ಶನಿವಾರ, ಜುಲೈ 28, 2007

ಒಂದೇ ಪ್ಯಾರಾದಲ್ಲಿ ಕಥೆ


ನಾನು, ಅವನು ಮತ್ತು ಅವಳು

ನಾನು, ಅವನು ಮತ್ತು ಅವಳು. ಅವಳಿಗೆ ಅವನ ಮೇಲೆ ಪ್ರೀತಿ; ಅವನಿಗೂ ಇನ್ನಾರೋ ಮೇಲೆ ಪ್ರೇಮ. ನನಗೆ ಅವಳ ಮೇಲೆ ಒಲವು. ಇದನ್ನು ತಿಳಿದ ಅವನು ನನ್ನೊಂದಗಿನ ಸ್ನೇಹ ಕಡಿದುಕೊಂಡ. ಅವಳ ಪ್ರೀತಿ ನನ್ನಡೆಗೆ ತಿರುಗಿದ್ದು ಬೇಸಿಗೆಯ ಬಿರು ಮಳೆಯಂತೆ ಮಾತ್ರ. ಆ ಮೇಲೆ ಅವಳು ಸ್ಥಿತ ಪ್ರಜ್ಞ. ನಾನು ಈಗ ಹುಚ್ಚಾಸ್ಪತ್ರೆಯಲ್ಲಿ.

ಸೋಮವಾರ, ಜೂನ್ 18, 2007

ಸ್ವಗತ

ಮನದ ಮೂಲೆಯಲ್ಲಿ
ಬಯಕೆಗಳು ಪವಡಿಸುತ್ತಿವೆ.
ಮರಳುಗಾಡಿನಂತಿರುವ ಮನದಲಿ
ಓಯಸಿಸ್‍ಗಳಾಗಲು,
ಒಮ್ಮೊಮ್ಮೆ ಎಚ್ಚೆತ್ತುಕೊಳ್ಳಲು ಹವಣಿಸುತ್ತಿವೆ.
ಪರಿಸ್ಥಿತಿಯ ಒತ್ತಡಕ್ಕೆ ಮಣಿಯುತ್ತಿವೆ.
ತನ್ನತನವನ್ನು ಉಳಿಸಲು ಆಶ್ರಯಿಸುತ್ತಿವೆ
ಇನ್ನೊಬ್ಬರನ್ನು, ಬೇಡವೆಂದಾಗ ಮತ್ತೊಬ್ಬರನ್ನು
ಬೇಡುತ್ತವೆ, ಮತ್ತೊಮ್ಮೆ ತಿರಸ್ಕರಿಸುತ್ತಿವೆ
ಸ್ವಂತಕ್ಕಾಗಿ, ಸ್ವಹಿತಕ್ಕಾಗಿ
ಆಗಲೂ ಈಗಲೂ ಬಯಕೆಗಳಾಗಿಯೇ
ಉಳಿಯುತ್ತಿವೆ, ಬೆಳೆಯುತ್ತಿವೆ.

-ಮಲ್ಲಿ

ಓ.. ಗುಲಾಬಿಯೇ

ಮುಂಜಾನೆಯ ಮಂಜಿನಲಿ
ಮಿಂದೆದ್ದ ಗುಲಾಬಿಯೇ
ಯಾರಿಗಾಗಿ ಕಾಯುತ್ತಿರುವೇ
ದಿನಕರನ ದಿನಾರಂಭಕ್ಕಾಗಿಯೇ..?

ಮೆಲ್ಲನೆ ಅರಳುತ್ತ
ತಂಪನೆಯ ಕಂಪು ಬೀರುತ್ತ
ನಗೆ ಚೆಲ್ಲುತ್ತಾ
ಯಾರಿಗಾಗಿ ಕಾಯುತ್ತಿರುವೆ..?

ತಂಗಾಳಿಗೆ ಮೈ ಒಡ್ಡುತ್ತಾ
ಮೆಲ್ಲನೆ ಭೂತಾಯಿಗೆ ನಮಿಸುತ್ತಾ
ನನ್ನದೇನೂ ಇಲ್ಲಎಲ್ಲವೂ ನಿನ್ನದೆನ್ನುತ್ತಾ

ನಿರವತೆಯ ಮೌನ ಮುರಿಯತ್ತ
ಕಲ್ಲು ಹೃದಯವನ್ನೂ ಅಲಗಿಸುತ್ತ
ಹೂಗಳ ರಾಣಿಯೇ ಹೇಳು
ಯಾರಿಗಾಗಿ ಈ ಚಿತ್ತ....?

ಕನಸುಗಳಿಗೆ ಆಶೆ ನೀಡಿ
ಮನಸ್ಸುಗಳನ್ನು ಒಂದುಗೂಡಿಸುತ್ತಾ
ಸಂಜೆಯಾಗುತ್ತಲೇ ನೀ ಬಾಡುವೆ
ನಶ್ವರತೆಯನ್ನು ಸೂಚಿಸುತ್ತಾ....


-ಮಲ್ಲಿ

ಮಂಗಳವಾರ, ಮೇ 1, 2007

ಅವ್ವ

ಕಷ್ಟದ ಕಣ್ಣೀರು ಕೋಡಿ ಹರಿದಾಗಲೂ
ಸ್ಥೈರ್ಯ ತುಂಬಿ ಬೆಳೆಸಿದಾಕೆ,
ಬರೀ ಸೋಲು ಕಂಡುವನಿಗೆ
ಗೆಲುವಿನ ದಾರಿ ತೋರಿಸಿದಾಕೆ.. ಅವ್ವ

ಗೆದ್ದು ಬಂದಾಗ...
ಮರೆಯಲ್ಲಿ ನಿಂತು ಆನಂದಭಾಷ್ಪ ಸುರಿಸಿದಾಕೆ
ಎಂಥ ನೋವಿನಲ್ಲೂ ನಗು ತಂದಾಕೆ
ತಾನುಣ್ಣುವ ತುತ್ತನ್ನು
ತನ್ನ ಕರಳು ಕುಡಿಗೆ ತಿನ್ನಿಸಿದಾಕೆ.. ಅವ್ವ

ಮುನ್ನುಗ್ಗಲು ಕಸವು ತುಂಬಲು
ಹಿಮ್ಮೇಳವಾಗಿ ಶಕ್ತಿ ನೀಡಿದಾಕೆ
ರಾಗ ಕೆಟ್ಟು ಭಾವ ಸೋತಾಗ
ತಾನೇ ತಂಬೂರಿ ಕೈಗಿತ್ತಿಕೊಂಡಾಕೆ.. ಅವ್ವ

ಮಾತು ಕಲಿಸಿ; ನೀತಿ ತಿಳಿಸಿ
ಸದ್ಗತಿಯ ಸಾಧ್ಯತೆ ತೋರಿಸಿದಾಕೆ
ಸಾಧ್ಯ-ಅಸಾಧ್ಯಗಳ ತೋಳಲಾಟದಲ್ಲಿ
ತಾನೇ ನಿಂತು ನೆರವಾದಾಕೆ.. ಅವ್ವ

ಆದರೆ

ಆಕೆಗೆ ನೀ ಕೊಟ್ಟಿದ್ದಾರೂ ಏನು
ಬರೀ ಕಣ್ಣೀರು.. ತೋರಿಸಿದ್ದು
ವೃದ್ಧಾಶ್ರಮ ಬಾಗಿಲು...

-ಮಲ್ಲಿ

ಶುಕ್ರವಾರ, ಏಪ್ರಿಲ್ 13, 2007

ಮಾತನಾಡು...

ಕೆಂಡವಾದ ಭೂ ಒಡಲಿಗೆ
ತಂಪನೆರದ ಬೆಸಿಗೆಯ ಬಿರು ಮಳೆ
ಈ ಬೆಂದ ಹೃದಯಕ್ಕೆ
ಪ್ರೀತಿಯಮಳೆಗರೆಯಬಾರದೇ..?

ಆ ನಿನ್ನ ನಿರವ ಮೌನ,
ನನ್ನಲ್ಲೆಬ್ಬಿಸಿದೆ ನೂರಾರು ಅನುಮಾನ
ನಿನ್ನ ಮಾತಿಗೆ, ಹೂ ನಗೆಗೆ
ನಿರೀಕ್ಷೆ ನೊಗ ಹೊತ್ತು.

ನೊಗಭಾರ ಇಳಿಸಿ
ಭಾರವಾದ ಹೃದಯವನ್ನು
ಬರಸೆಳೆಯಬಾರದೇ..?

ಅಷ್ಟುಕ್ಕೂ ಯಾಕೆ ಮೌನ
ಮೌನ ಮಾತಾಗಿ, ಮೆತ್ತಗಾಗಿ
ಮುತ್ತಿಕ್ಕಬಾರದೇ, ಕಾಯುವ ಹೃದಯವನ್ನ.

ಕನಸು ಕಟ್ಚಿಕೊಂಡು ಅಲೆಮಾರಿಯಾಗಿದ್ದೇನೆ
ಕಾಣದ ದಾರಿಯಲ್ಲಿ ಕಾಲಿಡುತ್ತಿದ್ದೇನೆ
ನಿನ್ನ ಮೌನ ಮಾತಾಗುತ್ತದೆ, ಉಸಿರಾಗುತ್ತದೆ ಎಂದು

ಹೇಳು ಮಾತನಾಡಲಾರೆಯಾ..?

-ಮಲ್ಲಿ

ಸೋಮವಾರ, ಏಪ್ರಿಲ್ 9, 2007

ಎಲ್ಲಿರುವೆ..?


ಪ್ರತಿ ವರುಷ ವಸಂತ
ನನಗೆ ಮಾತ್ರ ನಿತ್ಯ ನವ ದಿಗಂತ
ಭಾನತ್ತೆರಕ್ಕೆ ಹಾರಿ ಬಾನಾಡಿಯಂತೆ
ಹುಡುಕುತ್ತಿದ್ದೇನೆ ಕಾಣದ ಚೆಲವು, ಮೂಡದ ಒಲವು..

ನಾನು ಅರಸುತ್ತಿದ್ದೇನೆ ಪ್ರೀತಿ,
ನೀ ಸಿಕ್ಕು ಸಿಗದಂತಿರುವ ಆತ್ಮ ಸಂಗಾತಿ
ಬಳಕುವ ಲತೆಯಲ್ಲಿ, ಬಿರಿವ ಹೂ ಮೊಗ್ಗೆ
ಸೂರ್ಯಕಾಂತಿಗೆ ಕಾಯುವಂತೆ
ಮೊಡದ ಮರೆಯಲಿ ಮುಖ ತೋರಿಸಿ
ಮರೆಯಾಗುವ ಚಂದಿರನಂತೆ
ಕನಸಲ್ಲಿ ಕಣ್ಣು ಮಿಟುಕಿಸಿ
ಎಲ್ಲಿ ಮಾಯಾವಾದೇ ಅಂದಗಾತಿಯೇ..?

ಎಲೆಯ ಮೇಲಿನ ಮಂಜಿನ ಹನಿಯಂತೆ
ಸಿಗದೆ ಜಾರುವ ಜಾಯಮಾನದವಳೆ
ಕಂಡಷ್ಟು, ಕಾಣದಷ್ಟು ನೀ ಸನಿಹ
ನನ್ನ ಕಲ್ಪನಾ ಲೋಕದಲಿ...

- ಮಲ್ಲಿ