ಹೇಗಿದ್ದೀಯಾ ಮುದ್ದು?
ನಿನ್ನನ್ನು ಸೇರಿಕೊಳ್ಳುವ ದಿನಗಳು ಸಮೀಪಿಸುತ್ತಿದ್ದಂತೆ ನನ್ನ ಮನಸ್ಸು, ಹೃದಯ ಉಲ್ಲಾಸದಿಂದ ತುಂಬಿ ತುಳುಕುತ್ತಿದೆ. ಉಳಿದಿರುವ ಒಂದು ವಾರ ಕೂಡಾ ಯುಗಯುಗದಂತೆ ಭಾಸವಾಗುತ್ತಿದೆ ಚಿನ್ನು. ನನ್ನ ತರಬೇತಿ ಮುಗಿದಿದೆ. ಈಗೇನಿದ್ದರೂ ಇಡೀ ಕಾಶ್ಮೀರವನ್ನು ಸುತ್ತಾಡಿ ಮರೆಯಲಾಗದ ನೆನಪು, ಅನುಭವವನ್ನು ಹೊತ್ತು ತರುವುದು ಅಷ್ಟೇ ನನ್ನ ಕೆಲಸ. ಆದರೂ ನಿನ್ನ ಸಾನ್ನಿಧ್ಯದಲ್ಲಿ ಸಿಗುವ ಸಂತೋಷ ನನಗೆ ಬೇರಲ್ಲೂ ಸಿಗಲ್ಲ ಕಣೋ. ಹಾಂ.... ಹಾಗೆಂದಕ್ಷಣಾ ನಾನು ಖುಷಿಯಿಂದ ಕಾಶ್ಮೀರ ಸುತ್ತುತ್ತಿದ್ದೇನೆ ಎಂದು ಭಾವಿಸಬೇಡ. ನೀನಲ್ಲದ ಭಾವ ನನ್ನ ಸದಾ ಕೊರೆಯತ್ತಲೇ ಇರುತ್ತದೆ. ನಾವಿಬ್ಬರೂ ಸಪ್ತಪದಿ ತುಳಿದ ನಂತರ ಮತ್ತೆ ಕಾಶ್ಮೀರಕ್ಕೆ ಬರೋಣ. ನಿಜವಾಗಲೂ ಕಾಶ್ಮೀರ "ಪ್ರೇಮಕಾಶ್ಮೀರ" ಕಣೋ ಇದು. ಪ್ರೇಮಿಗಳಿಗಾಗಿಯೇ ಭೂಮಿ ಮೇಲೆ ದೇವರು ಸೃಷ್ಟಿಸಿರುವ ಪ್ರೇಮಲೋಕ. ಆದರೂ, ಈ ಕ್ಷಣದಲ್ಲಿ ನೀನು ನನ್ನ ಬಳಿ ಇಲ್ಲ ಎಂಬುದೇ ನನ್ನ ದುಃಖಕ್ಕೆ ಕಾರಣ. ಚಿನ್ನು.. ಸುಮ್ಮನೇ ಏನೇನೋ ಕಲ್ಪಿಸಿಕೊಂಡು ಭಯಭೀತಗೊಳ್ಳಬೇಡ. ನೀನು ಅಂದುಕೊಂಡ ಹಾಗೆ ನಮ್ಮಪ್ಪ ನಮ್ಮಿಬ್ಬರ "ಅಮರಪ್ರೇಮ"ವನ್ನು ಹಾಳು ಮಾಡಲಾರ. ಯಾಕೆಂದರೆ ನಂಗೆ ಗೊತ್ತು... ನಮ್ಮಪ್ಪ ಒರಟನಂತೆ ಕಂಡರೂ ಹೃದಯ ಬಲು ಮೆದು. ಸಮಾಜಕ್ಕೆ ಹೆದರಿ ಜಾತಿ ಬಗ್ಗೆ ಮಾತನಾಡುತ್ತಾನೇ ಹೊರತು ಅವನೇನೂ ಪ್ರೀತಿಯ ಶತ್ರುವಲ್ಲ. ನಿಂಗೆ ಗೊತ್ತಾ...? ನಾನು ನನ್ನ ಅವ್ವನಿಗಿಂತಲೂ ಹೆಚ್ಚು ಹಚ್ಚಿಕೊಂಡಿದ್ದು ಅಪ್ಪನನ್ನೇ. ಆತ ಎಂದೆಂದಿಗೂ ನನ್ನ ಆಸೆ, ಆಕಾಂಕ್ಷೆಗಳನ್ನು ಭಗ್ನಗೊಳಿಸಲಾರ ಮುದ್ದು. ಧೈರ್ಯವಾಗಿರು. ಈ ಜೀವ ಇರುವುದೇ ನಿನಗಾಗಿ. ನನ್ನನ್ನು ನಾನು ಪ್ರೀತಿಸಿಕೊಳ್ಳುವ ಸಾವಿರ ಪಟ್ಟು ಹೆಚ್ಚು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನಮ್ಮಿಬ್ಬರ ಈ ನಿಷ್ಕಲ್ಮಷ ಪ್ರೀತಿಗೆ ಜಾತಿ-ಪಾತಿ ಯಾವ ಲೆಕ್ಕ. ಪ್ರೇಮಿಗಳೆಂದರೇ ಎಲ್ಲ ಲೆಕ್ಕವನ್ನು ಬುಡುಮೇಲು ಮಾಡವವರು ಅಲ್ವಾ...? ಇನ್ನು ಒಂದೇ ಒಂದು ವಾರ. ನಾನು ನಿನ್ನ ತೆಕ್ಕೆಯಲ್ಲಿರುತ್ತೇನೆ. ಅಲ್ಲದೇ, ನೀನೇ ನನಗೆ ಪ್ರಪಂಚ. ನಾನೇ ನಿನಗೆ ಪ್ರಪಂಚ. ಬಾಕೀ ಪ್ರಪಂಚ ಬರೀ ನೆಪ ಮಾತ್ರ. ತಿಳೀತಾ ಕೋತಿ..
-ನಿನ್ನವಳು