಿದಾಗೊಮ್ಮೆ
ಲೋಲಕವಾಗುವೆಯಲ್ಲ
ಅಣುಕಿಸುತ ನನ್ನ ?
ಅವಳ ಮುಂಗುರಳ
ಹೊಯ್ದಾಟಕ್ಕೂ
ನಿನ್ನ ಓಲಾಟಕ್ಕೂ
ಸ್ಪರ್ಧೆ ನಡೆದರೆ
ನೀನೇ ಗೆಲ್ಲುವೆ ಬಿಡು
~ ಮಲ್ಲಿಕಾರ್ಜುನ ತಿಪ್ಪಾರ



ಸೋಮವಾರ, ಡಿಸೆಂಬರ್ 28, 2020

How to use Whatsapp Payment- ವಾಟ್ಸಾಪ್‌ನಲ್ಲಿ ಹಣ ಕಳಿಸುವುದು ಹೇಗೆ?

- ಮಲ್ಲಿಕಾರ್ಜುನ ತಿಪ್ಪಾರ

ಫೇಸ್ಬುಕ್ಒಡೆತನದ ವಾಟ್ಸ್ಆ್ಯಪ್ತನ್ನ ಪೇಮೆಂಟ್ಸೇವೆಯನ್ನು ಆರಂಭಿಸುವುದಾಗಿ  ಬಹಳ ದಿನ­ಗಳಿಂ­ದಲೂ ಹೇಳುತ್ತಲೇ ಬಂದಿತ್ತು. ಭಾರತ ಸರಕಾರ ಸೂಚಿಸಿರುವ ಎಲ್ಲಮಾರ್ಗದರ್ಶಿಗಳನ್ನು ಪೂರೈಸಲು ಒಂದಿಷ್ಟು ಸಮಯ ಬೇಕಾಯಿತು. ಬಳಿಕ ಬೀಟಾ ವರ್ಷನ್ನಲ್ಲಿಸ್ವಲ್ಪ ದಿನ ಪೇಮೆಂಟ್ಸೇವೆಯನ್ನು ಜಾರಿಗೆ ತಂದು, ಇದೀಗ ಭಾರತದ ಎಲ್ಲವಾಟ್ಸ್ಆ್ಯಪ್ಬಳಕೆದಾರರಿಗೆ ದೊರೆಯುತ್ತಿದೆ.

ಸಂಪೂರ್ಣ ಡಿಜಿಟಲೀಕರಣವಾಗುತ್ತ ಸಾಗುತ್ತಿರುವ ಭಾರತದ ಮಟ್ಟಿಗೆ ವಾಟ್ಸ್ಆ್ಯಪ್ನ ಈವಾಟ್ಸ್ಆ್ಯಪ್ಪೇಸೇವೆ ಒಂದು ಮೈಲುಗಲ್ಲಾಗಲಿದೆ. ಭಾರತದಲ್ಲಿವಾಟ್ಸ್ಆ್ಯಪ್ಬಳಕೆದಾರರ ಸಂಖ್ಯೆ 34 ಕೋಟಿ. ಇಷ್ಟು ಬೃಹತ್ಪ್ರಮಾಣದ ಬಳಕೆ­ದಾರ­ರನ್ನು ಹೊಂದಿರುವ ಕಾರಣಕ್ಕೆ ಇದೊಂದು ಕ್ರಾಂತಿಕಾರಿ ನಡೆ­ಯಾಗ­ಲಿದೆ ಎಂಬುದರಲ್ಲಿಯಾವುದೇ ಅನುಮಾನವಿಲ್ಲ. ಒಂದೂಮ್ಮೆ ಇಷ್ಟು ಬಳಕೆದಾರರು ಹಣ ವರ್ಗಾವಣೆ ಮತ್ತು ಸ್ವೀಕರಿಸಲು ವಾಟ್ಸ್‌­­­­ಆ್ಯಪ್ಪೇ ಬಳಸಿದರೆ ಅದು ಅತಿದೊಡ್ಡ ಜಾಲವಾಗಬಹುದು.

ಏನಿದು ವಾಟ್ಸ್ಆ್ಯಪ್ಪೇ?

ಇದೊಂದು ಯುಪಿಐ ಆಧರಿತ ಪೇಮೆಂಟ್ಸೇವೆ ನೀಡುವ ವ್ಯವಸ್ಥೆಯಾಗಿದ್ದು, ಕಳೆದ ವರ್ಷ ಫೆಬ್ರವರಿಯಲ್ಲಿಬೀಟಾ ವರ್ಷನ್ನಲ್ಲಿವಾಟ್ಸ್ಆ್ಯಪ್ಪೇ ಚಾಲನೆಗೊಂಡಿತ್ತು. ಈಗ ಅದು ಎಲ್ಲಬಳಕೆದಾರರಿಗೂ ಲಭ್ಯವಾಗುತ್ತಿದೆ. ವಾಟ್ಸ್ಆ್ಯಪ್ಪೇ ಬಳಸಿಕೊಂಡು ಬಳಕೆದಾರರು ತಮ್ಮ ಯುಪಿಐಸಕ್ರಿಯಗೊಂಡ  ಬ್ಯಾಂಕ್ಖಾತೆಗಳನ್ನು ಸಂಪ­­ರ್ಕಿಸ­­­ಬಹುದು ಮತ್ತು ಆ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದು. ಎಚ್ಡಿಎಫ್ಸಿ, ಐಸಿಐಸಿಐ, ಸ್ಟೇಟ್ಬ್ಯಾಂಕ್ಆಫ್ಇಂಡಿಯಾ, ಆಕ್ಸಿಸ್ಬ್ಯಾಂಕ್‌, ಏರ್ಟೆಲ್ಪೇಮೆಂಟ್ಸ್ಬ್ಯಾಂಕ್ಸೇರಿದಂತೆ ಭಾರತದಲ್ಲಿರುವ ಬಹುತೇಕ ಬ್ಯಾಂಕ್ಗಳ ಸೇವೆಯನ್ನು ವಾಟ್ಸ್ಆ್ಯಪ್ಪೇ ಒದಗಿಸುತ್ತದೆ.

ಸೆಟ್ಅಪ್ಮಾಡುವುದು ಹೇಗೆ?
ನಿಮ್ಮ ಸ್ಮಾರ್ಟ್ಫೋನ್ನಲ್ಲಿವಾಟ್ಸ್ಆ್ಯಪ್ಇದೆ ಎಂದಾಕ್ಷ ಣ ಹಣವನ್ನು ವರ್ಗಾವಣೆ ಮಾಡಲು ಅಥವಾ ಸ್ವೀಕರಿಸಲು ಬರುವುದಿಲ್ಲ. ನಿಮ್ಮ ವಾಟ್ಸ್ಆ್ಯಪ್ನಂಬರ್ಯುಪಿಐ ಜೊತೆ ಸಂಪರ್ಕ ಹೊಂದಿದ್ದರೆ, ಅಂಥ ವಾಟ್ಸ್ಆ್ಯಪ್ಅಪ್ಡೇಟ್ಮಾಡಿ. ಆಗ ವಾಟ್ಸ್ಆ್ಯಪ್ಪೇಮೆಂಟ್ಆಪ್ಷನ್ನಿಮ್ಮ ಸೆಟ್ಟಿಂಗ್ಸ್ನಲ್ಲಿಕಾಣಿಸಿಕೊಳ್ಳುತ್ತದೆ. ಒಂದೊಮ್ಮೆ ಈ ಮೊದಲು ನೀವು ಯುಪಿಐ ಜತೆ ನಿಮ್ಮ ನಂಬರ್‌, ಖಾತೆ ಸಂಪರ್ಕಿಸಿಲ್ಲವಾದರೆ ಮೊದಲು ನೀವು ವಾಟ್ಸ್ಆ್ಯಪ್ನಲ್ಲಿಯುಪಿಐ ಅಕೌಂಟ್ಸೆಟ್ಅಪ್ಮಾಡಿಕೊಳ್ಳಬೇಕು. ಆ ಬಳಿಕ ನೀವು ಹಣವನ್ನು ಕಳುಹಿಸಲು ಇಲ್ಲವೇ ಸ್ವೀಕರಿಸಲು ಸಾಧ್ಯವಾಗುತ್ತದೆ.

ಬಳಸುವುದು ಹೇಗೆ?
ಮಜಾ ಏನ್ಗೊತ್ತಾ, ನೀವು ವಾಟ್ಸ್ಆ್ಯಪ್ನಿಂದ ಫೋಟೊ, ವಿಡಿಯೋಗಳನ್ನು ಕಳಿಸುವಷ್ಟು ಸಲೀಸಾಗಿಯೇ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು! ಚಾಟ್ಬಾರ್‌­­ನಲ್ಲಿರುವ ಷೇರ್ಫೈಲ್ಐಕಾನ್ಮೇಲೆ ಟ್ಯಾಪ್ ಮಾಡಿ ಮತ್ತು ಪೇಮೆಂಟ್ಸೆಲೆಕ್ಟ್ ಮಾಡುವುದರ  ಮೂಲಕವು ನೀವು ನೇರ­ವಾಗಿ ಹಣವನ್ನು ವರ್ಗಾವಣೆ  ಮಾಡ­ಬಹುದು. ಹಾಗೆಯೇ, ಪ್ರತ್ಯೇಕವಾಗಿ ಹಣ ವರ್ಗಾ­ವಣೆಗೋಸ್ಕರವೇ ಶಾರ್ಟ್ಕಟ್ಮೆನ್ಯುವಿನಲ್ಲಿಪೇಮೆಂಟ್ಸೆಕ್ಷ ನ್ಇದೆ. ಇಲ್ಲಿಬಳಕೆದಾರರು ಅಕೌಂಟ್ಡಿಟೇಲ್ಸ್‌, ವಹಿವಾಟು ಮತ್ತು ಹಣ ಕಳುಹಿಸಿದ ಮಾಹಿತಿ­ಯನ್ನು ತಿಳಿದುಕೊಳ್ಳಬಹುದು.

ಎಚ್ಚರ ಇರಲಿ
- ವಾಟ್ಸ್ಆ್ಯಪ್ಪೇಮೆಂಟ್ಸೇವೆ  ಎಷ್ಟು ಸರಳವಾಗಿದೆಯೋ ಅಷ್ಟೇ ಅಪಾಯಕಾರಿಯೂ ಆಗಬಹುದಾದ ಸಾಧ್ಯತೆ ಇದೆ. ಹಾಗಾಗಿ, ವಾಟ್ಸ್ಆ್ಯಪ್ಪೇ ಸೇವೆಯನ್ನು ಬಳಸುವ ಮುನ್ನ ಒಂದಿಷ್ಟು ಎಚ್ಚರಿಕೆಗಳನ್ನು ಬಳಕೆದಾರರು ವಹಿಸಲೇಬೇಕು.

- ಪೇಮೆಂಟ್ಸ್ಸಕ್ರಿಯಗೊಳಿಸುವ ಸಂಬಂಧ ವಾಟ್ಸ್ಆ್ಯಪ್ಎಂದಿಗೂ ದೂರವಾಣಿ ಕರೆ ಅಥವಾ ಸಂದೇಶಗಳನ್ನು ರವಾನಿಸುವುದಿಲ್ಲಎಂಬುದನ್ನು ನೆನಪಿಡಿ.

- ವಾಟ್ಸ್ಆ್ಯಪ್ಪೇಮೆಂಟ್ಸ್ಗೆ ಯಾವುದೇ ಅಧಿಕೃತ ಕಸ್ಟಮ್ಕೇರ್ನಂಬರ್ಇಲ್ಲ. ಹಾಗಾಗಿ, ಯಾರಾದರೂ ವಾಟ್ಸ್ಆ್ಯಪ್ಪೇ ಕಸ್ಟಮರ್ಕೇರ್ನಿಂದ ಕರೆ ಮಾಡಿದ್ದೇವೆ ಎಂದರೆ ನಂಬಲು ಹೋಗಬೇಡಿ. ಯಾಕೆಂದರೆ, ನಿಮ್ಮನ್ನು ಮೋಸಗೊಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

- ನಿಮ್ಮ ಡೆಬಿಟ್ಮತ್ತು ಕ್ರೆಡಿಟ್ಕಾರ್ಡ್ವಿವರ, ಒಟಿಪಿ ಅಥವಾ ಯುಪಿಐ ಪಿನ್ನಂಬರ್ಅನ್ನು ಯಾರೊಂದಿಗೂ ವಾಟ್ಸ್ಆ್ಯಪ್ಪೇಮೆಂಟ್ಗಾಗಿ ಹಂಚಿಕೊಳ್ಳಲು ಹೋಗಬೇಡಿ.

- ವಾಟ್ಸ್ಆ್ಯಪ್ನಲ್ಲಿನಿಮಗೆ ಕಳುಹಿಸಲಾಗುವ ಅಪರಿಚಿತ, ಸಂಶಾಯಸ್ಪದ ಲಿಂಕ್ಗಳನ್ನು ಕ್ಲಿಕ್ಮಾಡಲು ಹೋಗಲೇಬೇಡಿ.

- ವಾಟ್ಸ್ಆ್ಯಪ್ನಲ್ಲಿನಿಮಗೆ ಪರಿಚಿತರಾದವರಿಂದ ಮಾತ್ರವೇ ವಾಟ್ಸ್ಆ್ಯಪ್ಪೇ ರಿಕ್ವೆಸ್ಟ್ಗಳನ್ನು

ಸ್ವೀಕರಿಸಿ. ಅಪರಿಚಿತ ರಿಕ್ವೆಸ್ಟ್ಗಳನ್ನು ಸ್ವೀಕರಿಸಲು ಹೋಗಬೇಡಿ. ಖದೀಮರು ನಿಮ್ಮ ಖಾತೆಯಿಂದ ಹಣವನ್ನು ಲಪಟಾಯಿಸಬಹುದು. ಹುಷಾರಾಗಿರಿ.

 

(ಈ ಲೇಖನವು 2020 ಡಿಸೆಂಬರ್ 27ರ ವಿಜಯ ಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ)




ಶನಿವಾರ, ಡಿಸೆಂಬರ್ 26, 2020

Four Haiku: ನಾಲ್ಕು ಹಾಯ್ಕುಗಳು

ಕಡು ದುಃಖವೇ ಕಡು ಪ್ರೀತಿ

ಪ್ರೀತಿ ಕ್ಷಮೆಗೂ ಸಮ

ನಾನೀಗ ನಿನ್ನನ್ನು ಕ್ಷಮಿಸುತ್ತಿದ್ದೇನೆ

- ಘಾಡ್ ಶಹಬಂದರ್


ಮಳೆಬಿಲ್ಲು ಸ್ಥಿರವಾಗಿದೆ

ನೀನು ಈಗ ಇಲ್ಲೆ ಇರುವಂತೆ

ಈ ಕ್ಷಣದಲ್ಲಿ...

- Takahama Kyoshi


ನಾವು ಸತ್ತು ಹೋಗೋಣ್ವಾ?

ನನ್ನ ಕಿವಿಯಲ್ಲಿ ಪಿಸುಗುಟ್ಟಿದೆ

ಮಿಂಚು ಹುಳದ ಆ ರಾತ್ರಿಯಲಿ

- Suzuki Masajo


ನಮ್ಮ ನಡುವಿನ ಪ್ರೀತಿ

ಮಾತು ಮತ್ತು ಉಸಿರು, ನಿನ್ನನ್ನು ಪ್ರೀತಿಸುವುದು ಎಂದರೆ

ಉದ್ದನೆಯ ನದಿ ಹರಿದಂತೆ

- ಸೋನಿಯಾ ಸ್ಯಾಂಚ್



ಬುಧವಾರ, ಡಿಸೆಂಬರ್ 23, 2020

Poem: ಸೂಚನೆಯಾದರೂ ಏನು?

 ಹಗಲು ರಾತ್ರಿ ಒಂದಾಗುವ ಆ ಸಂಜೆಯ 

ನಸುಗೆಂಪಲ್ಲಿ ಹೊಳೆಯುವ ನಿನ್ನ 

ನಯನಗಳು ಕೆಣಕುತ್ತಿವೆ ಏನನ್ನೋ?


ಉಲಿಯುವ ಹಕ್ಕಿಗಳ ಸ್ವರ ಮೇಳ

ಹಿನ್ನೆಲೆಯಲ್ಲಿ ಏನೋ

ಸಂಕೇತಿಸುತ್ತಿವೆ ನಿನ್ನ ತುಟಿಗಳು?


ತಂಗಾಳಿ ಸೋಕಿ ನರ್ತಿಸುವ

ನಿನ್ನ ಮುಂಗುರುಳು ನೀಡುತ್ತಿರುವ

ಮುನ್ಸೂಚನೆಯಾದರೂ ಏನು?


ಹಗಲು ಸತ್ತು, ರಾತ್ರಿ ಹುಟ್ಟಿ

ತಿಂಗಳ ಬೆಳಕು ಚೆಲ್ಲಿ

ಬಳಿದುಕೊಳ್ಳುವುದಾದರೂ ಏನು?

- ಮಲ್ಲಿಕಾರ್ಜುನ ತಿಪ್ಪಾರ

ಸೋಮವಾರ, ಡಿಸೆಂಬರ್ 14, 2020

ಸೈಂಟಿಸ್ಟ್ ಸೂಪರ್‌ಹೀರೊ ಗೀತಾಂಜಲಿ

ಪ್ರತಿಷ್ಠತಟೈಮ್ಮ್ಯಾಗಜಿನ್ ನೀಡುತ್ತಿರುವಕಿಡ್ ಆ್ ದಿ ಇಯರ್ಗೌರವಕ್ಕೆ ಪಾತ್ರಳಾದ ಇಂಡಿಯನ್-ಅಮೆರಿಕನ್ ಬಾಲೆ ಗೀತಾಂಜಲಿ ರಾವ್, ಬಹುಮುಖ ಪ್ರತಿಭಾವಂತೆ.


- ಮಲ್ಲಿಕಾರ್ಜುನ ತಿಪ್ಪಾರ 

ಅಮೆರಿಕದಲ್ಲಿರುವ ಭಾರತೀಯ ಸಮುದಾಯವು ಎರಡು ಹೆಮ್ಮೆಯ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗುವ ಮೂಲಕ ಇತಿಹಾಸ ಸೃಷ್ಟಿಸಿದರೆ, ಪ್ರತಿಷ್ಠತಟೈಮ್ಮ್ಯಾಗಜಿನ್ ಇದೇ ಮೊದಲ ಬಾರಿಗೆ ನೀಡುತ್ತಿರುವಕಿಡ್ಸ್ ಆ್ ದಿ ಇಯರ್ಗೌರವಕ್ಕೆ ಇಂಡಿಯನ್-ಅಮೆರಿಕನ್ ಬಾಲೆ, 15ರ ಹರೆಯದಗೀತಾಂಜಲಿ ರಾವ್ಅವರನ್ನು ಆಯ್ಕೆ ಮಾಡಿದೆ. ಈ ಬಾಲೆ ಮಂಗಳೂರು ಮೂಲದವಳು ಎನ್ನುವುದು ಕನ್ನಡಿಗರಾಗಿ ನಮಗೆ ಮತ್ತೊಂದು ಹೆಮ್ಮೆಯ ಕೋಡು!

ಗೀತಾಂಜಲಿ ರಾವ್ ಪ್ರತಿಭೆ ಯಾವುದೇ ಒಂದಕ್ಕೆ ಸೀಮಿತವಾಗಿಲ್ಲ. ಆಕೆ ಸಂಶೋಧಕಿ, ವಿಜ್ಞಾನಿ, ಫೆನ್ಸರ್, ಡ್ಯಾನ್ಸರ್, ಸಿಂಗರ್, ಬೇಕರ್, ಟೆಡ್ ಸ್ಪೀಕರ್... ಹೀಗೆ ಪಟ್ಟಿ ಬೆಳೆಯುತ್ತದೆ. ಅಮೆರಿಕದ ಕೊಲೊರಡೊದ ಡೆನೆವರ್ನಲ್ಲಿ ವಾಸವಾಗಿರುವ ಗೀತಾಂಜಲಿಟೈಮ್ಸ್ಮುಖಪುಟದಲ್ಲಿ ರಾರಾಜಿಸುವ ಖುಷಿಯ ಕ್ಷಣ ಸಲೀಸಾಗಿ ಸಿಕ್ಕಿದ್ದಲ್ಲ. ಅಮೆರಿಕದ ಐದು ಸಾವಿರಕ್ಕೂ ಹೆಚ್ಚು ಸ್ಪರ್ಧಾರ್ಥಿಗಳನ್ನು ಹಿಂದಿಕ್ಕಿ ಗೆದ್ದಿದ್ದಾಳೆ ಮತ್ತು ಈ ಗೌರವಕ್ಕೆ ಯಾವುದೇ ದೃಷ್ಟಿಯಿಂದ ನೋಡಿದರೂ ಆಕೆ ಸೂಕ್ತ ಆಯ್ಕೆಯೂ ಹೌದು.

ಹಾಲಿವುಡ್ನ ಖ್ಯಾತ ನಟಿ ಎಂಜೆಲಿನಾ ಜೋಲಿ ಅವರು ಗೀತಾಂಜಲಿ ರಾವ್ ಅವರನ್ನು ಸಂದರ್ಶಿಸಿದ್ದು, ಅದರಲ್ಲಿ ಆಕೆ ತನ್ನ ಗುರಿ, ಮುಂದಿನ ಯೋಜನೆಗಳು, ಹಲವು ಸಂಶೋಧನೆಗಳಿಗೆ ಕಾರಣವಾದ ಸಂಗತಿಗಳು, ಸ್ಫೂರ್ತಿ ನೀಡಿದ ನಾಯಕರು, ಸಾಗಬೇಕಿರುವ ದಾರಿ... ಹೀಗೆ ಮಾತುಗಳನ್ನು ಹರವಿಟ್ಟಿದ್ದಾಳೆ. ಗೀತಾಂಜಲಿಯ ಸಾಧನೆಗೆ ಆಕೆಯ ತಂದೆ ರಾಮ್ ರಾವ್ ಮತ್ತು ತಾಯಿ ಭಾರತಿ ಅವರ ಸಂಪೂರ್ಣ ಬೆಂಬಲವೂ ಇದೆ. ಯಾವುದೇ ಮಕ್ಕಳು ಹೊಸದಕ್ಕೆ ತುಡಿದಾಗ ಅದಕ್ಕೆ ಪೋಷಕರು ಅಗತ್ಯ ಬೆಂಬಲ ನೀಡಿದರೆ ಅದ್ಭುತ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಗೀತಾಂಜಲಿ ಉದಾಹರಣೆ.

ಚಿಕ್ಕ ವಯಸ್ಸಾದರೂ ಆಕೆಯಲ್ಲಿರುವ ವಿಚಾರ ಸ್ಪಷ್ಟತೆ, ನಿರ್ದಿಷ್ಟ ಗುರಿಯೆಡೆಗಿನ ಬದ್ಧತೆ ನಿಮ್ಮನ್ನು ವಿಸ್ಮಯಗೊಳಿಸುತ್ತದೆ. ವಯಸ್ಸಿಗೆ ಮೀರಿದ ಯೋಚನಾ ಸರಣಿ ಹಾಗೂ ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವ ತುಡಿತವೇ ಆಕೆಯ ಸಂಶೋಧನೆ, ಆವಿಷ್ಕಾರಗಳಿಗೆ ಕಾರಣವಾಗಿದೆ.

ಕುಡಿಯುವ ನೀರಿನಲ್ಲಿ ಅಪಾಯಕಾರಿ ಮಟ್ಟದಲ್ಲಿದ್ದ ಸೀಸದ ಸಮಸ್ಯೆಯನ್ನು ಅಮೆರಿಕದ ಮಿಶಿಗನ್, ಫ್ಲಿಂಟ್ ವಾಸಿಗಳು ಎದುರಿಸುತ್ತಿದ್ದರು. ಈ ಸಮಸ್ಯೆಗೆ ಪರಿಹಾರ ಯೋಚಿಸಿದ ಗೀತಾಂಜಲಿ, ‘ಟೆಥಿಸ್ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದಳು. ಇದು ಕಾರ್ಬನ್ ನ್ಯಾನೋಟ್ಯೂಬ್ ಆಗಿದ್ದು, ನೀರಿನಲ್ಲಿರುವ ಸೀಸದ ಪ್ರಮಾಣ ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚಿ, ಕುಡಿಯಲು ನೀರು ಯೋಗ್ಯವಾಗಿದೆಯೇ ಎಂಬುದನ್ನು ಸುರಕ್ಷಿತ, ಸ್ವಲ್ಪ ಕಲುಷಿತ ಮತ್ತು ಯೋಗ್ಯವಲ್ಲ ಎಂದು ವಿಂಗಡಿಸಿ ಮಾಹಿತಿಯನ್ನು ಸ್ಮಾರ್ಟ್ ೆನ್ನ ಆ್ಯಪ್ಗೆ ರವಾನಿಸುತ್ತದೆ. ಈ ಸಾಧನ ಆಕೆಗೆ 2017ರಲ್ಲಿ ಡಿಸ್ಕವರಿ ಎಜುಕೇಷನ್ 3ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್ ಗೆಲ್ಲಲು ಅವಕಾಶ ಕಲ್ಪಿಸಿತು. ಕೈಂಡ್ಲೀ ಎನ್ನುವ ಆ್ಯಪ್ ಅನ್ನು ಗೀತಾಂಜಲಿ ಅಭಿವೃದ್ಧಿ ಪಡಿಸಿದ್ದಾಳೆ. ಕೃತಕ ಬುದ್ಧಿಮತ್ತೆ(ಎಐ) ಆಧರಿತ ಈ ಆ್ಯಪ್ ಸೈಬರ್ಬುಲ್ಲಿ ಚಟುವಟಿಕೆಯನ್ನು ಪತ್ತೆ ಹಚ್ಚುತ್ತದೆ. ಗೀತಾಂಜಲಿಯ ಮತ್ತೊಂದು ಅವಿಷ್ಕಾರವು ಹ್ಯೂಮನ್ ಜೆನೆಟಿಕ್ಸ್(ಮಾನವ ತಳಿಶಾಸ) ಸಂಬಂಧಿಸಿದ್ದು ಮತ್ತು ಮಾದಕ ವ್ಯಸನಿಯಾಗುವುದನ್ನು ಪತ್ತೆ ಹಚ್ಚುತ್ತದೆ.

ವಿಜ್ಞಾನ, ತಂತ್ರಜ್ಞಾನ, ಎಂಜನಿಯರಿಂಗ್, ಗಣಿತ—(ಸ್ಟೆಮ್)ನಲ್ಲಿ ಅಪಾರ ನಂಬಿಕೆ ಹೊಂದಿರುವ ಗೀತಾಂಜಲಿ, ಸ್ಟೆಮ್ ಸಂಸ್ಥೆಗಳಲ್ಲಿರುವ ಹುಡುಗಿಯರು, ಸ್ಕೂಲ್ ವಿದ್ಯಾರ್ಥಿಗಳು, ಶಾಂಘೈ ಇಂಟರ್ನ್ಯಾಘಿಷನಲ್ ಯುಥ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಗ್ರೂಪ್, ಲಂಡನ್ನ ರಾಯಲ್ ಅಕಾಡೆಮಿ ಆ್ ಎಂಜನಿಯರಿಂಗ್ ಸಂಸ್ಥೆಗಳಲ್ಲಿ ನಾವೀನ್ಯತಾ ಕಾರ್ಯಾಗಾರಗಳನ್ನು ಮಾಡುವುದನ್ನು ಇಷ್ಟಪಡುತ್ತಾಳೆ. ವಾರಾಂತ್ಯದಲ್ಲಿ ಈ ಕ್ಲಾಸುಗಳಿಗೆ ಜಗತ್ತಿನಾದ್ಯಂತ 28 ಸಾವಿರಕ್ಕೂ ಹೆಚ್ಚು ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹೈಸ್ಕೂಲು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ ಮತ್ತು ಗೀತಾಂಜಲಿ ತಾನು ಕಂಡುಕೊಂಡ ಪ್ರಕ್ರಿಯೆ ಹಾಗೂ ಸಾಧನಗಳ ಬಗ್ಗೆ ಮಾಹಿತಿ ನೀಡುತ್ತಾಳೆ.

‘‘ಪ್ರತಿ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಹೋಗಬಾರದು. ನಿಮ್ಮನ್ನು ಪ್ರಚೋದಿಸುವ ಸಮಸ್ಯೆಯೊಂದರ ಮೇಲೆ ಮಾತ್ರವೇ ಗಮನ ಕೇಂದ್ರೀಕರಿಸಿ. ಒಂದು ವೇಳೆ ಇಷ್ಟೆಲ್ಲ ಮಾಡಲು ನನಗೆ ಸಾಧ್ಯವಾಗಿದ್ದರೆ, ಯಾರಾದರೂ ಇದನ್ನು ಮಾಡಬಹುದಲ್ಲವೇ,’’ ಎನ್ನುತ್ತಾ ಇತರರನ್ನು ಹುರಿದುಂಬಿಸುವ ಔದಾರ್ಯ ಗೀತಾಂಜಲಿಗಿದೆ. ‘‘ಇಷ್ಟು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದೀಯಲ್ಲನಿನಗೆ ಯಾರು ಸ್ಫೂರ್ತಿ?’’ ಎಂದು ಕೇಳಿದರೆ, ಮೇರಿ ಕ್ಯೂರಿ ತನ್ನ ಅತಿದೊಡ್ಡ ಸ್ಫೂರ್ತಿ ಎನ್ನುತ್ತಾಳೆ ಬಟ್ಟಲು ಕಂಗಳ ಗೀತಾಂಜಲಿ. ಜೊತೆಗೆ, ತಂದೆ ತಾಯಿ, ಭಾರತದಲ್ಲಿರುವ ಕುಟುಂಬದ ಸದಸ್ಯರ ಬೆಂಬಲವನ್ನು ಸ್ಮರಿಸುತ್ತಾಳೆ. ಫ್ರೆಂಚ್ ಪ್ರಾಧ್ಯಾಪಕ ಮತ್ತು ಮೈಕ್ರೋಬಯಾಲಜಿ, ಜೆನೆಟಿಕ್ಸ್ ಮತ್ತು ಬಯೋಕೆಮಿಸ್ಟ್ರಿ ಸಂಶೋಧಕ ಎಮ್ಯಾನುಯೆಲ್ ಮೇರಿ ಚಾರ್ಪೆಂಟಿಯರ್ ಮತ್ತು ಅಮೆರಿಕದ ಜೀವರಾಸಾಯನಿಕ ವಿಜ್ಞಾನಿ ಜೆನ್ನಿರ್ ಆನ್ ಡೌಡನಾ ಗೀತಾಂಜಲಿ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾರೆ.

ಜಗತ್ತಿನ ಹಲವು ಮಕ್ಕಳಿಗೆರೋಲ್ ಮಾಡೆಲ್ಆಗಿರುವ ಗೀತಾಂಜಲಿ ಭಾರತದ ಇಂದಿರಾ ಗಾಂಧಿ ಎಂದರೆ ಅಚ್ಚುಮೆಚ್ಚು ಮತ್ತು ಸ್ಫೂರ್ತಿಯ ಸೆಲೆ. ‘‘ಭಾರತದಲ್ಲಿ ನನಗೆ ಸ್ಫೂರ್ತಿದಾಯಕ ವ್ಯಕ್ತಿ ಎಂದರೆ ಇಂದಿರಾ ಗಾಂಧಿ. ಇಂದಿರಾ ಬರ್ತ್ಡೇ ದಿನವೇ ನನ್ನದು ಕೂಡ,’’ ಎನ್ನುತ್ತಾಳೆ ಗೀತಾಂಜಲಿ. ಇಂದಿರಾ ಅವರ ಕೆಲಸ, ತೋರಿದ ದಿಟ್ಟ ನಾಯಕತ್ವದ ಬಗ್ಗೆ ಅಪಾರ ಮೆಚ್ಚುಗೆ. ಅವರು ಸಾಗಿದ ದಾರಿಯಲ್ಲೇ ಸಾಗಿ, ಅವರಷ್ಟೇ ಶಕ್ತಿಶಾಲಿ ವ್ಯಕ್ತಿತ್ವ ರೂಪಿಸಿಕೊಳ್ಳುವ ಇಂಗಿತ ಹೊರಹಾಕುತ್ತಾಳೆ. ಇಂದಿರಾ ಹೊರತುಪಡಿಸಿ, ನಟ ಶಾರುಖ್ ಖಾನ್ ಬಗ್ಗೆಯೂ ಗೀತಾಂಜಲಿಗೆ ಅಭಿಮಾನವಿದೆ. ತಾನು ಈವರೆಗೆ ಭೇಟಿ ಮಾಡಿದವರ ಪೈಕಿ ಅತ್ಯಂತ ನಿಸ್ವಾರ್ಥ ವ್ಯಕ್ತಿ ಎಂದುಕಿಂಗ್ ಖಾನ್ರನ್ನು ಶ್ಲಾಘಿಸುತ್ತಾಳೆ. ಶಾರುಖ್ ನಡೆಸಿಕೊಟ್ಟ ಟೆಡ್ ಟಾಕ್ನಲ್ಲೂ ಗೀತಾಂಜಲಿ ಮಾತನಾಡಿದ ಅನುಭವವನ್ನು ನೆನಪಿಸಿಕೊಳ್ಳುತ್ತಾಳೆ. ಹಾಲಿವುಡ್ನಲ್ಲೂ ಹೆಸರು ಮಾಡುತ್ತಿರುವ ಭಾರತದ ನಟಿ ಪ್ರಿಯಾಂಕಾ ಚೋಪ್ರಾ ಅವರ ಬಗ್ಗೆ ಗೀತಾಂಜಲಿಗೆ ಪ್ರೀತಿ ಇದೆ.

ಗೀತಾಂಜಲಿಯ ಆಸಕ್ತಿ ವಿಜ್ಞಾನ, ಸಂಶೋಧನೆಗೆ ಸೀಮಿತವಾಗಿಲ್ಲ. ಆಕೆಗೆ ನಾನಾ ಆಸಕ್ತಿ. ಪ್ರತಿಯೊಂದನ್ನು ಕುತೂಹಲದಿಂದ ನೋಡುವ ಬೆರಗು ಸ್ವಭಾವ ಅವಳದ್ದು. ಪ್ರತಿಯೊಂದರಲ್ಲೂ ಆಸಕ್ತಿ ತಾಳಿ ಅದನ್ನು ಒಲಿಸಿಕೊಳ್ಳುತ್ತಾಳೆ. ಪಿಯಾನೋ ವಾದನ, ಭಾರತೀಯ ನೃತ್ಯ, ಗಾಯನ, ಈಜು ಮತ್ತು ಫೆನ್ಸಿಂಗ್ ಗೀತಾಂಜಲಿಯ ಆಸಕ್ತಿಯ ಕ್ಷೇತ್ರಗಳು. ಒಂಭತ್ತು ವರ್ಷದವಳಿದ್ದಾಗಲೇ ಶಾಸೀಯ ಸಂಗೀತ ಅಭ್ಯಾಸ ಆರಂಭಿಸಿದಳು. ಕೋವಿಡ್ ಕ್ವಾರಂಟೈನ್ನಲ್ಲಿ ಸಮಯವನ್ನು ಹೊಸ ಕಲಿಕೆಗೆ ಸದುಪಯೋಗಪಡಿಸಿಕೊಂಡೆ ಎಂದು ಏಂಜೆಲೀನಾ ಜೋಲಿ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾಳೆ. ಇದೇ ಸಮಯದಲ್ಲಿ ತಾನು ಹೇಗೆ ಬೇಕಿಂಗ್ ಕಲಿತೆ ಎಂಬುದನ್ನು ರಸವತ್ತಾಗಿ ವಿವರಿಸಿದ್ದಾಳೆ.

ತೀರಾ ಚಿಕ್ಕ ವಯಸ್ಸಿಗೆ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಗೀತಾಂಜಲಿ ಮುಂದೇನು ಮಾಡುತ್ತಾಳೆ ಎಂಬ ಪ್ರಶ್ನೆ ಸಹಜ. ನಯೀ ಬಾತ್ ಟೆಡ್ಟಾಕ್ನಲ್ಲಿ ತನ್ನ ಮುಂದಿರುವ ಗುರಿಯನ್ನು ಸೂಪರ್ ಹೀರೋಗಳೊಂದಿಗೆ ಸಮೀಕರಿಸಿ ವಿವರಿಸಿದ್ದಾಳೆ. ಕಾಮಿಕ್ ಅಥವಾ ಸಿನಿಮಾದಲ್ಲಿ ಸೂಪರ್ ಹೀರೋಗಳು ಎತ್ತರದ ಕಟ್ಟಡಗಳಿಂದ ಕಟ್ಟಡಕ್ಕೆ ನೆಗೆಯುತ್ತಾರೆ; ತಾಂತ್ರಿಕ ಗ್ಯಾಜೆಟ್ಗಳನ್ನು ಬಳಸುತ್ತಾರೆ; ಅತಿಮಾನುಷ ಶಕ್ತಿ ಹೊಂದಿರುತ್ತಾರೆ. ಆದರೆ, ಅವರ ಮುಖ್ಯ ಕೆಲಸ ಜೀವಗಳನ್ನುರಕ್ಷಿಸುವುದೇ ಆಗಿರುತ್ತದೆ. ವಿಜ್ಞಾನಿಗಳೂ ಹಾಗೆಯೇ. ವಿಜ್ಞಾನಿಗಳು ಯಾವಾಗಲೂ ಸಮಸ್ಯೆಗೆ ಪರಿಹಾರ ಸೂಚಿಸುತ್ತಾರೆ; ಜನರ ಸಂಕಟಕ್ಕೆ ನೆರವಾಗುತ್ತಾರೆ. ತಾನುಸೈಂಟಿಸ್ಟ್ ಸೂಪರ್ ಹೀರೊಆಗಬೇಕು. ನಿಜ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುತ್ತಾ, ಜೀವಗಳನ್ನು ರಕ್ಷಿಸಬೇಕು ಎನ್ನುವುದು ಆಕೆಯ ಆಂತರ್ಯದ ಮಾತುಗಳು. ಅವಳ ಮುಂದಿನ ಗುರಿ, ಯೋಜನೆಗಳೇನೆಂಬುದು ನಿಮಗೀಗ ಸ್ಪಷ್ಟವಾಗಿರಬೇಕು ಅಲ್ಲವೇ?

(ಈ ಲೇಖನ ವಿಜಯ ಕರ್ನಾಟಕದ 2020 ಡಿಸೆಂಬರ್ 13ರ ಸಂಚಿಕೆಯಲ್ಲಿ ಪ್ರಕಟವಾಗಿದೆ)