ಭಾನುವಾರ, ಮೇ 24, 2015

ಮತ್ತೆ ಕೇಳಿದ ಸ್ಕಾಟ್ಲೆಂಡ್ ಜನಮತ ಗಣನೆ ಕೂಗು

ಸ್ಕಾಟ್ಲೆಂಡ್‌ನಲ್ಲಿ ಮತ್ತೊಮ್ಮೆ ಜನಮತಗಣನೆ ನಡೆಯಲಿದೆಯಾ?
ಇತ್ತೀಚೆಗೆ ನಡೆದ ಸಾರ್ವತ್ರಿಕ ಬ್ರಿಟನ್ ಚುನಾವಣೆಯ ಫಲಿತಾಂಶ
ಗಮನಿಸಿದರೆ ಇಂಥದೊಂದು ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಸ್ಕಾಟಿಷ್
ನ್ಯಾಷನಲಿಸ್ಟ್ ಪಾರ್ಟಿ(ಎಸ್‌ಎನ್‌ಪಿ) ಸ್ಕಾಟ್ಲೆಂಡ್‌ನ ೫೯ ಸ್ಥಾನಗಳ ಪೈಕಿ ೫೬
ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದು, ಈ ಅನುಮಾನಕ್ಕೆ ಕಾರಣ.
‘ಸದ್ಯಕ್ಕೆ ತಮಗೆ ಸಿಕ್ಕಿರುವ ಈ ಜಯ ಸ್ಕಾಟ್ಲೆಂಡ್‌ನ ಸ್ವಾತಂತ್ರ್ಯಕ್ಕೆ ದೊರೆತ
ಜನಾದೇಶವಲ್ಲ. ಆದರೆ, ವೆಸ್ಟ್‌ಮಿನಿಸ್ಟರ್ ಸ್ಕಾಟ್ಲೆಂಡ್‌ನ ಕೂಗನ್ನು
ಹಿಂದೆಂದಿಗಿಂತಲೂ ಅತ್ಯಂತ ಪರಿಣಾಮಕಾರಿಯಾಗಿ ಕೇಳಿಸಿಕೊಳ್ಳಬೇಕಾದ
ಅನಿವಾರ್ಯತೆ ಸೃಷ್ಟಿಸಿದೆ’ ಎಂದು ಎಸ್‌ಎನ್‌ಪಿ ನಾಯಕಿ ನಿಕೋಲ್
ಸ್ಟುರ್ಜೋನ್ ಹೇಳಿರುವುದು ಅನೇಕ ರಾಜಕೀಯ ಲೆಕ್ಕಾಚಾರಗಳಿಗೆ ದಾರಿ
ಮಾಡಿ ಕೊಟ್ಟಿದೆ. ಇದೇ ಮಾತನ್ನು ಎರಡನೇ ಬಾರಿ ಅಧಿಕಾರಕ್ಕೇರಿರುವ
ಪ್ರಧಾನಿ ಡೇವಿಡ್ ಕೆಮರಾನ್ ಕೂಡಾ ಪುಷ್ಠೀಕರಿಸುತ್ತಾರೆ. ಮತ್ತೆ ಅವರ
ಮುಂದಿರುವ ತಕ್ಷಣದ ಸವಾಲು ಕೂಡಾ ಸ್ಕಾಟ್ಲೆಂಡ್‌ಗೆ ಹಸ್ತಾಂತರಿಸಬೇಕಾಗಿರುವ
ಅಧಿಕಾರಗಳ ಪರಾಮರ್ಶೆಯೂ ಹೌದು.
ಈ ಇಬ್ಬರು ನಾಯಕರ ಸದ್ಯದ ಮನಸ್ಥಿತಿಗೆ ಅನುಗುಣವಾಗಿ
ಹೇಳುವುದಾದರೆ, ಇಂಗ್ಲೆಂಡ್ ಒಕ್ಕೂಟದಿಂದ ಸ್ಕಾಟ್ಲೆಂಡ್ ಸಿಡಿದು ಹೋಗುವ
ಯತ್ನ ಸದ್ಯಕ್ಕೆ ಘಟಿಸದಿರಬಹುದು. ಆದರೆ, ಅಂಥದೊಂದು ಸಾಧ್ಯತೆಯನ್ನಂತೂ
ಖಡಾಖಂಡಿತವಾಗಿ ತಳ್ಳಿ ಹಾಕುವಂತಿಲ್ಲ. ಇದಕ್ಕಾಗಿ ಬಹಳ ದಿನಗಳವರೆಗೂ
ಕಾಯಬೇಕಿಲ್ಲ. ಯಾಕೆಂದರೆ, ಮುಂದಿನ ವರ್ಷ ಅಂದರೆ, ೨೦೧೬ರ ಮೇ
ತಿಂಗಳಲ್ಲಿ ಸ್ಕಾಟ್ಲೆಂಡ್ ಸಂಸತ್ತಿಗೆ ಚುನಾವಣೆ ನಡೆಯಲಿದೆ. ಆಗ
ಖಂಡಿತವಾಗಿಯೂ ಎಸ್‌ಎನ್‌ಪಿ ಜನಮತ ಗಣನೆಯನ್ನು ತನ್ನ ಪ್ರಣಾಳಿಕೆಯಲ್ಲಿ
ಸೇರಿಸಿ, ಚುನಾವಣಾ ಅಖಾಡಕ್ಕಿಳಿಯುವುದು ಈಗಾಗಲೇ ಜನಜನಿತ.
ಹಾಗಾಗಿ, ಅಬ್ಬಾಬ್ಬ ಅಂದರೆ ಇನ್ನೊಂದು ವರ್ಷದ ಮಟ್ಟಿಗೆ ಸ್ಕಾಟ್ಲೆಂಡ್
ಸ್ವತಂತ್ರವಾಗುವ ಪ್ರಯತ್ನ ಮುಂದಕ್ಕೆ ಹೋಗಬಹುದು. ಈ ಅವಧಿಯಲ್ಲಿ
ಕೆಮರಾನ್ ನೇತೃತ್ವದ ಹೊಸ ಸರ್ಕಾರ ಯಾವ ರೀತಿ ಮತ್ತು ಹೇಗೆ ಸ್ಕಾಟ್ಲೆಂಡ್
ಸಮಸ್ಯೆಯನ್ನು ನಿರ್ವಹಿಸುತ್ತದೆ ಎಂಬುದರ ಮೇಲೆ ‘ಜನಮತಗಣನೆ’
ಹಣೆಬರಹ ನಿಂತಿದೆ.
ಇನ್ನೂ ವಿವರವಾಗಿ ನೋಡುವು ದಾದರೆ, ಬ್ರಿಟನ್ ಚುನಾವಣೆ ಫಲಿತಾಂಶ
ಪ್ರಕಟವಾಗುತ್ತಿದ್ದಂತೆ ಇಂಗ್ಲೆಂಡ್‌ನ ಬಹುತೇಕ ಪತ್ರಿಕೆಗಳು ತಮ್ಮ
ಸಂಪಾದಕೀಯನ್ನು ಒಂದೇ ಧ್ವನಿಯಲ್ಲಿ ಕೇಂದ್ರೀಕರಿಸಿದ್ದವು. ಡೇವಿಡ್
ಕೆಮರಾನ್ ಅಖಂಡ ಇಂಗ್ಲೆಂಡ್‌ನ ಕೊನೆಯ ಪ್ರಮುಖ ನಾಯಕರಾಗಲಿದ್ದಾರೆ
ಎಂಬ ಅಂಶವದು. ಅಂದರೆ, ಈಗಾಗಲೇ ಅಲ್ಲಿ ಅಂಥದೊಂದು ಮೂಡ್
ಸೃಷ್ಟಿಯಾಗಿರುವುದು ಸತ್ಯ. ಯಾಕೆಂದರೆ, ಎಸ್‌ಎನ್‌ಪಿ ನಾಯಕಿ ನಿಕೋಲ್ ಅವರು,
ಈಗ ದೊರೆತಿರುವ ಜಯ ಸ್ವಾತಂತ್ರ್ಯಕ್ಕೆ ಸಿಕ್ಕ ಆದೇಶವಲ್ಲ ಎನ್ನಬಹುದು. ಆದರೆ,
ವಾಸ್ತವದಲ್ಲಿ ಸ್ಕಾಟ್ಲೆಂಡ್ ಪೂರ್ತಿ, ವ್ಯಾಪಕವಾದ ಬೆಂಬಲ ದೊರೆತಿರುವುದು
ಪ್ರತ್ಯೇಕ ವಾಗಬೇಕೆಂಬ ದ್ಯೋತಕದ ಪ್ರಕ್ರಿಯೆಯ ಒಂದು ಭಾಗವಾಗಿ.
ಹಾಗೆಯೇ, ಕಳೆದ ಬಾರಿ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆ ಸಿದ್ದ ಕೆಮರಾನ್‌ಗೆ
ಈ ಬಾರಿ ಸ್ಕಾಟ್ಲೆಂಡ್ ಹೊರತುಪಡಿಸಿ, ಇಡೀ ಬ್ರಿಟನ್ ಹಾಗೂ ಇಂಗ್ಲೆಂಡ್
ನಲ್ಲಿ ಅಭೂತಪೂರ್ವ ಜಯ ಸಿಕ್ಕಿದ್ದು, ಇಂಗ್ಲೆಂಡ್‌ನಿಂದ ಸ್ಕಾಟ್ಲೆಂಡ್ ಸಿಡಿದು
ಹೋಗದಂತೆ ನೋಡಿಕೊಳ್ಳುವುದು ಹಾಗೂ ಐರೋಪ್ಯ ಒಕ್ಕೂಟದಿಂದ ಹೊರ
ಬನ್ನಿ ಎಂಬ ಸಂದೇಶದ ಭಾಗವಾಗಿ. ಆದರೆ, ಕೆಮರಾನ್ ಅಧಿಕಾರಾವಧಿಯಲ್ಲೇ
ಬ್ರಿಟನ್ ಛಿದ್ರವಾಯಿತು ಮತ್ತು ಐರೋಪ್ಯ ಒಕ್ಕೂಟದಿಂದ ಹೊರ ಬಿತ್ತು
ಎಂಬ ಅಪವಾದ ಹೊತ್ತುಕೊಳ್ಳಲು ಸಿದಟಛಿರಿಲ್ಲ ಎಂಬುದನ್ನು ಪೀಟರ್ ರೆಡೆಲ್
‘ಟೆಲಿಗ್ರಾಫ್’ಗೆ ಬರೆದ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ. ಹೀಗೆ, ಈ ಸಾರ್ವತ್ರಿಕ
ಚುನಾವಣೆ ಫಲಿತಾಂಶ ಮುಂಬರುವ ದಿನಗಳಲ್ಲಿ ಅನೇಕ ಹಾಗೂ ನಾನಾ
ಆಯಾಮಗಳನ್ನು ಒಳಗೊಂಡಿರುವ ಸಾಧ್ಯತೆಗಳನ್ನು ತೆರೆದಿಟ್ಟಿದೆ.
ಡೇವಿಡ್ ಕೆಮರಾನ್ ಮುಂದಿರುವ ಮೊದಲ ಸವಾಲು ಎಂದರೆ,
ಸ್ಕಾಟ್ಲೆಂಡ್‌ಗೆ ಆರ್ಥಿಕ ಸ್ವಾಯತ್ತೆಯನ್ನು ಕಲ್ಪಿಸುವುದು. ಇದಕ್ಕೆ ಸಂಬಂಧಿಸಿದ
ಕಾಯ್ದೆ ಈಗಾಗಲೇ ಕರಡು ರೂಪದಲ್ಲಿದೆ. ಅದನ್ನು ಯಾವ ರೀತಿಯ
ಕಾಯ್ದೆಯಾಗಿ ಮಾರ್ಪಡಿಸಿ ಅನುಷ್ಠಾನಗೊಳಿಸುತ್ತಾರೆ ಎಂಬುದರ ಮೇಲೆ
ಅವರ ಜಾಣ್ಮೆ ನಿಂತಿದೆ. ಯಾಕೆಂದರೆ, ಸ್ಕಾಟಿಷ್ ಸರ್ಕಾರಕ್ಕೆ ತೆರಿಗೆ ಸಂಗ್ರಹ
ವಿಷಯದಲ್ಲಿ ಹೆಚ್ಚಿನ ಅಧಿಕಾರವನ್ನು ಕೊಟ್ಟು, ಆ ಮೂಲಕ ಆರ್ಥಿಕ
ಸ್ವಾಯತ್ತೆಯನ್ನು ಕಲ್ಪಿಸಬೇಕಿದೆ. ಹಾಗಾಗಿಯೇ ಅವರು, ‘ಅಧಿಕಾರ
ಹಸ್ತಾಂತರಕ್ಕೊಳಗಾದ ಜಗತ್ತಿನಲ್ಲೇ ಅತ್ಯಂತ ಪ್ರಬಲವಾದ ಸರ್ಕಾರವನ್ನು
ಸೃಷ್ಟಿಸಲಾಗುವುದು’ ಎಂಬ ಕೆಮರಾನ್ ಹೇಳಿಕೆಯಲ್ಲಿ ಅನೇಕ ಅರ್ಥಗಳ
ಹೊಳವುಗಳಿವೆ. ಆದರೆ, ಎಸ್‌ಎನ್‌ಪಿ ಮಾತ್ರ ಇದಕ್ಕೆ ವಿರೋಧ
ವ್ಯಕ್ತಪಡಿಸಿದಂತೆ ಕಾಣುತ್ತಿದೆ. ಈ ಬಿಲ್ ಹುಟ್ಟಿಗೆ ಕಾರಣವಾಗಿದ್ದು ಸ್ಮಿತ್
ಕಮಿಷನ್. ಆದರೆ, ಸ್ಕಾಟ್ಲೆಂಡ್ ಆಶೋತ್ತರಗಳನ್ನು ಈಡೇರಿಸುವಲ್ಲಿ ಇದು
ಅಷ್ಟೊಂದು ಯಶಸ್ಸು ಕಾಣದು. ತೆರಿಗೆಗಳ ಮೇಲೆ ಸಂಪೂರ್ಣ ಹಿಡಿತ
ಹೊಂದಿರುವ ಪೂರ್ಣ ಪ್ರಮಾಣ ಆರ್ಥಿಕ ಸ್ವಾಯತ್ತೆಯನ್ನು ಕಲ್ಪಿಸುವಂಥ
ವಾತಾವರಣ ನಿರ್ಮಾಣವಾಗಬೇಕು ಎಂಬುದು ಎಸ್‌ಎನ್‌ಪಿಯ ವಾದ.
ಲೇಬರ್ ಪಾರ್ಟಿ ಸೋತಿರುವುದು ಕೂಡ ಎಸ್‌ಎನ್‌ಪಿ ಮೂಲ ಉದ್ದೇಶಕ್ಕೆ
ಕೊಡಲಿ ಪೆಟ್ಟು ಬಿದ್ದಿದೆ. ಹಾಗಾಗಿ, ಕನ್ಸರ್ವೇಟಿವ್ ಜತೆ ಜತೆಗೂಡಿ
ಸಾಗಬೇಕಾಗಿರುವ ಅನಿವಾರ್ಯತೆ ಎಸ್‌ಎನ್‌ಪಿಗೆ ಎದುರಾಗಿದೆ.
ಹಾಗಾಗಿಯೇ, ನಿಕೋಲ್ ಸ್ಟುರ್ಜೋನ್ ಅವರು, ಈಗ ಸಿಕ್ಕಿರುವ ಜಯ
ಸ್ವಾತಂತ್ರ್ಯದ ಜನಾದೇಶವಲ್ಲ ಎಂದು ಹೇಳುತ್ತಿರುವುದು. ಆದರೆ, ಎಸ್‌ಎನ್
ಪಿಯ ಹಿಂದಿನ ಮುಖ್ಯಸ್ಥ ಅಲೆಕ್ಸ್ ಸಾಲ್ಮಂಡ್ ಮಾತ್ರ ನನ್ನ ಜೀವಿತಾವಧಿಯಲ್ಲಿ
ಸ್ಕಾಟ್ಲೆಂಡ್ ಸಂಪೂರ್ಣ ಸ್ವತಂತ್ರವಾಗುವುದನ್ನು ಕಾಣುತ್ತೇನೆ ಎಂದಿದ್ದಾರೆ.
ಅಂದರೆ, ಎಸ್‌ಎನ್‌ಪಿಯು ಸ್ಕಾಟ್ಲೆಂಡ್ ಸ್ವತಂತ್ರಗೊಳಿಸುವ ಪ್ರಯತ್ನವನ್ನು
ಕೈಬಿಡುವ ಸಾಧ್ಯತೆಯೇ ಇಲ್ಲ ಎಂದು ಇದರಿಂದ ವೇದ್ಯವಾಗುತ್ತದೆ.

ಸ್ಕಾಟ್ಲೆಂಡ್ ಸಿಡಿದು ಹೋಗುತ್ತಿರುವುದೇಕೆ?
ಬಹುತೇಕವಾಗಿ ಆರ್ಥಿಕ ಅಸಮಾನತೆಯೇ ಇದಕ್ಕೆಲ್ಲ ಕಾರಣ. ಇಂಗ್ಲೆಂಡ್
ಸರ್ಕಾರದ ಜತೆಗಿನ ಆರ್ಥಿಕ ವ್ಯವಹಾರಗಳ ಸಮನ್ವಯತೆ ಕೊರತೆ, ತೆರಿಗೆ
ಸುಧಾರಣೆಗಳು ಸೇರಿದಂತೆ ಅನೇಕ ಕಾರಣಗಳು ಇದಕ್ಕಿವೆ. ವಿಶೇಷವಾಗಿ ಕೃಷಿ,
ಗಡಿ ನಿಯಂತ್ರಣ ಮತ್ತು ವಲಸೆ, ಶಿಶು ಆರೋಗ್ಯ, ನಾಗರಿಕತ್ವ, ರಕ್ಷಣೆ, ನ್ಯಾಟೋ
ಸದಸ್ಯತ್ವ, ಬೇಹುಗಾರಿಕೆ, ಅಣ್ವಸಉಗಳು, ಆರ್ಥಿಕ ಸ್ಥಿತಿ-ಗತಿ, ಕರೆನ್ಸಿ, ಸರ್ಕಾರದ
ಆದಾಯ ಮತ್ತು ವೆಚ್ಚ, ಇಂಧನ, ಐರೋಪ್ಯ ಒಕ್ಕೂಟದ ಜತೆಗಿನ ಸಂಬಂಧ,
ಐರೋಪ್ಯ ಒಕ್ಕೂಟದಲ್ಲಿ ಇಂಗ್ಲೆಂಡ್‌ನ ಭವಿಷ್ಯ, ಆರೋಗ್ಯ, ಅಂತಾ ರಾಷ್ಟ್ರೀಯ
ಸಂಬಂಧಗಳು... ಹೀಗೆ ಹತ್ತುಹಲವು ಕಾರಣಗಳು ‘ಯೆಸ್ ಸ್ಕಾಟ್ಲೆಂಡ್’ ಕೂಗಿಗೆ
ಕಾರಣವಾಗಿವೆ. ‘ಯೆಸ್ ಸ್ಕಾಟ್ಲೆಂಡ್’ ಎನ್ನುವುದು ಸ್ಕಾಟ್ಲೆಂಡ್ ಸ್ವಾತಂತ್ರ್ಯಕ್ಕೆ
ಹುಟ್ಟಿಕೊಂಡ ಗುಂಪು. ಇದಕ್ಕೆ ವಿರೋಧವಾಗಿ ‘ಬೆಟರ್ ಟುಗೇದರ್’ ಎಂಬ
ಗುಂಪು ಇಂಗ್ಲೆಂಡ್ ಒಕ್ಕೂಟ ಬಲಪಡಿಸಲು ಪ್ರಯತ್ನಿಸುತ್ತಿದೆ.
೨೦೧೪ರ ಸೆಪ್ಟೆಂಬರ್ ೧೮ರಂದು ಸ್ಕಾಟಿಷ್ ಸ್ವಾತಂತ್ರ್ಯ ಜನಮತ ಗಣನೆ
ನಡೆಯಿತು. ಈ ಪ್ರಕ್ರಿಯೆಯಲ್ಲಿ ‘ಯೆಸ್ ಸ್ಕಾಟ್ಲೆಂಡ್’ ಆಂದೋಲನಕ್ಕೆ
ಸೋಲಾಯಿತು. ಜನಮನತ ಗಣನೆಯಲ್ಲಿ ಶೇ.೪೪.೭ರಷ್ಟು ಜನ ಸ್ಕಾಟ್ಲೆಂಡ್
ಬೇಕು ಎಂದರೆ, ಶೇ.೫೫.೩ರಷ್ಟು ಜನ ಬೇಡ ಎಂದು ತಮ್ಮ ಮುದ್ರೆ ಒತ್ತಿದರು.
ಈ ಜನಮತ ಗಣನೆಯಲ್ಲಿ ಒಟ್ಟು ಶೇ.೮೪.೬ರಷ್ಟು ಜನ ಪಾಲ್ಗೊಂಡಿದ್ದರು.
ಬ್ರಿಟನ್ ಮತ್ತು ಸ್ಕಾಟಿಷ್ ಸರ್ಕಾರದ ಒಪ್ಪಂದದಂತೆ ಛಿ ಖ್ಚಟಠಿಠಿಜಿ
ಐ್ಞಛಿಛ್ಞಿಛ್ಞ್ಚಿಛಿ ್ಕಛ್ಛಿಛ್ಟಿಛ್ಞಿಛ್ಠಞ ಆಜ್ಝ್ಝಿ
ಅನ್ನು ಸ್ಕಾಟಿಷ್ ಸಂಸತ್ತು ೨೦೧೩ರ
ನವೆಂಬರ್‌ನಲ್ಲಿ ಕಾಯ್ದೆಯಾಗಿ ಜಾರಿ ಮಾಡಿತ್ತು. ಬಳಿಕ ಜನಮತ ಗಣನೆ
ನಡೆಯಿತು.

ಒಂದು ಕಾಲದಲ್ಲಿ ‘ಸೂರ್ಯ ಮುಳುಗದ ಸಾಮ್ರಾಜ್ಯ’ವಾಗಿದ್ದ ಗ್ರೇಟ್
ಬ್ರಿಟನ್ ೨೧ನೇ ಶತಮಾನದಲ್ಲಿ ಛಿದ್ರವಾಗುವ ಹಾದಿಯಲ್ಲಿ ಸಾಗುತ್ತಿದೆ
ಎಂಬುದಂತೂ ಸತ್ಯ. ಸದ್ಯಕ್ಕೆ ಪ್ರಧಾನಿ ಡೇವಿಡ್ ಕೆಮರಾನ್ ಮುಂದೆ
ಸ್ಕಾಟ್ಲೆಂಡ್ ಜನಮತಗಣನೆ ಮತ್ತು ಐರೋಪ್ಯ ಒಕ್ಕೂಟ ಎಂಬ ಎರಡು
ಬೃಹತ್ ಸಮಸ್ಯೆಗಳಿವೆ. ಇವುಗಳನ್ನು ಕೆಮರಾನ್ ಹೇಗೆ ನಿಭಾಯಿಸುತ್ತಾರೆ
ಎಂಬುದರ ಮೇಲೆಯ ಇಡೀ ಬ್ರಿಟನ್‌ನ ಭವಿಷ್ಯ ನಿರ್ಧಾರವಾಗಲಿದೆ.
ಸ್ಕಾಟ್ಲೆಂಡ್ ಮತ್ತೊಂದು ಜನಮತಗಣನೆಗೆ ವೇದಿಕೆ ಸಿದಟಛಿಪಡಿಸಿಕೊಳ್ಳ
ಲಿದೆಯಾ? ಬ್ರಿಟನ್ ತನ್ನ ಐಕ್ಯತೆಯನ್ನು ಮುಂದುವರಿಸಿಕೊಂಡು
ಹೋಗಲಿದೆಯಾ? ಎಂಬುದನ್ನು ನೋಡಬೇಕಿದ್ದರೆ ಕನಿಷ್ಠ ಇನ್ನು ಒಂದು
ವರ್ಷವಾದರೂ ಕಾಯಲೇಬೇಕು. ಆದರೆ, ಈಗ ದೊರೆತಿರುವ
ಜನಾದೇಶವಂತೂ ಈ ಎಲ್ಲ ಅಂಶಗಳಿಗೆ ಒಂದು ದಿಕ್ಕನ್ನು ಮಾತ್ರ ಸೂಚಿಸಿದೆ.
ಆದರೆ, ಆ ದಿಕ್ಕು ಯಾವುದು ಎಂಬುದು ಮಾತ್ರ ಸದ್ಯಕ್ಕೆ ನಿಗೂಢ.

- ಮಲ್ಲಿಕಾರ್ಜುನ ತಿಪ್ಪಾರ

ಗುರುವಾರ, ಏಪ್ರಿಲ್ 9, 2015

ಇರಾನ್ ಅಣು ಒಪ್ಪಂದ ಕಸರತ್ತು, ಏನಿದರ ಹಕೀಕತ್ತು?

ಇರಾನ್‌ನ ೧೨ ವರ್ಷಗಳ ವನವಾಸ ಅಂತ್ಯವಾಗುವ ಕ್ಷಣಗಳು ಹತ್ತಿರವಾಗುತ್ತಿವೆ.
‘ಅಣು ಬಾಂಬ್’ಗಳನ್ನು ತಯಾರಿಸುತ್ತಿದೆ ಎಂಬ ಗುಮಾನಿಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಸಮುದಾಯ ಹೇರಿದ್ದ ಆರ್ಥಿಕ ದಿಗ್ಬಂಧನ ಹಿಂತೆಗೆಯುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಇದರ ಮೊದಲ ಹಂತವಾಗಿ ಇರಾನ್ ಮತ್ತು ‘ಪಿ೫ ಪ್ಲಸ್ ೧’(ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ರಷ್ಯಾ, ಚೀನಾ ಮತ್ತು ಜರ್ಮನಿ) ಜಾಗತಿಕ ಪ್ರಬಲ ರಾಷ್ಟ್ರಗಳ ನಾಯಕರ ನಡುವೆ ಇತ್ತೀಚೆಗೆ ನಡೆದ ‘ಇರಾನ್ ಅಣು ಒಪ್ಪಂದ’ ಮಾತುಕತೆ ಒಂದು ಹಂತಕ್ಕೆ ಬಂದು ನಿಂತಿದೆ. ‘ಇರಾನ್ ತನ್ನ ಅಣು ಚಟುವಟಿಕೆಗಳನ್ನು ಶಾಂತಿ ಉದ್ದೇಶಕ್ಕೆ ಸೀಮಿತಗೊಳಿಸುವುದು ಮತ್ತು ಅಂತಾರಾಷ್ಟ್ರೀಯ ಸಮುದಾಯ ಹೇರಿರುವ ಆರ್ಥಿಕ ದಿಗ್ಬಂಧನವನ್ನು ಹಿಂತೆಗೆದುಕೊಳ್ಳುವುದು ಈ ಉದ್ದೇಶಿತ ಮಾತುಕತೆಯ ಮುಖ್ಯ ಅಜೆಂಡಾ’. ಅಷ್ಟರಲ್ಲಾಗಲೇ ಈ ಪ್ರಕ್ರಿಯೆಯನ್ನು ‘ಐತಿಹಾಸಿಕ’ ಎಂದು ಅಮೆರಿಕ ಮತ್ತು ಇರಾನ್ ನಾಯಕರು ಬಣ್ಣಿಸಿದ್ದಾರೆ. ಈ ಪ್ರಕ್ರಿಯೆಗೆ ಅಂತಿಮವಾಗಿ, ಸುಸ್ಪಷ್ಟವಾದ ಮೂರ್ತರೂಪ ದೊರೆಯಲು ಜೂನ್ ೩೦ ಗಡವು. ಒಂದಿಷ್ಟು ಕೊರತೆಗಳು ಎರಡೂ ಕಡೆ ಇವೆ. ಆ ಓರೆಕೋರೆಗಳನ್ನು ತುಂಬಿಕೊಂಡು ಅಂತಿಮವಾಗಿ ಅಂಕಿತ ಬಿದ್ದರೆ ೧೯೭೯ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್, ಅಂತಾರಾಷ್ಟ್ರೀಯ ಸಮುದಾಯದ ಜತೆ ಸಾಧಿಸಿದ ಅತಿದೊಡ್ಡ, ಬಹು ಪ್ರಾಮುಖ್ಯವಾದ ಒಪ್ಪಂದಕ್ಕೆ ಸಾಕ್ಷಿಯಾಗಲಿದೆ.
೨೦೦೨ರಲ್ಲಿ ಇರಾನ್‌ನ ವಿಧ್ವಂಸಕ ಅಣು ಚಟುವಟಿಕೆಗಳು ಬಹಿರಂಗವಾಗುತ್ತಿದ್ದಂತೆ ವಿಶ್ವಸಂಸ್ಥೆ ಹಾಗೂ ಐರೋಪ್ಯ ಒಕ್ಕೂಟ ರಾಷ್ಟ್ರಗಳು ದಿಗ್ಬಂಧನವನ್ನು ಮತ್ತಷ್ಟು ವಿಸ್ತರಿಸಿದ್ದವು. ತನ್ನೆಲ್ಲ ಅಣು ಚಟುವಟಿಕೆಗಳು ಶಾಂತಿ ಉದ್ದೇಶಕ್ಕಾಗಿಯೇ ಇವೆ ಎಂದು ಇರಾನ್ ಅಲವತ್ತುಕೊಂಡಿತ್ತು. ಆದರೆ, ಅದನ್ನು ನಿರೂಪಿಸಲು ಸಾಧ್ಯವಾಗಿರಲಿಲ್ಲ. ಇದೀಗ ಅಂತಾರಾಷ್ಟ್ರೀಯ ಸಮುದಾಯಕ್ಕೂ ತಾನು ಶಾಂತಿಯುತ ರಾಷ್ಟ್ರ ಎಂಬುದನ್ನು ಇರಾನ್ ಮನವರಿಕೆ ಮಾಡುವ ನಿಟ್ಟಿನಲ್ಲಿ ಯಶ ಕಾಣುತ್ತಿದೆ. ಈ ಪ್ರಯತ್ನದಲ್ಲಿ ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವೇದ್ ಝರೀಫ್ ಅವರ ಕೊಡುಗೆ ಗಣನೀಯ. ಈ ಹಿನ್ನೆಲೆಯಲ್ಲಿ ಅವರು ಮಾತುಕತೆ ಮುಗಿಸಿಕೊಂಡು ಕಳೆದ ಶುಕ್ರವಾರ ಟೆಹ್ರಾನ್‌ನಲ್ಲಿ ಬಂದಿಳಿದಾಗ ಭವ್ಯ ಸ್ವಾಗತವೇ ದೊರೆತಿದೆ. ಇದರಿಂದಲೇ ಅಂದಾಜು ಮಾಡಬಹುದು. ಆರ್ಥಿಕ ದಿಗ್ಬಂಧನದಿಂದಾಗಿ ಇರಾನ್ ಎಂಥ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು ಎಂಬುದನ್ನು. ಇರಾನ್‌ನ ಅಧ್ಯಕ್ಷ ಹಸನ್ ರೌಹಾನಿ ಅವರು ೨೦೧೩ರಲ್ಲಿ ನಡೆದ ಚುನಾವಣೆಯಲ್ಲಿ ಜಗತ್ತಿನ ಇತರೆ ರಾಷ್ಟ್ರಗಳ ಜತೆ ಅಣು ಒಪ್ಪಂದವನ್ನು ಮುಂದು ಮಾಡಿಕೊಂಡು ಮತ ಕೇಳಿದ್ದರು. ಅದಕ್ಕಾಗೇ ಅಲ್ಲಿನ ಜನ ಅವರನ್ನು ಚುನಾಯಿಸಿ–ದ್ದರು. ಇದೀಗ ಅವರು ತಮ್ಮ ಭರವಸೆಯನ್ನು ಈಡೇರಿಸುವ ಹಂತಕ್ಕೆ ಬಂದು ಮುಟ್ಟಿದ್ದಾರೆ. ಅಲ್ಲದೆ, ತಮ್ಮ ದೇಶದ ‘ಮಾತುಕತೆಯ ತಂಡದ ಪ್ರಯತ್ನ’ವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಆದರೆ, ಈ ಒಪ್ಪಂದದ ಬಗ್ಗೆ ಇರಾನ್ ಪರಮೋಚ್ಚ ನಾಯಕ ಅಯಾತುಲ್ಲಾ ಅಲಿ ಖೋಮೇನಿಯಿಂದ ತಕ್ಷಣದ ಪ್ರಕ್ರಿಯೆ ಹೊರಬಿದ್ದಿಲ್ಲ!
ಇನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕೂಡ ಇದು ತಮ್ಮ ವಿದೇಶಾಂಗ ನೀತಿಗೆ ದೊರೆತ ಯಶಸ್ಸು ಎಂದು ಭಾವಿಸಿದ್ದಾರೆ. ಈ ಯಶಸ್ಸಿನ ಪಾಲನ್ನು ಅವರು ಕಾರ್ಯದರ್ಶಿ ಜಾನ್ ಕೆರ‌್ರಿ ಅವರಿಗೆ ಕೊಡಲೇಬೇಕು. ಇರಾನ್ ಜತೆಗಿನ ‘ಮುಳ್ಳಿನ ಸ್ನೇಹ’ವನ್ನು ನಾಜೂಕಾಗಿ ದೇಶದ ಒಳಗೂ ಮತ್ತು ಹೊರಗೂ ನಿಭಾಯಿಸಿದ್ದಾರೆ. ಈ ಎಲ್ಲದರ ಮಧ್ಯೆಯೂ ಒಬಾಮ, ಇನ್ನೂ ಕಾಂಗ್ರೆಸ್‌ಗೆ ಈ ಒಪ್ಪಂದ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ. ಅದರಲ್ಲಿ ಎಷ್ಟು ಸಫಲರಾಗುತ್ತಾರೋ?
ಇರಾನ್ ಜತೆಗಿನ ಅಂತಾರಾಷ್ಟ್ರೀಯ ಸಮುದಾಯ ಬಾಂಧವ್ಯ ಮರುಸ್ಥಾಪಿಸಿರುವುದನ್ನು ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಸ್ವಾಗತಿಸಿವೆ. ಆದರೆ, ಅಮೆರಿಕದ ಎರಡು ಪ್ರಮುಖ ಸ್ನೇಹಿತ ರಾಷ್ಟ್ರಗಳಾದ ಸೌದಿ ಅರೇಬಿಯಾ ಹಾಗೂ ಇಸ್ರೇಲ್ ಮಾತ್ರ ತೀವ್ರ ವಿರೋಧ ದಾಖಲಿಸಿವೆ. ಇರಾನ್ ಈಗ ಸಿಕ್ಕಿರುವ ಅವಕಾಶವನ್ನು ಸರಿಯಾದ ಹಾಗೂ ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ನಿಗದಿತ ಅವಧಿಯಲ್ಲೇ ಸೌದಿಗೆ ಸೆಡ್ಡು ಹೊಡೆಯುವ ಮಟ್ಟಿಗೆ ಆರ್ಥಿಕವಾಗಿ ಪ್ರಗತಿ ಕಾಣುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದಲೇ ಮಧ್ಯಪ್ರಾಚ್ಯ–ದಲ್ಲಿ ಇರಾನ್ ಆರ್ಥಿಕ
ವಾಗಿ ಬಲಾಢ್ಯ–ವಾಗುವುದನ್ನು ಸೌದಿ ಇಷ್ಟಪಡುವುದಿಲ್ಲ. ಹೀಗಿದ್ದಾಗ್ಯೂ, ಸೌದಿ ರಾಜನನ್ನು ಒಪ್ಪಿಸುವುದು ಅಮೆರಿಕದ ಅಧ್ಯಕ್ಷ ಬರಾಕ್‌ಗೆ ಕಷ್ಟವೇನಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಇನ್ನು ಇಸ್ರೇಲ್‌ಗಂತೂ ಇದು ನುಂಗಲಾರದ ತುತ್ತಾಗಿದೆ. ಆದರೆ, ಇಸ್ರೇಲ್ ಪ್ರಧಾನಿ ನೆತಾನ್ಯುಹು ಬಹಿರಂಗವಾಗಿಯೇ ವಿರೋಧಿಸಿದ್ದಾರೆ. ಅಷ್ಟೇ ಅಲ್ಲದೆ, ‘ಇಸ್ರೇಲ್ ಅಸ್ತಿತ್ವ’ವನ್ನು ಇರಾನ್ ಗೌರವಿಸಬೇಕು. ಇದೊಂದು ಗ್ರೇವ್‌ಯಾರ್ಡ್ ಒಪ್ಪಂದ ಎಂದು ಟೀಕಿಸಿದ್ದಾರೆ. ಇದೇ ವೇಳೆ, ಸೋಮವಾರ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ಸಂದರ್ಶನದಲ್ಲಿ ಇಸ್ರೇಲ್‌ನ ಆತಂಕವನ್ನು ದೂರ ಮಾಡುವ ಮಾತುಗಳನ್ನಾಡಿದ್ದಾರೆ ಒಬಾಮ.
=
ಈಗ ನಡೆದಿರುವ ಮಾತುಕತೆಯ ಒಟ್ಟು ಫಲಶ್ರುತಿ ಏನೆಂದರೆ, ಇರಾನ್ ತನ್ನೆಲ್ಲ ಅಣು ಚಟುವಟಿಕೆಗಳನ್ನು ಶಾಂತಿ ಉದ್ದೇಶಕ್ಕೆ ಮಾತ್ರ ಬಳಸುವುದು. ಒಟ್ಟು ಅಣು ಘಟಕಗಳ ಪೈಕಿ ಎರಡನ್ನು ಮಾತ್ರ ಸಂಶೋಧನಾ ಉದ್ದೇಶಕ್ಕೆ ಬಳಸುವುದು. ಬೃಹತ್ ರಿಯಾಕ್ಟರ್‌ಗಳನ್ನು ಮರು ವಿನ್ಯಾಸಗೊಳಿಸಿ, ಅಣು ಬಾಂಬ್‌ಗೆ ಬೇಕಾಗುವ ಪ್ಲುಟೋನಿಯಂ ಇಂಧನ ತಯಾರಿಕೆಯ ಸಾಮರ್ಥ್ಯವನ್ನು ನಿಸ್ತೇಜ–ಗೊಳಿ–ಸುವುದು. ಅಲ್ಲದೇ ಯುರೇನಿಯಂ ಸಂಸ್ಕರಣೆಯನ್ನು ೧೦,೦೦೦ ಕೆಜಿಯಿಂದ ೩೦೦ ಕೆಜಿಗೆ ಸೀಮಿತಗೊಳಿಸವುದು. ಹೀಗೆ ಮಾಡಿದಾಗ ಇರಾನ್ ಅಣುಬಾಂಬ್ ತಯಾರಿಸಲು ಸಾಧ್ಯವಾಗುವುದಿಲ್ಲ. ಹಾಗೊಂದು ವೇಳೆ, ಅಂತಾರಾಷ್ಟ್ರೀಯ ಸಮುದಾಯವನ್ನು ಕತ್ತಲ–ಲ್ಲಿಟ್ಟು ತಯಾರಿಕೆಗೆ ಮುಂದಾದರೆ, ಅದು ಒಂದು ವರ್ಷದೊಳಗೆ ಹೊರಜಗತ್ತಿಗೆ ಗೊತ್ತೇ ಆಗುತ್ತದೆ. ಇದಕ್ಕೆ ಪ್ರತಿಯಾಗಿ ಅಂತಾ–ರಾಷ್ಟ್ರೀಯ ಸಮುದಾಯ ಎಲ್ಲ ರೀತಿಯ ಆರ್ಥಿಕ ದಿಗ್ಬಂಧನವನ್ನು ಹಿಂತೆಗೆದುಕೊಂಡು ಮುಕ್ತ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡ–ಬೇಕು. ಇದಲ್ಲದೆ, ಆ ದೇಶ ಆರ್ಥಿಕ ಸ್ಥಿತಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು. ಇವೆಲ್ಲವೂ ಇನ್ನೂ ತೀರಾ ಪ್ರಾಥಮಿಕ ಹಂತದಲ್ಲಿವೆ. ಇದೆಲ್ಲದಕ್ಕೂ ಒಂದು ಸ್ಪಷ್ಟವಾದ ಕರಡು ರೂಪಿಸಲು ಜೂನ್ ೩೦ ಕೊನೆಯ ದಿನ. ಆ ಹೊತ್ತಿಗೆ, ಈಗ ಎದುರಾಗಿರುವ ಸೌದಿ ಅರೇಬಿಯಾ ಹಾಗೂ ಇಸ್ರೇಲ್‌ನ ಆತಂಕಗಳನ್ನು ಶಮನ ಮಾಡುವಂಥ ಒಂದಿಷ್ಟು ಉಪಕ್ರಮಗಳು ಕೂಡ ಅಂತಿಮ ಒಪ್ಪಂದದಲ್ಲಿ ಸೇರಿಕೊಳ್ಳುವುದನ್ನು ಅಲ್ಲಗಳೆಯಲಾಗದು.
=
ಇರಾನ್ ಜತೆಗಿನ ಉದ್ದೇಶಿತ ಅಣು ಒಪ್ಪಂದದಿಂದ ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರಗಳು ಖುಷಿಪಟ್ಟಿರಲಿಕ್ಕೂ ಸಾಕು. ಇರಾನ್ ಜಗತ್ತಿನ ಪ್ರಮುಖ ಕಚ್ಚಾ ತೈಲ ರಫ್ತು ಮಾಡುವ ರಾಷ್ಟ್ರ. ಇತ್ತೀಚಿನವರೆಗೂ ದಿಗ್ಬಂಧನ ಹೊರತಾಗಿಯೂ ಇರಾನ್ ಸ್ವಲ್ಪಮಟ್ಟಿಗೆ ಕಚ್ಚಾ ತೈಲ ರಫ್ತು ಮಾಡುತ್ತಿತ್ತು. ಅಲ್ಲದೆ, ಭಾರತವೇ ಅತಿ ದೊಡ್ಡ ಆಮದು ರಾಷ್ಟ್ರವಾಗಿತ್ತು ಇರಾನ್‌ಗೆ. ಇನ್ನು ದಿಗ್ಬಂಧನ ಇಲ್ಲ ಎಂದಾದರೆ ನೀವೇ ಊಹಿಸಿ! ಭಾರತದಲ್ಲಿ ಇನ್ನೊಂದು ವರ್ಷದಲ್ಲಿ ತೈಲೋತ್ಪನ್ನಗಳ ಬೆಲೆ ಯಾವ ಮಟ್ಟಕ್ಕೆ ಕೆಳಕ್ಕಿಳಿಯಬಹುದು ಎಂಬುದನ್ನು ಅಂದಾಜಿಸಿ.
ಹಾಗೆ ನೋಡಿದರೆ, ಇರಾನ್ ಯಾವತ್ತಿದ್ದರೂ ಭಾರತದ ‘ಸಹಜ ಸ್ನೇಹ’ ರಾಷ್ಟ್ರ. ೧೯೪೭ಕ್ಕಿಂತ ಮುಂಚೆ ಇರಾನ್ ಭಾರತದ ಗಡಿಯನ್ನು ಹಂಚಿಕೊಂಡಿತ್ತು. ಈ ಎರಡೂ ರಾಷ್ಟ್ರಗಳ ಬಾಂಧವ್ಯದ ಬೇರು ಹುಡುಕುತ್ತಾ ಹೊರಟರೆ ನಿಮಗೆ ನವಶೀಲಾಯುಗದವರೆಗೂ ಹಿಂದೆ ಸಾಗಬೇಕು. ಹಾಗಾಗಿಯೇ ಉತ್ತರ ಭಾರತ ಹಾಗೂ ಇರಾನ್‌ನ ಸಂಸ್ಕೃತಿ, ಜನಾಂಗ, ಭಾಷಾ ಲಕ್ಷಣಗಳಲ್ಲಿ ಇಂದಿಗೂ ಸಾಮ್ಯತೆ ಕಂಡು ಬರುತ್ತದೆ. ಇದು ಹಳೆ ಕಾಲದ ಮಾತಾಯಿತು ಬಿಡಿ. ಆಧುನಿಕ ದಿನಮಾನಗಳಲ್ಲಿ ಎಂದಿಗೂ ಇರಾನ್ ಭಾರತದ ಜತೆಗೆ ಇದೆ. ಸಂಕಷ್ಟದ ದಿನಗಳಲ್ಲಿ ಇರಾನ್ ಕೈ ಬಿಟ್ಟಿಲ್ಲ. ಅನೇಕ ಬಾರಿ ಅಂತಾರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ಭಾರತದ ಪರವಾಗಿಯೇ ತನ್ನ ಮತ ಚಲಾಯಿಸಿದೆ. ಇಷ್ಟೆಲ್ಲಾ ವಿವರಣೆ ಏಕೆಂದರೆ, ಇರಾನ್ ಅಂತಾರಾಷ್ಟ್ರೀಯ ಸಮುದಾಯ ಜತೆ ಸಾಧಿಸುತ್ತಿರುವ ಸಮನ್ವಯತೆಯಿಂದ ಅಗಾಧ ಲಾಭ ಭಾರತದ ಪರವಾಗಿಯೇ ಇರಲಿದೆ!
ಈಗಾಗಲೇ ಸೌದಿ ಅರೇಬಿಯಾ, ಅಮೆರಿಕ ಹಾಗೂ ರಷ್ಯಾಗಳ ನಡುವಿನ ರಾಜಕೀಯ ತಿಕ್ಕಾಟಕ್ಕಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಊಹೆಗೆ ಮೀರಿ ಪಾತಾಳ ಕಂಡಿದೆ. ಇದರ ಪರಿಣಾಮ ಭಾರತದಲ್ಲೀಗ ವಾರ ವಾರಕ್ಕೂ ತೈಲ ಬೆಲೆ ಪೈಸೆ ಲೆಕ್ಕದಲ್ಲಿ ಕಡಿಮೆಯಾಗುತ್ತಿದೆ. ಇನ್ನು ಇರಾನ್‌ನಿಂದ ಹೇರಳವಾಗಿ ಕಚ್ಚಾ ತೈಲ ಆಮದು ಮಾಡಿಕೊಳ್ಳುವಂತಾದರೆ, ಪೆಟ್ರೋಲ್, ಡಿಸೇಲ್ ಬೆಲೆ ಇನ್ನೂ ಯಾವ ಹಂತಕ್ಕೆ ಇಳಿಯಬಹುದು ಎಂದು ಯೋಚಿಸಿ. ಹಾಗೇನಾದರೂ ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆ–ಯಲ್ಲಿ ಭಾರತ ಈಗ ಪಡೆದುಕೊಳ್ಳುತ್ತಿರುವ ಪ್ರತಿ ಬ್ಯಾರೆಲ್‌ಗೆ ಇನ್ನೂ ೨ ಡಾಲರ್ ಕಡಿಮೆ ಹಣ ತೆತ್ತು ಖರೀದಿಸಬಹುದು.
ತೈಲ ಎಂಬ ಏಕೈಕ ಅಂಶವನ್ನು ಹೊರಗಿಟ್ಟು ನೋಡುವುದಾದರೆ, ಸಂಸ್ಕರಿತ ಡಿಸೇಲ್‌ನೊಂದಿಗೆ ಭಾರತದ ಜವಳಿ, ಬಾಸ್ಮತಿ ಅಕ್ಕಿ ಹೇರಳವಾಗಿ ರಫ್ತು ಮಾಡಬಹುದು. ಭಾರತೀಯ ಔಷಧ, ಕಾರು, ಮಾರ್ಜಕ ತಯಾರಿಕೆ ಕಂಪನಿಗಳು ದಾಂಗುಡಿ ಇಡಬಹುದು. ಇದೆಲ್ಲದರ ಒಟ್ಟಾರೆ ಪರಿಣಾಮ ಇರಾನ್ ಹಾಗೂ ಭಾರತದ ಮೇಲೆ ಸಕಾರಾತ್ಮಕವಾಗಿ ಬೀರಲಿದೆ.
ಇದು ಭಾರತದ ಮಟ್ಟಿಗಿನ ಲೆಕ್ಕಾಚಾರವಾದರೆ, ಅಂತಾರಾಷ್ಟ್ರೀಯ–ವಾಗಿಯೂ ವ್ಯಾಪಾರಿಕ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿವೆ. ಬಹುತೇಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ಚೇತರಿಕೆ ದೊರೆಯಲಿದೆ. ಈ ಕುರಿತು ಈಗಾಗಲೇ ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರ್ ಮಾರ್ಕ್ ಕಾರ್ನಿ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ. ‘ಇರಾನ್ ಜತೆಗಿನ ಉದ್ದೇಶಿತ ಒಪ್ಪಂದದಿಂದಾಗಿ ತೈಲ ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದ್ದು, ಇದು ಇಂಗ್ಲೆಂಡ್ ಹಾಗೂ ಜಾಗತಿಕ ಆರ್ಥಿಕತೆಗೆ ಹೊಸ ಭರವಸೆದಾಯಕ ಹಾದಿಯನ್ನು ತೋರಿಸಲಿದೆ’ ಎಂದಿದ್ದಾರೆ. ಈ ಮಾತು ನಿಜವಾಗಬೇಕಿದ್ದರೆ ಇನ್ನೂ ಹೆಚ್ಚು ಕಡಿಮೆ ಒಂದು ವರ್ಷ ಕಾಯಬೇಕು. ಆದರೆ, ಅವರ ಮಾತಿನಲ್ಲಿ ಉತ್ಪ್ರೇಕ್ಷೆ ಏನಿಲ್ಲ. ರಾಜಕೀಯ ಕಾರಣಕ್ಕಾಗಿ ಈಗ ಇಳಿಕೆಯಾಗಿರುವ ತೈಲ ಬೆಲೆ ಯಾವುದೇ ಸಮಯದಲ್ಲಿ ಅದೇ ಕಾರಣಕ್ಕಾಗಿ ಹೆಚ್ಚಳವಾಗುವ ಎಲ್ಲ ಅಪಾಯಗಳಿವೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಕಚ್ಚಾತೈಲದ ಗಣಿಯಾಗಿರುವ ಇರಾನ್ ತನ್ನ ಒಡಲಲ್ಲಿರುವ ಎಲ್ಲ ಎಣ್ಣೆಯನ್ನು ಮಾರುಕಟ್ಟೆಗೆ ಹರಿದು ಬಿಟ್ಟರೆ ಸಹಜವಾಗಿಯೇ ಒಂದಿಷ್ಟು ಚೇತರಿಕೆ ಕಂಡು ಕೊಳ್ಳಲು ಸಾಧ್ಯ. ಇದರಿಂದ ಭಾರತ ಕೂಡ ಹೊರತಾಗಿಲ್ಲ.

- ಮಲ್ಲಿಕಾರ್ಜುನ ತಿಪ್ಪಾರ


ಬುಧವಾರ, ಮಾರ್ಚ್ 25, 2015

ಮುಕ್ತ ಸ್ವಾತಂತ್ರ್ಯಕ್ಕೊದಗುತ್ತಿರುವ ಅಂತ್ಯ, ಅವಿಜಿತ್ ರಾಯ್ ಹತ್ಯೆ

ಇತ್ತೀಚೆಗೆ ಢಾಕಾದ ನಡುರಸ್ತೆಯಲ್ಲಿ ಕಗ್ಗೊಲೆಯಾದ, ಬಾಂಗ್ಲಾ ಮೂಲದ ಅಮೆರಿಕ ಬರಹಗಾರ ಅವಿಜಿತ್ ರಾಯ್ ಎಲ್ಲದರಲ್ಲೂ ‘ಮುಕ್ತ ಚಿಂತನೆ’ಯ ಪ್ರತಿಪಾದಕ. ಕೊಲೆ ಬೆದರಿಕೆ ಎದುರಿಸುತ್ತಿದ್ದ ರಾಯ್ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ‘ಮುಕ್ತ’ವಾಗಿ ತಮ್ಮ ವಿಚಾರಗಳನ್ನು ಪ್ರಚರುಪಡಿಸುತ್ತಿದ್ದರು. ಸ್ವತಃ ನಾಸ್ತಿಕರಾಗಿದ್ದ ರಾಯ್ ತಮ್ಮ ‘ಮುಕ್ತ-ಮೋನ’(ಫ್ರಿ ಮೈಂಡ್) ಬ್ಲಾಗ್ ಮೂಲಕ ಬಾಂಗ್ಲಾ ಯುವ ಜನತೆಯಲ್ಲಿ ವೈಚಾರಿಕತೆ, ಜಾತ್ಯತೀತ, ಎಲ್ಲವನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳುವ ಮನೋಭಾವನೆಯನ್ನು ಬಿತ್ತುತ್ತಿದ್ದರು. ಈ ಬ್ಲಾಗ್‌ನಲ್ಲಿ ಕೇವಲ ಬಾಂಗ್ಲಾದೇಶದ ವಿದ್ಯಮಾನಗಳು ಮಾತ್ರವಲ್ಲದೆ ದಕ್ಷಿಣ ಏಷ್ಯಾದ ಎಲ್ಲ ಬೆಳವಣಿಗೆಗಳು ಚರ್ಚೆಯಾಗುತ್ತಿದ್ದವು. ಅಲ್ಲದೆ, ಮುಕ್ತ ಚಿಂತನೆಗೆ ವೇದಿಕೆ ಕಲ್ಪಿಸಿಕೊಟ್ಟಿತ್ತು.
ಅಮೆರಿಕದ ಪ್ರಜೆಯಾಗಿದ್ದುಕೊಂಡು ತಮ್ಮ ತಾಯ್ನಾಡಿನ ಆಗು ಹೋಗುಗಳ ಬಗ್ಗೆ, ವಿಪರೀತವಾಗಿ ಬೆಳೆಯುತ್ತಿರುವ ಇಸ್ಲಾಮ್ ಮೂಲಭೂತವಾದತನದ ಬಗ್ಗೆ, ಧಾರ್ಮಿಕ ಅಸಹಿಷ್ಣು ಬಗ್ಗೆ, ಅವಕಾಶವಾದಿ ರಾಜಕಾರಣದ ಬಗ್ಗೆ ತುಂಬಾ ಮೊನಚಾಗಿ ತಮ್ಮ ಬ್ಲಾಗ್ ಹಾಗೂ ಅಂತಾರಾಷ್ಟ್ರೀಯ ನಾನಾ ಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸುತ್ತಿದ್ದರು ರಾಯ್. ಎಲ್ಲಕ್ಕಿಂತ ಹೆಚ್ಚಾಗಿ ಅವರ ಇತ್ತೀಚಿನ ಎರಡು ಕೃತಿಗಳಾದ ಒಬಿಶೊಹಶೇರ್ ದೊರ್ಶೂನ್(ದಿ ಫಿಲಾಸಫಿ ಆಫ್ ಡಿಸ್‌ಬಿಲಿಫ್), ಬಿಸ್ವಾಶೇರ್ ವೈರಸ್(ದಿ ವೈರಸ್ ಆಫ್ ಫೇಥ್) ಬಾಂಗ್ಲಾದೇಶದಲ್ಲಿ ಸಂಚಲವನ್ನೇ ಸೃಷ್ಟಿಸಿದ್ದವು. ಅಲ್ಲದೇ ಇದರಿಂದಾಗಿ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕೊಲೆ ಬೆದರಿಕೆಯನ್ನೂ ಎದುರಿಸಬೇಕಾಯಿತು. ರಾಯ್‌ಗೆ ಕಟ್ಟರ್‌ವಾದಿಯೊಬ್ಬ ಫೇಸ್‌ಬುಕ್‌ನಲ್ಲಿ ‘ಅವಿಜಿತ್ ರಾಯ್ ಕೊಲೆಯಾಗುವುದು ಖಚಿತ. ಆತ ಅಮೆರಿಕದಲ್ಲಿದ್ದಾನೆ. ಅದಕ್ಕೇ ಬದುಕಿದ್ದಾನೆ. ಬಾಂಗ್ಲಾಕ್ಕೆ ಬಂದರೆ ಆತ ಖಂಡಿತ ಕೊಲೆಯಾಗುತ್ತಾನೆ’ ಎಂದು ಬರೆದುಕೊಂಡಿದ್ದ. ಆದರೆ, ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಜಾಯಮಾನ ರಾಯ್‌ದ್ದಾಗಿರಲಿಲ್ಲ. ಅಂದ ಹಾಗೆ, ಅವಿಜಿತ್ ರಾಯ್ ಹಿಂದೂ. ಅವರ ತಂದೆ ಅಜೋಯ್ ರಾಯ್. ಢಾಕಾ ವಿವಿಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರು. ಅವಿಜಿತ್ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರು.
ರಾಯ್ ವ್ಯಕ್ತಿತ್ವ ಎಂಥದಿತ್ತು ಎಂಬುದನ್ನು ತಿಳಿದುಕೊಳ್ಳಲು ಅವರ ಇತ್ತೀಚಿನ ‘ದಿ ವೈರಸ್ ಆಫ್ ಫೇಥ್’ ಪುಸ್ತಕದಲ್ಲಿ ಬರೆದುಕೊಂಡಿದ್ದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. ‘ನಾವು ಮುಕ್ತವಾಗಿಯೇ ನಮ್ಮ ನಾಸ್ತಿಕತೆಯನ್ನು ಸಾರುತ್ತಿದ್ದೇವೆ. ಬಹುಶಃ ಇದು ಕೆಲವೊಂದಿಷ್ಟು ಉಗ್ರ ಪ್ರತಿಕ್ರಿಯೆಗೂ ಕಾರಣವಾಗಬಹುದು. ಆದರೆ, ಅದಕ್ಕಾಗಿ ನಾವು ಹೆದರಲಾರೆವು. ಭಾರತೀಯ ಉಪಖಂಡಕ್ಕೇ ವಿಶಿಷ್ಟವಾಗಿರುವ ಬೆಂಗಾಲಿ ಜಾತ್ಯತೀತ ಸಂಪ್ರದಾಯದ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ’. ಅಂದರೆ, ರಾಯ್ ಹಾಗೂ ಆತನ ಸಂಗಡಿಗರಲ್ಲಿ ಸ್ಪಷ್ಟವಾದ ಮತ್ತು ನಿಖರವಾದ ಗುರಿಯಿತ್ತು. ಬಾಂಗ್ಲಾದೇಶ ಇಂದು ಯಾವ ದಿಶೆಯಲ್ಲಿ ಸಾಗುತ್ತಿದೆಯೋ ಅದಕ್ಕೆ ತದ್ವಿರುದ್ಧವಾಗಿ ಅವರ ಆಲೋಚನೆಗಳು, ಕೃತಿಗಳಿದ್ದವು. ಹಾಗೆ ನೋಡಿದರೆ, ಪಶ್ಚಿಮ ಪಾಕಿಸ್ತಾನದಿಂದ ಬಾಂಗ್ಲಾದೇಶ ಸ್ವತಂತ್ರವಾದ ದೇಶವಾಗಿದ್ದು ಇದೇ ಕಾರಣಕ್ಕೆ. ತಮ್ಮ ತಾಯ್ನುಡಿಯಾದ ಬೆಂಗಾಲಿ ಮೇಲೆ ಪಶ್ಚಿಮ ಪಾಕಿಸ್ತಾನ ಉರ್ದು ಹೇರಲು ಹೊರಟಾಗ ಕ್ರಾಂತಿಯೇ ಸಂಭವಿಸಿತು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಅಂದು ಯಾವ ಕಾರಣಕ್ಕೆ ಕ್ರಾಂತಿ ಸಂಭವಿಸಿತ್ತೋ ಇಂದು ಅದೇ ತತ್ವ ಅಲ್ಲಿಲ್ಲ. ಆ ಜಾಗದಲ್ಲಿ ಇಸ್ಲಾಮ್ ಮೂಲಭೂತವಾದ ಅಟ್ಟಹಾಸಗೈಯುತ್ತಿದೆ. ಅಲೆಗಳ ವಿರುದ್ಧ ಈಜುವ ಪ್ರಯತ್ನ ಮಾಡುವ ರಾಯ್‌ರಂಥ ವ್ಯಕ್ತಿಗಳ ಹತ್ಯೆ ನಡೆಯುತ್ತಲೇ ಇರುತ್ತವೆ.
್ಝ
೨೦೧೫ ಫೆ.೨೬ರಂದು ಅವಿಜಿತ್ ರಾಯ್ ತಮ್ಮ ಪತ್ನಿ ರಫಿದಾ ಅಹ್ಮದ್ ಜತೆಗೂಡಿ ಢಾಕಾದಲ್ಲಿ ಆಯೋಜಿಸಲಾಗಿದ್ದ ಎಕುಶೇ ಪುಸ್ತಕ ಮೇಳಕ್ಕೆ ತೆರಳಿದ್ದರು. ಅಂದು ಸಂಜೆ ಮೇಳದಿಂದ ವಾಪಸ್ ತಮ್ಮ ಮನೆಗೆ ಸೈಕಲ್ ರಿಕ್ಷಾದಲ್ಲಿ ಬರುತ್ತಿದ್ದರು. ಢಾಕಾ ವಿವಿಯ ಟೀಚರ್ ಸ್ಟೂಡೆಂಟ್ ಸೆಂಟರ್ ಬಳಿ ಎದುರಾದ ಯಮದೂತರು, ದಂಪತಿಯನ್ನು ರಿಕ್ಷಾದಿಂದ ಎಳೆದು ರಸ್ತೆ ಮೇಲೆ ಎಸೆದರು. ಬಳಿಕ ನೋಡ ನೋಡುತ್ತಿದ್ದಂತೆ ತಮ್ಮಲ್ಲಿದ್ದ ಮಚ್ಚುಗಳಿಂದ ಮನ ಬಂದಂತೆ ಕತ್ತರಿಸಲಾರಂಭಿಸಿದರು! ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ರಾಯ್ ತಲೆಗೆ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರವನ್ನು ನುಗ್ಗಿಸಿದ್ದರು. ಜತೆಯಲ್ಲಿದ್ದ ಪತ್ನಿ ರಫಿದಾ ಅವರನ್ನೂ ದುಷ್ಟರು ಬಿಡಲಿಲ್ಲ. ಅವರ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಿದರು. ಇಷ್ಟೆಲ್ಲ ನಡೆಯುತ್ತಿದ್ದರೂ ಅಲ್ಲಿದ್ದ ಜನರು ಮಾತ್ರ ಸಮನೇ ನೋಡುತ್ತ ನಿಂತಿದ್ದರು ಎಂದರೆ ನಂಬಲೇಬೇಕು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ರಾಯ್ ಮತ್ತು ಅವರ ಪತ್ನಿ ರಫಿದಾ ಅವರನ್ನು ಢಾಕಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟೊತ್ತಿಗೆ ರಾಯ್ ಪ್ರಾಣಪಕ್ಷಿ ಹಾರಿ ಹೋಗಿತ್ತು. ತೀವ್ರ ಹಲ್ಲೆಗೊಳಗಾದ ಪತ್ನಿ ರಫಿದಾ ಮಾತ್ರ ಬದುಕುಳಿದರು.
ರಾಯ್ ಕಗ್ಗೊಲೆ ಸುದ್ದಿ ಗೊತ್ತಾಗುತ್ತಿದ್ದಂತೆ ರಾಯ್ ಅವರನ್ನು ಪ್ರೀತಿಸುವವರು, ವಿದ್ಯಾರ್ಥಿಗಳು, ಬ್ಲಾಗರ್ ಢಾಕಾ ವಿಶ್ವವಿದ್ಯಾಲಯದತ್ತ ಧಾವಿಸಿ, ಕೊಲೆಗಾರರನ್ನು ಬಂಧಿಸುವಂತೆ ಒತ್ತಾಯಿಸಿದರು. ಏತನ್ಮಧ್ಯೆ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ‘ಚಾರ್ಲಿ ಹೆಬ್ಡೋ’ ದಾಳಿಗೆ ಸಮೀಕರಿಸಿ ವರದಿಗಳು ಬರಲಾರಂಭಿಸಿದವು. ರಾಯ್ ಕಗ್ಗೊಲೆ ದೆಸೆಯಿಂದ ಅಂತಾರಾಷ್ಟ್ರೀಯ ಮಾಧ್ಯಮ, ಅಂತಾರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆ ಬಾಂಗ್ಲಾದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಹರಣವಾಗುತ್ತಿರುವ ಬಗ್ಗೆ ಕೂಗಲಾರಂಭಿಸದವು.
್ಝ
ರಾಯ್‌ನೊಬ್ಬನದ್ದೇ ಹತ್ಯೆಯೇ?
ಈ ವರೆಗೂ ರಾಯ್ ಮಾತ್ರ ಉಲ್ಬಣಗೊಳ್ಳುತ್ತಿರುವ ಉಗ್ರವಾದ, ಮೂಲಭೂತವಾದಕ್ಕೆ ಬಲಿಯಾಗಿದ್ದಾರಾ? ಖಂಡಿತ ಇಲ್ಲ. ಈ ಬಗ್ಗೆ ‘ಓಪನ್ ಡೆಮಾಕ್ರಸಿ’ ಜಾಲತಾಣಕ್ಕೆ ಮಾಹಿನ್ ಖಾನ್ ಬರೆದ ಲೇಖನ ಇನ್ನಷ್ಟು ಬೆಳಕು ಚೆಲ್ಲುತ್ತದೆ. ರಾಜಕೀಯ ಕಾರಣಕ್ಕೂ ಅನೇಕ ಹತ್ಯೆಗಳೂ ಬಾಂಗ್ಲಾದಲ್ಲಾಗುತ್ತಿವೆ. ೨೦೧೪ರಲ್ಲಿ ಅವಾಮಿ ಲೀಗ್ ಅಧಿಕಾರಕ್ಕೆ ಬಂದ ಮೇಲೆ ಇಂಥ ಕೊಲೆಗಳು, ಹಲ್ಲೆಗಳು ಸಾಕಷ್ಟು ನಡೆದಿವೆ. ನಿತ್ಯ ಪ್ರತಿಭಟನೆಗಳು, ಹರತಾಳಗಳು ಬಾಂಗ್ಲಾದೇಶವನ್ನು ಸ್ತಬ್ಧಗೊಳಿಸಿವೆ. ತೀರಾ ಅಲ್ಪ ಅವಧಿಯಲ್ಲೇ ಸರ್ಕಾರ ಕನಿಷ್ಠ ೨೦೦೦ ಜನರನ್ನು ಬಂಧಿಸಿದೆ. ಅವರಲ್ಲಿ ಬಹುತೇಕರು ಪ್ರತಿಪಕ್ಷದ ಕಾರ್ಯಕರ್ತರು. ಬಾಲಕ-ಬಾಲಕಿಯರೆನ್ನದೇ ಎಲ್ಲರನ್ನೂ ಬಂಧಿಸಲಾಗುತ್ತಿದೆ, ಹಿಂಸಿಸಲಾಗುತ್ತಿದೆ. ಇದಕ್ಕೆ ಉದಾಹರಣೆ ಎಂದರೆ, ಪ್ರತಿಪಕ್ಷದ ನಾಯಕರೊಬ್ಬರ ೧೫ ವರ್ಷದ ಪುತ್ರ ರಿಫ್ತಾ ಅಬ್ದುಲ್ ಖಾನ್‌ನನ್ನು ಬಂಧಿಸಿ, ಅತ್ಯಂತ ಕ್ರೂರವಾಗಿ ಹಿಂಸಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ೫೪ ಜನರನ್ನು ಕೊಲೆ ಮಾಡಲಾಗಿದೆ. ಇವರ ಪೈಕಿ ನಾಲ್ವರ ಶರೀರದಲ್ಲಂತೂ ೬೨ ಬುಲೆಟ್‌ಗಳು ಪತ್ತೆಯಾಗಿವೆ. ಇದೆಲ್ಲ ಏನು ತೋರಿಸುತ್ತದೆ ಎಂದು ಪ್ರಶ್ನಿಸುತ್ತಾರೆ ಮಾಹಿನ್ ಖಾನ್. ರಾಯ್ ಕೊಲೆಯಾದ ತಕ್ಷಣ ಅಂತಾರಾಷ್ಟ್ರೀಯ ಮಾಧ್ಯಮಗಳು ಎಚ್ಚೆತ್ತುಕೊಂಡಂತೆ ಕಾಣಿಸುತ್ತವೆ. ಆದರೆ, ಇಂಥ ಅದೆಷ್ಟೋ ಹೆಣಗಳು ಇಲ್ಲಿ ಉರುಳುತ್ತಿವೆ. ಅವುಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂಬುದು ಅವರ ಒಟ್ಟು ಅಭಿಪ್ರಾಯ.
ಮೂಲಭೂತವಾದಕ್ಕೆ ರಾಯ್ ಮಾತ್ರ ಹುತಾತ್ಮನಾಗಿಲ್ಲ. ಇದಕ್ಕೂ ಮೊದಲು ಇದೇ ವ್ಯಕ್ತಿತ್ವದ, ಮುಕ್ತ ಚಿಂತನೆಯನ್ನು ಪ್ರತಿಪಾದಿಸುತ್ತಿದ್ದ ಅಂದರೆ, ೨೦೧೨ರಲ್ಲಿ ಬ್ಲಾಗರ್‌ಗಳಾದ ಸಾಗರ್ ಸರೋವರ್ ಮತ್ತು ಮೆಹೆರ್ರುನ್ ರುನಿ ಜೋಡಿಯನ್ನು ಇದೇ ರೀತಿ ಕೊಲ್ಲಲಾಗಿತ್ತು. ೨೦೧೩ರಲ್ಲಿ ಮತ್ತೊಬ್ಬ ಬ್ಲಾಗರ್ ರಾಜಿಬ್ ಹೈದರ್, ಆಸೀಫ್ ಮೊಹಿದ್ದೀನ್, ಪ್ರೊ.ಷಫಿಉಲ್ ಇಸ್ಲಾಮ್ ಕೂಡಾ ಇಸ್ಲಾಮ್ ಮೂಲಭೂತವಾದಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಇನ್ನೂ ಕೆಲವು ಬ್ಲಾಗರ್‌ಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಒಂದೇ ಒಂದು ವ್ಯತ್ಯಾಸವೆಂದರೆ, ಕೆಲವು ಹತ್ಯೆಗಳು ಮಾಧ್ಯಮಗಳಲ್ಲಿ ಒಂದಿಷ್ಟು ಸ್ಥಾನ ಪಡೆದು ಸಂಚಲನ ಸೃಷ್ಟಿಸಿವೆ. ಇನ್ನೊಂದಿಷ್ಟು ಹತ್ಯೆಗಳು ಯಾರ ಕಣ್ಣಿಗೂ ಬೀಳದೆ ಮುಗಿದು ಹೋಗುತ್ತಿವೆ.
್ಝ
ರಾಯ್ ಹತ್ಯೆಯಿಂದಲೂ ಭಾರತಕ್ಕೂ ಪಾಠವಿದೆ. ನಮ್ಮಲ್ಲೂ ಒಂದಿಷ್ಟು ಅಸಹಿಷ್ಣು ಮನಸ್ಸುಗಳು ಇಂಥ ಘಟನೆಗಳಿಗೆ ಕಾರಣವಾಗುತ್ತಿವೆ. ಮಹಾರಾಷ್ಟ್ರದ ವಿಚಾರವಾದಿ ಗೋವಿಂದ್ ಪಣೇಸರ್, ನರೇಂದ್ರ ದಾಬೋಲ್ಕರ್ ಸೇರಿದಂತೆ ಸಾಮಾಜಿಕ, ಆರ್‌ಟಿಐ ಕಾರ್ಯಕರ್ತರು ದುಷ್ಟರ ಅಟ್ಟಹಾಸಕ್ಕೆ ಬಲಿಯಾಗುತ್ತಿದ್ದಾರೆ. ಪ್ರಜಾಪ್ರಭುತ್ವದ ರಾಷ್ಟ್ರಗಳಲ್ಲಿ ಭಿನ್ನಾಭಿಪ್ರಾಯಕ್ಕೂ, ಭಿನ್ನ ಸಿದ್ಧಾಂತಕ್ಕೂ ತನ್ನದೇ ಆದ ಮಹತ್ವವಿದೆ. ಆದರೆ, ಎಲ್ಲವನ್ನೂ ಏಕೀಕೃತ ಸೈದ್ಧಾಂತಿಕ ನೆಲೆಯಲ್ಲಿ ನೋಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಪ್ರಕ್ರಿಯೆ ಹೀಗೆಯೇ ಮುಂದುವರಿದರೆ, ಬಹು ಸಾಂಸ್ಕೃತಿಕ, ವೈವಿಧ್ಯದ ಬುನಾದಿಯಲ್ಲೇ ಎದ್ದು ನಿಂತಿರುವ ಭಾರತದ ಕಟ್ಟಡವೂ ಅಲುಗಾಡುವುದರಲ್ಲಿ ಅನುಮಾನವೇ ಇಲ್ಲ.

ಮಲ್ಲಿಕಾರ್ಜುನ ತಿಪ್ಪಾರ
(ಕನ್ನಡಪ್ರಭ-24-3-2015)