ಇರಾನ್‌ನ ೧೨ ವರ್ಷಗಳ ವನವಾಸ ಅಂತ್ಯವಾಗುವ ಕ್ಷಣಗಳು ಹತ್ತಿರವಾಗುತ್ತಿವೆ.
‘ಅಣು ಬಾಂಬ್’ಗಳನ್ನು ತಯಾರಿಸುತ್ತಿದೆ ಎಂಬ ಗುಮಾನಿಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಸಮುದಾಯ ಹೇರಿದ್ದ ಆರ್ಥಿಕ ದಿಗ್ಬಂಧನ ಹಿಂತೆಗೆಯುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಇದರ ಮೊದಲ ಹಂತವಾಗಿ ಇರಾನ್ ಮತ್ತು ‘ಪಿ೫ ಪ್ಲಸ್ ೧’(ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ರಷ್ಯಾ, ಚೀನಾ ಮತ್ತು ಜರ್ಮನಿ) ಜಾಗತಿಕ ಪ್ರಬಲ ರಾಷ್ಟ್ರಗಳ ನಾಯಕರ ನಡುವೆ ಇತ್ತೀಚೆಗೆ ನಡೆದ ‘ಇರಾನ್ ಅಣು ಒಪ್ಪಂದ’ ಮಾತುಕತೆ ಒಂದು ಹಂತಕ್ಕೆ ಬಂದು ನಿಂತಿದೆ. ‘ಇರಾನ್ ತನ್ನ ಅಣು ಚಟುವಟಿಕೆಗಳನ್ನು ಶಾಂತಿ ಉದ್ದೇಶಕ್ಕೆ ಸೀಮಿತಗೊಳಿಸುವುದು ಮತ್ತು ಅಂತಾರಾಷ್ಟ್ರೀಯ ಸಮುದಾಯ ಹೇರಿರುವ ಆರ್ಥಿಕ ದಿಗ್ಬಂಧನವನ್ನು ಹಿಂತೆಗೆದುಕೊಳ್ಳುವುದು ಈ ಉದ್ದೇಶಿತ ಮಾತುಕತೆಯ ಮುಖ್ಯ ಅಜೆಂಡಾ’. ಅಷ್ಟರಲ್ಲಾಗಲೇ ಈ ಪ್ರಕ್ರಿಯೆಯನ್ನು ‘ಐತಿಹಾಸಿಕ’ ಎಂದು ಅಮೆರಿಕ ಮತ್ತು ಇರಾನ್ ನಾಯಕರು ಬಣ್ಣಿಸಿದ್ದಾರೆ. ಈ ಪ್ರಕ್ರಿಯೆಗೆ ಅಂತಿಮವಾಗಿ, ಸುಸ್ಪಷ್ಟವಾದ ಮೂರ್ತರೂಪ ದೊರೆಯಲು ಜೂನ್ ೩೦ ಗಡವು. ಒಂದಿಷ್ಟು ಕೊರತೆಗಳು ಎರಡೂ ಕಡೆ ಇವೆ. ಆ ಓರೆಕೋರೆಗಳನ್ನು ತುಂಬಿಕೊಂಡು ಅಂತಿಮವಾಗಿ ಅಂಕಿತ ಬಿದ್ದರೆ ೧೯೭೯ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್, ಅಂತಾರಾಷ್ಟ್ರೀಯ ಸಮುದಾಯದ ಜತೆ ಸಾಧಿಸಿದ ಅತಿದೊಡ್ಡ, ಬಹು ಪ್ರಾಮುಖ್ಯವಾದ ಒಪ್ಪಂದಕ್ಕೆ ಸಾಕ್ಷಿಯಾಗಲಿದೆ.
೨೦೦೨ರಲ್ಲಿ ಇರಾನ್‌ನ ವಿಧ್ವಂಸಕ ಅಣು ಚಟುವಟಿಕೆಗಳು ಬಹಿರಂಗವಾಗುತ್ತಿದ್ದಂತೆ ವಿಶ್ವಸಂಸ್ಥೆ ಹಾಗೂ ಐರೋಪ್ಯ ಒಕ್ಕೂಟ ರಾಷ್ಟ್ರಗಳು ದಿಗ್ಬಂಧನವನ್ನು ಮತ್ತಷ್ಟು ವಿಸ್ತರಿಸಿದ್ದವು. ತನ್ನೆಲ್ಲ ಅಣು ಚಟುವಟಿಕೆಗಳು ಶಾಂತಿ ಉದ್ದೇಶಕ್ಕಾಗಿಯೇ ಇವೆ ಎಂದು ಇರಾನ್ ಅಲವತ್ತುಕೊಂಡಿತ್ತು. ಆದರೆ, ಅದನ್ನು ನಿರೂಪಿಸಲು ಸಾಧ್ಯವಾಗಿರಲಿಲ್ಲ. ಇದೀಗ ಅಂತಾರಾಷ್ಟ್ರೀಯ ಸಮುದಾಯಕ್ಕೂ ತಾನು ಶಾಂತಿಯುತ ರಾಷ್ಟ್ರ ಎಂಬುದನ್ನು ಇರಾನ್ ಮನವರಿಕೆ ಮಾಡುವ ನಿಟ್ಟಿನಲ್ಲಿ ಯಶ ಕಾಣುತ್ತಿದೆ. ಈ ಪ್ರಯತ್ನದಲ್ಲಿ ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವೇದ್ ಝರೀಫ್ ಅವರ ಕೊಡುಗೆ ಗಣನೀಯ. ಈ ಹಿನ್ನೆಲೆಯಲ್ಲಿ ಅವರು ಮಾತುಕತೆ ಮುಗಿಸಿಕೊಂಡು ಕಳೆದ ಶುಕ್ರವಾರ ಟೆಹ್ರಾನ್‌ನಲ್ಲಿ ಬಂದಿಳಿದಾಗ ಭವ್ಯ ಸ್ವಾಗತವೇ ದೊರೆತಿದೆ. ಇದರಿಂದಲೇ ಅಂದಾಜು ಮಾಡಬಹುದು. ಆರ್ಥಿಕ ದಿಗ್ಬಂಧನದಿಂದಾಗಿ ಇರಾನ್ ಎಂಥ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು ಎಂಬುದನ್ನು. ಇರಾನ್‌ನ ಅಧ್ಯಕ್ಷ ಹಸನ್ ರೌಹಾನಿ ಅವರು ೨೦೧೩ರಲ್ಲಿ ನಡೆದ ಚುನಾವಣೆಯಲ್ಲಿ ಜಗತ್ತಿನ ಇತರೆ ರಾಷ್ಟ್ರಗಳ ಜತೆ ಅಣು ಒಪ್ಪಂದವನ್ನು ಮುಂದು ಮಾಡಿಕೊಂಡು ಮತ ಕೇಳಿದ್ದರು. ಅದಕ್ಕಾಗೇ ಅಲ್ಲಿನ ಜನ ಅವರನ್ನು ಚುನಾಯಿಸಿದ್ದರು. ಇದೀಗ ಅವರು ತಮ್ಮ ಭರವಸೆಯನ್ನು ಈಡೇರಿಸುವ ಹಂತಕ್ಕೆ ಬಂದು ಮುಟ್ಟಿದ್ದಾರೆ. ಅಲ್ಲದೆ, ತಮ್ಮ ದೇಶದ ‘ಮಾತುಕತೆಯ ತಂಡದ ಪ್ರಯತ್ನ’ವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಆದರೆ, ಈ ಒಪ್ಪಂದದ ಬಗ್ಗೆ ಇರಾನ್ ಪರಮೋಚ್ಚ ನಾಯಕ ಅಯಾತುಲ್ಲಾ ಅಲಿ ಖೋಮೇನಿಯಿಂದ ತಕ್ಷಣದ ಪ್ರಕ್ರಿಯೆ ಹೊರಬಿದ್ದಿಲ್ಲ!
ಇನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕೂಡ ಇದು ತಮ್ಮ ವಿದೇಶಾಂಗ ನೀತಿಗೆ ದೊರೆತ ಯಶಸ್ಸು ಎಂದು ಭಾವಿಸಿದ್ದಾರೆ. ಈ ಯಶಸ್ಸಿನ ಪಾಲನ್ನು ಅವರು ಕಾರ್ಯದರ್ಶಿ ಜಾನ್ ಕೆರ‌್ರಿ ಅವರಿಗೆ ಕೊಡಲೇಬೇಕು. ಇರಾನ್ ಜತೆಗಿನ ‘ಮುಳ್ಳಿನ ಸ್ನೇಹ’ವನ್ನು ನಾಜೂಕಾಗಿ ದೇಶದ ಒಳಗೂ ಮತ್ತು ಹೊರಗೂ ನಿಭಾಯಿಸಿದ್ದಾರೆ. ಈ ಎಲ್ಲದರ ಮಧ್ಯೆಯೂ ಒಬಾಮ, ಇನ್ನೂ ಕಾಂಗ್ರೆಸ್‌ಗೆ ಈ ಒಪ್ಪಂದ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ. ಅದರಲ್ಲಿ ಎಷ್ಟು ಸಫಲರಾಗುತ್ತಾರೋ?
ಇರಾನ್ ಜತೆಗಿನ ಅಂತಾರಾಷ್ಟ್ರೀಯ ಸಮುದಾಯ ಬಾಂಧವ್ಯ ಮರುಸ್ಥಾಪಿಸಿರುವುದನ್ನು ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಸ್ವಾಗತಿಸಿವೆ. ಆದರೆ, ಅಮೆರಿಕದ ಎರಡು ಪ್ರಮುಖ ಸ್ನೇಹಿತ ರಾಷ್ಟ್ರಗಳಾದ ಸೌದಿ ಅರೇಬಿಯಾ ಹಾಗೂ ಇಸ್ರೇಲ್ ಮಾತ್ರ ತೀವ್ರ ವಿರೋಧ ದಾಖಲಿಸಿವೆ. ಇರಾನ್ ಈಗ ಸಿಕ್ಕಿರುವ ಅವಕಾಶವನ್ನು ಸರಿಯಾದ ಹಾಗೂ ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ನಿಗದಿತ ಅವಧಿಯಲ್ಲೇ ಸೌದಿಗೆ ಸೆಡ್ಡು ಹೊಡೆಯುವ ಮಟ್ಟಿಗೆ ಆರ್ಥಿಕವಾಗಿ ಪ್ರಗತಿ ಕಾಣುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದಲೇ ಮಧ್ಯಪ್ರಾಚ್ಯದಲ್ಲಿ ಇರಾನ್ ಆರ್ಥಿಕ
ವಾಗಿ ಬಲಾಢ್ಯವಾಗುವುದನ್ನು ಸೌದಿ ಇಷ್ಟಪಡುವುದಿಲ್ಲ. ಹೀಗಿದ್ದಾಗ್ಯೂ, ಸೌದಿ ರಾಜನನ್ನು ಒಪ್ಪಿಸುವುದು ಅಮೆರಿಕದ ಅಧ್ಯಕ್ಷ ಬರಾಕ್‌ಗೆ ಕಷ್ಟವೇನಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಇನ್ನು ಇಸ್ರೇಲ್‌ಗಂತೂ ಇದು ನುಂಗಲಾರದ ತುತ್ತಾಗಿದೆ. ಆದರೆ, ಇಸ್ರೇಲ್ ಪ್ರಧಾನಿ ನೆತಾನ್ಯುಹು ಬಹಿರಂಗವಾಗಿಯೇ ವಿರೋಧಿಸಿದ್ದಾರೆ. ಅಷ್ಟೇ ಅಲ್ಲದೆ, ‘ಇಸ್ರೇಲ್ ಅಸ್ತಿತ್ವ’ವನ್ನು ಇರಾನ್ ಗೌರವಿಸಬೇಕು. ಇದೊಂದು ಗ್ರೇವ್‌ಯಾರ್ಡ್ ಒಪ್ಪಂದ ಎಂದು ಟೀಕಿಸಿದ್ದಾರೆ. ಇದೇ ವೇಳೆ, ಸೋಮವಾರ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ಸಂದರ್ಶನದಲ್ಲಿ ಇಸ್ರೇಲ್‌ನ ಆತಂಕವನ್ನು ದೂರ ಮಾಡುವ ಮಾತುಗಳನ್ನಾಡಿದ್ದಾರೆ ಒಬಾಮ.
=
ಈಗ ನಡೆದಿರುವ ಮಾತುಕತೆಯ ಒಟ್ಟು ಫಲಶ್ರುತಿ ಏನೆಂದರೆ, ಇರಾನ್ ತನ್ನೆಲ್ಲ ಅಣು ಚಟುವಟಿಕೆಗಳನ್ನು ಶಾಂತಿ ಉದ್ದೇಶಕ್ಕೆ ಮಾತ್ರ ಬಳಸುವುದು. ಒಟ್ಟು ಅಣು ಘಟಕಗಳ ಪೈಕಿ ಎರಡನ್ನು ಮಾತ್ರ ಸಂಶೋಧನಾ ಉದ್ದೇಶಕ್ಕೆ ಬಳಸುವುದು. ಬೃಹತ್ ರಿಯಾಕ್ಟರ್‌ಗಳನ್ನು ಮರು ವಿನ್ಯಾಸಗೊಳಿಸಿ, ಅಣು ಬಾಂಬ್‌ಗೆ ಬೇಕಾಗುವ ಪ್ಲುಟೋನಿಯಂ ಇಂಧನ ತಯಾರಿಕೆಯ ಸಾಮರ್ಥ್ಯವನ್ನು ನಿಸ್ತೇಜಗೊಳಿಸುವುದು. ಅಲ್ಲದೇ ಯುರೇನಿಯಂ ಸಂಸ್ಕರಣೆಯನ್ನು ೧೦,೦೦೦ ಕೆಜಿಯಿಂದ ೩೦೦ ಕೆಜಿಗೆ ಸೀಮಿತಗೊಳಿಸವುದು. ಹೀಗೆ ಮಾಡಿದಾಗ ಇರಾನ್ ಅಣುಬಾಂಬ್ ತಯಾರಿಸಲು ಸಾಧ್ಯವಾಗುವುದಿಲ್ಲ. ಹಾಗೊಂದು ವೇಳೆ, ಅಂತಾರಾಷ್ಟ್ರೀಯ ಸಮುದಾಯವನ್ನು ಕತ್ತಲಲ್ಲಿಟ್ಟು ತಯಾರಿಕೆಗೆ ಮುಂದಾದರೆ, ಅದು ಒಂದು ವರ್ಷದೊಳಗೆ ಹೊರಜಗತ್ತಿಗೆ ಗೊತ್ತೇ ಆಗುತ್ತದೆ. ಇದಕ್ಕೆ ಪ್ರತಿಯಾಗಿ ಅಂತಾರಾಷ್ಟ್ರೀಯ ಸಮುದಾಯ ಎಲ್ಲ ರೀತಿಯ ಆರ್ಥಿಕ ದಿಗ್ಬಂಧನವನ್ನು ಹಿಂತೆಗೆದುಕೊಂಡು ಮುಕ್ತ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು. ಇದಲ್ಲದೆ, ಆ ದೇಶ ಆರ್ಥಿಕ ಸ್ಥಿತಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು. ಇವೆಲ್ಲವೂ ಇನ್ನೂ ತೀರಾ ಪ್ರಾಥಮಿಕ ಹಂತದಲ್ಲಿವೆ. ಇದೆಲ್ಲದಕ್ಕೂ ಒಂದು ಸ್ಪಷ್ಟವಾದ ಕರಡು ರೂಪಿಸಲು ಜೂನ್ ೩೦ ಕೊನೆಯ ದಿನ. ಆ ಹೊತ್ತಿಗೆ, ಈಗ ಎದುರಾಗಿರುವ ಸೌದಿ ಅರೇಬಿಯಾ ಹಾಗೂ ಇಸ್ರೇಲ್‌ನ ಆತಂಕಗಳನ್ನು ಶಮನ ಮಾಡುವಂಥ ಒಂದಿಷ್ಟು ಉಪಕ್ರಮಗಳು ಕೂಡ ಅಂತಿಮ ಒಪ್ಪಂದದಲ್ಲಿ ಸೇರಿಕೊಳ್ಳುವುದನ್ನು ಅಲ್ಲಗಳೆಯಲಾಗದು.
=
ಇರಾನ್ ಜತೆಗಿನ ಉದ್ದೇಶಿತ ಅಣು ಒಪ್ಪಂದದಿಂದ ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರಗಳು ಖುಷಿಪಟ್ಟಿರಲಿಕ್ಕೂ ಸಾಕು. ಇರಾನ್ ಜಗತ್ತಿನ ಪ್ರಮುಖ ಕಚ್ಚಾ ತೈಲ ರಫ್ತು ಮಾಡುವ ರಾಷ್ಟ್ರ. ಇತ್ತೀಚಿನವರೆಗೂ ದಿಗ್ಬಂಧನ ಹೊರತಾಗಿಯೂ ಇರಾನ್ ಸ್ವಲ್ಪಮಟ್ಟಿಗೆ ಕಚ್ಚಾ ತೈಲ ರಫ್ತು ಮಾಡುತ್ತಿತ್ತು. ಅಲ್ಲದೆ, ಭಾರತವೇ ಅತಿ ದೊಡ್ಡ ಆಮದು ರಾಷ್ಟ್ರವಾಗಿತ್ತು ಇರಾನ್‌ಗೆ. ಇನ್ನು ದಿಗ್ಬಂಧನ ಇಲ್ಲ ಎಂದಾದರೆ ನೀವೇ ಊಹಿಸಿ! ಭಾರತದಲ್ಲಿ ಇನ್ನೊಂದು ವರ್ಷದಲ್ಲಿ ತೈಲೋತ್ಪನ್ನಗಳ ಬೆಲೆ ಯಾವ ಮಟ್ಟಕ್ಕೆ ಕೆಳಕ್ಕಿಳಿಯಬಹುದು ಎಂಬುದನ್ನು ಅಂದಾಜಿಸಿ.
ಹಾಗೆ ನೋಡಿದರೆ, ಇರಾನ್ ಯಾವತ್ತಿದ್ದರೂ ಭಾರತದ ‘ಸಹಜ ಸ್ನೇಹ’ ರಾಷ್ಟ್ರ. ೧೯೪೭ಕ್ಕಿಂತ ಮುಂಚೆ ಇರಾನ್ ಭಾರತದ ಗಡಿಯನ್ನು ಹಂಚಿಕೊಂಡಿತ್ತು. ಈ ಎರಡೂ ರಾಷ್ಟ್ರಗಳ ಬಾಂಧವ್ಯದ ಬೇರು ಹುಡುಕುತ್ತಾ ಹೊರಟರೆ ನಿಮಗೆ ನವಶೀಲಾಯುಗದವರೆಗೂ ಹಿಂದೆ ಸಾಗಬೇಕು. ಹಾಗಾಗಿಯೇ ಉತ್ತರ ಭಾರತ ಹಾಗೂ ಇರಾನ್‌ನ ಸಂಸ್ಕೃತಿ, ಜನಾಂಗ, ಭಾಷಾ ಲಕ್ಷಣಗಳಲ್ಲಿ ಇಂದಿಗೂ ಸಾಮ್ಯತೆ ಕಂಡು ಬರುತ್ತದೆ. ಇದು ಹಳೆ ಕಾಲದ ಮಾತಾಯಿತು ಬಿಡಿ. ಆಧುನಿಕ ದಿನಮಾನಗಳಲ್ಲಿ ಎಂದಿಗೂ ಇರಾನ್ ಭಾರತದ ಜತೆಗೆ ಇದೆ. ಸಂಕಷ್ಟದ ದಿನಗಳಲ್ಲಿ ಇರಾನ್ ಕೈ ಬಿಟ್ಟಿಲ್ಲ. ಅನೇಕ ಬಾರಿ ಅಂತಾರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ಭಾರತದ ಪರವಾಗಿಯೇ ತನ್ನ ಮತ ಚಲಾಯಿಸಿದೆ. ಇಷ್ಟೆಲ್ಲಾ ವಿವರಣೆ ಏಕೆಂದರೆ, ಇರಾನ್ ಅಂತಾರಾಷ್ಟ್ರೀಯ ಸಮುದಾಯ ಜತೆ ಸಾಧಿಸುತ್ತಿರುವ ಸಮನ್ವಯತೆಯಿಂದ ಅಗಾಧ ಲಾಭ ಭಾರತದ ಪರವಾಗಿಯೇ ಇರಲಿದೆ!
ಈಗಾಗಲೇ ಸೌದಿ ಅರೇಬಿಯಾ, ಅಮೆರಿಕ ಹಾಗೂ ರಷ್ಯಾಗಳ ನಡುವಿನ ರಾಜಕೀಯ ತಿಕ್ಕಾಟಕ್ಕಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಊಹೆಗೆ ಮೀರಿ ಪಾತಾಳ ಕಂಡಿದೆ. ಇದರ ಪರಿಣಾಮ ಭಾರತದಲ್ಲೀಗ ವಾರ ವಾರಕ್ಕೂ ತೈಲ ಬೆಲೆ ಪೈಸೆ ಲೆಕ್ಕದಲ್ಲಿ ಕಡಿಮೆಯಾಗುತ್ತಿದೆ. ಇನ್ನು ಇರಾನ್‌ನಿಂದ ಹೇರಳವಾಗಿ ಕಚ್ಚಾ ತೈಲ ಆಮದು ಮಾಡಿಕೊಳ್ಳುವಂತಾದರೆ, ಪೆಟ್ರೋಲ್, ಡಿಸೇಲ್ ಬೆಲೆ ಇನ್ನೂ ಯಾವ ಹಂತಕ್ಕೆ ಇಳಿಯಬಹುದು ಎಂದು ಯೋಚಿಸಿ. ಹಾಗೇನಾದರೂ ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತ ಈಗ ಪಡೆದುಕೊಳ್ಳುತ್ತಿರುವ ಪ್ರತಿ ಬ್ಯಾರೆಲ್‌ಗೆ ಇನ್ನೂ ೨ ಡಾಲರ್ ಕಡಿಮೆ ಹಣ ತೆತ್ತು ಖರೀದಿಸಬಹುದು.
ತೈಲ ಎಂಬ ಏಕೈಕ ಅಂಶವನ್ನು ಹೊರಗಿಟ್ಟು ನೋಡುವುದಾದರೆ, ಸಂಸ್ಕರಿತ ಡಿಸೇಲ್‌ನೊಂದಿಗೆ ಭಾರತದ ಜವಳಿ, ಬಾಸ್ಮತಿ ಅಕ್ಕಿ ಹೇರಳವಾಗಿ ರಫ್ತು ಮಾಡಬಹುದು. ಭಾರತೀಯ ಔಷಧ, ಕಾರು, ಮಾರ್ಜಕ ತಯಾರಿಕೆ ಕಂಪನಿಗಳು ದಾಂಗುಡಿ ಇಡಬಹುದು. ಇದೆಲ್ಲದರ ಒಟ್ಟಾರೆ ಪರಿಣಾಮ ಇರಾನ್ ಹಾಗೂ ಭಾರತದ ಮೇಲೆ ಸಕಾರಾತ್ಮಕವಾಗಿ ಬೀರಲಿದೆ.
ಇದು ಭಾರತದ ಮಟ್ಟಿಗಿನ ಲೆಕ್ಕಾಚಾರವಾದರೆ, ಅಂತಾರಾಷ್ಟ್ರೀಯವಾಗಿಯೂ ವ್ಯಾಪಾರಿಕ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿವೆ. ಬಹುತೇಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ಚೇತರಿಕೆ ದೊರೆಯಲಿದೆ. ಈ ಕುರಿತು ಈಗಾಗಲೇ ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರ್ ಮಾರ್ಕ್ ಕಾರ್ನಿ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ. ‘ಇರಾನ್ ಜತೆಗಿನ ಉದ್ದೇಶಿತ ಒಪ್ಪಂದದಿಂದಾಗಿ ತೈಲ ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದ್ದು, ಇದು ಇಂಗ್ಲೆಂಡ್ ಹಾಗೂ ಜಾಗತಿಕ ಆರ್ಥಿಕತೆಗೆ ಹೊಸ ಭರವಸೆದಾಯಕ ಹಾದಿಯನ್ನು ತೋರಿಸಲಿದೆ’ ಎಂದಿದ್ದಾರೆ. ಈ ಮಾತು ನಿಜವಾಗಬೇಕಿದ್ದರೆ ಇನ್ನೂ ಹೆಚ್ಚು ಕಡಿಮೆ ಒಂದು ವರ್ಷ ಕಾಯಬೇಕು. ಆದರೆ, ಅವರ ಮಾತಿನಲ್ಲಿ ಉತ್ಪ್ರೇಕ್ಷೆ ಏನಿಲ್ಲ. ರಾಜಕೀಯ ಕಾರಣಕ್ಕಾಗಿ ಈಗ ಇಳಿಕೆಯಾಗಿರುವ ತೈಲ ಬೆಲೆ ಯಾವುದೇ ಸಮಯದಲ್ಲಿ ಅದೇ ಕಾರಣಕ್ಕಾಗಿ ಹೆಚ್ಚಳವಾಗುವ ಎಲ್ಲ ಅಪಾಯಗಳಿವೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಕಚ್ಚಾತೈಲದ ಗಣಿಯಾಗಿರುವ ಇರಾನ್ ತನ್ನ ಒಡಲಲ್ಲಿರುವ ಎಲ್ಲ ಎಣ್ಣೆಯನ್ನು ಮಾರುಕಟ್ಟೆಗೆ ಹರಿದು ಬಿಟ್ಟರೆ ಸಹಜವಾಗಿಯೇ ಒಂದಿಷ್ಟು ಚೇತರಿಕೆ ಕಂಡು ಕೊಳ್ಳಲು ಸಾಧ್ಯ. ಇದರಿಂದ ಭಾರತ ಕೂಡ ಹೊರತಾಗಿಲ್ಲ.
- ಮಲ್ಲಿಕಾರ್ಜುನ ತಿಪ್ಪಾರ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ