ಭಾನುವಾರ, ಜನವರಿ 9, 2022

Mother of Orphans Sindhutai Sapkal : ಅನಾಥರ ಆಯಿ ಸಿಂಧುತಾಯಿ ಸಕಪಾಳ್

 ಪರಿತ್ಯಕ್ತ ಮಹಿಳೆಯರ ಮಕ್ಕಳು, ಅನಾಥ ಕಂದಮ್ಮಗಳಿಗೆ ಅವ್ವಳಾದ ಸಿಂಧುತಾಯಿ ಬದುಕೇ ಸಂಘರ್ಷ. ‘ಚಿಂದಿ’ಯಿಂದ ‘ಚಿನ್ನ’ದಂಥ ತಾಯಿ ಆಗೋವರೆಗಿನ ಕತೆ ಸ್ಫೂರ್ತಿದಾಯಕ.


- ಮಲ್ಲಿಕಾರ್ಜುನ ತಿಪ್ಪಾರ
‘ಎಲ್ಲೆಡೆಯೂ ತಾನಿರಲು ಸಾಧ್ಯವಿಲ್ಲಎಂದು ದೇವರು ತಾಯಿಯನ್ನು ಸೃಷ್ಟಿಸಿದ’ ಎಂಬ ಮಾತಿದೆ. ಈ ಮಾತು ಸಿಂಧುತಾಯಿ ಸಪಕಾಳ್‌ ವಿಷಯದಲ್ಲಿನಿಜವಾಗಿದೆ. ‘ಅನಾಥಾಚಿ ಆಯಿ’(ಅನಾಥರ ತಾಯಿ) ಎಂದು ಖ್ಯಾತರಾದ ಅವರು ಅನಾಥ ಮಕ್ಕಳಿಗೆ ಅಕ್ಷ ರಶಃ ದೇವರಾದರು, ತನ್ನ ಹೊಟ್ಟೆಯಲ್ಲಿಹುಟ್ಟಿದ ಮಕ್ಕಳಂತೆ ಸಾಕಿ, ಸಲುಹಿದರು. ಅವರು ತಮ್ಮ ಬದುಕಿನ ಪೂರ್ತಿ 1500ಕ್ಕೂ ಹೆಚ್ಚು ಅನಾಥ ಮಕ್ಕಳಿಗೆ ಆಸರೆಯಾದರು. ಈ ಕುಟುಂಬ ಬೆಳೆದು ಈಗ ದೊಡ್ಡದಾಗಿದೆ. 282 ಅಳಿಯಂದಿರು, 47 ಸೊಸೆಯರು ಸೇರಿಕೊಂಡಿದ್ದಾರೆ.

‘ಅನಾಥಮಕ್ಕಳ ಅವ್ವ’ ಸಿಂಧುತಾಯಿ ಬದುಕು ಪೂರ್ತಿ ಸಂಘರ್ಷವೇ. ಆಕೆಯ ಜೀವನದ ಪ್ರತಿಪುಟದಲ್ಲೂದೌರ್ಜನ್ಯ, ಅವಮಾನ, ಹಿಂಸೆಯೇ ತುಂಬಿದೆ. ಆದರೂ ಧೃತಿಗೆಡದೇ ಅವರು ತಮ್ಮನ್ನು ತಾವು ರೂಪಿಸಿಕೊಂಡು, ದೇಶದ ನಾಲ್ಕನೇ ಅತಿದೊಡ್ಡ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ ಸ್ವೀಕರಿಸುವವರೆಗಿನ ಪಯಣ ಯಾರಿಗಾದರೂ ಸ್ಫೂರ್ತಿಯಾಗಬಲ್ಲದು. ಅನಾಥರ ಪಾಲಿನ ದೈವ ಎನಿಸಿಕೊಂಡ ಸಿಂಧುತಾಯಿ, ಹಿಂದೊಮ್ಮೆ ಅನಾಥವಾಗಿಯೇ ಮನೆಯಿಂದ ಹೊರಹಾಕಲ್ಪಟ್ಟ ನತದೃಷ್ಟ ಹೆಣ್ಣುಮಗಳು!

1948 ನವೆಂಬರ್‌ 14ರಂದು ಮಹಾರಾಷ್ಟ್ರ ವಾರ್ಧಾ ಜಿಲ್ಲೆಯ ಪಿಂಪ್ರಿ ಮೆಘೇ ಹಳ್ಳಿಯ ಕಡುಬಡತನದ ಕುಟುಂಬ­ವೊಂದರಲ್ಲಿಜನಿಸಿದರು. ಅಂದಿನ ಕಾಲದಲ್ಲಿಹೆಣ್ಣು ಮಕ್ಕಳು ಜನಿಸಿತೆಂದರೆ ಯಾರಿಗೂ ಸಂತೋಷವೇ ಇರುತ್ತಿರಲಿಲ್ಲ. ಸಿಂಧುತಾಯಿ ವಿಷಯದಲ್ಲಿಈ ಹಣೆಬರಹ ಬದಲಾಗಲಿಲ್ಲ. ಆದರೆ, ಎಂಥ ನಿಕೃಷ್ಟ ಸ್ಥಿತಿ ಎದುರಾಗಿತ್ತು ಎಂದರೆ, ಆ ಹೆಣ್ಣು ಮಗುವಿಗೆ ‘ಚಿಂದಿ’ ಎಂದು ಕರೆಯುತ್ತಿದ್ದರಂತೆ! ಇಂಥ ಮನಸ್ಥಿತಿಯ ಜನರು ಇರುವಾಗ ಸಿಂಧುತಾಯಿ ಬಾಲ್ಯ ಹೇಗೆ ಚೆನ್ನಾಗಿರಲು ಸಾಧ್ಯ? ನಾಲ್ಕನೇ ತರಗತಿ ಮುಗಿಯುತ್ತಿದ್ದಂತೆ, ನವರಾಂವ್‌ ಹಳ್ಳಿಯ 25 ವರ್ಷದ ಶ್ರೀಹರಿ ಸಪಕಾಳ್‌ಗೆ ಮದುವೆ ಮಾಡಿಕೊಟ್ಟರು. ಗಂಡ ಕೂಲಿ ಕೆಲಸ ಮಾಡಿಕೊಂಡಿದ್ದಾತ. ಆದರೆ, ಹೆಂಡತಿಗೆ ವಿಪರೀತ ಕಾಟ ಕೊಡುತ್ತಿದ್ದ. ಸಿಂಧು ತಾಯಿ 20 ವರ್ಷಕ್ಕೆ ಬರು­ವಷ್ಟರ ಹೊತ್ತಿಗಾಗಲೇ ಎರಡು ಮಕ್ಕಳಗಾಗಿದ್ದವು. ಗಂಡನ ಕಿರುಕುಳವೂ ಮಿತಿಮೀರಿತ್ತು. ಸ್ಥಳೀಯ ಸಾಹುಕಾರನೊಬ್ಬ ಸಿಂಧುತಾಯಿ ಹೊಟ್ಟೆಯಲ್ಲಿದ್ದ ಮೂರನೇ ಮಗುವಿನ ಬಗ್ಗೆ ಪುಕಾರು ಹಬ್ಬಿಸಿದ. ಇದನ್ನೇ ಸತ್ಯ ಎಂದು ನಂಬಿದ ಗಂಡ ಇನ್ನಷ್ಟು ಕಿರುಕುಳ ನೀಡಲಾರಂಭಿಸಿದ. ಬಸುರಿಯಿದ್ದಾಗಲೇ ಆಕೆಯ ಹೊಟ್ಟೆಗೆ ಒದ್ದು, ದನದ ಕೊಟ್ಟಿಗೆಗೆ ಹಾಕುವ ಮೂಲಕ ವಿಕೃತಿ ಮೆರೆದಿದ್ದ. ದನಗಳು ತುಳಿದು ಸಾಯಿಸಲಿ ಎಂದೇ ಕೊಟ್ಟಿಗೆಗೆ ಹಾಕಿದ್ದಂತೆ. ಆದರೆ, ದನವೊಂದು ಬಸುರಿ ಸಿಂಧುತಾಯಿ ರಕ್ಷ ಣೆಗೆ ನಿಂತು ಬೇರೆ ಯಾವುದೇ ದನಗಳು ಹತ್ತಿರ ಸುಳಿಯದಂತೆ ನೋಡಿಕೊಂಡಿತಂತೆ. ಈ ವಿಷಯವನ್ನು ಸ್ವತಃ ಸಿಂಧುತಾಯಿ ಅವರು 2016ರಲ್ಲಿಹೇಳಿಕೊಂಡಿದ್ದಾರೆ. 

ಸಿಂಧುತಾಯಿ ಬವಣೆಯ ಬದುಕು ಇಷ್ಟಕ್ಕೆ ನಿಲ್ಲಲಿಲ್ಲ. ಗಂಡನ ದೌರ್ಜನ್ಯಕ್ಕೆ ರೋಸಿ ಹೋಗಿ 10 ದಿನದ ಮಗುವಿನೊಂದಿಗೆ ತಂದೆ-ತಾಯಿ ಊರಿಗೆ ಹೋದರೆ, ಅಲ್ಲಿಯೂ ತಿರಸ್ಕಾರದ ಸ್ವಾಗತ. ತಂದೆ, ತಾಯಿ ಅವರನ್ನು ಒಳಗೇ ಬಿಟ್ಟುಕೊಳ್ಳಲಿಲ್ಲ. ಅಲ್ಲಿಂದ ಹೊರಬಿದ್ದ ಅವರಿಗೆ ಬದುಕಲೇಬೇಕೆಂಬ ಹಠ. ಅದಕ್ಕಾಗಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರೈಲ್ವೆ ನಿಲ್ದಾಣ, ಸ್ಮಶಾನಗಳೇ ಆಸರೆಗಳಾಗಿದ್ದವು. ಸ್ಮಶಾನದ ಹೆಣಗಳ ಮೇಲಿದ್ದ ಬಟ್ಟೆ, ಅನ್ನವೇ ಆಹಾರ, ಭಿಕ್ಷೆಯೇ ಮೃಷ್ಟಾನ್ನವಾಗಿತ್ತು.

ಭಿಕ್ಷ ಕರ ಜತೆಗೇ ಜೀವನ ಸಾಗಿತ್ತು. ರೈಲ್ವೆ ನಿಲ್ದಾಣದಲ್ಲಿಮಲಗಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ, ಯವ್ವನದಲ್ಲಿದ್ದ ತನ್ನನ್ನು ಮಗುವನ್ನು ಯಾರಾದರೂ ಅಪಹರಿಸಿದರೆ ಎಂಬ ಚಿಂತೆ ಎದುರಾಗುತ್ತಿದ್ದಂತೆ, ನಗರದ ಸ್ಮಶಾನಭೂಮಿ ಸುರಕ್ಷಿತ ತಾಣ ಎಂದರಿತು ಅಲ್ಲಿಗೆ ಹೋದರು. ಆ ದಿನಗಳು ತಮ್ಮ ಬದುಕಿನ ಅತ್ಯಂತ ಕೆಟ್ಟ ದಿನಗಳು ಎಂದ ಆಗಾಗ ನೆನೆಪಿಸಿಕೊಳ್ಳುತ್ತಿದ್ದರು ಅವರು. ಸ್ಮಶಾನದಲ್ಲಿದ್ದಾಗ ಹಸಿವು ಆದಾಗ ತಿನ್ನಲು ಏನೂ ಇರುತ್ತಿರಲಿಲ್ಲ. ಆದರೆ, ಹೊಟ್ಟೆಯ ಬೆಂಕಿಯನ್ನು ಆರಿಸಲು ಹೆಣದ ಬೆಂಕಿಯ ಸಹಾಯ ಪಡೆದುಕೊಳ್ಳದೇ ವಿಧಿಯೇ ಇರಲಿಲ್ಲ! ಸ್ಮಶಾನದಲ್ಲಿಯಾರೋ ನಾದಿದ ಗೋಧಿ ಹಿಟ್ಟನ್ನು ಗೋರಿಯ ಮೇಲೆ ಬಿಟ್ಟು ಹೋಗಿದ್ದರಂತೆ, ಅದು ಕೊಳೆಯುವ ಸ್ಥಿತಿಗೆ ತಲು­ಪಿತ್ತು. ಅದನ್ನೇ ನೀರಿನಲ್ಲಿಅದ್ದಿ, ಮುರಿದ ಮಡಿಕೆಯಲ್ಲಿಟ್ಟು ಹೆಣದ ಚಿತೆಯ ಮೇಲಿಟ್ಟು ರೊಟ್ಟಿ ಮಾಡಿ, ಹಸಿವು ನೀಗಿಸಿಕೊಳ್ಳಬೇಕಾದ ಊಹಾತೀತ ಪರಿಸ್ಥಿತಿಯನ್ನು ಅವರು ಎದುರಿಸಿದ್ದಾರೆ. 

ಆ ಕೆಟ್ಟ ಪರಿಸ್ಥಿತಿಯೇ ಸಿಂಧುತಾಯಿಗೆ ಹೊಸ ಹುಟ್ಟು ನೀಡಿತು. ಯಾಕೆಂದರೆ, ಆಗಲೇ ಅವರು ನಿರ್ಧರಿಸಿದ್ದರಂತೆ, ತಾನು ಹೊಸ ಜೀವವನ್ನು ಆರಂಭಿಸಬೇಕು. ಬಾಳಿನಲ್ಲಿಬಂದಿದ್ದನ್ನು ಛಲದಿಂದ ಎದುರಿಸಬೇಕೆಂದು ತಮ್ಮೊಳಗೇ ಶಪಥ ಮಾಡಿಕೊಂಡು ಮುನ್ನುಗ್ಗಿದರು. ಆ ನಂತರ ಅವರು ತನ್ನಂಥ ಅದೆಷ್ಟೋ ಅನಾಥಮಕ್ಕಳಿಗೆ ನೆರವಾದರು, ಅವರ ಬದಕನ್ನು ಹಸನು ಮಾಡಿದರು. ತಾವು ಮಾತ್ರ ಬದುಕುವುದಲ್ಲದೇ ತನ್ನಂಥ ನೂರಾರು ಜನರಿಗೆ ಸಹಾಯ ಮಾಡಿದರು. ಆದಿವಾಸಿಗಳ ಕಷ್ಟಕ್ಕೆ ಮರುಗಿದರು. ಸಮಾಜದ ಕಟ್ಟಕಡೆಯಲ್ಲಿರುವವರ ಮಕ್ಕಳನ್ನು ಎದೆಗಪ್ಪಿಕೊಂಡು ಬೆಳೆಸಿದರು.

1971ರಲ್ಲಿಅಮರಾವತಿ ಜಿಲ್ಲೆಯ ಚಿಖಲ್ದಾರಾ ಎಂಬ ಗುಡ್ಡಗಾಡು ಊರಿಗೆ ಹೋಗಿ, ಅಲ್ಲಿಆದಿವಾಸಿಗಳ ಪರವಾಗಿಯೂ ಸಿಂಧುತಾಯಿ ಹೋರಾಟ ನಡೆಸಿದರು. ಹುಲಿ ಸಂರಕ್ಷ ಣೆಗಾಗಿ ಕಾಡಿನಲ್ಲಿದ್ದ 84 ಆದಿವಾಸಿ ಕುಟುಂಬಗಳನ್ನು ಹೊರದಬ್ಬಲಾಗಿತ್ತು. ಅವರ ಪರವಾಗಿ ಹೋರಾಟ ನಡೆಸಿದರು. ಸಿಂಧುತಾಯಿ ಹೋರಾಟದ ಕಿಚ್ಚಿಗೆ ಸಣ್ಣ ಉದಾಹರಣೆಯನ್ನು ನೀಡಬಹುದು. ಹುಲಿ ಸಂರಕ್ಷ ಣಾ ಅರಣ್ಯ ಉದ್ಘಾಟನೆಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಚಿಖಲ್ದಾರಾಗೆ ಬಂದಿದ್ದರು. ಈ ವೇಳೆ ಸಿಂಧುತಾಯಿ ಕಾಡು ಪ್ರಾಣಿಗಳಿಂದ ಆದಿವಾಸಿಗಳು ಅನುಭವಿಸುತ್ತಿ­ರುವ ನೋವನ್ನು ಅಭಿವ್ಯಕ್ತಿಸುವ ಫೋಟೊ­ವೊಂದನ್ನು ಇಂದಿರಾ ಗಾಂಧಿ ಎದುರು ಪ್ರದರ್ಶಿಸಿದರು. ‘‘ದನಕ್ಕೆ ಕಾಡು ಪ್ರಾಣಿ ಹಾನಿ ಮಾಡಿದಾಗ ಅರಣ್ಯ ಇಲಾಖೆ ಪರಿಹಾರ ನೀಡುತ್ತದೆ. ಆದರೆ, ಆದಿವಾಸಿ ಮಹಿಳೆಯೊಬ್ಬಳು ಕಣ್ಣು ಕಳೆದುಕೊಂಡರೂ ಅಧಿಕಾರಿಗಳು ಕ್ಯಾರೆ ಮಾಡುವುದಿಲ್ಲ. ಮನುಷ್ಯರ ನೋವಿಗೆ ಬೆಲೆ ಇಲ್ಲವೇ?’’ ಎಂದು ಇಂದಿರಾ ಗಾಂಧಿ ಅವರನ್ನು ಪ್ರಶ್ನಿಸಿದರಂತೆ. ತಕ್ಷ ಣವೇ ಪ್ರಧಾನಿ ಪರಿಹಾರಕ್ಕೆ ಆದೇಶಿಸಿದರು! 

ಇದೇ ವೇಳೆ ಆದಿವಾಸಿ ಪರಿತ್ಯಕ್ತ ಮಹಿಳೆಯರ ಮಕ್ಕಳು, ಅನಾಥ ಮಕ್ಕಳ ಸ್ಥಿತಿಯನ್ನು ಕಂಡು ಅವರ ಆಸರೆಗೆ ಮುಂದಾದರು. ಇಲ್ಲಿಂದ ಆರಂಭವಾದ ಅನಾಥ ಮಕ್ಕಳ ರಕ್ಷ ಣೆ ನಿಧಾನವಾಗಿ ಮಹಾರಾಷ್ಟ್ರದಾದ್ಯಂತ ಹರಡಿ­ಕೊಂಡಿತು. ವಿಶೇಷವಾಗಿ ಪುಣೆಯ ಸುತ್ತಮುತ್ತ ಅನಾಥರಿಗೆ ಸಿಂಧುತಾಯಿ ಆಸರೆಯಾದರು. ಇದಕ್ಕಾಗಿ ನಾನಾ ಸಂಸ್ಥೆಗಳನ್ನು ಹುಟ್ಟು ಹಾಕಿದರು. ಈ ಪೈಕಿ ಮದರ್‌ ಗ್ಲೋಬಲ್‌ ಫೌಂಡೇಷನ್‌, ಸನ್ಮತಿ ಬಾಲ ನಿಕೇತನ, ಮಮತಾ ಬಾಲ ಸದನ, ಸಪ್ತಸಿಂಧು ಮಹಿಳಾ ಆಧಾರ್‌, ಬಾಲಸಂಗೋಪನ ಮತ್ತು ಶಿಕ್ಷ ಣ ಟ್ರಸ್ಟ್‌ ಹೀಗೆ ಎಲ್ಲಸಂಸ್ಥೆಗಳು ಅನಾಥರ ರಕ್ಷ ಣೆಗೆ ಮೀಸಲಾದವು. ಹೀಗೆ ಶುರುವಾದ ಅವರ ಅನಾಥ ಮಕ್ಕಳ ಸಾಕುವ ಕೈಂಕರ್ಯ ನಿರಂತರವಾಗಿ ನಡೆದುಕೊಂಡು ಬಂತು. ಜನರು ಪ್ರೀತಿಯಿಂದ ‘ಅನಾಥರ ಅವ್ವ’ ಎಂದು ಕರೆಯಲಾರಂಭಿಸಿದರು. ಸಿಂಧುತಾಯಿಯ ಮಾನವೀಯ ಕಾರ್ಯ ಕಂಡು ಹಲವು ಪ್ರಶಸ್ತಿ, ಗೌರವವಗಳು ಹುಡುಕಿಕೊಂಡು ಬಂದವು. ಪದ್ಮಶ್ರೀ(2021) ಸೇರಿದಂತೆ 700ಕ್ಕೂ ಹೆಚ್ಚು ಪ್ರಶಸ್ತಿಗಳು ಅವ­ರಿಗೆ ಸಂದಿವೆ. 2010ರಲ್ಲಿಸಿಂಧುತಾಯಿ ಜೀವನಕತೆ ಆಧರಿಸಿ ನಿರ್ದೇಶಕ ಅನಂತ ನಾರಾಯಣ ಮಹಾದೇವನ್‌ ಅವರು ‘ಮೀ ಸಿಂಧುತಾಯಿ ಸಪಕಾಳ್‌’ ಮರಾಠಿ ಸಿನಿಮಾ ಮಾಡಿದ್ದರು. 

ಮಹಿಳಾ ಶಕ್ತಿಗೆ ಗಡಿಗಳೇ ಇಲ್ಲಎಂಬುದನ್ನು ಸಿಂಧುತಾಯಿ ನಿರೂಪಿಸಿದ್ದಾರೆ. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಅವರು ಸಾಧಿಸಿದ್ದಾರೆ. 74 ವರ್ಷ ಬದುಕಿದ ಸಿಂಧುತಾಯಿ, ಲಕ್ಷಾಂತರ ಅಬಲೆ­ಯರು ಎನಿಸಿಕೊಂಡಿರುವ ಹೆಣ್ಣು­ಮಕ್ಕಳಿಗೆ ಸ್ಫೂರ್ತಿಯ ಕಿಡಿ. ಅಂಥ ಮಹಾತಾಯಿ ಜ.4ರಂದು ಇಹ­ಲೋಕ ತ್ಯಜಿಸಿದರು. ಆದರೆ ಅವರು ತೋರಿದ ತಾಯಿ ವಾತ್ಸಲ್ಯ, ಮಮತೆಗಳು ಮಾತ್ರ ಮಾಸಲಾರವು.


(ಈ ಲೇಖನವು ವಿಜಯ ಕರ್ನಾಟಕದ 2022ರ ಜನವರಿ 9ರ ಸಂಚಿಕೆಯಲ್ಲಿ ಪ್ರಕಟವಾಗಿದೆ)


ಶನಿವಾರ, ಜನವರಿ 1, 2022

Arjun Gowda Kannada Film: ಕತೆ ಸುಮಾರು, ಆ್ಯಕ್ಷ ನ್‌ ಜೋರು!

- ಮಲ್ಲಿಕಾರ್ಜುನ ತಿಪ್ಪಾರ

ಕನ್ನಡದ ಚಿತ್ರಗಳಿಗೆ ಅದ್ಧೂರಿತನ, ಆ್ಯಕ್ಷ ನ್‌ ಸಿನಿಮಾಗಳಿಗೆ ಹೊಸ ಖದರ್‌ ತಂದು­ಕೊಟ್ಟವರು ನಿರ್ಮಾಪಕ ‘ಕೋಟಿ’ ರಾಮು. ಅವರ ಬ್ಯಾನರ್‌ನ ಸಿನಿಮಾಗಳೆಂದರೆ ಫುಲ್‌ ಆ್ಯಕ್ಷ ನ್‌, ಸ್ವಲ್ಪ ಸೆಂಟಿಮೆಂಟ್‌ ಜತೆಗೆ ಮನರಂಜನೆ ಗ್ಯಾರಂಟಿ. ಇದಕ್ಕೆ ವರ್ಷದ ಕೊನೆಯಲ್ಲಿಬಿಡುಗಡೆಯಾಗಿರುವ ‘ಅರ್ಜುನ್‌ ಗೌಡ’ ಸಿನಿಮಾ ಹೊರತಲ್ಲ. ಚಿತ್ರ ಅದ್ಧೂರಿ­ಯಾಗಿದೆ. ಆದರೆ, ಪ್ರೇಕ್ಷ ಕರ ಮನಸ್ಸಿಗೆ ಎಷ್ಟು ನಾಟಲಿದೆ ಎಂಬುದು ನಿಗೂಢ!

ನಿರ್ದೇಶಕರು ‘ಅರ್ಜನ್‌ ಗೌಡ’ ಚಿತ್ರದ ಆರಂಭದಲ್ಲಿಪತ್ರಕರ್ತೆ ಗೌರಿ ಲಂಕೇಶ್‌, ವಿದ್ವಾಂಸ ಎಂ. ಎಂ. ಕಲಬುರ್ಗಿ ಹತ್ಯೆಗಳೇ ತಮ್ಮ ಸಿನಿಮಾಕ್ಕೆ ಸೂಧಿರ್ತಿ ಎಂದು ಹೇಳಿಸು­ತ್ತಾರೆ. ಆದರೆ, ಸಿನಿಮಾ ಮುಗಿದರೂ ಆ ಸೂಧಿರ್ತಿ ಏನೆಂಬುದು ಗೊತ್ತಾಗುವುದಿಲ್ಲ! ಪ್ರೀತಿ, ಸಮಾಜ, ದುಷ್ಟಶಕ್ತಿಗಳು, ಮಾಧ್ಯಮ... ಹೀಗೆ ಎಲ್ಲವನ್ನೂ ಹೇಳಲು ಹೋಗಿ, ಯಾವುದನ್ನೂ ಪ್ರೇಕ್ಷ ಕರ ಮನಸ್ಸಿಗೆ ಪೂರ್ತಿಯಾಗಿ ದಾಟಿಸುವಲ್ಲಿಚಿತ್ರ ಯಶಸ್ವಿಯಾಗುವುದಿಲ್ಲ. ಹಾಗಾಗಿಯೇ, ಚಿತ್ರ ನೋಡಿ ಹೊರ ಬಂದಾಗ ನಿಮಗೆ ಮನಸ್ಸು ಭಾರವೂ ಆಗುವುದಿಲ್ಲ, ಹಗುರವೂ ಆಗುವುದಿಲ್ಲ.

ಚಿತ್ರದ ನಾಯಕ ಅರ್ಜುನ್‌ ಗೌಡ (ಪ್ರಜ್ವಲ್‌ ದೇವರಾಜ್‌) ಸುದ್ದಿವಾಹಿನಿಯ ಒಡತಿ ಜಾನಕಿ (ಸ್ಪರ್ಶ ರೇಖಾ) ಅವರ ಏಕೈಕ ಪುತ್ರ. ಆಗಾಗ ಅಮ್ಮ-ಮಗನ ಮಧ್ಯೆ ಜನರೇಷನ್‌ ಗ್ಯಾಪ್‌ ಜಗಳ. ದೊಡ್ಡ ಉದ್ಯಮಿ (ರಾಜ್‌ ದೀಪಕ್‌ ಶೆಟ್ಟಿ) ಮಗಳು ಜಾಹ್ನವಿ (ಪ್ರಿಯಾಂಕಾ ತಿಮ್ಮೇಶ್‌) ಮತ್ತು ಅರ್ಜುನ್‌ ಮಧ್ಯೆ ಅಮರ ಪ್ರೇಮ. ಜಾಹ್ನವಿ ತಂದೆ ಒಪ್ಪಲ್ಲ. ಹಲವು ತಿರುವು ಘಟಿಸಿ ಜಾಹ್ನವಿ ಮದುವೆ ಎನ್‌ಆರ್‌ಐಯೊಂದಿಗೆ ಆಗುತ್ತದೆ. ಇದೇ ದುಃಖದಲ್ಲಿಮನೆ ತೊರೆದ ಅರ್ಜುನ್‌ ಗೌಡ ಮಂಗಳೂರು ಸೇರುತ್ತಾನೆ; ಲೋಕಲ್‌ ಗೂಂಡಾಗಳು ಜತೆ­ಯಾಗುತ್ತಾರೆ. ಮಗನಿಗೆ ಹೀಗೆ ಆಯ್ತಲ್ಲಅಂತ ತಾಯಿ ಉದ್ಯಮಿಯ ವ್ಯಾಪಾರವನ್ನು ತನ್ನ ವರದಿಗಾರರಿಂದ ಜಾಲಾಡಿದಾಗ ಸಮಾಜಘಾತಕಶಕ್ತಿ ಖಳನಾಯಕ­(ರಾಹುಲ್‌ ದೇವ್‌) ಅವರ ಜತೆ ಉದ್ಯ­ಮಿಯ ಸಂಪರ್ಕವಿರುವುದು ಗೊತ್ತಾಗು­ತ್ತದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ವಿಲನ್‌, ಜಾನಕಿಯನ್ನು ಕೊಲ್ಲಲು ಕರಾವಳಿಯ ಡಾನ್‌ಗೆ ಹೇಳುತ್ತಾನೆ. ಜಾನಕಿಯನ್ನು ಯಾರು ಕೊಲ್ಲುತ್ತಾರೆ? ಆ ಸುಪಾರಿ ಕಿಲ್ಲರ್ಸ್‌ ಯಾರು? ಕೊಲೆ ಯತ್ನ ಕೇಸ್‌ನಲ್ಲಿಅರ್ಜುನ್‌ ಗೌಡ ಯಾಕೆ ಜೈಲು ಪಾಲಾಗುತ್ತಾನೆ? ಕೊನೆಗೆ ಜಾಹ್ನವಿ ಏನಾದಳು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ ಸಿನಿಮಾ ನೋಡಬೇಕು.

ಪ್ರಜ್ವಲ್‌ ದೇವರಾಜ್‌ ಹಾಗೂ ‘ಸ್ಪರ್ಶ’ ರೇಖಾ ಅವರು ತಮಗೆ ವಹಿಸಿರುವ ಕೆಲಸವನ್ನು ನೀಟ್‌ ಆಗಿ ಮಾಡಿದ್ದಾರೆ. ಫೈಟಿಂಗ್‌ ದೃಶ್ಯಗಳಲ್ಲಿಪ್ರಜ್ವಲ್‌ ಪವರ್‌ಫುಲ್‌ ಆಗಿ ಕಾಣಿಸುತ್ತಾರೆ. ಸಿನಿಮಾದಲ್ಲಿಹಾಸ್ಯನಟ ಸಾಧು ಕೋಕಿಲ  ಹಾಗೂ ಕಾಮಿಡಿ ಕಿಲಾಡಿ­ಯಂಥ ನಟರಿದ್ದೂ ಪ್ರೇಕ್ಷ ಕರು ನಗದಿದ್ದರೆ ಅದು ಯಾರ ತಪ್ಪು? ಖಳನಾಯಕ ರಾಹುಲ್‌ ದೇವ್‌ಗೆ ಹೆಚ್ಚು ಕೆಲಸವಿಲ್ಲ.

ಧರ್ಮೇಶ್‌ ವಿಶ್‌ ಅವರ ಸಂಗೀತ ಮಾತ್ರ ತಲೆ ಗಿಂವ್‌ ಅನ್ನುವ ಹಾಗಿದೆ! ಕ್ಯಾಮೆರಾ ವರ್ಕ್‌ ಓಕೆ. ಸಂಭಾಷಣೆ ಅಲ್ಲಲ್ಲಿಹರಿತವಾಗಿದೆ. ಅರ್ಜುನ್‌ ಗೌಡರದ್ದು ಮಧ್ಯಂತರವರೆಗೆ ‘ಸುದೀರ್ಘ’ ಪಯಣ. ಸೆಕೆಂಡ್‌ ಹಾಫ್‌ ಕೂಡ ಹೆಚ್ಚು ಕಡಿಮೆ ಹಾಗೆಯೇ. ಇಷ್ಟಾಗಿಯೂ ಆ್ಯಕ್ಷ ನ್‌ ಪ್ರಿಯರಿಗೆ ಸಿನಿಮಾ ಇಷ್ಟವಾಗಬಹುದು.

ಚಿತ್ರ: ಅರ್ಜುನ್‌ ಗೌಡ 

ನಿರ್ದೇಶನ: ಶಂಕರ್‌. ನಿರ್ಮಾಪಕ:  ರಾಮು.

ತಾರಾಗಣ: ಪ್ರಜ್ವಲ್‌ ದೇವರಾಜ್‌,  ಪ್ರಿಯಾಂಕ ತಿಮ್ಮೇಶ್‌, ರಾಹುಲ್‌ ದೇವ್‌, ಸ್ಪರ್ಶ ರೇಖಾ, ಸಾಧು ಕೋಕಿಲ ಮತ್ತಿತರರು. 


(ಈ ಲೇಖನವು ವಿಜಯ ಕರ್ನಾಟಕ ಜ.1, 2022ರ ಸಂಚಿಕೆಯಲ್ಲಿ ಪ್ರಕಟವಾಗಿದೆ)


ಶುಕ್ರವಾರ, ಡಿಸೆಂಬರ್ 31, 2021

83 Hindi Film Review: ತೆರೆಯ ಮೇಲೆ 83ರ ವಿಶ್ವಕಪ್‌ ಗೆಲುವಿನ ರೋಚಕತೆ

- ಮಲ್ಲಿಕಾರ್ಜುನ ತಿಪ್ಪಾರ

ಮೂವತ್ತೆಂಟು ವರ್ಷಗಳ ಹಿಂದೆ ರೇಡಿಯೊಗೆ ಕಿವಿಯಾನಿಸಿ ಕಾಮೆಂಟರಿ ಕೇಳಿ ಪುಳಕಗೊಂಡಿದ್ದ ಒಂದು ತಲೆಮಾರು, ಅಂದಿನ ಯಶಸ್ಸಿನ ಕತೆಯನ್ನು ಆಗಾಗ ಕೇಳುತ್ತಿದ್ದ ಹೊಸ ತಲೆಮಾರಿನ ಕ್ರಿಕೆಟ್ಅಭಿಮಾನಿಗಳಿಗೆ ‘83’ ಸಿನಿಮಾ ಒಂದು ಹೊಸ ಸಂಚಲನ. ಭಾರತವು 1983ರ ಕ್ರಿಕೆಟ್ವರ್ಲ್ಡ್ಕಪ್ಗೆದ್ದ ಪಯಣವನ್ನುಭಜರಂಗಿ ಭಾಯಿಜಾನ್‌’ ಖ್ಯಾತಿಯ ನಿರ್ದೇಶಕ ಕಬೀರ್ಖಾನ್ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಆರಂಭವಾಗಿಕಪ್ಗೆಲ್ಲುವತನಕ ನಿಮ್ಮ ಕಣ್ಣಂಚಿನಲ್ಲಿರುವ ನೀರು ಹೊರ ಬೀಳಲು ಕಾಯುತ್ತಲೇ ಇರುತ್ತದೆ. ನಡುನಡುವೆ ಒಂಚೂರು ಹಾಸ್ಯ, ವಿಷಾದ, ತುಂಟಾಟ, ನೋವು... ಹೀಗೆ ಹಲವು ಭಾವಗಳು ನಿಮ್ಮನ್ನು ಅಪ್ಪಿಕೊಂಡು, ಸೀಟಿನಂಚಿಗೆ ಬಂದು ಕೂಡುವಂತೆ ಮಾಡುತ್ತವೆ.

ಬಯೋಪಿಕ್ಸಿನಿಮಾಗಳನ್ನು ಮಾಡುವಾಗ ಡಾಕ್ಯುಮೆಂಟರಿಯಾಗುವ ಅಪಾಯವೇ ಹೆಚ್ಚು. ಒಂಚೂರು ಆಚೆ, ಈಚೆಯಾದರೂ ಸಿನಿಮಾ ಚೌಕಟ್ಟು ಮೀರುತ್ತದೆ. ಕೆಲವೊಮ್ಮೆ ನೈಜ ಘಟನೆಗಳ ಜತೆಗೆ ನಿರ್ದೇಶಕ ತನಗಿರುವ ಸೃಜನಾತ್ಮಕ ಸ್ವಾತಂತ್ರ್ಯ­ವನ್ನು ಬಳಸಿಕೊಂಡುಕತೆಯನ್ನೂ ಕಟ್ಟುತ್ತಾನೆ. ಆದರೆ, 83 ಸಿನಿಮಾದಲ್ಲಿಫಿಲ್ಮೀ ಕತೆಗೆ ಅಷ್ಟೇನೂ ಜಾಗವಿಲ್ಲ. ರಿಯಲ್ಕತೆಯನ್ನು ರೀಲ್ನಲ್ಲಿಅಷ್ಟೇ ರಿಯಲ್ಆಗಿ ತೋರಿಸುವಲ್ಲಿಯಶಸ್ವಿಯಾಗಿದ್ದಾರೆ. ಹಾಗಾಗಿ, ಕಪಿಲ್ಆ್ಯಂಡ್ಟೀಂ ಅಂದು ಅನುಭವಿಸಿದ ಎಲ್ಲಟೀಕೆ, ಉಡಾಫೆ, ನಿರ್ಲಕ್ಷ್ಯ ಎಲ್ಲವನ್ನೂ ತೆರೆಯ ಮೇಲೆ ತರಲು ಸಾಧ್ಯವಾಗಿದೆ. ಸುಮಾರು ಎರಡೂವರೆ ಗಂಟೆಯ ಸಿನಿಮಾ ಒಂದೇ ಗಂಟೆಯಲ್ಲಿಮುಗಿದ ಅನುಭವವಾಗುತ್ತದೆ!

ಕತೆ ಏನೆಂದು ಕೇಳಿದರೆ ಅದು ಎಲ್ಲರಿಗೂ ಗೊತ್ತಿರುವಂಥದ್ದೇ! ‘ಅಂಡರ್ಡಾಗ್‌’ ಹಣೆಪಟ್ಟಿ ಹೊತ್ತಿದ್ದ ತಂಡವೊಂದು ಯಾರೂ ನಿರೀಕ್ಷಿಸದ ರೀತಿಯಲ್ಲಿಸಾಹಸ ಮೆರೆಯುವಂಥದ್ದು. 1983ರ ವಿಶ್ವಕಪ್ಪಂದ್ಯಾವಳಿಗೆ ಹೊರಟ ತಂಡದ ಮೇಲೆ ಕ್ರಿಕೆಟ್ಮಂಡಳಿಯ ಅಧಿಕಾರಿಗಳಿಂದ ಹಿಡಿದು ದೇಶ, ವಿದೇಶಗಳಲ್ಲಿರುವ ಅಭಿಮಾನಿಗಳಿಗೆ ಮಾತ್ರವಲ್ಲದೆ ತಂಡಕ್ಕೆ ಆಯ್ಕೆಯಾದ ಆಟಗಾರರಿಗೆಗೆಲ್ಲುವವಿಶ್ವಾಸವಿರುವುದಿಲ್ಲ. ಈ ಹಿಂದಿನ ಎರಡು ವರ್ಲ್ಡ್ಕಪ್ನಲ್ಲಿಭಾರತದ ಪ್ರದರ್ಶನ ಹೀನಾಯವಾಗಿರುತ್ತದೆ. ಹಾಗಾಗಿ, ಯಾರಿಗೂ ಯಾವ ನಿರೀಕ್ಷೆಗಳೂ ಇರುವುದಿಲ್ಲ; ಕಪಿಲ್ದೇವ್ಎಂಬ ಆತ್ಮವಿಶ್ವಾಸದ ನಾಯಕನೊಬ್ಬನನ್ನು ಹೊರತುಪಡಿಸಿ. ಭಾರತದ ತಂಡದ ಬಗ್ಗೆ ತೂರಿ ಬರುವ ಎಲ್ಲ ಅವಮಾನಗಳನ್ನು ಶಾಂತವಾಗಿಯೇ ಸ್ವೀಕರಿಸಿ, ಸಹ ಆಟಗಾರರನ್ನು ಹುರಿದುಂಬಿಸುತ್ತ, ಅವರಲ್ಲಿರುವ ಶಕ್ತಿ ಸಾಮರ್ಥ್ಯದ ಬಗ್ಗೆ ಅರುಹುತ್ತಾ ಹೊಸ ಇತಿಹಾಸಕ್ಕೆ ನಾಂದಿ ಹಾಡುತ್ತಾರೆಇಂಗ್ಲಿಷ್ಮೋಹಿಕಪಿಲ್‌. ಈ ಪಾತ್ರವನ್ನು ನಟ ರಣವೀರ್ಸಿಂಗ್ಅಕ್ಷ ರಶಃ ಜೀವಿಸಿದ್ದಾರೆ. ಅಂದಿನ ಕ್ರಿಕೆಟ್ತಂಡದ ಯಶಸ್ಸಿನ ಶ್ರೇಯದಲ್ಲಿಮ್ಯಾನೇಜರ್ಪಿ. ಆರ್‌. ಮಾನ್ಸಿಂಗ್ಅವರಿಗೂ ಪಾಲು ಸಲ್ಲುತ್ತದೆ. ಆ ಪಾತ್ರದಲ್ಲಿಪ್ರತಿಭಾವಂತ ನಟ ಪಂಕಜ್ತ್ರಿಪಾಠಿ ನಿಮ್ಮನ್ನು ಕಾಡುತ್ತಾರೆ. ಕ್ರಿಕೆಟ್ತಂಡದ ಮ್ಯಾನೇಜರ್ಒಬ್ಬರು, ವಿಮಾನ ಟಿಕೆಟ್ಕ್ಯಾನ್ಸಲ್ಮಾಡಿದರೆ ಎಷ್ಟು ದುಡ್ಡು ಕೊಡಬೇಕಾಗುತ್ತದೆ ಎಂಬ ಲೆಕ್ಕ ಹಾಕುತ್ತಲೇ, ‘ನಮಗೆ ಸ್ವಾತಂತ್ರ್ಯ ಸಿಕ್ಕಿದೆ, ಇನ್ನೂ ಗೌರವ ಸಿಕ್ಕಿಲ್ಲಎಂದು ಹೇಳುತ್ತಾ ವಿಷಾದ ಮತ್ತು ವಾಸ್ತವವನ್ನು ಒಟ್ಟೊಟ್ಟಿಗೆ ತಂದಿಡುತ್ತಾರೆ. ಶ್ರೀಕಾಂತ್‌, ಮೊಹಿಂದರ್ಅಮರನಾಥ್‌, ಮದನಲಾಲ್‌, ಕೀರ್ತಿ ಆಜಾದ್‌, ಸಂದೀಪ್ಪಾಟೀಲ್‌, ಸಯ್ಯದ್ಕೀರ್ಮಾನಿ, ರೋಜರ್ಬಿನ್ನಿ, ಸುನಿಲ್ಗವಾಸ್ಕರ್‌, ಯಶಪಾಲ್ಶರ್ಮಾ, ಬಲ್ವಿಂದರ್ಸಿಂಗ್ಸಂಧು, ದಿಲಿಪ್ವೆಂಗ್ಸರ್ಕಾರ್ಹೀಗೆ ಎಲ್ಲಈ ದಂತಕತೆಗಳಾದ ಆಟಗಾರರ ಪಾತ್ರವನ್ನು ಪೋಷಣೆ ಮಾಡಿರುವ ನಟರು, ಮೂಲ ಕ್ರಿಕೆಟಿಗರನ್ನು ತೆರೆಯ ಮೇಲೆ ಬಹುತೇಕ ಪ್ರಾಮಾಣಿಕವಾಗಿ ತಂದಿದ್ದಾರೆ; ಅವರದ್ದೇ ಆಂಗಿಕ ಭಾಷೆಯನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ.

1983ರ ವರ್ಲ್ಡ್ಕಪ್ನ ಯಶಸ್ಸು ಭಾರತದಲ್ಲಿಸಾಮಾಜಿಕವಾಗಿ, ಕ್ರೀಡಾ ಕ್ಷೇತ್ರದಲ್ಲಿಹೇಗೆ ಬದಲಾವಣೆಗೆ ಕಾರಣವಾಯಿತು ಎಂಬುದನ್ನು ಸೂಚ್ಯವಾಗಿ ನಿರ್ದೇಶಕರು ಹೇಳುತ್ತಾರೆ. ಫೈನಲ್ಮ್ಯಾಚ್ಆರಂಭವಾದಾಗ, ಬಾಲಕ ಸಚಿನ್ತೆಂಡೂಲ್ಕರ್ಟಿವಿ ಮುಂದೆ ಕುಳಿತುಕೊಳ್ಳುವುದು; ತಂಡ ಗೆದ್ದಾಗ ಭಾರತದ ಪರ ಆಡುವೆ ಎಂದು ಕೂಗುವುದು, ಕೋಮು ಹಿಂಸಾಚಾರದಿಂದಾಗಿ ಒಡೆದಿದ್ದ ಮನಸ್ಸುಗಳು ಒಂದಾಗುವುದು, ಕ್ರಿಕೆಟ್ಅನ್ನೇ ಸಮಸ್ಯೆಗೆ ಪರಿಹಾರವಾಗಿ ಬಳಸಿಕೊಳ್ಳುವ ನಾಯಕತ್ವ, ವಿದೇಶಗಳಲ್ಲಿಭಾರತೀಯ ಕ್ರಿಕೆಟ್ಅಭಿಮಾನಿಗಳು ನೋವು-ನಲಿವು, ಕ್ರಿಕೆಟ್ಅಂಗಣ­ದಲ್ಲಿಭಾರತ ರನ್ಹೊಡೆದಾಗಲೆಲ್ಲ ಗಡಿಯಿಂದ ತೂರಿ ಬರುವ ಗುಂಡುಗಳು... ಹೀಗೆ ಆ ಕಾಲಘಟ್ಟದ ಎಲ್ಲತಳಮಳಗಳನ್ನು ಕ್ರಿಕೆಟ್ನೊಟ್ಟಿಗೆ ಚಿತ್ರಿಸುವಲ್ಲಿಯಶಸ್ವಿಯಾಗಿದ್ದಾರೆ ಕಬೀರ್‌. ಸಿನಿಮಾದಲ್ಲಿಅಲ್ಲಲ್ಲಿಮೂಲ ಪಂದ್ಯಾವಳಿಯ ಫೋಟೊಗ್ರಾಫ್ಗಳನ್ನು, ವಿಡಿಯೊ ತುಣುಕುಗಳನ್ನು ಬಳಸಿಕೊಳ್ಳುವ ಮೂಲಕ ಕತೆ ಹೇಳುವ ರೀತಿಗೆ ಹೊಸ ಶೈಲಿಯನ್ನು ಶೋಧಿಸಿದ್ದಾರೆ ನಿರ್ದೇಶಕರು.

ಬಿಬಿಸಿ ನಿರ್ಲಕ್ಷ್ಯದಿಂದಾಗಿ ಜಿಂಬಾಬ್ವೆ ವಿರುದ್ಧ ಕಪಿಲ್ದೇವ್ಆಟವನ್ನು ನೋಡಲು ಅಂದಿನವರಿಗೆ ಸಾಧ್ಯವಾಗಿರಲಿಲ್ಲ. ಆ ಪಂದ್ಯದಲ್ಲಿಏಕಾಂಗಿಯಾಗಿ ಕಪಿಲ್ಅವರ ವಿಶ್ವದಾಖಲೆಯ ಆಟವನ್ನು ಕಣ್ತುಂಬಿ­ಕೊಳ್ಳಬೇಕಿದ್ದರೆ 83 ಮಿಸ್ಮಾಡಿಕೊಳ್ಳಬೇಡಿ.

 

ನಿರ್ದೇಶನ: ಕಬೀರ್ಖಾನ್‌, ತಾರಾಗಣ: ರಣವೀರ್ಸಿಂಗ್‌, ಜೀವಾ, ಪಂಕಜ್ತ್ರಿಪಾಠಿ, ದೀಪಿಕಾ ಪಡುಕೋಣೆ, ತಾಹಿರ್ರಾಜ್ಬಾಷಿನ್‌, ಜತಿನ್ಸರಣ್ಮತ್ತಿತರರು. ರೇಟಿಂಗ್‌: ****

(ಈ ವಿಮರ್ಶೆ ವಿಜಯ ಕರ್ನಾಟಕದ ಪತ್ರಿಕೆಯಲ್ಲಿ ಪ್ರಕಟವಾಗಿದೆ.)

ಸೋಮವಾರ, ನವೆಂಬರ್ 22, 2021

Nykaa CEO Falguni Nayar: ಫಾಲ್ಗುಣಿ ಯಶಸ್ಸಿನ ಗಣಿ, ಮಹಿಳೆಯರಿಗೆ ಸ್ಫೂರ್ತಿ ಸೆಲೆ

ಫಾಲ್ಗುಣಿ ನಾಯರ್ 50ನೇ ವಯಸ್ಸಿನಲ್ಲಿ ಆರಂಭಿಸಿದನೈಕಾಈಗ ಲಕ್ಷ ಕೋಟಿ ರೂ. ವೌಲ್ಯದ ಕಂಪನಿ. ಉದ್ಯಮದ ಹಿನ್ನೆಲೆ ಇಲ್ಲದೇ ಅವರು ಯಶಸ್ವಿ ಉದ್ಯಮಿಯಾದ ಕತೆ ಇದು.

 

-ಮಲ್ಲಿಕಾರ್ಜುನ ತಿಪ್ಪಾರ
ಉದ್ಯೋಗದಲ್ಲಿದ್ದವರಿಗೆ 50 ವರ್ಷ ವಯಸ್ಸು ಎಂದರೆ ನಿವೃತ್ತಿಯ ಹತ್ತಿರದಲ್ಲಿರುತ್ತಾರೆ, ಮನೆಯಲ್ಲಿದ್ದವರಾದರೆ ಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡು ಕಾಲ ಕಳೆಯಲು ಮನಸ್ಸನ್ನು ಸಜ್ಜುಗೊಳಿಸುವ ಕಾಲ. ಅಂಥ ವಯಸ್ಸಿನಲ್ಲಿ ಸ್ಟಾರ್ಟ್ಅಪ್ ಆರಂಭಿಸಿ, ಅಲ್ಪ ಕಾಲದಲ್ಲೇಯೂನಿಕಾರ್ನ್ಕಂಪನಿ ಅಂದರೆ ಒಂದು ಶತಕೋಟಿ ಡಾಲರ್ ವೌಲ್ಯದ ಉದ್ಯಮವಾಗಿ ಬೆಳೆಸುವುದೆಂದರೆ ಸಾಮಾನ್ಯದ ಮಾತಲ್ಲಘಿ. ಈ ಅಸಾಮಾನ್ಯ ಸಾನೆಯನ್ನು ಸಾಮಾನ್ಯ ಮಹಿಳೆಯೊಬ್ಬಳು ಮಾಡಿದ್ದಾರೆ.

ಸೆಲ್ ಮೇಡ್ ಬಿಸಿನೆಸ್ ವುಮನ್ಫಾಲ್ಗುಣಿಆ ಯಶಸ್ವಿ ಉದ್ಯಮಿ. ನೈಕಾ(www.nykaa.com) ಎಂಬ ಇ- ಕಾಮರ್ಸ್ ತಾಣವನ್ನು ಸ್ಥಾಪಿಸಿ, ಅದನ್ನೀಗ ಬಹುದೊಡ್ಡ ಕಂಪನಿಯಾಗಿ ಬೆಳೆಸಿದ್ದಾರೆ. ನೈಕಾ ಇತ್ತೀಚೆಗಷ್ಟೇ ಷೇರುಪೇಟೆಯನ್ನು ಪ್ರವೇಶಿಸುತ್ತಿದ್ದಂತೆ ಅದರ ವೌಲ್ಯ ದಿಢೀರ್ನೇ ಏರಿಕೆಯಾಗಿದ್ದು, ಫಾಲ್ಗುಣಿ ದೇಶದ ಟಾಪ್ 20 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡರು. ‘ನೈಕಾಪ್ರವರ್ತಕ ಕಂಪನಿ ಎ್ಎಸ್ಎನ್ ಇ-ಕಾಮರ್ಸ್ ತಲಾ 1125 ರೂ.ವೌಲ್ಯದ ಷೇರು ಬಿಡುಗಡೆ ಮಾಡಿತ್ತು. ಈ ಷೇರಿನ ದರ ಏಕ್ದಮ್ 2,001 ರೂ.ಗೆ ಏರಿಕೆಯಾಗಿ, ಒಂದೇ ದಿನದಲ್ಲಿ ಕಂಪನಿಯ ವೌಲ್ಯ ದುಪ್ಪಟ್ಟಾಯಿತು. ಇದರ ಪರಿಣಾಮ ಕಂಪನಿಯ ಒಟ್ಟು ಮಾರುಕಟ್ಟೆ ವೌಲ್ಯವು 1.04 ಲಕ್ಷ  ಕೋಟಿ ರೂ.ದಾಟಿತು. ‘ನೈಕಾಫಾಲ್ಗುಣಿ ನಾಯರ್ ಲಕ್ಷ ಕೋಟಿ ರೂಪಾಯಿ ವೌಲ್ಯದ ಕಂಪನಿಯ ಒಡತಿಯಾದರು!

ಶೃಂಗಾರ ಮತ್ತು ಸ್ವಾಸ್ಥ, ಫ್ಯಾಷನ್ ಉತ್ಪನ್ನಗಳ ಮಾರಾಟ ವೇದಿಕೆಯಾಗಿರುವ ನೈಕಾ ವೆಬ್ಸೈಟ್ನಲ್ಲಿ 400 ಬ್ರ್ಯಾಂಡುಗಳ 35,000ಕ್ಕೂ ಅಕ ಉತ್ಪನ್ನಗಳಿವೆ. ಫ್ಯಾಷನ್, ಸೌಂದರ್ಯವರ್ಧಕ ದೊಡ್ಡ  ಬ್ರ್ಯಾಂಡ್ಗಳೆಲ್ಲವೂ ಇಲ್ಲಿ ಲಭ್ಯ. ಜನಪ್ರಿಯ ಲ್ಯಾಕ್ಮೆ, ಕಾಯಾ ಸ್ಕಿನ್ ಕ್ಲಿನಿಕ್, ಲೋರಿಯಲ್ ಪ್ಯಾರಿಸ್ ಇತ್ಯಾದಿ ಬ್ರ್ಯಾಂಡುಗಳ ಉತ್ಪನ್ನಗಳು ಇಲ್ಲಿ ಬಿಕರಿಯಾಗುತ್ತವೆ. 70ಕ್ಕೂ ಅಕ ಆ್ಲೈನ್ ಸ್ಟೋರ್ಗಳೂ ದೇಶದ ವಿವಿಧ ಭಾಗಗಳಲ್ಲಿ ಆರಂಭವಾಗಿವೆ. ನೈಕಾ ವೆಬ್ಸೈಟ್ ಪ್ರತಿ ತಿಂಗಳು 4.5 ಕೋಟಿ ವಿಸಿಟರ್ಸ್ ಪಡೆದುಕೊಳ್ಳುತ್ತದೆ.

ಉದ್ಯಮದ ಯಾವುದೇ ಹಿನ್ನೆಲೆಯಿಲ್ಲದೆ ಕೇವಲ ಒಂಬತ್ತು ವರ್ಷದಲ್ಲೇ ಕಂಪನಿಯೊಂದನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುವುದು ಹುಡುಗಾಟದ ಮಾತನೇಲ್ಲ. ಆದರೆ, 59 ವರ್ಷದ ಫಾಲ್ಗುಣಿ ಅಂಥ ಸಾಧನೆ ಮಾಡಿದ್ದಾರೆ. ಫಾಲ್ಗುಣಿ ಅವರೀಗ ಯಶಸ್ಸಿನ ಗಣಿ; ಭಾರತೀಯ ಮಹಿಳೆಯರಿಗೆ, ಅದರಲ್ಲೂ ಬಿಸಿನೆಸ್, ಉದ್ಯಮದಲ್ಲಿ ಆಸಕ್ತಿ ಹೊಂದಿರುವ ಮಹಿಳೆಯರಿಗೆ ಸ್ಫೂರ್ತಿಯ  ಖನಿ! ಗುಜರಾತಿಗಳಿಗೆ ವ್ಯಾಪಾರ ಸಹಜ. ಯಾಕೆ ಈ ಮಾತು ಹೇಳಬೇಕಾಯಿತು ಎಂದರೆ, ಫಾಲ್ಗುಣಿ ನಾಯರ್ ಕೂಡ ಗುಜರಾತಿ. ಆದರೆ, ಹುಟ್ಟಿ ಬೆಳೆದಿದ್ದು ಎಲ್ಲ ಮಹಾರಾಷ್ಟ್ರದಲ್ಲಿ. 1963ರ ಜನವರಿ 19ರಂದು ಮುಂಬಯಿಯಲ್ಲಿ ಗುಜರಾತಿ ಕುಟುಂಬದಲ್ಲಿ ಫಾಲ್ಗುಣಿ ಜನಿಸಿದರು. ಇವರ ತಂದೆ ಸ್ವಂತ ಮತ್ತು ಚಿಕ್ಕ ಬಿಯರಿಂಗ್ಸ್ ಕಂಪನಿಯನ್ನು ಹೊಂದಿದ್ದರು. ಮುಂಬಯಿಯ ದಿ ನ್ಯೂ ಎರಾ ಸ್ಕೂಲ್ನಲ್ಲಿ ತಮ್ಮ ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಪೂರೈಸಿದ ಬಳಿಕ, ಕಾಮರ್ಸ್ ಪದವಿಯನ್ನು ಪಡೆದುಕೊಂಡರು. ಬಳಿಕ ಐಐಎಂ ಅಹಮದಾಬಾದ್ ಸಂಸ್ಥೆಯಿಂದ ತಮ್ಮ ಸ್ನಾತಕ ಶಿಕ್ಷಣವನ್ನು ಪಡೆದುಕೊಂಡರು. ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಂತೆ ಸಂಜಯ್ ನಾಯರ್ ಅವರನ್ನು ವರಿಸಿದರು. ಅಂಚಿತ್ ನಾಯರ್ ಮತ್ತು ಅದ್ವಿತಾ ನಾಯರ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಎಲ್ಲರಂತೆ, ಫಾಲ್ಗುಣಿ ಅವರೂ ವಿದ್ಯಾಭ್ಯಾಸ ಪೂರ್ತಿಯಾದ ಬಳಿಕ ಉದ್ಯೋಗಕ್ಕೆ ಸೇರಿಕೊಂಡರು. ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದ ಅವರು 18 ವರ್ಷಗಳ ಕಾಲ ದುಡಿದರು. ಈ ಬ್ಯಾಂಕಿನಲ್ಲಿ ಇನ್ವೆಸ್ಟ್ಮೆಂಟ್ ಬ್ಯಾಂಕರ್ನಿಂದ ಕ್ಯಾಪಿಟಲ್ ಇನ್ವೆಸ್ಟ್ಮೆಂಟ್ ಮ್ಯಾನೇಜಿಂಗ್ ಡೈರೆಕ್ಟರ್ವರೆಗೂ ಉನ್ನತಿಯನ್ನು ಪಡೆದುಕೊಂಡರು. ಬಹುಶಃ ಬೇರೆ ಯಾರೇ ಆದರೂ ಅಷ್ಟು ಉನ್ನತ ಹುದ್ದೆಗೆ ತಲುಪಿದ ಮೇಲೆ ಮತ್ಯಾವುದೇ ಯೋಚನೆ ಮಾಡದೇ, ನಿವೃತ್ತಿಯವರೆಗೂ ಕೆಲಸ ಮಾಡುತ್ತಿದ್ದರು. ಆದರೆ, ಫಾಲ್ಗುಣಿ ಅವರಿಗೆ ಮಾತ್ರ ಏನಾದರೂ ಭಿನ್ನವಾದ ಕೆಲಸವನ್ನು ಮಾಡಬೇಕು, ಹೊಸತನ್ನು ಸಾಸಬೇಕೆಂಬ ತುಡಿತ ಸದಾ ಕಾಲ ಇತ್ತು. ಈ ಕನಸು ಅವರನ್ನು ನಿದ್ದೆ ಮಾಡಲು ಬಿಡುತ್ತಿರಲಿಲ್ಲ.  ತನ್ನದೇ ಆದ ಹೆಗ್ಗರುತನ್ನು ಛಾಪಿಸುವ ಹಪಾಹಪಿ ಅವರಲ್ಲಿ ಹೆಡೆಯಾಡುತ್ತಿತ್ತು. ಆದರೆ, ಅಷ್ಟೊತ್ತಿಗಾಗಲೇ 50 ವರ್ಷಗಳು ಸರಿದು ಹೋಗಿದ್ದವು. ಈ ಹಂತದಲ್ಲಿ ಕಂಪನಿಯೊಂದನ್ನು ಆರಂಭಿಸುವುದು ಸರಳವೇನೂ ಆಗಿರಲಿಲ್ಲ. ಅದಕ್ಕೆ ಬೇಕಾದ ಹಣಕಾಸು ನೆರವು ಆಗಲೀ, ಫ್ಯಾಮಿಲಿ ಹಿನ್ನೆಲೆಯಾಗಲೀ ಏನೂ ಇಲ್ಲ. ಆದರೆ ಧೈರ್ಯ, ಛಲ, ಪ್ರಾಮಾಣಿಕ ಪ್ರಯತ್ನಗಳೆಂಬಬಂಡವಾಳ   ಮಾತ್ರ ಹೇರಳವಾಗಿತ್ತು! ಕೊನೆಗೆ ತಮ್ಮ ಕನಸು ಬೆನ್ನು ಹತ್ತಿ 2012ರಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ನೌಕರಿಯನ್ನು ತ್ಯಜಿಸಿದರು. ಧೈರ್ಯದಿಂದ ಮುನ್ನುಗ್ಗಿ, ಎಫ್ಎಸ್ಎನ್ ಇ ಕಾಮರ್ಸ್ ವೆಂಚರ್ ಪ್ರೈವೆಟ್ ಲಿ. ಆರಂಭಿಸಿದರು. ಈ ಕಂಪನಿಯಡಿ ಸೌಂದರ್ಯ, ವೆಲ್ನೆಸ್ ಮತ್ತು ಫ್ಯಾಷನ್ ಸಂಬಂಧಿ ವಸ್ತುಗಳ ಮಾರಾಟ ಇ-ಕಾಮರ್ಸ್ ತಾಣನೈಕಾತೆರೆದರು. ಆ ನಂತರ ಮತ್ತೆ ಅವರು ಹಿಂದಿರುಗಿ ನೋಡಲೇ ಇಲ್ಲ. ಸೌಂದರ್ಯ ಮತ್ತು ಸ್ವಾಸ್ಥ್ಯ ವಲಯದ ನೈಕಾ ಮೂಲಕ ತಮ್ಮ ಹೆಗ್ಗರುತು ಮೂಡಿಸಲು ಅವರು ಯಶಸ್ವಿಯಾದರು. ಚಿಕ್ಕದಾಗಿ ಆರಂಭವಾಗಿದ್ದ ಇ-ಕಾಮರ್ಸ್ ತಾಣ ಇದೀಗ ಹೆಮ್ಮರವಾಗಿ ಬೆಳೆದಿದೆ. ಅದರ ಮಾರುಕಟ್ಟೆ ವೌಲ್ಯ ಲಕ್ಷ ಕೋಟಿ ರೂಪಾಯಿ ಮೀರಿದೆ; 2000ಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿದೆ. ಮಾರುಕಟ್ಟೆ ವೌಲ್ಯದಲ್ಲಿ ನೈಕಾ ಇದೀಗ ಕೋಲ್ ಇಂಡಿಯಾ, ಗೋದ್ರೇಜಾ ಕಂಪನಿಗಳನ್ನು ಮೀರಿಸಿದೆ. ದೇಶದ 20 ಶ್ರೀಮಂತರ ಪಟ್ಟಿಯಲ್ಲಿ ಫಾಲ್ಗುಣಿ 17ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯ ಅಗ್ರಸ್ಥಾನದಲ್ಲಿ ಮುಖೇಶ್ ಅಂಬಾನಿ, ಗೌತಮ್ ಅದಾನಿಯಂಥವರಿದ್ದಾರೆ. ಮತ್ತೊಂದು ಗಮನಿಸಬೇಕಾದ ಸಂಗತಿ ಏನೆಂದರೆ; ಟಾಪ್ ಸ್ಟಾರ್ಟ್ಅಪ್ ಐಪಿಒಗಳ ಪಟ್ಟಿಯಲ್ಲಿ ಫಾಲ್ಗುಣಿ ಪ್ರಥಮ ಸ್ಥಾನದಲ್ಲಿದ್ದಾರೆ. ಯಾಕೆಂದರೆ, ನೈಕಾದಲ್ಲಿ ಇವರದ್ದೇ ಶೇ.53ರಷ್ಟು ಷೇರಿದೆ. ನಂತರದ ಸ್ಥಾನದಲ್ಲಿ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ, ರೆಮಾಟೊದ ದೀಪೇಂದ್ರ ಗೋಯಲ್ನಂಥವರಿದ್ದಾರೆ.

ಯಶಸ್ಸಿನ ತುದಿಯನ್ನು ತಲುಪಿರುವ ಫಾಲ್ಗುಣಿ ನಾಯರ್  ತಮ್ಮ ತಂದೆಯಿಂದ ಸಾಕಷ್ಟು ಪ್ರಭಾವಿತರಾದರೆ, ಉದ್ಯಮಿ ಉದಯ್ ಕೋಟಕ್ ಮತ್ತು ಪತಿ ಸಂಜಯ್ ನಾಯರ್ರಿಂದ ಸ್ಫೂರ್ತಿ ಪಡೆದುಕೊಂಡಿದ್ದಾರೆ. ‘ಕರ್ಮಣ್ಯೇವಾಕಾರಸ್ತೇ ಮಾ ಫಲೇಷು ಕದಾಚನಎಂಬಂತೆ ತಮ್ಮ ಕೆಲಸವನ್ನು ತಾವು ಮಾಡುತ್ತಾ ಹೊರಟಿದ್ದಾರೆ, ಫಲಾಫಲ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಯಾವುದೇ ಸಕ್ಸೆಸ್ ಆಗಲೀ ಶಾರ್ಟ್ಕಟ್ನಲ್ಲಿ ಬರುವಂಥದ್ದಲ್ಲ. ಅದಕ್ಕಾಗಿ ತನುಮನಧನವೆನ್ನಲ್ಲ ಅರ್ಪಿಸಬೇಕಾಗುತ್ತದೆ. ಅರ್ಪಣೆ, ಸಮರ್ಪಣೆಗಳಿದ್ದಾಗ ಮಾತ್ರವೇ ಅಂದುಕೊಂಡ ಗುರಿಯನ್ನು ಮುಟ್ಟಲು ಸಾಧ್ಯ ಎಂಬುದಕ್ಕೆ ಫಾಲ್ಗುಣಿ ಈಗ ಉದಾಹರಣೆಯಾಗಿದ್ದಾರೆ.

ಈಗಿನದ್ದು ಮೈಕ್ರೋಬ್ಲಾಗಿಂಗ್ ಜಮಾನಾ. ಬಹುತೇಕ ಉದ್ದಿಮೆದಾರರು ಟ್ವಿಟರ್, ಫೇಸ್‌ಬುಕ್ನಂಥ ಸೋಷಿಯಲ್ ಮೀಡಿಯಾಗಳಲ್ಲಿದ್ದಾರೆ. ಆದರೆ, ಫಾಲ್ಗುಣಿ ಅವರು ಇದಕ್ಕೆ ಅಪವಾದ. ನೈಕಾ ಕಂಪನಿ ಶುರು ಮಾಡಿದಾಗಿನಿಂದ ಈ ಒಂಬತ್ತು ವರ್ಷಗಳಲ್ಲಿ ಅವರು ಒಮ್ಮೆ ಮಾತ್ರ ಟ್ವೀಟ್ ಮಾಡಿದ್ದಾರಂತೆ! ಸೋಷಿಯಲ್ ಮೀಡಿಯಾದಲ್ಲಿ ವ್ಯಸ್ತವಾಗುವುದೆಂದರೆ ಸಾಕಷ್ಟು ಸಮಯ ಮತ್ತು ಪ್ರಯತ್ನ ಬೇಕಾಗುತ್ತದೆ ಎಂಬುದು ಅವರ ಈ ನಿರ್ಧಾರಕ್ಕೆ ಕಾರಣ.

ಯಾವುದೇ ಉದ್ಯಮಶೀಲತೆಯೊಂದು ಯಶಸ್ಸು ಗಳಿಸಬೇಕಾದರೆ ಸಾಕಷ್ಟು ಉತ್ಸಾಹ, ಕಠಿಣ ಪರಿಶ್ರಮ, ದೃಢತೆ ಮತ್ತು ಸಮಯವನ್ನು ಬೇಡುತ್ತದೆ ಎಂಬುದು ಅವರು ಖಚಿತ ನುಡಿಗಳಾಗಿವೆ. ‘‘ನಾನು ನೈಕಾವನ್ನು 50ನೇ ವಯಸ್ಸಿನಲ್ಲಿ ಆರಂಭಿಸಿದೆ. ನೈಕಾಪಯಣವು ಪ್ರತಿಯೊಬ್ಬ ಹುಡುಗಿಯ ತನ್ನ ಬದುಕಿನಲ್ಲಿ ತಾನೇನಾಯಕಿಯಾಗಲು ಪ್ರೇರಣೆ ನೀಡಲಿ ಎಂಬುದು ನನ್ನ ಆಶಯ,’’ ಎಂದು ಹೇಳಿಕೊಂಡಿದ್ದರು. ಅನುಮಾನವೇ ಬೇಡ. ನೈಕಾ ಹಾಗೂ ಫಾಲ್ಗುಣಿ ನಾಯರ್ ಅವರ ಯಶಸ್ಸಿನ ಪಯಣವು ಮುಂಬರುವ ಅಸಂಖ್ಯ ಮಹಿಳೆಯರಿಗೆ ಸ್ಫೂರ್ತಿ ನೀಡಲಿದೆ. ಸಮರ್ಪಣೆಯಿಂದ, ಪ್ರಾಮಾಣಿಕ ಪ್ರಯತ್ನದಿಂದ ಮುನ್ನಡೆದರೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಯಶಸ್ಸಿನ ಮಾದರಿಯನ್ನು ನಮ್ಮ ಮುಂದೆ ಫಾಲ್ಗುಣಿ ಕಡೆದು ನಿಲ್ಲಿಸಿದ್ದಾರೆ.

 
ಈ ಲೇಖನವು ವಿಜಯ ಕರ್ನಾಟಕದ ವ್ಯಕ್ತಿಗತ ಅಂಕಣದಲ್ಲಿ 2021 ನವೆಂಬರ್ 21ರ ಸಂಚಿಕೆಯಲ್ಲಿ ಪ್ರಕಟವಾಗಿದೆ.


ಭಾನುವಾರ, ನವೆಂಬರ್ 21, 2021

'Jai Bhim' Real Hero Justice K Chandru: ಶೋಷಿತರ ರಿಯಲ್‌ ಹೀರೊ ಜಸ್ಟೀಸ್ ಕೆ ಚಂದ್ರು

ಶೋಷಿತರ ಪರ ನಿಲ್ಲುವ ನ್ಯಾಯವಾದಿಯ ಕತೆಯ ಸಿನಿಮಾಜೈ ಭೀಮ್‌’ ಸದ್ದು ಮಾಡುತ್ತಿದೆ. ನೈಜ ಕತೆಯನ್ನಾಧರಿಸಿದ ಈ ಚಿತ್ರದ ಅಸಲಿ ಹೀರೊ ಜಸ್ಟೀಸ್ಕೆ.ಚಂದ್ರು.


- ಮಲ್ಲಿಕಾರ್ಜುನ ತಿಪ್ಪಾರ
ದೃಶ್ಯ ಮಾಧ್ಯಮದ ಬಹು ಸಾಧ್ಯತೆಗಳನ್ನು ಬಳಸಿಕೊಳ್ಳುವುದಲ್ಲಿ ತಮಿಳು ಚಿತ್ರರಂಗದ್ದು ಎತ್ತಿದ ಕೈ. ನೈಜ ಕತೆಗಳನ್ನು ಬೆಳ್ಳಿತೆರೆಗೆ ಅನ್ವಯಿಸಿ, ಜನರಿಗೆ ನಾಟುವಂತೆ ದಾಟಿಸುವ ಕಲೆಯನ್ನು ಕರಗತ ಮಾಡಿಕೊಂಡಿದೆ. ಈಗ ಸೂರ್ಯ ನಟನೆಯಜೈ ಭೀಮ್‌’ ಸಿನಿಮಾ ಕೂಡ ಇದೇ ನೆಲೆಯಲ್ಲಿ ರೂಪುಗೊಂಡಿದ್ದು, ನೈಜ ಕತೆಯಾಧರಿಸಿ ಇತರ ಸಿನಿಮಾಗಳಿಗಿಂತ ಭಿನ್ನವಾಗಿ ನಿಂತಿದೆ. ಅಪರಿಮಿತ ಅಧಿಕಾರ ಹೊಂದಿರುವ ಪೊಲೀಸ್ವ್ಯವಸ್ಥೆ ತನ್ನ ಸಂವೇದನೆ ಕಳೆದುಕೊಂಡು, ಅಪ್ರಮಾಣಿಕವಾಗಿ, ಅಧಿಕಾರದ ದರ್ಪದಿಂದ ವರ್ತಿಸಿದಾಗ ಧ್ವನಿ ಇಲ್ಲದವರು, ಸಮಾಜದಲ್ಲಿಯಾವ ರೀತಿಯಲ್ಲಿಶೋಷಣೆಗೊಳಗಾಗುತ್ತಾರೆ, ನಿರ್ದೋಷಿಗಳು ಹೇಗೆ ಬಲಿಯಾಗುತ್ತಾರೆಂಬ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ಈ ಚಿತ್ರದಲ್ಲಿಮುಖ್ಯ ಪಾತ್ರ ನ್ಯಾಯವಾದಿ ಚಂದ್ರು. ಈ ಪಾತ್ರವನ್ನು ನಟ ಸೂರ್ಯ ಪರಕಾಯ ಪ್ರವೇಶ ಮಾಡಿದ್ದು, ವಿಮರ್ಶಕರಿಂದಲೂ ಮೆಚ್ಚುಗೆ ದೊರೆತಿದೆ. ಇದಿಷ್ಟುರೀಲ್‌’ ಕತೆಯಾದರೆ, ಸೈಡ್ವಿಂಗ್ನಲ್ಲಿ ರಿಯಲ್ಕತೆಯನ್ನು ಬಿಚ್ಚುತ್ತಾ ಹೋದರೆ ಅದು ಇನ್ನೊಂದು ರೋಮಾಂಚನ. ಚಿತ್ರದ ಮುಖ್ಯ ಪಾತ್ರವಾಗಿರುವ ಚಂದ್ರು, ನಿಜ ಜೀವನದ ಜಸ್ಟೀಸ್ಕೆ. ಚಂದ್ರು. ಮದ್ರಾಸ್ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ದಕ್ಷ ತೆಯಿಂದ ಕೆಲಸ ಮಾಡಿದ ವ್ಯಕ್ತಿ ಅವರು. ತಮಿಳುನಾಡಿನಲ್ಲಿ ತುಂಬ ಹೆಸರಿದೆ. ಆದರೆ, ‘ಜೈ ಭೀಮ್‌’ ತೆರೆಗೆ ಬರುವವರೆಗೂ ಜ.ಕೆ. ಚಂದ್ರು ಅವರ ಬಗ್ಗೆ ತಮಿಳುನಾಡಿನಾಚೆ ಅಷ್ಟೇನೂ ಗೊತ್ತಿರಲಿಲ್ಲ.

ಕೆ.ಚಂದ್ರು ಅವರು ಮದ್ರಾಸ್ಹೈಕೋರ್ಟ್ನ್ಯಾಯಮೂರ್ತಿಯಾಗಿ ಅದ್ವಿತೀಯ ಕೆಲಸ ಮಾಡಿದ್ದಾರೆ. ಸಾಮಾನ್ಯಧಿವಾಗಿ ಒಬ್ಬ ಜಡ್ಜ್ತಮ್ಮ ಅವಧಿಯಲ್ಲಿ 10 ಸಾವಿರದಿಂದ 20 ಸಾವಿರದವರೆಗೆ ಕೇಸ್ಗಳನ್ನು ಇತ್ಯರ್ಥಪಡಿಸುತ್ತಾರೆ. ಆದರೆ, . ಚಂದ್ರು ತಮ್ಮ ಆರೂವರೆ ವರ್ಷಗಳ ಅವಧಿಯಲ್ಲಿ90 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಕ್ಷೀಪ್ರ ನ್ಯಾಯದಾನ ಮಾಡಿದ್ದಾರೆ.

ಕೆಂಪು ಗೂಟದ ಕಾರನ್ನು ಯಾರು ಬಳಸಬೇಕು ಎಂಬ ಬಗ್ಗೆ ಚರ್ಚೆಗಳು ನಡೆದೇ ಇವೆ. ಕೋರ್ಟ್ಆದೇಶದ ಪ್ರಕಾರ, ಕೆಲವು ಸಂವಿಧಾನಬದ್ಧ ಹುದ್ದೆ ಅಲಂಕರಿಸಿದವರನ್ನು ಹೊರತುಪಡಿಸಿ ಉಳಿದವರಿಗೆ ಈ ಸೇವೆ ಇಲ್ಲ. ಈ ಬಗ್ಗೆ ಆದೇಶವಾಗುವುದಕ್ಕಿಂತ ಮುಂಚೆಯೇ ಚಂದ್ರು ತಮ್ಮ ಕಾರಿನ ಕೆಂಪು ದೀಪವನ್ನು ತೆಗೆಸಿದ್ದರು. ವಕೀಲರು ನ್ಯಾಯಾಧೀಶರನ್ನು ಉದ್ದೇಶಿಸಿ ಬಳಸುವಮೈ ಲಾರ್ಡ್‌’ ಪದವನ್ನು ತಮಗೆ ಬಳಸದಂತೆ ಸೂಚಿಸಿದ್ದರು! ಇದೆಲ್ಲವೂ ಅವರ ಸರಳತೆಯನ್ನು ಬಹಿರಂಗಗೊಳಿಸುತ್ತದೆ.

2006ರಲ್ಲಿಚಂದ್ರು ಮದ್ರಾಸ್ಹೈಕೋರ್ಟ್ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2009ರಲ್ಲಿಕಾಯಂ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲಾಯಿತು. ಅವರ ಸರಳತೆಗೆ ಮತ್ತೊಂದು ಉದಾಹರಣೆ ಎಂದರೆ, ಅವರು ನ್ಯಾಯಮೂರ್ತಿಯಾಗಿ ನಿವೃತ್ತಿಯಾದ ದಿನ ಬೆಳಗ್ಗೆ ಸರಕಾರಿ ಕಾರ್ಉಪಯೋಗಿಸಿದ್ದರೆ, ಸಾಯಂಕಾಲ ಸರಕಾರಿ ಕಾರನ್ನು ಬಿಟ್ಟು  ಲೋಕಲ್ಟ್ರೈನ್ನಲ್ಲಿಮನೆಗೆ ಪ್ರಯಾಣಿಸಿದ್ದರು. ಸರಳತೆ, ಪ್ರಮಾಣಿಕತೆ, ಬದ್ಧತೆ ಹಾಗೂ ನಿಸ್ವಾರ್ಥ ಮೌಲ್ಯಗಳು ಅವರನ್ನು ಒಬ್ಬ ಪರಿಪೂರ್ಣ ನ್ಯಾಯಮೂರ್ತಿಯಾಗಿ ಮಾಡಿದ್ದಲ್ಲದೆ, ಒಬ್ಬ ಕ್ರೂಸೆಡರ್ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಯಿತು.

ನ್ಯಾಯಮೂರ್ತಿಯಾಗುವ ಮೊದಲು ಅವರು ಮದ್ರಾಸ್ಹೈಕೋರ್ಟ್ನಲ್ಲಿವಕೀಲಿಕೆ ಮಾಡುತ್ತಿದ್ದರು. ಆಗಲೂ ಅಷ್ಟೇ ವಕೀಲರಾಗಿ ಸಮಾಜದಲ್ಲಿನ ಬಡವರು, ಬುಡಕಟ್ಟು ಜನಾಂಗದವರು, ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕಾನೂನು ಸೇವೆಯನ್ನು ಒದಗಿಸಿದ್ದಾರೆ. ಒಂದು ಪೈಸೆ ತೆಗೆದುಕೊಳ್ಳದೇ ಅವರ ಪರವಾಗಿ ಹೋರಾಡಿದ್ದಾರೆ. ‘ಜೈ ಭೀಮ್‌’ ಚಿತ್ರದಲ್ಲಿಅಳವಡಿಸಿಧಿಕೊಳ್ಳಲಾಗಿಧಿರುವುದು ಅವರ ವೃತ್ತಿ ಬದುಕಿನ ಒಂದು ಎಪಿಸೋಡ್ಅಷ್ಟೇ.

ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬನನ್ನು ಪೊಲೀಸರು ಕಳ್ಳತನದ (ಸುಳ್ಳು ಪ್ರಕರಣ) ಆರೋಪದ ಮೇಲೆ ಬಂಧಿಸುತ್ತಾರೆ. ಮಾಡದೇ ಇರುವ ತಪ್ಪನ್ನು ಒಪ್ಪಿಕೊಳ್ಳುವಂತೆ ಕಿರುಕುಳ ನೀಡುತ್ತಾರೆ. ಇದರಿಂದ ಆತ ಸತ್ತು ಹೋಗುಧಿತ್ತಾನೆ. ಕೇಸ್ಮುಚ್ಚಿ ಹಾಕುವುದಕ್ಕಾಗಿ ಆರೋಪಿ ಪರಾರಿಧಿಯಾಗಿದ್ದಾನೆಂಬ ಕತೆ ಕಟ್ಟುತ್ತಾರೆ. ಆದರೆ, ಮೃತನ ಪತ್ನಿ ನಂಬುವುದಿಲ್ಲ. ಆಕೆಗೆ ಕಂಡಿದ್ದೇ ಈ ನ್ಯಾಯವಾದಿ ಚಂದ್ರು. ಪ್ರಕರಣವನ್ನು ಕೈಗೆತ್ತಿಕೊಳ್ಳುವ ಅವರು 13 ವರ್ಷ ಹೋರಾಡಿ, ಆರೋಪಿ ಪೋಲೀಸರಿಗೆ 14 ವರ್ಷ ಕಾಲ ಜೈಲು ಶಿಕ್ಷೆಯಾಗುವಂತೆ ಮಾಡುತ್ತಾರೆ. ಈ ಕೇಸಿಧಿನಿಂದ ಹಿಂದೆ ಸರಿಯಲು ಸಾಕಷ್ಟು ಆಮಿಷಗಳನ್ನು ಒಡ್ಡಿದರೂ ಚಂದ್ರು ತಮ್ಮ ಬದ್ಧತೆಯನ್ನು ಎಲ್ಲೂಬಿಟ್ಟುಕೊಡುಧಿವುದಿಲ್ಲ, ಹಣ ತುಂಬಿದ ಸೂಟ್ಕೇಸ್ಅನ್ನೇ ರೂಮಿನಿಂದ ಆಚೆ ಎಸೆದಂಥ ಘಟನೆಗಳಿವೆ. ಇಂಥ ಹತ್ತಾರು ಕತೆಗಳು, ಪ್ರಕರಣಗಳು ಅವರಲ್ಲಿವೆ.

ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಶ್ರೀರಂಗಮ್ನ ಮಧ್ಯಮ ವರ್ಗದ ಕುಟುಂಬದಲ್ಲಿ1951 ಮೇ 8ರಂದು ಜನಿಸಿದರು. ಸತ್ಯದ ಪರವಾಗಿ ಹೋರಾಟ ಅವರಿಗೆ ವಿದ್ಯಾರ್ಥಿ ದೆಸೆಯಿಂದಲೇ ಬಂದ ಗುಣ. ಕಾಲೇಜಿನಲ್ಲಿದ್ದಾಧಿಗಲೇ ಸಿಪಿಎಂ ವಿದ್ಯಾರ್ಥಿ ನಾಯಕರಾಗಿದ್ದರು. ಇದರಿಂದಾಗಿ ಚೆನ್ನೈನಲ್ಲಿಲೋಯೋಲಾ ಕಾಲೇಜ್ನಲ್ಲಿ ಸಾಕಷ್ಟು ತೊಂದರೆ ಎದುರಿಸಬೇಕಾಯಿತು. ವಿದ್ಯಾರ್ಥಿಗಳ ಹೋರಾಟದ ನಾಯಕತ್ವ ವಹಿಸಿಕೊಂಡಿದ್ದಕ್ಕಾಗಿ ಲೋಯೋಲಾ ಕಾಲೇಜ್ಆಡಳಿತ ಮಂಡಳಿ ಇವರನ್ನು ಕಾಲೇಜಿನಿಂದ ಹೊರ ಹಾಕಿತು. ನಂತರ ಅವರು ಕ್ರಿಶ್ಚಿಯನ್ಕಾಲೇಜ್ನಲ್ಲಿಅಧ್ಯಯನ ಮುಂದುವರಿಸಬೇಕಾಯಿತು.

ವಿದ್ಯಾರ್ಥಿ ನಾಯಕನಾಗಿ, ಟ್ರೇಡ್ಯೂನಿಯನ್ನಾಯಕನಾಗಿ ಅವರು ಇಡೀ ತಮಿಳುನಾಡನ್ನು ಲಾರಿ ಮತ್ತು ಬಸ್ಗಳ ಮೂಲಕವೇ ಸುತ್ತಿದ್ದಾರೆ; ಜನರನ್ನು ಸಂಘಟಿಸಿದ್ದಾರೆ. ಈ ಸಂದರ್ಭದಲ್ಲಿದಲಿತರು, ಕಾರ್ಮಿಕರು, ಕೃಷಿ ಕಾರ್ಮಿಕರು, ಟ್ರೇಡ್ಯೂನಿಯನ್ನಾಯಕರನ್ನು ಭೇಟಿ ಮಾಡುವ ಅವಕಾಶ ಅವರಿಗೆ ಸಿಕ್ಕಿದೆ. ಈ ವ್ಯವಸ್ಥೆಯು ಶಕ್ತಿಹೀನರನ್ನು ಹೇಗೆ ಶೋಷಣೆ ಮಾಡುತ್ತದೆ ಎಂಬ ಸ್ಪಷ್ಟವಾದ ಪರಿಕಲ್ಪನೆ, ಅನುಭವ ಅವರಿಗಾಗಿದೆ.

ಚಂದ್ರು ಅವರು ವಕೀಲಿ ವೃತ್ತಿಗೆ ಬರಲು ಅಣ್ಣಾ ವಿವಿ ವಿದ್ಯಾರ್ಥಿಯೊಬ್ಬ ಪೊಲೀಸರ ಲಾಠಿ ಏಟಿಗೆ ಮೃತಪಟ್ಟ ಘಟನೆ ಕಾರಣವಾಯಿತು. ಈ ಘಟನೆಯ ತನಿಖೆಗೆ ಎಂ ಕರುಣಾನಿಧಿ ಅವರು ಹೆಚ್ಚುವರಿ ನ್ಯಾಯಧಿಮೂರ್ತಿ ನೇತೃತ್ವದಲ್ಲಿಆಯೋಗ ನೇಮಕ ಮಾಡಿದ್ದರು. ಈ ಆಯೋಗದ ಎದುರು ಚಂದ್ರು ಅವರು ವಿದ್ಯಾರ್ಥಿಗಳ ಪರವಾಗಿ ಹಾಜರಾಗಿಧಿದ್ದರು. ಅವರ ವಾದ ಮಂಡನೆ ಮತ್ತು ಜಾಣತನವನ್ನು ಗುರುತಿಸಿದ ನ್ಯಾಯಧಿಮೂರ್ತಿ, ಕಾನೂನು ವೃತ್ತಿಗೆ ಬರುವಂತೆ ಸೂಚಿಸಿದರು. ಪರಿಣಾಮ ಚಂದ್ರು 1973ರಲ್ಲಿಕಾನೂನು ಕಾಲೇಜಿಗೆ ದಾಖಲಾದರು. ಆದರೆ, ಹಾಸ್ಟೆಲ್ಪ್ರವೇಶಧಿವನ್ನು ನಿರಾಕರಿಸಲಾಯಿತು. ವಿದ್ಯಾರ್ಥಿ ನಾಯಕರಾಗಿ ಅವರು ಕೈಗೊಂಡ ಹೋರಾಟಗಳೇ ಇದಕ್ಕೆ ಕಾರಣವಾಗಿತ್ತು. ಆದರೆ, ಪಟ್ಟು ಸಡಿಲಿಸದ ಅವರು ಮೂರು ದಿನ ಉಪವಾಸ ಸತ್ಯಾಗ್ರಹ ಕೈಗೊಂಡರು. ಅಂತಿಮವಾಗಿ ಅಧಿಕಾರಿಗಳು ಹಾಸ್ಟೆಲ್ಪ್ರವೇಶ ನೀಡಬೇಕಾಯಿತು

 ಕಾಲೇಜಿನಲ್ಲಿದ್ದಾಗಲೇ ಬಡವರಿಗೆ ಕಾನೂನು ಸೇವೆ ಒದಗಿಸಲಾರಂಭಿಸಿದರು. ಬಡವರು, ಶೋಷಿತರಿಗೆ ಕಾನೂನು ಸೇವೆಯನ್ನು ಒದಗಿಸುತ್ತಿದ್ದ ರಾವ್ಆಂಡ್ರೆಡ್ಡಿ ಸಂಸ್ಥೆಯನ್ನು ಸೇರಿದರು. 8 ವರ್ಷ ಇಲ್ಲಿಕೆಲಸ ಮಾಡಿ, ಸ್ವತಂತ್ರವಾಗಿ ವಕೀಲಿಕೆಯನ್ನು ಆರಂಭಿಸಿದರು. ತಮಿಳುನಾಡು ಬಾರ್ಕೌನ್ಸಿಲ್ಗೆ ಆಯ್ಕೆಯಾದ ಅತ್ಯಂತ ತರುಣ ನ್ಯಾಯವಾದಿ ಎನಿಸಿಕೊಂಡರು. ಇದರ ಮಧ್ಯೆಯೇ, ಶ್ರೀಲಂಕಾ ವಿಷಯದಲ್ಲಿ ರಾಜೀವ್ಗಾಂಧಿ ಆಡಳಿತ ನಡೆದುಕೊಂಡ ರೀತಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯದಿಂದಾಗಿ ಸಿಪಿಎಂ ಪಕ್ಷ ವನ್ನೂ ತೊರೆದರು.

ಮದ್ರಾಸ್ಹೈಕೋರ್ಟ್ನ್ಯಾಯಮೂರ್ತಿಯಾಗಿ ಕ್ಷೀಪ್ರವಾಗಿ ನ್ಯಾಯದಾನ ಮಾಡಿದ್ದೂ ಮಾತ್ರವಲ್ಲದೇ ಹಲವು ಐತಿಹಾಸಿಕ ತೀರ್ಪುಗಳನ್ನು ನೀಡಿದ್ದಾರೆ. ಆ ಪೈಕಿ ಮಹಿಳೆಯರಿಗೆ ಅರ್ಚಕರಾಗಲು ಅವಕಾಶ ಕಲ್ಪಿಸುವುದು, ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿಕೆಲಸ ಮಾಡುತ್ತಿದ್ದ 25 ಸಾವಿರ ಬಡ ಹೆಣ್ಣುಮಕ್ಕಳಿಗೆ ಉದ್ಯೋಗ ಭದ್ರತೆ ಒದಗಿಸುವ ತೀರ್ಪು ಸೇರಿದಂತೆ ಅನೇಕ ಜನಪರ ತೀರ್ಪುಗಳನ್ನು ನೀಡಿದ್ದಾರೆ. ನ್ಯಾಯವಾದಿಯಾಗಿದ್ದಾಗ ಪಾಲಿಸಿಕೊಂಡಿದ್ದ ಶೋಷಿತರಿಗೆ ಧ್ವನಿಯಾಗುವ ಕೆಲಸವನ್ನು ನ್ಯಾಯಾಧೀಶಧಿರಾದಾಗಲೂ ಮುಂದುವರಿಸಿಕೊಂಡು ಬಂದು, 2013ರಲ್ಲಿನಿವೃತ್ತರಾದರು.

ಅವರು ಕೇವಲ ಒಬ್ಬ ನ್ಯಾಯವಾದಿ, ಜಸ್ಟಿಸ್ಮಾತ್ರವಲ್ಲದೆ ಬರಹಗಾರರೂ ಹೌದು. ನಿವೃತ್ತಿಯಾದ ಮೇಲೂ ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾರೆ; ಪುಸ್ತಕಗಳನ್ನು ಬರೆದಿದ್ದಾರೆ. Listen to My Case!: When Women Approach the Courts of Tamil Naduಅವರ ಇತ್ತೀಚಿನ ಕೃತಿ. ಈ ಪುಸ್ತಕದಲ್ಲಿ ಚಂದ್ರು ಅವರು, ನ್ಯಾಯಕ್ಕಾಗಿ ಹೋರಾಡಿದ 20 ಮಹಿಳೆಯರ  ಬಗ್ಗೆ ಬರೆದಿದ್ದಾರೆ. ಜಸ್ಟೀಸ್ಕೆ.ಚಂದ್ರು ಅವರಂಥ ಬದ್ಧತೆಯುಳ್ಳ ನ್ಯಾಯವಾದಗಳು, ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಾದರೆ ಬಹುಶಃ ದೀನ ದಲಿತರಿಗೆ, ಬಡವರಿಗೆ, ಕಾನೂನು ಎಂಬುದು ಗಗನಕುಸುಮವಾಗಲಾರದು.



ಸೋಮವಾರ, ಅಕ್ಟೋಬರ್ 25, 2021

NCB Mumbai Zonal Director Sameer Wankhede: ಡ್ರಗ್ಸ್ ವಿರುದ್ಧ ಸಮೀರ್ ವಾಂಖೆಡೆ ಸಮರ

 ಮುಂಬಯಿಯಲ್ಲಿ ಐಆರ್‌ಎಸ್ ಅಧಿಕಾರಿ ವಾಂಖೆಡೆ ಅವರು ಡ್ರಗ್ಸ್ ಜಾಲದ ವಿರುದ್ಧ ಸಮರವನ್ನೇ ಸಾರಿದ್ದಾರೆ. ಮಾದಕ ದ್ರವ್ಯ ಹಾಗೂ ಬಾಲಿವುಡ್ ನಡುವಿನ ನಂಟನ್ನು ಭೇದಿಸುವಲ್ಲಿ ನಿರತರಾಗಿದ್ದಾರೆ.

- ಮಲ್ಲಿಕಾರ್ಜುನ ತಿಪ್ಪಾರ
ಸಮೀರ್ ವಾಂಖೆಡೆ. ಈ ಹೆಸರನ್ನು ಕೇಳಿದರೆ ಬಾಲಿವುಡ್ ಸೆಲೆಬ್ರಿಟಿಗಳು ಬೆಚ್ಚಿ ಬೀಳುತ್ತಿದ್ದಾರೆ. ಮಾದಕ ದ್ರವ್ಯ ಸೇವೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತ್ರವಲ್ಲಘಿ, ಈ ಹಿಂದೆ ಅವರು ಕಸ್ಟಮ್ಸ್ ಸೇವೆಯಲ್ಲಿದ್ದಾಗಲೂ ಸೆಲೆಬ್ರಿಟಿಗಳು ಥರಗುಟ್ಟಿದ್ದರು! ಅವರು ಮುಂಬಯಿ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದ ಕಸ್ಟಮ್ಸ್‌ನಲ್ಲಿದ್ದರು. ಆಗಲೂ ಹೊರ ದೇಶಗಳಿಂದ ತರುತ್ತಿದ್ದ ಬೆಲೆ ಬಾಳುವ ವಸ್ತುಗಳಿಗೆ ತೆರಿಗೆ ಪಾವತಿಸದೇ ಬಿಟ್ಟುಕೊಡುತ್ತಿರಲಿಲ್ಲ ಈ ಖಡಕ್ ಅಧಿಕಾರಿ. ಹಾಗಾಗಿ, ಬಾಲಿವುಡ್ ಹಾಗೂ ವಾಂಖೆಡೆ ಅವರ ಮಧ್ಯೆ ಮೊದಲಿನಿಂದಲೂ ಒಂಥರಾ ಲವ್ ಆ್ಯಂಡ್ ಹೇಟ್ ಸಂಬಂಧ!

ಒಂದು ವರ್ಷದಿಂದ ವಾಂಖೆಡೆ ಅವರು, ಗಣ್ಯ ವಲಯದಲ್ಲಿ ಹೆಪ್ಪುಗಟ್ಟಿರುವ ಮಾದಕ ಸೇವನೆ, ಮಾರಾಟದ ಜಾಲವನ್ನು ಭೇದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 2020ರ ಜೂನ್ ತಿಂಗಳಲ್ಲಿ ಬಾಲಿವುಡ್‌ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ ಆತ್ಮಹತ್ಯೆ ಪ್ರಕರಣ ತನಿಖೆಯು ವಿಸ್ತಾರಗೊಳ್ಳುತ್ತಿದ್ದಂತೆ ಡ್ರಗ್ಸ್‌ನ ಭಯಾನಕತೆಗಳು ಅನಾವರಣಗೊಂಡವು. ಅಲ್ಲಿಂದ ಶುರುವಾದ ವಾಂಖೆಡೆ ಅವರ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯು ಸದ್ಯ ‘ಸೂಪರ್ ಸ್ಟಾರ್’ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನವರೆಗೂ ಸಾಗಿದೆ.

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ವೇಳೆ ಮಾದಕ ದ್ರವ್ಯ ಬಳಕೆಯ ಸಂಗತಿಗಳು ಬಯಲಾಗಿದ್ದವು. ಆಗ ಸುಶಾಂತ್‌ನ ಗೆಳತಿ ರೇಹಾ ಚಕ್ರವರ್ತಿ ಹಾಗೂ ಆಕೆಯ ಸಹೋದರನನ್ನು ಬಂಧಿಸಲಾಗಿತ್ತು. ಜೊತೆಗೆ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ರಕುಲ್‌ಪ್ರೀತ್ ಸಿಂಗ್, ಭಾರ್ತಿ ಸಿಂಗ್ ಇತ್ಯಾದಿ ನಟಿಯರನ್ನು ಡ್ರಗ್ಸ್ ಸಂಬಂಧ ವಿಚಾರಣೆಗೊಳಪಡಿಸಲಾಗಿತ್ತು. ಇದೀಗ ಆರ್ಯನ್ ಖಾನ್ ಪ್ರಕರಣವು ಬಾಲಿವುಡ್‌ನ ಇತರೆ ಸೆಲೆಬ್ರಿಟಿಗಳ ಕೊರಳಿಗೆ ಸುತ್ತಿಕೊಳ್ಳುತ್ತಿದೆ. ಈಗಾಗಲೇ ನಟಿ ಅನನ್ಯಾ ಪಾಂಡೆ ಎರಡು ಬಾರಿ ವಿಚಾರಣೆ ಎದುರಿಸಿದ್ದಾಳೆ. ಈ ಎಲ್ಲದರ ಹಿಂದೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ) ಮುಂಬಯಿ ರೆನಲ್ ಡೈರೆಕ್ಟರ್ ಸಮೀರ್ ವಾಂಖೆಡೆ ಕರ್ತವ್ಯ ಎದ್ದು ಕಾಣುತ್ತಿದೆ. ಕಾನೂನು ಪಾಲನೆಯೊಂದನ್ನೇ ಕೇಂದ್ರವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಅವರಿಗೆ, ಸೆಲೆಬ್ರಿಟಿ ಅಥವಾ ಸಾಮಾನ್ಯರು ಎಂಬ ತಾರತಮ್ಯವಿಲ್ಲಘಿ. ಯಾರು ತಪ್ಪು ಮಾಡುತ್ತಾರೋ ಅವರನ್ನು ಹೆಡೆಮುರಿ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. 

ಇಷ್ಟಾಗಿಯೂ ಅವರು ಆರೋಪಗಳಿಂದ ಹೊರತಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವುದಕ್ಕಾಗಿ ವಾಂಖೆಡೆ ಸೆಲೆಬ್ರಿಟಿಗಳ  ಬೆನ್ನು ಹಿಂದೆ ಬಿದ್ದಿದ್ದಾರೆ ಎಂಬ ಆರೋಪ ಸಾಮಾನ್ಯವಾಗಿದೆ. ಜೊತೆಗೆ ಎನ್‌ಸಿಪಿಯ ನಾಯಕ ನವಾಬ್ ಮಲಿಕ್ ಅವರಂತೂ, ಬಾಲಿವುಡ್ ಸೆಲೆಬ್ರಿಟಿಗಳಿಂದ ವಾಂಖೆಡೆ ಅವರು ಸುಲಿಗೆಗಿಳಿದಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದುಘಿ, ಅವರನ್ನು ಜೈಲಿಗೆ ಕಳುಹಿಸುವವರೆಗೂ ವಿರಮಿಸುವುದಿಲ್ಲ ಎಂದಿದ್ದಾರೆ. ಜೊತೆಗೆ, ದುಬೈ ಮತ್ತು ಮಾಲ್ಡೀವ್ಸ್‌ಗೆ ವಾಂಖೆಡೆ ತೆರಳಿದ್ದ ೆಟೊಗಳನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕೆಲ್ಲಘಿ, ಸಮೀರ್ ಪ್ರತ್ಯುತ್ತರ ಕೊಟ್ಟಿದ್ದಾರೆ. ಜೊತೆಗೆ, ಆರ್ಯನ್ ಖಾನ್ ಬಂಧನದ ವೇಳೆಯ ಹಾಜರಿದ್ದ ಕೆಲವು ಖಾಸಗಿ ವ್ಯಕ್ತಿಗಳಿಂದಾಗಿ ವಾಂಖೆಡೆ ಅವರ ಒಟ್ಟಾರೆ ಉದ್ದೇಶದ ಮೇಲೂ ಶಂಕೆ ಮೂಡುತ್ತಿರುವುದು ಸುಳ್ಳಲ್ಲಘಿ. ಇದಕ್ಕೆಲ್ಲ ಅವರು ಸಮರ್ಥನೆ ನೀಡಿದ್ದಾರೆಂಬುದು ಬೇರೆ ಮಾತು. 

ವಿಶೇಷ ಏನೆಂದರೆ, ಸಮೀರ್ ಪತ್ನಿ ಕ್ರಾಂತಿ ರೇಡ್ಕರ್ ಕೂಡಾ ಒಬ್ಬ ನಟಿ. ಮರಾಠಿ ಚಿತ್ರರಂಗದಲ್ಲಿ ಅವರಿಗೆ ದೊಡ್ಡ ಹೆಸರಿದೆ. ಅಜಯ್ ದೇವಗನ್ ನಟನೆಯ ‘ಗಂಗಾಜಲ್’ ಚಿತ್ರದಲ್ಲೂ ಕ್ರಾಂತಿ ನಟಿಸಿದ್ದಾರೆ. ಹಾಗಾಗಿ, ಸಮೀರ್ ಅವರಿಗೆ ಚಿತ್ರರಂಗ ಹೊಸದಲ್ಲ. ಅಲ್ಲಿ ನಡೆಯುವ ಬೆಳವಣಿಗೆಗಳು, ಹೈಕ್ಲಾಸ್ ಸೊಸೈಟಿಯಲ್ಲಾಗುವ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಅರಿವು ಅವರಿಗಿದೆ.

ಎನ್‌ಸಿಬಿಯ ಮುಂಬಯಿ ರೆನಲ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುವ ಮೊದಲು ಮಹಾರಾಷ್ಟ್ರ ಸರ್ವೀಸ್ ಟ್ಯಾಕ್ಸ್ ವಿಭಾಗದಲ್ಲಿದ್ದರು. ಆಗ ಅವರು ತೆರಿಗೆ ವಂಚಿಸುತ್ತಿದ್ದ ಸುಮಾರು 2,500 ಮಂದಿ ವಿರುದ್ಧ ಕ್ರಮ ಕೈಗೊಂಡಿದ್ದರು. ಈ ಪೈಕಿ 200 ಸೆಲೆಬ್ರಿಟಿಗಳಿದ್ದರು. ಎರಡು ವರ್ಷದಲ್ಲಿ ಮುಂಬಯಿನಲ್ಲೇ ಒಟ್ಟು 87 ಕೋಟಿ ರೂಪಾಯಿಯನ್ನು ಖಜಾನೆಗೆ ಹರಿದು ಬರುವಂತೆ ಮಾಡಿದ್ದರು. 2011ರಲ್ಲಿ ಭಾರತೀಯ ಕ್ರಿಕೆಟ್ ತಂಡವು ವಿಶ್ವಕಪ್ ಗೆದ್ದಿತು. ಆಗ ತಂಡಕ್ಕೆ ನೀಡಲಾಗಿದ್ದ ಟ್ರೋಫಿಯಲ್ಲಿ  ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಇದೆ. ಹಾಗಾಗಿ, ತೆರಿಗೆ ಪಾವತಿಸಿಯೇ ಪಡೆದುಕೊಳ್ಳಬೇಕೆಂದು ಇವರು ಪಟ್ಟು ಹಿಡಿದಿದ್ದರು. ಕಸ್ಟಮ್ಸ್ ತೆರಿಗೆ ಕೊಟ್ಟ ಮೇಲೆಯೇ ಟ್ರೋಫಿಯನ್ನು ಕ್ಲಿಯರ್ ಮಾಡಿದ್ದರು. ಅವರ ಈ ನಡೆಯೂ ಭಾರೀ ಚರ್ಚೆಗೆ ಕಾರಣವಾಗಿತ್ತುಘಿ.

2013ರಲ್ಲಿ ವಿದೇಶಿ ಕರೆನ್ಸಿಯನ್ನು ಹೊಂದಿದ್ದ ಗಾಯಕ ಮಿಕಾ ಸಿಂಗ್ ಮುಂಬಯಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದರು. ಅದೇ ರೀತಿ, ಅನುರಾಗ್ ಕಶ್ಯಪ್, ವಿವೇಕ್ ಒಬೇರಾಯ್ ಮತ್ತು ರಾಮಗೋಪಾಲ್ ವರ್ಮಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ವಾಂಖೆಡೆ ಅವರ ತನಿಖಾ ಕ್ಷಕಿರಣಕ್ಕೆ ಒಳಗಾಗಿದ್ದಾರೆ. ಕಳೆದ ಎರಡು ವರ್ಷದಲ್ಲಿ ಮುಂಬಯಿಯೊಂದರಲ್ಲೇ ವಾಂಖೆಡೆ ಹಾಗೂ ಅವರ ತಂಡವು 17 ಸಾವಿರ ಕೋಟಿ ರೂ. ವೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದೆ! ಮಾದಕ ದ್ರವ್ಯ ಜಾಲ ಭೇದಿಸುವ ಅವರ ಈ ಕಾರ್ಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ. ದೈಹಿಕ ಹಲ್ಲೆಗೂ ಒಳಗಾಗಿದ್ದಾರೆ ವಾಂಖೆಡೆ. 2020 ನವೆಂಬರ್ 22ರಂದು 60 ಮಂದಿ ಇದ್ದ ಡ್ರಗ್ ಪೆಡ್ಲರ್‌ಗಳ ಗುಂಪೊಂದು ವಾಂಖೆಡೆ ಹಾಗೂ ಎನ್‌ಸಿಬಿಯ ಇತರ ಐದು ಅಧಿಕಾರಿಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿ ವೇಳೆ ವಾಂಖೆಡೆ ಅವರಿಗೆ ಸಣ್ಣ ಪುಟ್ಟ ಗಾಯಳಾದವು. ಆದರೆ, ತಂಡದ ಇತರ ಸದಸ್ಯರು ತೀವ್ರವಾಗಿ ಗಾಯಗೊಂಡರು. ಅವರನ್ನು ಬೆದರಿಸುವ ಹಲವು ಘಟನೆಗಳು ನಡೆಯುತ್ತಲೇ ಇವೆ. ಆದರೆ, ವಾಂಖೆಡೆ ಅದಾವುದಕ್ಕೂ ತಲೆಕೆಡಿಸಿಕೊಳ್ಳದೇ ಬಾಲಿವುಡ್ ಹಾಗೂ ಮಾದಕ ದ್ರವ್ಯ ಜಾಲ ನಡುವಿನ ನಂಟನ್ನು ಭೇದಿಸುವ ಕೆಲಸವನ್ನು ಮುಂದುವರಿಸಿದ್ದಾರೆ. 

2008ರ ಬ್ಯಾಚಿನ ಐಆರ್‌ಎಸ್ ಅಧಿಕಾರಿಯಾಗಿರುವ ಸಮೀರ್ ಅವರ ಮೊದಲಿಗೆ ಮುಂಬಯಿನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನದ ನಿಲ್ದಾಣದಲ್ಲಿ ಡೆಪ್ಯುಟಿ ಕಸ್ಟಮ್ಸ್ ಕಮಿಷನರ್ ಆಗಿದ್ದರು. ಆ ಬಳಿಕ ಅವರನ್ನು ದಿಲ್ಲಿ ಹಾಗೂ ಆಂಧ್ರ ಪ್ರದೇಶಕ್ಕೆ ವರ್ಗಾವಣೆ ಮಾಡಲಾಯಿತು. ಅಲ್ಲಿಂದ ಅವರು ಡೆಪ್ಯುಟಿ ಕಮಿಷನರ್ ಆ್ ಏರ್ ಇಂಟೆಲಿಜೆನ್ಸ್ ಯುನಿಟ್(ಎಐಯು), ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎನ್‌ಐಎ) ಹೆಚ್ಚುವರಿ ಎಸ್‌ಪಿಯಾಗಿಯೂ ಕೆಲಸ ಮಾಡಿದ್ದಾರೆ. ಇದೀಗ ಎನ್‌ಸಿಬಿ ಮುಂಬಯಿ ರೆನಲ್ ನಿರ್ದೇಶಕರಾಗಿ ದಕ್ಷವಾಗಿ ಕೆಲಸ ಮಾಡುತ್ತಿದ್ದಾರೆ. 

ಮೂಲತಃ ಮುಂಬೈನವರೇ ಆಗಿರುವ ಸಮೀರ್ ಅವರ ತಂದೆ ಪೊಲೀಸ್ ಅಧಿಕಾರಿಯಾಗಿದ್ದರು. ಸಮೀರ್-ಕ್ರಾಂತಿ ರೇಡ್ಕರ್ ದಂಪತಿಗೆ ಅವಳಿ ಮಕ್ಕಳಿದ್ದಾರೆ.  42 ವರ್ಷದ ಸಮೀರ್ ವಾಂಖೆಡೆ ಅವರು ಸಾರ್ವಜನಿಕ ಅಧಿಕಾರಿಯಾಗಿ ತೋರಿದ ದಕ್ಷತೆಗಾಗಿ ಮಹಾರಾಷ್ಟ್ರದ ಜಮದಾರ್ ಬಾಪು ಲಕ್ಷ್ಮಣ್ ಲಮಖೆಡೆ ಅವಾರ್ಡ್ ಕೂಡ ಬಂದಿದೆ.

ಮುಂಬಯಿನಲ್ಲಿ ಮಾದಕ ದ್ರವ್ಯ ಮಾರಾಟ, ಸೇವನೆ ವಿರುದ್ಧ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿರುವ ವಾಂಖೆಡೆಗೆ ಸಾಜರ್ವನಿಕರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ. ಅವರು ತಮ್ಮ ಕೆಲಸದಲ್ಲಿ ತೋರುತ್ತಿರುವ ಧೈರ್ಯ, ಸ್ಥೈರ್ಯ, ಕರ್ತವ್ಯ ಪ್ರಜ್ಞೆಘಿ, ವೃತ್ತಿಪರತೆಯೇ ಅವರಿಗೆ ‘ಗಣ್ಯ’ ಸ್ಥಾನವು ಲಭ್ಯವಾಗುವಂತೆ ಮಾಡಿದೆ. ಆದರೆ, ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಯಾವ ಅಧಿಕಾರಿಯಾಗಿ ಪ್ರಮಾಣಿಕವಾಗಿ, ನಿರ್ಭೀತಿಯಿಂದ ಕೆಲಸ ಮಾಡಲು ಆರಂಭಿಸುತ್ತಾನೋ ಆಗ ಆತನನ್ನು ಹಿಂದಕ್ಕೆ ಎಳೆಯುವ  ಪ್ರಯತ್ನಗಳು ಬೇಕಾದಷ್ಟು ನಡೆಯುತ್ತವೆ. ಇದಕ್ಕೆ ವಾಂಖೆಡೆ ಕೂಡ ಅವರು ಹೊರತಾಗಿಲ್ಲಘಿ. ಈಗಾಗಲೇ ಅದು ಅವರ ಅನುಭವವಕ್ಕೂ ಬಂದಿದೆ. ಇದು ವ್ಯವಸ್ಥೆಯ ದೋಷ. ಇದೆಲ್ಲವನ್ನೂ ಮೀರಿ ಮುನ್ನಡೆಯುವ ಛಾತಿ ವಾಂಖೆಡೆ ಅವರಿಗಿದೆ ಎಂಬುದು ಈಗಾಗಲೇ  ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ.


ಈ ಲೇಖನವು ವಿಜಯ ಕರ್ನಾಟಕದ, 2021ರ ಅಕ್ಟೋಬರ್ 24ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಭಾನುವಾರ, ಸೆಪ್ಟೆಂಬರ್ 19, 2021

Captain Amarinder Singh: ಅಮರೀಂದರ್ ಸಿಂಗ್ 'ಜನರ ಮಹಾರಾಜ'

ನವಜೋತ್‌ ಸಿಧು ಜೊತೆಗಿನ ಒಳಜಗಳದಲ್ಲಿ ಕೈಸೋತ ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ರಾಜೀನಾಮೆ ನೀಡಿದ್ದಾರೆ.


- ಮಲ್ಲಿಕಾರ್ಜುನ ತಿಪ್ಪಾರ
‘‘ಇನ್ನು ನಾನು ಅವಮಾನ ಸಹಿಸಲಾರೆ,’’ ಎನ್ನುತ್ತಲೇ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್‌ ಕಾಂಗ್ರೆಸ್‌ನ ನೂತನ ಅಧ್ಯಕ್ಷ , ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಹಾಗೂ ಅಮರೀಂದರ್‌ ಸಿಂಗ್‌ ನಡುವಿನ ಕಿತ್ತಾಟ ಒಂದು ಹಂತಕ್ಕೆ ತಲುಪಿದೆ. 

ಅನುಮಾನವೇ ಬೇಡ; ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಪಂಜಾಬ್‌ ಕಾಂಗ್ರೆಸ್‌ನ ದಿಗ್ಗಜ ಧುರೀಣ. ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಬೇರುಮಟ್ಟದಿಂದ ಸಂಘಟಿಸಿ, ಅದಕ್ಕೊಂದು ಸಾಂಸ್ಥಿಕ ರೂಪ ನೀಡಿ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರ ಕೊಡುಗೆ ಅನನ್ಯ, ಅನುಪಮ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಅವರು ಮುಖ್ಯಮಂತ್ರಿ ಆಯ್ಕೆಯ ಮೊದಲ ಆದ್ಯತೆಯಾ­ಗುತ್ತಿದ್ದರು. ಪರಿಣಾಮ ಎರಡು ಬಾರಿ ಸಿಎಂ ಆಗಿದ್ದಾರೆ. ಪಂಜಾಬ್‌ ಕಾಂಗ್ರೆಸ್‌ ಮೇಲೆ ಬಿಗಿ ಹಿಡಿತ ಹೊಂದಿದ್ದ ‘ಕ್ಯಾಪ್ಟನ್‌’ ವಿರುದ್ಧವೇ ಶಾಸಕರು, ಕೆಲವು ನಾಯಕರು ಬಂಡೆದ್ದ ಪರಿಣಾಮ, ಕಳೆದ ಎರಡ್ಮೂರು ವರ್ಷದಲ್ಲಿ ಪಂಜಾಬ್‌ ಕಾಂಗ್ರೆಸ್‌ ಬೀದಿ ಜಗಳವನ್ನು ಇಡೀ ರಾಷ್ಟ್ರವೇ ನೋಡಿದೆ. ಹಾಗೆ ನೋಡಿದರೆ, 2017ರಲ್ಲಿ ಪ್ರಚಂಡ ಬಹುಮತದಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬಂತಲ್ಲ, ಆಗಲೇ ಈ ಬಂಡಾಯದ ಕಿಚ್ಚು ಶುರವಾಗಿದ್ದು! ಹೇಗೆಂದರೆ, ಬಿಜೆಪಿಯಿಂದ ವಲಸೆ ಬಂದು ಕಾಂಗ್ರೆಸ್‌ ಸೇರಿದ್ದ ಮಾಜಿ ಕ್ರಿಕೆಟಿಗ ‘ಸಿಕ್ಸರ್‌’ ಸಿಧು, ಉಪಮುಖ್ಯಮಂತ್ರಿಯ ಹುದ್ದೆಗೆ ಹಕ್ಕು ಚಲಾಯಿಸಿದ್ದರು. 

ಆದರೆ, ಅಂದಿನ ಸನ್ನಿವೇಶದಲ್ಲಿ ಅಮರೀಂದರ್‌ ಸಿಂಗ್‌ ಏರಿದ್ದ ಎತ್ತರಕ್ಕೆ ದಿಲ್ಲಿ ವರಿಷ್ಠ ಮಂಡಳಿ ಎದುರಾಡುವ ಮಾತೇ ಇರಲಿಲ್ಲ, ಪರಿಣಾಮ ಸಿಧು ಡಿಸಿಎಂ ಸ್ಥಾನದಿಂದ ವಂಚಿತರಾಗಿ, ಸಚಿವ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾ­ಯಿತು. ಆದರೆ, ಅವರೊಳಗಿನ ಮಹತ್ವಾಕಾಂಕ್ಷಿ ಸಿಧು ತೃಪ್ತನಾಗಲಿಲ್ಲ. ಸ್ವಲ್ಪ ದಿನಗಳಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಧು, ಕ್ಯಾಪ್ಟನ್‌ ವಿರುದ್ಧ ಬಂಡಾಯ ಸಾರಿದರು. ಇಷ್ಟೇ ಆದರೆ ಪರ್ವಾಗಿರಲಿಲ್ಲ. ಸಿಎಂ ಆಗಿದ್ದ ಅಮರೀಂದರ್‌ ಅವರು ನಿಧಾನವಾಗಿ ಪಕ್ಷ ದ ಮೇಲಿನ ಹಿಡಿತ ಕಳೆದುಕೊಳ್ಳುವುದಕ್ಕೂ, ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾಗುವುದಕ್ಕೂ, ಸಿಧು ಅತೃಪ್ತ ಶಾಸಕರ ನಾಯಕನಾಗಿ ಹೊರಹೊಮ್ಮುವುದಕ್ಕೂ ಸರಿಹೋಗಿದೆ. ಹಲವು ಬಾರಿ ಕಾಂಗ್ರೆಸ್‌ನ ಕೇಂದ್ರ ನಾಯಕತ್ವ ಪಂಜಾಬ್‌ ಬಿಕ್ಕಟ್ಟನ್ನು ಶಮನ ಮಾಡಿದರು, ಅದು ತಾತ್ಕಾಲಿಕವಾಗಿತ್ತಷ್ಟೇ. ನವಜೋತ್‌ ಸಿಂಗ್‌ ಸಿಧು ಅವರನ್ನು ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥರನ್ನಾಗಿ ಮಾಡಿದ ಮೇಲೆ ಒಳಜಗಳ ಮತ್ತಷ್ಟು ಬಿಗಡಾಯಿಸಿತು. 

ಅಮರೀಂದರ್ ರಾಜೀನಾಮೆಯು ಪಂಜಾಬ್‌ ಕಾಂಗ್ರೆಸ್‌ನ ಒಳಜಗಳದ ಫಲಿತಾಂಶವಾದರೂ ಅದಕ್ಕೆ ಸಾಕಷ್ಟು ಆಯಾಮಗಳಿವೆ. 2017ರ ಚುನಾವಣೆ ವೇಳೆಗೆ ಪ್ರಶ್ನಾತೀತ ನಾಯಕರಾಗಿದ್ದ ಅಮರೀಂದರ್‌ ಸಿಂಗ್‌ 2022ರ ಚುನಾವಣೆ ಹೊಸ್ತಿಲಲ್ಲಿ ಜನಪ್ರಿಯತೆಯಲ್ಲಿ ಕುಸಿದಿದ್ದಾರೆ. ‘ಜನರ ಮಹಾರಾಜ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಅವರು ಕೊನೆ ಕೊನೆಗೆ ಜನರಿಗೆ ಸಿಗುವುದೇ ಕಷ್ಟವಾಗಿತ್ತು. ಅಮರೀಂದರ್‌ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಗೆಲುವು ಸಿಗಲಾರದು ಎಂಬ ಸಮೀಕ್ಷೆಯೂ ಅವರು ನಿರ್ಗಮನಕ್ಕೆ ಕಾರಣವಾಯಿತು. ಅವರ ನೆರಳಾಗಿದ್ದ ಬಹಳಷ್ಟು ಶಾಸಕರು ಪಾಳಯ ಬದಲಿಸಿದ್ದಾರೆ ಎನ್ನುತ್ತಾರೆ  ಪಂಜಾಬ್ ರಾಜಕಾರಣ ಬಲ್ಲ ವಿಶ್ಲೇಷಕರು. 

‘ಸೇನೆ ಇಲ್ಲದ ವಯೋವೃದ್ಧ ಸೇನಾನಿ’ಯಾಗಿರುವ ಅಮರೀಂದರ್‌ ಸಿಂಗ್‌ ವ್ಯಕ್ತಿತ್ವ ಕೇವಲ ರಾಜಕಾರಣಕ್ಕೆ ಸೀಮಿತವಾಗಿಲ್ಲ. ಯೋಧ, ಸೇನಾ ಇತಿಹಾಸಿಕಾರ, ಶೆಫ್‌, ತೋಟಗಾರ, ಬರಹಗಾರ.. ಹೀಗೆ ನಾನು ಮುಖಗಳಿವೆ. ಅವರು ಅಪರೂಪದ ರಾಜಕೀಯ ನಾಯಕರು. ರಾಯಲ್‌ ಫ್ಯಾಮಿಲಿಯ ಅಮರೀಂದರ್‌ ರಾಜಕಾರಣಕ್ಕೆ ಬಂದಿದ್ದು, ತಮ್ಮ ಶಾಲಾ ದಿನಗಳ ಸ್ನೇಹಿತ ರಾಜೀವ್‌ ಗಾಂಧಿಯ ಒತ್ತಾಸೆಯಿಂದಾಗಿ. 1942 ಮಾರ್ಚ್‌ 11ರಂದು ಪಟಿಯಾಲಾದ ರಾಜಮನೆತನದಲ್ಲಿ ಜನಿಸಿದರು. ತಂದೆ ಮಹಾರಾಜ ಸರ್‌ ಯಾದವೀಂದ್ರ ಸಿಂಗ್‌ ಮತ್ತು ತಾಯಿ ಮಹಾರಾಣಿ ಮೊಹೀಂದರ್‌ ಕೌರ್‌. ಶಿಮ್ಲಾದ ಲೊರೆಟೋ ಕಾನ್ವೆಂಟ್‌, ಸನಾವರ್‌ದ ಲಾವರೆನ್ಸ್‌ ಸ್ಕೂಲ್‌ನಲ್ಲಿ ಆರಂಭದ ಶಿಕ್ಷ ಣ ಪಡೆದು, ಡೆಹ್ರಾಡೂನ್‌ನ ದಿ ಡೂನ್‌ ಸ್ಕೂಲ್‌ಗೆ ಸೇರಿದರು. ಅಮರೀಂದರ್‌ ಅವರ ಪತ್ನಿ ಪ್ರಣೀತ್‌ ಕೌರ್‌. ರಣೀಂದರ್‌ ಸಿಂಗ್‌ ಮತ್ತು ಜೈ ಇಂದೇರ್‌ ಕೌರ್‌ ಮಕ್ಕಳು. ಪತ್ನಿ ಪ್ರಣೀತ್‌ ಕೌರ್‌ ಅವರು ಸಂಸದೆಯಾಗಿದ್ದರು ಮತ್ತು 2009ರಿಂದ ಅಕ್ಟೋಬರ್‌ 2012ರವರೆಗೆ ವಿದೇಶಾಂಗ ಇಲಾಖೆಯ ರಾಜ್ಯ ಸಚಿವೆಯಾಗಿ ಕೆಲಸ ನಿರ್ವಹಿಸಿದ್ದಾರೆ. ಅಮರೀಂದರ್‌ ಅವರ ಸಹೋದರಿ ಹೇಮಿಂದರ್‌ ಕೌರ್‌ ಮಾಜಿ ವಿದೇಶಾಂಗ ಸಚಿವರಾಗಿದ್ದ ಕೆ. ನಟ್ವರ್‌ ಸಿಂಗ್‌ ಅವರ ಪತ್ನಿ. ಹಾಗೆಯೇ, ಶಿರೋಮಣಿ ಅಕಾಲಿ ದಳ(ಎ)ದ ಮುಖ್ಯಸ್ಥ ಸಿಮ್ರಂಜಿತ್‌ ಸಿಂಗ್‌ ಮನ್‌ ಕೂಡ ಇವರ ಸಂಬಂಧಿ. ಅಮರೀಂದರ್‌ ಸಿಂಗ್‌ ಅವರ ಒಟ್ಟು ಫ್ಯಾಮಿಲಿ ರಾಜಕೀಯ ಹಿನ್ನೆಲೆಯನ್ನು ಹೊಂದಿದೆ.

ರಾಜಕಾರಣಕ್ಕೆ ಕಾಲಿಡುವ ಮುನ್ನ ಅಮರೀಂದರ್‌ ಅವರು, ಸೇನೆಯಲ್ಲಿ ಕ್ಯಾಪ್ಟನ್‌ ಆಗಿದ್ದರು. 1963ರಿಂದ 1966ವರೆಗೆ ಸೇವೆ ಸಲ್ಲಿಸಿದ್ದಾರೆ. ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ ಮತ್ತು ಮಿಲಿಟರಿ ಅಕಾಡೆಮಿ ಪದವೀಧರರೂ ಹೌದು. ಅವರ ಸೇನೆಯಲ್ಲಿ ಸಿಖ್‌ ರೆಜಿಮಂಟ್‌ನಲ್ಲಿದ್ದರು. 1965ರ ಇಂಡೋ-ಪಾಕ್‌ ಯುದ್ಧದಲ್ಲಿಸಕ್ರಿಯವಾಗಿ ಪಾಲ್ಗೊಂಡ ಹಿರಿಮೆ ಅವರಿಗಿದೆ. ರಾಜೀವ್‌ ಗಾಂಧಿಯ ಒತ್ತಾಸೆಯ ಮೇರೆಗೆ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿ 1980ರಲ್ಲಿಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದರು. ಆದರೆ, ಆಪರೇಷನ್‌ ಬ್ಲೂಸ್ಟಾರ್‌ ಕಾರ್ಯಾಚರಣೆ ವಿರೋಧಿಸಿ ತಮ್ಮ ಲೋಕಸಭಾ ಸದಸ್ಯತ್ವ ಹಾಗೂ ಕಾಂಗ್ರೆಸ್‌ ಪಾರ್ಟಿಗೆ ರಾಜೀನಾಮೆ ನೀಡಿ ಹೊರಬಂದರು. ಬಳಿಕ ಶಿರೋಮಣಿ ಅಕಾಲಿ ದಳ ಸೇರ್ಪಡೆಯಾಗಿ ತಲವಂಡಿ ಸಾಬೋ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿ ಸಚಿವರೂ ಆದರು. ಕೃಷಿ, ಅರಣ್ಯ, ಅಭಿವೃದ್ಧಿ ಮತ್ತು ಪಂಚಾಯತ್‌ ಇಲಾಖೆಗಳನ್ನು ನಿರ್ವಹಣೆ ಮಾಡಿ ಅನುಭವ ಪಡೆದುಕೊಂಡರು. 

ಆದರೆ, ಅಕಾಲಿದಳದಲ್ಲೂ ತುಂಬ ದಿನಗಳ ಕಾಲ ಅಮರೀಂದರ್‌ ಉಳಿಯಲಿಲ್ಲ. 1992ರಲ್ಲಿ ಆ ಪಕ್ಷ ವನ್ನು ತೊರೆದು ತಮ್ಮದೇ ಆದ ಶಿರೋಮಣಿ ಅಕಾಲಿ ದಳ(ಪ್ಯಾಂಥಿಕ್‌) ಸ್ಥಾಪಿಸಿದರು. ಆದರೆ, ವಿಧಾಸಭೆ ಚುನಾವಣೆಯಲ್ಲಿ ಹೀನಾಯವಾಗಿ ಅವರ ಪಕ್ಷ  ಸೋಲು ಕಂಡಿತು. ಸ್ವತಃ ಅಮರೀಂದರ್‌ ಅವರು ಕೇವಲ 856 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡರು. ಪರಿಣಾಮ ತಮ್ಮ ಪಕ್ಷ ವನ್ನು ಅವರು 1998ರಲ್ಲಿಕಾಂಗ್ರೆಸ್‌ ಜತೆ ವಿಲೀನಗೊಳಿಸಿದರು. ಆಗ ಕಾಂಗ್ರೆಸ್‌ ನಾಯಕತ್ವ ಸೋನಿಯಾ ಗಾಂಧಿ ಹೆಗಲಿಗೇರಿತ್ತು. 1998ರಲ್ಲಿ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡರು. ಆದರೆ, ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷ  ಕಟ್ಟುವ ಹೊಣೆಗಾರಿಕೆ ಅವರನ್ನು ಮುಂಚೂಣಿಯ ನಾಯಕನನ್ನಾಗಿ ಮಾಡಿತು. 1999ರಿಂದ 2002, 2010ರಿಂದ 2013 ಮತ್ತು 2015ರಿಂದ 2017, ಹೀಗೆ ಮೂರು ಬೇರೆ ಬೇರೆ ಅವಧಿಯಲ್ಲಿ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರದ ಮೊಗಸಾಲೆಗೆ ತರುವಲ್ಲಿ ಯಶಸ್ವಿಯಾಗಿ, 2002ರಿಂದ 2007ರವರೆ ಮೊದಲ ಬಾರಿಗೆ  ಪಂಜಾಬ್‌ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಅಮರೀಂದರ್‌ 2013ರಿಂದಲೂ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಕಾಯಂ ಆಹ್ವಾನಿತ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳಿಪಟವಾಯಿತು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತು. ಆದರೆ, ಪಂಜಾಬ್‌ನಲ್ಲಿ ಮೋದಿ ಅಲೆಯ ನಡುವೆಯೂ ಅರುಣ್‌ ಜೇಟ್ಲಿ ಅವರನ್ನು ಸೋಲಿಸುವಲ್ಲಿ ಅಮರೀಂದರ್‌ ಯಶಸ್ವಿಯಾಗಿದ್ದರು. ಪಟಿಯಾಲ ನಗರ ಮೂರು ಬಾರಿ, ಸಮನಾ ಹಾಗೂ ತಲ್ವಾಂಡಿ ಸಾಬೋ ವಿಧಾನಸಭೆ ಕ್ಷೇತ್ರಗಳನ್ನು ತಲಾ ಒಂದು ಬಾರಿ ಪ್ರತಿನಿಧಿಸಿದ್ದಾರೆ. 2015ರಲ್ಲಿ ಕಾಂಗ್ರೆಸ್‌ ನಾಯಕತ್ವ ಇವರನ್ನು ಮತ್ತೆ ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥರನ್ನಾಗಿ ನೇಮಿಸಿತು. ಪರಿಣಾಮ 2017ರಲ್ಲಿ ಎಲೆಕ್ಷ ನ್‌ನಲ್ಲಿ ಕಾಂಗ್ರೆಸ್‌ ಭರ್ಜರಿ ಜಯ ದಾಖಲಿಸಿ ಮತ್ತೆ ಅಧಿಕಾರಕ್ಕೇರಿತು. ಅಮರೀಂದರ್‌ ಸಿಂಗ್‌ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು. 

ಪಂಜಾಬ್‌ನಲ್ಲಿ ತಾವೊಬ್ಬ ನಿರ್ಣಾಯಕ ನಾಯಕ ಎಂಬುದನ್ನು ಕಾಲಕಾಲಕ್ಕೆ ಅವರು ಸಾಬೀತುಪಡಿಸುತ್ತಾ ಬಂದಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಹಿತಾಸಕ್ತಿ ವಿಷಯಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕತ್ವದ ತದ್ವಿರುದ್ಧವಾದ ಹೇಳಿಕೆಗಳನ್ನು ನೀಡಲು ಅವರು ಯಾವತ್ತೂ ಹಿಂಜರಿದಿಲ್ಲ. ಈಗ ಕಾಲ ಬದಲಾಗಿದೆ; ಪಂಜಾಬ್‌ನ ನದಿಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. 79 ವರ್ಷದ ಅಮರೀಂದರ್‌ ಅವರಿಗೀಗ ಮೊದಲಿದ್ದ ಚಾರ್ಮ್‌ ಇಲ್ಲ ಎಂಬುದನ್ನು ಅರಿತ ಹಲವು ಶಾಸಕರು, ನಾಯಕರು ಅವರ ವಿರುದ್ಧವೇ ನಿಂತು ಕಾಳಗ ಮಾಡುತ್ತಿದ್ದಾರೆ. ಈ ಹಂತದಲ್ಲಿ ಅವರು ನೀಡಿರುವ ರಾಜೀನಾಮೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಸದ್ಯಕ್ಕೆ ಹೇಳುವುದು ಕಷ್ಟ. ಆರೇಳು ತಿಂಗಳು ಕಳೆದರೂ ಸಾಕು, ಎಲ್ಲವೂ ನಿಚ್ಚಳವಾಗಲಿದೆ.