ಶನಿವಾರ, ಆಗಸ್ಟ್ 11, 2007

ಅವ್ವ ಮತ್ತು ಹೊಲ

ಎಂದಿನಂತೆ ಸೂರ್ಯನ ಕಿರಣಗಳ ಕಿಟಕಿಯೊಳಗಿಂದ ನನ್ನ ಮೇಲೆ ಬಿದ್ದಿರಲಿಲ್ಲ. ಆಗಲೇ ನನ್ನ ಮೊಬೈಲ್ ರಿಂಗುಣಿಸಿದ್ದು.ನಿದ್ದೆಯೇ ಮಂಪರಿನಲ್ಲಿ ಹಲೋ ಎಂದೆ. ಅತ್ತ ಕಡೆಯಿಂದ ಮಾತಾಡಿದ್ದು ನನ್ನ ಸಹೋದರ ಮಾವ. ಆತನ ದನಿ ನಡಗುತ್ತಿತ್ತು.ಹೇಗೊ ಸಾವರಿಸಿಕೊಂಡು ವಿಷಯ ಹೇಳಿದಾ. ಆಗ ನನಗೆ ನಿಂತ ನೆಲ ನಡುಗಿದ ಅನುಭವ. ಆಗಲೇ ಕಿಟಕಿಯೊಳಗಿನಿಂದ ಸೂರ್ಯ ರಶ್ಮಿಯೊಂದು ನನ್ನ ಗಲ್ಲದ ಮೇಲೆ ಬಿತ್ತು. ಅದು ಎಂದಿನಂತೆ ಹಿತವಾಗಿರಲಿಲ್ಲ; ಬೆಂಕಿಯಂತೆ ಸುಡುತ್ತಿತ್ತು. ಅದನ್ನು ತಂಪಾಗಿಸಲು ಏನೊ ಎಂಬಂತೆ ನನ್ನ ಕಣ್ಣೀರಧಾರೆ ಚಿಮ್ಮಿತು.

ಹಾಗೇ ನಿಂತಕೊಂಡದ್ದನ್ನು ನೋಡಿದ ಗೆಳೆಯ ವಿನೋದ, "ಏನ್ ಪೋನು" ಅಂತಾ ಗಾಬರಿಯಿಂದ ಕೇಳಿದ. ಆದರೆ, ನನಗೆ ಹೇಳುವುದಕ್ಕೆ ಬಾಯಿಯಾದರೂ ಎಲ್ಲಿತ್ತು. ಅಳುವೊಂದು ಒಂದೇ ನನ್ನ ಬಾಯಿಗೆ ಗೊತ್ತಾಗಿದ್ದು ಆಗ. ಏನೂ ತಿಳಿಯದೆ ಆತ ಆಶ್ಚರ್ಯಗಣ್ಣುಗಳಿಂದ ನನ್ನ ದಿಟ್ಟಿಸುತ್ತಾ ನೋಡುತ್ತಿದ್ದ; ನಾನು ಅವನ ಹೆಗಲ ಮೇಲೆ ಮುಖವೊಡ್ಡಿ ಮನಸ್ಸು ಹಗುರವಾಗೊವರೆಗೆ ಅತ್ತೆ.
****
ಚೆನ್ನೈನಿಂದ ಬೆಳಗಾವಿಯ ನನ್ನ ಹಳ್ಳಿಗೆ ಹೋಗಬೇಕಾದ್ರೆ ಕನಿಷ್ಟ 21 ರಿಂದ 23 ಗಂಟೆಯಾದ್ರೂ ಬೇಕು. ಮಧ್ಯಾಹ್ನದ ಚೆನ್ನೈನಿಂದ ಬೆಂಗಳೂರಿಗೆ ಹೊರಡುವ ಟ್ರೈನ್‌ಗೆ ಬಿಟ್ಟು ಬರಲು ವಿನೋದ ಬಂದಿದ್ದ. ಟ್ರೈನ್ ತನ್ನ ನಿಗದಿತ ಸಮಯಕ್ಕೆ ನಿರ್ಭಾವಕತೆಯಿಂದ ಹೊರಟಿತು. ಹೊರಗೆ ಭಾವಕನಾದ ವಿನೋದ ಕಣ್ಣೀರು ತುಂಬಿಕೊಂಡಿದ್ದ; ನನ್ನ ಎದೆಯೊಳಗೆ ಕಣ್ಣೀರಿನ ಜಲಪಾತವೇ ಬೀಳುತ್ತಿತ್ತು.

ಚೆನ್ನೈ ದಾಟಿ ಟ್ರೈನ್ ಅದೇ ನಿರ್ಭಾವುಕ ಶಬ್ಧ ಮಾಡುತ್ತ ಮತ್ತು ಅಷ್ಟೆ ವೇಗವಾಗಿ ಓಡುತ್ತಿತ್ತು. ಎಲ್ಲರೂ ಹೀಗೆ ಓಡಬೇಕು ಎಂದು ಅಣುಕಿಸುತ್ತವಂತೆ ಭಾಸವಾಯಿತು ನನಗೆ.
****
ಕಿಟಕಿಗೆ ತಲೆ ಹಚ್ಚಿ ಕಣ್ಣುಚ್ಚುದ್ದಂತೆ ನನ್ನ ಅವ್ವನ ಮುಖ, ಅವಳು ಆ ಹೊಲ ಬಿಡಿಸಿಕೊಳ್ಳುವುದಕ್ಕಾಗಿ ಪಟ್ಟ ಪಾಡು ಎಲ್ಲ ಸುಯ್ಯಂತ ಸುಳಿಯಿತು.

ನಾನು ಪ್ರತಿ ಸಾರಿ ಊರಿಗೆ ಹೋದಾಗ ಅವ್ವನದು ಒಂದೆ ಮಾತು. " ತಮ್ಮಾ ಆ ತುಣಕ್ ಹೊಲ ಬಿಡ್‌ಸ್ಕೊಳ್ಳುನಪಾ. ಆ ಹೊಲದಿಂದ ನಾಲ್ಕ್ ಕಾಳು ಜೋಳ ಬಂದ್ರ್ ಎಷ್ಟೊ ಸಹಾಯ ಆದಂಗ್ ಆಗತೈತಿ. ನೀ ತಿಂಗ್ಳಾ ಎರಡು ಸಾವಿರು ಕಳಿಸಿದ್ರ್ ಸಾಕ್. ನಾ ಹೆಂಗರ್ ಮನಿ ನಡೆಸ್ಕೊಂಡ್ ಹೋಗ್ತೇನಿ. ನಿಮ್ಮ ಅಪ್ಪ್ ಅಂತ್ರೂ ದುಡಿಯಂವಾ ಅಲ್ಲಾ, ದುಃಖ ಪಡಂವಾ ಅಲ್ಲಾ. ನಾ ಹೀಂಗ್ ಎಷ್ಟಾ ದಿನಾ ದುಡೀಲಿ" ಅನ್ನಾಕೆ.

"ಅಲ್ಲವೋ ಆ ಹೊಲಕ್ ಯಾಕ್ ಅಷ್ಟು ಚಿಂತಿ ಮಾಡ್ತಿಯವ್ವಾ. ಇರೋದು ಒಂದೂವರೆ ಎಕ್ರೆನೂ ಇಲ್ಲಾ. ಆ ಹೊಲದಿಂದ ಎಷ್ಟು ಜೋಳಾ ಪಡದೀ ನೀ" ಅನ್ನುತ್ತಿದ್ದಾಂಗ, ಅವ್ವ ಕೊಂಚ ಬೇಸರ ಮಾಡ್ಕೊಂಡು, "ಹಂಗ್ ಅನ್ನಬೇಡೊ ತಮ್ಮಾ, ಅದು ಎಷ್ಟು ಆದ್ರೂ ಹಿರೇರು ಮಾಡಿಟ್ಟ ಆಸ್ತಿ. ಅಂಗೈಷ್ಟಿದ್ದರೂ ಹೊಲಾ ಹೊಲನಾಪಾ" ಅನ್ನುತ್ತ ಕಣ್ಣಂಚಿನೊಳಗ ನೀರು ತರುತ್ತಿದ್ದಳು.

ಆಮೇಲೆ ನಾನು ಊರಿಗೆ ಹೋದಾಗೊಮ್ಮೆ ಮುಂದಿನ ಸಾರಿ ಬಂದಾಗ ಹೊಲ ಬೀಡ್ಸ್ಕೊಂಡ ಬರೋಣ ಅಂತಾ ಹೇಳ್ತಿದ್ದೆ.

ಅಷ್ಟಕ್ಕೆ ಅವ್ವ ತುಂಬಾ ಸಂತೋಷ ಪಡೋಳು. ನನ್ನ ಅವ್ವನ ಆ ನಗುವನ್ನು ಹಾಗೇ ನಿರಂತರವಾಗಿರಸುವುದಕ್ಕಾಗಿ ನಾನು ನನ್ನ ಶಕ್ತಿಮೀರಿ ಉಳಿಸಿದ ಹಣ ಬ್ಯಾಂಕ್ ಅಕೌಂಟಿನಲ್ಲಿ 30000 ರೂಪಾಯಿ ತೋರಿಸಿತ್ತಿತ್ತು.

ಆ ಹೊಲನಾ ನಮ್ಮ ತಂಗಿ ಮದುವೆಗೆ ಅಂತಾ ನಮ್ಮ ಕಾಕಾ ತನ್ನ ಕಾಕಾನಿಗೆ ಹತ್ತು ಸಾವಿರು ರೂಪಾಯಿಗೆ ಉಣ್ಣಾಕ್ ಹಾಕಿದ್ದ. ಐದಾರು ವರ್ಷದಲ್ಲಿ ಬಡ್ಡಿ, ಚಕ್ರ ಬಡ್ಡಿ ಸೇರಿ ಮೊವ್ವತ್ತು ಸಾವಿರು ಆಗಿತ್ತು. ದಿನಾಲೂ ಕುಡಿಯೊ ನಮ್ಮ ಅಪ್ಪನಿಗೆ ಅಷ್ಟು ಹಣಕೊಟ್ಟು ಹೊಲ ತನ್ನದಾಗಿಸಿಕೊಳ್ಳೊ ವಿಚಾರಾದ್ರೂ ಹೆಂಗ್ ಬಂದಿತ್ತು.

ನಮ್ಮ ಅಪ್ಪ ಶುದ್ಧ ಕುಡಕ. ಅವನು ತಾನು ದುಡಿದಿದ್ದನ್ನು ಕುಡಿದು ಹಾಳು ಮಾಡೋದು ಅಲ್ಲದೆ ಅವ್ವನ ಕೂಲಿಯ ಹಣವನ್ನು ಕೂಡಾ ಕುಡಿದು ಹಾಳು ಮಾಡುತ್ತಿದ್ದ. ಆಗ ಅವ್ವ ಒಲೆ ಮುಂದೆ ಕುಳಿತು ಕಣ್ಣೀರು ಹಾಕುದನ್ನು ನಾ ಎಷ್ಟೊ ಬಾರಿ ನೋಡಿದ್ದೇನೆ.

ನಾನು ದುಡಿಯೋಕೆ ಶುರು ಮಾಡಿದ ಮೇಲೆ ಅವ್ವನ ಕಣ್ಣಲ್ಲಿ ಒಮ್ಮೆಯೂ ಒಂದು ಹನಿ ನೀರು ಬರಬಾರ್ದು ಹಾಗೇ ನೋಡ್ಕಬೇಕು ಅಂತಾ ಅನ್ನೊಂಡಿದ್ದು ನೆನಪಾದಗ ನನ್ನ ಕಣ್ಣೀರು ಕಪಾಳ ಮೇಲೆ ಜಿನಗುತ್ತಿತ್ತು.

ನಾನು ಕೆಲಸಕ್ಕೆ ಸೇರಿಕೊಂಡ ವಿಷಯ ತಿಳಿದ ತಕ್ಷಣವೇ ಅವ್ವ ನನಗೆ ಹೇಳಿದ್ದು."ತಮ್ಮಾ ಲಗೂನ್ ಹೊಲ ಬಿಡ್ಸಕೊಳ್ಳನಾಪಾ ಅಂತ್.." ಹೀಗೆ ನೆನಪಿನ ಸುರಳಿ ಬಿಚ್ಚುತ್ತಾ ಹೋಗುತ್ತಿದ್ದಂತೆ ಟ್ರೈನ್ ಒಮ್ಮೆ ಗಕ್ಕನೆ ನಿಂತಿತು;ನೆನಪಿನ ಸುರಳಿ ಕೂಡಾ ಕತ್ತರಿಸಿತು. ಆದರೆ ಕಣ್ಣೀರು ಮಾತ್ರ ಹಾಗೇ ಜಿನಗುತ್ತಿತ್ತು. ಹೊರಗೆ ನೋಡಿದ್ರೆ ಬೆಂಗಳೂರು ಎಂಬ ಬೋರ್ಡ್.
****
ಟ್ರೈನ್ ಇಳಿದು ಬೆಳಗಾವಿಗೆ ಹೋಗೊ ಬಸ್ ಹತ್ತಿದೆ. ಆಗಲೂ ನನ್ನ ಕಣ್ ಮುಂದೆ ಬರುವ ಚಿತ್ರಗಳ ನನ್ನ ಅವ್ವ ಮತ್ತು ಆ ಹೊಲ. ಆಗಲೇ ಹೊರಗೆ ಸಣ್ಣಗೆ ಕತ್ತಲು ಆವರಿಸುತಿತ್ತು. ಬೆಂಗಳೂರು ದಾಟಿ ಬಸ್ಸು ತುಮಕೂರನ್ನು ಮುಂದೆ ಮಾಡಿಕೊಂಡು ಒಂದೆ ಸವನೇ ನುಣಪಾದ ರಸ್ತೆ ಮೇಲೆ ಏದಿರುಸಿರು ಬೀಡದಂತೆ ಓಡುತ್ತಿತ್ತು. ನಾನು ಕಣ್ಣೀರ ನಡುವೆಯೂ ನಿದ್ದೆಗೆ ಪ್ರಯತ್ನಿಸಿದೆ. ಆದ್ರೆ ನಿದ್ದೆ ಬರಲಿಲ್ಲ.

ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಸ್ ನಿಂತಾಗ ಸೂರ್ಯ ತನ್ನ ಮುಖ ಜಗತ್ತಿಗೆ ತೋರಿಸುತ್ತಿದ್ದ. ಅದೇ ಸಮಯಕ್ಕೆ ನನ್ನ ಊರು ತಲಪಲು ಟ್ರೈನ್‌ ಇತ್ತು. ನಾನು ರೈಲು ನಿಲ್ದಾಣದತ್ತ ಧಾವಿಸಿದೆ. ಟ್ರೈನ್ ಹತ್ತಿ ಕುಳಿತುಕೊಂಡಾಗಲೇ, ಮತ್ತ ಅದೆ ಅವ್ವನ ಕುಂಕಮವಿಟ್ಟ ತೇಜೊವರ್ಣ ಮುಖ ಮತ್ತು ಕಪ್ಪು ಮಣ್ಣಿನ ಆ ಹೊಲ.

ರೈಲು ಇಳಿದು ಮನೆ ಹಾದಿ ಹಿಡಿದೆ. ಎದುರಾದವರು ನನ್ನ ಅವ್ವನ ಗುಣಗಾನ ಮಾಡಿ ಮುಂದೆ ಹೋಗುತ್ತಿದ್ದರು. ಆಗ ದುಃಖ ಉಮ್ಮಳಿಸುತ್ತಿತ್ತು. ಸರಕಾರಿ ಧನಸಹಾಯದಲ್ಲಿ ಕಟ್ಟಿಸಿದ್ದ ಆ ನನ್ನ ಮನೆಯ ಮುಂದೆ ಕುಂಕಮ ಹೊತ್ತ ಅವ್ವನ ಮುಖ ನಿರ್ವಣವಾಗಿದ್ದನ್ನು ನೋಡಿದಾಗಲೇ ಅಲ್ಲಿವರೆಗೂ ಮಡಗಟ್ಟಿದ್ದ ನನ್ನ ದುಃಖದ ಕಣ್ಣೀರು ಅಣೆಕಟ್ಟು ಒಡೆದು ಭೋರ್ಗರೆಯಿತು.
***
ಅವ್ವನ ಎಲ್ಲ ಅಂತಿಮ ಕ್ರಿಯೆಗಳನ್ನು ಮುಗಿಸಿ ಮರಳಿ ಚೆನ್ನೈಗೆ ಬರಲು ಬಸ್ ಹತ್ತಿ ಹೊರಟೆ. ಸ್ವಲ್ಪ ಊರು ದಾಟಿದ ನಂತರ ಎದುರಾದ ಕಪ್ಪು ಹೊಲದಲ್ಲಿ ಅವ್ವ ಜೋಳದ ರಾಶಿ ಮಾಡಿದಂತೆ ಅಣಕಿಸಿದಂತಾಯಿತು.

9 ಕಾಮೆಂಟ್‌ಗಳು:

NATESH ಹೇಳಿದರು...

ಕಥೆ ಚೆನ್ನಾಗಿದೇರಿ.....ಆದ್ರೆ ಅಲ್ಲಲ್ಲಿ ಸ್ವಲ್ಪ ತಪ್ಪು ಇದೆ....ಉದಾ;ಸೋದರ ಮಾವ...ಅನ್ನೋದಕ್ಕೆ ಸಹೋದರ ಮಾವ!

NATESH ಹೇಳಿದರು...

ಕಥೆ ಚೆನ್ನಾಗಿದೇರಿ.....ಆದ್ರೆ ಅಲ್ಲಲ್ಲಿ ಸ್ವಲ್ಪ ತಪ್ಪು ಇದೆ....ಉದಾ;ಸೋದರ ಮಾವ...ಅನ್ನೋದಕ್ಕೆ ಸಹೋದರ ಮಾವ!

ಅನಾಮಧೇಯ ಹೇಳಿದರು...

ಕಥೆ ಚೆನ್ನಾಗಿದೇರಿ.....ಆದ್ರೆ ಅಲ್ಲಲ್ಲಿ ಸ್ವಲ್ಪ ತಪ್ಪು ಇದೆ....ಉದಾ;ಸೋದರ ಮಾವ...ಅನ್ನೋದಕ್ಕೆ ಸಹೋದರ ಮಾವ!

ಅನಾಮಧೇಯ ಹೇಳಿದರು...

its a nice story...kind of sad but its a true picturisation of situations..love towards a hardworking mother...n her dedication...it was gud

angela joy

Anu ಹೇಳಿದರು...

your blog attracts me. according to poem and stories the pictures were used. i thing thats nice. anyway you done good job. some words were irritating me when i was reading.

ಅನಾಮಧೇಯ ಹೇಳಿದರು...

ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ. good attempt at capturing your emotions and giving it a shape.

Malathi S

Anu ಹೇಳಿದರು...

Its good story yaar. really touchable. i feel its true story. anyway i expect more story from you. be in writing.

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

hi Revan.. This is not true story.. This just my immagenry only

DVK ಹೇಳಿದರು...

enri sir aramayidira. nimm lekhan odide. channagide. nimma kastad dinagallannu nanu tumba hattiradinda nodiddene. nanu yaaru gottayita. hasiru kranti bittu nivu usha kiranakke seridag nannu hasiru kratige bandidde.