ಗುರುವಾರ, ಮಾರ್ಚ್ 14, 2019

ಇಂದಿರಾ ಸೋಲು ಸಂಭ್ರಮಿಸಲು ಜನತಾ ಸರಕಾರದಿಂದ 77 ಸಾಫ್ಟ್ ಡ್ರಿಂಕ್!

1977ರಲ್ಲಿ ಇಂದಿರಾ ಗಾಂಧಿ ಸೋತರು. ಜನತಾ ಪಾರ್ಟಿ ಅಧಿಕಾರಕ್ಕೆ ಬಂತು. ಅದೇ ಸಮಯದಲ್ಲಿ ಕೋಕಾ ಕೋಲಾ ಕಂಪನಿಯನ್ನು ದೇಶದಿಂದ ಹೊರ ಹಾಕಲಾಯಿತು. ಆಗ ಕೇಂದ್ರ ಸರಕಾರವೇ ಜನರಿಗೋಸ್ಕರ ಡಬಲ್ ಸೆವೆನ್(77) ತಂಪು ಪಾನೀಯವನ್ನು ಬಿಡುಗಡೆ ಮಾಡಿತು. ಇಂದಿರಾ ಸೋಲ ಸಂಭ್ರಮ ಮತ್ತು ತುರ್ತು ಪರಿಸ್ಥಿತಿಯನ್ನು ಜನರು ಮರೆಯಬಾರದು ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು. 



1977ರಲ್ಲಿ ಇಂದಿರಾ ಗಾಂಧಿ ಸೋತರು. ಇದರ ನೆನಪಿಗಾಗಿಯೇ ಜನತಾ ಸರಕಾರವೇ ದೇಸಿ ಸಾಫ್ಟ್ ಡ್ರಿಂಕ್ ‘ಡಬಲ್ ಸೆವೆನ್(77)’ ಉತ್ಪಾದನೆ ಆರಂಭಿಸಿತೆಂದರೆ ನಂಬುವಿರಾ ? 

ಹೌದು. ನಂಬಲೇಬೇಕು. 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ ದೇಶವಾಸಿಗಳ ಕಣ್ಣಲ್ಲಿ ಖಳನಾಯಕಿಯಾಗಿದ್ದರು. ಮತ್ತೊಂದೆಡೆ, ಜಯಪ್ರಕಾಶ್ ನಾರಾಯಣ್ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಹೊರತುಪಡಿಸಿ ಬಹುತೇಕ ಪಕ್ಷಗಳು ಜನತಾ ಪಾರ್ಟಿಯಡಿ ಒಗ್ಗೂಡಿ 1977ರಲ್ಲಿ ಚುನಾವಣೆ ಎದುರಿಸಿ, ಐತಿಹಾಸಿಕ ಗೆಲುವು ಸಾಧಿಸಿದವು. ಮೊದಲ ಬಾರಿಗೆ ಕಾಂಗ್ರೆಸೇತರ ಸರಕಾರ ಅಸ್ತಿತ್ವಕ್ಕೆ ಬಂತು. ಮೊರಾರ್ಜಿ ದೇಸಾಯಿಪ್ರಧಾನಿಯಾದರು. 

ಇದೇ ಸಂದರ್ಭದಲ್ಲಿಕೋಕಾ ಕೋಲಾ, ಐಬಿಎಂ ಸೇರಿದಂತೆ ಕೆಲವು ಬಹುರಾಷ್ಟ್ರೀಯ ಕಂಪನಿಗಳು ಹೂಡಿಕೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿದ್ದವು. ಆಗ ಕೈಗಾರಿಕಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರು ಐಬಿಎಂ ಮತ್ತುಕೋಕಾ ಕೋಲಾ ಕಂಪನಿಗೆ ದೇಶ ತೊರೆಯುವಂತೆ ಸೂಚಿಸಿದರು. ಈ ಹಂತದಲ್ಲಿ ದೇಶದ ಜನರಿಗೆ ದೇಸಿ ಸಾಫ್ಟ್ ಡ್ರಿಂಕ್ ಪರಿಚಯಿಸಲು ಸರಕಾರವೇ ಮುಂದಾಯಿತು. ಆದರೆ, ಅದಕ್ಕೆ ಬೇಕಿದ್ದ ಫಾರ್ಮುಲಾವನ್ನುಕೋಕಾ ಕೋಲಾ ಕಂಪನಿ ಬಿಟ್ಟುಕೊಡಲಿಲ್ಲ. ಆದರೆ, ಜನತಾ ಸರಕಾರ ಮಾತ್ರ ಪಟ್ಟು ಬಿಡದೆ ದೇಸಿ ಸಾಫ್ಟ್ಡ್ರಿಂಕ್ ಪರಿಚಯಿಸಿ, ಅದಕ್ಕೆ 77 (ಡಬಲ್ ಸೆವೆನ್)ಎಂದು ಹೆಸರಿಟ್ಟಿತು !

ಹಾಗೆ ಹೆಸರಿಡಲು ಕಾರಣ- ಇಂದಿರಾ ಗಾಂಧಿಯನ್ನು ಸೋಲಿಸಿ ಜನತಾ ಪಾರ್ಟಿ ಅಧಿಕಾರಕ್ಕೇರಿದ ವರ್ಷ 1977. ಭವಿಷ್ಯದಲ್ಲೂ ಜನತೆತುರ್ತು ಪರಿಸ್ಥಿತಿ ಹಾಗೂ ಅದರ ವಿರುದ್ಧ ನಡೆದ ಹೋರಾಟವನ್ನು ಭಾರತೀಯರುಮರೆಯಲೇಬಾರದು ಎಂಬುದು ಸರಕಾರದ ಉದ್ದೇಶವಾಗಿತ್ತು. ನಿಂಬೆ ಫ್ಲೇವರಿನ ‘ಡಬಲ್ ಸೆವೆನ್ ಟಿಂಗಲ್’ ಎಂಬ ಈಡ್ರಿಂಕ್ ತುಸು ಕಿಕ್ಕೇರಿಸುತಿತ್ತು.ಮುಂದೆಜನತಾ ಪಾರ್ಟಿ ತನ್ನ ಆಂತರಿಕ ಕಚ್ಚಾಟದಿಂದಾಗಿಯೇ 1979ರಲ್ಲಿ ಅಧಿಕಾರದಿಂದ ಕೆಳಗಿಳಿಯಿತು. ಬಳಿಕ ನಡೆದ ಚುನಾವಣೆಯಲ್ಲಿ ಮತ್ತೆ ಇಂದಿರಾ ಗಾಂಧಿ ಪ್ರಚಂಡ ಬಹುಮತದೊಂದಿಗೆ ಪ್ರಧಾನಿಯಾದರು. ಇಂದಿರಾ ಅವರು ಡಬಲ್ ಸೆವೆನ್ಬಗ್ಗೆ ಅಷ್ಟೇನೂ ಆಸಕ್ತಿ ತೋರಿಸಲಿಲ್ಲ. ಅಂತಿಮವಾಗಿ ಅದು ಮಾರುಕಟ್ಟೆಯಿಂದ ಕಣ್ಮರೆಯಾಯಿತು.
- ಮಲ್ಲಿಕಾರ್ಜುನ ತಿಪ್ಪಾರ

ಈ ಲೇಖನವು ವಿಜಯ ಕರ್ನಾಟಕದ 14-03-2019ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಮಂಗಳವಾರ, ಮಾರ್ಚ್ 12, 2019

ಕಾಂಗ್ರೆಸ್, ಬಿಜೆಪಿಗೆ ಪರ್ಯಾಯ ಶಕ್ತಿ ಸಿಪಿಐ(ಎಂ)

ಸಿಪಿಐ(ಎಂ) ಅನ್ನು ಸಾಮಾನ್ಯವಾಗಿ ಸಿಪಿಎಂ ಎಂದು ಕರೆಯುತ್ತಾರೆ. ಕಮ್ಯುನಿಸ್ಟ್‌ ಪಾರ್ಟಿ ಇಂಡಿಯಾ(ಸಿಪಿಐ)ದಿಂದ ಪ್ರತ್ಯೇಕಗೊಂಡು 1964 ಅಕ್ಟೋಬರ್‌ 31ರಂದು ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ(ಮಾರ್ಕ್ಸ್‌ವಾದ) ರಚನೆಯಾಯಿತು. 1964ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಕಮ್ಯುನಿಸ್ಟ್‌ ಪಾರ್ಟಿ ಇಂಡಿಯಾದ 7ನೇ ಸಮಾವೇಶದಲ್ಲಿ ಪಕ್ಷ ಇಬ್ಭಾಗವಾಯಿತು. ಸದ್ಯ, ಸಿಪಿಎಂ ಕೇರಳದಲ್ಲಿ ಅಧಿಕಾರದಲ್ಲಿದ್ದು, ಒಟ್ಟು 8 ರಾಜ್ಯಗಳಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ. ಕೇರಳ, ಪಶ್ಚಿಮ ಬಂಗಾಳ, ತ್ರಿಪುರಾ ರಾಜ್ಯದಲ್ಲಿ ದಟ್ಟ ಪ್ರಭಾವ ಹೊಂದಿರುವ ಸಿಪಿಎಂ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನದಲ್ಲೂ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿದೆ. ಪಾಲಿಟ್‌ಬ್ಯೂರೊ ಈ ಪಕ್ಷ ದ ಅತ್ಯುನ್ನತ ನಿರ್ಧಾಕ ಕೈಗೊಳ್ಳುವ ಸಂಸ್ಥೆಯಾಗಿದೆ. ಸಿಪಿಎಂನ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಮ್‌ ಯಚೂರಿ ಅವರು ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ಲೋಕಸಭೆಯಲ್ಲಿ ಪಿ. ಕರುಣಾಕರನ್‌ ಅವರು ಪಕ್ಷ ದ ನಾಯಕರಾಗಿದ್ದಾರೆ. ಲೋಕಸಭೆಯಲ್ಲಿ 9, ರಾಜ್ಯಸಭೆಯಲ್ಲಿ 5 ಸಂಸದರನ್ನು ಹೊಂದಿರುವ ಸಿಪಿಎಂ, ಕೇರಳದಲ್ಲಿ 59, ತ್ರಿಪುರಾದಲ್ಲಿ 16 ಮತ್ತು ಪಶ್ಚಿಮ ಬಂಗಾಳದಲ್ಲಿ 26 ಶಾಸಕರನ್ನು ಹೊಂದಿದೆ. ಇನ್ನುಳಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಒಟ್ಟು 7 ಶಾಸಕರು ಸಿಪಿಎಂನಿಂದ ಆಯ್ಕೆಯಾಗಿದ್ದಾರೆ. ಮಾರ್ಕ್ಸ್‌ ಮತ್ತು ಲೆನಿನ್‌ ವಾದ ಸಿಪಿಎಂ ಪ್ರಮುಖ ಸಿದ್ಧಾಂತವಾಗಿದೆ. ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸು ನೇತೃತ್ವದಲ್ಲಿ ದೀರ್ಘಾವಧಿಯವರೆಗೆ ಸಿಪಿಎಂ ಅಧಿಕಾರದಲ್ಲಿತ್ತು. ಹಾಗೆಯೇ, 1996ರಲ್ಲಿ ಪ್ರಧಾನಿ ಹುದ್ದೆ ಸಿಪಿಎಂ ನಾಯಕರಿಗೆ ಒಲಿದು ಬಂದಿತ್ತು. ರಾಷ್ಟ್ರದಾದ್ಯಂತ ಪಕ್ಷ ವನ್ನು ಬಲಪಡಿಸುವ ಅನೇಕ ಅವಕಾಶಗಳನ್ನು ಕೈ ಚೆಲ್ಲಿದೆ. ಇತ್ತೀಚಿನ ವರ್ಷಗಲ್ಲಂತೂ ಗಟ್ಟಿ ಬೇರುಗಳನ್ನು ಹೊಂದಿದ್ದ ಪಶ್ಚಿಮ ಬಂಗಾಳ, ತ್ರಿಪುರಾದಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಕೇರಳ ಮಾತ್ರ ಸಿಪಿಎಂ ಇದೀಗ ಆಸರೆಯಾಗಿ ಉಳಿದಿದೆ. ಇ ಎಂ ಎಸ್‌ ನಂಬೂದರಿಪಾದ್‌, ಹರಿಕಿಶನ್‌ ಸಿಂಗ್‌ ಸುರ್ಜಿತ್‌, ಪ್ರಕಾಶ್‌ ಕಾರಟ್‌, ಜ್ಯೋತಿ ಬಸು, ಬುದ್ಧದೇವ್‌ ಭಟ್ಟಾಚಾರ್ಯ, ಮಾಣಿಕ್‌ ಸರ್ಕಾರ್‌, ಈಗ ಕೇರಳ ಮುಖ್ಯಮಂತ್ರಿಯಾಗಿರುವ ಪಿಣರಾಯಿ ವಿಜಯನ್‌, ಸೀತಾರಾಮ್‌ ಯಚೂರಿ ಅವರು ಸಿಪಿಎಂನ ಪ್ರಮುಖ ನಾಯಕರು. ಕುಡುಗೋಲು ಮತ್ತು ಸುತ್ತಿಗೆಯು ಈ ಪಕ್ಷ ದ ಚುನಾವಣಾ ಚಿಹ್ನೆಯಾಗಿದೆ. 

13 ದಿನ ಬಳಿಕ 13 ತಿಂಗ್ಳು ಪ್ರಧಾನಿಯಾದ್ರು ವಾಜಪೇಯಿ

ಈ ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಅತಂತ್ರ ಪಾರ್ಲಿಮೆಂಟ್‌ಗೆ ಕಾರಣವಾಗಿದ್ದರಿಂದಲೇ ಮತ್ತೊಂದು ಚುನಾವಣೆಯನ್ನು ದೇಶ ಎದುರಿಸಬೇಕಾಯಿತು. ಆದರೆ, ಈ ಚುನಾವಣೆಯಲ್ಲೂ ಯಾವುದೇ ಪಕ್ಷ ಅಥವಾ ಕೂಟಕ್ಕೆ ಬಹುಮತ ಬರಲಿಲ್ಲ. ಹಾಗಾಗಿ ರಾಜಕೀಯ ಅಸ್ಥಿರತೆ ಮುಂದುವರಿಯಿತು. ಅಲ್ಲದೆ ಕೇವಲ ಎರಡು ವರ್ಷದಲ್ಲೇ ಮತ್ತೊಂದು ಚುನಾವಣೆ ಎದುರಿಸಬೇಕಾಯಿತು. 12ನೇ ಲೋಕಸಭೆಗೆ 1998ರಲ್ಲಿ ನಡೆದ ಚುನಾವಣೆಯಲ್ಲಿ ಶೇ.25.8ರಷ್ಟು ಮತಗಳೊಂದಿಗೆ ಬಿಜೆಪಿ ಅತಿದೊಡ್ಡ ಪಕ್ಷ ವಾಗಿ ಉದಯವಾಯಿತು; ಒಟ್ಟು 141 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಬಿಜೆಪಿ ನೇತೃತ್ವದ ಎನ್‌ಡಿಎ ಒಟ್ಟು 545 ಸೀಟುಗಳ ಪೈಕಿ 256 ಸೀಟುಗಳನ್ನು ಪಡೆಯಿತು. ಅದೇ ರೀತಿ, ಕಾಂಗ್ರೆಸ್‌ ನೇತೃತ್ವದ ಯುಪಿಎ ಶೇ.30.8ರಷ್ಟು ಮತ ಪಡೆದು ಒಟ್ಟು 164 ಸೀಟುಗಳನ್ನು ಪಡೆಯಿತು. ಕಾಂಗ್ರೆಸ್‌ ಸ್ವತಂತ್ರವಾಗಿ 140 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತು. ತೃತೀಯ ರಂಗ ಕೇವಲ 74 ಕ್ಷೇತ್ರಗಳಿಗೆ ತೃಪ್ತಿ ಪಡಬೇಕಾಯಿತು. ಅತಿ ದೊಡ್ಡ ಪಕ್ಷ ವಾಗಿದ್ದ ಬಿಜೆಪಿಗೆ ಸರಕಾರ ರಚನೆ ಮಾಡಲು ಅವಕಾಶ ದೊರೆಯಿತು. ಅಟಲ್‌ ಬಿಹಾರಿ ವಾಜಪೇಯಿ ಅವರು ಎರಡನೇ ಬಾರಿಗೆ ಪ್ರಧಾನಿಯಾದರು. ಆದರೆ, ರಾಜಕೀಯ ಸ್ಥಿರತೆ ಮಾತ್ರ ಕಂಡು ಬರಲಿಲ್ಲ. ಅಂತಿಮವಾಗಿ 13 ತಿಂಗಳು ಬಳಿಕ ವಾಜಪೇಯಿ ಸರಕಾರ ಪತನವಾಯಿತು. ಜಯಲಲಿತಾ ನೇತೃತ್ವದ ಎಐಎಡಿಎಂಕೆ ವಿಶ್ವಾಸಮತ ಸಾಬೀತುವೇಳೆ ಎನ್‌ಡಿಎಗೆ ಬೆಂಬಲ ನೀಡಿಲಲ್ಲ. ಕೇವಲ ಒಂದು ಮತದ ಅಂತರದಲ್ಲಿ ಬಿಜೆಪಿ ಸರಕಾರ ಉರುಳಿತು. ಬಳಿಕ ರಾಷ್ಟ್ರಪತಿಗಳು ಎರಡನೇ ಅತಿದೊಡ್ಡ ಪಕ್ಷ ವಾಗಿದ್ದ ಕಾಂಗ್ರೆಸ್‌ಗೆ ಸರಕಾರ ರಚಿಸಲು ಆಹ್ವಾನ ನೀಡಿದರು. ಆದರೆ, ಕಾಂಗ್ರೆಸ್‌ ಮಾತ್ರ ತನ್ನಿಂದ ಸರಕಾರ ರಚನೆ ಸಾಧ್ಯವಿಲ್ಲ ಎಂದು ಹೇಳಿದ್ದರಿಂದ, ಅವರು ಸಂಸತ್ತನ್ನು ವಿಸರ್ಜಿಸಿದರು. 1998ರ ಚುನಾವಣೆಯಲ್ಲಿ ಒಟ್ಟು 60,58,80,192 ಮತದಾರರಿದ್ದರು. ಈ ಪೈಕಿ 37,54,41,739 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಅಂದರೆ ಒಟ್ಟು ಮತದಾನ ಪ್ರಮಾಣ ಶೇ.62ರಷ್ಟಿತ್ತು. ಒಟ್ಟು 178 ರಾಜಕೀಯ ಪಕ್ಷ ಗಳು ಈ ಚುನಾವಣೆಯಲ್ಲಿ ಭಾಗವಹಿಸಿದ್ದವು. 13 ದಿನ ಮತ್ತು 13 ತಿಂಗಳ ಪ್ರಧಾನಿಯಾಗಿದ್ದ ವಾಜಪೇಯಿ ಅವರು ವಿಶಿಷ್ಟ ದಾಖಲೆ ಮಾಡಿದರು.
- ತಿಪ್ಪಾರ

ಈ ಲೇಖನ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ.

ಸೋಮವಾರ, ಮಾರ್ಚ್ 11, 2019

ನಿಮಗೆ ಕಿಡಲ್ ಗೊತ್ತಾ?, ಮಕ್ಕಳಿಗೋಸ್ಕರವೇ ಇರುವ ಸರ್ಚ್‌ ಎಂಜಿನ್‌

ಗೂಗಲ್‌ ಸರ್ಚ್‌ ಎಂಜಿನ್‌ ಜಗತ್ತಿನ ಎಲ್ಲ ಮಾಹಿತಿಯನ್ನು ಕ್ಷ ಣ ಮಾತ್ರದಲ್ಲಿ ನಿಮ್ಮ ಮುಂದೆ ಹರವಿ ಇಡುತ್ತದೆ. ಅದರಲ್ಲಿ ಬೇಕಾದದ್ದು, ಬೇಡವಾದದ್ದೂ ಎಲ್ಲವೂ ಇರುತ್ತದೆ. ನಮ್ಮ ಆದ್ಯತೆಗನುಗುಣವಾಗಿ ನಾವೇ ಹೆಕ್ಕಿಕೊಳ್ಳಬೇಕಷ್ಟೆ. ಆದರೆ, ಮಕ್ಕಳ ವಿಷಯಕ್ಕೆ ಬಂದಾಗ ನಾವು ಬಹಳಷ್ಟು ಹುಷಾರ್‌ ಆಗಿರಬೇಕಾಗುತ್ತದೆ. ಎಲ್ಲವನ್ನೂ ಮುಚ್ಚು ಮರೆಯಿಲ್ಲದೇ ನೀಡುವ ಗೂಗಲ್‌ ಸರ್ಚ್‌ ಎಂಜಿನ್‌ ಬಳಕೆಯನ್ನು ನಿಧಾನಗೊಳಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೋಸ್ಕರವೇ 'ಕಿಡಲ್‌ ಸರ್ಚ್‌ ಎಂಜಿನ್‌' ಇದೆ. ಅದನ್ನು ಬಳಸಲು ಮಕ್ಕಳಿಗೆ ಪ್ರೇರೇಪಿಸಬೇಕು. 


- ಮಲ್ಲಿಕಾರ್ಜುನ ತಿಪ್ಪಾರ 
ಈ ಇಂಟರ್ನೆಟ್‌ ಯುಗದಲ್ಲಿ ಎಲ್ಲವೂ ಮುಕ್ತ ಮುಕ್ತ. ಯಾವುದೇ ಮುಚ್ಚು ಮರೆಯಿಲ್ಲ. ನಮಗೆ ಬೇಕಾದ್ದು, ಬೇಡವಾದದ್ದು ಎಲ್ಲ ಮಾಹಿತಿಯೂ ನಮ್ಮ ಕಣ್ಣೆದುರಿಗೆ ಬಂದು ಬೀಳುತ್ತಿದೆ. ಕೈ ಬೆರಳಲ್ಲಿ ತುದಿಯಲ್ಲೇ ನಲಿದಾಡುತ್ತಿರುತ್ತದೆ. ಆದರೆ, ಹೀಗೆ ಯಾವುದೇ ಸೆನ್ಸಾರ್‌ ಇಲ್ಲದೇ ಬೇಕಾಬಿಟ್ಟಿಯಾಗಿ ದೊರೆಯುವ ಮಾಹಿತಿ ನಮ್ಮ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲದು ಎಂಬುದು ಯೋಚಿಸಿದರೆ ಆತಂಕವಾಗುತ್ತದೆ. ಹಾಗಾಗಿಯೇ, ಮಕ್ಕಳಿಗೋಸ್ಕರವೇ ಗೂಗಲ್‌ ಕಂಪನಿಯು ಕಿಡಲ್‌ ಸರ್ಚ್‌ ಎಂಜಿನ್‌ ಆರಂಭಿಸಿದೆ. ಆದರೆ, ಬಹಳಷ್ಟು ಜನರಿಗೆ ಈ ಬಗ್ಗೆ ಜ್ಞಾನವಿಲ್ಲ. ಸಾಮಾನ್ಯವಾಗಿ ಗೂಗಲ್‌ ಸರ್ಚ್‌ ಎಂಜಿನ್‌ನಲ್ಲಿ ಯಾವುದೇ ಮಿತಿ ಇಲ್ಲ. ಅಲ್ಲಿ ದೊರೆಯುವ ಕಂಟೆಂಟ್‌ ಅನೇಕ ಬಾರಿ ಮಕ್ಕಳಿಗೆ ಬೇಡವಾದದ್ದೇ ಇರುತ್ತದೆ. ಅಂಥದ್ದೆಲ್ಲ ಅವರ ಕಣ್ಣಿಗೆ ಬಿದ್ದರೆ, ಇಲ್ಲವೇ ಅದರ ಗೀಳಿಗೆ ಮಕ್ಕಳು ಅಂಟಿಕೊಂಡು ಬಿಟ್ಟರೆ ಅದರಿಂದಾಗುವ ದುಷ್ಪರಿಣಾಮವನ್ನು ಊಹಿಸುವುದು ಕಷ್ಟ. ಮಕ್ಕಳ ಬೆಳವಣಿಗೆ ಮೇಲೆ ನಕಾರತ್ಮಕ ಪರಿಣಾಮ ಬೀರುವ ಸಾಧ್ಯತೆಗಳೇ ಹೆಚ್ಚು. ಶಿಕ್ಷ ಣ ವ್ಯವಸ್ಥೆಯು ಹೆಚ್ಚೆಚ್ಚು ತಂತ್ರಜ್ಞಾನಸ್ನೇಹಿಯಾಗುತ್ತ ಮುಂದುವರಿಯುತ್ತಿರುವುದರಿಂದ ಮಕ್ಕಳ ಹಂತದಲ್ಲೇ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌, ಇಂಟರ್ನೆಟ್‌ ಬಳಕೆ ಅನಿವಾರ್ಯವಾಗಿದೆ. ಶಾಲಾ ಕಾಲೇಜು ಮಕ್ಕಳು ಪ್ರಾಜೆಕ್ಟ್ಗಳನ್ನು ಮಾಡಬೇಕಾಗುತ್ತದೆ. ಅವರು ತಮ್ಮ ಪ್ರಾಜೆಕ್ಟ್ಗಳನ್ನು ಪೂರೈಸಲು ಮತ್ತೆ ಮೊರೆ ಹೋಗುವುದು ಈ ಗೂಗಲ್ಲನ್ನೇ. ಹಾಗಾಗಿ, ಮಕ್ಕಳ ಸೇಫ್‌ ಸರ್ಚ್‌ ಎಂಜಿನ್‌ ಆಗಿ ಕಿಡಲ್‌ ಅನ್ನು ರೂಪಿಸಲಾಗಿದೆ. 

2014ರಲ್ಲಿ ಆರಂಭ 

ಮಕ್ಕಳಿಗೋಸ್ಕರವೇ ಮೀಸಲಾಗಿರುವ ಈ ಡೊಮೈನ್‌ ಅನ್ನು 2014ರಲ್ಲಿ ನೋಂದಣಿ ಮಾಡಲಾಯಿತು. ಕಿಡಲ್‌ ಸರ್ಚ್‌ ಎಂಜಿನ್‌, ಗೂಗಲ್‌ ಕಸ್ಟಮ್‌ ಸರ್ಚ್‌ ಎಂಜಿನ್‌ ವಿಂಡೋ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಬಳಕೆದಾರರು ತಮಗೆ ಬೇಕಿದ್ದ ಮಾಹಿತಿ ಬಗ್ಗೆ ಕೀ ವರ್ಡ್‌ ಹಾಕಿದಾಗ, ಸರ್ಚ್‌ ರಿಸಲ್ಟ್‌ಗಳನ್ನು ತೋರಿಸುತ್ತದೆ. ಮೊದಲ ಮೂರು ರಿಸಲ್ಟ್‌ಗಳು ಸುರಕ್ಷಿತವಾಗಿದ್ದು ಮತ್ತು ಮಕ್ಕಳಿಗೋಸ್ಕರವೇ ಇರುವ ಮಾಹಿತಿಯಾಗಿರುತ್ತದೆ. ಕಿಡಲ್‌ ಎಡಿಟರ್‌ಗಳಿಂದ ದೃಢೀಕರಣಗೊಂಡಿರುತ್ತದೆÜ. ಮುಂದಿನ ನಾಲ್ಕು ಪೇಜ್‌ಗಳ ಬಗ್ಗೆ ಮಕ್ಕಳಿಗೋಸ್ಕರವೇ ಎಂಬ ಕಡ್ಡಾಯವಿರುವುದಿಲ್ಲ ಬದಲು ಮಕ್ಕಳ ಸ್ನೇಹಿಯಾಗಿರುತ್ತವೆ. 8 ಮತ್ತು ಅದರಿಂದಾಚೆಯ ಎಲ್ಲ ರಿಸಲ್ಟ್‌ಗಳು ವಯಸ್ಕರಿಗೆ ಅರ್ಥವಾಗುವಂಥವುಗಳಾಗಿರುತ್ತವೆ. ಮಕ್ಕಳು ಇವುಗಳನ್ನು ಅರಿತು ಮಾಡಿಕೊಳ್ಳುವುದು ಕಷ್ಟ. ಹೀಗೆ ಕಾಣಿಸಿಕೊಳ್ಳುವ ಎಲ್ಲ ರಿಸಲ್ಟ್‌ಗಳು ಗೂಗಲ್‌ನ ಸೇಫ್‌ಸರ್ಚ್‌ ಮೂಲಕ ಜರಡಿಗೊಳಗಾಗಿರುತ್ತವೆ. ಒಂದೊಮ್ಮೆ ಬಳಕೆದಾರರು ಕೆಟ್ಟ ಪದಗಳನ್ನು ಸರ್ಚ್‌ ಮಾಡಿದರೂ ಅದರ ರಿಸಲ್ಟ್‌ ದೊರೆಯುವುದಿಲ್ಲ. ಮತ್ತೊಮ್ಮೆ ಪ್ರಯತ್ನಿಸಿ ಎಂಬ ಸಂದೇಶ ಡಿಸ್‌ಪ್ಲೇ ಆಗುತ್ತದೆ. 

ಕೆಪಿಡಿಯಾ 

ಸರ್ಚ್‌ ಎಂಜಿನ್‌ ಒದಗಿಸುವ ಆನ್‌ಲೈನ್‌ ವಿಶ್ವಕೋಶವನ್ನು ಕಿಡಲ್‌ ವಿಶ್ವಕೋಶ(ಕೆಪಿಡಿಯಾ) ಎಂದು ಕರೆಯಲಾಗುತ್ತದೆ. ಅದರಲ್ಲಿ 700,000ಕ್ಕೂ ಹೆಚ್ಚು ಆರ್ಟಿಕಲ್‌ಗಳಿವೆ. ಮಕ್ಕಳಿಗಾಗಿಯೇ ಮರುಸೃಷ್ಟಿಸಲಾದ ವಿಕಿಪಿಡಿಯಾ ಲೇಖನಗಳನ್ನು ಇದು ಒಳಗೊಂಡಿರುತ್ತದೆ. 

ಕೆಪಿಡಿಯಾ

ಗೇ, ಲೆಸ್ಬಿಯನ್‌, ಸೆಕ್ಸ್‌ ಎಜುಕೇಷನ್‌ನಂಥ ಶಬ್ದಗಳನ್ನು ನಿಷೇಧಿಸಿದ್ದರಿಂದ 2016ರಲ್ಲಿ ಕಿಡಲ್‌ ಭಾರೀ ಟಿಕೆಯನ್ನು ಎದುರಿಸಬೇಕಾಯಿತು. ಜತೆಗೆ ಟ್ರಾನ್ಸ್‌ಜೆಂಡರ್‌, ಬೈಸೆಕ್ಸುವಲ್‌ ಪದಗಳನ್ನು ಬ್ಲಾಕ್‌ ಮಾಡಲಾಗಿತ್ತು. ಆದರೆ, ವಿರೋಧ ಹೆಚ್ಚಾಗುತ್ತಿದ್ದಂತೆ ಈ ಪದಗಳನ್ನು ಅನ್‌ಬ್ಲಾಕ್‌ ಮಾಡುವುದಾಗಿ ಕಿಡಲ್‌ ಪ್ರಕಟಣೆ ನೀಡಿತು. 

ಸುರಕ್ಷಿತ ಸರ್ಚ್‌ 

ಕಿಡಲ್‌ನಲ್ಲಿ ಕಾಣಿಸಿಕೊಳ್ಳುವ ಸರ್ಚ್‌ ರಿಸಲ್ಟ್‌ಗಳು ಫ್ಯಾಮಿಲಿ ಫ್ರೆಂಡ್ಲಿಯಾಗಿರುತ್ತವೆ. ಸೈಟ್‌ಗಳಿಗೆ ಜರಡಿ ಹಿಡಿದು ಮಕ್ಕಳಿಗೆ ಯೋಗ್ಯವಾದ ಸೈಟ್‌ಗಳನ್ನು ಮಾತ್ರ ಪ್ರದರ್ಶಿಸಲಾಗುತ್ತದೆ. 

ಬೃಹತ್‌ ಥಂಬ್‌ನೇಲ್ಸ್‌ 

ಕಿಡಲ್‌ನ ಬಹುತೇಕ ಸರ್ಚ್‌ ರಿಸಲ್ಟ್‌ಗಳು ಬೃಹತ್‌ ಥಂಬ್‌ನೇಲ್ಸ್‌ಗಳನ್ನು ಹೊಂದಿರುವಂತೆ ವಿನ್ಯಾಸ ಮಾಡಲಾಗಿದೆ. ಇದರಿಂದ ರಿಸಲ್ಟ್‌ಗಳನ್ನು ಸುಲಭವಾಗಿ ಶೋಧಿಸಲು ಮತ್ತು ಅವುಗಳ ನಡುವಿನ ವ್ಯತ್ಯಾಸವನ್ನು ಅರಿಯಲು ಮಕ್ಕಳಿಗೆ ಸಾಧ್ಯವಾಗುತ್ತದೆ. ಜತೆಗೆ ಅಗತ್ಯವಿರುವ ಹೆಚ್ಚು ಸೂಕ್ತವಾದ ರಿಸಲ್ಟ್‌ಗಳ ಮೇಲೆ ಕ್ಲಿಕ್‌ ಮಾಡಲು ಅನುವು ಮಾಡಿಕೊಡುತ್ತದೆ. ಥಂಬ್‌ನೇಲ್ಸ್‌ಗಳು ಚಿತ್ರಿಕೆ ಸುಳಿವುಗಳಾಗಿ ಕಾರ್ಯನಿರ್ವಹಿಸುವುದರಿಂದ ಮಕ್ಕಳಿಗೆ ಬೇಗ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಯಾಕೆಂದರೆ, ದೊಡ್ಡವರಂತೆ ಮಕ್ಕಳಿಗೆ ವೇಗವಾಗಿ ಓದಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿರುವುದಿಲ್ಲ. 

- ಮಕ್ಕಳಿಗೆ ಓದಲು ಸುಲಭವಾಗುವ ದೃಷ್ಟಿಯಿಂದ ಬೃಹತ್‌ ಏರಿಯಲ್‌ ಫಾಂಟ್‌ಗಳನ್ನು ಕಿಡಲ್‌ ಬಳಸುತ್ತದೆ. ಹಾಗಾಗಿ, ರಿಸಲ್ಟ್‌ಗಳಲ್ಲಿ ಇರುವ ಕಂಟೆಂಟ್‌ ಬೇಗ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. 

 ಖಾಸಗಿತನ 
ಕಿಡಲ್‌ ಯಾವುದೇ ರೀತಿಯಲ್ಲಿ ಬಳಕೆದಾರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಮತ್ತು ಪ್ರತಿ 24 ಗಂಟೆಗೊಮ್ಮೆ ಲಾಗ್‌ಗಳನ್ನು ಡಿಲಿಟ್‌ ಮಾಡಲಾಗುತ್ತದೆ. 



ಕಿಡಲ್ ಸರ್ಚ್ ಎಂಜಿನ್ ವೆಬ್ ವಿಳಾಸ- ಕ್ಲಿಕ್ ಮಾಡಿ.
 ​https://www.kiddle.co

ಈ ಲೇಖನವು ವಿಜಯ ಕರ್ನಾಟಕದ 11-2-19ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಇಲ್ಲೂ ಕ್ಲಿಕ್ ಮಾಡಿ

ಭಾನುವಾರ, ಮಾರ್ಚ್ 10, 2019

ಪ್ರಧಾನಿ ಹುದ್ದೆಗೇರಿದ ದಕ್ಷಿಣ ಭಾರತದ ಮೊದಲ ನಾಯಕ ಪಿ ವಿ ನರಹಸಿಂಹ ರಾವ್

ಸ್ವಲ್ಪ ಅವಧಿಗೆ ಅಧಿಕಾರ ವಂಚಿತವಾಗಿದ್ದ ಕಾಂಗ್ರೆಸ್‌ 1991ರ ಚುನಾವಣೆಯ ಮೂಲಕ ಮತ್ತೆ ಆಡಳಿತಕ್ಕೆ ಬಂತಾದರೂ ಈ ಮೊದಲಿದ್ದ ಧಾಡಸಿತನ ಇರಲಿಲ್ಲ. ಈ ಹಿಂದಿನ ಬಹುತೇಕ ಚುನಾವಣೆಗಳಲ್ಲಿ ರಾಜನ ಗತ್ತಿನಲ್ಲಿದ್ದ ಕಾಂಗ್ರೆಸ್‌ಗೆ ಇದೀಗ ಮೈತ್ರಿಯ ಆಸರೆ ಬೇಕಿತ್ತು. ಬಹುಶಃ ಈ ಚುನಾವಣೆಯಿಂದಲೇ, ನಿಜಾರ್ಥದ ಮೈತ್ರಿಕೂಟದ ರಾಜಕಾರಣದ ಶೆಕೆ ಆರಂಭವಾಯಿತು ಎನ್ನಬಹುದು. ಈ ಹಿಂದೆಯೂ ಕೂಟಗಳು ರಚನೆಯಾಗಿದ್ದವು. ಆದರೆ, ಅವು ಅನಿವಾರ್ಯತೆಗಳಾಗಿರಲಿಲ್ಲ. ಇನ್ನು ಚುನಾವಣೆಯ ಫಲಿತಾಂಶಕ್ಕೆ ಬಂದರೆ, ಕಾಂಗ್ರೆಸ್‌ 545 ಸ್ಥಾನಗಳ ಪೈಕಿ 244 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತು. ಬಿಜೆಪಿ ಇದೇ ಮೊದಲ ಬಾರಿಗೆ ಮೂರಂಕಿ ದಾಟಿ, ಒಟ್ಟು 120 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಕಾಂಗ್ರೆಸ್‌ ಶೇ.36.4ರಷ್ಟು ಮತ ಗಳಿಸಿದರೆ, ಬಿಜೆಪಿ ಮತ ಪ್ರಮಾಣ ಶೇ.20ರಷ್ಟಿತ್ತು. ಬಿಜೆಪಿ ನಂತರದ ಸ್ಥಾನದಲ್ಲಿ ಜನತಾದಳ(ನ್ಯಾಷನಲ್‌ ಫ್ರಂಟ್‌) 69, ಎಡಪಕ್ಷ ಗಳು 49 ಕ್ಷೇತ್ರಗಳಲ್ಲಿ ಜಯ ಕಂಡವು. 'ಮಂಡಲ್‌-ಮಂದಿರ' ವಿಷಯಗಳು ಚುನಾವಣಾ ವಸ್ತುಗಳಾದವು. ಜತೆಗೆ ಮತಗಳು ಕೂಡ ಧ್ರುವೀಕರಣಗೊಂಡವು. ವಿಶೇಷ ಎಂದರೆ, ಗಾಂಧಿ ಕುಟುಂಬದ ಹೊರತಾದ ಪ್ರಧಾನಿಯನ್ನು ಕಾಣಲು ಸಾಧ್ಯವಾಯಿತು. ಆಂಧ್ರ ಮೂಲದ ಪಿ.ವಿ.ನರಸಿಂಹ ರಾವ್‌ ಅವರು ಪ್ರಧಾನಿಯಾದರು. ನರಸಿಂಹ ರಾವ್‌ ಅವರ ಆಡಳಿತದಲ್ಲಿ ಎರಡು ಪ್ರಮುಖ ಘಟನೆಗಳು ಸಂಭವಿಸಿದವು. ಮೊದಲನೆಯದಾಗಿ, ಭಾರತದ ಆರ್ಥಿಕ ವ್ಯವಸ್ಥೆಯನ್ನು ಉದಾರೀಕರಣಕ್ಕೆ ಮುಕ್ತ ಮಾಡಿದ್ದು. ಎರಡನೆಯದ್ದು, 1992ರ ಡಿಸೆಂಬರ್‌ನಲ್ಲಿ ಸಂಭವಿಸಿದ ಬಾಬರಿ ಮಸೀದಿ ಧ್ವಂಸ ಪ್ರಕರಣ. ಈ ಪೈಕಿ, ಮೊದಲನೆಯದ್ದು ಬೆಳವಣಿಗೆ ದೇಶದ ಆರ್ಥಿಕತೆ ಸದೃಢಗೊಳ್ಳಲು ಕಾರಣವಾಯಿತು. ಎರಡನೆಯ ಘಟನೆಯು ಇನ್ನೂ ತನ್ನ ವಿವಾದದ ಕಿಡಿಯನ್ನು ಹೊತ್ತಿಸಿಕೊಂಡೇ ಇದೆ. ಹಾಗೆಯೇ, ಈ ಬೆಳವಣಿಗೆ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಮತ್ತಷ್ಟು ಲಾಭ ಮಾಡಿಕೊಟ್ಟಿತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮತ್ತೊಂದು ಗಮನಿಸಲೇಬೇಕಾದ ಸಂಗತಿ ಎಂದರೆ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು ಚುನಾವಣಾ ಪ್ರಚಾರಕ್ಕಾಗಿ ತಮಿಳುನಾಡು ಶ್ರಿಪೆರಂಬದೂರಿಗೆ ಹೋದಾಗ ಎಲ್‌ಟಿಟಿಇ ಮಾನವ ಬಾಂಬ್‌ ಸ್ಫೋಟಕ್ಕೆ ಬಲಿಯಾದರು. ಇಡೀ ಜಗತ್ತಿನಲ್ಲೇ ಮಾನವ ಬಾಂಬ್‌ ಪ್ರಯೋಗವಾದದ್ದು ಇದೇ ಮೊದಲು.

ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ.

ಜನಪ್ರಿಯ ರಾಜಕಾರಣದ ಎಐಎಡಿಎಂಕೆ

ದೇಶದ ಪ್ರಬಲ ಪ್ರಾದೇಶಿಕ ಪಕ್ಷ ಗಳ ಪೈಕಿ ಆಲ್‌ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಕೂಡ ಒಂದು. ಸದ್ಯ ತಮಿಳುನಾಡುರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಎಐಎಡಿಎಂಕೆ, ಪುದುಚೆರಿಯಲ್ಲೂ ತನ್ನ ಪ್ರಭಾವ ಹೊಂದಿದೆ. ತಮಿಳುನಾಡಿನ ಜನಪ್ರಿಯ ನಟ ಮತ್ತು ರಾಜಕಾರಣಿ ಎಂ.ಜಿ.ರಾಮಚಂದ್ರನ್‌ ಅವರು ಈ ಪಕ್ಷ ವನ್ನು ಸ್ಥಾಪಿಸಿದರು. ಡಿಎಂಕೆಯಿಂದಲೇ ರಾಜಕಾರಣ ಆರಂಭಿಸಿದ್ದ ಎಂಜಿಆರ್‌, 1972ರಲ್ಲಿ ಅದರಿಂದ ಹೊರ ಬಂದು ಎಐಎಡಿಎಂಕೆ ಸ್ಥಾಪಿಸಿದರು. 1997ರ ತಮಿಳುನಾಡು ವಿಧಾಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಅಧಿಕಾರಕ್ಕೆ ಬಂತು. ಎಂಜಿಆರ್‌ ಮುಖ್ಯಮಂತ್ರಿಯಾದರು. 1987ರವರೆಗೂ ಅಂದರೆ, ತಮ್ಮ ಸಾವಿನವರೆಗೂ ಎಂಜಿಆರ್‌ ಮುಖ್ಯಮಂತ್ರಿಯಾಗಿದ್ದರು. ಅವರ ನಿಧನ ಬಳಿಕ ನಾಯಕತ್ವಕ್ಕೆ ಸಂಬಂಧಿಸಿದಂತೆ ಎಂಜಿಆರ್‌ ಪತ್ನಿ ಜಾನಕಿ ರಾಮಚಂದ್ರನ್‌ ಮತ್ತು ಜಯಲಲಿತಾ ಮಧ್ಯೆ ಸಂಘರ್ಷವೇ ನಡೆಯಿತು. ಜಾನಕಿ ರಾಮಚಂದ್ರನ್‌ ಅವರಿಗೆ 98 ಶಾಸಕರು ಬೆಂಬಲ ನೀಡಿದ್ದರಿಂದ ಕೇವಲ 24 ದಿನಗಳ ಮಟ್ಟಿಗೆ ಅವರು ಸಿಎಂ ಆದರು. ವಿಧಾನಸಭೆ ಅಮಾನತ್ತಿನಲ್ಲಿಡಲಾಯಿತು. ಬಳಿಕ ನಡೆದ ಚುನಾವಣೆಯಲ್ಲಿ ಜಾನಕಿ ಹಾಗೂ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಎರಡೂ ಗುಂಪುಗಳು ಹೀನಾಯವಾಗಿ ಸೋತವು. ಡಿಎಂಕೆ ಅಧಿಕಾರಕ್ಕೆ ಬಂತು. ಈ ಸೋಲಿನ ಬಳಿಕ ಜಯಲಲಿತಾ ನೇತೃತ್ವದಲ್ಲಿ ಎಐಎಡಿಎಂಕೆ ಮತ್ತೆ ಒಂದಾಯಿತು. 1991ರ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆಗೂಡಿ ವಿಧಾನಸಭೆಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟ ಜಯಲಲಿತಾ ಮುಖ್ಯಮಂತ್ರಿಯಾದರು. ಇಲ್ಲಿಂದ ಜಯಾ ರಾಜಕಾರಣ ಪರ್ವ ಶುರುವಾಯಿತು. ಮುಂದೆ 1998ರ ಲೋಕಸಭೆ ಚುನಾವಣೆ ಹೊತ್ತಿಗೆ ಜಯಲಲಿತಾ ಬಿಜೆಪಿ, ಎಂಡಿಎಂಕೆ ಜತೆ ಮೈತ್ರಿಕೂಟ ರಚಿಸಿಕೊಂಡರು. ಕೇಂದ್ರದಲ್ಲಿ ವಾಜಪೇಯಿ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆದು ಸರಕಾರ ಪತನಕ್ಕೆ ಕಾರಣರಾದರು. ಜಯಲಲಿತಾ ಅವರು 1991- 1996, 2001, 2002- 2006, 2011- 2014, 2015ಧಿ-2016 ಅವಧಿಯಲ್ಲಿ ಮುಖ್ಯಯಂತ್ರಿಯಾಗಿದ್ದರು. ಎಂಜಿಆರ್‌ ಬಳಿಕ ಪಕ್ಷ ಕ್ಕೆ ಜಯಲಲಿತಾ ಅವರು ಗಟ್ಟಿ ನಾಯಕತ್ವ ಒದಗಿಸಿದ್ದರು. ಆದರೆ, ಜಯಾ ಸಾವಿನ ಬಳಿಕ ಮತ್ತೆ ನಾಯಕತ್ವದ ಕಿತ್ತಾಟ ಶುರವಾಗಿದೆ. ಎಂಜಿಆರ್‌ ಮತ್ತು ಜಯಲಲಿತಾ ಇಬ್ಬರೂ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಪ್ರಸಿದ್ಧ ಪಡೆದರು. ಪ್ರಸಕ್ತ ಲೋಕಸಭೆ ಚುನಾವಣೆಯನ್ನು ಎಐಎಡಿಎಂಕೆಯು ಬಿಜೆಪಿ ಜತೆಗೂಡಿ ಎದುರಿಸುತ್ತಿದೆ. 

ಸರಕಾರ ರಚಿಸಿದ ಮೊದಲ ಪ್ರಾದೇಶಿಕ ಪಕ್ಷ ಡಿಎಂಕೆ

ಪ್ರಾದೇಶಿಕ ಪಕ್ಷ ಗಳು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬಹುದು ಎಂಬುದನ್ನು ದ್ರಾವಿಡ್‌ ಮುನ್ನೇತ್ರ ಕಳಗಂ(ಡಿಎಂಕೆ) ತೋರಿಸಿಕೊಟ್ಟಿತ್ತು. ಪ್ರಾದೇಶಿಕ ಪಕ್ಷ ಗಳ ಪೈಕಿ ತುಂಬ ಹಳೆಯದಾದ ಡಿಎಂಕೆ, ನಮ್ಮ ರಾಜ್ಯದ ನೆರೆಯ ತಮಿಳುನಾಡು ಮತ್ತು ಪುದುಚೆರಿಯಲ್ಲಿ ತನ್ನ ಪ್ರಾಬಲ್ಯ ಹೊಂದಿದೆ. ತಮಿಳುನಾಡಿನಲ್ಲಿ ಸದ್ಯ ಪ್ರತಿಪಕ್ಷ ಸ್ಥಾನದಲ್ಲಿದೆ. ಈ ಪಕ್ಷ ದ ಜನಪ್ರಿಯ ನಾಯಕರೆಂದರೆ, ಸಿ.ಎನ್‌.ಅಣ್ಣಾದೊರೈ, ಎಂ. ಕರುಣಾನಿಧಿ, ಎಂಜಿಆರ್‌(ಪಕ್ಷ ತೊರೆದು ತಮ್ಮದೇ ಆದ ಎಐಡಿಎಂಕೆ ಸ್ಥಾಪಿಸಿದರು), ಎಂ.ಕೆ.ಸ್ಟಾಲಿನ್‌, ಕನ್ನಿಮೋಳಿ... ಮುಂತಾದವರು. ಕರುಣಾನಿಧಿ ಅವರು ಐದು ಬಾರಿಗೆ ತಮಿಳುನಾಡು ಮುಖ್ಯಂತ್ರಿಯಾಗಿದ್ದರು. ಅಲ್ಲದೆ, 1969ರಿಂದ ಅವರು ತಮ್ಮ ಸಾವಿನ ದಿನವರೆಗೂ ಅಂದರೆ 2018ರ ಅಗಸ್ಟ್‌ 7ರವರೆಗೂ ಡಿಎಂಕೆಯ ನೇತೃತ್ವ ವಹಿಸಿದ್ದರು. ಕಾಂಗ್ರೆಸ್‌ ಹೊರತುಪಡಿಸಿ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷ ವೊಂದು ಸ್ವಂತ ಸರಕಾರ ರಚಿಸಬಹುದು ಎಂಬುದನ್ನು ಡಿಎಂಕೆಸಾಧಿಸಿ ತೋರಿಸಿತು. ಇದು ಮುಂದೆ ಬಹಳಷ್ಟು ಪ್ರಾದೇಶಿಕ ಪಕ್ಷ ಗಳಿಗೆ ದಾರಿ ಮಾಡಿಕೊಟ್ಟಿತ್ತು. ಡಿಎಂಕೆಯ ಮೂಲ ಜಸ್ಟೀಸ್‌ ಪಾರ್ಟಿಯಲ್ಲಿದೆ. ಕಾಂಗ್ರೆಸ್‌ನಲ್ಲಿದ್ದ ಪೆರಿಯಾರ್‌ ಇ.ವಿ.ರಾಮಸ್ವಾಮಿ ಅವರು ಜಸ್ಟೀಸ್‌ ಪಾರ್ಟಿಯನ್ನು 1935ರಲ್ಲಿ ಸೇರಿದರು. ಬಳಿಕ ದ್ರಾವಿಡರ್‌ ಕಳಗಂ ಸ್ಥಾಪಿಸಿ, ದ್ರಾವಿಡರಿಗೆ ಪ್ರತ್ಯೇಕ ರಾಷ್ಟ್ರ ಬೇಡಿಕೆ ಹಾಗೂ ಹಿಂದಿ ವಿರೋಧಿ ಪ್ರಮುಖ ಅದರ ಪ್ರಮುಖ ನೀತಿಗಳಾಗಿದ್ದವು. ಆದರೆ, ನಂತರದ ದಿನಗಳಲ್ಲಿ ಪ್ರತ್ಯೇಕ ರಾಷ್ಟ್ರ ಹೋರಾಟ ಕೈಬಿಡಲಾಯಿತು. ಈ ಸೈದ್ಧಾಂತಿಕ ವಿಚಾರಧಾರೆಯು ಡಿಎಂಕೆಗೂ ಹರಿದು ಬಂತು. ಆಗ ರಾಮಸ್ವಾಮಿ ಅವರಿಗೆ ಹೆಗಲು ನೀಡಿದ್ದ ಅಣ್ಣಾದೊರೈ ಅವರು ದ್ರಾವಿಡರ್‌ ಕಳಗಂನಿಂದ ಹೊರಬಂದು ಡಿಎಂಕೆ ಸ್ಥಾಪಿಸಿದರು. ನಂತರ ಅಣ್ಣಾದೊರೈ ಜತೆಯಾಗಿ ಹೆಜ್ಜೆ ಹಾಕಿದವರು ಕರುಣಾನಿಧಿ ಅವರು. ಸದ್ಯ ಡಿಎಂಕೆ ನಾಯಕತ್ವವನ್ನು ಅವರ ಪುತ್ರ ಎಂ.ಕೆ. ಸ್ಟಾಲಿನ್‌ ವಹಿಸಿದ್ದಾರೆ. ಪ್ರಾದೇಶಿಕತೆ, ಹಿಂದಿ ಹೇರಿಕೆ ವಿರೋಧಿ ನೀತಿ, ಸಾಮಾಜಿಕ ಪ್ರಜಾಪ್ರಭುತ್ವ ನೀತಿಯನ್ನು ಡಿಎಂಕೆ ಅಳವಡಿಸಿಕೊಂಡಿದೆ. ಜನಪ್ರಿಯ ನಾಯಕ ಎಂಜಿಆರ್‌ ಕೂಡ ಡಿಎಂಕೆ ಭಾರಿ ಬಲ ತುಂಬಿದ್ದರು. ಆದರೆ, ಅವರು ಭಿನ್ನಾಭಿಪ್ರಾಯದಿಂದಾಗಿ ಡಿಎಂಕೆಯಿಂದ ಹೊರ ನಡೆದು, ತಮ್ಮದೇ ಆದ ಎಐಡಿಎಂಕೆ ಸ್ಥಾಪಿಸಿದರು. ಮುಂದೆ ತಮಿಳುನಾಡಲ್ಲಿ ಡಿಎಂಕೆ ಮತ್ತು ಎಐಡಿಎಂಕೆ ನಡುವಿನ ಹೋರಾಟವೇ ರಾಜಕಾರಣವಾಯಿತು. ಸದ್ಯ ಡಿಎಂಕೆ ಯುಪಿಎ ಭಾಗವಾಗಿದೆ.