ಮಂಗಳವಾರ, ಮೇ 17, 2022

QR Code Scan Scam: ಕ್ಯೂಆರ್‌ ಕೋಡ್‌ ಬಳಸಿ ವಂಚನೆ, ಇರಲಿ ಎಚ್ಚರ


- ಮಲ್ಲಿಕಾರ್ಜುನ ತಿಪ್ಪಾರ
ತಂತ್ರಜ್ಞಾನ  ಬೆಳೆದಂತೆ ನಮ್ಮ ಜೀವನ ಬಹಳ ಸುಲಭವಾಗಿದೆ. ಕೈ ಬೆರಳ ತುದಿಯಲ್ಲೇ ಇಡೀ ಜಗತ್ತಿದೆ. ಕುಳಿತಲ್ಲೇ ನಿಮಗೆ ಬೇಕಾದ್ದನ್ನು ತರಿಸಿಕೊಳ್ಳ­ಬಹುದು; ಇಲ್ಲ ಮಾರಬಹುದು. ಈ ಡಿಜಿಟಲ್‌ ಯುಗದಲ್ಲಿ ಬಹಳಷ್ಟು ಉಪಯೋಗಗಳಿವೆ. ಹಾಗೆಯೇ, ಸ್ವಲ್ಪ ಮೈಮರೆತರೂ ಎಲ್ಲವನ್ನೂ ಕಳೆದುಕೊಳ್ಳಲು ಕ್ಷಣಾರ್ಧ ಸಾಕು. ಸೈಬರ್‌ ಖದೀಮರು ಯಾವ ಮಾಯೆ­ಯಿಂದಲಾದರೂ ನಿಮ್ಮ ಫೋನ್‌ ಹೊಕ್ಕು, ನಿಮ್ಮೆಲ್ಲ ಮಾಹಿತಿ ಹಾಗೂ ಹಣವನ್ನು ಕಿತ್ತುಕೊಳ್ಳಬಲ್ಲರು. ಈ ಖದೀಮರು ಇತ್ತೀಚಿನ ಎರಡು ವರ್ಷಗಳಲ್ಲಿ ಹೊಸ ದಾರಿ ಮೂಲಕ ಮುಗ್ಧ ಜನರನ್ನು ವಂಚಿಸುತ್ತಿದ್ದಾರೆ. ಅವರೀಗ ಕ್ಯೂಆರ್‌ ಕೋಡ್‌ ಬಳಸಿಕೊಂಡು, ಜನರ ಖಾತೆಯಲ್ಲಿರುವ ಹಣವನ್ನು ಎಗರಿಸುತ್ತಿದ್ದಾರೆ. ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಹೇಗೆ ವಂಚನೆ?

ಈ ಮೊದಲು ಫಿಶಿಂಗ್‌ ಮೇಲ್‌, ಲಿಂಕ್ಸ್‌ ಕಳುಹಿಸಿ ಹಣವನ್ನು ಎತ್ತುತ್ತಿದ್ದ ಖದೀಮರು ಕ್ಯೂಆರ್‌ ಕೋಡ್‌ ಮೂಲಕ ಆ ಕೆಲಸವನ್ನು ಮಾಡುತ್ತಿದ್ದಾರೆ. ಅಪರಿಚಿತರಿಗೆ ಕ್ಯೂಆರ್‌ ಕೋಡ್‌ ಕಳುಹಿಸಿ, ನಿಮಗೆ ಇಂತಿಂಥ ಸ್ಕೀಮ್‌ನಲ್ಲಿ ಹಣ ಬಂದಿದೆ, ಕ್ಯೂಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡಿ, ನಿಮ್ಮ ಅಕೌಂಟ್‌ಗೆ ಹಣ ವರ್ಗಾವಣೆಯಾಗುತ್ತದೆ ಎಂಬ ಒಕ್ಕಣಿಕೆ ಸಂದೇಶಗಳನ್ನು ಕಳುಹಿಸುತ್ತಾರೆ. ಬಳಕೆದಾರರು ಇದನ್ನು ನಿಜ ಎಂದು ನಂಬಿ, ಹಣದ ಆಮಿಷಕ್ಕೆ ಒಳಗಾಗಿ ಕ್ಯೂಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡಿದರೆ, ಖಾತೆಗೆ ಹಣ ವರ್ಗಾವಣೆ ಆಗುವ ಬದಲು, ನಿಮ್ಮ ಖಾತೆಯಲ್ಲಿರುವ ಹಣವೇ ಅವರಿಗೆ ವರ್ಗಾವಣೆ­ಯಾಗಿರುತ್ತದೆ! ಆಗಲೇ ಮೋಸ ಹೋಗಿರುವುದು ಗೊತ್ತಾಗುತ್ತದೆ. ಜತೆಗೆ ಹಣ ಮಾತ್ರವಲ್ಲದೇ, ನಮ್ಮೆಲ್ಲವೈಯಕ್ತಿಕ ಮಾಹಿತಿಯನ್ನು ಅವರು ಖದಿಯುತ್ತಾರೆ. ಸಾಮಾನ್ಯವಾಗಿ ಇಂಥ ಆಮಿಷ ಒಡ್ಡುವ ಸಂದೇಶಗಳು ವಾಟ್ಸ್‌ಆ್ಯಪ್‌ ಮೂಲಕವೇ ಇಲ್ಲವೇ ಮೇಲ್‌ ಮುಖಾಂತರ ಬರುತ್ತವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು.

ರಕ್ಷ ಣೆ ಹೇಗೆ? 
ಸೈಬರ್‌ ಕಳ್ಳರು ಒಂದಿಲ್ಲ ಒಂದು ಹೊಸ ದಾರಿಯನ್ನು ಹುಡುಕಿಕೊಳ್ಳುತ್ತಿದ್ದಾರೆ. ಈಗ ಕ್ಯೂಆರ್‌ ಕೋಡ್‌ ಮೂಲಕ ಹಣ ಕೀಳುತ್ತಿದ್ದಾರೆ. ಈ ವಂಚನೆಯ ಜಾಲಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕೆಂದರೆ, ನಮ್ಮ ಎಚ್ಚರದಲ್ಲಿ ನಾವಿರಬೇಕು. ಯಾವುದೇ ಕಾರಣಕ್ಕೂ ನಮ್ಮ ಯುಪಿಐ ಐಡಿ ಅಥವಾ ಬ್ಯಾಂಕ್‌ ಮಾಹಿತಿಯನ್ನು ಅಪರಿಚಿತರ ಜತೆ ಹಂಚಿಕೊಳ್ಳಬಾರದು. ಅಪರಿಚಿತರಿಂದ ಅಥವಾ ಶಂಕಾಸ್ಪದ ವ್ಯಕ್ತಿಗಳಿಂದ  ಬರುವ ಯಾವುದೇ ಕ್ಯೂಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡಲು ಹೋಗಬಾರದು. ಜತೆಗೆ, ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳ­ಬಾರದು. ಇವಿಷ್ಟು ಮಾಡುವುದರಿಂದ ಖಂಡಿತವಾಗಿಯೂ ನೀವು ವಂಚಕರ ಜಾಲಕ್ಕೆ ಬೀಳದೆ ಬಚಾವ್‌ ಆಗಬಹುದು. ಹಾಗೆಯೇ, ಆನ್‌ಲೈನ್‌ ವ್ಯವಹಾರ ಮಾಡುವಾಗ ಅಥವಾ ಹಣವನ್ನು ಪಾವತಿಸುವಾಗ ವ್ಯಕ್ತಿಯ ನೈಜತೆಯನ್ನು ತಿಳಿಯಲು ಪ್ರಯತ್ನಿಸಿ. ಅದರಲ್ಲೂ ಆನ್‌ಲೈನ್‌ ವೇದಿಕೆಗಳಲ್ಲಿ ಖರೀದಿಸುವಾಗ ಬಹಳ ಹುಷಾರ್‌ ಆಗಿರಬೇಕು. ಸಿಕ್ಕ ಸಿಕ್ಕ ತಾಣಗಳಲ್ಲಿ ಖರೀದಿಗೆ ಮುಂದಾಗಬಾರದು. ವಿಶ್ವಾಸಾರ್ಹ ವೇದಿಕೆಗಳನ್ನು ಮಾತ್ರ ಬಳಸಿ. ಒಂದೊಮ್ಮೆ ನೀವು ಯುಪಿಐ ಬಳಸುತ್ತಿದ್ದರೆ ಕೋಡ್‌ ಮೂಲಕ ಅದನ್ನು ಸೆಕ್ಯುರ್‌ ಮಾಡಿಟ್ಟುಕೊಳ್ಳಿ. ಭೀಮ್‌, ಫೋನ್‌ಪೇ, ಗೂಗಲ್‌ ಪೇ ಸೇರಿದಂತೆ ಎಲ್ಲಯುಪಿಐ ಪೇಮೆಂಟ್‌ ತಾಣಗಳು ಬಳಕೆ­ದಾರರಿಗೆ ಸೆಕ್ಯುರಿಟಿ ಪಿನ್‌ ಮಾಡಲು ಅವಕಾಶ ಮಾಡಿಕೊಟ್ಟಿರುತ್ತವೆ. ಹಾಗಾಗಿ, ತಪ್ಪದೇ ಸೆಕ್ಯುರಿಟಿ ಪಿನ್‌ ಸೆಟ್‌ ಮಾಡಿಕೊಳ್ಳಿ. ಅಪರಿಚಿತರಿಂದ ವ್ಯವಹರಿಸುವಾಗ ಸಾಧ್ಯವಾದಷ್ಟು ನಗದು ಮೂಲಕ ವಹಿವಾ ಮಾಡುವುದು ಉತ್ತಮ. ಇದರಿಂದ ಆನ್‌ಲೈನ್‌ ವಂಚನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ. 

ಎಚ್ಚರಿಕೆಯೊಂದೇ ದಾರಿ
ಆನ್‌ಲೈನ್‌ ಹಣಕಾಸು ವ್ಯವಹಾರ ಹೆಚ್ಚಾದಂತೆ ಆನ್‌ಲೈನ್‌ ವಂಚನೆಗಳೂ ಹೆಚ್ಚಾಗುತ್ತಿರುವುದು ಸತ್ಯ. ಹಾಗಾಗಿ, ನಾವು ಯಾವಾಗಲೂ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವಿಶೇಷವಾಗಿ, ಆನ್‌ಲೈನ್‌ ತಾಣಗಳ ಮೂಲ ಹಣ ಪಾವತಿಸುವ ಸಂದರ್ಭ ಎದುರಾದಾಗ ಎಷ್ಟು ಸಾಧ್ಯವೋ ಅಷ್ಟು ಮುಂಜಾಗೃತೆಯನ್ನು ವಹಿಸಿಕೊಳ್ಳಬೇಕು. ನಾವು ಯಾರಿಗೆ ಹಣ ಪಾವತಿಸುತ್ತಿದ್ದೇವೆ ಎಂಬುದರ ಬಗ್ಗೆ ಗೊತ್ತಿರಬೇಕು. ಚೂರೇ ಚೂರು ಸಂಶಯ ಬಂದರೂ ಆನ್‌ಲೈನ್‌ ಮೂಲಕ ಹಣ ಪಾವತಿಸಲು ಹೋಗಬೇಡಿ. ಹಾಗೆಯೇ, ಅಪರಿಚಿತರಿಂದ ಬರುವ ಯಾವುದೇ ರೀತಿಯ ಕ್ಯೂಆರ್‌ ಕೋಡ್‌ಗಳನ್ನು ಸ್ಕ್ಯಾ‌ನ್‌ ಮಾಡಲು ಹೋಗಲೇ ಬೇಡಿ. ಹಣ ಕಳೆದುಕೊಂಡು ಪರಿತಪಿಸುವುದಕ್ಕಿಂತ ಕಳೆದುಕೊಳ್ಳದಂತೆ ನೋಡಿ­ಕೊಳ್ಳುವುದು ಬೆಸ್ಟ್‌ ಉಪಾಯ ಅಲ್ಲವೇ?



Ravindra Jadeja- ಜಡೇಜಾ ಅಂದರೆ 'ಜಯ'

ಮೂರೂ ಮಾದರಿಯ ಕ್ರಿಕೆಟ್‌ನಲ್ಲಿಭಾರತೀಯ ಕ್ರಿಕೆಟ್‌ ತಂಡದ ಕಾಯಂ ಸದಸ್ಯರಾಗಿರುವ ರವೀಂದ್ರ ಜಡೇಜಾ ಅವರೀಗ ಐಪಿಎಲ್‌ನಲ್ಲಿಸಿಎಸ್‌ಕೆ ತಂಡದ ನಾಯಕ.


- ಮಲ್ಲಿಕಾರ್ಜುನ ತಿಪ್ಪಾರ
ಸಂದರ್ಶಕ: ವೃತ್ತಿ ಜೀವನದ ಅಂತ್ಯಕ್ಕೆ ನಿಮ್ಮ ಹೆಸರಿನಲ್ಲಿವಿಶಿಷ್ಟ ದಾಖಲೆ ಯಾವುದು ಇರಬೇಕೆಂದು ಇಚ್ಛಿಸುತ್ತೀರಿ?
ಕ್ರಿಕೆಟಿಗ: ಒಂದೇ ಪಂದ್ಯದಲ್ಲಿ ಐದು ವಿಕೆಟ್‌ ಹಾಗೂ ಶತಕ ಗಳಿಸಿದ ದಾಖಲೆ.

ಹೀಗೆ, ತಮ್ಮ ದಾಖಲೆ ಯಾವುದು ಇರಬೇಕೆಂದು ಹೇಳಿ ಅದನ್ನು ಸಾಧಿಸಿದ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ವಿಶ್ವದ ನಂ.1 ಆಲ್‌ರೌಂಡರ್‌ ರವೀಂದ್ರ ಜಡೇಜಾ. ಆದರೆ, ಅವರ ವೃತ್ತಿಜೀವನ ಅಂತ್ಯವಾಗುತ್ತಿಲ್ಲ; ಈಗಷ್ಟೇ ಉಚ್ಛ್ರಾಯ ಸ್ಥಿತಿಗೆ ತಲುಪಿದೆ!

ಖಾಸಗಿ ಕ್ರೀಡಾ ವಾಹಿನಿಯೊಂದು 2018ರಲ್ಲಿನಡೆಸಿದ ಸಂದರ್ಶನದ ತುಣುಕು ಇದು. ಇದಾಗಿ ನಾಲ್ಕು ವರ್ಷದಲ್ಲೇ ಜಡೇಜಾ ತಮ್ಮ ಕನಸಿನ ದಾಖಲೆ ಪೂರ್ತಿಗೊಳಿಸುವ ಟೆಸ್ಟ್‌ ಪಂದ್ಯವನ್ನು ಆಡಿ­ದರು. ಕಳೆದ ಮಾರ್ಚ್‌ ತಿಂಗಳಲ್ಲಿ ಮೊಹಾಲಿಯಲ್ಲಿ ನಡೆದ ಪ್ರವಾಸಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಜಡೇಜಾ ಅವರು 7ನೇ ವಿಕೆಟ್‌ನಲ್ಲಿ ಅಮೋಘ 175 ರನ್‌ಗಳನ್ನು ಸಿಡಿಸಿ, ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಗೊಂಚಲು ಕೂಡ ಪಡೆದುಕೊಂಡು, ತಮ್ಮ ಕನಸಿನ ದಾಖಲೆ ಸಾಧಿಸಿ ಬೀಗಿದರು. ಈ ಸಂದರ್ಶನದ ತುಣುಕನ್ನು ಯಾಕೆ ಪ್ರಸ್ತಾಪಿಸಬೇಕಾಯಿತು ಎಂದರೆ, ತಾವು ಅಂದುಕೊಂಡಿದ್ದನ್ನು ಛಲ ಬಿಡದೇ ಸಾಧಿಸುವ ಗುಣ ಅವರಲ್ಲಿದೆ. ಆ ಗುಣವೇ ಅವರನ್ನೀಗ ನಾಲ್ಕು ಬಾರಿ ಐಪಿಎಲ್‌ ಚಾಂಪಿಯನ್‌ ಪಟ್ಟ ಏರಿರುವ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡದ ನಾಯಕತ್ವದವರೆಗೂ ಕರೆ ತಂದಿದೆ. 

ವರ್ಷದಿಂದ ವರ್ಷಕ್ಕೆ ಪರಿಪೂರ್ಣ ಆಟಗಾರರಾಗಿ ಬದಲಾಗುತ್ತಿರುವ ರವೀಂದ್ರ ಜಡೇಜಾ ಭಾರತೀಯ ಕ್ರಿಕೆಟ್‌ನ ಬಹುದೊಡ್ಡ ಆಸ್ತಿ ಮತ್ತು ಇದೇ ಮಾತನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೂ ಅನ್ವಯಿಸಬಹುದು. ಜಡೇಜಾ 2012ರ ಆವೃತ್ತಿಯಿಂದ ಸಿಎಸ್‌ಕೆ ಬಳಗದಲ್ಲಿದ್ದಾರೆ. ಆ ಆವೃತ್ತಿಯ ಹರಾಜಿನಲ್ಲಿ ಅವರನ್ನು 9.8 ಕೋಟಿ ರೂಪಾಯಿಗೆ ಸಿಎಸ್‌ಕೆ ಫ್ರಾಂಚೈಸಿ ಖರೀದಿಸಿತ್ತು. ಅದು ಆಗ ದಾಖಲೆ. ಕಳೆದ ಹರಾಜಿಗೂ ಮೊದಲು 16 ಕೋಟಿ ರೂಪಾಯಿ ತೆತ್ತು ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. 33 ವರ್ಷದ ಜಡೇಜಾ ಐಪಿಎಲ್‌ ಸಿಎಸ್‌ಕೆ ಪರವಾಗಿ ಅದ್ಭುತವಾದ ಆಟವನ್ನೇ ಆಡಿದ್ದಾರೆ. ಐಪಿಎಲ್‌ನಲ್ಲಿ ಈವರೆಗೆ 200 ಪಂದ್ಯಗಳನ್ನಾಡಿ 2386 ರನ್‌ಗಳೊಂದಿಗೆ 127 ವಿಕೆಟ್‌ ಕೂಡ ಕಿತ್ತಿದ್ದಾರೆ. 

ಕ್ರಿಕೆಟ್‌ನಲ್ಲಿ ‘ಸವ್ಯಸಾಚಿ’ಗಳಿಗೂ ಎಂದಿಗೂ ವಿಶೇಷ ಸ್ಥಾನವಿದೆ. ಕ್ರಿಕೆಟ್‌ ಇತಿಹಾಸವನ್ನು ನೋಡಿದರೆ ಗ್ಯಾರಿ ಸೋಬರ್ಸ್‌, ಜಾಕಸ್‌ ಕಾಲಿಸ್‌, ಕಪಿಲ್‌ ದೇವ್‌, ಇಮ್ರಾನ್‌ ಖಾನ್‌, ರಿಚರ್ಡ್‌ ಹ್ಯಾಡ್ಲಿ, ಕೇಥ್‌ ಮಿಲ್ಲರ್‌, ಲ್ಯಾನ್ಸ್‌ ಕ್ಲುಸ್ನರ್‌, ಟೋನಿ ಗ್ರೇಗ್‌ನಂಥ ಆಟಗಾರರು ಕ್ರಿಕೆಟ್‌ಗೆ ಹೊಸ ಮೆರುಗು ತಂದುಕೊಟ್ಟಿದ್ದಾರೆ. ಅದೇ ಸಾಲಿನಲ್ಲಿ ಜಡೇಜಾ ಕೂಡ ಸಾಗುತ್ತಿದ್ದಾರೆ. ಬ್ಯಾಟ್‌, ಬಾಲ್‌ ಮತ್ತು ಫೀಲ್ಡಿಂಗ್‌ ಮೂಲಕ ತಮ್ಮ ತಂಡವನ್ನು ಯಶಸ್ಸಿನ ದಡಕ್ಕೆ ಕೊಂಡೊಯ್ಯುವ ಪ್ರಯತ್ನವನ್ನು ಪ್ರತಿ ಪಂದ್ಯದಲ್ಲಿ ಮಾಡುತ್ತಲೇ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಭಾರತೀಯ ಟೆಸ್ಟ್‌ ಕ್ರಿಕೆಟ್‌ ತಂಡದ ಕಾಯಂ ಆಟಗಾರನಾಗಿ ರೂಪುಗೊಳ್ಳುತ್ತಿದ್ದಾರೆ ಹಾಗೂ ಅವರ ಪ್ರಯತ್ನದ ಫಲವಾಗಿ ಹಲವು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿದೆ. ಹಾಗಾಗಿ, ಅವರನ್ನು ‘ಮ್ಯಾಚ್‌ ವಿನ್ನರ್‌’ ಎಂದು ಹೇಳಿದರೆ ಅತಿಯಾಗದು. ಟೆಸ್ಟ್‌ ಆಗಲಿ, ಒನ್‌ ಡೇ, ಟಿ20 ಅಥವಾ ಐಪಿಎಲ್‌ ಪಂದ್ಯವೇ ಆಗಿರಲಿ, ಸೋಲಿನ ಅಂಚಿನಲ್ಲಿದ್ದ ತಂಡವನ್ನು ಏಕಾಂಗಿಯಾಗಿ ಬ್ಯಾಟ್‌ ಹಾಗೂ ಬಾಲ್‌ ಮೂಲಕ ಮೇಲಕ್ಕೆತ್ತಿದ ಉದಾಹರಣೆಗಳಿವೆ.

ಹಾಗಂತ, ಅವರೇನೂ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅದ್ಭುತವಾದ್ದನ್ನು ಮಾಡುವುದಿಲ್ಲ. ಬದಲಿಗೆ, ತಮ್ಮ ಆಟ­ವನ್ನು ಶಿಸ್ತುಬದ್ಧವಾಗಿ ಆಡುತ್ತಾರಷ್ಟೇ. ಉದಾಹರಣೆಗೆ, ರವೀಚಂದ್ರನ್‌ ಅಶ್ವಿನ್‌ ರೀತಿಯಲ್ಲಿ ಜಡೇಜಾ ಅವ­ರೇನೂ ಒಂದೇ ಓವರ್‌ನಲ್ಲಿ 6 ಬಾಲ್‌ಗಳನ್ನು ಒಂದ­ಕ್ಕಿಂತ ಒಂದು ಭಿನ್ನವಾಗಿ ಎಸೆಯುವುದಿಲ್ಲ. ಬದಲಿಗೆ ಸ್ಟಂಪ್‌ ಟು ಸ್ಟಂಪ್‌ ಹಾಗೂ ಲೈನ್‌ ಮತ್ತು ಲೆಂಥ್‌ ಕರಾರು­ವಕ್ಕಾಗಿ ಬೌಲಿಂಗ್‌ ಮಾಡುತ್ತಾರೆ. ಅವರ ಶಿಸ್ತಿನ  ಬೌಲಿಂಗ್‌ಗೆ ಪಿಚ್‌ ಕೂಡ ಸಾಥ್‌ ನೀಡಿದರೆ ಮುಗೀತು ಎದುರಾಳಿಯ ವಿಕೆಟ್‌ಗಳು ಬೀಳುತ್ತಾ ಹೋಗುತ್ತವೆ. ಬ್ಯಾಟಿಂಗ್‌ನಲ್ಲೂ ಅಷ್ಟೇ ವಿಶೇಷವಾದ್ದನ್ನು ಏನೂ ಮಾಡಲು ಹೋಗುವುದಿಲ್ಲ, ಚೆಂಡಿನ ದಿಕ್ಕು ಮತ್ತು ಗತಿಯನ್ನು ಗುರು­ತಿಸಿ ಅದನ್ನು ಅಷ್ಟೇ ಶಿಸ್ತು ಬದ್ಧವಾಗಿ ಬಲವಾಗಿ ಹೊಡೆಯುತ್ತಾರೆ; ಚೆಂಡು ಬೌಂಡ್ರಿ ಗೆರೆಯನ್ನು ದಾಟಿರುತ್ತದೆ. ಇನ್ನು ಫೀಲ್ಡಿಂಗ್‌ನಲ್ಲಿ ಮಾತಾಡು­ವಂತೆಯೇ ಇಲ್ಲ, ಬಹುಶಃ ಮೊಹಮ್ಮದ್‌ ಕೈಫ್‌ ಮತ್ತು ಯುವರಾಜ್‌ ಸಿಂಗ್‌ ಅವರ ಬಳಿಕ ಭಾರತಕ್ಕೆ ಸಿಕ್ಕ ಅದ್ಭುತ ಫೀಲ್ಡರ್‌ ಇವರು. ಅವರ ಬಳಿ ಬಾಲ್‌ ಹೋದರೆ ಎದುರಾಳಿ ತಂಡದ ಬ್ಯಾಟರ್‌ ರನ್‌ ಕದಿಯಲು ಮುಂದಾಗುವುದೇ ಇಲ್ಲ! ಅಷ್ಟರ ಮಟ್ಟಿಗೆ ಅವರ ಥ್ರೋಗಳು ಕರಾರುವಕ್ಕಾಗಿ­ರುತ್ತವೆ ಮತ್ತು ಫೀಲ್ಡಿಂಗ್‌ ಮೂಲಕವೇ ಬೌಂಡರಿಗಳನ್ನು ಉಳಿಸಿ ತಂಡಕ್ಕೆ ನೆರವಾಗುವ ಚಾಕಚಕ್ಯತೆ ಅವರಲ್ಲಿ ಇದೆ. ಈ ವರೆಗೆ 59 ಟೆಸ್ಟ್‌ಗಳಿಂದ 242 ವಿಕೆಟ್‌ ಹಾಗೂ 2 ಶತಕಗಳೊಂದಿಗೆ 2369 ರನ್‌ ಗಳಿಸಿದ್ದಾರೆ. 168 ಅಂತಾರಾಷ್ಟ್ರೀಯ ಒಂದು ದಿನದ ಪಂದ್ಯಗಳನ್ನಾಡಿ 2411 ರನ್‌ಗಳೊಂದಿಗೆ 188 ವಿಕೆಟ್‌ಗಳನ್ನು ಪಡೆದುಕೊಂಡಿ­ದ್ದಾರೆ. 57 ಟಿ20 ಪಂದ್ಯಗಳಲ್ಲಿ47 ವಿಕೆಟ್‌ ಹಾಗೂ 326 ರನ್‌ ಗಳಿಸಿದ್ದಾರೆ.

1988 ಡಿಸೆಂಬರ್‌ 6ರಂದು ರವೀಂದ್ರ ಜಡೇಜಾ ಗುಜರಾತ್‌ನ ಜಾಮ್‌ನಗರದ ರಜಪೂತ್‌ ಕುಟುಂಬದಲ್ಲಿ ಜನಿಸಿದರು. ತಂದೆ ಅನಿರುದ್ಧ ಖಾಸಗಿ ಏಜೆನ್ಸಿ ಪರವಾಗಿ ವಾಚ್‌ಮನ್‌ ಕೆಲಸ ಮಾಡುತ್ತಿದ್ದರು.  ಮಗ ಸೇನೆ ಸೇರಿಕೊಳ್ಳಲಿ ಎಂದು ತಂದೆ ಆಸೆ ಪಟ್ಟರೆ ಕ್ರಿಕೆಟ್‌ ಆಗುವ ಕನಸು ಕಂಡಿದ್ದ ಜಡೇಜಾಗೆ ತಾಯಿ ಲತಾ ಆಸರೆಯಾಗಿ ನಿಂತಿದ್ದರು. ಆದರೆ, ವಿಧಿ ಬೇರೆಯದ್ದೇ ಆಟ ಹೂಡಿತ್ತು. 2005ರಲ್ಲಿಅವರ ತಾಯಿ ರಸ್ತೆ ಅಪಘಾತದಲ್ಲಿಮೃತಪಟ್ಟರು. ಆಗ ಜಡೇಜಾ ಅವರಿಗೆ ಕೇವಲ 17 ವರ್ಷ. ತೀವ್ರ ಆಘಾತಕ್ಕೆ ಒಳಗಾಗಿದ್ದ ಅವರು ಕ್ರಿಕೆಟ್‌ ತೊರೆಯುವ ನಿರ್ಧಾರ ಮಾಡಿದ್ದರಂತೆ. ಆದರೆ, ತಾಯಿ ಆಸೆ ನೆರವೇರಿಸುವ ಪಣ ತೊಟ್ಟಂತೆ ತಮಗೆ ಸಿಕ್ಕ ಅವಕಾಶ­ಗಳನ್ನು ಬಾಚಿಕೊಂಡು ಜಡೇಜಾ ಈಗ ವಿಶ್ವದ ನಂ.1 ಆಲ್‌ರೌಂಡರ್‌ ಆಗಿದ್ದಾರೆ. ಇವರಿಗೆ ಒಬ್ಬಳು ಸಹೋದರಿ ಇದ್ದಾರೆ. 2016ರಲ್ಲಿರೀವಾ ಸೋಲಂಕಿಯನ್ನು ವರಿಸಿದರು, ದಂಪತಿಗೆ ಒಂದು ಹೆಣ್ಣು ಮಗುವಿದೆ. 

‘ಜಡ್ಡು’, ‘ರಾಕ್‌ ಸ್ಟಾರ್‌’, ‘ಸರ್‌ ಜಡೇಜಾ’ ಇತ್ಯಾದಿ ಅಡ್ಡ  ಹೆಸರುಗಳನ್ನು ಹೊಂದಿರುವ ಜಡೇಡಾ, ಮೈದಾನದಲ್ಲಿಶತಕ ಅಥವಾ ಅರ್ಧ ಶತಕ ಸಿಡಿಸಿದಾಗ ಕತ್ತಿ ವರಸೆ ರೀತಿಯಲ್ಲಿ ಬ್ಯಾಟ್‌ ಬೀಸುವುದನ್ನು ನೋಡುವುದೇ ಚೆಂದ. 16ನೇ ವಯಸ್ಸಿಗೆ ಜಡೇಜಾ ಅಂಡರ್‌ 19 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾದರು. ಆದರೆ, ಭಾರತ ತಂಡ ಕಪ್‌ ಗೆಲ್ಲಲು ಸಾಧ್ಯವಾಗಲಿಲ್ಲ. ಮುಂದೆ 2008ರಲ್ಲೂ ಅಂಡರ್‌-19 ಟೀಮ್‌ ಆಯ್ಕೆಯಾದರಲ್ಲದೇ ವೈಸ್‌ ಕ್ಯಾಪ್ಟನ್‌ ಕೂಡ ಆದರು. ಆಗ ಕ್ಯಾಪ್ಟನ್‌ ಆಗಿದ್ದವರು ಮತ್ತೊಬ್ಬ ದಿಗ್ಗಜ ವಿರಾಟ್‌ ಕೊಹ್ಲಿ. ಈ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತೀಯ ತಂಡ ವಿಶ್ವಕಪ್‌ ಎತ್ತಿ ಹಿಡಿಯಿತು. ಜಡೇಜಾ 6 ಪಂದ್ಯಗಳಿಂದ 10 ವಿಕೆಟ್‌ ಪಡೆದುಕೊಂಡರು. 2006-07ರ ಸಾಲಿನ ಪ್ರಥಮ ದರ್ಜೆ ಕ್ರಿಕೆಟ್‌ಗೆ ಅಡಿ ಇಟ್ಟರು. ದೇಶಿಯ ಕ್ರಿಕೆಟ್‌ನಲ್ಲಿ ಸೌರಾಷ್ಟ್ರ ಪರವಾಗಿ ಅವರು ಆಡುತ್ತಾರೆ. ರಣಜಿ ಪಂದ್ಯದಲ್ಲಿ ವಿಶಿಷ್ಟ ಸಾಧನೆ ಅವರ ಹೆಸರಿನಲ್ಲಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೂರು ತ್ರಿಶತಕಗಳನ್ನು ಸಿಡಿಸಿದ ಮೊದಲ ಭಾರತೀಯ ಹಾಗೂ ವಿಶ್ವದಲ್ಲಿ 8ನೇ ಆಟಗಾರ ಎಂಬ ಖ್ಯಾತಿ ಅವರ ಬೆನ್ನಿಗಿದೆ. 2008-09ರ ಸಾಲಿನ ರಣಜಿ ಕ್ರಿಕೆಟ್‌ ಪಂದ್ಯಾವಳಿ ಅದ್ಭುತ ಆಲ್‌ರೌಂಡ್‌ ಆಟದಿಂದ ಆಯ್ಕೆಗಾರ ಗಮನ ಸೆಳೆದರು. ಈ ಟೂರ್ನಿಯಲ್ಲಿ ಅವರು 739 ರನ್‌ ಹಾಗೂ 42 ವಿಕೆಟ್‌ ಪಡೆದುಕೊಂಡು, ಭಾರತೀಯ  ಒಂದು ದಿನದ ಕ್ರಿಕೆಟ್‌ ತಂಡದ ಕದ ತಟ್ಟಿದರು. ಕೊಲಂಬೊದಲ್ಲಿ ನಡೆದ ತಮ್ಮ ಮೊದಲ ಅಂತಾರಾಷ್ಟ್ರೀಯ ಒಡಿಐನಲ್ಲಿ 60 ರನ್‌ ಗಳಿಸಿದರು. ಆದರೆ, ಯಾವುದೇ ವಿಕೆಟ್‌ ಪಡೆಯಲಿಲ್ಲ. 2012ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆ ನಂತರ ಜಡ್ಡು ನಿಧಾನವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ತಂಡದ ಅವಿಭಾಜ್ಯ ಅಂಗವಾದರು.

ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಅದರದ್ದೇ ಆದ ಮಹತ್ವವಿದೆ; ವಿಶಿಷ್ಟ ಪರಂಪರೆಯಿದೆ. ಯಾಕೆಂದರೆ, ವಿಶ್ವದ ಅತ್ಯುತ್ತಮ ಕ್ಯಾಪ್ಟನ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಮಹೇಂದ್ರ ಸಿಂಗ್‌ ಧೋನಿ ಅವರು ಸಿಎಸ್‌ಕೆಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯದಿದ್ದಾರೆ. ಆ ತಂಡದ ನೇತೃತ್ವ  ಈಗ ಸವ್ಯಸಾಚಿ ಜಡೇಜಾ ಹೆಗಲಿಗೇರಿದೆ. ಈವರೆಗೆ ಅವರ ಆಟವನ್ನು ನೋಡುತ್ತಾ ಬಂದವರಿಗೆ ನಾಯಕನಾಗಿಯೂ ಜಡೇಜಾ ಯಶಸ್ವಿಯಾಗುತ್ತಾರೆಂಬ ನಂಬಿಕೆ ಸಿಎಸ್‌ಕೆ ತಂಡದ ಅಭಿಮಾನಿಗಳದ್ದು.



ಬುಧವಾರ, ಮೇ 4, 2022

Elon Musk: ಸಾಹಸಿ ಉದ್ಯಮಿ ಮಸ್ಕ್‌

ಎಲಾನ್‌ ಮಸ್ಕ್‌ ಎಂಬ ವ್ಯಕ್ತಿ ಯಾವುದೇ ಅಳತೆಗೋಲಿಗೆ ಸಿಗುವ ಜಾಯಮಾನದವರಲ್ಲ; ಅವರಿಗೆ ಅವರೇ ಅಳತೆಗೋಲು, ಹೊಡೆದಿದ್ದೆಲ್ಲಗೋಲು!


- ಮಲ್ಲಿಕಾರ್ಜುನ ತಿಪ್ಪಾರ
ಒಂದಷ್ಟು ಪ್ರತಿಭೆ; ಮತ್ತೊಂದಿಷ್ಟು ಹುಚ್ಚುತನ, ಒಂದಷ್ಟು ಉಡಾಫೆ; ಮತ್ತೊಂದಿಷ್ಟು ಧೈರ್ಯ, ಒಂದಷ್ಟು ಸಾಹಸ; ಮತ್ತೊಂದಿಷ್ಟು ಹುಚ್ಚು ಸಾಹಸ, ಒಂದಷ್ಟು ತಿಕ್ಕುಲತನ; ಮತ್ತೊಂದಿಷ್ಟು ಮೊಂಡತನ, ಒಂದಷ್ಟು ಹುಮ್ಮಸ್ಸು; ಮತ್ತೊಂದಿಷ್ಟು ಕನಸು, ಒಂದಷ್ಟು ಸೊಗಸುಗಾರ; ಮತ್ತೊಂದಿಷ್ಟು ಮೋಜುಗಾರ... ಈ ಒಂದಿಷ್ಟು ಮತ್ತು ಮತ್ತೊಂದಿಷ್ಟು ಒಟ್ಟು ಮೊತ್ತವೇ ಎಲಾನ್‌ ರೀವ್‌ ಮಸ್ಕ್‌ ಅಲಿಯಾಸ್‌ ಎಲಾನ್‌ ಮಸ್ಕ್‌.

ಭೂಮಿ ಮೇಲಿನ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌, ಹೆಚ್ಚಾಗಿ ನಷ್ಟವನ್ನು ಉಲಿಯುತ್ತಿದ್ದ ‘ಟ್ವಿಟರ್‌’ ಖರೀದಿಯ ಮೂಲಕ ತಾನೆಂಥ ಹುಚ್ಚು ಸಾಹಸಿಗ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಈ ಹುಚ್ಚುತನ ಅವರ ವ್ಯಕ್ತಿತ್ವದಲ್ಲಿದೆ, ಯಾರೂ ಕಾಣದ ಕನಸು ಕಂಡು ಅದನ್ನು ನನಸು ಮಾಡಿಕೊಳ್ಳುವ ಛಾತಿ ಅವರಿಗೆ ಒಗ್ಗಿದೆ ಅದೇ ಕಾರಣಕ್ಕೆ. ಎಷ್ಟೋ ರಾಷ್ಟ್ರಗಳು ಚಂದ್ರನಲ್ಲಿಗೆ ಹೋಗಲು ಪ್ಲ್ಯಾನ್‌ ಮಾಡುತ್ತಿರುವಾಗಲೇ, ಮಂಗಳನ ಅಂಗಳಲ್ಲಿ ಮಾನವರ ಕಾಲನಿ ಸೃಷ್ಟಿಸಬೇಕೆಂಬ ಹುಚ್ಚು ಕನಸು ಕಾಣಲು ಸಾಧ್ಯವಾಗುವುದು ಮಸ್ಕ್‌ಗೆ ಮಾತ್ರವೇ ಸಾಧ್ಯ. ಬರೀ ಕನಸಷ್ಟೇ ಅಲ್ಲ, ಆ ದಿಶೆಯಲ್ಲಿ ಯೋಜಿಸಿ, ರೂಪಿಸಿ ಮುಂದಡಿ ಇಡಬಲ್ಲ ಧೈರ್ಯಗಾರನೂ.

ಇಲ್ಲಿ ಒಂದು ಘಟನೆ ಹೇಳಬೇಕು; ಬಿಟ್‌ ಕಾಯಿನ್‌ ಕುರಿತು ಮಸ್ಕ್‌ ಒಂದೇ ಒಂದು ಮಸ್ಕರಿ ಟ್ವೀಟ್‌ ಮಾಡಿದ್ದರು. ಅದರಿಂದ ಅವರ ಟೆಸ್ಲಾ ಕಂಪನಿಗೆ ಒಂದು ಲಕ್ಷ  ಕೋಟಿ ರೂ.ಗೆ ಅಧಿಕ ನಷ್ಟ ಉಂಟು ಮಾಡಿತು ಮತ್ತು ವಿಶ್ವದ ನಂಬರ್‌ 1 ಶ್ರೀಮಂತ ಪಟ್ಟ ಕಳೆದುಕೊಳ್ಳಬೇಕಾಯಿತು. ಮತ್ತೊಮ್ಮೆ ಟೆಸ್ಲಾ ಕಂಪನಿಯು ವರ್ಷಕ್ಕೆ 5 ಲಕ್ಷ ಕಾರುಗಳನ್ನು ತಯಾರಿಸುತ್ತಿದೆ ಎಂಬ ಉತ್ಪ್ರೇಕ್ಷೆಯ ಹೇಳಿಕೆ ನೀಡಿದ್ದಕ್ಕಾಗಿ ಕಂಪನಿಯ ಪಾಲುದಾರರು ಮಸ್ಕ್‌ನ ಮೇಲೆ ಸಿಟ್ಟಾಗಿ ಈತನ ಟ್ವಿಟ್ಟರ್‌ ಖಾತೆಯನ್ನು ನಿಷೇಧಿಸುವಂತೆ ಆಗ್ರಹಿಸಿದ್ದರು. ಮಸ್ಕ್‌ ಅವರ ಈ ತರಹದ ಹುಚ್ಚಾಟಗಳು ಬೇಕಾದಷ್ಟಿವೆ. ಆದರೆ, ಅವರ ಒಟ್ಟಾರೆ ವ್ಯಕ್ತಿತ್ವದಲ್ಲಿನಮಗೆ ಪ್ರೇರಣೆಯಾಗಬಲ್ಲಸಾಕಷ್ಟು ಸಂಗತಿಗಳಿವೆ ಎಂಬುದೂ ಅಷ್ಟೇಸತ್ಯ. 

ಎಲಾನ್‌ ಮಸ್ಕ್‌ ಅವರ ಹೆಸರಿನಲ್ಲಿ ಕಂಪನಿಗಳಿಗೆ ಒಂದಾ, ಎರಡಾ...? ಸ್ಪೇಸ್‌ಎಕ್ಸ್‌, ಟೆಸ್ಲಾ, ಬೋರಿಂಗ್‌ ಕಂಪನಿ, ಗಿ.್ಚಟಞ, ಪೇಪಾಲ್‌, ನ್ಯೂರೊಲಿಂಕ್‌, ಓಪನ್‌ಎಐ, ಝಿಪ್‌ 2, ಮಸ್ಕ್‌ ಫೌಂಡೇಷನ್‌(ಈ ಕಂಪನಿಗಳ ಪಟ್ಟಿಯಲ್ಲಿಕೆಲವು ಮಾರಿದ್ದು ಇದೆ)... ಹೀಗೆ ಪಟ್ಟಿ ದೊಡ್ಡದಿದೆ; ಈಗ ಹೊಸದಾಗಿ ಟ್ವಿಟರ್‌ ಮಾಲೀಕ. ಅವರ ಈ ಸಾಹಸ ಕಂಡು, ನೇಟಿಜನ್ಸ್‌ ಆ ಕಂಪನಿ ಖರೀದಿಸಿ, ಈ ಕಂಪನಿ ಖರೀದಿಸಿ ಎಂಬ ಪುಕ್ಕಟೆ ಸಲಹೆಗಳನ್ನು ಕೂಡ ಕೊಡುತ್ತಿದ್ದಾರೆ! ಈ ಸಲಹೆಗಳು ನಿಜವಾದರೂ ಆಗಬಹುದು. ಯಾಕೆಂದರೆ, 2017ರಲ್ಲಿಮಸ್ಕ್‌ ಅವರು, ‘‘ಐ ಲವ್‌ ಟ್ವಿಟರ್‌,’’ ಎಂದು ಟ್ವೀಟ್‌ ಮಾಡಿದ್ದರು. ‘‘ಹಾಗಿದ್ದರೆ ನೀವು ಅದನ್ನು ಖರೀದಿಸಿ,’’ ಎಂದು ನಿರೂಪಕ ಡೇವ್‌ ಸ್ಮಿತ್‌ ಮರು ಪ್ರತಿಟ್ವೀಟಿಸಿದ್ದರು. ಇದಕ್ಕೆ ಪ್ರತಿಯಾಗಿ ಮಸ್ಕ್‌, ‘‘ಎಷ್ಟಂತೆ ಅದರ ಬೆಲೆ,’’ ಎಂದು ಪ್ರಶ್ನಿಸಿದ್ದರು. ಮೊನ್ನೆ ಮಸ್ಕ್‌ ಟ್ವಿಟರ್‌ ಖರೀದಿಸಿದಾಗ ಈ ಹಳೆಯ ಟ್ವೀಟ್‌ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು!

ಎಲಾನ್‌ ಮಸ್ಕ್‌ ಅವರು 1971ರ ಜೂನ್‌ 28ರಂದು ದಕ್ಷಿಣ ಆಫ್ರಿಕಾದಲ್ಲಿ, ಕೆನಡಾದ ತಾಯಿತಂದೆಗಳಿಗೆ ಜನಿಸಿದರು. ಅವರ ಶಾಲಾ ದಿನಗಳು ಅಷ್ಟೇನೂ ಚೆನ್ನಾಗಿರಲಿಲ್ಲ. ಅವರೇ ಹೇಳಿಕೊಂಡಿರುವಂತೆ; ಮಸ್ಕ್‌ ಪುಸ್ತಕದ ಹುಳು. ಎನ್‌ಸೈಕ್ಲೋಪಿಡಿಯಾಗಳಿಂದ ಹಿಡಿದು ಕಾಮಿಕ್‌ ಬುಕ್‌ ಗಳವರೆಗೆ ಎಲ್ಲವನ್ನು ಓದುತ್ತಿದ್ದರಂತೆ. ಪ್ರಿಟೋರಿಯಾ ನಗರದಲ್ಲಿರುವ ವಾಟರ್‌ಕ್ಲೂಫ್‌ ಹೌಸ್‌ ಪ್ರಿಪರೇಟರಿ ಸ್ಕೂಲ್‌ ಸೇರಿಕೊಂಡರು. ಬಳಿಕ ಪ್ರಿಟೋರಿಯಾ ಬಾಯ್ಸ್‌ ಹೈಸ್ಕೂಲ್‌ನಲ್ಲಿಶಿಕ್ಷ ಣ ಪಡೆದುಕೊಂಡರು. ಈ ದಿನಗಳು ಅವರಿಗೆ ಹೆಚ್ಚು ಏಕಾಂಗಿತನವನ್ನು ಕೊಟ್ಟವು. ಆದರೆ, ಎಲಾನ್‌ ಎಂಥ ಬುದ್ಧಿಶಾಲಿ ಎಂದರೆ, 10ನೇ ವಯಸ್ಸಿನಲ್ಲೇ ಸಾಫ್ಟ್‌ವೇರ್‌ ಕೋಡಿಂಗ್‌ ಕಲಿತುಕೊಂಡು, 12ನೇ ವಯಸ್ಸಿನಲ್ಲೇ ಒಂದು ವಿಡಿಯೋ ಗೇಮ್‌ ತಯಾರಿಸಿದರು. ಮುಂದೆ, ಎಕಾನಮಿಕ್ಸ್‌ ಪದವಿಗೆ ಸೇರಿದರು. ಆದರೆ, ಈ ಕೋರ್ಸ್‌ ತಮಗಲ್ಲಎಂಬುದು ಗೊತ್ತಾಗುತ್ತಿದ್ದಂತೆ  ಸೇರಿದ ಎರಡು ದಿನದಲ್ಲೇ ಅದನ್ನು ಬಿಟ್ಟು ‘ಝಿಪ್‌2’ ಎಂಬ ಸಾಫ್ಟ್‌ವೇರ್‌ ಸಂಸ್ಥೆಯನ್ನು ಸ್ಥಾಪಿಸಿದರು. ನಂತರ ಅದನ್ನು ಕಾಂಪಾಕ್‌ ಕಂಪನಿಗೆ 340 ದಶಲಕ್ಷ  ಡಾಲರಿಗೆ ಮಾರಾಟ ಮಾಡಿದರು. ಆಗ ಮಸ್ಕ್‌ ಅವರಿಗೆ ಕೇವಲ 28 ವರ್ಷ. ಈ ವಯಸ್ಸಿಗೆ ಹೊತ್ತಿಗೆ ನಾವು- ನೀವಾದರೆ ಕೆಲಸ ಹುಡ್ಕೊಂಡು ಅಲೆಯುತ್ತಿದ್ದೆವು. ಆನಂತರ ಪೇಪಾಲ್‌ ಎಂಬ ಆನ್‌ಲೈನ್‌ ಹಣಪಾವತಿ ಕಂಪನಿಯನ್ನು ಹುಟ್ಟುಹಾಕಿ ನಂತರ ಅದನ್ನು ಇಬೇ ಕಂಪನಿಗೆ 120 ಕೋಟಿ ಡಾಲರ್‌ಗೆ ಮಾರಾಟ ಮಾಡಿದರು ಮಸ್ಕ್‌. ಟೆಸ್ಲಾಎಂಬ ವಿದ್ಯುತ್‌ ಚಾಲಿತ ಕಾರ್‌ ತಯಾರಿಕಾ ಕಂಪನಿ ಪ್ರಾರಂಭಿಸಿದರು. ಚಿಕ್ಕಂದಿನಿಂದಲೇ ಐಸಾಕ್‌ ಅಸಿಮೋವ್‌ ಮುಂತಾದ ವಿಜ್ಞಾನ ಲೇಖಕರನ್ನು ಓದುತ್ತ ಬೆಳೆದ ಮಸ್ಕ್‌ಗೆ ಬಾಹ್ಯಾಕಾಶ ಸಂಶೋಧನೆಯ ಹುಚ್ಚು. ಅದಕ್ಕಾಗಿಯೇ ಸ್ಪೇಸ್‌ ಎಕ್‌ ್ಸಪ್ಲೋರೇಷನ್‌ (ಸ್ಪೇಸ್‌ಎಕ್ಸ್‌) ಎಂಬ ಕಂಪನಿಯನ್ನು ಆಂಭಿಸಿದರು. ಮಸ್ಕ್‌ ಅವರ ಉದ್ಯಮ ಹುಚ್ಚು ಸಾಹಸಗಳು ಇಷ್ಟಕ್ಕೆ ನಿಲ್ಲುವುದಿಲ್ಲ. ಒಂದರ ಮೇಲೊಂದು ಕಂಪನಿಗಳು ಆರಂಭಿಸುವುದು, ಇಲ್ಲವೇ ಸ್ವಾಧೀನ ಮಾಡಿಕೊಳ್ಳುವುದು ಅಥವಾ ಮಾರುವುದು ಈವರೆಗೆ ನಡೆದುಕೊಂಡು ಬಂದಿದೆ. 

ಉದ್ಯಮ ಸಾಹಸದಂತೆ ಅವರ ವೈಯಕ್ತಿಕ ಜೀವನವೂ ರೋಚಕವಾಗಿದೆ. ಎರಡು ಮದುವೆಗಳಾಗಿವೆ. ಸದ್ಯಕ್ಕೆ ಅವಿವಾಹಿತ. ಮೊದಲ ಹೆಂಡತಿ ಜಸ್ಟಿನ್‌ ವಿಲ್ಸನ್‌. ಈಕೆ ಕೆನಡಾದ ಲೇಖಕಿ. 2000ರಿಂದ 2008ರವರೆಗೆ ಮದುವೆ ಬಾಳಿಕೆ ಬಂತು. ಆ ನಂತರ ಇಂಗ್ಲಿಷ್‌ ನಟಿ ತಾಲುಲಾ ರಿಲೇ ಅವರನ್ನು 2010ರಲ್ಲಿಮದುವೆಯಾದರು; 2016ರಲ್ಲಿಬೇರೆ ಬೇರೆಯಾದರು. ಮಸ್ಕ್‌ಗೆ ಒಟ್ಟು ಆರು ಮಕ್ಕಳಿದ್ದಾರೆ. 2018ರಿಂದ ಕೆನಡಾದ ಗಾಯಕಿ, ಸಾಂಗ್‌ ರೈಟರ್‌ ಗ್ರೀಮ್ಸ್‌ (ಕ್ಲೇರ್‌ ಎಲಿಸ್‌ ಬೌಚರ್‌) ಜತೆ ಸಂಬಂಧವಿಟ್ಟುಕೊಂಡಿದ್ದಾರೆ. ಒಂದು ಮಗುವಿದೆ. ಹಲವು ಗುಪ್ತ ಪ್ರಣಯಗಳೂ ಇವೆ.  ಫೋರ್ಬ್ಸ್‌ ಪತ್ರಿಕೆ ಮಸ್ಕ್‌ ಅವರನ್ನು ಜಗತ್ತಿನ 25 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಸಾಲಿನಲ್ಲಿಸೇರಿಸಿದೆ.

ಮಸ್ಕ್‌ ಅವರಲ್ಲಿಇನ್ನೂ ಏನೇನು ಕನಸುಗಳಿವೆಯೋ? ಎಂಥ ಹುಚ್ಚ ಸಾಹಸಗಳಿಗೆ ಅಣಿಯಾಗುತ್ತಿದ್ದಾರೋ ಯಾರಿಗೆ ಗೊತ್ತು? ಅನಿರೀಕ್ಷಿತ ನಿರ್ಧಾರ ಕೈಗೊಳ್ಳುವುದರಲ್ಲಿಸಿದ್ಧಹಸ್ತರಾಗಿರುವ ವ್ಯಕ್ತಿಯ ನಡೆಯನ್ನು ಊಹಿಸುವುದು ಕಷ್ಟ. ಅವರ ಈ ಗುಣವೇ ಅವರನ್ನು ಇಂದು ವಿಶ್ವದ ಶ್ರೀಮಂತ ವ್ಯಕ್ತಿಸ್ಥಾನದಲ್ಲಿತಂದುಕೂರಿಸಿದೆ. ನೆಲದಿಂದ ಚಂದ್ರನಲ್ಲಿಗೆ ನೆಗೆಯುವ ಸಾಹಸಿ ಗುಣವನ್ನು ಗಟ್ಟಿಗೊಳಿಸಿದೆ.




ಬುಧವಾರ, ಫೆಬ್ರವರಿ 16, 2022

Fearless Businessman Rahul Bajaj - ಹಮಾರಾ 'ರಾಹುಲ್‌ ಬಜಾಜ್‌'

 ಭಾರತದ ‘ಧೈರ್ಯವಂತ’ ಉದ್ಯಮಿ ಎನಿಸಿಕೊಂಡಿದ್ದ ರಾಹುಲ್‌ ಬಜಾಜ್‌, ಅಜ್ಜನಿಂದ ಬಂದ ಬಜಾಜ್‌ ಆಟೊ ಕಂಪನಿಯನ್ನು ಉತ್ತುಂಗಕ್ಕೇರಿಸಿದವರು.


1970 
‘ಬಲಾಢ್ಯ ನಾಯಕಿ’ ಪ್ರಧಾನಿ ಇಂದಿರಾ ಗಾಂಧಿ ಅವರು ‘ಲೈಸೆನ್ಸ್‌ ರಾಜ್‌’ ಹೆಸರಿನಲ್ಲಿಉತ್ಪಾದನಾ ವಲಯವನ್ನು ಅನಗತ್ಯ ನಿಯಂತ್ರಣಕ್ಕೊಳಪಡಿಸಿದ್ದರು. ಈ ವ್ಯವಸ್ಥೆಯ ಪರಿಣಾಮ ಖರೀದಿದಾರರು ಸ್ಕೂಟರ್‌ ಬುಕ್‌ ಮಾಡಿ, ಅದನ್ನು ಖರೀದಿಸಲು ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇತ್ತು. ಆಗ ರಾಹುಲ್‌ ಬಜಾಜ್‌ ಅವರು ಸಂದರ್ಶನವೊಂದರಲ್ಲಿ, ‘‘ಹೆಚ್ಚಿನ ಭಾರತೀಯರಿಗೆ ಅಗತ್ಯವಿರುವ ಸರಕುಗಳ ಉತ್ಪಾದನೆಗಾಗಿ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾದರೆ ಹೋಗಲು ಸಿದ್ಧ,’’ ಎಂದು ಹೇಳಿದ್ದರು.

2019
‘ವಿಕ’ ಸೋದರ ಪತ್ರಿಕೆ ‘ದಿ ಎಕನಾಮಿಕ್‌ ಟೈಮ್ಸ್‌’ ಪತ್ರಿಕೆಯ ಇಟಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿಮಾತನಾಡಿದ್ದ ರಾಹುಲ್‌ ಬಜಾಜ್‌, ‘‘ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರಕಾರದ ಎರಡನೇ ಅವಧಿಯಲ್ಲಿಯಾರನ್ನು ಬೇಕಾದರೂ ನಾವು ಟೀಕಿಸಲು ಅವಕಾಶವಿತ್ತು. ಆದರೆ, ಈಗ ಅಂಥ ವಾತಾವರಣ ಇಲ್ಲ. ಉದ್ಯಮದಲ್ಲಿಅನೇಕರಿಗೆ ಈ ಭಾವನೆ ಇದೆ. ಉದ್ಯಮದ ಗೆಳೆಯರ ಮನಸ್ಸಿನಲ್ಲಿಯೂ ಅನೇಕ ವಿಷಯಗಳಿವೆ. ಆದರೆ, ಯಾರೂ ಮಾತನಾಡುತ್ತಿಲ್ಲ. ಆದರೆ, ನಾನು ಮಾತನಾಡುತ್ತೇನೆ,’’ ಎಂದಿದ್ದರು. ವಿಶೇಷ ಎಂದರೆ, ಇದೇ ಕಾರ್ಯಕ್ರಮದಲ್ಲಿಗೃಹ ಸಚಿವ ಅಮಿತ್‌ ಶಾ ಕೂಡ ಇದ್ದರು!

***

ಮೇಲಿನ ಈ ಎರಡೂ ಘಟನೆಗಳು, ಶನಿವಾರ ನಿಧನರಾದ ಉದ್ಯಮಿ ರಾಹುಲ್‌ ಬಜಾಜ್‌ ಅವರ ವ್ಯಕಿತ್ವವನ್ನು ಪರಿಚಯಿಸುತ್ತವೆ. ಉದ್ಯಮ ಹಿತಾಸಕ್ತಿಗಳ ಹೊರತಾಗಿಯೂ ಅವರು ವ್ಯವಸ್ಥೆಯ ವಿರುದ್ಧ ಮಾತಾಡಬೇಕಾದ ಅಗತ್ಯ ಎನಿಸಿದರೆ ಯಾರಿಗೂ ಹೆದರದೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಇದೇ ಕಾರಣಕ್ಕಾಗಿ ಅವರನ್ನು ಇಷ್ಟಪಡುವ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಉದ್ಯಮ ಮಾತ್ರವಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲೂಬಜಾಜ್‌ ಕುಟುಂಬ ಪಾಲ್ಗೊಂಡಿದೆ, ಅಜ್ಜ ಜಮನ್‌ಲಾಲ್‌ ಬಜಾಜ್‌, ಚಿಕ್ಕಪ್ಪ ರಾಮಕೃಷ್ಣ ಬಜಾಜ್‌ ಅವರು ಹೋರಾಟದಲ್ಲಿಪಾಲ್ಗೊಂಡು, ಜೈಲುವಾಸ ಅನುಭವಿಸಿದ್ದರು. ಬಜಾಜ್‌ ಕುಟುಂಬದ ಹಿನ್ನೆಲೆ ಮತ್ತು ರಾಹುಲ್‌ ಬಜಾಜ್‌ ಅವರನ್ನು ತುಲನೆ ಮಾಡಿದಾಗ ಸಾರ್ವಜನಿಕವಾಗಿ ಅವರು ತೋರಿದ ಧೈರ್ಯ ಮತ್ತು ಉದ್ಯಮದಲ್ಲಿಅವರು ಅಳವಡಿಸಿಕೊಂಡ ಬಂದ ನೀತಿಗಳ ಸೂಧಿರ್ತಿಮೂಲದ ಪರಿಚಯವಾಗುತ್ತದೆ. 

ರಾಹುಲ್‌ ತಮ್ಮ ಗೆಳೆಯರ ಬಳಗ, ಉದ್ಯಮದ ಸ್ನೇಹಿತರ ವಲಯದಲ್ಲಿಮೊದಲಿನಿಂದಲೂ, ‘ಬಾರ್ನ್‌ ಆ್ಯಂಟಿ ಎಸ್ಟಾಬ್ಲಿಷ್‌ಮೆಂಟ್‌’ ಮತ್ತು ‘ಫಿಯರ್‌ಲೆಸ್‌’ ಎಂದು ಗುರುತಿಸಿಕೊಂಡಿದ್ದರು. ಈ ವಿಷಯವನ್ನು ಅವರು ಹೇಳಿಕೊಂಡಿದ್ದಾರೆ ಕೂಡ. ಉದ್ಯಮಿಯಾಗಿ ಬಜಾಜ್‌ ಗ್ರೂಪ್‌ ಕಂಪನಿಗಳನ್ನು ತುಂಬ ಎತ್ತರಕ್ಕೆ ಕೊಂಡೊಯ್ಯುವಲ್ಲಿಅವರ ಕಾಣಿಕೆ ಮರೆಯುವಂತಿಲ್ಲ. ಆಟೊ, ಹಣಕಾಸು, ಸಾರ್ಜನಿಕ ಸೇವೆಯಲ್ಲಿಅವರು ತೋರಿದ ಅಪ್ರತಿಮ ಸಾಧನೆಗಳ ಮೂಲಕ ಆಧುನಿಕ ಭಾರತದ ನಿರ್ಮಾಣದಲ್ಲಿಅಲ್ಪ ಕಾಣಿಕೆ ದೊರೆತಿದೆ ಎಂದರೆ ಉತ್ಪ್ರೇಕ್ಷೆ ಅಲ್ಲ. 

ರಾಹುಲ್‌ ಬಜಾಜ್‌ 1938 ಜೂನ್‌ 10ರಂದು ಪಶ್ಚಿಮ ಬಂಗಾಳದ ಕೊಲ್ಕೊತಾದಲ್ಲಿಜನಿಸಿದರು. ತಂದೆ ಕಮಲನಯನ ಬಜಾಜ್‌, ಇವರು ಉದ್ಯಮಿ ಜತೆಗೆ ರಾಜಕಾರಣಿಯೂ ಹೌದು. ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ರಾಹುಲ್‌, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ ಜಮನ್‌ಲಾಲ್‌ ಬಜಾಜ್‌ ಅವರ ಮೊಮ್ಮಗ. 1958ರಲ್ಲಿದಿಲ್ಲಿಯ ಸೇಂಟ್‌ ಸ್ಟೀಫನ್‌ ಕಾಲೇಜಿನಿಂದ ಪದವಿ ಪಡೆದ ರಾಹುಲ್‌, ಬಾಂಬೆ ವಿಶ್ವವಿದ್ಯಾಲಯದಲ್ಲಿಕಾನೂನು ಅಧ್ಯಯನ ಮಾಡಿದರು. ಅಲ್ಲಿಂದ ಅಮೆರಿಕಕ್ಕೆ ತೆರಳಿ ಹಾರ್ವರ್ಡ್‌ ಬಿಸಿನೆಸ್‌ ಸ್ಕೂಲ್‌ನಲ್ಲಿಎಂಬಿಎಂ ಮಾಡಿದರು. 

1965ರಲ್ಲಿಎಂಬಿಎ ಪದವಿ ಪಡೆದು ಭಾರತಕ್ಕೆ ಮರಳಿದ ರಾಹುಲ್‌ ಮೊದಲಿಗೆ ಕಂಪನಿಯ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ಆಗಿ ಸೇರಿಕೊಂಡು, ಮಾರ್ಕೆಟಿಂಗ್‌, ಅಕೌಂಟ್ಸ್‌, ಪರ್ಚೇಸ್‌ ಮತ್ತು ಆಡಿಟ್‌ಗಳಂಥ ಪ್ರಮುಖ ವಿಭಾಗಗಳನ್ನು ನೋಡಿಕೊಳ್ಳುತ್ತಿದ್ದರು. ಆಗ ಬಜಾಜ್‌ನ ಆಟೊ ಸಿಇಒ ಆಗಿದ್ದ ನಾವಲ್‌ ಕೆ ಫಿರೋದಿಯಾ ಅವರ ಮಾರ್ಗದರ್ಶನದಲ್ಲಿಉದ್ಯಮ, ವ್ಯಾಪಾರದ ಪಟ್ಟುಗಳನ್ನು ಕಲಿತರು. 1972ರಲ್ಲಿರಾಹುಲ್‌ ತಂದೆ ಕಮಲನಯನ ಬಜಾಜ್‌ ನಿಧನರಾದರು. ಇದಕ್ಕೂ ಮೊದಲೇ ಸಿಇಒ ಆಗಿದ್ದ ಫಿರೋದಿಯಾ ಕೂಡ ಕಂಪನಿ ತೊರೆದಿದ್ದರು. ಹಾಗಾಗಿ, ರಾಹುಲ್‌ ಅವರನ್ನೇ ಬಜಾಜ್‌ ಆಟೊ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು. ವ್ಯವಹಾರ ಚತುರ ಮತ್ತು ಮಹತ್ವಾಕಾಂಕ್ಷಿಯಾಗಿದ್ದ ರಾಹುಲ್‌, ಸಣ್ಣ ಆಟೊ ಕಂಪನಿ ಎನಿಸಿಕೊಂಡಿದ್ದ ಬಜಾಜ್‌ನ್ನು ಜಗತ್ತಿನ ಬೃಹತ್‌ ಕಂಪನಿಗಳಲ್ಲಿಒಂದಾಗಿಸಿದರು. ಅವರ ನಾಯಕತ್ವದಲ್ಲಿಬಜಾಜ್‌ ಗ್ರೂಪ್‌ ಯಶಸ್ಸಿನ ಉತ್ತುಂಗ ತಲುಪಿತು. ಒಂದೇ ದಶಕದಲ್ಲಿಶತಕೋಟಿ ವ್ಯವಹಾರ ಮಾಡುವ ಕಂಪನಿಯಾಗಿ ಬೆಳೆಯಿತು. ಬಜಾಜ್‌ ಆಟೊ ಬೆಳವಣಿಗೆಯಲ್ಲಿಚೇತಕ್‌ ಸ್ಕೂಟರ್‌ ಮತ್ತು ಪಲ್ಸರ್‌ ಮೋಟರ್‌ ಸೈಕಲ್‌ ಸಕ್ಸೆಸ್‌ ಬಹಳ ಪಾತ್ರ ನಿರ್ವಹಿಸಿದೆ. ಈಗಿನ ಕಾಲದ ಬಹಳ ಮಂದಿಗೆ ಗೊತ್ತಿಲ್ಲ, ಬಜಾಜ್‌ ಚೇತಕ್‌ ಸ್ಕೂಟರ್‌ ಬುಕ್‌ ಮಾಡಿ, ಅದನ್ನು ಖರೀದಿಸಲು ಐದಾರು ವರ್ಷ ಕಾಯಬೇಕಾದ ಪರಿಸ್ಥಿತಿ ಇತ್ತು. ಅಷ್ಟರ ಮಟ್ಟಿಗೆ ಬೇಡಿಕೆ ಸೃಷ್ಟಿಯಾಗಿತ್ತು. ‘ಹಮಾರಾ ಬಜಾಜ್‌’ ನಿಜಾರ್ಥದಲ್ಲಿಭಾರತದ ಸ್ಕೂಟರೇ ಆಗಿತ್ತು ಎಂದು ವಿಶ್ಲೇಷಿಸಬಹುದು. ಭಾರತವು ಉದಾರೀಕರಣಕ್ಕೆ ಹೊರಳುತ್ತಿದ್ದ ಕಷ್ಟದ ಅವಧಿಯಲ್ಲಿ ಕಂಪನಿ ಈ ಮಟ್ಟಿಗೆ ಯಶಸ್ಸು ಸಾಧಿಸಿತು. ಇದಕ್ಕೆ ರಾಹುಲ್‌ ಬಜಾಜ್‌ ತೋರಿದ ನಾಯಕತ್ವ, ಪ್ರಾವೀಣ್ಯ ಮತ್ತು ಸಾಮರ್ಥ್ಯ‌ವೇ ಕಾರಣ.

ಜಮನ್‌ಲಾಲ್‌ ಬಜಾಜ್‌ 1926ರಲ್ಲಿಸ್ಥಾಪಿಸಿದ ಬಜಾಜ್‌ ಕಂಪನಿ ಇಂದು ಜಗತ್ತಿನ ದೈತ್ಯ ಕಂಪನಿಗಳಲ್ಲಿಒಂದಾಗಿದೆ, 60 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿದೆ ಎಂದರೆ ಅದಕ್ಕೆ ರಾಹುಲ್‌ ಕೊಡುಗೆ ಸಾಕಷ್ಟಿದೆ. ರಾಹುಲ್‌ 2008ರಲ್ಲಿ ಕಂಪನಿಯನ್ನು ಮೂರು ವಿಭಾಗಗಳಾಗಿ ಅಂದರೆ, ಬಜಾಜ್‌ ಆಟೊ, ಫೈನಾನ್ಸ್‌ ಕಂಪನಿ ಬಜಾಜ್‌ ಫಿನ್‌ಸರ್ವ್‌ ಮತ್ತು ಹೋಲ್ಡಿಂಗ್‌ ಕಂಪನಿಯಾಗಿ ವಿಂಗಡಿಸಿದರು. ಅವರ ನೇತೃತ್ವದಲ್ಲಿಬಜಾಜ್‌ ಆಟೋ ಉತ್ತುಂಗ ತಲುಪಿದ್ದು ಎಷ್ಟು ನಿಜವೋ ಅಷ್ಟೇ ಸಂಕಟವನ್ನು ಎದುರಿಸಿದೆ ಎನ್ನಬಹುದು. 2001ರಲ್ಲಿಅಂದರೆ, ಉದಾರೀಕರಣದ ಬಳಿಕ ಮಾರುಕಟ್ಟೆಯಲ್ಲಿಕಂಪನಿಯ ವಾಹನಗಳ ಮಾರಾಟ ತೀವ್ರ ಕುಸಿತ ಕಂಡಿತ್ತು. ಹೋಂಡಾ, ಸುಜುಕಿ, ಯಮಹಾದಂಥ ಕಂಪನಿಗಳು ಹೊಸ ಹೊಸ ಮೋಟಾರ್‌ಸೈಕಲ್‌ಗಳನ್ನು ಪರಿಚಯಿಸಿ ಭಾರತೀಯ ಮಾರುಕಟ್ಟೆಯ ಒಟ್ಟು ಚಿತ್ರಣವನ್ನು ಬದಲಿಸಿದವು. ಇದರಿಂದ ಬಜಾಜ್‌ ಕೊಂಚ ವಿಚಲಿತವಾದಂತೆ ಕಂಡು ಬಂದಿತಾದರೂ, ಕಂಪನಿಯು ಪಲ್ಸರ್‌ ಮೋಟಾರ್‌ ಸೈಕಲ್‌ ಬಿಡುಗಡೆ ಮಾಡುವ ಮೂಲಕ ಎಲ್ಲನಿರೀಕ್ಷೆಗಳನ್ನು ಮೀರಿ ಯಶಸ್ಸು ಸಾಧಿಸಿತು. ಮುಂದಿನ 10ರಿಂದ 15 ವರ್ಷ ಪಲ್ಸರ್‌ ಅಕ್ಷ ರಶಃ ಮಾರುಕಟ್ಟೆ ಲೀಡರ್‌ ಆಗಿತ್ತು. ಬಜಾಜ್‌ ಕಂಪನಿಯ ಯಶಸ್ಸಿನಲ್ಲಿಚೇತಕ್‌ ಮತ್ತು ಪಲ್ಸರ್‌ಗಳು ಮಹತ್ವದ ಕೊಡುಗೆ ನೀಡಿವೆ ಎಂದು ಹೇಳುವುದು ಇದೇ ಕಾರಣಕ್ಕೆ. 

2005ರಲ್ಲಿರಾಹುಲ್‌ ಕಂಪನಿಯ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದು ಜವಾಬ್ದಾರಿಯನ್ನು ಹಿರಿಯ ಪುತ್ರ ರಾಜೀವ್‌ ಬಜಾಜ್‌ಗೆ ವಹಿಸಿದರು. ಆ ಬಳಿಕ 2006ರಿಂದ 2010ರವರೆಗೆ ರಾಜ್ಯಸಭಾ ಸದಸ್ಯರಾಗಿಯೂ ಕೆಲಸ ಮಾಡಿದರು. 2016ರಲ್ಲಿಫೋರ್ಬ್ಸ್‌ ಪ್ರಕಟಿಸಿದ ಜಗತ್ತಿನ ಕೋಟ್ಯಧೀಶರ ಪಟ್ಟಿಯಲ್ಲಿರಾಹುಲ್‌ ಬಜಾಜ್‌ 722ನೇ ಸ್ಥಾನದಲ್ಲಿದ್ದರು. 1979-80 ಮತ್ತು 1999-2000 ಎರಡು ಅವಧಿಯಲ್ಲಿಸಿಐಐ(ಭಾರತೀಯ ಕೈಗಾರಿಕೆಗಳ ಒಕ್ಕೂಟ) ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಅನನ್ಯ ಕಾರ್ಯನಿರ್ವಹಣೆಗಾಗಿ 2017ರಲ್ಲಿಅಂದಿನ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಸಿಸಿಐ ಪ್ರೆಸಿಡೆಂಟ್‌ ಅವಾರ್ಡ್‌ ಪ್ರದಾನ ಮಾಡಿದ್ದರು. 2021ರ ಏಪ್ರಿಲ್‌ನಲ್ಲಿಬಜಾಜ್‌ ಆಟೋದ ಕಾರ್ಯನಿರ್ವಾಹಕೇತರ ಅಧ್ಯಕ್ಷ  ಸ್ಥಾನದಿಂದ ಕೆಳಗಿಳಿದು, ಸೋದರಸಂಬಂಧಿ ನೀರಜ್‌ ಬಜಾಜ್‌ಗೆ ಆ ಸ್ಥಾನ ಬಿಟ್ಟುಕೊಟ್ಟರು. ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮಭೂಷಣ ಸೇರಿದಂತೆ ಅನೇಕ ಪ್ರಶಸ್ತಿ ಸಮ್ಮಾನಗಳು ಅವರನ್ನು ಅರಸಿ ಬಂದಿವೆ. 

ಉದ್ಯಮದಲ್ಲಿಅನನ್ಯ ಸಾಧನೆ ಮಾಡಿದ್ದ ರಾಹುಲ್‌ ಬಜಾಜ್‌ ಅವರ ವೈಯಕ್ತಿಕ ಆಸಕ್ತಿಗಳೂ ಅಷ್ಟೇ ಅನನ್ಯವಾಗಿದ್ದವು. ಕುರ್ತಾ ಅವರ ಅಚ್ಚುಮೆಚ್ಚಿನ ಉಡುಪಾಗಿತ್ತು. ಅವರ ಬಳಿ ಕುರ್ತಾಗಳ ದೊಡ್ಡ ಸಂಗ್ರಹವಿತ್ತು. ‘ಧೈರ್ಯವಂತ’ ಉದ್ಯಮಿ ಎನಿಸಿಕೊಂಡಿದ್ದ ರಾಹುಲ್‌ ಬಜಾಜ್‌ ನಿರ್ಗಮನ ಖಂಡಿತವಾಗಿಯೂ ಭಾರತೀಯ ಉದ್ಯಮಕ್ಕೆ ಕಾಡಲಿದೆ.


ಈ ಲೇಖನವು ವಿಜಯ ಕರ್ನಾಟಕದ 2022 ಫೆ.13ರ ಸಂಚಿಕೆಯಲ್ಲಿ ಪ್ರಕಟವಾಗಿದೆ


ಭಾನುವಾರ, ಜನವರಿ 9, 2022

Mother of Orphans Sindhutai Sapkal : ಅನಾಥರ ಆಯಿ ಸಿಂಧುತಾಯಿ ಸಕಪಾಳ್

 ಪರಿತ್ಯಕ್ತ ಮಹಿಳೆಯರ ಮಕ್ಕಳು, ಅನಾಥ ಕಂದಮ್ಮಗಳಿಗೆ ಅವ್ವಳಾದ ಸಿಂಧುತಾಯಿ ಬದುಕೇ ಸಂಘರ್ಷ. ‘ಚಿಂದಿ’ಯಿಂದ ‘ಚಿನ್ನ’ದಂಥ ತಾಯಿ ಆಗೋವರೆಗಿನ ಕತೆ ಸ್ಫೂರ್ತಿದಾಯಕ.


- ಮಲ್ಲಿಕಾರ್ಜುನ ತಿಪ್ಪಾರ
‘ಎಲ್ಲೆಡೆಯೂ ತಾನಿರಲು ಸಾಧ್ಯವಿಲ್ಲಎಂದು ದೇವರು ತಾಯಿಯನ್ನು ಸೃಷ್ಟಿಸಿದ’ ಎಂಬ ಮಾತಿದೆ. ಈ ಮಾತು ಸಿಂಧುತಾಯಿ ಸಪಕಾಳ್‌ ವಿಷಯದಲ್ಲಿನಿಜವಾಗಿದೆ. ‘ಅನಾಥಾಚಿ ಆಯಿ’(ಅನಾಥರ ತಾಯಿ) ಎಂದು ಖ್ಯಾತರಾದ ಅವರು ಅನಾಥ ಮಕ್ಕಳಿಗೆ ಅಕ್ಷ ರಶಃ ದೇವರಾದರು, ತನ್ನ ಹೊಟ್ಟೆಯಲ್ಲಿಹುಟ್ಟಿದ ಮಕ್ಕಳಂತೆ ಸಾಕಿ, ಸಲುಹಿದರು. ಅವರು ತಮ್ಮ ಬದುಕಿನ ಪೂರ್ತಿ 1500ಕ್ಕೂ ಹೆಚ್ಚು ಅನಾಥ ಮಕ್ಕಳಿಗೆ ಆಸರೆಯಾದರು. ಈ ಕುಟುಂಬ ಬೆಳೆದು ಈಗ ದೊಡ್ಡದಾಗಿದೆ. 282 ಅಳಿಯಂದಿರು, 47 ಸೊಸೆಯರು ಸೇರಿಕೊಂಡಿದ್ದಾರೆ.

‘ಅನಾಥಮಕ್ಕಳ ಅವ್ವ’ ಸಿಂಧುತಾಯಿ ಬದುಕು ಪೂರ್ತಿ ಸಂಘರ್ಷವೇ. ಆಕೆಯ ಜೀವನದ ಪ್ರತಿಪುಟದಲ್ಲೂದೌರ್ಜನ್ಯ, ಅವಮಾನ, ಹಿಂಸೆಯೇ ತುಂಬಿದೆ. ಆದರೂ ಧೃತಿಗೆಡದೇ ಅವರು ತಮ್ಮನ್ನು ತಾವು ರೂಪಿಸಿಕೊಂಡು, ದೇಶದ ನಾಲ್ಕನೇ ಅತಿದೊಡ್ಡ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ ಸ್ವೀಕರಿಸುವವರೆಗಿನ ಪಯಣ ಯಾರಿಗಾದರೂ ಸ್ಫೂರ್ತಿಯಾಗಬಲ್ಲದು. ಅನಾಥರ ಪಾಲಿನ ದೈವ ಎನಿಸಿಕೊಂಡ ಸಿಂಧುತಾಯಿ, ಹಿಂದೊಮ್ಮೆ ಅನಾಥವಾಗಿಯೇ ಮನೆಯಿಂದ ಹೊರಹಾಕಲ್ಪಟ್ಟ ನತದೃಷ್ಟ ಹೆಣ್ಣುಮಗಳು!

1948 ನವೆಂಬರ್‌ 14ರಂದು ಮಹಾರಾಷ್ಟ್ರ ವಾರ್ಧಾ ಜಿಲ್ಲೆಯ ಪಿಂಪ್ರಿ ಮೆಘೇ ಹಳ್ಳಿಯ ಕಡುಬಡತನದ ಕುಟುಂಬ­ವೊಂದರಲ್ಲಿಜನಿಸಿದರು. ಅಂದಿನ ಕಾಲದಲ್ಲಿಹೆಣ್ಣು ಮಕ್ಕಳು ಜನಿಸಿತೆಂದರೆ ಯಾರಿಗೂ ಸಂತೋಷವೇ ಇರುತ್ತಿರಲಿಲ್ಲ. ಸಿಂಧುತಾಯಿ ವಿಷಯದಲ್ಲಿಈ ಹಣೆಬರಹ ಬದಲಾಗಲಿಲ್ಲ. ಆದರೆ, ಎಂಥ ನಿಕೃಷ್ಟ ಸ್ಥಿತಿ ಎದುರಾಗಿತ್ತು ಎಂದರೆ, ಆ ಹೆಣ್ಣು ಮಗುವಿಗೆ ‘ಚಿಂದಿ’ ಎಂದು ಕರೆಯುತ್ತಿದ್ದರಂತೆ! ಇಂಥ ಮನಸ್ಥಿತಿಯ ಜನರು ಇರುವಾಗ ಸಿಂಧುತಾಯಿ ಬಾಲ್ಯ ಹೇಗೆ ಚೆನ್ನಾಗಿರಲು ಸಾಧ್ಯ? ನಾಲ್ಕನೇ ತರಗತಿ ಮುಗಿಯುತ್ತಿದ್ದಂತೆ, ನವರಾಂವ್‌ ಹಳ್ಳಿಯ 25 ವರ್ಷದ ಶ್ರೀಹರಿ ಸಪಕಾಳ್‌ಗೆ ಮದುವೆ ಮಾಡಿಕೊಟ್ಟರು. ಗಂಡ ಕೂಲಿ ಕೆಲಸ ಮಾಡಿಕೊಂಡಿದ್ದಾತ. ಆದರೆ, ಹೆಂಡತಿಗೆ ವಿಪರೀತ ಕಾಟ ಕೊಡುತ್ತಿದ್ದ. ಸಿಂಧು ತಾಯಿ 20 ವರ್ಷಕ್ಕೆ ಬರು­ವಷ್ಟರ ಹೊತ್ತಿಗಾಗಲೇ ಎರಡು ಮಕ್ಕಳಗಾಗಿದ್ದವು. ಗಂಡನ ಕಿರುಕುಳವೂ ಮಿತಿಮೀರಿತ್ತು. ಸ್ಥಳೀಯ ಸಾಹುಕಾರನೊಬ್ಬ ಸಿಂಧುತಾಯಿ ಹೊಟ್ಟೆಯಲ್ಲಿದ್ದ ಮೂರನೇ ಮಗುವಿನ ಬಗ್ಗೆ ಪುಕಾರು ಹಬ್ಬಿಸಿದ. ಇದನ್ನೇ ಸತ್ಯ ಎಂದು ನಂಬಿದ ಗಂಡ ಇನ್ನಷ್ಟು ಕಿರುಕುಳ ನೀಡಲಾರಂಭಿಸಿದ. ಬಸುರಿಯಿದ್ದಾಗಲೇ ಆಕೆಯ ಹೊಟ್ಟೆಗೆ ಒದ್ದು, ದನದ ಕೊಟ್ಟಿಗೆಗೆ ಹಾಕುವ ಮೂಲಕ ವಿಕೃತಿ ಮೆರೆದಿದ್ದ. ದನಗಳು ತುಳಿದು ಸಾಯಿಸಲಿ ಎಂದೇ ಕೊಟ್ಟಿಗೆಗೆ ಹಾಕಿದ್ದಂತೆ. ಆದರೆ, ದನವೊಂದು ಬಸುರಿ ಸಿಂಧುತಾಯಿ ರಕ್ಷ ಣೆಗೆ ನಿಂತು ಬೇರೆ ಯಾವುದೇ ದನಗಳು ಹತ್ತಿರ ಸುಳಿಯದಂತೆ ನೋಡಿಕೊಂಡಿತಂತೆ. ಈ ವಿಷಯವನ್ನು ಸ್ವತಃ ಸಿಂಧುತಾಯಿ ಅವರು 2016ರಲ್ಲಿಹೇಳಿಕೊಂಡಿದ್ದಾರೆ. 

ಸಿಂಧುತಾಯಿ ಬವಣೆಯ ಬದುಕು ಇಷ್ಟಕ್ಕೆ ನಿಲ್ಲಲಿಲ್ಲ. ಗಂಡನ ದೌರ್ಜನ್ಯಕ್ಕೆ ರೋಸಿ ಹೋಗಿ 10 ದಿನದ ಮಗುವಿನೊಂದಿಗೆ ತಂದೆ-ತಾಯಿ ಊರಿಗೆ ಹೋದರೆ, ಅಲ್ಲಿಯೂ ತಿರಸ್ಕಾರದ ಸ್ವಾಗತ. ತಂದೆ, ತಾಯಿ ಅವರನ್ನು ಒಳಗೇ ಬಿಟ್ಟುಕೊಳ್ಳಲಿಲ್ಲ. ಅಲ್ಲಿಂದ ಹೊರಬಿದ್ದ ಅವರಿಗೆ ಬದುಕಲೇಬೇಕೆಂಬ ಹಠ. ಅದಕ್ಕಾಗಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರೈಲ್ವೆ ನಿಲ್ದಾಣ, ಸ್ಮಶಾನಗಳೇ ಆಸರೆಗಳಾಗಿದ್ದವು. ಸ್ಮಶಾನದ ಹೆಣಗಳ ಮೇಲಿದ್ದ ಬಟ್ಟೆ, ಅನ್ನವೇ ಆಹಾರ, ಭಿಕ್ಷೆಯೇ ಮೃಷ್ಟಾನ್ನವಾಗಿತ್ತು.

ಭಿಕ್ಷ ಕರ ಜತೆಗೇ ಜೀವನ ಸಾಗಿತ್ತು. ರೈಲ್ವೆ ನಿಲ್ದಾಣದಲ್ಲಿಮಲಗಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ, ಯವ್ವನದಲ್ಲಿದ್ದ ತನ್ನನ್ನು ಮಗುವನ್ನು ಯಾರಾದರೂ ಅಪಹರಿಸಿದರೆ ಎಂಬ ಚಿಂತೆ ಎದುರಾಗುತ್ತಿದ್ದಂತೆ, ನಗರದ ಸ್ಮಶಾನಭೂಮಿ ಸುರಕ್ಷಿತ ತಾಣ ಎಂದರಿತು ಅಲ್ಲಿಗೆ ಹೋದರು. ಆ ದಿನಗಳು ತಮ್ಮ ಬದುಕಿನ ಅತ್ಯಂತ ಕೆಟ್ಟ ದಿನಗಳು ಎಂದ ಆಗಾಗ ನೆನೆಪಿಸಿಕೊಳ್ಳುತ್ತಿದ್ದರು ಅವರು. ಸ್ಮಶಾನದಲ್ಲಿದ್ದಾಗ ಹಸಿವು ಆದಾಗ ತಿನ್ನಲು ಏನೂ ಇರುತ್ತಿರಲಿಲ್ಲ. ಆದರೆ, ಹೊಟ್ಟೆಯ ಬೆಂಕಿಯನ್ನು ಆರಿಸಲು ಹೆಣದ ಬೆಂಕಿಯ ಸಹಾಯ ಪಡೆದುಕೊಳ್ಳದೇ ವಿಧಿಯೇ ಇರಲಿಲ್ಲ! ಸ್ಮಶಾನದಲ್ಲಿಯಾರೋ ನಾದಿದ ಗೋಧಿ ಹಿಟ್ಟನ್ನು ಗೋರಿಯ ಮೇಲೆ ಬಿಟ್ಟು ಹೋಗಿದ್ದರಂತೆ, ಅದು ಕೊಳೆಯುವ ಸ್ಥಿತಿಗೆ ತಲು­ಪಿತ್ತು. ಅದನ್ನೇ ನೀರಿನಲ್ಲಿಅದ್ದಿ, ಮುರಿದ ಮಡಿಕೆಯಲ್ಲಿಟ್ಟು ಹೆಣದ ಚಿತೆಯ ಮೇಲಿಟ್ಟು ರೊಟ್ಟಿ ಮಾಡಿ, ಹಸಿವು ನೀಗಿಸಿಕೊಳ್ಳಬೇಕಾದ ಊಹಾತೀತ ಪರಿಸ್ಥಿತಿಯನ್ನು ಅವರು ಎದುರಿಸಿದ್ದಾರೆ. 

ಆ ಕೆಟ್ಟ ಪರಿಸ್ಥಿತಿಯೇ ಸಿಂಧುತಾಯಿಗೆ ಹೊಸ ಹುಟ್ಟು ನೀಡಿತು. ಯಾಕೆಂದರೆ, ಆಗಲೇ ಅವರು ನಿರ್ಧರಿಸಿದ್ದರಂತೆ, ತಾನು ಹೊಸ ಜೀವವನ್ನು ಆರಂಭಿಸಬೇಕು. ಬಾಳಿನಲ್ಲಿಬಂದಿದ್ದನ್ನು ಛಲದಿಂದ ಎದುರಿಸಬೇಕೆಂದು ತಮ್ಮೊಳಗೇ ಶಪಥ ಮಾಡಿಕೊಂಡು ಮುನ್ನುಗ್ಗಿದರು. ಆ ನಂತರ ಅವರು ತನ್ನಂಥ ಅದೆಷ್ಟೋ ಅನಾಥಮಕ್ಕಳಿಗೆ ನೆರವಾದರು, ಅವರ ಬದಕನ್ನು ಹಸನು ಮಾಡಿದರು. ತಾವು ಮಾತ್ರ ಬದುಕುವುದಲ್ಲದೇ ತನ್ನಂಥ ನೂರಾರು ಜನರಿಗೆ ಸಹಾಯ ಮಾಡಿದರು. ಆದಿವಾಸಿಗಳ ಕಷ್ಟಕ್ಕೆ ಮರುಗಿದರು. ಸಮಾಜದ ಕಟ್ಟಕಡೆಯಲ್ಲಿರುವವರ ಮಕ್ಕಳನ್ನು ಎದೆಗಪ್ಪಿಕೊಂಡು ಬೆಳೆಸಿದರು.

1971ರಲ್ಲಿಅಮರಾವತಿ ಜಿಲ್ಲೆಯ ಚಿಖಲ್ದಾರಾ ಎಂಬ ಗುಡ್ಡಗಾಡು ಊರಿಗೆ ಹೋಗಿ, ಅಲ್ಲಿಆದಿವಾಸಿಗಳ ಪರವಾಗಿಯೂ ಸಿಂಧುತಾಯಿ ಹೋರಾಟ ನಡೆಸಿದರು. ಹುಲಿ ಸಂರಕ್ಷ ಣೆಗಾಗಿ ಕಾಡಿನಲ್ಲಿದ್ದ 84 ಆದಿವಾಸಿ ಕುಟುಂಬಗಳನ್ನು ಹೊರದಬ್ಬಲಾಗಿತ್ತು. ಅವರ ಪರವಾಗಿ ಹೋರಾಟ ನಡೆಸಿದರು. ಸಿಂಧುತಾಯಿ ಹೋರಾಟದ ಕಿಚ್ಚಿಗೆ ಸಣ್ಣ ಉದಾಹರಣೆಯನ್ನು ನೀಡಬಹುದು. ಹುಲಿ ಸಂರಕ್ಷ ಣಾ ಅರಣ್ಯ ಉದ್ಘಾಟನೆಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಚಿಖಲ್ದಾರಾಗೆ ಬಂದಿದ್ದರು. ಈ ವೇಳೆ ಸಿಂಧುತಾಯಿ ಕಾಡು ಪ್ರಾಣಿಗಳಿಂದ ಆದಿವಾಸಿಗಳು ಅನುಭವಿಸುತ್ತಿ­ರುವ ನೋವನ್ನು ಅಭಿವ್ಯಕ್ತಿಸುವ ಫೋಟೊ­ವೊಂದನ್ನು ಇಂದಿರಾ ಗಾಂಧಿ ಎದುರು ಪ್ರದರ್ಶಿಸಿದರು. ‘‘ದನಕ್ಕೆ ಕಾಡು ಪ್ರಾಣಿ ಹಾನಿ ಮಾಡಿದಾಗ ಅರಣ್ಯ ಇಲಾಖೆ ಪರಿಹಾರ ನೀಡುತ್ತದೆ. ಆದರೆ, ಆದಿವಾಸಿ ಮಹಿಳೆಯೊಬ್ಬಳು ಕಣ್ಣು ಕಳೆದುಕೊಂಡರೂ ಅಧಿಕಾರಿಗಳು ಕ್ಯಾರೆ ಮಾಡುವುದಿಲ್ಲ. ಮನುಷ್ಯರ ನೋವಿಗೆ ಬೆಲೆ ಇಲ್ಲವೇ?’’ ಎಂದು ಇಂದಿರಾ ಗಾಂಧಿ ಅವರನ್ನು ಪ್ರಶ್ನಿಸಿದರಂತೆ. ತಕ್ಷ ಣವೇ ಪ್ರಧಾನಿ ಪರಿಹಾರಕ್ಕೆ ಆದೇಶಿಸಿದರು! 

ಇದೇ ವೇಳೆ ಆದಿವಾಸಿ ಪರಿತ್ಯಕ್ತ ಮಹಿಳೆಯರ ಮಕ್ಕಳು, ಅನಾಥ ಮಕ್ಕಳ ಸ್ಥಿತಿಯನ್ನು ಕಂಡು ಅವರ ಆಸರೆಗೆ ಮುಂದಾದರು. ಇಲ್ಲಿಂದ ಆರಂಭವಾದ ಅನಾಥ ಮಕ್ಕಳ ರಕ್ಷ ಣೆ ನಿಧಾನವಾಗಿ ಮಹಾರಾಷ್ಟ್ರದಾದ್ಯಂತ ಹರಡಿ­ಕೊಂಡಿತು. ವಿಶೇಷವಾಗಿ ಪುಣೆಯ ಸುತ್ತಮುತ್ತ ಅನಾಥರಿಗೆ ಸಿಂಧುತಾಯಿ ಆಸರೆಯಾದರು. ಇದಕ್ಕಾಗಿ ನಾನಾ ಸಂಸ್ಥೆಗಳನ್ನು ಹುಟ್ಟು ಹಾಕಿದರು. ಈ ಪೈಕಿ ಮದರ್‌ ಗ್ಲೋಬಲ್‌ ಫೌಂಡೇಷನ್‌, ಸನ್ಮತಿ ಬಾಲ ನಿಕೇತನ, ಮಮತಾ ಬಾಲ ಸದನ, ಸಪ್ತಸಿಂಧು ಮಹಿಳಾ ಆಧಾರ್‌, ಬಾಲಸಂಗೋಪನ ಮತ್ತು ಶಿಕ್ಷ ಣ ಟ್ರಸ್ಟ್‌ ಹೀಗೆ ಎಲ್ಲಸಂಸ್ಥೆಗಳು ಅನಾಥರ ರಕ್ಷ ಣೆಗೆ ಮೀಸಲಾದವು. ಹೀಗೆ ಶುರುವಾದ ಅವರ ಅನಾಥ ಮಕ್ಕಳ ಸಾಕುವ ಕೈಂಕರ್ಯ ನಿರಂತರವಾಗಿ ನಡೆದುಕೊಂಡು ಬಂತು. ಜನರು ಪ್ರೀತಿಯಿಂದ ‘ಅನಾಥರ ಅವ್ವ’ ಎಂದು ಕರೆಯಲಾರಂಭಿಸಿದರು. ಸಿಂಧುತಾಯಿಯ ಮಾನವೀಯ ಕಾರ್ಯ ಕಂಡು ಹಲವು ಪ್ರಶಸ್ತಿ, ಗೌರವವಗಳು ಹುಡುಕಿಕೊಂಡು ಬಂದವು. ಪದ್ಮಶ್ರೀ(2021) ಸೇರಿದಂತೆ 700ಕ್ಕೂ ಹೆಚ್ಚು ಪ್ರಶಸ್ತಿಗಳು ಅವ­ರಿಗೆ ಸಂದಿವೆ. 2010ರಲ್ಲಿಸಿಂಧುತಾಯಿ ಜೀವನಕತೆ ಆಧರಿಸಿ ನಿರ್ದೇಶಕ ಅನಂತ ನಾರಾಯಣ ಮಹಾದೇವನ್‌ ಅವರು ‘ಮೀ ಸಿಂಧುತಾಯಿ ಸಪಕಾಳ್‌’ ಮರಾಠಿ ಸಿನಿಮಾ ಮಾಡಿದ್ದರು. 

ಮಹಿಳಾ ಶಕ್ತಿಗೆ ಗಡಿಗಳೇ ಇಲ್ಲಎಂಬುದನ್ನು ಸಿಂಧುತಾಯಿ ನಿರೂಪಿಸಿದ್ದಾರೆ. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಅವರು ಸಾಧಿಸಿದ್ದಾರೆ. 74 ವರ್ಷ ಬದುಕಿದ ಸಿಂಧುತಾಯಿ, ಲಕ್ಷಾಂತರ ಅಬಲೆ­ಯರು ಎನಿಸಿಕೊಂಡಿರುವ ಹೆಣ್ಣು­ಮಕ್ಕಳಿಗೆ ಸ್ಫೂರ್ತಿಯ ಕಿಡಿ. ಅಂಥ ಮಹಾತಾಯಿ ಜ.4ರಂದು ಇಹ­ಲೋಕ ತ್ಯಜಿಸಿದರು. ಆದರೆ ಅವರು ತೋರಿದ ತಾಯಿ ವಾತ್ಸಲ್ಯ, ಮಮತೆಗಳು ಮಾತ್ರ ಮಾಸಲಾರವು.


(ಈ ಲೇಖನವು ವಿಜಯ ಕರ್ನಾಟಕದ 2022ರ ಜನವರಿ 9ರ ಸಂಚಿಕೆಯಲ್ಲಿ ಪ್ರಕಟವಾಗಿದೆ)


ಶನಿವಾರ, ಜನವರಿ 1, 2022

Arjun Gowda Kannada Film: ಕತೆ ಸುಮಾರು, ಆ್ಯಕ್ಷ ನ್‌ ಜೋರು!

- ಮಲ್ಲಿಕಾರ್ಜುನ ತಿಪ್ಪಾರ

ಕನ್ನಡದ ಚಿತ್ರಗಳಿಗೆ ಅದ್ಧೂರಿತನ, ಆ್ಯಕ್ಷ ನ್‌ ಸಿನಿಮಾಗಳಿಗೆ ಹೊಸ ಖದರ್‌ ತಂದು­ಕೊಟ್ಟವರು ನಿರ್ಮಾಪಕ ‘ಕೋಟಿ’ ರಾಮು. ಅವರ ಬ್ಯಾನರ್‌ನ ಸಿನಿಮಾಗಳೆಂದರೆ ಫುಲ್‌ ಆ್ಯಕ್ಷ ನ್‌, ಸ್ವಲ್ಪ ಸೆಂಟಿಮೆಂಟ್‌ ಜತೆಗೆ ಮನರಂಜನೆ ಗ್ಯಾರಂಟಿ. ಇದಕ್ಕೆ ವರ್ಷದ ಕೊನೆಯಲ್ಲಿಬಿಡುಗಡೆಯಾಗಿರುವ ‘ಅರ್ಜುನ್‌ ಗೌಡ’ ಸಿನಿಮಾ ಹೊರತಲ್ಲ. ಚಿತ್ರ ಅದ್ಧೂರಿ­ಯಾಗಿದೆ. ಆದರೆ, ಪ್ರೇಕ್ಷ ಕರ ಮನಸ್ಸಿಗೆ ಎಷ್ಟು ನಾಟಲಿದೆ ಎಂಬುದು ನಿಗೂಢ!

ನಿರ್ದೇಶಕರು ‘ಅರ್ಜನ್‌ ಗೌಡ’ ಚಿತ್ರದ ಆರಂಭದಲ್ಲಿಪತ್ರಕರ್ತೆ ಗೌರಿ ಲಂಕೇಶ್‌, ವಿದ್ವಾಂಸ ಎಂ. ಎಂ. ಕಲಬುರ್ಗಿ ಹತ್ಯೆಗಳೇ ತಮ್ಮ ಸಿನಿಮಾಕ್ಕೆ ಸೂಧಿರ್ತಿ ಎಂದು ಹೇಳಿಸು­ತ್ತಾರೆ. ಆದರೆ, ಸಿನಿಮಾ ಮುಗಿದರೂ ಆ ಸೂಧಿರ್ತಿ ಏನೆಂಬುದು ಗೊತ್ತಾಗುವುದಿಲ್ಲ! ಪ್ರೀತಿ, ಸಮಾಜ, ದುಷ್ಟಶಕ್ತಿಗಳು, ಮಾಧ್ಯಮ... ಹೀಗೆ ಎಲ್ಲವನ್ನೂ ಹೇಳಲು ಹೋಗಿ, ಯಾವುದನ್ನೂ ಪ್ರೇಕ್ಷ ಕರ ಮನಸ್ಸಿಗೆ ಪೂರ್ತಿಯಾಗಿ ದಾಟಿಸುವಲ್ಲಿಚಿತ್ರ ಯಶಸ್ವಿಯಾಗುವುದಿಲ್ಲ. ಹಾಗಾಗಿಯೇ, ಚಿತ್ರ ನೋಡಿ ಹೊರ ಬಂದಾಗ ನಿಮಗೆ ಮನಸ್ಸು ಭಾರವೂ ಆಗುವುದಿಲ್ಲ, ಹಗುರವೂ ಆಗುವುದಿಲ್ಲ.

ಚಿತ್ರದ ನಾಯಕ ಅರ್ಜುನ್‌ ಗೌಡ (ಪ್ರಜ್ವಲ್‌ ದೇವರಾಜ್‌) ಸುದ್ದಿವಾಹಿನಿಯ ಒಡತಿ ಜಾನಕಿ (ಸ್ಪರ್ಶ ರೇಖಾ) ಅವರ ಏಕೈಕ ಪುತ್ರ. ಆಗಾಗ ಅಮ್ಮ-ಮಗನ ಮಧ್ಯೆ ಜನರೇಷನ್‌ ಗ್ಯಾಪ್‌ ಜಗಳ. ದೊಡ್ಡ ಉದ್ಯಮಿ (ರಾಜ್‌ ದೀಪಕ್‌ ಶೆಟ್ಟಿ) ಮಗಳು ಜಾಹ್ನವಿ (ಪ್ರಿಯಾಂಕಾ ತಿಮ್ಮೇಶ್‌) ಮತ್ತು ಅರ್ಜುನ್‌ ಮಧ್ಯೆ ಅಮರ ಪ್ರೇಮ. ಜಾಹ್ನವಿ ತಂದೆ ಒಪ್ಪಲ್ಲ. ಹಲವು ತಿರುವು ಘಟಿಸಿ ಜಾಹ್ನವಿ ಮದುವೆ ಎನ್‌ಆರ್‌ಐಯೊಂದಿಗೆ ಆಗುತ್ತದೆ. ಇದೇ ದುಃಖದಲ್ಲಿಮನೆ ತೊರೆದ ಅರ್ಜುನ್‌ ಗೌಡ ಮಂಗಳೂರು ಸೇರುತ್ತಾನೆ; ಲೋಕಲ್‌ ಗೂಂಡಾಗಳು ಜತೆ­ಯಾಗುತ್ತಾರೆ. ಮಗನಿಗೆ ಹೀಗೆ ಆಯ್ತಲ್ಲಅಂತ ತಾಯಿ ಉದ್ಯಮಿಯ ವ್ಯಾಪಾರವನ್ನು ತನ್ನ ವರದಿಗಾರರಿಂದ ಜಾಲಾಡಿದಾಗ ಸಮಾಜಘಾತಕಶಕ್ತಿ ಖಳನಾಯಕ­(ರಾಹುಲ್‌ ದೇವ್‌) ಅವರ ಜತೆ ಉದ್ಯ­ಮಿಯ ಸಂಪರ್ಕವಿರುವುದು ಗೊತ್ತಾಗು­ತ್ತದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ವಿಲನ್‌, ಜಾನಕಿಯನ್ನು ಕೊಲ್ಲಲು ಕರಾವಳಿಯ ಡಾನ್‌ಗೆ ಹೇಳುತ್ತಾನೆ. ಜಾನಕಿಯನ್ನು ಯಾರು ಕೊಲ್ಲುತ್ತಾರೆ? ಆ ಸುಪಾರಿ ಕಿಲ್ಲರ್ಸ್‌ ಯಾರು? ಕೊಲೆ ಯತ್ನ ಕೇಸ್‌ನಲ್ಲಿಅರ್ಜುನ್‌ ಗೌಡ ಯಾಕೆ ಜೈಲು ಪಾಲಾಗುತ್ತಾನೆ? ಕೊನೆಗೆ ಜಾಹ್ನವಿ ಏನಾದಳು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ ಸಿನಿಮಾ ನೋಡಬೇಕು.

ಪ್ರಜ್ವಲ್‌ ದೇವರಾಜ್‌ ಹಾಗೂ ‘ಸ್ಪರ್ಶ’ ರೇಖಾ ಅವರು ತಮಗೆ ವಹಿಸಿರುವ ಕೆಲಸವನ್ನು ನೀಟ್‌ ಆಗಿ ಮಾಡಿದ್ದಾರೆ. ಫೈಟಿಂಗ್‌ ದೃಶ್ಯಗಳಲ್ಲಿಪ್ರಜ್ವಲ್‌ ಪವರ್‌ಫುಲ್‌ ಆಗಿ ಕಾಣಿಸುತ್ತಾರೆ. ಸಿನಿಮಾದಲ್ಲಿಹಾಸ್ಯನಟ ಸಾಧು ಕೋಕಿಲ  ಹಾಗೂ ಕಾಮಿಡಿ ಕಿಲಾಡಿ­ಯಂಥ ನಟರಿದ್ದೂ ಪ್ರೇಕ್ಷ ಕರು ನಗದಿದ್ದರೆ ಅದು ಯಾರ ತಪ್ಪು? ಖಳನಾಯಕ ರಾಹುಲ್‌ ದೇವ್‌ಗೆ ಹೆಚ್ಚು ಕೆಲಸವಿಲ್ಲ.

ಧರ್ಮೇಶ್‌ ವಿಶ್‌ ಅವರ ಸಂಗೀತ ಮಾತ್ರ ತಲೆ ಗಿಂವ್‌ ಅನ್ನುವ ಹಾಗಿದೆ! ಕ್ಯಾಮೆರಾ ವರ್ಕ್‌ ಓಕೆ. ಸಂಭಾಷಣೆ ಅಲ್ಲಲ್ಲಿಹರಿತವಾಗಿದೆ. ಅರ್ಜುನ್‌ ಗೌಡರದ್ದು ಮಧ್ಯಂತರವರೆಗೆ ‘ಸುದೀರ್ಘ’ ಪಯಣ. ಸೆಕೆಂಡ್‌ ಹಾಫ್‌ ಕೂಡ ಹೆಚ್ಚು ಕಡಿಮೆ ಹಾಗೆಯೇ. ಇಷ್ಟಾಗಿಯೂ ಆ್ಯಕ್ಷ ನ್‌ ಪ್ರಿಯರಿಗೆ ಸಿನಿಮಾ ಇಷ್ಟವಾಗಬಹುದು.

ಚಿತ್ರ: ಅರ್ಜುನ್‌ ಗೌಡ 

ನಿರ್ದೇಶನ: ಶಂಕರ್‌. ನಿರ್ಮಾಪಕ:  ರಾಮು.

ತಾರಾಗಣ: ಪ್ರಜ್ವಲ್‌ ದೇವರಾಜ್‌,  ಪ್ರಿಯಾಂಕ ತಿಮ್ಮೇಶ್‌, ರಾಹುಲ್‌ ದೇವ್‌, ಸ್ಪರ್ಶ ರೇಖಾ, ಸಾಧು ಕೋಕಿಲ ಮತ್ತಿತರರು. 


(ಈ ಲೇಖನವು ವಿಜಯ ಕರ್ನಾಟಕ ಜ.1, 2022ರ ಸಂಚಿಕೆಯಲ್ಲಿ ಪ್ರಕಟವಾಗಿದೆ)


ಶುಕ್ರವಾರ, ಡಿಸೆಂಬರ್ 31, 2021

83 Hindi Film Review: ತೆರೆಯ ಮೇಲೆ 83ರ ವಿಶ್ವಕಪ್‌ ಗೆಲುವಿನ ರೋಚಕತೆ

- ಮಲ್ಲಿಕಾರ್ಜುನ ತಿಪ್ಪಾರ

ಮೂವತ್ತೆಂಟು ವರ್ಷಗಳ ಹಿಂದೆ ರೇಡಿಯೊಗೆ ಕಿವಿಯಾನಿಸಿ ಕಾಮೆಂಟರಿ ಕೇಳಿ ಪುಳಕಗೊಂಡಿದ್ದ ಒಂದು ತಲೆಮಾರು, ಅಂದಿನ ಯಶಸ್ಸಿನ ಕತೆಯನ್ನು ಆಗಾಗ ಕೇಳುತ್ತಿದ್ದ ಹೊಸ ತಲೆಮಾರಿನ ಕ್ರಿಕೆಟ್ಅಭಿಮಾನಿಗಳಿಗೆ ‘83’ ಸಿನಿಮಾ ಒಂದು ಹೊಸ ಸಂಚಲನ. ಭಾರತವು 1983ರ ಕ್ರಿಕೆಟ್ವರ್ಲ್ಡ್ಕಪ್ಗೆದ್ದ ಪಯಣವನ್ನುಭಜರಂಗಿ ಭಾಯಿಜಾನ್‌’ ಖ್ಯಾತಿಯ ನಿರ್ದೇಶಕ ಕಬೀರ್ಖಾನ್ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಆರಂಭವಾಗಿಕಪ್ಗೆಲ್ಲುವತನಕ ನಿಮ್ಮ ಕಣ್ಣಂಚಿನಲ್ಲಿರುವ ನೀರು ಹೊರ ಬೀಳಲು ಕಾಯುತ್ತಲೇ ಇರುತ್ತದೆ. ನಡುನಡುವೆ ಒಂಚೂರು ಹಾಸ್ಯ, ವಿಷಾದ, ತುಂಟಾಟ, ನೋವು... ಹೀಗೆ ಹಲವು ಭಾವಗಳು ನಿಮ್ಮನ್ನು ಅಪ್ಪಿಕೊಂಡು, ಸೀಟಿನಂಚಿಗೆ ಬಂದು ಕೂಡುವಂತೆ ಮಾಡುತ್ತವೆ.

ಬಯೋಪಿಕ್ಸಿನಿಮಾಗಳನ್ನು ಮಾಡುವಾಗ ಡಾಕ್ಯುಮೆಂಟರಿಯಾಗುವ ಅಪಾಯವೇ ಹೆಚ್ಚು. ಒಂಚೂರು ಆಚೆ, ಈಚೆಯಾದರೂ ಸಿನಿಮಾ ಚೌಕಟ್ಟು ಮೀರುತ್ತದೆ. ಕೆಲವೊಮ್ಮೆ ನೈಜ ಘಟನೆಗಳ ಜತೆಗೆ ನಿರ್ದೇಶಕ ತನಗಿರುವ ಸೃಜನಾತ್ಮಕ ಸ್ವಾತಂತ್ರ್ಯ­ವನ್ನು ಬಳಸಿಕೊಂಡುಕತೆಯನ್ನೂ ಕಟ್ಟುತ್ತಾನೆ. ಆದರೆ, 83 ಸಿನಿಮಾದಲ್ಲಿಫಿಲ್ಮೀ ಕತೆಗೆ ಅಷ್ಟೇನೂ ಜಾಗವಿಲ್ಲ. ರಿಯಲ್ಕತೆಯನ್ನು ರೀಲ್ನಲ್ಲಿಅಷ್ಟೇ ರಿಯಲ್ಆಗಿ ತೋರಿಸುವಲ್ಲಿಯಶಸ್ವಿಯಾಗಿದ್ದಾರೆ. ಹಾಗಾಗಿ, ಕಪಿಲ್ಆ್ಯಂಡ್ಟೀಂ ಅಂದು ಅನುಭವಿಸಿದ ಎಲ್ಲಟೀಕೆ, ಉಡಾಫೆ, ನಿರ್ಲಕ್ಷ್ಯ ಎಲ್ಲವನ್ನೂ ತೆರೆಯ ಮೇಲೆ ತರಲು ಸಾಧ್ಯವಾಗಿದೆ. ಸುಮಾರು ಎರಡೂವರೆ ಗಂಟೆಯ ಸಿನಿಮಾ ಒಂದೇ ಗಂಟೆಯಲ್ಲಿಮುಗಿದ ಅನುಭವವಾಗುತ್ತದೆ!

ಕತೆ ಏನೆಂದು ಕೇಳಿದರೆ ಅದು ಎಲ್ಲರಿಗೂ ಗೊತ್ತಿರುವಂಥದ್ದೇ! ‘ಅಂಡರ್ಡಾಗ್‌’ ಹಣೆಪಟ್ಟಿ ಹೊತ್ತಿದ್ದ ತಂಡವೊಂದು ಯಾರೂ ನಿರೀಕ್ಷಿಸದ ರೀತಿಯಲ್ಲಿಸಾಹಸ ಮೆರೆಯುವಂಥದ್ದು. 1983ರ ವಿಶ್ವಕಪ್ಪಂದ್ಯಾವಳಿಗೆ ಹೊರಟ ತಂಡದ ಮೇಲೆ ಕ್ರಿಕೆಟ್ಮಂಡಳಿಯ ಅಧಿಕಾರಿಗಳಿಂದ ಹಿಡಿದು ದೇಶ, ವಿದೇಶಗಳಲ್ಲಿರುವ ಅಭಿಮಾನಿಗಳಿಗೆ ಮಾತ್ರವಲ್ಲದೆ ತಂಡಕ್ಕೆ ಆಯ್ಕೆಯಾದ ಆಟಗಾರರಿಗೆಗೆಲ್ಲುವವಿಶ್ವಾಸವಿರುವುದಿಲ್ಲ. ಈ ಹಿಂದಿನ ಎರಡು ವರ್ಲ್ಡ್ಕಪ್ನಲ್ಲಿಭಾರತದ ಪ್ರದರ್ಶನ ಹೀನಾಯವಾಗಿರುತ್ತದೆ. ಹಾಗಾಗಿ, ಯಾರಿಗೂ ಯಾವ ನಿರೀಕ್ಷೆಗಳೂ ಇರುವುದಿಲ್ಲ; ಕಪಿಲ್ದೇವ್ಎಂಬ ಆತ್ಮವಿಶ್ವಾಸದ ನಾಯಕನೊಬ್ಬನನ್ನು ಹೊರತುಪಡಿಸಿ. ಭಾರತದ ತಂಡದ ಬಗ್ಗೆ ತೂರಿ ಬರುವ ಎಲ್ಲ ಅವಮಾನಗಳನ್ನು ಶಾಂತವಾಗಿಯೇ ಸ್ವೀಕರಿಸಿ, ಸಹ ಆಟಗಾರರನ್ನು ಹುರಿದುಂಬಿಸುತ್ತ, ಅವರಲ್ಲಿರುವ ಶಕ್ತಿ ಸಾಮರ್ಥ್ಯದ ಬಗ್ಗೆ ಅರುಹುತ್ತಾ ಹೊಸ ಇತಿಹಾಸಕ್ಕೆ ನಾಂದಿ ಹಾಡುತ್ತಾರೆಇಂಗ್ಲಿಷ್ಮೋಹಿಕಪಿಲ್‌. ಈ ಪಾತ್ರವನ್ನು ನಟ ರಣವೀರ್ಸಿಂಗ್ಅಕ್ಷ ರಶಃ ಜೀವಿಸಿದ್ದಾರೆ. ಅಂದಿನ ಕ್ರಿಕೆಟ್ತಂಡದ ಯಶಸ್ಸಿನ ಶ್ರೇಯದಲ್ಲಿಮ್ಯಾನೇಜರ್ಪಿ. ಆರ್‌. ಮಾನ್ಸಿಂಗ್ಅವರಿಗೂ ಪಾಲು ಸಲ್ಲುತ್ತದೆ. ಆ ಪಾತ್ರದಲ್ಲಿಪ್ರತಿಭಾವಂತ ನಟ ಪಂಕಜ್ತ್ರಿಪಾಠಿ ನಿಮ್ಮನ್ನು ಕಾಡುತ್ತಾರೆ. ಕ್ರಿಕೆಟ್ತಂಡದ ಮ್ಯಾನೇಜರ್ಒಬ್ಬರು, ವಿಮಾನ ಟಿಕೆಟ್ಕ್ಯಾನ್ಸಲ್ಮಾಡಿದರೆ ಎಷ್ಟು ದುಡ್ಡು ಕೊಡಬೇಕಾಗುತ್ತದೆ ಎಂಬ ಲೆಕ್ಕ ಹಾಕುತ್ತಲೇ, ‘ನಮಗೆ ಸ್ವಾತಂತ್ರ್ಯ ಸಿಕ್ಕಿದೆ, ಇನ್ನೂ ಗೌರವ ಸಿಕ್ಕಿಲ್ಲಎಂದು ಹೇಳುತ್ತಾ ವಿಷಾದ ಮತ್ತು ವಾಸ್ತವವನ್ನು ಒಟ್ಟೊಟ್ಟಿಗೆ ತಂದಿಡುತ್ತಾರೆ. ಶ್ರೀಕಾಂತ್‌, ಮೊಹಿಂದರ್ಅಮರನಾಥ್‌, ಮದನಲಾಲ್‌, ಕೀರ್ತಿ ಆಜಾದ್‌, ಸಂದೀಪ್ಪಾಟೀಲ್‌, ಸಯ್ಯದ್ಕೀರ್ಮಾನಿ, ರೋಜರ್ಬಿನ್ನಿ, ಸುನಿಲ್ಗವಾಸ್ಕರ್‌, ಯಶಪಾಲ್ಶರ್ಮಾ, ಬಲ್ವಿಂದರ್ಸಿಂಗ್ಸಂಧು, ದಿಲಿಪ್ವೆಂಗ್ಸರ್ಕಾರ್ಹೀಗೆ ಎಲ್ಲಈ ದಂತಕತೆಗಳಾದ ಆಟಗಾರರ ಪಾತ್ರವನ್ನು ಪೋಷಣೆ ಮಾಡಿರುವ ನಟರು, ಮೂಲ ಕ್ರಿಕೆಟಿಗರನ್ನು ತೆರೆಯ ಮೇಲೆ ಬಹುತೇಕ ಪ್ರಾಮಾಣಿಕವಾಗಿ ತಂದಿದ್ದಾರೆ; ಅವರದ್ದೇ ಆಂಗಿಕ ಭಾಷೆಯನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ.

1983ರ ವರ್ಲ್ಡ್ಕಪ್ನ ಯಶಸ್ಸು ಭಾರತದಲ್ಲಿಸಾಮಾಜಿಕವಾಗಿ, ಕ್ರೀಡಾ ಕ್ಷೇತ್ರದಲ್ಲಿಹೇಗೆ ಬದಲಾವಣೆಗೆ ಕಾರಣವಾಯಿತು ಎಂಬುದನ್ನು ಸೂಚ್ಯವಾಗಿ ನಿರ್ದೇಶಕರು ಹೇಳುತ್ತಾರೆ. ಫೈನಲ್ಮ್ಯಾಚ್ಆರಂಭವಾದಾಗ, ಬಾಲಕ ಸಚಿನ್ತೆಂಡೂಲ್ಕರ್ಟಿವಿ ಮುಂದೆ ಕುಳಿತುಕೊಳ್ಳುವುದು; ತಂಡ ಗೆದ್ದಾಗ ಭಾರತದ ಪರ ಆಡುವೆ ಎಂದು ಕೂಗುವುದು, ಕೋಮು ಹಿಂಸಾಚಾರದಿಂದಾಗಿ ಒಡೆದಿದ್ದ ಮನಸ್ಸುಗಳು ಒಂದಾಗುವುದು, ಕ್ರಿಕೆಟ್ಅನ್ನೇ ಸಮಸ್ಯೆಗೆ ಪರಿಹಾರವಾಗಿ ಬಳಸಿಕೊಳ್ಳುವ ನಾಯಕತ್ವ, ವಿದೇಶಗಳಲ್ಲಿಭಾರತೀಯ ಕ್ರಿಕೆಟ್ಅಭಿಮಾನಿಗಳು ನೋವು-ನಲಿವು, ಕ್ರಿಕೆಟ್ಅಂಗಣ­ದಲ್ಲಿಭಾರತ ರನ್ಹೊಡೆದಾಗಲೆಲ್ಲ ಗಡಿಯಿಂದ ತೂರಿ ಬರುವ ಗುಂಡುಗಳು... ಹೀಗೆ ಆ ಕಾಲಘಟ್ಟದ ಎಲ್ಲತಳಮಳಗಳನ್ನು ಕ್ರಿಕೆಟ್ನೊಟ್ಟಿಗೆ ಚಿತ್ರಿಸುವಲ್ಲಿಯಶಸ್ವಿಯಾಗಿದ್ದಾರೆ ಕಬೀರ್‌. ಸಿನಿಮಾದಲ್ಲಿಅಲ್ಲಲ್ಲಿಮೂಲ ಪಂದ್ಯಾವಳಿಯ ಫೋಟೊಗ್ರಾಫ್ಗಳನ್ನು, ವಿಡಿಯೊ ತುಣುಕುಗಳನ್ನು ಬಳಸಿಕೊಳ್ಳುವ ಮೂಲಕ ಕತೆ ಹೇಳುವ ರೀತಿಗೆ ಹೊಸ ಶೈಲಿಯನ್ನು ಶೋಧಿಸಿದ್ದಾರೆ ನಿರ್ದೇಶಕರು.

ಬಿಬಿಸಿ ನಿರ್ಲಕ್ಷ್ಯದಿಂದಾಗಿ ಜಿಂಬಾಬ್ವೆ ವಿರುದ್ಧ ಕಪಿಲ್ದೇವ್ಆಟವನ್ನು ನೋಡಲು ಅಂದಿನವರಿಗೆ ಸಾಧ್ಯವಾಗಿರಲಿಲ್ಲ. ಆ ಪಂದ್ಯದಲ್ಲಿಏಕಾಂಗಿಯಾಗಿ ಕಪಿಲ್ಅವರ ವಿಶ್ವದಾಖಲೆಯ ಆಟವನ್ನು ಕಣ್ತುಂಬಿ­ಕೊಳ್ಳಬೇಕಿದ್ದರೆ 83 ಮಿಸ್ಮಾಡಿಕೊಳ್ಳಬೇಡಿ.

 

ನಿರ್ದೇಶನ: ಕಬೀರ್ಖಾನ್‌, ತಾರಾಗಣ: ರಣವೀರ್ಸಿಂಗ್‌, ಜೀವಾ, ಪಂಕಜ್ತ್ರಿಪಾಠಿ, ದೀಪಿಕಾ ಪಡುಕೋಣೆ, ತಾಹಿರ್ರಾಜ್ಬಾಷಿನ್‌, ಜತಿನ್ಸರಣ್ಮತ್ತಿತರರು. ರೇಟಿಂಗ್‌: ****

(ಈ ವಿಮರ್ಶೆ ವಿಜಯ ಕರ್ನಾಟಕದ ಪತ್ರಿಕೆಯಲ್ಲಿ ಪ್ರಕಟವಾಗಿದೆ.)