Monday, June 19, 2017

ಹುಡುಗನೊಬ್ಬನ ಗಜಲ್‌ಗಳು: ಜೀವ ಉಳಿಸಿದವಳು ಮಳೆಯಲ್ಲಿ ಕರಗಿದಳು

- ಪ್ರದ್ಯುಮ್ನ
ಈ ಮೋಡಗಳೇ ಅಡ್ನಾಡಿ. ಅದರಲ್ಲೂ ಬಯಲುಸೀಮೆಗೆ ಬಂದರೆ ಅವುಗಳದ್ದು ಚಿತ್ತ ಚಾಂಚಲ್ಯ. ಒಂದಿಷ್ಟು ಗಾಳಿ ಸೋಕಿದರೂ ಸಾಕು ಸಲುಗೆ ಬೆಳೆಸಿ ಕೈ ಕೊಡುತ್ತವೆ. ಬಿಸಿಲಿಗೆ ಬೆಂಡಾಗಿ ಬಾಯ್ತೆರೆದ ಭೂಮಿಗೆ ದೂರದಿಂದಲೇ ಆಸೆ ತೋರಿಸಿ ಕಾಲು ಕೀಳುವ ಈ ಮೋಡಗಳೂ ಹಳೆ ಗೆಳತಿಯ ನೆನಪಿನ ಹಾಗೆ.
ವಸಂತಕಾಲದಲ್ಲಿ ಸುರಿಯೋ ಅಡ್ಡಾದಿಡ್ಡಿ ಮಳೆಗೆ ಬಿರುಸು, ದಾಢಸಿತನ. ಈ ಮಳೆಗಾಲದ ಮಳೆ ಒಮ್ಮಮ್ಮೆ ಕೋಮಲೆ, ಮತ್ತೊಮ್ಮೆ ಸುಕೋಮಲೆ. ತಂಪಾದ ವಾತಾವರಣದಲ್ಲಿ ಆಗಾಗ ನಾಲ್ಕಾರು ಹನಿಗಳನ್ನು ಉದುರಿಸುತ್ತ, ಚೆಲ್ಲಾಟವಾಡುವ ನೈಸರ್ಗಿಕದತ್ತ ಸ್ವಭಾವ. ಮತ್ತೊಮ್ಮೆ ಕೋಪಗೊಂಡ ಪ್ರೇಯಸಿಯ ಹಾಗೆ ಭೋರ್ಗರೆಯುವ ಪ್ರತಾಪ-ಪ್ರಲಾಪ. ಈ ಕೋಪಕ್ಕೆ ಹಳೆಯ ಮಣ್ಣಿನ ಮನೆಗಳೆಲ್ಲ ಚಿಂದಿ ಚಿಂದಿ; ಓಣಿ ತುಂಬ ಕೆಸರು. ಸಂಜೆ ಸೂರ್ಯಾಸ್ತವೂ ಡಲ್ಲು. ಹೊರಗೆ ಕಾಲಿಡಲು ಆಗದಂತೆ ಮಾಡುವ ಈ ಮಳೆಗೆ ಒಂಚೂರೂ ಕರುಣೆ ಇಲ್ಲ ಎಂದೆನಿಸಿತು. ತನ್ನೆಲ್ಲ ಸಿಟ್ಟು ಸೆಡವನ್ನು ಮನಸೋಯಿಚ್ಛೆ ತೋರುವ ಮಳೆಗಾಲ ಅನೇಕರಲ್ಲಿ ಭಾವನೆಗಳಿಗೆ ಮರಿ ಹಾಕುವ ಸಕಾಲ ಎಂದು ಮನದೊಳಗೇ ಹೀಗೆ ಏನೇನೊ ಲೆಕ್ಕ ಹಾಕುತ್ತ ಕುಳಿತಿದ್ದ ಆತನಿಗೆ, ಕಿಟಕಿಯ ಮಾಡಿನಿಂದ ತೊಟ್ಟಿಕ್ಕುತ್ತಿದ್ದ ಹನಿಗಳು ಆಗ ತಾನೇ ಸುರಿದು ಮಾಯವಾ
ದ ಮಳೆಗೆ ಸಾಕ್ಷಿ ಹೇಳುತ್ತಿದ್ದವು. ಮಲೆನಾಡಿನಲ್ಲಿ ಹೇಗೋ ಗೊತ್ತಿಲ್ಲ. ಆದರೆ, ಬಯಲುಸೀಮೆಯಲ್ಲಿ ಮಳೆಯ ಸ್ವರೂಪವೇ ಚಿತ್ರ-ವಿಚಿತ್ರ. ಬಟಾಬಯಲಾಗುವ ಆಕಾಶದಲ್ಲಿ ಒಮ್ಮಿಲೇ ಕಪ್ಪು ಮೋಡಗಳು ದಂಡೆತ್ತಿ ಬಂದು ಇನ್ನೇನು ಜೋರು ಮಳೆ ಬೀಳುತ್ತದೆ ಎನ್ನುವಷ್ಟರಲ್ಲೇ, ಗಾಳಿಯೊಂದಿಗೆ ಮಾಯವಾಗುತ್ತವೆ. ಅದರ ಹಿಂದೆಯೇ ಬಿಳಿ ಮೋಡಗಳು ಆಕಾಶದಲ್ಲಿ ತೇಲುತ್ತವೆ. ಒಂದೇ ಕ್ಷಣದಲ್ಲಿ ತಂಪಾದ ವಾತಾವರಣ ತುಸು ಬೆಚ್ಚನೆಯ ಜಾಯಮಾನಕ್ಕೆ ಬದಲಾಗುತ್ತದೆ. ಮನಸ್ಸು ಹಾಗೆ ಅಲ್ಲವೇ? ಯಾವುದೋ ಸಿಹಿಯಾದ ನೆನಪಿನೊಂದಿಗೆ ಜೋಕಾಲಿ ಜೀಕುತ್ತಿರುವಾಗಲೇ ಅದರ ಹಿಂದೆಯೇ ಅಪ್ಪಳಿಸುವ ದುರಂತದ ನೆನಪಿನ ದಂಡು ನಮ್ಮನ್ನು ಭಂಗಗೊಳಿಸುತ್ತದೆ.
ಕಿಟಕಿಯಿಂದ ಆಚೆ ನೋಡುತ್ತಿದ್ದ ಅವನಿಗೆ, ಮಕ್ಕಳಿಬ್ಬರು ರಸ್ತೆಯಲ್ಲಿನ ಹೊಂಡದಲ್ಲಿ ನಿಂತಿದ್ದ ನೀರಿನಲ್ಲಿ ಕಾಗದದ ದೋಣಿ ತೇಲಿಬಿಟ್ಟು ಚಪ್ಪಾಳೆ ಹೊಡೆಯುತ್ತಿದ್ದದ್ದು ಕಾಣಿಸಿತು. ಅವರಿಗೆ ಎದುರಾಗಿರುವ ಬಯಲಿನಿಂದ ನಾಲ್ಕಾರು ಎಮ್ಮೆಗಳನ್ನು ಮೇಯಿಸಿಕೊಂಡು ಬರುತ್ತಿದ್ದ ಇಬ್ಬರು ಹುಡುಗರ ತಲೆ ಮೇಲೂ ಮಳೆ ಆಸರೆಗಾಗಿ ತಟ್ಟಿನ ಚೀಲಗಳಿದ್ದವು. ನೆನೆದಿದ್ದರಿಂದ ಅವುಗಳಿಂದಲೂ ತೊಟ್ಟಿಕ್ಕುತ್ತಿದ್ದ ಹನಿಗಳು ಅವರಿಬ್ಬರ ಕಾಲುಗಳಿಂದ ಇಳಿದು ಪಾದಕ್ಕೆ ಅಂಟಿ ಕೊನೆಯಾಗುತ್ತಿದ್ದವು... ಹೀಗೆ ಸೂಕ್ಷ್ಮವಾಗಿ ಅದನ್ನೆಲ್ಲ ಗಮನಿಸುತ್ತಿದ್ದ ಆತನ ಮನದೊಳಗೆ ಬೇಡ ಬೇಡ ಎಂದರೂ ಆ ಘಟನೆ ಮತ್ತೆ ಮತ್ತೆ ಇಣಕುತ್ತಿತ್ತು.
ಅದನ್ನು ನೆನಪಿಸಿಕೊಂಡರೇ ಈಗಲೂ ಅವನ ಮೈ ಬೆವರುತ್ತದೆ. ಆ ಶಾಕ್‌ನಿಂದ ಆತ ಹೊರಗೆ ಬರಲು ಸುಮಾರು ದಿನಗಳನ್ನೇ ತೆಗೆದುಕೊಂಡಿದ್ದ. ಆದರೂ ಪ್ರತಿ ಮಳೆಗಾಲದಲ್ಲಿ ಆ ಘಟನೆ ಆತನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ತನ್ನಿಂದಾಗಿಯೇ ತನ್ನನ್ನು ಇನ್ನಿಲ್ಲದಂತೆ ಪ್ರೀತಿಸುತ್ತಿದ್ದ ಜೀವವೊಂದನ್ನು ಬಲಿಕೊಡಬೇಕಾಯಿತು ಎಂದು ತಪ್ಪಿತಸ್ಥ ಭಾವದಲ್ಲಿರುತ್ತಾನೆ. ಅವರಿಬ್ಬರು ಪ್ರೀತಿಸಿ ಮದ್ವೆಯಾದವರಲ್ಲ. ಆದರೆ, ಮದ್ವೆಯಾಗಿ ಹುಚ್ಚರಂತೆ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದವರು. ಆಕೆಯೇನೂ ತುಂಬ ಓದಿದವಳಲ್ಲ. ತನ್ನೂರಲ್ಲಿದ್ದ ಹೈಸ್ಕೂಲ್‌ವರೆಗೆ ಮಾತ್ರ ಓದಿದ್ದಳು. ಆದರೆ ಅವಳಲ್ಲಿದ್ದ ಪ್ರೌಢಿಮೆ ಒಮ್ಮಮ್ಮೆ ಇವನಿಗೆ ಅಚ್ಚರಿ ಮೂಡಿಸುತ್ತಿತ್ತು. ಡಿಗ್ರಿ ಓದಿ, ಹೈಸ್ಕೂಲ್ ಟೀಚರ್ ಆಗಿದ್ದರೂ ಆಕಿಗಿರುವ ಜಾಣ್ಮೆ ತನ್ನಲ್ಲಿಲ್ಲ ಎಂದು ಅದೆಷ್ಟೋ ಬಾರಿ ಅಂದುಕೊಂಡಿದ್ದ. ಅವರಿಬ್ಬರ ಪುಟ್ಟ ಸಂಸಾರ ನಿಜಕ್ಕೂ ಹೊಟ್ಟೆಕಿಚ್ಚು ತರಿಸುವಂತಿತ್ತು.
ವಂಸತದ ಮಳೆ
ನಮ್ಮ ಈ ಪಲ್ಲಕ್ಕಿಯಲ್ಲಿ
ನಿನ್ನ ಮೆಲು ಪಿಸುಮಾತುಗಳು
ಜಪಾನಿನ ಹಾಯ್ಕುನಂತಿತ್ತು ಅವರಿಬ್ಬರ ಸಾಂಗತ್ಯ. ಒಬ್ಬರಿಗೊಬ್ಬರು ಎಂದೂ ಹಂಗಿಸಿಕೊಂಡವರಲ್ಲ; ಹೀಯಾಳಿಸಿಕೊಂಡವರಲ್ಲ. ಹಾಗೆಂದ ಮಾತ್ರಕ್ಕೆ ಆಕೆಯೇನೂ ಅಪೂರ್ವ ಸುಂದರಿಯಲ್ಲ; ಲಕ್ಷಣವಂತೆ. ಗುಣವಂತೆ. ಅವನೂ ಅಷ್ಟೇ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನ್ನುವ ನಿಲುವು. ಅವರಿಬ್ಬರ ನಡುವಿನ ಸಾಮರಸ್ಯ, ಒಲವು, ಚೆಲುವು, ಪ್ರೀತಿ, ಬೆಸುಗೆ, ಬಂಧನ ಆ ಚಿಕ್ಕ ಹಳ್ಳಿಯಲ್ಲಿ ಮನೆ ಮಾತಾಗಿತ್ತು. ಇದು ಅವರಿಗೂ ಆಗಾಗ ಕಿವಿಗೆ ಬೀಳುತ್ತಿತ್ತು. ಆದರೆ, ಅದರಿಂದೇನೂ ಉಬ್ಬಿ ಹೋದವರಲ್ಲ.
ಇಂಥದೊಂದು ಅಪರೂಪದ ಪ್ರೇಮಗೀತೆಗೆ ಶೋಕದ ಭಾವ ತುಂಬಲು ಆ ವಿಧಿ ಕಾದು ಕುಳಿತಿತ್ತು ಕಾಣುತ್ತದೆ. ಅಂದು ಹಾಗೆಯೇ; ಮಳೆ ಬರುವ ಯಾವ ಮುನ್ಸೂಚನೆಯೂ ಇರಲಿಲ್ಲ. ಆಕಾಶದಲ್ಲಿ ಬಿಳಿ ಮೋಡಗಳ ಕಾರುಬಾರು ಜೋರಾಗಿತ್ತು. ಆ ಮೋಡಗಳೆಲ್ಲ ನಾನಾ ಆಕಾರದಲ್ಲಿ ರಚಿತಗೊಂಡು ಊಹೆಗೆ ತಕ್ಕಂತೆ ಬದಲಾಗುತ್ತಿದ್ದವು. ರಜೆ ದಿನವಾದ್ದರಿಂದ ಆತ ಮನೆಯ ಅಂಗಳದಲ್ಲಿ ನಿಂತ ಬಿಳಿ ಮೋಡಗಳ ಚಿತ್ತಾಕರ್ಷಕ ವೈಚಿತ್ರ್ಯವನ್ನು ನೋಡುತ್ತ ನಿಂತಿದ್ದ. ‘‘ಮಳೆ ಬರುವ ಲಕ್ಷಣಗಳಿಲ್ಲ. ಊರ ಹೊರಗಿನ ದೇವಸ್ಥಾನಕ್ಕೆ ಹೋಗಿ ಬರೋಣ,’’ ಎಂದು ಆಕೆ ಮನೆಯ ಹೊಸ್ತಿಲಲ್ಲಿ ನಿಂತು ಕೇಳಿದಳು. ಆಕಾಶ ನೋಡುತ್ತಿದ್ದವನು ಹಾಗೆಯೇ, ‘‘ಆಯ್ತು ಹೋಗೋಣ, ವಾತಾವರಣವೂ ಚೆನ್ನಾಗಿದೆ,’’ ಎಂದ.
ಅವರಿಬ್ಬರೂ ಆಗಾಗ ಆ ದೇವಸ್ಥಾನಕ್ಕೆ ಹೋಗುತ್ತಿದ್ದರು. ದೇವಸ್ಥಾನದ ಹತ್ತಿರದಲ್ಲಿ ಒಂದು ಸಣ್ಣ ಹಳ್ಳ. ಬೇಸಿಗೆಯಲ್ಲಿ ಅದು ಹೊಲಗಳಿಗೆ ಹೋಗಲು ಕಾಲು ದಾರಿಯಾಗಿರುತ್ತಿತ್ತು. ಮಳೆಗಾಲದಲ್ಲಿ ಒಂದಿಷ್ಟು ನೀರು ಹರಿದು, ಹಳ್ಳದ ಸ್ವರೂಪ ಪಡೆದುಕೊಳ್ಳುತ್ತಿತ್ತು. ಅವರಿಬ್ಬರೂ ದೇವಸ್ಥಾನಕ್ಕೆ ಹೋದಾಗಲೆಲ್ಲ ಆ ಹಳ್ಳದ ಗುಂಟ ಸುಮಾರು ದೂರ ಕ್ರಮಿಸಿ, ವಾಪಸ್ಸು ಬಂದು, ದೇಗುಲದ ಪಕ್ಕದಲ್ಲಿರುವ ಹಳೆಯ ಆಲದ ಮರ ಬುಡದಲ್ಲಿ ಕುಳಿತು ಮನೆಗೆ ಮರಳುತ್ತಿದ್ದರು.
ಅವರಿಬ್ಬರು ಜತೆಗೂಡಿ ದೇವಸ್ಥಾನಕ್ಕೆ ಹೋಗುವ ಹೊತ್ತಿನಲ್ಲಿ ಆಕಾಶದಲ್ಲಿ ಬಿಳಿ ಮೋಡಗಳು ಕರಗಿ, ಕಪ್ಪು ಮೋಡಗಳು ದಂಡೆತ್ತಿ ಬರುತ್ತಿದ್ದವು. ಕೂಗಳತೆ ದೂರದಲ್ಲಿದ್ದ ದೇವಸ್ಥಾನ ತಲುಪುವ ಹೊತ್ತಿಗೆ ದಪ್ಪ ದಪ್ಪ ಹನಿಗಳು ಮುಖದ ಮೇಲೆ ರಪ್ಪಂತ ಬಿದ್ದವು. ಇದು ಧಾರಾಕಾರವಾಗಿ ಸುರಿಯುವ ಮಳೆ ಎಂಬ ಮುನ್ಸೂಚನೆ ದೊರೆಯಿತು. ದೇವಸ್ಥಾನ ಸೇರಿಕೊಳ್ಳುವ ಹೊತ್ತಿಗೆ ತೋಯ್ದು ತೊಪ್ಪೆಯಾಗುವುದು ಖಂಡಿತ ಎಂಬುದು ಅರಿವಾಗುತ್ತಲೇ ಅಲ್ಲೇ ಪಕ್ಕದಲ್ಲಿದ್ದ ಆ ಆಲದ ಮರದ ಬುಡಕ್ಕೆ ಬಂದು ನಿಂತರು. ಮಳೆ ಭೋರ್ಗರೆಯಲಾರಂಭಿಸಿತು. ಸುಮಾರು ಹೊತ್ತು ಸುರಿದ ಮಳೆ ಒಂದಿಷ್ಟು ನಿತ್ರಾಣಗೊಳ್ಳುತ್ತಿದ್ದಂತೆ, ಆಕಾಶದಲ್ಲಿ ಮೋಡಗಳ ಚಲನೆ ಹೆಚ್ಚಾಯಿತು. ಗಾಳಿಯೂ ವೇಗ ಪಡೆದುಕೊಂಡಿತ್ತು. ಅವರು ನಿಂತಿದ್ದ ವಿರುದ್ಧ ದಿಕ್ಕಿನಲ್ಲೇ ಸಿಡಿಲು ಸಂಚಾರವಾಗುತ್ತಲೇ ಇತ್ತು. ಬೆಳ್ಳಂ ಬೆಳಗಿನಂತಿದ್ದ ವಾತಾವರಣ ಪೂರ್ತಿ ಮಬ್ಬುಗತ್ತಲಿನೊಳಗೇ ಲೀನವಾಯಿತು. ಹತ್ತಿರದಲ್ಲಿದ್ದ  ಕಾಲು ದಾರಿಯಂಥ ಹಳ್ಳದಲ್ಲಿ ಒಂದಿಷ್ಟು ನೀರು ಸರಸರನೇ ಓಡುತ್ತಿತ್ತು. ಅದರ ಜತೆಗೆ ನಾಯಿ ಮರಿ ನೀರಿನ ಚಲನೆಯಿಂದ ಹೊರ ಬರದೆ ಅದರೊಂದಿಗೆ ಜಾರಿಕೊಂಡು ಹೋಗುತ್ತಿತ್ತು. ನಾಯಿಮರಿ ಕಂಡ ಅವಳು, ‘‘ಅಯ್ಯ ನಾಯಿ ಮರಿ ಸತ್ತೇ ಹೋಗ್ತದೇರಿ, ಆ ನೀರಿನ ರಭಸಕ್ಕೆ. ಅದನ್ನ ಎತ್ತಿಕೊಂಡು ಬನ್ನಿ,’’ ಎಂದಳು. ಆ ಸಣ್ಣ ಹಳ್ಳದಲ್ಲಿ ಹರಿಯುತ್ತಿದ್ದ ನೀರಿಗೆ ಅಂಥ ರಭಸತನವೇನೂ ಇರಲಿಲ್ಲ. ಆದರೆ, ಅದು ನಾಯಿಮರಿಯ ಶಕ್ತಿಗೂ ಮೀರಿತ್ತು. ಆದರೆ, ಇತ್ತ ಆಕಾಶ ತುಂಬ ಗುಡುಗಿನ ಆರ್ಭಟ; ಆಗಾಗ ಸಿಡಿಲಿನ ಸಂಚಾರ. ಇನ್ನೂ ಈ ಮರದ ಬುಡದಲ್ಲಿ ನಿಂತರೆ ಅಪಾಯ ತಪ್ಪಿದ್ದಲ್ಲ, ಹೇಗಿದ್ದರೂ ನೆನೆದುಕೊಂಡಾಗಿದೆ, ಮಳೆಯೂ ಸ್ವಲ್ಪ ನಿತ್ರಾಣಗೊಂಡಿದೆ. ಓಡೋಡಿ ದೇವಸ್ಥಾನ ಸೇರಿಕೊಳ್ಳುವುದು ಸೂಕ್ತ ಎಂದು ಲೆಕ್ಕಾಚಾರ ಹಾಕುತ್ತಿದ್ದ ಆತನಿಗೆ, ನಾಯಿಮರಿಯನ್ನು ಹಾಗೇ ಬಿಟ್ಟು ಹೋಗುವುದಕ್ಕೆ ಮನಸ್ಸು ಬರಲಿಲ್ಲ. ಹೆಂಡತಿಗಿದ್ದ ಕರುಣೆಯ ಭಾವ ಗೊತ್ತಿದ್ದ ಆತ, ಆಕೆಯ ಮಾತನ್ನು ತೆಗೆದು ಹಾಕುವ ಸ್ಥಿತಿಯಲ್ಲೂ ಇರಲಿಲ್ಲ. ಆದರೆ, ಆತನಿಗೇನು ಗೊತ್ತಿತ್ತು;  ನಾಯಿ ಜೀವ ಉಳಿಸಲು ಹೋದವನಿಗೆ ತಾನು ಏನು ಕಳೆದುಕೊಳ್ಳಬಲ್ಲೆ ಎಂಬುದು?
ಬೀಸುತ್ತಿದ್ದ ಗಾಳಿಗೆ ಇದಿರಾಗಿ ಓಡಿ ಹೋದ ಅವನು, ನೀರಿನೊಂದಿಗೆ ಹರಿದುಕೊಂಡು ಹೋಗುತ್ತಿದ್ದ ನಾಯಿ ಮರಿ ಎತ್ತಿ ಇನ್ನೇನು ಆ ಮರದತ್ತ ಓಡಬೇಕು ಎನ್ನುವಷ್ಟರಲ್ಲಿ, ಕ್ಷಣಾರ್ಧದಲ್ಲಿ ಆತನ ಊಹೆಗೆ ನಿಲುಕದ ಅವಘಡ ನಡದೇ ಹೋಯಿತು. ಮರದ ಬುಡದಲ್ಲಿದ್ದ ಪ್ರೀತಿಯ ಹೆಂಡತಿ ಸುಂದರ ಸಿಡಿಲಿನ ಕ್ರೌರ್ಯಕ್ಕೆ ಬಲಿಯಾಗಿದ್ದಳು. ಆ ಆಲದ ಮರ ಅರ್ಧ ಸುಟ್ಟು ಹೋಗಿತ್ತು. ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿಯೇ ಎಲ್ಲವೂ ಮುಗಿದು ಹೋಗಿತ್ತು.
***
ಈಗ ಅದೇ ನಾಯಿ ಮರಿ ಅವನ ಮನೆಯಲ್ಲಿ ಬೆಳೆದು ದೊಡ್ಡದಾಗಿದೆ. ಅವನು ನಿಧಾನವಾಗಿ ಆ ಶಾಕ್‌ನಿಂದ ಹೊರ ಬಂದಿದ್ದಾನೆ. ಈ ಮಧ್ಯೆ ಐದಾರು ಮಳೆಗಾಲವೂ ಸುರಿದು ಹೋಗಿವೆ. ಆದರೆ, ಪ್ರತಿ ಮಳೆಗಾಲ ಬಂದಾಗ ಆತನಿಗೆ ದುರಂತ ನೆನಪುಗಳು ಬಿಟ್ಟು ಬಿಡದೆ ಕಾಡುತ್ತವೆ. ಹಾಗೆ ಕಾಡಿದಾಗಲೆಲ್ಲ ಆಕೆಯ ಸಮಾಧಿ ಬಳಿ ಹೋಗಿ ತುಸು ಹೊತ್ತು ಧ್ಯಾನಸ್ಥನಾಗುತ್ತಾನೆ. ಯಾವಾಗಲೋ ಓದಿದ, ಜಪಾನಿನ ಬಾಶೋ ಕವಿಯ ಹಾಯ್ಕು ಆ ಸಮಾಧಿ ಬಳಿ ಹೋದಾಗಲೆಲ್ಲ ಆತನಿಗೆ ಗೊತ್ತಿಲ್ಲದ ಹಾಗೆಯೇ ಬಡಬಡಿಸುತ್ತಾನೆ.
ನಾವು ಮತ್ತೆ ಭೇಟಿಯಾಗೋಣ
ಈ ಹೂಬಿಡುವ ಸಮಾಧಿ ಬಳಿ
ಎರಡು ಬಿಳಿ ಪಾತರಗಿತ್ತಿಯಾಗಿ

(ಈ ಲೇಖನ ವಿಜಯ ಕರ್ನಾಟಕದ ಜೂನ್ 18, 2017ರ ಸಂಚಿಕೆಯಲ್ಲಿ ಪ್ರಕಟವಾಗಿದೆ.)

No comments: