ಸೋಮವಾರ, ಫೆಬ್ರವರಿ 10, 2020

Google Maps @ 15 years: 15ರ ಹರೆಯದ ಗೂಗಲ್ ಮ್ಯಾಪ್ಸ್

- ಮಲ್ಲಿಕಾರ್ಜುನ ತಿಪ್ಪಾರ
ಇಂಟರ್ನೆಟ್‌ ದೈತ್ಯ ಗೂಗಲ್‌ ಅನೇಕ ಉತ್ಪನ್ನಗಳನ್ನು ಹೊಂದಿವೆ. ಗೂಗಲ್‌ ಸರ್ಚ್, ಜಿ ಮೇಲ್‌, ಯೂಟ್ಯೂಬ್‌, ಜಿ ಸೂಟ್‌, ಗೂಗಲ್‌ ಡ್ರೈವ್‌, ಗೂಗಲ್‌ ಪ್ಲೇ ಸ್ಟೋರ್‌ ಸೇರಿದಂತೆ ಅನೇಕ ಸೇವೆಗಳನ್ನು ಬಳಕೆದಾರರನ್ನು ಸಂತೃಪ್ತಗೊಳಿಸುತ್ತಿವೆ. ಇವೆಲ್ಲವುಗಳ ಪೈಕಿ ಗೂಗಲ್‌ ಮ್ಯಾಪ್ಸ್ ಕೂಡ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಿದೆ. ಗೂಗಲ್‌ ಮ್ಯಾಪ್ಸ್ ಸೇವೆ ಶುರುವಾಗಿ ಫೆಬ್ರವರಿ 8ಕ್ಕೆ 15 ವರ್ಷಗಳು ಪೂರ್ಣಗೊಂಡವು. ಈ ಹದಿನೈದು ವರ್ಷದಲ್ಲಿ ಗೂಗಲ್‌ ಮ್ಯಾಪ್ಸ್ ಅನೇಕ ಏಳು ಬೀಳು, ಹೊಸ ವಿನ್ಯಾಸಗಳನ್ನು ಕಂಡಿದೆ. ಕಾಲ ಕಾಲಕ್ಕೆ ಅಪ್‌ಡೇಟ್‌ ಆಗುತ್ತ, ಬಳಕೆದಾರರ ಸ್ನೇಹಿ ಆ್ಯಪ್‌ ಆಗಿ ಬದಲಾಗಿದೆ.

15 ವರ್ಷ ಪೂರ್ಣಗೊಳಿಸಿದ ಮ್ಯಾಪ್ಸ್

ಬಹುಶಃ ಗೂಗಲ್‌ ಮ್ಯಾಪ್ಸ್ ಸೇವೆಯೊಂದು ಇಷ್ಟೊಂದು ಸರಳವಾಗಿ ಸಿಗದಿದ್ದರೆ ಇಂದಿನ ಅನೇಕ ಮ್ಯಾಪ್‌ ಆಧರಿತ ಸೇವೆಗಳು ನಮಗೆ ಲಭ್ಯವಾಗುತ್ತಿರಲಿಲ್ಲವೇನೊ? ಬಹಳಷ್ಟು ಇಂಟರ್ನೆಟ್‌ ಸೇವೆಗಳು, ಅನೇಕ ಕಂಪನಿಗಳು, ಬೈಕ್‌ ರೆಂಟಿಂಗ್‌ ಆಪರೇಟಿಂಗ್‌ ಕಂಪನಿಗಳು, ವೆದರ್‌ ಫೋರ್‌ಕಾಸ್ಟಿಂಗ್‌ ಸೇರಿದಂತೆ ಅನೇಕ ಸೇವೆಗಳು ಇದೇ ಗೂಗಲ್‌ ಮ್ಯಾಪ್ಸ್ ಸೇವೆಯನ್ನು ಬಳಸಿಕೊಂಡು ತಮ್ಮ ಉತ್ಕೃಷ್ಟ ಸೇವೆಯನ್ನು ಒದಗಿಸುತ್ತಿವೆ. ಬಹಳಷ್ಟು ನ್ಯಾವಿಗೇಷನ್‌ ಸಿಸ್ಟಮ್‌ಗಳು ಇದೇ ಗೂಗಲ್‌ ಮ್ಯಾಪ್ಸ್ ಬಳಸಿಕೊಳ್ಳುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಾಗಿ, ಸದ್ಯ ಗೂಗಲ್‌ ಮ್ಯಾಪ್ಸ್ ಅತ್ಯಂತ ಪ್ರಭಾವಿ ಆ್ಯಪ್‌ ಆಗಿ ಹೊರ ಹೊಮ್ಮಿದೆ. 15 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿಗೂಗಲ್‌ ಮ್ಯಾಪ್ಸ್ ಆ್ಯಪ್‌ನ ಒಟ್ಟು ವಿನ್ಯಾಸವನ್ನು ಬದಲಿಸಿದೆ.

ಗೂಗಲ್‌ ಮ್ಯಾಪ್ಸ್ ಮರುವಿನ್ಯಾಸ

ಐಒಎಸ್‌ ಮತ್ತು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಹೆಚ್ಚು ನೆರವಾಗುವ ನಿಟ್ಟಿನಲ್ಲಿ ಗೂಗಲ್‌ ಮ್ಯಾಪ್ಸ್ ಅನ್ನು ಮರು ವಿನ್ಯಾಸಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿಆ್ಯಪ್‌ನ ಬಾಟಮ್‌ನಲ್ಲಿಒಟ್ಟು ಐದು ಆಯ್ಕೆಗಳನ್ನು ನೀಡುವ ಮೂಲಕ ಬಳಕೆದಾರರಿಗೆ ಹೆಚ್ಚಿನ ಅವಕಾಶವನ್ನು ನೀಡಲಾಗುತ್ತಿದೆ. ಜತೆಗೆ ಇದು ಬಳಕೆದಾರರಿಗೆ ಇದು ಸುಲಭದಲ್ಲಿ ಲಭ್ಯವಾಗುವಂತಿದೆ.

ಎಕ್ಸ್‌ಪ್ಲೋರ್

ಎಕ್ಸ್‌ಪ್ಲೋರ್‌(Explore) ಮೇನ್‌ ಟ್ಯಾಬ್‌ನಲ್ಲಿ ಡಿಫಾಲ್ಟ್ ಆಗಿಯೇ ನ್ಯಾವಿಗೈಷನ್‌ ಆಪ್ಷನ್‌ಗಳಿವೆ. ಹಾಗೆಯೇ ನಿಯರ್‌ಬೈ(ಹತ್ತಿರದ) ಲೊಕೇಷನ್‌ಗಳನ್ನು ಹುಡುಕುವುದಕ್ಕೆ ಅವಕಾಶವಿದೆ. ಉದಾಹರಣೆಗೆ ಈ ಟ್ಯಾಬ್‌ ಅನ್ನು ಬಳಕೆದಾರರು ನಿಯರ್‌ಬೈ ರೆಸ್ಟೊರೆಂಟ್‌ಗಳನ್ನು ಹುಡುಕಲು ಬಳಸಬಹುದು. ಜತೆಗೆ ಆ ಲೊಕೇಷನ್‌ಗಳ ರೇಟಿಂಗ್‌ ಮತ್ತು ರಿವ್ಯೂಗಳನ್ನು ನೀಡಬಹುದು.

ಕಮ್ಯೂಟ್

ಕಮ್ಯೂಟ್‌(Commute) ಟ್ಯಾಬ್‌ ಇದು, ನೀವು ಕಚೇರಿಗೆ ಹೋಗುವ ಮಾರ್ಗದಲ್ಲಿಟ್ರಾಫಿಕ್‌ ಯಾವ ರೀತಿ ಇದೆ ಎಂಬುದನ್ನು ತೋರಿಸುತ್ತದೆ. ಇದಕ್ಕೆ ಇಂತಿಂಥದ್ದೇ ಸಾರಿಗೆ ಇರಬೇಕು ಎಂದೇನೂ ಇಲ್ಲ. ಹಾಗೆಯೇ ಸೇವ್ಡ್ (Saved) ಟ್ಯಾಬ್‌ ನೀವು ಸೇವ್‌ ಮಾಡಿಟ್ಟ ಲೊಕೇಷನ್‌ಗಳು ಸೇರಿದಂತೆ ನೀವು ಮಾಡಬಹುದಾದ ಟ್ರಿಪ್‌ ಕುರಿತ ಮಾಹಿತಿಯನ್ನು ಹೊಂದಿರುತ್ತದೆ.

ಕಾಂಟ್ರಿಬ್ಯೂಟ್

ಗೂಗಲ್‌ ಮ್ಯಾಪ್ಸ್ ಆ್ಯಪ್‌ ಅನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿಬಳಕೆದಾರರು ರಿವ್ಯೂಗಳನ್ನು, ಫೀಡ್‌ಬ್ಯಾಕ್‌ಗಳನ್ನು ಒದಗಿಸಲು ಗೂಗಪ್‌ ಮ್ಯಾಪ್ಸ್ ಕಾಂಟ್ರಿಬ್ಯೂಟ್‌(Contribute) ಟ್ಯಾಬ್‌ನಲ್ಲಿಅವಕಾಶ ಕಲ್ಪಿಸುತ್ತದೆ. ಕೊನೆಯದಾಗಿ ಅಪ್ಡೇಟ್ಸ್‌ (Updates) ಟ್ಯಾಬ್‌ ಹೊಸ ಲೊಕೇಷನ್‌ಗಳ ಶೋಧಕ್ಕೆ ಸಹಾಯ ಮಾಡುತ್ತದೆ. ಜತೆಗೆ ನೀವು ಇರುವ ಪ್ರದೇಶದಲ್ಲಿಬಿಸಿನೆಸ್‌ ಉದ್ದೇಶಕ್ಕಾಗಿ ಚಾಟ್‌ ಮಾಡಲು ಅವಕಾಶ ನೀಡುತ್ತದೆ.

ನೂತನ ಲೋಗೋ, ಫ್ರೆಶ್ ಲುಕ್

ಗೂಗಲ್‌ ಮ್ಯಾಪ್ಸ್‌ನಲ್ಲಿ 220ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳನ್ನು ಮ್ಯಾಪಿಂಗ್‌ ಮಾಡಲಾಗಿದೆ. ಇದರಲ್ಲಿ ಲಕ್ಷಾಂತರ ಬಿಸಿನೆಸ್‌ ಮತ್ತು ಸ್ಥಳಗಳನ್ನು ಗುರುತಿಸಲಾಗಿದೆ. ರಿಯಲ್‌ ಟೈಮ್‌ ಜಿಪಿಎಸ್‌ ನ್ಯಾವಿಗೇಷನ್‌ ಕೂಡ ಒದಗಿಸುತ್ತದೆ. ಸಾರ್ವಜನಿಕ ಸಾರಿಗೆ ಮಾಹಿತಿಯ ಜತೆಗೆ ಟ್ರಾಫಿಕ್‌ ಬಗ್ಗೆಯೂ ರಿಯಲ್‌ ಟೈಮ್‌ ವಿವರವನ್ನು ನೀಡುತ್ತದೆ. ಗೂಗಲ್‌ ಮ್ಯಾಪ್ಸ್ ಒಟ್ಟು ಮರುವಿನ್ಯಾಸದ ಜೊತೆಗೆ ಅದರ ಲೋಗೊ ವಿನ್ಯಾಸ ಕೂಡ ಬದಲಾಗುತ್ತಿದೆ. ಈ ಹದಿನೈದು ವರ್ಷದಲ್ಲಿಐದಾರು ಬಾರಿ ಗೂಗಲ್‌ ಮ್ಯಾಪ್ಸ್ ಲೋಗೊ ವಿನ್ಯಾಸ ಬದಲಾಗುತ್ತಲೇ ಬಂದಿದೆ. ಹೊಸ ವಿನ್ಯಾಸವು ಲೊಕೇಷನ್‌ ಪಿನ್‌ ಮಾದರಿಯಲ್ಲೇ ಇದ್ದು, ಅದಕ್ಕೆ ಗೂಗಲ್‌ ಮಾತೃಸಂಸ್ಥೆ ಅಲ್ಫಾಬೆಟ್‌ ಹೊಂದಿರುವ ವಿವಿಧ ವರ್ಣಗಳನ್ನು ಸಂಯೋಜಿಸಲಾಗಿದೆ. ಈಗಿನ ಲೋಗೊ ವಿನ್ಯಾಸ ಫ್ರೆಶ್‌ ಎಂಬ ಭಾವನೆಯನ್ನು ಸೃಜಿಸುತ್ತದೆ.

ಕಾರ್ಯ ನಿರ್ವಹಣೆ ಹೇಗಿದೆ?

ಡೈರೆಕ್ಷನ್‌ ಮತ್ತು ಟ್ರಾನ್ಸಿಟ್‌
ಸಂಚಾರ ದಟ್ಟಣೆ ಮಾಹಿತಿ
ಸ್ಟ್ರೀಟ್‌ ವ್ಯೂ
ಬಿಸಿನೆಸ್‌ ಲಿಸ್ಟಿಂಗ್ಸ್
ಒಳಾಂಗಣ ಮ್ಯಾಪ್‌
ಮೈ ಮ್ಯಾಪ್‌
ಗೂಗಲ್‌ ಲೊಕಲ್‌ ಗೈಡ್ಸ್‌
ಡಾರ್ಕ್ ಮೋಡ್‌


ಸೋಮವಾರ, ಫೆಬ್ರವರಿ 3, 2020

Tangi v/s Tik Tok: ಟಿಕ್‌ ಟಾಕ್‌ಗೆ ಟಕ್ಕರ್‌ ಕೊಡಲು ಬಂತು ಗೂಗಲ್‌ನ ಹೊಸ ಆ್ಯಪ್‌

- ಮಲ್ಲಿಕಾರ್ಜುನ ತಿಪ್ಪಾರ
ಟಿಕ್‌ ಟಾಕ್‌ ಎಂಬ ಕಿರು ಅವಧಿಯ ವಿಡಿಯೊ ಆ್ಯಪ್‌ ಹುಟ್ಟು ಹಾಕಿದ ಉತ್ಕರ್ಷ ಅಗಾಧ. ಅತಿ ಕಡಿಮೆ ಅವಧಿಯಲ್ಲೇ ಇದಕ್ಕೆ ಜಗತ್ತಿನಾದ್ಯಂತ 50 ಕೋಟಿಗೂ ಅಧಿಕ ಸಕ್ರಿಯ ಬಳಕೆದಾರರಿದ್ದಾರೆ. ಭಾರತದಲ್ಲೂ ಟಿಕ್‌ ಟಾಕ್‌ 12 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಈ ಅಂಕಿ ಸಂಖ್ಯೆಗಳೇ ಟಿಕ್‌ ಟಾಕ್‌ ಜನಪ್ರಿಯತೆಯನ್ನು ಸೂಚಿಸುತ್ತದೆ. ಇದೆಲ್ಲಾ ಯಾಕೆ ಹೇಳಬೇಕಾಯಿತು ಎಂದರೆ, ಇಂಟರ್ನೆಟ್‌ನ ದೈತ್ಯ ಕಂಪನಿಗಳಾದ ಗೂಗಲ್‌ ಮತ್ತು ಫೇಸ್‌ಬುಕ್‌ ಕೂಡ ಇದೀಗ, ಟಿಕ್‌ ಟಾಕ್‌ ಮಾದರಿಯ ಆ್ಯಪ್‌ಗಳನ್ನು ಹೊಂದಲು ಪ್ರಯತ್ನಿಸುತ್ತಿವೆ.

ನೋಕಿಯಾ ಉದಾಹರಣೆ

ಸ್ಪರ್ಧಾತ್ಮಕ ಜಗತ್ತಿನಲ್ಲಿನಿತ್ಯದ ಹೊಸ ಆವಿಷ್ಕಾರಗಳಿಗೆ ಒಗ್ಗಿಕೊಳ್ಳದೇ ಹೋದರೆ ಮಾರುಕಟ್ಟೆಯಿಂದಲೇ ಕಣ್ಮರೆಯಾಗುವ ಅಪಾಯಗಳಿರುತ್ತವೆ. ಇದಕ್ಕೆ ಬೆಸ್ಟ್‌ ಉದಾಹರಣೆ ಎಂದರೆ- ನೋಕಿಯಾ. ಒಂದು ಕಾಲದಲ್ಲಿ ಮೊಬೈಲ್‌ ಫೋನ್‌ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಿದ್ದ ನೋಕಿಯಾ, ಸ್ಮಾರ್ಟ್‌ಫೋನ್‌ಗಳ ಜಮಾನದಲ್ಲಿ ಹಿಂದೆ ಬಿತ್ತು. ಅದರರ್ಥ ಭವಿಷ್ಯದ ದಿನಗಳನ್ನು ಊಹಿಸುವಲ್ಲಿ ವಿಫಲವಾಗಿದ್ದೇ ಇದಕ್ಕೆ ಕಾರಣ.


ಟ್ಯಾಂಗಿ ಸೃಷ್ಟಿ

ಇದೇ ಮಾತನ್ನು ಟಿಕ್‌ ಟಾಕ್‌ ವಿಷಯದಲ್ಲೂ ಹೇಳಬಹುದು. ಈಗೇನಿದ್ದರೂ ಕಿರು ಅವಧಿಯ ವಿಡಿಯೊ ಆ್ಯಪ್‌ಗಳದ್ದೇ ಕಾರುಬಾರು. ಇದಕ್ಕೆ ಒಂದು ನಿರ್ದಿಷ್ಟ ದಿಕ್ಕು ತೋರಿಸಿದ್ದು ಟಿಕ್‌ ಟಾಕ್‌. ಈಗ ಅದೇ ಹಾದಿಯನ್ನು ಗೂಗಲ್‌ ಕೂಡ ತುಳಿಯುತ್ತಿದೆ. ಯೂಟ್ಯೂಬ್‌ನಂಥ ಜನಪ್ರಿಯ ವಿಡಿಯೋ ವೇದಿಕೆ ಇದ್ದರೂ ಗೂಗಲ್‌ ಇದೀಗ ಟ್ಯಾಂಗಿ(Tangi) ಕಿರು ಅವಧಿಯ ವಿಡಿಯೊ ಆ್ಯಪ್‌ ಬಿಡುಗಡೆ ಮಾಡಿದೆ. ಸದ್ಯ ಇದು ಪ್ರಯೋಗಾತ್ಮಕ ಆ್ಯಪ್‌ ಆಗಿದ್ದು, ಟ್ಯಾಂಗಿ ಎಂಬ ಪದವನ್ನು The Words TeAch aNd Glveನಿಂದ ಸೃಷ್ಟಿಸಲಾಗಿದೆ. ಈ ಹೊಸ ಮಾದರಿಯ ಆ್ಯಪ್‌ನಲ್ಲಿ ಬಳಕೆದಾರರು 60 ಸೆಕೆಂಡ್‌ಗಳ ಅವಧಿಯ ವಿಡಿಯೋ ಅಪ್‌ಲೋಡ್ ಮಾಡಬಹುದು. ಇಲ್ಲೂಆರ್ಟ್‌, ಡಿಐವೈ(ಡೂ ಇಟ್‌ ಯುವರ್‌ಸೆಲ್ಫ್), ಕುಕಿಂಗ್‌, ಫ್ಯಾಷನ್‌, ಬ್ಯೂಟಿ, ಲೈಫ್‌ಸ್ಟೈಲ್‌ ಸೇರಿ ನಾನಾ ವಿಧದ ವಿಭಾಗಗಳಿವೆ.

ಐಒಎಸ್‌ನಲ್ಲಿ ಮಾತ್ರ ಲಭ್ಯ
ಸದ್ಯಕ್ಕೆ ಈ ಆ್ಯಪ್‌ ಐಒಎಸ್‌ನಲ್ಲಿ ಮಾತ್ರ ಲಭ್ಯವಿದ್ದು, ಆ್ಯಂಡ್ರಾಯ್ಡ್ ಬಳಕೆದಾರರಿಗೆ ದೊರೆಯುವುದಿಲ್ಲ. ಅವರು ಇನ್ನೊಂದಿಷ್ಟ ದಿನ ಕಾಯಬೇಕಾಗಬಹುದು. ಆದರೆ, ವೆಬ್‌ನಲ್ಲಿ ನೀವು ಬಳಸಬಹುದು. ಗೂಗಲ್‌ ಈಗಾಗಲೇ ಯೂಟ್ಯೂಬ್‌ ವಿಡಿಯೋ ವೇದಿಕೆಯ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿದೆ. ಹೀಗಿದ್ದೂ, ಕಿರು ಅವಧಿಯ ವಿಡಿಯೋ ವೇದಿಕೆಯು ಯೂಟ್ಯೂಬ್‌ಗೆ ಪ್ರತಿಸ್ಪರ್ಧಿಯೊಂದನ್ನು ಹುಟ್ಟು ಹಾಕುತ್ತಿದೆಯಾ ಅಥವಾ ಟಿಕ್‌ ಟಾಕ್‌ನಂಥ ಆ್ಯಪ್‌ಗಳಿಗೆ ಸ್ಪರ್ಧೆ ನೀಡುತ್ತದೆಯೇ ಎಂಬುದು ಸ್ಪಷ್ಟವಾಗುತ್ತಿಲ್ಲ. ಜೊತೆಗೆ ಈ ಹೊಸ ಆ್ಯಪ್‌ ಬಳಕೆದಾರರನ್ನು ಸೆಳೆಯಲು ವಿಫಲವಾಗಬಹುದು. ಯಾಕೆಂದರೆ, ಇದು ಕೇವಲ ಕಿರು ಅವಧಿ ವಿಡಿಯೋಗೆ ಅವಕಾಶ ಕಲ್ಪಿಸುವುದರಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಲಾಗುವುದಿಲ್ಲ. ಹಾಗಾಗಿ ಬಳಕೆದಾರರು ಯೂಟ್ಯೂಬ್‌ಗೆ ಮೊರೆ ಹೋಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

​ಸೃಜನಾತ್ಮಕತೆಗೆ ಒತ್ತು

ಟ್ಯಾಂಗಿ ಆ್ಯಪ್‌ನ ಮುಖ್ಯ ಉದ್ದೇಶವೇ ಬಳಕೆದಾರರಲ್ಲಿನ ಸೃಜನಾತ್ಮಕತೆಗೆ ವೇದಿಕೆಯನ್ನು ಒದಗಿಸುವುದು ಆಗಿದೆ. ನಾವು ಕೇವಲ ಡಿಐವೈ ಮತ್ತು ಸೃಜನಶೀಲ ಕಟೆಂಟ್‌ ಬಗ್ಗೆ ಗಮನ ಕೇಂದ್ರೀಕರಿಸಿದ್ದೇವೆ. ಒಂದು ನಿಮಿಷದ ವಿಡಿಯೋ ಅಪ್ಲೋಡ್‌ ಮಾಡಲು ನಾವು ಅವಕಾಶ ಕಲ್ಪಿಸಿಕೊಡುತ್ತಿದ್ದೇವೆ ಎಂದು ಟ್ಯಾಂಗಿ ಸಂಸ್ಥಾಪಕ ಕೊಕೊ ಮಾವೊ ಅವರು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಆ್ಯಪ್‌ ಇನ್ನೊಂದು ವಿಶೇಷ ಏನೆಂದರೆ, ಇದರಲ್ಲಿರುವ ಟ್ರೈ ಇಟ್‌ ವಿಭಾಗದಲ್ಲಿ ಬಳಕೆದಾರರು ಅಲ್ಲಿರುವ ವಿಡಿಯೊಗಳನ್ನು ಮರು ಸೃಷ್ಟಿಸಬಹುದು ಮತ್ತು ಅವುಗಳನ್ನು ಶೇರ್ ಮಾಡಿಕೊಳ್ಳಬಹುದು. ಇದರಿಂದ ಬಹಳಷ್ಟು ಬಳಕೆದಾರರನ್ನು ತಲುಪಲು ಸಾಧ್ಯವಾಗಲಿದೆ

ಟಿಕ್‌ ಟಾಕ್‌ಗೆ ಪೈಪೋಟಿ

ಈ ಮೊದಲೇ ಹೇಳಿದಂತೆ ಟಿಕ್‌ ಟಾಕ್‌ಗೆ ಪೈಪೋಟಿ ನೀಡಲು ಅನೇಕ ಕಂಪನಿಗಳು ಕಿರು ಅವಧಿಯ ವಿಡಿಯೋ ಆ್ಯಪ್‌ಗಳನ್ನು ಪರಿಚಯಿಸುತ್ತಿವೆ. ಕೆಲವು ದಿನಗಳ ಹಿಂದೆ ಫೇಸ್‌ ಬುಕ್‌ ಕೂಡ ಲ್ಯಾಸ್ಸೊ ಆ್ಯಪ್‌ ಬಿಡುಗಡೆ ಮಾಡಿದೆ. ಆದರೆ, ಇದು ಇನ್ನೂ ಭಾರತ ಗ್ರಾಹಕರಿಗೆ ಲಭ್ಯವಾಗಿಲ್ಲ. ಹಾಗೆಯೇ ಟ್ಯಾಂಗಿ ಕೂಡ. ಇನ್ನೂ ಫೇಸ್‌ಬುಕ್‌ ಒಡೆತನದ ಇನ್‌ಸ್ಟಾಗ್ರಾಂ ಕೂಡ ರೀಲ್ಸ್‌ ಎಂಬ ಆಪ್‌ ಬಿಡುಗಡೆ ಮಾಡಿದ್ದನ್ನು ನಾವು ಗಮನಿಸಬಹುದು. ಈ ಬೆಳವಣಿಗೆಗಳು ಏನು ಹೇಳುತ್ತಿವೆ ಎಂದರೆ, ವಿಡಿಯೋ ಫ್ಲಾಟ್‌ಫಾರ್ಮ್‌ ಈಗಿನ ಟ್ರೆಂಡ್‌ ಆಗಿವೆ. ವಿಡಿಯೋ ಕಂಟೆಂಟ್‌ಗೆ ಈಗ ಎಲ್ಲಕ್ಕಿಂತ ಹೆಚ್ಚಿನ ಬೇಡಿಕೆ ಇದ್ದು, ಬಹುತೇಕ ದೊಡ್ಡ ದೊಡ್ಡ ಟೆಕ್‌ ಕಂಪನಿಗಳು ಈ ರೀತಿಯ ವೇದಿಕೆಗಳನ್ನು ಸೃಷ್ಟಿಸಿಕೊಂಡು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತವೆ.

ಬುಧವಾರ, ಜನವರಿ 8, 2020

New Features for WhatsApp: ವಾಟ್ಸ್‌ಆ್ಯಪ್‌ಗೆ ಮತ್ತಷ್ಟು ಹೊಸ ಫೀಚರ್‌ಗಳು!

- ಮಲ್ಲಿಕಾರ್ಜುನ ತಿಪ್ಪಾರ
ವಾಟ್ಸಪ್ ಎಂಬುದು ಈಗ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ನಮ್ಮ ನಿತ್ಯದ ಕೆಲಸ ಕಾರ್ಯಗಳಲ್ಲಿಅದರ ಅನಿವಾರ್ಯತೆಯ ಸೃಷ್ಟಿಯಾಗಿದೆ. ಅಂದರೆ ಅಷ್ಟರ ಮಟ್ಟಿಗೆ ವಾಟ್ಸಪ್ ನಮ್ಮನ್ನು ಆವರಿಸಿಕೊಂಡಿದೆ. ಇದಕ್ಕೆ ಕಾರಣ ಏನೆಂದು ಹುಡುಕುತ್ತಾ ಹೋದರೆ, ಬಳಕೆದಾರರ ಅಗತ್ಯಗಳನ್ನು ಮನಗಂಡು ಅದಕ್ಕ ತಕ್ಕಂತೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತದೆ. ಆ ಮೂಲಕ ಹೆಚ್ಚೆಚ್ಚು ಬಳಕೆದಾರರ ಸ್ನೇಹಿ ಆ್ಯಪ್‌ ಆಗಿ ಗುರುತಿಸಿಕೊಳ್ಳುತ್ತಿದೆ. ಹೊಸ ವರ್ಷದಲ್ಲೂ ವಾಟ್ಸಪ್ ಅನೇಕ ಹೊಸ ಫೀಚರ್‌ಗಳೊಂದಿಗೆ ನಿಮ್ಮ ಮುಂದೆ ಬರುತ್ತಿದೆ. ಬಹುದಿನಗಳ ಬೇಡಿಕೆಯಾದ ಡಾರ್ಕ್‌ಮೋಡ್ ಸೇರಿದಂತೆ ಅನೇಕ ಸಂಗತಿಗಳು ಸೇರ್ಪಡೆಯಾಗಲಿವೆ. ಜತೆಗೆ ಈ ವರ್ಷದಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ವಾಟ್ಸಪ್ ಸಪೋರ್ಟ್‌ ಮಾಡುವುದನ್ನು ನಿಲ್ಲಿಸಲಿದೆ.

ಡಾರ್ಕ್ ಮೋಡ್‌

ಈಗಾಗಲೇ ಬಹಳಷ್ಟು ಆ್ಯಪ್‌ಗಳಲ್ಲಿ ಡಾರ್ಕ್ ಮೋಡ್‌ ಸಾಮಾನ್ಯವಾಗಿದೆ. ಹಾಗೆಯೇ ವಾಟ್ಸಪ್ ಕೂಡ ಡಾರ್ಕ್ ಮೋಡ್‌ ಪರಿಚಯಿಸಲು ಹಲವು ದಿನಗಳಿಂದ ಕಾರ್ಯನಿರತವಾಗಿದೆ. ಬಹುಶಃ ಈ ವರ್ಷದಲ್ಲಿ ಅದು ಕಾರ್ಯರೂಪಕ್ಕೆ ಬರಲಿದೆ. ವಾಬೀಟಾಇನ್ಫೊ ಪ್ರಕಾರ, ವಾಟ್ಸಪ್‌ನ ಡಾರ್ಕ್‌ ಮೋಡ್‌ ಸಿದ್ಧವಾಗಿದೆ. ಆದರೆ, ಸ್ಟೇಟಸ್‌ ಅಪ್‌ಡೇಟ್‌ ಸೆಲ್‌, ಪ್ರೊಫೈಲ್‌ ಸೆಲ್ಸ್‌, ಕಾಂಟಾಕ್ಟ್ ಮತ್ತು ಸ್ಟೋರೇಜ್‌ ಲಿಸ್ಟ್‌ ಸೇರಿದಂತೆ ಇನ್ನಿತರ ಕೆಲವು ಅಂಶಗಳನ್ನು ಡಾರ್ಕ್‌ ಮೋಡ್‌ಗೆ ಹೊಂದಿಸಬೇಕಿದೆ. ಹಾಗಾಗಿ, ಇದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು. ಈ ವರ್ಷದಲ್ಲಿ ಖಂಡಿತವಾಗಿಯೂ ಐಒಎಸ್‌ ಮತ್ತು ಆಂಡ್ರಾಯ್ಡ್‌ ಫೋನ್‌ಗಳಲ್ಲಿ ನೀವು ಪರಿಪೂರ್ಣವಾದ ಡಾರ್ಕ್‌ ಮೋಡ್‌ ವಾಟ್ಸಪ್ ಅನ್ನು ನಿರೀಕ್ಷಿಸಬಹುದು.


ಐಪ್ಯಾಡ್‌ನಲ್ಲಿ ವಾಟ್ಸಪ್

ಆಂಡ್ರಾಯ್ಡ್‌ ಮತ್ತು ಐಫೋನ್‌ಗಳಲ್ಲಿ ವಾಟ್ಸಪ್ ಅನ್ನು ಸರಳವಾಗಿ ಬಳಸಬಹುದು. ಹಾಗೆಯೇ ಡೆಸ್ಕ್‌ಟಾಪ್‌ಗಳಲ್ಲೂ ವಾಟ್ಸಪ್ ಬಳಕೆ ಸುಲಭ. ಆದರೆ, ಇದುವರೆಗೆ ಐಪ್ಯಾಡ್‌ನಲ್ಲಿ ವಾಟ್ಸಪ್ ಬಳಕೆ ಸಾಧ್ಯವಾಗಿಲ್ಲ. ಒಂದೊಮ್ಮೆ ಆ್ಯಪ್‌ ಸ್ಟೋರ್‌ನಿಂದ ಐಪಾಡ್‌ನಲ್ಲಿ ವಾಟ್ಸಪ್ ಇನ್ಸ್ಟಾಲ್ ಮಾಡಿದರೂ ಅದು ಐಫೋನ್‌ನಲ್ಲಿ ತೆರೆದುಕೊಳ್ಳುವಂತೆ ತೆರೆದುಕೊಳ್ಳುತ್ತದೆ. ಐಪಾಡ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ವಾಟ್ಸಪ್ ಕಾರ್ಯನಿರ್ವಹಣೆ ಸಂಬಂಧ ಕಂಪನಿ ಕಾರ್ಯನಿರತವಾಗಿದೆ. ಈ ಬಗ್ಗೆ ಅಧಿಕೃತವಾದ ಮಾಹಿತಿ ಹೊರಬಿದ್ದಿಲ್ಲವಾದರೂ ಈ ವರ್ಷ ಐಪಾಡ್‌ಗೆ ವಾಟ್ಸಪ್ ಸಪೋರ್ಟ್‌ ಮಾಡಲಿದೆ. ಹಾಗಂತ ಐಪಾಡ್‌ಗೆ ರೂಪಿಸಲಾಗುತ್ತಿರುವ ವಾಟ್ಸಪ್ ಇತರ ವಾಟ್ಸಪ್ ಗಿಂತ ಭಿನ್ನವಾಗಿರುತ್ತದೆ ಎಂದು ಭಾವಿಸಬೇಕಿಲ್ಲ.

ಬ್ಲಾಕ್ಡ್ ಕಾಂಟಾಕ್ಟ್ ನೋಟಿಸ್‌

ಬ್ಲಾಕ್‌ ಮಾಡಲಾದ ಕಾಂಟಾಕ್ಟ್‌ಗಳನ್ನು ಮತ್ತೆ ಸಕ್ರಿಯಗೊಳಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ಪ್ರಯತ್ನದಲ್ಲಿ ವಾಟ್ಸಪ್ ಇದೆ. ಬಹುಶಃ ಈ ವರ್ಷಕ್ಕೆ ಸಾಧ್ಯವಾಗಬಹುದು. ಹೊಸ ಫೀಚರ್‌ ಕಾರ್ಯ ಸಾಧ್ಯವಾದರೆ, ಒಂದೇ ಟ್ಯಾಪ್‌ನಲ್ಲಿ ಬ್ಲಾಕ್‌ ಮಾಡಲಾದ ಕಾಂಟಾಕ್ಟ್‌ಗಳನ್ನು ಅನ್‌ಲಾಕ್‌ ಮಾಡಬಹುದು.

ಡಿಲಿಟ್‌ ಮೆಸೇಜ್‌ಗಳು

ಹೊಸ ಡಿಲಿಟ್‌ ಮೆಸೇಜ್‌ ಫೀಚರ್‌ ಸಿದ್ಧತೆಯಲ್ಲಿದೆ ವಾಟ್ಸಪ್. ಈ ಹೊಸ ಫೀಚರ್‌ ವಾಟ್ಸಪ್ ಸಂದೇಶಗಳನ್ನು ನಿಗದಿತ ಸಮಯದ ಬಳಿಕ ಸ್ವಯಂ ಆಗಿ ಡಿಲಿಟ್‌ ಮಾಡುತ್ತದೆ. ಈ ಫೀಚರ್‌ ಖಾಸಗಿ ಮತ್ತು ಗ್ರೂಪ್‌ ಚಾಟ್‌ಗೂ ದೊರೆಯಲಿದೆ. ಈಗಾಗಲೇ ಕುರಿತು ವಾಟ್ಸಪ್ ಕಾರ್ಯನಿರತವಾಗಿದೆ.

ಈ ಫೋನ್‌ಗಳಿಗೆ ಸಪೋರ್ಟ್‌ ಮಾಡಲ್ಲ!

ಈ ಹೊಸ ವರ್ಷದಲ್ಲಿ ವಾಟ್ಸಪ್ ಕೆಲವು ಫೋನ್‌ಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಈಗಾಗಲೇ ಕಂಪನಿ ಈ ಬಗ್ಗೆ ಮಾಹಿತಿ ನೀಡಿದೆ. ಆಂಡ್ರಾಯ್ಡ್‌ 2.3.7 ಜಿಂಜರ್‌ಬ್ರೆಡ್‌ ಮತ್ತು ಇದಕ್ಕೂ ಹಿಂದಿನ ಆವೃತ್ತಿಗಳಿರುವ ಫೋನ್‌ಗಳು ಹಾಗೂ ಐಒಎಸ್‌ 8 ಮತ್ತು ಅದಕ್ಕೂ ಮೊದಲಿನ ಫೋನ್‌ಗಳಿಗೆ ವಾಟ್ಸಪ್ ಸಪೋರ್ಟ್‌ ಮಾಡುವುದಿಲ್ಲ ಎಂದು ಕಂಪನಿ ತನ್ನ ಬ್ಲಾಗ್‌ನಲ್ಲಿ ಹೇಳಿಕೊಂಡಿದೆ. ಹಾಗಂತ, ವಾಟ್ಸಪ್ ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳುತ್ತದೆ ಎಂದರ್ಥವಲ್ಲ. ಈ ಮೊದಲೇ ಅಕೌಂಟ್‌ ಹೊಂದಿದ್ದರೆ ವಾಟ್ಸಪ್ ಬಳಕೆಯನ್ನು ಮುಂದುವರಿಸಬಹುದು. ಆದರೆ, ಅದರಲ್ಲಿರುವ ಫೀಚರ್‌ಗಳು ಯಾವುದೇ ಸಮಯದಲ್ಲಿ ನಿಷ್ಕ್ರಿಯಗೊಳ್ಳಬಹುದು. ಅದರಲ್ಲೂ ವಿಂಡೋಸ್‌ ಫೋನ್‌ ಬಳಸುವವರಿಗೆ ವಾಟ್ಸಪ್ ಬಳಕೆ ಕಷ್ಟಸಾಧ್ಯವಾಗಲಿದೆ.