ಸೋಮವಾರ, ಜನವರಿ 25, 2021

How to enable Two Step Verification in Telegram? ಟೆಲಿಗ್ರಾಮ್‌ನಲ್ಲಿ ಟು ಸ್ಟೆಪ್‌ ವೆರಿಫಿಕೇಷನ್‌ ಹೇಗೆ?

- ಮಲ್ಲಿಕಾರ್ಜುನ ತಿಪ್ಪಾರ

ಫೇಸ್‌ಬುಕ್‌ ಒಡೆತನದ ವಾಟ್ಸ್‌ಆ್ಯಪ್‌ ಈಗಲೂ ಜಗತ್ತಿನ ಅತ್ಯಂತ ಜನಪ್ರಿಯ ಮೆಸೆಂಜರ್‌ ಆ್ಯಪ್‌ ಎನ್ನುವುದು ನಿರ್ವಿವಾದ. ಆದರೆ, ಯಾವಾಗ ವಾಟ್ಸ್‌ ಆ್ಯಪ್‌ನಲ್ಲಿರುವ ಮಾಹಿತಿಯನ್ನು ಫೇಸ್‌ಬುಕ್‌ ಜತೆ ಹಂಚಿಕೊಳ್ಳಬೇಕು ಎಂಬ ನೀತಿಯನ್ನು ತರುವುದಾಗಿ ಫೇಸ್‌ಬುಕ್‌ ಹೇಳಿತೋ ಆಗ  ಬಳಕೆದಾರರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಪರಿಣಾಮ, ಫೇಸ್‌ಬುಕ್‌ ವಾಟ್ಸ್‌ಆ್ಯಪ್‌ ಪ್ರೈವೆಸಿ ಪಾಲಿಸಿಯನ್ನು ಒಂದಿಷ್ಟು ಕಾಲ ಮುಂದೂಡಿದೆ. ಏತನ್ಮಧ್ಯೆ, ಸಿಗ್ನಲ್‌ ಮತ್ತು ಟೆಲಿಗ್ರಾಮ್‌ನಂಥ ಪರ್ಯಾಯ ಮೆಸೆಂಜರ್‌ ಆ್ಯಪ್‌ಗಳ ಬಗ್ಗೆ ಜನರು ಹೆಚ್ಚೆಚ್ಚು ಮೋಹ ಬೆಳೆಸಿಕೊಳ್ಳುತ್ತಿದ್ದಾರೆ.  ಸದ್ಯ 56 ಲಕ್ಷ ಕ್ಕೂ ಅಧಿಕ ಟೆಲಿಗ್ರಾಮ್‌ ಆ್ಯಪ್‌ ಡೌನ್‌ಲೋಡ್‌ ಆಗಿದ್ದರೆ, ಸಿಗ್ನಲ್‌ನ ಈ ಪ್ರಮಾಣ 75 ಲಕ್ಷ ಕ್ಕೇರಿಕೆಯಾಗಿದೆ. ಇದೆಲ್ಲವೂ ವಾಟ್ಸ್‌ಆ್ಯಪ್‌ಗೆ ಪರ್ಯಾಯವಾಗಿ ಜನರು ಕಂಡುಕೊಳ್ಳುತ್ತಿರುವ ಡಿಜಿಟಲ್‌ ದಾರಿಗಳಾಗಿವೆ.

ವಾಟ್ಸ್‌ಆ್ಯಪ್‌ ಪ್ರೈವೆಸಿ ಪಾಲಿಸಿ ಘೋಷಣೆ ಬಳಿಕ ಸಿಗ್ನಲ್‌ ಮತ್ತು ಟೆಲಿಗ್ರಾಮ್‌ಗೆ ಸಿಕ್ಕಾಪಟ್ಟೆ ಬಳಕೆದಾರರು ಹೆಚ್ಚುತ್ತಿರುವ ಸಂಗತಿಗಳು ಈಗ ಗುಟ್ಟಾಗಿ ಉಳಿದಿಲ್ಲ. ಹಾಗೆಂದಮಾತ್ರಕ್ಕೆ ಈ ಎರಡೂ ಆ್ಯಪ್‌ಗಳು ಗರಿಷ್ಠ ಸುರಕ್ಷಿತವಾಗಿವೆಯೇ? ಖಂಡಿತ ಇಲ್ಲ. ಇಲ್ಲೂಒಂದಿಷ್ಟು ಆತಂಕಗಳಿವೆ. ಆದರೆ, ವಾಟ್ಸ್‌ಆ್ಯಪ್‌ನ ಹೊಸ ಪ್ರೈವೆಸಿ ಪಾಲಿಸಿಯಷ್ಟು (ಈಗ ಮುಂದೂಡಲಾಗಿದೆ) ಆತಂಕ­ಕಾರಿಯಲ್ಲ! ಇದು ಒಂದು ಬಾಜುವಿನ ಚರ್ಚೆ; ಮತ್ತೊಂದು ಬಾಜು ನೋಡುವುದಾದರೆ, ಟೆಲಿಗ್ರಾಮ್‌ ಅನ್ನು ಅತ್ಯಂತ ಸುರಕ್ಷಿತವಾಗಿ ಬಳಸುವುದು ಹೇಗೆ ಪ್ರಶ್ನೆ ಮೂಡುತ್ತದೆ. ನಿಮ್ಮ ಮಾಹಿತಿಯನ್ನು ಬೇರೆಯವರು ನೋಡದಂತೆ ಅಥವಾ ನಿಮ್ಮ ಖಾತೆಯನ್ನು ಹೆಚ್ಚು ಸುರಕ್ಷಿತವಾಗಿಸಲು ಕಂಪನಿಯೇ ಒದಗಿಸುವ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಆ ಪೈಕಿ ‘ಟು ಸ್ಟೆಪ್‌ ವೆರಿಫಿಕೇಷನ್‌  ಕೂಡ ಒಂದು.

ಟು ಸ್ಟೆಪ್‌ ವೆರಿಫಿಕೇಷನ್‌ ಹೇಗೆ?
ಮೊದಲಿಗೆ ಸ್ಮಾರ್ಟ್‌ಫೋನ್‌ನಲ್ಲಿಟೆಲಿಗ್ರಾಮ್‌ ಆ್ಯಪ್‌ ಓಪನ್‌ ಮಾಡಿ. ಬಳಿಕ ಎಡಗಡೆ ಸ್ವೈಪ್‌ ಮಾಡುವ ಮೂಲಕ ಮೆನು ಓಪನ್‌ ಮಾಡಿ ಇಲ್ಲವೇ ಹೆಂಬರ್ಗರ್‌ ಐಕಾನ್‌ ಮೇಲೆ ಟ್ಯಾಪ್‌ ಮಾಡಿ. ಆಗ ಸೆಟ್ಟಿಂಗ್ಸ್‌ಗೆ ಹೋಗುತ್ತೀರಿ. ಸೆಟ್ಟಿಂಗ್ಸ್‌ ಮೆನುವಿನಲ್ಲಿಪ್ರೈವೆಸಿ ಮತ್ತು ಸೆಕ್ಯುರಿಟಿ ಆಪ್ಷನ್‌ ಅನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ ಟು ಸ್ಟೆಪ್‌ ವೆರಿಫಿಕೇಷನ್‌ ಆಯ್ಕೆ ಮೇಲೆ ಟ್ಯಾಪ್‌ ಮಾಡಿ. ಪಾಸ್ವರ್ಡ್‌ ಹಾಕಿದ ಬಳಿಕ ನೀವು ಪಾಸ್ವರ್ಡ್‌ ಹಿಂಟ್‌ ಮತ್ತು ರಿಕವರಿ ಇಮೇಲ್‌ ಸೇರಿಸಬೇಕಾಗುತ್ತದೆ. ಇಷ್ಟಾದ ಮೇಲೆ, ಟೆಲಿಗ್ರಾಮ್‌ ಕಳುಹಿಸುವ ಕೋಡ್‌ ನಮೂದಿಸಿ. ಅಲ್ಲಿಗೆ ಟು ಸ್ಟೆಪ್‌ ವೆರಿಫಿಕೇಷನ್‌ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಇದು ಟೆಲಿಗ್ರಾಮ್‌ನಲ್ಲಿ ಟು ಸ್ಟೆಪ್‌ ವೆರಿಫಿಕೇಷನ್‌ ಮಾಡಲು ಅನುಸರಿಸಬೇಕಾದ ಮಾದರಿ­ಯಾಗಿದೆ. ಟು ಸ್ಟೆಪ್‌ ವೆರಿಫಿಕೇಷನ್‌ ಸಕ್ರಿಯಗೊಂಡ ಮೇಲೆ, ಹೊಸ ಸಾಧನದಲ್ಲಿಟೆಲಿಗ್ರಾಮ್‌ ಓಪನ್‌ ಮಾಡಲು ಈ ಹಿಂದೆ ಟು ಸ್ಟೆಪ್‌ ವೆರಿಫಿಕೇಷನ್‌ಗೆ ನೀಡಿದ ಪಾಸ್ವರ್ಡ್‌ ಅನ್ನು ಹಾಕಬೇಕಾಗು­ತ್ತದೆ ಮತ್ತು ಎಸ್ಸೆಮ್ಮೆಸ್‌ ಮೂಲಕ ಟೆಲಿಗ್ರಾಮ್‌ ರವಾನಿಸುವ ಕೋಡ್‌ ಅನ್ನು ಕೂಡ ಹಾಕಬೇಕು. ಆಗ ಮಾತ್ರವೇ ಟೆಲಿಗ್ರಾಮ್‌ ನಿಮ್ಮ ಬಳಕೆಗೆ ತೆರೆದುಕೊಳ್ಳುತ್ತದೆ.

ಲಾಸ್ಟ್‌ ಸೀನ್‌ ಮುಚ್ಚಿಡುವುದು ಹೇಗೆ?
ಟೆಲಿಗ್ರಾಮ್‌ ಆ್ಯಪ್‌ ಓಪನ್‌ ಮಾಡಿ, ಸ್ಕ್ರೀನ್‌ನ ಎಡಮೂಲೆಯಲ್ಲಿರುವ ಹೆಂಬರ್ಗರ್‌ ಐಕಾನ್‌ ಮೇಲೆ ಟ್ಯಾಪ್‌ ಮಾಡಿ. ಆಗ ಸೆಟ್ಟಿಂಗ್ಸ್‌ ಬಾಕ್ಸ್‌ನಲ್ಲಿರುವ ಪ್ರೈವೆಸಿ ಮತ್ತು ಸೆಕ್ಯುರಿಟಿ ಆಪ್ಷನ್‌ ಮೇಲೆ ಟ್ಯಾಪ್‌ ಮಾಡಿ. ಬಳಿಕ ಲಾಸ್ಟ್‌ ಸೀನ್‌ ಆಪ್ಷನ್‌ ಮೇಲೆ ಟ್ಯಾಪ್‌ ಮಾಡಿ. ಆಗ ಯಾರು ನಿಮ್ಮ ಲಾಸ್ಟ್‌ ಸೀನ್‌ ನೋಡಬಹುದು ಎಂಬುದಕ್ಕೆ ಆಯ್ಕೆಗಳು ಕಾಣುತ್ತವೆ. Every one to my contacts and Nobody ಪೈಕಿ ಲಾಸ್ಟ್‌ ಸೀನ್‌ ಕಾಣಿಸದಂತೆ ಮಾಡಲು ನೀವು ನೋಬಡಿ ಆಪ್ಷನ್‌ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಸ್ಕ್ರೀನ್‌ನ ರೈಟ್‌ ಸೈಡ್‌ನಲ್ಲಿರುವ ಚೆಕ್‌ ಮಾರ್ಕ್‌ ಮೇಲೆ ಟ್ಯಾಪ್‌ ಮಾಡಿ. ಆಗ ಎದುರಾಗುವ ಪಾಪ್‌ ಅಪ್‌ನಲ್ಲಿ ನೀವು ಯಾರೊಂದಿಗೆ ನಿಮ್ಮ ಲಾಸ್ಟ್‌ ಸೀನ್‌ ಟೈಮ್‌ ನೋಡಲು ಅವಕಾಶ ಕಲ್ಪಿಸುವುದಿಲ್ಲವೋ ಅವರ ಲಾಸ್ಟ್‌ ಸೀನ್‌

ಅನ್ನು ನೀವು ನೋಡಲು ಸಾಧ್ಯವಾಗುವುದಿಲ್ಲಎಂಬ ಸಂದೇಶವನ್ನು ಕಾಣಬಹುದು. ಇಷ್ಟಾದ ಬಳಿಕ ನೀವು ಎಂದು ಓಕೆ ಎಂದು ಒಪ್ಪಿಗೆ ಕೊಟ್ಟರೆ ಲಾಸ್ಟ್‌ ಸೀನ್‌ ಮುಚ್ಚಿಡುವ ಪ್ರಕ್ರಿಯೆ ಪೂರ್ಣಗೊಳಿಸಿದಂತಾಗುತ್ತದೆ. 




ಬುಧವಾರ, ಜನವರಿ 13, 2021

Is Signal more secure than Whatsapp?- ವಾಟ್ಸ್‌ಆ್ಯಪ್‌ಗಿಂತ ಸಿಗ್ನಲ್‌ ಹೇಗೆ ಬೆಸ್ಟು?

- ಮಲ್ಲಿಕಾರ್ಜುನ ತಿಪ್ಪಾರ
ಜಗತ್ತಿನ ನಂಬರ್‌ 1 ಶ್ರೀಮಂತ, ಟೆಸ್ಲಾ ಕಂಪನಿಯ ಮಾಲೀಕ ಎಲಾನ್‌ ಮಸ್ಕ್‌ ಆ ಒಂದು ಟ್ವೀಟ್‌ ಮಾಡ­ದಿದ್ದರೆ ಈ ಜಗತ್ತು ‘ಸಿಗ್ನಲ್‌’ ಎಂಬ ಆ್ಯಪ್‌ ಹಿಂದೆ ಬೀಳುತ್ತಿರ­ಲಿಲ್ಲವೇನೋ? ವಾಟ್ಸ್‌ಆ್ಯಪ್‌ ಹೊಸ ಪ್ರೈವೆಸಿ ನೀತಿಯನ್ನು ಜಾರಿಗೆ ತರಲು ಮುಂದಾಗುತ್ತಿದ್ದಂತೆ ಎಲಾನ್‌ ಮಸ್ಕ್‌ Use Signal ಅಂತಾ ಸಿಂಪಲ್‌ ಆಗಿ ಮಾಡಿದ ಈ ಟ್ವೀಟ್‌ ಸಿಗ್ನಲ್‌ ಫೌಂಡೇಷನ್‌ನ ಸರ್ವರ್‌ ಕ್ರ್ಯಾಶ್‌ ಆಗುವಂತೆ ಮಾಡಿತು! ಐದಾರು ದಿನಗಳಲ್ಲಿಸಿಗ್ನಲ್‌ಗೆ ಸೈನ್‌ ಇನ್‌ ಆಗುತ್ತಿರುವವರ ಸಂಖ್ಯೆಯಲ್ಲಿವಿಪರೀತ ಹೆಚ್ಚಳವಾಗಿದೆ. ಜಗತ್ತು ಈಗ ಸಿಗ್ನಲ್‌ ಸಮೂಹ ಸನ್ನಿಗೆ ಒಳಗಾಗಿದೆ.

ಜಗತ್ತಿನಾದ್ಯಂತ ಪತ್ರಕರ್ತರು, ಕಾರ್ಯಕರ್ತರು, ವಕೀಲರು, ಸಂಶೋಧ­ಕರು, ರಾಜ­­ಕಾರ­ಣಿ­ಗಳು, ಸುರಕ್ಷತಾ ತಜ್ಞರು ಹೆಚ್ಚಾಗಿ ಈ ಸಿಗ್ನಲ್‌ ಆ್ಯಪ್‌ ಬಳಸು­­ತ್ತಿದ್ದರು. ಆದರೆ ಈಗ ಸಾಮಾ­ನ್ಯರೂ ಸಿಗ್ನಲ್‌ಗೆ ಅಡಿಯಿಡುತ್ತಿದ್ದಾರೆ. ಲಾಭ­ರಹಿತ ಸಂಸ್ಥೆಯಾಗಿರುವ ಸಿಗ್ನಲ್‌ ಫೌಂಡೇ­­ಷನ್‌ ಒಡೆತನದ ಸಿಗ್ನಲ್‌ ಆ್ಯಪ್‌,  ಸುರ­­­­­­ಕ್ಷ­ತೆಯ ದೃಷ್ಟಿಯಿಂದ ಮಜಬೂತ್‌ ಆಗಿದೆ. ನಿಮ್ಮ ಯಾವ ಮಾಹಿತಿಯೂ 3ನೇ ವ್ಯಕ್ತಿಯ ಪಾಲಾಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಡೇಟಾ ಯಾವುದೇ ಅನ್ಯ ಉದ್ದೇಶಕ್ಕೆ ಬಳಕೆಯಾಗುವುದಿಲ್ಲ. ಹಾಗಾಗಿ, ಹೆಚ್ಚಿನವರು ಸಿಗ್ನಲ್‌ ಮೇಲೆ ವಿಶ್ವಾಸ ಇಡುವಂತಾಗಿದೆ. ಹಾಗಾದರೆ, ಸಿಗ್ನಲ್‌ನಲ್ಲಿ ಏನಿದೆ, ವಾಟ್ಸ್‌ಆ್ಯಪ್‌ಗಿಂತಲೂ ಹೇಗೆ ಬೆಸ್ಟು?

ಲಾಭರಹಿತ ಸಂಸ್ಥೆಯ ಒಡೆತನ
ವಾಟ್ಸ್‌ಆ್ಯಪ್‌ಗಿಂತ ಸಿಗ್ನಲ್‌ ಯಾಕೆ ಮುಖ್ಯವಾಗುತ್ತದೆ ಎಂದರೆ, ಈ ಆ್ಯಪ್‌ ಯಾವುದೇ ದೊಡ್ಡ ಟೆಕ್‌ ಕಂಪನಿಯದ್ದಲ್ಲ. ಬದಲಿಗೆ, ಲಾಭರಹಿತ ಸಿಗ್ನಲ್‌ ಫೌಂಡೇಷನ್‌ಗೆ ಸೇರಿದೆ. ಹಾಗಾಗಿ, ಬಳಕೆದಾರರ ಡೇಟಾ­ವನ್ನು ಅದು ವಾಣಿಜ್ಯ ಕಾರಣಕ್ಕೆ ಬಳಸಿಕೊಳ್ಳಲಾರದು. ಜೊತೆಗೆ, ಈ ಆ್ಯಪ್‌ ನಿಗೂಢ ಪಠ್ಯವನ್ನು ಯಾರೂ ಡಿಕೋಡ್‌ ಮಾಡಲು ಆಗೋದಿಲ್ಲ. ಫೌಂಡೇಶನ್‌ಗೆ ಬರುವ ಡೊನೇಷನ್‌ ಮತ್ತು ಬಳಕೆದಾರರು ನೀಡುವ ಹಣವೇ ಇವರಿಗೆ ಆಧಾರ.

ಎಲ್ಲ ಖುಲ್ಲಂ ಖುಲ್ಲಾ

ಸಿಗ್ನಲ್‌ ಆ್ಯಪ್‌ ಒಂದು ರೀತಿಯಲ್ಲಿ ತೆರೆದ ಪುಸ್ತಕ. ಇಲ್ಲಿ ಯಾವ ಮುಚ್ಚುಮರೆಯೂ ಇಲ್ಲ. ನೀವು ಈ ಆ್ಯಪ್‌ನ ಸೋರ್ಸ್‌ ಕೋಡ್‌ ನೋಡಬಹುದು. ಅದು ಸಾರ್ವಜನಿಕವಾಗಿ ಲಭ್ಯವಿದೆ. ಅಂದರೆ, ಜಗತ್ತಿನಾದ್ಯಂತ ತಜ್ಞರು ಈ ಕೋಡ್‌ ನೋಡುವುದರಿಂದ ಏನಾದರೂ ಸಮಸ್ಯೆ ಎದುರಾದರೆ ಮೆಸೆಂಜರ್‌ ಮತ್ತು ವಾಟ್ಸ್‌ಆ್ಯಪ್‌ಗಿಂತಲೂ ಫಾಸ್ಟ್‌ ಆಗಿ ಸರಿಪಡಿಸಲು ಸಾಧ್ಯವಾಗುತ್ತದೆ. ಮತ್ತು ಯಾವುದೂ ರಹಸ್ಯವಾಗಿ ಉಳಿಯುವುದಿಲ್ಲ. ಇದೇ ಮಾತನ್ನು ನೀವು ವಾಟ್ಸ್‌ಆ್ಯಪ್‌ಗೆ ಹೇಳುವಂತಿಲ್ಲ.

ಎಲ್ಲವೂ ನಿಗೂಢ ಲಿಪಿ
ನಿಮ್ಮ ಪ್ರೊಫೈಲ್‌ ಫೋಟೊ, ನಿಮ್ಮ ಧ್ವನಿ, ವಿಡಿಯೋ ಕಾಲ್ಸ್‌, ಫೋಟೊ ಅಟ್ಯಾಚ್‌ಮೆಂಟ್ಸ್‌, ಸ್ಟಿಕರ್ಸ್‌, ಲೊಕೇಷನ್‌ ಪಿನ್ಸ್‌. ಅಷ್ಟೇ ಯಾಕೆ ನೀವು ಕಳುಹಿಸುವ ಜಿಐಎಫ್‌ ಕೂಡ ಎನ್‌ಕ್ರಿಪ್ಟೆಡ್‌ ಆಗಿರುತ್ತದೆ. ಈ ವಿಷಯದಲ್ಲಿ ವಾಟ್ಸ್‌ಆ್ಯಪ್‌ಗಿಂತಲೂ ಸಿಗ್ನಲ್‌ ಹೆಚ್ಚು ನಂಬಿಕೆಗೆ ಅರ್ಹವಾಗಿದೆ. ಬಳಕೆದಾರರ ಮಾಹಿತಿ ಸುರಕ್ಷತೆಯ ವಿಷಯದಲ್ಲಿ ಸಿಗ್ನಲ್‌ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.

ಎಲ್ಲವೂ ಸುರಕ್ಷಿತ
ಸಿಗ್ನಲ್‌ನ ಇನ್ನೊಂದು ಖಾಸಿಯತ್‌ ಏನೆಂದರೆ, ಇಲ್ಲಿ ಎಲ್ಲವೂ ಸುರಕ್ಷಿತ. ನಿಮ್ಮ ಸುರಕ್ಷಿತ ಮೆಸೆಜ್‌ಗಳನ್ನು ಸಿಗ್ನಲ್‌ ಕ್ಲೌಡ್‌ಗೆ ಕಳುಹಿಸು­ವುದಿಲ್ಲ. ಯಾಕೆಂದರೆ, ಈ ಕ್ಲೌಡ್‌ನಲ್ಲಿರುವ ಸಂದೇಶಗಳನ್ನು

ವಾಟ್ಸ್‌ಆ್ಯಪ್‌, ಗೂಗಲ್‌ ಸೇರಿದಂತೆ ಯಾರು ಬೇಕಿದ್ದರೂ ಅವುಗಳನ್ನು ಓದಬಹುದು. ಬದಲಿಗೆ, ಇಂಥ ಬ್ಯಾಕ್‌ಅಪ್‌ಗಳನ್ನು ನಿಮ್ಮ ಫೋನ್‌ನ ಡೇಟಾಬೇಸ್‌ನಲ್ಲಿ ನಿಗೂಢಲಿಪಿ­ಯಲ್ಲಿ ಸಿಗ್ನಲ್‌ ಸೇವ್‌ ಮಾಡುತ್ತದೆ ಮತ್ತು ಅದನ್ನು ನೀವು ಮಾತ್ರ ನೋಡಲು ಸಾಧ್ಯವಾಗುತ್ತದೆ. ಇನ್ನೂ ಆಶ್ಚರ್ಯ ಎಂದರೆ, ಇದು ನಿಮ್ಮ ಫೋನ್‌ನಲ್ಲಿರುವ ಸಂಪರ್ಕ ಸಂಖ್ಯೆಗಳನ್ನೂ ತನ್ನ ಸರ್ವರ್‌ನಲ್ಲಿ ಉಳಿಸಿಕೊಳ್ಳುವುದಿಲ್ಲ!

ಕಣ್ಮರೆಯಾಗುವ ಮೆಸೆಜ್‌
ಇದರಲ್ಲೇನು ವಿಶೇಷ ಎನ್ನಬೇಡಿ. ವಾಟ್ಸ್‌ಆ್ಯಪ್‌ನಲ್ಲಿ ಈ ಫೀಚರ್‌ ಇದೆಯಲ್ಲ ಅನ್ನಬಹುದು. ಆದರೆ, ಈ ಫೀಚರ್‌ ಸಿಗ್ನಲ್‌ನ ಅತ್ಯಂತ ಹಳೆಯ ಮತ್ತು ಅತ್ಯಂತ ಉಪಯುಕ್ತ ಫೀಚರ್‌ ಆಗಿದೆ. ವಾಟ್ಸ್‌ಆ್ಯಪ್‌ನಲ್ಲಿ ಅದು ಇತ್ತೀಚೆಗಷ್ಟೇ ಬಂದಿದೆ. ಬಳಕೆದಾರರು ತಮ್ಮ ಸಂದೇಶಕ್ಕೆ ಹತ್ತು ಸೆಕೆಂಡ್‌ನಿಂದ ವಾರದವರೆಗೂ ಟೈಮರ್‌ ಅಳವಡಿಸ­ಬಹುದು. ಆ ಬಳಿಕ ಅದು ಸ್ವಯಂ ಆಗಿ ಕಣ್ಮರೆಯಾಗುತ್ತದೆ. ಒಂದು ಬಾರಿ ವೀಕ್ಷಿಸಬಹುದಾದ ಮೀಡಿಯಾ ಮತ್ತು ಮೆಸೆಜ್‌ ರಿಕ್ವೆಸ್ಟ್‌ಗಳು ವಾಟ್ಸ್‌ಆ್ಯಪ್‌ನಲ್ಲೂ ಇಲ್ಲ.

ಬೇರೆ ಆ್ಯಪ್‌ಗಳು ಕನ್ನ ಹಾಕುವಂಗಿಲ್ಲ
ಈ ಫೀಚರ್‌ ವಾಟ್ಸ್‌ಆ್ಯಪ್‌ ಸೇರಿದಂತೆ ಸೇರಿದಂತೆ ಇತರ ಯಾವುದೇ ಪ್ರಮುಖ ಮೆಸೆಂಜರ್‌ ಆ್ಯಪ್‌ಗಳಲ್ಲೂ ಇಲ್ಲ. ಸಿಗ್ನಲ್‌ನಲ್ಲಿ ಇನ್‌ಕಾಗ್ನಿಟೋ ಕೀಬೋರ್ಡ್‌ ಆಪ್ಷನ್‌ ಇದ್ದು, ಇದು ನೀವು ಏನನ್ನು ಟೈಪ್‌ ಮಾಡುತ್ತಿದ್ದೀರಿ ಎಂಬುದನ್ನು ಗುರುತಿಸುವುದಿಲ್ಲ. ಸ್ಕ್ರೀನ್‌ ಸೆಕ್ಯುರಿಟಿ ಫೀಚರ್‌, ನಿಮ್ಮ ಸಿಗ್ನಲ್‌ ಆ್ಯಪ್‌ನಲ್ಲಿರುವ ಮಾಹಿತಿಯನ್ನು ಕದ್ದು ನೋಡುವುದನ್ನು ತಪ್ಪಿಸುತ್ತದೆ. ಇದನ್ನು ಗಮನಿಸಿದರೆ ಜಗತ್ತಿನಲ್ಲೇ ಸಿಗ್ನಲ್‌ ಅತ್ಯಂತ ಸೆಕ್ಯೂರ್‌ ಆಗಿರುವ ಮೆಸೆಂಜರ್‌ ಆ್ಯಪ್‌ ಎನ್ನುವುದು ತಿಳಿಯು­ತ್ತದೆ. ಆದರೆ, ದುರದೃಷ್ಟವಶಾತ್‌ ಈ ಆ್ಯಪ್‌ ಬಗ್ಗೆ ಜಗತ್ತು ತೀರಾ ಇತ್ತೀಚಿನವರೆಗೂ ಅಪರಿಚಿತವಾಗಿರುವುದು ಚೋದ್ಯವೇ ಸರಿ!



ಸೋಮವಾರ, ಜನವರಿ 4, 2021

Former home minister Buta Singh: ನಿರ್ದಯ ನಡೆಯ ಬೂಟಾ ಸಿಂಗ್‌

ತಮ್ಮ ಅನಿಯಂತ್ರಿತ ಅಧಿಕಾರದ ಚಲಾವಣೆ ಮೂಲಕ ಪ್ರಜಾಪ್ರಭುತ್ವದ ಲೋಪಗಳನ್ನು ಎತ್ತಿ ತೋರಿಸಿದ, ಆ ನೆಪದಲ್ಲಿಅದನ್ನು ಗಟ್ಟಿಗೊಳಿಸಲು ಕಾರಣರಾದ ಬೂಟಾ ಸಿಂಗ್‌ ಅವರನ್ನು ನೆನಪಿಟ್ಟುಕೊಳ್ಳಲೇಬೇಕು.


- ಮಲ್ಲಿಕಾರ್ಜುನ ತಿಪ್ಪಾರ

ಏಳು ವರ್ಷದ ಬಾಲಕನೊಬ್ಬನಿಗೆ ಆತನ ಚಿಕ್ಕಪ್ಪ, ಕಣಜದ ಗೂಡು ತೋರಿಸಿ ಅದರಲ್ಲಿಜೇನು ಇದೆ ಎಂದು ಹೇಳುತ್ತಾರೆ. ಆ ಬಾಲಕ, ಹಿಂದೆ ಮುಂದೆ ಯೋಚಿಸದೇ ಮರ ಏರಿ, ನಿರ್ದಯವಾಗಿ ಈ ಕಣಜದ ಗೂಡನ್ನು ಕೆಡವುತ್ತಾನೆ. ಗೂಡಿನಲ್ಲಿದ್ದ ಕಣಜದ ಹಾರುಹುಳಗಳು ಬೆನ್ನ ಹತ್ತಿದ್ದರಿಂದ ಮರ ಮೇಲಿಂದ ಬಿದ್ದು ಕಾಲು ಮುರಿದುಕೊಳ್ಳುತ್ತಾನೆ. 

ಆ ಬಾಲಕನೇ ಮುಂದೆ ‘ನಿರ್ದಯಿ’ ರಾಜಕಾರಣಿಯಾಗಿ ರೂಪುಗೊಂಡ ಬೂಟಾ ಸಿಂಗ್‌. ಅವರ ಈ ಸ್ವಭಾವದ ಪರಿಣಾಮಗಳು ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಕಾಲದಲ್ಲಿಢಾಳಾಗಿ ಎದ್ದು ಕಂಡಿತು.  ಇಂದಿರಾ ಮತ್ತು ರಾಜೀವ್‌ ಅವರ ‘ಪರಮ ನಿಷ್ಠ’ರಾಗಿದ್ದ ಬೂಟಾ, ಅವರ ಎಲ್ಲಕಾರ್ಯಗಳನ್ನು ಯಾವುದನ್ನೂ ಲೆಕ್ಕಿಸದೇ ಮಾಡಿ ಬಿಡುತ್ತಿದ್ದರು. ಪರಿಣಾಮ­ವಾಗಿ ಅವರನ್ನು ಮಾಧ್ಯಮಗಳು ಅತ್ಯಂತ ವಿವಾದಿತ ರಾಜಕಾರಣಿ, ರಾಜೀವ್‌ ಬಂಟ ಎಂದು ಇಂದಿಗೂ ಗುರುತಿಸುತ್ತವೆ. ಅಂಥ ಬೂಟಾ ಸಿಂಗ್‌ ಅವರು, ಕಾಂಗ್ರೆಸ್‌ಗೆ ಏನೆಲ್ಲಮಾಡಿದೆ. ತನ್ನ ನಿಷ್ಠೆಯನ್ನು ಯಾರೂ ಪರಿಗಣಿ ಸಲೇ ಇಲ್ಲಎಂಬ ಕೊರಗಿನಲ್ಲೇ 86ನೇ ವಯಸ್ಸಿನಲ್ಲಿಕೊನೆಯುಸಿರೆಳೆದಿದ್ದಾರೆ. 

ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ಅಕ್ಷ ರಶಃ ಅವರು ಕ್ಯಾಬಿನೆಟ್‌ನಲ್ಲಿಎರಡನೇ ಸ್ಥಾನದಲ್ಲಿ­ದ್ದರು. ಇತರ ಎಲ್ಲಸಚಿವರಿಗಿಂತಲೂ ರಾಜೀವ್‌ ಅವರನ್ನು ಬಹಳ ಸಲೀಸಾಗಿ ಭೇಟಿಯಾಗುತ್ತಿದ್ದರು. ದೇಶದ ಗೃಹ ಮಂತ್ರಿಯಾಗಿದ್ದಾಗ ರಾಜ್ಯ ಸರಕಾರಗಳನ್ನು ಕಣ್ಣು ಮಿಟುಕಿಸುವಷ್ಟರಲ್ಲಿಕೆಡವಿ ಬಿಡುತ್ತಿದ್ದರು. ಅಂಥ ನಿರ್ದಯಿ ರಾಜಕಾರಣಿ ಬೂಟಾ ಸಿಂಗ್‌. 

ರಾಜೀವ್‌ ಕಾಲದಲ್ಲಿಕಾಂಗ್ರೆಸ್‌ನ ದಲಿತ ಹಾಗೂ ಏಕೈಕ ಸಿಖ್‌ ಮುಖವಾಗಿದ್ದ ಬೂಟಾ ಸಿಂಗ್‌ ರಾಜಕಾರಣದ ಹಿನ್ನೆಲೆಯಲ್ಲಿಬೆಳೆದು ಬಂದವರಲ್ಲ. ಪಂಜಾಬ್‌ನ ಜಲಂಧರ್‌ ಜಿಲ್ಲೆಯ ಮುಸ್ತಫಾಪುರದಲ್ಲಿ1934 ಮಾರ್ಚ್‌ 21ರಂದು ಬೂಟಾ ಸಿಂಗ್‌ ಜನಿಸಿದರು. ಬೂಟಾ ಅವರದ್ದು ಸಾಧಾರಣ ಹಿನ್ನೆಲೆಯ ಕುಟುಂಬ. ಲಿಯಾಲ್‌ಪುರ ಖಾಲ್ಸಾ ಕಾಲೇಜ್‌ನಿಂದ ಬಿ.ಎ(ಆನರ್ಸ್‌) ಮತ್ತು ಬಾಂಬೆಯ ಗುರು ನಾನಾಕ್‌ ಖಾಲ್ಸಾ ಕಾಲೇಜ್‌ನಲ್ಲಿಎಂಎ ಪದವಿ ಪಡೆದುಕೊಂಡರು. ಬಳಿಕ ಬುಂದೇಲ್‌ಖಂಡ್‌ ವಿವಿಯಲ್ಲಿಪಿಎಚ್‌ಡಿ ಮಾಡಿದರು. 1964ರಲ್ಲಿಮಂಜಿತ್‌ ಕೌರ್‌ ಅವರನ್ನು ವಿವಾಹವಾದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. 

ಬೂಟಾ ಸಿಂಗ್‌ ಅವರು ರಾಜಕಾರಣಕ್ಕೆ ಪ್ರವೇಶ ಪಡೆಯುವ ಮುಂಚೆ ಪತ್ರಕರ್ತರಾಗಿದ್ದರು. ಅಕಾಲಿ ದಳದ ಮೂಲಕ ರಾಜಕಾರಣ ಆರಂಭಿಸಿ ಕಾಂಗ್ರೆಸ್‌ನಲ್ಲಿಉತ್ತುಂಗಕ್ಕೇರಿ, ಬಿಜೆಪಿಯಲ್ಲೂಸ್ವಲ್ಪ ಕಾಲ ಇದ್ದು ಮತ್ತೆ ಕಾಂಗ್ರೆಸ್‌ಗೆ ಮರಳಿ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು. 

ಬೂಟಾ ಅವರು ಅಕಾಲಿದಳ ಸೇರುವ ಮುಂಚೆ ಮಾರ್ಕ್ಸ್‌ ವಿಚಾರಗಳಿಗೆ ಮಾರು ಹೋಗಿದ್ದರು. ಬಾಂಬೆಯ ಖಾಲ್ಸಾ ಕಾಲೇಜ್‌ನಲ್ಲಿಇತಿಹಾಸ ಓದುತ್ತಿದ್ದಾಗ ಅವರು ಬೊಲ್ಶೆವಿಕ್‌ ಸಾಹಿತ್ಯದ ಕಟ್ಟಾ ಓದುಗರು. ‘ಫೂಲ್‌ವಾರಿ’ ಮ್ಯಾಗ್‌ಜಿನ್‌ನಲ್ಲಿಪ್ರೂಫ್‌ರೀಡರ್‌ ಆಗಿ ಕೆಲಸ ಮಾಡುತ್ತಿದ್ದಾಗ, 1953ರಲ್ಲಿಜೋಸೆಫ್‌ ಸ್ಟಾಲಿನ್‌ ನಿಧನದ ಸುದ್ದಿ ತಿಳಿದಾಗ ಕಣ್ಣೀರಿಟ್ಟಿದ್ದರು. ಅಂದರೆ, ಮಾರ್ಕ್ಸ್‌ವಾದ ಅವರನ್ನು ಅಷ್ಟೊಂದು ಆವರಿಸಿಕೊಂಡಿತ್ತು. ‘ಅಕಾಲಿ ಪತ್ರಿಕಾ’ದಲ್ಲಿಉಪ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. 1962ರಲ್ಲಿಅಕಾಲಿ ದಳ ಬೂಟಾ ಅವರನ್ನು ರೋಪರ್‌ ಮೀಸಲು ಕ್ಷೇತ್ರದಿಂದ ಲೋಕಸಭೆಗೆ ಚುನಾವಣೆಗೆ ಕಣಕ್ಕಿಳಿಸಿತು. ಮುಂದೆ ಅಕಾಲಿ ಇಬ್ಭಾಗ ಆದಾಗ ಅವರು ತಾರಾ ಸಿಂಗ್‌ ಅವರೊಂದಿಗೆ ಹೆಜ್ಜೆ ಹಾಕಿದರಾದರೂ ಅವರೊಂದಿಗೆ ಬಹಳ ದಿನ ನಿಲ್ಲಲಿಲ್ಲ. ಇಂದಿರಾ ಅವರ ಪರಿಚಯವಾದ ಮೇಲೆ ಕಾಂಗ್ರೆಸ್‌ ಸೇರಿದರು. ಆನಂತರ ನಡೆದಿದ್ದೆಲ್ಲಇತಿಹಾಸ. 

ಇಂದಿರಾ ಗಾಂಧಿ ಅವರು ‘ಆಪರೇಷನ್‌ ಬ್ಲೂಸ್ಟಾರ್‌’ ಕಾರ್ಯಾಚರಣೆ ಕೈಗೊಂಡಾಗ ಅದರ ಎಲ್ಲನಿರ್ವಹಣೆ ಮಾಡಿವರು ಇದೇ ಬೂಟಾ ಸಿಂಗ್‌. ಸಚಿವರಾಗಿ ‘ಗೋಲ್ಡನ್‌ ಟೆಂಪಲ್‌’ನ ಪುನರ್‌ ನಿರ್ಮಾಣವನ್ನು ನೋಡಿಕೊಂಡರು. ಆದರೆ, ಸಿಖ್‌ ಧಾರ್ಮಿಕ ಗುರುಗಳು ಇವರನ್ನು ‘ಧರ್ಮಭ್ರಷ್ಟ’ ಎಂದು ಘೋಷಿಸಿದರು. ಬೂಟಾ ಸಿಂಗ್‌ ಆ ಬಳಿಕ ಸ್ವರ್ಣಮಂದಿರದಲ್ಲಿಭಕ್ತರ ಚಪ್ಪಲಿ ಕ್ಲೀನ್‌ ಮಾಡಿ ಪ್ರಾಯಶ್ಚಿತ್ತ ಕೂಡ ಮಾಡಿಕೊಂಡರೆನ್ನಿ. 

ರಾಜೀವ್‌ ಗಾಂಧಿ ಅವಧಿಯಲ್ಲಿಬೂಟಾ ಸಿಂಗ್‌ ರಾಜಕಾರಣಿಯಾಗಿ, ಆಡಳಿತಗಾರನಾಗಿ ಗ್ರಾಫ್‌ ಏರುಗತಿಯಲ್ಲಿತ್ತು; ಜೊತೆಗೆ ವಿವಾದಗಳೂ. ರಾಜೀವ್‌ ಸಂಪುಟದಲ್ಲಿಪಿ.ವಿ.ನರಸಿಂಹ ರಾವ್‌ ಮತ್ತು ಪಿ ಶಿವಶಂಕರ್‌ ಅವರಂಥ ಹಿರಿಯರಿದ್ದರೂ ಬೂಟಾ ಸಿಂಗ್‌ ಅಕ್ಷ ರಶಃ ರಾಜೀವ್‌ ನಂತರದ ಸ್ಥಾನದಲ್ಲಿವಿರಾಜಮಾನರಾದರು. ರಾಜೀವ್‌ ಅವರ ಬಂಟ ಎಂದೇ ಖ್ಯಾತರಾದರು. ಈ ಅವಧಿಯಲ್ಲಿಅವರು ಪ್ರತಿಕ್ಷ ಗಳ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿಪ್ರಮುಖ ಪಾತ್ರ ವಹಿಸಿದರು. 1988ರಲ್ಲಿಜಾನಕಿ ರಾಮಚಂದ್ರನ್‌ ಸರಕಾರ ವಜಾಗೊಳಿಸಿದರು. ಕಾಂಗ್ರೆಸ್‌ನ ಅನೇಕ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ದೂರ ಸರಿಸುವ ಕಾರ್ಯವನ್ನು ಬೂಟಾ ನಿರ್ದಯಿಯಾಗಿ ಮಾಡಿದರು. ರಾಜಸ್ಥಾನದಲ್ಲಿಹರಿದೇವ್‌ ಜೋಶಿ, ಮಧ್ಯ ಪ್ರದೇಶದಲ್ಲಿಮೋತಿಲಾಲ್‌ ವೋರಾ ಇದಕ್ಕೆ ಉದಾಹಣೆಯಾಗಿ ನೀಡಬಹುದು. ರಾಜೀವ್‌ ಗಾಂಧಿ 1989ರಲ್ಲಿಅಯೋಧ್ಯೆಯ ವಿವಾದಿತ ಜಾಗದಲ್ಲಿರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಅದರ ಹಿಂದೆ ಬೂಟಾ ಸಿಂಗ್‌ ಇದ್ದರು ಎಂದು ಇಂದಿಗೂ ಕಾಂಗ್ರೆಸ್‌ನವರು ಮಾತನಾಡಿಕೊಳ್ಳುತ್ತಾರೆ. 

1985ರಿಂದ 89ರ ಅವಧಿಯಲ್ಲಿಕೇಂದ್ರ ಗೃಹ ಸಚಿವರಾಗಿ ಬೂಟಾ ಸಿಂಗ್‌, ಅನೇಕ ರಾಜ್ಯ ಸರಕಾರಗಳನ್ನು ಉರುಳಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಿ­ದರು. ‘‘ಬೂಟಾ ಸಿಂಗ್‌ಜೀ, ನಿಮ್ಮ ಕೃಪಾಣ್‌(ಕತ್ತಿ) ಒಳಗಿಡಿ,’’ ಎಂದು ರಾಜೀವ್‌ ಅವರು ಹೇಳಿಧಿದ್ದರಂತೆ. ಅಷ್ಟೊತ್ತಿಗೆ, ಮಧ್ಯ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ತ್ರಿಪುರಾ, ರಾಜಸ್ಥಾನ, ಬಿಹಾರ ಮತ್ತಿತರ ರಾಜ್ಯ ಸರಕಾರಗಳನ್ನು ಬುಡಮೇಲು ಮಾಡಿಯಾಗಿತ್ತು. ಬಿಹಾರದ ರಾಜ್ಯಪಾಲರಾಗಿ­ದ್ದಾಗ ಅವರ ನಡೆದುಕೊಂಡ ರೀತಿ ಸುಪ್ರೀಂ ಕೋರ್ಟ್‌ ತೀಕ್ಷ ್ಣ ಟೀಕೆಗೂ ಗುರಿಯಾಗಿತ್ತು. 2005ರಲ್ಲಿಜೆಡಿಎಯು-­ಬಿಜೆಪಿಗೆ ಸರಕಾರ ರಚಿಸಲು ಆಹ್ವಾನ ನೀಡುವ ಬದಲು ಅಸೆಂಬ್ಲಿಯನ್ನೇ ವಿಸರ್ಜಿಸಿ ಬಿಟ್ಟಿದ್ದರು. ಕೇಂದ್ರ ಸಂಪುಟಕ್ಕೆ ತಪ್ಪು ಮಾಹಿತಿ, ಸಂಸದೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದೀರಿ ಎಂದು ಸುಪ್ರೀಂ ಕೋರ್ಟ್‌ ತಪರಾಕಿ ಹಾಕಿತ್ತು. ಇದು ಬಹಳ ಚರ್ಚೆ ಕಾರಣವಾಗಿತ್ತು. ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. 

ರಾಜೀವ್‌ ಬಳಿಕ ಕಾಂಗ್ರೆಸ್‌ನಲ್ಲಾದ ಬದಲಾ­ವಣೆಗಳು ಬೂಟಾ ಸಿಂಗ್‌ ಅವರನ್ನು ತೆರೆಮರೆಗೆ ಸರಿಯುವಂತೆ ಮಾಡಿದವು. ಆಗ ಅವರು ಬಿಜೆಪಿ ಸೇರಿ ವಾಜಪೇಯಿ ಸರಕಾರದಲ್ಲಿಸಚಿವರೂ ಆದರು. ಆದರೆ, ಜೆಎಂಎಂ ಲಂಚ ಪ್ರಕರಣದಲ್ಲಿಕೋರ್ಟ್‌ ಬೂಟಾ ಅವರ ವಿರುದ್ಧ ದೋಷಾರೋಪಣೆ ಮಾಡಿದ ಹಿನ್ನೆಲೆಯಲ್ಲಿಅವರನ್ನು ವಾಜಪೇಯಿ ಅವರು ಸಂಪುಟದಿಂದ ಕೈ ಬಿಟ್ಟ ಬಳಿಕ ಮತ್ತೆ ಮರಳಿ ಕಾಂಗ್ರೆಸ್‌ ಗೂಡು ಸೇರಿಕೊಂಡರು. ತಮ್ಮ ಅನಿಯಂತ್ರಿತ ಅಧಿಕಾರದ ಚಲಾವಣೆಯ ಮೂಲಕ ಭಾರತೀಯ ಪ್ರಜಾಪ್ರಭುತ್ವದ ಲೋಪಗ­ಳನ್ನು ಎತ್ತಿ ತೋರಿಸಿದ್ದಕ್ಕಾಗಿ ಮತ್ತು ಅದನ್ನು ಗಟ್ಟಿಗೊಳಿಸಲು ಪರೋಕ್ಷ ವಾಗಿ ಕಾರಣರಾದ ಬೂಟಾ ಸಿಂಗ್‌ ಅವರನ್ನು ನೆನಪಿಟ್ಟುಕೊಳ್ಳಲೇಬೇಕು!

ಸುಮಾರು ಐದು ದಶಕಗಳ ರಾಜಕೀಯ ಜೀವನದಲ್ಲಿಬೂಟಾ ಸಿಂಗ್‌ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ವಿವಾದಗಳನ್ನೇ ಮೈಮೇಲೆ ಎಳೆದುಕೊಂಡಷ್ಟೇ ವೇಗವಾಗಿ ಅವುಗಳಿಂದ  ಹೊರಗೆ ಬರುವ ಕಲೆಯ ಅವರಿಗೆ ಗೊತ್ತಿತ್ತು. ಹಾಗಾಗಿಯೇ ಎಂಥದ್ದೇ ವಿವಾದಗಳು ಎದುರಾದರೂ ಎಲ್ಲವನ್ನು ನುಂಗಿಬಿಡುವ ಧಿಮಾಕು ಅವರಲ್ಲಿತ್ತು. ಎಂಟು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಬೂಟಾ ಸಿಂಗ್‌, ಕೇಂದ್ರ ಗೃಹ, ರೈಲ್ವೆ, ವಾಣಿಜ್ಯ, ಬಂದರು ಮತ್ತು ಹೆದ್ದಾರಿ, ಸಂಸದೀಯ ವ್ಯವಹಾರ, ಕ್ರೀಡೆ, ಹೌಸಿಂಗ್‌, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ನಾಗರಿಕ ಪೂರೈಕೆ-ಗ್ರಾಹಕ ವ್ಯವಹಾರ,  ಸಂವಹನ ಸೇರಿ ಹಲವು ಇಲಾಖೆಗಳನ್ನು ನಿರ್ವಹಿಸಿದ ಕಸುಬುದಾರರು. ತೀರಾ ಇತ್ತೀಚೆಗೆ ಅಂದರೆ, 2007ರಿಂದ 10ರವರೆಗೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ರಾಗಿಯೂ ಕೆಲಸ ಮಾಡಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿಅನೇಕ ಜನೋಪಕಾರಿ ಕೆಲಸ ಮಾಡಿದ್ದರೂ ಜನರು ಅವುಗಳನ್ನು ನೆನಪಿನಲ್ಲಿಟ್ಟುಕೊಂಡಿಲ್ಲ. ಯಾಕೆಂದರೆ, ಬೂಟಾ ಸಿಂಗ್‌ ಈಗಲೂ, ಇಂದಿರಾ ಅವರ ನೆಚ್ಚಿಗ ಮತ್ತು ರಾಜೀವ್‌ ಅವರ ಭಂಟ. ಎಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ವಿವಾದಿತ ರಾಜಕಾರಣಿ ಎಂಬುದು ನಿರ್ವಿವಾದ. ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿ ಪಕ್ಷ  ಸಂಘಟನೆಯಲ್ಲಿಅಮೂಲ್ಯ ಕೊಡುಗೆ ನೀಡಿದ್ದ ಬೂಟಾ ಸಿಂಗ್‌ ಅವರಿಗೆ ಕೊನೆಯ ದಿನಗಳಲ್ಲಿತಮ್ಮ ನಿಷ್ಠೆಯನ್ನು ಯಾರೂ ಪರಿಗಣಿಸುತ್ತಿಲ್ಲಎಂಬ ಚಿಂತೆ ಕಾಡುತ್ತಿತ್ತು. ತಮ್ಮ ಆಪ್ತರ ಬಳಿಯೂ ಹೇಳಿಕೊಂಡಿದ್ದರು. 



ಬುಧವಾರ, ಡಿಸೆಂಬರ್ 30, 2020

Jhumka Earring- ನೀನೇ ಗೆಲ್ಲುವೆ ಬಿಡು

ಹೇ ಜುಮುಕಿಯೇ, ಅವಳ ಕಿವಿಯಲ್ಲಿ ಓಲಾಡಲು ಲೈಸೆನ್ಸ್ ಯಾರು ಕೊಟ್ಟರು ನಿನಗೆ ?

ಅವಳು ಕೂದಲು
ತೀಡಿದಾಗೊಮ್ಮೆ
ಲೋಲಕವಾಗುವೆಯಲ್ಲ
ಅಣುಕಿಸುತ ನನ್ನ ?
ಅವಳ ಮುಂಗುರಳ
ಹೊಯ್ದಾಟಕ್ಕೂ
ನಿನ್ನ ಓಲಾಟಕ್ಕೂ
ಸ್ಪರ್ಧೆ ನಡೆದರೆ
ನೀನೇ ಗೆಲ್ಲುವೆ ಬಿಡು
~ ಮಲ್ಲಿಕಾರ್ಜುನ ತಿಪ್ಪಾರ



ಸೋಮವಾರ, ಡಿಸೆಂಬರ್ 28, 2020

How to use Whatsapp Payment- ವಾಟ್ಸಾಪ್‌ನಲ್ಲಿ ಹಣ ಕಳಿಸುವುದು ಹೇಗೆ?

- ಮಲ್ಲಿಕಾರ್ಜುನ ತಿಪ್ಪಾರ

ಫೇಸ್‌ಬುಕ್‌ ಒಡೆತನದ ವಾಟ್ಸ್‌ಆ್ಯಪ್‌ ತನ್ನ ಪೇಮೆಂಟ್‌ ಸೇವೆಯನ್ನು ಆರಂಭಿಸುವುದಾಗಿ  ಬಹಳ ದಿನ­ಗಳಿಂ­ದಲೂ ಹೇಳುತ್ತಲೇ ಬಂದಿತ್ತು. ಭಾರತ ಸರಕಾರ ಸೂಚಿಸಿರುವ ಎಲ್ಲಮಾರ್ಗದರ್ಶಿಗಳನ್ನು ಪೂರೈಸಲು ಒಂದಿಷ್ಟು ಸಮಯ ಬೇಕಾಯಿತು. ಬಳಿಕ ಬೀಟಾ ವರ್ಷನ್‌ನಲ್ಲಿಸ್ವಲ್ಪ ದಿನ ಪೇಮೆಂಟ್‌ ಸೇವೆಯನ್ನು ಜಾರಿಗೆ ತಂದು, ಇದೀಗ ಭಾರತದ ಎಲ್ಲವಾಟ್ಸ್‌ಆ್ಯಪ್‌ ಬಳಕೆದಾರರಿಗೆ ದೊರೆಯುತ್ತಿದೆ.

ಸಂಪೂರ್ಣ ಡಿಜಿಟಲೀಕರಣವಾಗುತ್ತ ಸಾಗುತ್ತಿರುವ ಭಾರತದ ಮಟ್ಟಿಗೆ ವಾಟ್ಸ್‌ಆ್ಯಪ್‌ನ ಈ ‘ವಾಟ್ಸ್‌ಆ್ಯಪ್‌ ಪೇ’ ಸೇವೆ ಒಂದು ಮೈಲುಗಲ್ಲಾಗಲಿದೆ. ಭಾರತದಲ್ಲಿವಾಟ್ಸ್‌ಆ್ಯಪ್‌ ಬಳಕೆದಾರರ ಸಂಖ್ಯೆ 34 ಕೋಟಿ. ಇಷ್ಟು ಬೃಹತ್‌ ಪ್ರಮಾಣದ ಬಳಕೆ­ದಾರ­ರನ್ನು ಹೊಂದಿರುವ ಕಾರಣಕ್ಕೆ ಇದೊಂದು ಕ್ರಾಂತಿಕಾರಿ ನಡೆ­ಯಾಗ­ಲಿದೆ ಎಂಬುದರಲ್ಲಿಯಾವುದೇ ಅನುಮಾನವಿಲ್ಲ. ಒಂದೂಮ್ಮೆ ಇಷ್ಟು ಬಳಕೆದಾರರು ಹಣ ವರ್ಗಾವಣೆ ಮತ್ತು ಸ್ವೀಕರಿಸಲು ವಾಟ್ಸ್‌­­­­ಆ್ಯಪ್‌ ಪೇ ಬಳಸಿದರೆ ಅದು ಅತಿದೊಡ್ಡ ಜಾಲವಾಗಬಹುದು.

ಏನಿದು ವಾಟ್ಸ್‌ಆ್ಯಪ್‌ ಪೇ?

ಇದೊಂದು ಯುಪಿಐ ಆಧರಿತ ಪೇಮೆಂಟ್‌ ಸೇವೆ ನೀಡುವ ವ್ಯವಸ್ಥೆಯಾಗಿದ್ದು, ಕಳೆದ ವರ್ಷ ಫೆಬ್ರವರಿಯಲ್ಲಿಬೀಟಾ ವರ್ಷನ್‌ನಲ್ಲಿವಾಟ್ಸ್‌ಆ್ಯಪ್‌ ಪೇ ಚಾಲನೆಗೊಂಡಿತ್ತು. ಈಗ ಅದು ಎಲ್ಲಬಳಕೆದಾರರಿಗೂ ಲಭ್ಯವಾಗುತ್ತಿದೆ. ವಾಟ್ಸ್‌ಆ್ಯಪ್‌ ಪೇ ಬಳಸಿಕೊಂಡು ಬಳಕೆದಾರರು ತಮ್ಮ ಯುಪಿಐ-­ಸಕ್ರಿಯಗೊಂಡ  ಬ್ಯಾಂಕ್‌ ಖಾತೆಗಳನ್ನು ಸಂಪ­­ರ್ಕಿಸ­­­ಬಹುದು ಮತ್ತು ಆ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದು. ಎಚ್‌ಡಿಎಫ್‌ಸಿ, ಐಸಿಐಸಿಐ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಆಕ್ಸಿಸ್‌ ಬ್ಯಾಂಕ್‌, ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌ ಸೇರಿದಂತೆ ಭಾರತದಲ್ಲಿರುವ ಬಹುತೇಕ ಬ್ಯಾಂಕ್‌ಗಳ ಸೇವೆಯನ್ನು ವಾಟ್ಸ್‌ಆ್ಯಪ್‌ ಪೇ ಒದಗಿಸುತ್ತದೆ.

ಸೆಟ್‌ ಅಪ್‌ ಮಾಡುವುದು ಹೇಗೆ?
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿವಾಟ್ಸ್‌ಆ್ಯಪ್‌ ಇದೆ ಎಂದಾಕ್ಷ ಣ ಹಣವನ್ನು ವರ್ಗಾವಣೆ ಮಾಡಲು ಅಥವಾ ಸ್ವೀಕರಿಸಲು ಬರುವುದಿಲ್ಲ. ನಿಮ್ಮ ವಾಟ್ಸ್‌ಆ್ಯಪ್‌ ನಂಬರ್‌ ಯುಪಿಐ ಜೊತೆ ಸಂಪರ್ಕ ಹೊಂದಿದ್ದರೆ, ಅಂಥ ವಾಟ್ಸ್‌ಆ್ಯಪ್‌ ಅಪ್‌ಡೇಟ್‌ ಮಾಡಿ. ಆಗ ವಾಟ್ಸ್‌ಆ್ಯಪ್‌ ಪೇಮೆಂಟ್‌ ಆಪ್ಷನ್‌ ನಿಮ್ಮ ಸೆಟ್ಟಿಂಗ್ಸ್‌ನಲ್ಲಿಕಾಣಿಸಿಕೊಳ್ಳುತ್ತದೆ. ಒಂದೊಮ್ಮೆ ಈ ಮೊದಲು ನೀವು ಯುಪಿಐ ಜತೆ ನಿಮ್ಮ ನಂಬರ್‌, ಖಾತೆ ಸಂಪರ್ಕಿಸಿಲ್ಲವಾದರೆ ಮೊದಲು ನೀವು ವಾಟ್ಸ್‌ಆ್ಯಪ್‌ನಲ್ಲಿಯುಪಿಐ ಅಕೌಂಟ್‌ ಸೆಟ್‌ ಅಪ್‌ ಮಾಡಿಕೊಳ್ಳಬೇಕು. ಆ ಬಳಿಕ ನೀವು ಹಣವನ್ನು ಕಳುಹಿಸಲು ಇಲ್ಲವೇ ಸ್ವೀಕರಿಸಲು ಸಾಧ್ಯವಾಗುತ್ತದೆ.

ಬಳಸುವುದು ಹೇಗೆ?
ಮಜಾ ಏನ್‌ ಗೊತ್ತಾ, ನೀವು ವಾಟ್ಸ್‌ಆ್ಯಪ್‌ನಿಂದ ಫೋಟೊ, ವಿಡಿಯೋಗಳನ್ನು ಕಳಿಸುವಷ್ಟು ಸಲೀಸಾಗಿಯೇ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು! ಚಾಟ್‌ ಬಾರ್‌­­ನಲ್ಲಿರುವ ಷೇರ್‌ ಫೈಲ್‌ ಐಕಾನ್‌ ಮೇಲೆ ಟ್ಯಾಪ್‌  ಮಾಡಿ ಮತ್ತು ಪೇಮೆಂಟ್‌ ಸೆಲೆಕ್ಟ್ ಮಾಡುವುದರ  ಮೂಲಕವು ನೀವು ನೇರ­ವಾಗಿ ಹಣವನ್ನು ವರ್ಗಾವಣೆ  ಮಾಡ­ಬಹುದು. ಹಾಗೆಯೇ, ಪ್ರತ್ಯೇಕವಾಗಿ ಹಣ ವರ್ಗಾ­ವಣೆಗೋಸ್ಕರವೇ ಶಾರ್ಟ್‌ಕಟ್‌ ಮೆನ್ಯುವಿನಲ್ಲಿಪೇಮೆಂಟ್‌ ಸೆಕ್ಷ ನ್‌ ಇದೆ. ಇಲ್ಲಿಬಳಕೆದಾರರು ಅಕೌಂಟ್‌ ಡಿಟೇಲ್ಸ್‌, ವಹಿವಾಟು ಮತ್ತು ಹಣ ಕಳುಹಿಸಿದ ಮಾಹಿತಿ­ಯನ್ನು ತಿಳಿದುಕೊಳ್ಳಬಹುದು.

ಎಚ್ಚರ ಇರಲಿ
- ವಾಟ್ಸ್‌ಆ್ಯಪ್‌ ಪೇಮೆಂಟ್‌ ಸೇವೆ  ಎಷ್ಟು ಸರಳವಾಗಿದೆಯೋ ಅಷ್ಟೇ ಅಪಾಯಕಾರಿಯೂ ಆಗಬಹುದಾದ ಸಾಧ್ಯತೆ ಇದೆ. ಹಾಗಾಗಿ, ವಾಟ್ಸ್‌ಆ್ಯಪ್‌ ಪೇ ಸೇವೆಯನ್ನು ಬಳಸುವ ಮುನ್ನ ಒಂದಿಷ್ಟು ಎಚ್ಚರಿಕೆಗಳನ್ನು ಬಳಕೆದಾರರು ವಹಿಸಲೇಬೇಕು.

- ಪೇಮೆಂಟ್ಸ್‌ ಸಕ್ರಿಯಗೊಳಿಸುವ ಸಂಬಂಧ ವಾಟ್ಸ್‌ಆ್ಯಪ್‌ ಎಂದಿಗೂ ದೂರವಾಣಿ ಕರೆ ಅಥವಾ ಸಂದೇಶಗಳನ್ನು ರವಾನಿಸುವುದಿಲ್ಲಎಂಬುದನ್ನು ನೆನಪಿಡಿ.

- ವಾಟ್ಸ್‌ಆ್ಯಪ್‌ ಪೇಮೆಂಟ್ಸ್‌ಗೆ ಯಾವುದೇ ಅಧಿಕೃತ ಕಸ್ಟಮ್‌ ಕೇರ್‌ ನಂಬರ್‌ ಇಲ್ಲ. ಹಾಗಾಗಿ, ಯಾರಾದರೂ ವಾಟ್ಸ್‌ಆ್ಯಪ್‌ ಪೇ ಕಸ್ಟಮರ್‌ ಕೇರ್‌ನಿಂದ ಕರೆ ಮಾಡಿದ್ದೇವೆ ಎಂದರೆ ನಂಬಲು ಹೋಗಬೇಡಿ. ಯಾಕೆಂದರೆ, ನಿಮ್ಮನ್ನು ಮೋಸಗೊಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

- ನಿಮ್ಮ ಡೆಬಿಟ್‌ ಮತ್ತು ಕ್ರೆಡಿಟ್‌ಕಾರ್ಡ್‌ ವಿವರ, ಒಟಿಪಿ ಅಥವಾ ಯುಪಿಐ ಪಿನ್‌ ನಂಬರ್‌ ಅನ್ನು ಯಾರೊಂದಿಗೂ ವಾಟ್ಸ್‌ಆ್ಯಪ್‌ ಪೇಮೆಂಟ್‌ಗಾಗಿ ಹಂಚಿಕೊಳ್ಳಲು ಹೋಗಬೇಡಿ.

- ವಾಟ್ಸ್‌ಆ್ಯಪ್‌ನಲ್ಲಿನಿಮಗೆ ಕಳುಹಿಸಲಾಗುವ ಅಪರಿಚಿತ, ಸಂಶಾಯಸ್ಪದ ಲಿಂಕ್‌ಗಳನ್ನು ಕ್ಲಿಕ್‌ ಮಾಡಲು ಹೋಗಲೇಬೇಡಿ.

- ವಾಟ್ಸ್‌ಆ್ಯಪ್‌ನಲ್ಲಿನಿಮಗೆ ಪರಿಚಿತರಾದವರಿಂದ ಮಾತ್ರವೇ ವಾಟ್ಸ್‌ಆ್ಯಪ್‌ ಪೇ ರಿಕ್ವೆಸ್ಟ್‌ಗಳನ್ನು

ಸ್ವೀಕರಿಸಿ. ಅಪರಿಚಿತ ರಿಕ್ವೆಸ್ಟ್‌ಗಳನ್ನು ಸ್ವೀಕರಿಸಲು ಹೋಗಬೇಡಿ. ಖದೀಮರು ನಿಮ್ಮ ಖಾತೆಯಿಂದ ಹಣವನ್ನು ಲಪಟಾಯಿಸಬಹುದು. ಹುಷಾರಾಗಿರಿ.

 

(ಈ ಲೇಖನವು 2020 ಡಿಸೆಂಬರ್ 27ರ ವಿಜಯ ಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ)




ಶನಿವಾರ, ಡಿಸೆಂಬರ್ 26, 2020

Four Haiku: ನಾಲ್ಕು ಹಾಯ್ಕುಗಳು

ಕಡು ದುಃಖವೇ ಕಡು ಪ್ರೀತಿ

ಪ್ರೀತಿ ಕ್ಷಮೆಗೂ ಸಮ

ನಾನೀಗ ನಿನ್ನನ್ನು ಕ್ಷಮಿಸುತ್ತಿದ್ದೇನೆ

- ಘಾಡ್ ಶಹಬಂದರ್


ಮಳೆಬಿಲ್ಲು ಸ್ಥಿರವಾಗಿದೆ

ನೀನು ಈಗ ಇಲ್ಲೆ ಇರುವಂತೆ

ಈ ಕ್ಷಣದಲ್ಲಿ...

- Takahama Kyoshi


ನಾವು ಸತ್ತು ಹೋಗೋಣ್ವಾ?

ನನ್ನ ಕಿವಿಯಲ್ಲಿ ಪಿಸುಗುಟ್ಟಿದೆ

ಮಿಂಚು ಹುಳದ ಆ ರಾತ್ರಿಯಲಿ

- Suzuki Masajo


ನಮ್ಮ ನಡುವಿನ ಪ್ರೀತಿ

ಮಾತು ಮತ್ತು ಉಸಿರು, ನಿನ್ನನ್ನು ಪ್ರೀತಿಸುವುದು ಎಂದರೆ

ಉದ್ದನೆಯ ನದಿ ಹರಿದಂತೆ

- ಸೋನಿಯಾ ಸ್ಯಾಂಚ್



ಬುಧವಾರ, ಡಿಸೆಂಬರ್ 23, 2020

Poem: ಸೂಚನೆಯಾದರೂ ಏನು?

 ಹಗಲು ರಾತ್ರಿ ಒಂದಾಗುವ ಆ ಸಂಜೆಯ 

ನಸುಗೆಂಪಲ್ಲಿ ಹೊಳೆಯುವ ನಿನ್ನ 

ನಯನಗಳು ಕೆಣಕುತ್ತಿವೆ ಏನನ್ನೋ?


ಉಲಿಯುವ ಹಕ್ಕಿಗಳ ಸ್ವರ ಮೇಳ

ಹಿನ್ನೆಲೆಯಲ್ಲಿ ಏನೋ

ಸಂಕೇತಿಸುತ್ತಿವೆ ನಿನ್ನ ತುಟಿಗಳು?


ತಂಗಾಳಿ ಸೋಕಿ ನರ್ತಿಸುವ

ನಿನ್ನ ಮುಂಗುರುಳು ನೀಡುತ್ತಿರುವ

ಮುನ್ಸೂಚನೆಯಾದರೂ ಏನು?


ಹಗಲು ಸತ್ತು, ರಾತ್ರಿ ಹುಟ್ಟಿ

ತಿಂಗಳ ಬೆಳಕು ಚೆಲ್ಲಿ

ಬಳಿದುಕೊಳ್ಳುವುದಾದರೂ ಏನು?

- ಮಲ್ಲಿಕಾರ್ಜುನ ತಿಪ್ಪಾರ