ಎಲಾನ್ ಮಸ್ಕ್ ಎಂಬ ವ್ಯಕ್ತಿ ಯಾವುದೇ ಅಳತೆಗೋಲಿಗೆ ಸಿಗುವ ಜಾಯಮಾನದವರಲ್ಲ; ಅವರಿಗೆ ಅವರೇ ಅಳತೆಗೋಲು, ಹೊಡೆದಿದ್ದೆಲ್ಲಗೋಲು!
- ಮಲ್ಲಿಕಾರ್ಜುನ ತಿಪ್ಪಾರ
ಒಂದಷ್ಟು ಪ್ರತಿಭೆ; ಮತ್ತೊಂದಿಷ್ಟು ಹುಚ್ಚುತನ, ಒಂದಷ್ಟು ಉಡಾಫೆ; ಮತ್ತೊಂದಿಷ್ಟು ಧೈರ್ಯ, ಒಂದಷ್ಟು ಸಾಹಸ; ಮತ್ತೊಂದಿಷ್ಟು ಹುಚ್ಚು ಸಾಹಸ, ಒಂದಷ್ಟು ತಿಕ್ಕುಲತನ; ಮತ್ತೊಂದಿಷ್ಟು ಮೊಂಡತನ, ಒಂದಷ್ಟು ಹುಮ್ಮಸ್ಸು; ಮತ್ತೊಂದಿಷ್ಟು ಕನಸು, ಒಂದಷ್ಟು ಸೊಗಸುಗಾರ; ಮತ್ತೊಂದಿಷ್ಟು ಮೋಜುಗಾರ... ಈ ಒಂದಿಷ್ಟು ಮತ್ತು ಮತ್ತೊಂದಿಷ್ಟು ಒಟ್ಟು ಮೊತ್ತವೇ ಎಲಾನ್ ರೀವ್ ಮಸ್ಕ್ ಅಲಿಯಾಸ್ ಎಲಾನ್ ಮಸ್ಕ್.
ಭೂಮಿ ಮೇಲಿನ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್, ಹೆಚ್ಚಾಗಿ ನಷ್ಟವನ್ನು ಉಲಿಯುತ್ತಿದ್ದ ‘ಟ್ವಿಟರ್’ ಖರೀದಿಯ ಮೂಲಕ ತಾನೆಂಥ ಹುಚ್ಚು ಸಾಹಸಿಗ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಈ ಹುಚ್ಚುತನ ಅವರ ವ್ಯಕ್ತಿತ್ವದಲ್ಲಿದೆ, ಯಾರೂ ಕಾಣದ ಕನಸು ಕಂಡು ಅದನ್ನು ನನಸು ಮಾಡಿಕೊಳ್ಳುವ ಛಾತಿ ಅವರಿಗೆ ಒಗ್ಗಿದೆ ಅದೇ ಕಾರಣಕ್ಕೆ. ಎಷ್ಟೋ ರಾಷ್ಟ್ರಗಳು ಚಂದ್ರನಲ್ಲಿಗೆ ಹೋಗಲು ಪ್ಲ್ಯಾನ್ ಮಾಡುತ್ತಿರುವಾಗಲೇ, ಮಂಗಳನ ಅಂಗಳಲ್ಲಿ ಮಾನವರ ಕಾಲನಿ ಸೃಷ್ಟಿಸಬೇಕೆಂಬ ಹುಚ್ಚು ಕನಸು ಕಾಣಲು ಸಾಧ್ಯವಾಗುವುದು ಮಸ್ಕ್‌ಗೆ ಮಾತ್ರವೇ ಸಾಧ್ಯ. ಬರೀ ಕನಸಷ್ಟೇ ಅಲ್ಲ, ಆ ದಿಶೆಯಲ್ಲಿ ಯೋಜಿಸಿ, ರೂಪಿಸಿ ಮುಂದಡಿ ಇಡಬಲ್ಲ ಧೈರ್ಯಗಾರನೂ.
ಇಲ್ಲಿ ಒಂದು ಘಟನೆ ಹೇಳಬೇಕು; ಬಿಟ್ ಕಾಯಿನ್ ಕುರಿತು ಮಸ್ಕ್ ಒಂದೇ ಒಂದು ಮಸ್ಕರಿ ಟ್ವೀಟ್ ಮಾಡಿದ್ದರು. ಅದರಿಂದ ಅವರ ಟೆಸ್ಲಾ ಕಂಪನಿಗೆ ಒಂದು ಲಕ್ಷ ಕೋಟಿ ರೂ.ಗೆ ಅಧಿಕ ನಷ್ಟ ಉಂಟು ಮಾಡಿತು ಮತ್ತು ವಿಶ್ವದ ನಂಬರ್ 1 ಶ್ರೀಮಂತ ಪಟ್ಟ ಕಳೆದುಕೊಳ್ಳಬೇಕಾಯಿತು. ಮತ್ತೊಮ್ಮೆ ಟೆಸ್ಲಾ ಕಂಪನಿಯು ವರ್ಷಕ್ಕೆ 5 ಲಕ್ಷ ಕಾರುಗಳನ್ನು ತಯಾರಿಸುತ್ತಿದೆ ಎಂಬ ಉತ್ಪ್ರೇಕ್ಷೆಯ ಹೇಳಿಕೆ ನೀಡಿದ್ದಕ್ಕಾಗಿ ಕಂಪನಿಯ ಪಾಲುದಾರರು ಮಸ್ಕ್‌ನ ಮೇಲೆ ಸಿಟ್ಟಾಗಿ ಈತನ ಟ್ವಿಟ್ಟರ್ ಖಾತೆಯನ್ನು ನಿಷೇಧಿಸುವಂತೆ ಆಗ್ರಹಿಸಿದ್ದರು. ಮಸ್ಕ್ ಅವರ ಈ ತರಹದ ಹುಚ್ಚಾಟಗಳು ಬೇಕಾದಷ್ಟಿವೆ. ಆದರೆ, ಅವರ ಒಟ್ಟಾರೆ ವ್ಯಕ್ತಿತ್ವದಲ್ಲಿನಮಗೆ ಪ್ರೇರಣೆಯಾಗಬಲ್ಲಸಾಕಷ್ಟು ಸಂಗತಿಗಳಿವೆ ಎಂಬುದೂ ಅಷ್ಟೇಸತ್ಯ.
ಎಲಾನ್ ಮಸ್ಕ್ ಅವರ ಹೆಸರಿನಲ್ಲಿ ಕಂಪನಿಗಳಿಗೆ ಒಂದಾ, ಎರಡಾ...? ಸ್ಪೇಸ್‌ಎಕ್ಸ್, ಟೆಸ್ಲಾ, ಬೋರಿಂಗ್ ಕಂಪನಿ, ಗಿ.್ಚಟಞ, ಪೇಪಾಲ್, ನ್ಯೂರೊಲಿಂಕ್, ಓಪನ್‌ಎಐ, ಝಿಪ್ 2, ಮಸ್ಕ್ ಫೌಂಡೇಷನ್(ಈ ಕಂಪನಿಗಳ ಪಟ್ಟಿಯಲ್ಲಿಕೆಲವು ಮಾರಿದ್ದು ಇದೆ)... ಹೀಗೆ ಪಟ್ಟಿ ದೊಡ್ಡದಿದೆ; ಈಗ ಹೊಸದಾಗಿ ಟ್ವಿಟರ್ ಮಾಲೀಕ. ಅವರ ಈ ಸಾಹಸ ಕಂಡು, ನೇಟಿಜನ್ಸ್ ಆ ಕಂಪನಿ ಖರೀದಿಸಿ, ಈ ಕಂಪನಿ ಖರೀದಿಸಿ ಎಂಬ ಪುಕ್ಕಟೆ ಸಲಹೆಗಳನ್ನು ಕೂಡ ಕೊಡುತ್ತಿದ್ದಾರೆ! ಈ ಸಲಹೆಗಳು ನಿಜವಾದರೂ ಆಗಬಹುದು. ಯಾಕೆಂದರೆ, 2017ರಲ್ಲಿಮಸ್ಕ್ ಅವರು, ‘‘ಐ ಲವ್ ಟ್ವಿಟರ್,’’ ಎಂದು ಟ್ವೀಟ್ ಮಾಡಿದ್ದರು. ‘‘ಹಾಗಿದ್ದರೆ ನೀವು ಅದನ್ನು ಖರೀದಿಸಿ,’’ ಎಂದು ನಿರೂಪಕ ಡೇವ್ ಸ್ಮಿತ್ ಮರು ಪ್ರತಿಟ್ವೀಟಿಸಿದ್ದರು. ಇದಕ್ಕೆ ಪ್ರತಿಯಾಗಿ ಮಸ್ಕ್, ‘‘ಎಷ್ಟಂತೆ ಅದರ ಬೆಲೆ,’’ ಎಂದು ಪ್ರಶ್ನಿಸಿದ್ದರು. ಮೊನ್ನೆ ಮಸ್ಕ್ ಟ್ವಿಟರ್ ಖರೀದಿಸಿದಾಗ ಈ ಹಳೆಯ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು!
ಎಲಾನ್ ಮಸ್ಕ್ ಅವರು 1971ರ ಜೂನ್ 28ರಂದು ದಕ್ಷಿಣ ಆಫ್ರಿಕಾದಲ್ಲಿ, ಕೆನಡಾದ ತಾಯಿತಂದೆಗಳಿಗೆ ಜನಿಸಿದರು. ಅವರ ಶಾಲಾ ದಿನಗಳು ಅಷ್ಟೇನೂ ಚೆನ್ನಾಗಿರಲಿಲ್ಲ. ಅವರೇ ಹೇಳಿಕೊಂಡಿರುವಂತೆ; ಮಸ್ಕ್ ಪುಸ್ತಕದ ಹುಳು. ಎನ್‌ಸೈಕ್ಲೋಪಿಡಿಯಾಗಳಿಂದ ಹಿಡಿದು ಕಾಮಿಕ್ ಬುಕ್ ಗಳವರೆಗೆ ಎಲ್ಲವನ್ನು ಓದುತ್ತಿದ್ದರಂತೆ. ಪ್ರಿಟೋರಿಯಾ ನಗರದಲ್ಲಿರುವ ವಾಟರ್‌ಕ್ಲೂಫ್ ಹೌಸ್ ಪ್ರಿಪರೇಟರಿ ಸ್ಕೂಲ್ ಸೇರಿಕೊಂಡರು. ಬಳಿಕ ಪ್ರಿಟೋರಿಯಾ ಬಾಯ್ಸ್ ಹೈಸ್ಕೂಲ್‌ನಲ್ಲಿಶಿಕ್ಷ ಣ ಪಡೆದುಕೊಂಡರು. ಈ ದಿನಗಳು ಅವರಿಗೆ ಹೆಚ್ಚು ಏಕಾಂಗಿತನವನ್ನು ಕೊಟ್ಟವು. ಆದರೆ, ಎಲಾನ್ ಎಂಥ ಬುದ್ಧಿಶಾಲಿ ಎಂದರೆ, 10ನೇ ವಯಸ್ಸಿನಲ್ಲೇ ಸಾಫ್ಟ್‌ವೇರ್ ಕೋಡಿಂಗ್ ಕಲಿತುಕೊಂಡು, 12ನೇ ವಯಸ್ಸಿನಲ್ಲೇ ಒಂದು ವಿಡಿಯೋ ಗೇಮ್ ತಯಾರಿಸಿದರು. ಮುಂದೆ, ಎಕಾನಮಿಕ್ಸ್ ಪದವಿಗೆ ಸೇರಿದರು. ಆದರೆ, ಈ ಕೋರ್ಸ್ ತಮಗಲ್ಲಎಂಬುದು ಗೊತ್ತಾಗುತ್ತಿದ್ದಂತೆ ಸೇರಿದ ಎರಡು ದಿನದಲ್ಲೇ ಅದನ್ನು ಬಿಟ್ಟು ‘ಝಿಪ್2’ ಎಂಬ ಸಾಫ್ಟ್‌ವೇರ್ ಸಂಸ್ಥೆಯನ್ನು ಸ್ಥಾಪಿಸಿದರು. ನಂತರ ಅದನ್ನು ಕಾಂಪಾಕ್ ಕಂಪನಿಗೆ 340 ದಶಲಕ್ಷ ಡಾಲರಿಗೆ ಮಾರಾಟ ಮಾಡಿದರು. ಆಗ ಮಸ್ಕ್ ಅವರಿಗೆ ಕೇವಲ 28 ವರ್ಷ. ಈ ವಯಸ್ಸಿಗೆ ಹೊತ್ತಿಗೆ ನಾವು- ನೀವಾದರೆ ಕೆಲಸ ಹುಡ್ಕೊಂಡು ಅಲೆಯುತ್ತಿದ್ದೆವು. ಆನಂತರ ಪೇಪಾಲ್ ಎಂಬ ಆನ್‌ಲೈನ್ ಹಣಪಾವತಿ ಕಂಪನಿಯನ್ನು ಹುಟ್ಟುಹಾಕಿ ನಂತರ ಅದನ್ನು ಇಬೇ ಕಂಪನಿಗೆ 120 ಕೋಟಿ ಡಾಲರ್‌ಗೆ ಮಾರಾಟ ಮಾಡಿದರು ಮಸ್ಕ್. ಟೆಸ್ಲಾಎಂಬ ವಿದ್ಯುತ್ ಚಾಲಿತ ಕಾರ್ ತಯಾರಿಕಾ ಕಂಪನಿ ಪ್ರಾರಂಭಿಸಿದರು. ಚಿಕ್ಕಂದಿನಿಂದಲೇ ಐಸಾಕ್ ಅಸಿಮೋವ್ ಮುಂತಾದ ವಿಜ್ಞಾನ ಲೇಖಕರನ್ನು ಓದುತ್ತ ಬೆಳೆದ ಮಸ್ಕ್‌ಗೆ ಬಾಹ್ಯಾಕಾಶ ಸಂಶೋಧನೆಯ ಹುಚ್ಚು. ಅದಕ್ಕಾಗಿಯೇ ಸ್ಪೇಸ್ ಎಕ್ ್ಸಪ್ಲೋರೇಷನ್ (ಸ್ಪೇಸ್‌ಎಕ್ಸ್) ಎಂಬ ಕಂಪನಿಯನ್ನು ಆಂಭಿಸಿದರು. ಮಸ್ಕ್ ಅವರ ಉದ್ಯಮ ಹುಚ್ಚು ಸಾಹಸಗಳು ಇಷ್ಟಕ್ಕೆ ನಿಲ್ಲುವುದಿಲ್ಲ. ಒಂದರ ಮೇಲೊಂದು ಕಂಪನಿಗಳು ಆರಂಭಿಸುವುದು, ಇಲ್ಲವೇ ಸ್ವಾಧೀನ ಮಾಡಿಕೊಳ್ಳುವುದು ಅಥವಾ ಮಾರುವುದು ಈವರೆಗೆ ನಡೆದುಕೊಂಡು ಬಂದಿದೆ.
ಉದ್ಯಮ ಸಾಹಸದಂತೆ ಅವರ ವೈಯಕ್ತಿಕ ಜೀವನವೂ ರೋಚಕವಾಗಿದೆ. ಎರಡು ಮದುವೆಗಳಾಗಿವೆ. ಸದ್ಯಕ್ಕೆ ಅವಿವಾಹಿತ. ಮೊದಲ ಹೆಂಡತಿ ಜಸ್ಟಿನ್ ವಿಲ್ಸನ್. ಈಕೆ ಕೆನಡಾದ ಲೇಖಕಿ. 2000ರಿಂದ 2008ರವರೆಗೆ ಮದುವೆ ಬಾಳಿಕೆ ಬಂತು. ಆ ನಂತರ ಇಂಗ್ಲಿಷ್ ನಟಿ ತಾಲುಲಾ ರಿಲೇ ಅವರನ್ನು 2010ರಲ್ಲಿಮದುವೆಯಾದರು; 2016ರಲ್ಲಿಬೇರೆ ಬೇರೆಯಾದರು. ಮಸ್ಕ್‌ಗೆ ಒಟ್ಟು ಆರು ಮಕ್ಕಳಿದ್ದಾರೆ. 2018ರಿಂದ ಕೆನಡಾದ ಗಾಯಕಿ, ಸಾಂಗ್ ರೈಟರ್ ಗ್ರೀಮ್ಸ್ (ಕ್ಲೇರ್ ಎಲಿಸ್ ಬೌಚರ್) ಜತೆ ಸಂಬಂಧವಿಟ್ಟುಕೊಂಡಿದ್ದಾರೆ. ಒಂದು ಮಗುವಿದೆ. ಹಲವು ಗುಪ್ತ ಪ್ರಣಯಗಳೂ ಇವೆ. ಫೋರ್ಬ್ಸ್ ಪತ್ರಿಕೆ ಮಸ್ಕ್ ಅವರನ್ನು ಜಗತ್ತಿನ 25 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಸಾಲಿನಲ್ಲಿಸೇರಿಸಿದೆ.
ಮಸ್ಕ್ ಅವರಲ್ಲಿಇನ್ನೂ ಏನೇನು ಕನಸುಗಳಿವೆಯೋ? ಎಂಥ ಹುಚ್ಚ ಸಾಹಸಗಳಿಗೆ ಅಣಿಯಾಗುತ್ತಿದ್ದಾರೋ ಯಾರಿಗೆ ಗೊತ್ತು? ಅನಿರೀಕ್ಷಿತ ನಿರ್ಧಾರ ಕೈಗೊಳ್ಳುವುದರಲ್ಲಿಸಿದ್ಧಹಸ್ತರಾಗಿರುವ ವ್ಯಕ್ತಿಯ ನಡೆಯನ್ನು ಊಹಿಸುವುದು ಕಷ್ಟ. ಅವರ ಈ ಗುಣವೇ ಅವರನ್ನು ಇಂದು ವಿಶ್ವದ ಶ್ರೀಮಂತ ವ್ಯಕ್ತಿಸ್ಥಾನದಲ್ಲಿತಂದುಕೂರಿಸಿದೆ. ನೆಲದಿಂದ ಚಂದ್ರನಲ್ಲಿಗೆ ನೆಗೆಯುವ ಸಾಹಸಿ ಗುಣವನ್ನು ಗಟ್ಟಿಗೊಳಿಸಿದೆ.