ಸೋಮವಾರ, ಏಪ್ರಿಲ್ 26, 2021

Chief Justice N V Ramana: ನ್ಯಾಯ ನಿಪುಣ ನ್ಯಾ.ರಮಣ

ಕಾನೂನು ಪಾಂಡಿತ್ಯ, ಸಮಚಿತ್ತ, ನ್ಯಾಯನಿಷ್ಠ ವ್ಯಕ್ತಿತ್ವದ ನ್ಯಾ. ಎನ್‌ ವಿ ರಮಣ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗುತ್ತಿರುವುದು ಈ ಕ್ಷ ಣದ ಅಗತ್ಯವೂ ಹೌದು.


- ಮಲ್ಲಿಕಾರ್ಜುನ ತಿಪ್ಪಾರ

ನ್ಯಾಯ ಪರಿಪಾಲನೆಯಲ್ಲಿನೈಪುಣ್ಯತೆಯನ್ನು ಸಾಧಿಸಿರುವ, ಅಪಾರ ಕಾನೂನು ಪಾಂಡಿತ್ಯವನ್ನು ಹೊಂದಿರುವ ನ್ಯಾ. ಎನ್‌ ವಿ ರಮಣ ಅವರು ದೇಶದ ಅಗ್ರ ನ್ಯಾಯಾಲಯ, ಸುಪ್ರೀಂ ಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಬಹುಶಃ ಈ ಘನ ಹುದ್ದೆಗೆ ರಮಣ ಅವರು ಪ್ರತಿಶತ ಸಮರ್ಥನೀಯ ವ್ಯಕ್ತಿಯಾಗಿದ್ದಾಧಿರೆಂಬುದು ಕಾನೂನು ವಲಯದಲ್ಲಿಕೇಳಿ ಬರುತ್ತಿರುವ ಮೆಚ್ಚುಗೆ ಮಾತು. 

ಪತ್ರಿಕೆಯಲ್ಲಿ‘ಸುದ್ದಿ’ ಬರೆಯುತ್ತಿದ್ದ ರಮಣ ಅವರು ‘ತೀರ್ಪು’ ಬರೆಯುವವರೆಗೂ ತಲುಪಿದ ಜೀವನದ ಪಯಣವೂ ಸಾಕಷ್ಟು ರೋಚಕ ಹಾಗೂ ಸೂಧಿರ್ತಿದಾಯಕ. ರೈತನ ಮಗನೊಬ್ಬ ಇಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗುತ್ತಾರೆಂದರೆ ಅದು ಈ ದೇಶದ ಪ್ರಜಾಪ್ರಭುತ್ವದ ದೊಡ್ಡ ಶಕ್ತಿ; ಸಂವಿಧಾನ ಒದಗಿಸಿದ ಅವಕಾಶ. 

ಸದಾ ಶಾಂತಚಿತ್ತರಾಗಿರುವ ರಮಣ ನ್ಯಾಯ ಪರಿಪಾಲನೆಯಲ್ಲಿಮಾತ್ರ ಕಠೋರ. ನ್ಯಾಯದ ಹಾದಿಯಲ್ಲಿಎಷ್ಟೇ ಎಡರು ತೊಡರುಗಳು ಎದುರಾದರೂ ಅವರು ಎದೆಗುಂದಿದ ಪ್ರಕರಣವಿಲ್ಲ. ಸತ್ಯವನ್ನು ಯಾವುದೇ ಅಂಜಿಕೆ ಇಲ್ಲದೇ ಹೇಳಿದ್ದಾರೆ ಮತ್ತು ನಾಗರಿಕ ಹಕ್ಕುಗಳನ್ನು ಸಂರಕ್ಷಿಸಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ; ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಬಳಿಕ ಕೇಂದ್ರ ಸರಕಾರ ಮುಂಜಾಗ್ರತಾ ಕ್ರಮವಾಗಿ ಇಂಟರ್ನೆಟ್‌ ಸೇವೆಯನ್ನು ಬಂದ್‌ ಮಾಡಿತ್ತು. ಸರಕಾರದ ನಿಷೇಧ ವರ್ಷಗಟ್ಟಲೆ ಮುಂದುವರಿಯಿತು ಮತ್ತು ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದಾಗ, ಅದರ ವಿಚಾರಣೆ ನಡೆಸಿದ್ದು ಇದೇ ನ್ಯಾ. ಎನ್‌.ವಿ.ರಮಣ ನೇತೃತ್ವದ ಪೀಠ. ‘‘ಈ ಪ್ರಕರಣದಲ್ಲಿ ಅನಿರ್ದಿಷ್ಟಾವಧಿಗೆ ಇಂಟರ್ನೆಟ್‌ ಸೇವೆಯನ್ನು ಸ್ಥಗಿತಗೊಳಿಸುವುದು ಕಾನೂನುಬಾಹಿರವಾಗುತ್ತದೆ,’’ ಎಂದು ಹೇಳಿ, ಸಂವಿಧಾನದಡಿಯಲ್ಲಿ ಇಂಟರ್ನೆಟ್‌ ಸೇವೆಯೂ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವೇ ಆಗಿದೆ. ಹಾಗಾಗಿ, ಇಂಟರ್ನೆಟ್‌ ಕೂಡ ಮೂಲಭೂತ ಹಕ್ಕು ಎಂದು ಪೀಠ ಹೇಳಿತು ಮತ್ತು ಕಾಶ್ಮೀರ ಕಣಿವೆಯಲ್ಲಿ ಇಂಟರ್ನೆಟ್‌ ಸೇವೆ ಮರು ಆರಂಭಿಸಲು ಆದೇಶಿಸಿತು. 

ಇದೇ ರೀತಿಯ ಹಲವು ಐತಿಹಾಸಿಕ ತೀರ್ಪುಗಳನ್ನು ಅವರು ನೀಡಿದ್ದಾರೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕಚೇರಿಯನ್ನು ಮಾಹಿತಿ ಹಕ್ಕು ಕಾಯಿದೆ(ಆರ್‌ಟಿಐ) ವ್ಯಾಪ್ತಿಗೆ ತರುವಲ್ಲಿ ಇವರು ನೀಡಿದ ತೀರ್ಪು ಕಾರಣ. ಉದ್ಯಮಿ ಹಾಗೂ ಆರ್‌ಟಿಐ ಕಾರ್ಯಕರ್ತ ಸುಭಾಶ್‌ಚಂದ್ರ ಅಗರ್ವಾಲ್‌ ಅವರು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ಆಸ್ತಿ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ(ಸಿಪಿಐಒ) ಆರ್‌ಟಿಐನಡಿ ಕೇಳಿಕೊಂಡಿದ್ದರು. ಆದರೆ, ಗೌಪ್ಯ ಮಾಹಿತಿ ಎಂಬ ಕಾರಣ ನೀಡಿ, ಈ ಅರ್ಜಿಯನ್ನು ಸಿಪಿಐಒ ವಜಾ ಮಾಡಿದರು. ಈ ಪ್ರಕರಣ ಕಡೆಗೆ ಸುಪ್ರೀಂ ಕೋರ್ಟ್‌ನ ಸಂವಿಧಾನಪೀಠಕ್ಕೆ ವರ್ಗವಾಗಿ, ಸುಪ್ರೀಂ ಕೋರ್ಟ್‌ ಕೂಡ ಸಾರ್ವಜನಿಕ ಕಚೇರಿಯಾಗಿರುವು­ದರಿಂದ 2005ರ ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಐತಿಹಾಸಿಕ ತೀರ್ಪು ಹೊರ ಬಿತ್ತು. ಈ ತೀರ್ಪಿನ ಹಿಂದೆ ನ್ಯಾ.ರಮಣ ಅವರ ಮಹತ್ತರ ಕಾಣಿಕೆ ಇದೆ. ಈ ತೀರ್ಪಿನೊಂದಿಗೆ ಹಾಲಿ ನ್ಯಾಯಮೂರ್ತಿ­ಗಳು ತಮ್ಮ ಆಸ್ತಿ ವಿವರವನ್ನು ಬಹಿರಂಗಗೊಳಿಸಬೇಕಾಯಿತು. 

ವಾಣಿಜ್ಯ ವ್ಯಾಜ್ಯಗಳನ್ನು ಬಗೆಹರಿಸುವಲ್ಲೂರಮಣರ ಕಾನೂನು ಪಾಂಡಿತ್ಯ ನೆರವಿಗೆ ಬಂದಿದೆ. ಅನೇಕ ಪ್ರಕರಣಗಳಲ್ಲಿ ಮೈಲುಗಲ್ಲುತೀರ್ಪುಗಳನ್ನು ನೀಡಿದ್ದಾರೆ. ಇದಕ್ಕೆ ವಿದ್ಯಾ ದ್ರೋಲಿಯಾ, ಅಲ್ಕನೋ ವರ್ಸಸ್‌ ಸಲೇಮ್‌ ಪ್ರಕರಣಗಳ ತೀರ್ಪನ್ನು ಉದಾಹರಣೆಯಾಗಿ ನೀಡಬಹುದು. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾದ ಹಲವು ಪ್ರಕರಣಗಳಲ್ಲಿ ಅವರು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಕರ್ನಾಟಕದ ಕಾಂಗ್ರೆಸ್‌-ಜೆಡಿಎಸ್‌ ಶಾಸಕರ ಅನರ್ಹ ಪ್ರಕರಣದಲ್ಲಿ, ಸ್ಪೀಕರ್‌ ನೀಡಿದ ತೀರ್ಮಾನವನ್ನು ಎತ್ತಿ ಹಿಡಿದಿದ್ದರು. 2019ರಲ್ಲಿ ಮಹಾರಾಷ್ಟ್ರದಲ್ಲಿಸರಕಾರ ರಚನೆ ಸಂಬಂಧ ಉಂಟಾಗಿದ್ದ ಬಿಕ್ಕಟ್ಟು ವೇಳೆ, ವಿಶ್ವಾಸಮತ ಯಾಚನೆಗೆ ಅವಕಾಶ ನೀಡಿ ಸಂವಿಧಾನಬದ್ಧ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಿದ್ದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗುವ ಮುಂಚೆ ರಮಣ, ಆಂಧ್ರಪ್ರದೇಶ ಹೈಕೋರ್ಟ್‌, ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ, ಆಂಧ್ರಪ್ರದೇಶ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ, ಸುಪ್ರೀಂ ಕೋರ್ಟ್‌ ನಲ್ಲಿ ವಕೀಲಿಕೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ವಕೀಲಿಕೆ ಮಾಡುವಾಗ ಸಾಂವಿಧಾನಿಕ, ಅಪರಾಧ, ಸೇವೆ ಮತ್ತು ಅಂತಾರಾಜ್ಯ ಕಾನೂನುಗಳ ವಿಷಯತಜ್ಞತೆಯನ್ನು ಸಾಧಿಸಿದ್ದರು. ಜೊತೆಗೆ ಸಿವಿಲ್‌, ಕ್ರಿಮಿನಲ್‌, ಲೇಬರ್‌, ಸವೀಸ್, ಚುನಾವಣಾ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸಿದ್ದಾರೆ. ಹಲವು ಕೇಸ್‌ಗಳಲ್ಲಿ ಕೇಂದ್ರ ಸರಕಾರ, ರೇಲ್ವೆಯನ್ನು ಪ್ರತಿನಿಧಿಸಿದ್ದಾರೆ. ಆಂಧ್ರಪ್ರದೇಶದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ವಕೀಲಿಕೆಯಲ್ಲಿ ಅಪಾರ ಅನುಭವವನ್ನು ಹೊಂದಿದ್ದ ಅವರನ್ನು 2000 ಜೂನ್‌ 27ರಂದು ಆಂಧ್ರಪ್ರದೇಶದ ಶಾಶ್ವತ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. 2013 ಮಾರ್ಚ್‌ 10ರಿಂದ 2013 ಮೇ 20ರವರೆಗೂ ಆಂಧ್ರಪ್ರದೇಶ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿಯೂ ಕೆಲಸ ಮಾಡಿದ್ದಾರೆ. ಬಳಿಕ ಅವರನ್ನು 2013 ಸೆಪ್ಟೆಂಬರ್‌ 2ರಂದು ದಿಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಯಿತು. ಇದಾದ ಒಂದೇ ವರ್ಷದಲ್ಲಿ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ 2014 ಫೆಬ್ರವರಿ 17ರಂದು ನೇಮಕಗೊಂಡರು. 

ಅಪಾರ ಕಾನೂನು ಪಾಂಡಿತ್ಯ ಮತ್ತು ಸಮಚಿತ್ತ, ದೃಢ ನಿಲುವು ಹೊಂದಿದ ವ್ಯಕ್ತಿಯೊಬ್ಬರು ಮುಖ್ಯ ನ್ಯಾಯಮೂರ್ತಿ ಗಳಾಗುತ್ತಿರುವುದು ಈ ಕ್ಷ ಣದ ಅಗತ್ಯವೂ ಆಗಿತ್ತು. ಕಾನೂನು ಪ್ರೀತಿಸುವಷ್ಟೇ ಕಲೆ ಮತ್ತು ಸಾಹಿತ್ಯವನ್ನೂ ಇಷ್ಟ ಪಡುತ್ತಾರೆ. 

ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಪೊನ್ನಾವರಂ ಹಳ್ಳಿಯ ಕೃಷಿಕ ಕುಟುಂಬದಲ್ಲಿ ಎನ್‌ ವಿ ರಮಣ ಅವರು 1957 ಆಗಸ್ಟ್‌ 27ರಂದು ಜನಿಸಿದರು. ಇವರ ತಂದೆ ಗಣಪತಿ ರಾವ್‌ ಮತ್ತು ತಾಯಿ ಸರೋಜನಿ ದೇವಿ ಕೃಷಿಕರು. ಬಿಎಸ್‌ಸಿ ಪದವಿ ಪಡೆದ ನಂತರ ಕಾನೂನು ಪದವಿ ಸಂಪಾದಿಸಿದರು. 1975ರಲ್ಲಿ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿಧಿದಾಗ ರಮಣ ಅವರು ಒಂದು ಶೈಕ್ಷ ಣಿಕ ವರ್ಷವನ್ನು ತ್ಯಜಿಸಬೇಕಾದ ಪರಿಸ್ಥಿತಿ ಉಂಟಾಯಿತು. ಬಳಿಕ ಅವರು, ಎರಡು ವರ್ಷಗಳ ಕಾಲ ತೆಲುಗು ಪತ್ರಿಕೆಯೊಂದರಲ್ಲಿ ಕೆಲಸ ಮಾಡಿ, ನಂತರ ಕಾನೂನು ಪದವಿಯನ್ನು ಪಡೆದುಕೊಂಡು ವಕೀಲಿಕೆ ಆರಂಭಿಸಿದರು. ಪೊನ್ನಾವರಮ್‌ ಹಳ್ಳಿಯಿಂದ ವಕೀಲಿಕೆ ಆರಂಭಿಸಿದ ಮೊದಲಿಗರು ಇವರು. 

ವಿದ್ಯಾರ್ಥಿಯಾಗಿದ್ದಾಗಲೇ ರೈತರು, ಕಾರ್ಮಿಕರು ಮತ್ತು ಇತರ ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿದ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಸಾಮಾಜಿಕ ಕಾರ್ಯಕರ್ತರಾಗಿದ್ದರು. ನಾಗರಿಕರ ಹಕ್ಕುಗಳ ಪರವಾಗಿದ್ದರು. ವಿದ್ಯಾರ್ಥಿ ದಿಸೆಯಿಂದಲೇ ಅವರಲ್ಲಿ ಸಾಮಾಜಿಕ ಬದ್ಧತೆ ಮೈಗೂಡಿರುವುದನ್ನು ನಾವು ಕಾಣಬಹುದು ಮತ್ತು ಅದು ಅವರ ತೀರ್ಪುಗಳಲ್ಲಿ ಪ್ರತಿಫಲನವಾಗಿದೆ. ಸರಳ ಜೀವನವನ್ನು ಮೈಗೂಡಿಸಿಕೊಂಡಿ­ರುವ ನ್ಯಾ.ರಮಣ ನೈತಿಕವಾಗಿ ಯಾವುದಾದರೂ ವಿಷಯ ಸರಿ ಅಲ್ಲಎಂದು ತೋರಿದರೆ ಅದನ್ನು ಟೀಕಿಸುವುದರಲ್ಲಿಎಂದೂ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಅವರು ನಮ್ಮ ದೇಶದ ಶಿಕ್ಷ ಣ ವ್ಯವಸ್ಥೆಗೆ ಬಗ್ಗೆ ಮಾಡಿದ ಟೀಕೆಯನ್ನು ಉದಾಹರಿಸಬಹುದು. 

ಇಷ್ಟೆಲ್ಲ ಹೆಗ್ಗಳಿಕೆಯ ಮಧ್ಯೆಯೂ ಅವರು ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದರು. ಆಂಧ್ರಪ್ರದೇಶದ ಸಿಎಂ ವೈ ಎಸ್‌ ಜಗನ್‌ ಮೋಹನ್‌ ರೆಡ್ಡಿ ಅವರು, ಸುಪ್ರೀಂ ಕೋರ್ಟ್‌ನ ಸಿಜೆಐಗೆ ಪತ್ರ ಬರೆದು ರಮಣ ಹಾಗೂ ಅವರ ಸಂಬಂಧಿಕರು ಅಮರಾವತಿಯ ಭೂಸ್ವಾಧೀನದಲ್ಲಿ ಭ್ರಷ್ಟಾಚಾರ ಎಸಗುತ್ತಿದ್ದಾರೆ. ಜತೆಗೆ ತಮ್ಮ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾ­ರೆಂದು ಆರೋಪಿಸಿದ್ದರು. ಈ ಪತ್ರ ಭಾರಿ ಸಂಚಲನವನ್ನೇ ಸೃಷ್ಟಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. 

63 ವರ್ಷದ ನ್ಯಾ. ರಮಣ ಅವರು, ಏಪ್ರಿಲ್‌ 24ರಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಲಿದ್ದು, ಅವರ ಅಧಿಕಾರಾವಧಿ 2022 ಆಗಸ್ಟ್‌ 26ಕ್ಕೆ ಕೊನೆಗೊಳ್ಳಲಿದೆ. ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಮಾತ್ರವಲ್ಲದೆ ಅವರು ಸುಪ್ರೀಂ ಕೋರ್ಟ್‌ನ ಆಡಳಿತಾತ್ಮಕ ವ್ಯವಸ್ಥೆಯ ಮುಖ್ಯಸ್ಥರೂ ಆಗಿಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ಅವರ ಮುಂದೆ ಸಾಕಷ್ಟು ಸವಾಲುಗಳಂತೂ ಇದ್ದೇ ಇವೆ.




How to make Whats app call from Desktop?: ಕಂಪ್ಯೂಟರ್‌ನಿಂದ ವಾಟ್ಸ್‌ಆ್ಯಪ್‌ ಕಾಲ್‌ ಮಾಡುವುದು ಹೇಗೆ?


- ಮಲ್ಲಿಕಾರ್ಜುನ ತಿಪ್ಪಾರ

ಕಿರು ಸಂದೇಶ ಸಂವಹನದಲ್ಲಿಕ್ರಾಂತಿಯನ್ನೇ ಸೃಷ್ಟಿಸಿರುವ ಫೇಸ್‌ಬುಕ್‌ ಒಡೆತನದ ‘ವಾಟ್ಸ್‌ಆ್ಯಪ್‌’, ತನ್ನ ಬಳಕೆದಾರರಿಗೆ ಕಾಲ ಕಾಲಕ್ಕೆ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈಗಾಗಲೇ ನೀವು  ಸ್ಮಾರ್ಟ್‌ಫೋನ್‌ ವರ್ಷನ್‌ನಲ್ಲಿವಾಟ್ಸ್‌ಆ್ಯಪ್‌ ವಾಯ್ಸ್‌ ಮತ್ತು ವಿಡಿಯೊ ಕಾಲ್‌ ಸೌಲಭ್ಯವನ್ನು ಬಳಸಿಕೊಂಡಿರುತ್ತೀರಿ. ಈ ವಾಟ್ಸ್‌ಆ್ಯಪ್‌ ವಾಯ್ಸ್‌ ಮತ್ತು ವಿಡಿಯೊ ಕಾಲ್‌ ಎಷ್ಟು ಜನಪ್ರಿಯವಾಗಿದೆ ಎಂದರೆ, 2020ರ ಹೊಸ ವರ್ಷದ ದಿನ ಜಗತ್ತಿನಾದ್ಯಂತ 140 ಕೋಟಿ ವಾಯ್ಸ್‌ ಮತ್ತು ವಿಡಿಯೊ ಕರೆಗಳನ್ನು ವ್ಯಾಟ್ಸ್‌ಆ್ಯಪ್‌ ಮೂಲಕ ಮಾಡಲಾಗಿದೆಯಂತೆ! ಅಂದರೆ, ಅಷ್ಟರಮಟ್ಟಿಗೆ ವಾಟ್ಸ್‌ಆ್ಯಪ್‌ ಆಧುನಿಕ ಸಂವಹನದ ಹೊಸ ಪರಿಭಾಷೆ ಮತ್ತು ಮಾಧ್ಯಮವಾಗಿ ರೂಪುಗೊಂಡಿದೆ.

ಈವರೆಗೂ ವಾಟ್ಸ್‌ಆ್ಯಪ್‌ ವಾಯ್ಸ್‌ ಮತ್ತು ವಿಡಿಯೊ ಕಾಲ್‌ ಸೇವೆ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರವೇ ಸಪೋರ್ಟ್‌ ಮಾಡುತ್ತಿತ್ತು. ಅಂದರೆ, ಸ್ಮಾರ್ಟ್‌ಫೋನ್‌ನಲ್ಲಿಮಾತ್ರವೇ ವಾಟ್ಸ್‌ಆ್ಯಪ್‌ ಬಳಸಿಕೊಂಡು ಕರೆ ಮಾಡಲು ಸಾಧ್ಯವಾಗುತ್ತಿತ್ತು. ಹಾಗಾಗಿ, ವಾಟ್ಸ್‌ಆ್ಯಪ್‌ ವೆಬ್‌ನಲ್ಲೂಈ ಸೇವೆ ನೀಡಬೇಕೆಂಬುದು ಬಳಕೆದಾರರ ಬೇಡಿಕೆಯಾಗಿತ್ತು. ವಾಟ್ಸ್‌ಆ್ಯಪ್‌ ಇದೀಗ ವಾಟ್ಸ್‌ಆ್ಯಪ್‌ ವೆಬ್‌ನಲ್ಲೂಆ ಸೇವೆಯನ್ನು ನೀಡುವ ಮೂಲಕ ಬಳಕೆದಾರರಿಗೆ ಮತ್ತೊಂದು ಅನುಭವವನ್ನು ಒದಗಿಸಿದೆ. ವಾಟ್ಸ್‌ವ್ಯಾಪ್‌ ವೆಬ್‌ ಮೂಲಕ ಅಂದರೆ, ನೀವು ಡೆಸ್ಕ್‌ಟಾಪ್‌(ಕಂಪ್ಯೂಟರ್‌)ನಲ್ಲೂವಾಟ್ಸ್‌ಆ್ಯಪ್‌ ಬಳಸಿಕೊಂಡು ವಾಯ್ಸ್‌ ಮತ್ತು ವಿಡಿಯೊ ಕಾಲ್‌ಗಳನ್ನು ಮಾಡಬಹುದು.

ಸದ್ಯಕ್ಕೆ, ವಾಟ್ಸ್‌ಆ್ಯಪ್‌ ವೆಬ್‌ ಸೇವೆ ಸೀಮಿತವಾಗಿದೆ; ಅದರ ವ್ಯಾಪ್ತಿ ವಿಸ್ತಾರವಾಗಿಲ್ಲ. ಹಾಗೆಯೇ, ಎಲ್ಲರೀತಿಯ ಒಎಸ್‌ಗಳಿಗೂ ಇದು ಸಪೋರ್ಟ್‌ ಮಾಡುತ್ತಿಲ್ಲ. ವಿಂಡೋಸ್‌ 10 ಮತ್ತು ಮ್ಯಾಕ್‌ಒಎಸ್‌ 10.13 ವರ್ಷನ್‌ನಲ್ಲಿಮಾತ್ರವೇ ನೀವು ಆಡಿಯೊ ಮತ್ತು ವಿಡಿಯೊ ಕಾಲ್‌ ಮಾಡಲು ಸಾಧ್ಯವಾಗಲಿದೆ. ಜೊತೆಗೆ, ವಾಟ್ಸ್‌ಆ್ಯಪ್‌ ಗ್ರೂಪ್‌ ಕರೆಗಳಿಗೂ ಅವಕಾಶವಿಲ್ಲ. ಸ್ಮಾರ್ಟ್‌ಫೋನ್‌ನಲ್ಲಾದರೆ ನೀವು ಗ್ರೂಪ್‌ ಕಾಲ್‌ ಮೂಲಕ ವರ್ಚುಯಲ್‌ ಮೀಟಿಂಗ್‌ಗಳಂಥ ಟಾಸ್ಕ್‌ಗಳನ್ನು ಮಾಡಬಹುದಾಗಿತ್ತು. ಸದ್ಯಕ್ಕೆ ವೈಯಕ್ತಿಕ ಕರೆಗಳಿಗೆ ಮಾತ್ರವೇ ವಾಟ್ಸ್‌ಆ್ಯಪ್‌ ವಾಯ್ಸ್‌ ಮತ್ತು ವಿಡಿಯೊ ಕಾಲ್‌ಗೆ ಸೀಮಿತವಾಗಿದ್ದು, ಮುಂಬರುವ ದಿನಗಳಲ್ಲಿವಾಟ್ಸ್‌ಆ್ಯಪ್‌ ಈ ತನ್ನ ಸೇವೆಯನ್ನು ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಬಹುದು. 

ಕಾಲ್‌ ಮಾಡುವುದು ಹೇಗೆ?- ಈ ಫೀಚರ್‌ ಸದ್ಯ ವಾಟ್ಸ್‌ಆ್ಯಪ್‌ ವೆಬ್‌ನಲ್ಲಿಮಾತ್ರವೇ ಲಭ್ಯವಿದ್ದು, ವಿಂಡೋಸ್‌ ಮತ್ತು ಮ್ಯಾಕ್‌ಒಎಸ್‌ನಲ್ಲಿಮಾತ್ರವೇ ಕೆಲಸ ಮಾಡುತ್ತದೆ. ಹಾಗೆಯೇ ಗ್ರೂಪ್‌ ಕಾಲ್‌ಗಳು ಸಾಧ್ಯವಾಗುವುದಿಲ್ಲ. ಕೇವಲ ಸೀಮಿತ ಕಾಲ್ಗೆ ಮಾತ್ರವೇ ಅವಕಾಶವಿದೆ.

ಏನೇನು ಇರಬೇಕು?: ವಿಂಡೋಸ್‌ 10 64-ಬಿಟ್‌ ವರ್ಷನ್‌ 1903 ಮತ್ತು ಹೊಸ ಮ್ಯಾಕ್‌ಒಎಸ್‌ 10.13. ಹಾಗೆಯೇ, ವಾಯ್ಸ್‌ ಮತ್ತು ವಿಡಿಯೊ ಕಾಲ್‌ ಮಾಡಲು ಅಗತ್ಯವಿರುವ ಆಡಿಯೊ ಔಟ್‌ಪುಟ್‌ ಡಿವೈಸ್‌ ಮ್ತತು ಮೈಕ್ರೋಫೋನ್‌ ಇರಬೇಕು. ವಿಡಿಯೊ ಕಾಲ್‌ಗೆ ಕ್ಯಾಮೆರಾ ಅಗತ್ಯ. ನಿಮ್ಮ ಪಿಸಿ ಮತ್ತು ಸ್ಮಾರ್ಟ್‌ಫೋನ್‌ ಇಂಟರ್ನೆಟ್‌ಗೆ ಕನೆಕ್ಟ್ ಆಗಿರಬೇಕು. 

ಕರೆ ಮಾಡಲು ಹೀಗೆ ಮಾಡಿ

- ನಿಮ್ಮ ಆಪರೇಟಿಂಗ್‌ ಸಿಸ್ಟಮ್‌ನಲ್ಲಿವಾಟ್ಸ್‌ಆ್ಯಪ್‌ನ ಹೊಸ ಆವೃತ್ತಿಯನ್ನು ಡೌನ್ಲೋಡ್‌ ಮಾಡಿಕೊಂಡು ಇನ್ಸ್ಟಾಲ್‌ ಮಾಡಿಕೊಂಡಿರಬೇಕು. 

- ಡೆಸ್ಕ್‌ಟಾಪ್‌ನಲ್ಲಿರುವ ಆ್ಯಪ್‌ ಓಪನ್‌ ಮಾಡಿ ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ  ವಾಟ್ಸ್‌ಆ್ಯಪ್‌ ಬಳಸಿಕೊಂಡು ಕ್ಯೂಆರ್‌ ಸ್ಕ್ಯಾ‌ನಿಂಗ್‌ ಮೂಲಕ ಕಾನಿಧಿಗರ್‌ ಮಾಡಿಕೊಳ್ಳಿ.

- ಇಷ್ಟಾದ ಮೇಲೆ ಚಾಟ್‌ ವಿಂಡೋ ಟ್ಯಾಪ್‌ ಮಾಡಿ ಮತ್ತು ಅಲ್ಲಿನಿಮಗೆ ಬಲಬದಿಯ ಮೇಲ್ತುದಿಯಲ್ಲಿವಾಯ್ಸ್‌ ಮತ್ತು ವಿಡಿಯೊ ಕಾಲ್‌ ಐಕಾನ್‌ಗಳು ಕಾಣಿಸುತ್ತವೆ.

 - ವಾಯ್ಸ್ ಕಾಲ್‌ ಮಾಡಲು ವಾಯ್ಸ್‌ ಕಾಲ್‌ ಬಟನ್‌ ಮತ್ತು ವಿಡಿಯೊ ಕಾಲ್‌ ಮಾಡಲು ವಿಡಿಯೊ ಕಾಲ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ.

ವಾಯ್ಸ್‌ ಮತ್ತು ವಿಡಿಯೊ ಕಾಲ್‌ ಸ್ವೀಕರಿಸುವುದು ಹೇಗೆ?: ವಾಟ್ಸ್‌ಆ್ಯಪ್‌ ಮೂಲಕ ಕರೆ ಬಂದ ಕೂಡಲೇ ನಿಮ್ಮ ಡೆಸ್ಕ್‌ಟಾಪ್‌ ಮೇಲೆ ವಿಂಡೋ ಪಾಪ್‌ಅಪ್‌  ಆಗುತ್ತದೆ. ಆಗ ನೀವು ಕರೆಯನ್ನು ಸ್ವೀಕರಿಸಲು ರಿಸೀವ್‌ ಬಟನ್‌ ಮೇಲೆ ಕ್ಲಿಕ್‌ ಮಾಡಬೇಕು. ಕರೆ ಸ್ವೀಕರಿಸುವುದು ಬೇಡವಾಗಿದ್ದರೆ ಡಿಸ್‌ಕನೆಕ್ಟ್ ಬಟನ್‌ ಮೇಲೆ ಕ್ಲಿಕ್‌ ಮಾಡಬೇಕು.



ಸೋಮವಾರ, ಮಾರ್ಚ್ 22, 2021

Did You Addicted to Smartphone: ನೀವು ಸ್ಮಾರ್ಟ್‌‌ಫೋನ್‌ಗೆ ಅಡಿಕ್ಟ್ ಆಗಿದ್ದೀರಾ?

- ಮಲ್ಲಿಕಾರ್ಜುನ ತಿಪ್ಪಾರ
ಸ್ಮಾರ್ಟ್‌ ಫೋನ್‌ ಬಳಸೋಕೆ ಶುರು ಮಾಡಿದ ಮೇಲೆ ಓದುವುದಕ್ಕೆ ಆಗುತ್ತಿಲ್ಲ? ನಿದ್ದೆ ಸರಿಯಾಗಿ ಮಾಡಲು ಆಗುತ್ತಿಲ್ಲವೇ? ಟಾಯ್ಲೆಟ್‌ಗೆ ಹೋಗಬೇಕಾದರೂ ಸ್ಮಾರ್ಟ್‌ ಫೋನ್‌ ಕೈಯಲ್ಲೇ ಇರುತ್ತದೆಯೇ? ಮೂರೂ ಹೊತ್ತು ಮೊಬೈಲ್‌ನಲ್ಲೇ ಮುಳುಗಿರ್ತಿಯಾ ಅಂತಾ ಬೈತಿರ್ತಾರೆ ಅಂತ ಅನಿಸುತ್ತಿದೆಯಾ? 

ಹೌದು, ಎಂದಾದರೆ ಖಂಡಿತವಾಗಿಯೂ ನೀವು ಸ್ಮಾರ್ಟ್‌ ಫೋನ್‌ ಗೀಳಿಗೆ ಬಿದ್ದಿದ್ದೀರಿ ಎಂದರ್ಥ. ಅದನ್ನೇ ಮತ್ತೊಂದು ರೀತಿ ಹೇಳುವುದಾದರೆ, ಸ್ಮಾರ್ಟ್‌ ಫೋನ್‌ಗೆ ಸಿಕ್ಕಾಪಟ್ಟೆ ಅಡಿಕ್ಟ್  ಆಗಿದ್ದೀರಿ, ಅದಕ್ಕೆ ದಾಸರಾಗಿದ್ದೀರಿ, ಅದೊಂದು ರೀತಿಯಲ್ಲಿಚಟ ಆಗಿದೆ!

ನಮ್ಮ ಯಾವುದೇ ನಡವಳಿಕೆ, ಹವ್ಯಾಸ, ಚಟುವಟಿಕೆಗಳು ಯಾವಾಗ ಚಟಗಳಾಗಿ ಬದಲಾಗುತ್ತವೆಯೋ ಆಗ ಅವುಗಳಿಂದ ಅಪಾಯವೇ  ಹೆಚ್ಚು. ಸ್ಮಾರ್ಟ್‌ ಫೋನ್‌ ಕೂಡ ಹಾಗೆಯೇ, ಅದು ನಮ್ಮ ಅಗತ್ಯವನ್ನು ಪೂರೈಸುವ ಸಾಧನ. ಎಷ್ಟು ಅಗತ್ಯವಿದೆಯೋ ಅಷ್ಟೇ ಬಳಸಬೇಕು. ಆದರೆ, ನಾವೆಲ್ಲಅದನ್ನು ಅನಗತ್ಯವಾಗಿ, ಅಗತ್ಯ ಮೀರಿ ಬಳಸುತ್ತಿರುವ ಪರಿಣಾಮ ಅದಕ್ಕೆ ಅಡಿಕ್ಟ್ ಆಗಿದ್ದೇವೆ. ಇದರಿಂದ ಹೊರ ಬರಲು ಈ ಟಿಟ್ಸ್‌ ಟ್ರೈ ಮಾಡಿ.

1. ಯಾವಾಗ ಬಳಸಿಕೊಳ್ಳಬೇಕು
ಫೋನ್‌ ಅನ್ನು ಯಾವಾಗ ಬಳಸಿಕೊಳ್ಳಬೇಕೆಂದು ನೀವೇ ನಿರ್ಧರಿಸಿಕೊಳ್ಳಿ. ದಿನದ ಇಂತಿಂಥ ಸಮಯದಲ್ಲಿಮಾತ್ರವೇ ಬಳಸಿ. ಉಳಿದ ಸಮಯದಲ್ಲಿಅದರಿಂದ ದೂರವಿರಿ. ಕಚೇರಿಯಲ್ಲಿಮಾತ್ರವೇ ನಿಮಗೆ ಫೋನ್‌ ಅಗತ್ಯ ಹೆಚ್ಚಿದ್ದರೆ ಅಲ್ಲಿಮಾತ್ರವೇ ಬಳಕೆ ಇರಲಿ. ಮನೆಯಲ್ಲಿಅದರಿಂದ ದೂರವಿರಿ.

2.ಒಂದಿಷ್ಟು ಗಂಟೆ ಸ್ವಿಚ್ಡ್‌ ಆಫ್‌ ಮಾಡಿ
ದಿನದಲ್ಲಿನಿಮಗೆ ಅಗತ್ಯವಿಲ್ಲದ ಸಮಯವನ್ನು ಗುರುತಿಸಿಕೊಂಡು ಆ ಸಮಯದಲ್ಲಿಫೋನ್‌ ಸ್ವಿಚ್ಡ್‌ ಆಫ್‌ ಮಾಡುವುದನ್ನು ರೂಢಿಸಿಕೊಳ್ಳಿ. ಹಾಗೆಯೇ, ಕಾರು ಚಾಲನೆ ಮಾಡುವಾಗ, ಜಿಮ್‌ ಮಾಡುವಾಗ, ಊಟ ಮಾಡುವಾಗ ಅಥವಾ ಮಕ್ಕಳೊಂದಿಗೆ ಆಟ ಆಡುವಾಗ ಫೋನ್‌ ಮುಟ್ಟಲು ಹೋಗಬೇಡಿ. ನಿಮ್ಮ ಬಾತ್‌ ರೂಮ್‌ಗೆ ಫೋನ್‌ ನಿಷೇಧಿಸಿ.

3.ಹಾಸಿಗೆಗೆ ಫೋನ್‌ ಬರಕೂಡದು
ಹೌದು, ಬಹಳಷ್ಟು ಜನ ಮಲಗುವ ಮುನ್ನ ಸುಮಾರು ಹೊತ್ತು ಸ್ಮಾರ್ಟ್‌ ಫೋನ್‌ ಬಳಸುತ್ತಾರೆ. ಇದೊಂದು ದುರಭ್ಯಾಸ. ನಿಮ್ಮ ನಿದ್ದೆ ಮತ್ತು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಫೋನ್‌ ಹೊರಸೂಸುವ ನೀಲಿ ಕಿರಣಗಳು ನಿದ್ದೆಯನ್ನು ಹಾಳು ಮಾಡುತ್ತವೆ. ಫೋನ್‌ನಲ್ಲಿಇ-ಬುಕ್‌ ಓದುವ ಬದಲು ರಿಯಲ್‌ ಪುಸ್ತಕಗಳನ್ನೇ ಓದಿ. 

4.ಪರ್ಯಾಯ ಹುಡುಕಿಕೊಳ್ಳಿ
ಒಂದೊಮ್ಮೆ ನಿಮಗೆ ಬೋರ್‌ ಆಗುತ್ತಿದೆ, ಒಂಟಿತನ ಎನಿಸುತ್ತಿದೆ ಎಂದು ಫೋನ್‌ ಕೈಗೆತ್ತಿಕೊಳ್ಳಬೇಡಿ. ಬದಲಿಗೆ ಪರ್ಯಾಯ ದಾರಿ ಹುಡುಕಿಕೊಳ್ಳಿ. ಹೆಲ್ತ್  ಆಕ್ಟಿವಿಟಿ ಮಾಡಿ. ಮ್ಯೂಸಿಕ್‌ ಸಿಸ್ಟಮ್‌ನಲ್ಲಿಸಂಗೀತ ಆಲಿಸಿ; ಆಡಿ; ಹಾಡಿ. ಫೋನ್‌ ಬಿಟ್ಟು ಬೇರೆ ಏನಾದರೂ ಮಾಡಿಯಷ್ಟೆ.

5.ಸೋಷಿಯಲ್‌ ಮೀಡಿಯಾ ಆ್ಯಪ್‌ ತೆಗೆಯಿರಿ
ಸ್ಮಾರ್ಟ್‌ ಫೋನ್‌ನಲ್ಲಿನಾವು ಹೆಚ್ಚಿನ ಸಮಯವನ್ನು ಸೋಷಿಯಲ್‌ ಮೀಡಿಯಾಗಳಲ್ಲೇ ಕಳೆಯುತ್ತೇವೆ. ಇದರಿಂದಾಗಿ ನಮ್ಮ ಜೀವನ ಅಸಮತೋಲನವಾಗುತ್ತಿದೆ. ಹಾಗಾಗಿ, ಸೋಷಿಯಲ್‌ ಮೀಡಿಯಾ ಆ್ಯಪ್‌ಗಳಿಂದ ಹೊರಬನ್ನಿ. ಇಲ್ಲವೇ ಎಷ್ಟು ಅಗತ್ಯವಿದೆಯೋ ಅಷ್ಟೇ  ಬಳಸಿ. ಇಡೀ ದಿನ ಅಲ್ಲೇ ಇರಬೇಡಿ. ಸೋಷಿಯಲ್‌ ಮೀಡಿಯಾ ಆಚೆಯೂ ಲೈಫ್‌ ಇದೆ.

6. ಪದೇ ಪದೆ ಚೆಕ್‌ ಮಾಡಬೇಡಿ
ಪದೇಪದೆ ಸ್ಮಾರ್ಟ್‌ ಫೋನ್‌ ಕೈಗೆತ್ತಿಕೊಂಡು ಮೆಸೆಜ್‌ ಬಂದಿದೆಯಾ, ಸೋಷಿಯಲ್‌ ಮೀಡಿಯಾ ನೋಟಿಫಿಕೇಷನ್‌ ಬಂದಿದೆಯಾ, ಮೇಲ್‌ಗಳು ಬಂದಿದೆಯಾ ಅಂತಾ ಚೆಕ್‌ ಮಾಡೋದು ಹೆಚ್ಚುತ್ತಿದೆ. ಈ ಪ್ರವೃತ್ತಿಯೇ ಮುಂದೆ ಚಟವಾಗಿ ಬಿಡುತ್ತದೆ. ಹಾಗಾಗಿ, ಪದೇಪದೆ ಸ್ಮಾರ್ಟ್‌ ಫೋನ್‌ ಚೆಕ್‌ ಮಾಡಲು ಹೋಗಬೇಡಿ.

7. ಥಿಯೇಟರ್‌ನಲ್ಲಿಸಿನಿಮಾ ನೋಡಿ
ಇತ್ತೀಚಿನ ದಿನಗಳಲ್ಲಿಬಹಳಷ್ಟು ಮಂದಿ ಸ್ಮಾರ್ಟ್‌ ಫೋನ್‌ನಲ್ಲಿಸಿನಿಮಾ ನೋಡಲು ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇದರಿಂದಾಗಿಯೇ ಹೆಚ್ಚಿನ ಸಮಯವನ್ನು ಅವರು ಸ್ಮಾರ್ಟ್‌ ಫೋನ್‌ಗಳಲ್ಲಿಕಳೆಯುತ್ತಿದ್ದಾರೆ. ಇದರಿಂದ ಹೊರ ಬರಲು ಚಿತ್ರಮಂದಿರಗಳಲ್ಲಿಸಿನಿಮಾ ನೋಡಿ  ಅಥವಾ ವಾರಕ್ಕೆ ನಿರ್ದಿಷ್ಟ ಸಮಯವನ್ನು ಇದಕ್ಕಾಗಿಯೇ ಮೀಸಲಿಡಿ.

ಈ ಲೇಖನವು ವಿಜಯ ಕರ್ನಾಟಕದ 2021ರ ಮಾರ್ಚ್ 22ರ ಸಂಚಿಕೆಯಲ್ಲಿ ಪ್ರಕಟವಾಗಿದೆ.




 

Mithali Raj is a 'Queen' of Indian Women Cricket ಕ್ರಿಕೆಟ್‌ನ 'ರಾಣಿ' ಮಿಥಾಲಿ ರಾಜ್‌

20 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ‘ರಾಣಿ’ಯಂತೆ ಮೆರೆಯುತ್ತಿರುವ, ದಾಖಲೆಗಳ  ಮೇಲೆ ದಾಖಲೆ ಪೇರಿಸುತ್ತಿರುವ ಮಿಥಾಲಿ ರಾಜ್‌ ಸ್ಫೂರ್ತಿಗೆ ಮತ್ತೊಂದು ಹೆಸರು.


- ಮಲ್ಲಿಕಾರ್ಜುನ ತಿಪ್ಪಾರ
ಹತ್ತು ಸಾವಿರ ಅಂತಾರಾಷ್ಟ್ರೀಯ ರನ್‌ ಗಳಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್‌, ವಿಶ್ವದ ಎರಡನೇ ಮಹಿಳಾ ಕ್ರಿಕೆಟರ್‌ ಎಂಬ ಖ್ಯಾತಿಗೆ ಪಾತ್ರರಾದ ಮಿಥಾಲಿ ರಾಜ್‌ ಸಾಧನೆ ಕುರಿತು Mithali + Magic = Milestone ಎಂಬ ಟ್ವೀಟ್‌ವೊಂದನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಮಾಡಿತ್ತು. ಇದು ಉತ್ಪ್ರೇಕ್ಷೆ ಏನಲ್ಲ. ಮಿಥಾಲಿ ಅವರ ಬ್ಯಾಟಿನಿಂದ ಈಗ ಚಿಮ್ಮುವ ಪ್ರತಿ ರನ್ನೂ ಮೈಲುಗಲ್ಲೇ!

ಪುರುಷರ ಕ್ರಿಕೆಟ್‌ ಪಾರಮ್ಯವಿರುವ ಭಾರತದಂಥ ದೇಶದಲ್ಲಿ20 ವರ್ಷಗಳ ಕಾಲ ಮಹಿಳೆಯೊಬ್ಬಳು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುವುದು, ಹತ್ತು ಸಾವಿರ ರನ್‌ ಪೂರೈಸುವುದು ಅಸಾಧಾರಣ ಸಾಧನೆಯೇ ಸರಿ. ಇಂಗ್ಲೆಂಡ್‌ನ ಚಾರ್ಲೊಟ್‌ ಎಡ್ವರ್ಡ್ಸ್ ಈ ಮೊದಲು ಹತ್ತು ಸಾವಿರ ರನ್‌ ಪೂರೈಸಿದ ಮೊದಲ ದಾಂಡಿಗಳು. ಈಗ ಸಾಧನೆ ಮಾಡಿದ ಎರಡನೇ ಬ್ಯಾಟರ್‌ ಮಿಥಾಲಿಯಾಗಿದ್ದಾರೆ. ಜೊತೆಗೆ ಒನ್‌ಡೇ ಮಹಿಳಾ ಕ್ರಿಕೆಟ್‌ನಲ್ಲಿ7000 ರನ್‌ ಪೂರೈಸಿದ ಮೊದಲ ಬ್ಯಾಟರ್‌ ಇವರು. ಭಾರತದ ಮಟ್ಟಿಗೆ ಅವರೀಗ ಬರೀ ಕ್ರಿಕೆಟರ್‌ ಆಗಿ ಉಳಿದಿಲ್ಲ. ಮಿಥಾಲಿ ರಾಜ್‌ ಎನ್ನುವುದು ಸ್ಫೂರ್ತಿಗೆ ಪರ್ಯಾಯವಾಗಿದೆ. ‘ಮಿಥಾಲಿ’ ಈಗ ಮಹಿಳಾ ಕ್ರಿಕೆಟನ್ನು ಅಕ್ಷ ರಶಃ ‘ರಾಜ್‌’ ಮಾಡುತ್ತಿದ್ದಾರೆ. 

ಟೆಸ್ಟ್‌, ಒನ್‌ಡೇ ಹಾಗೂ ಟ್ವೆಂಟಿ20 ಕ್ರಿಕೆಟ್‌ ಮೂರು ಮಾದರಿಗಳಲ್ಲಿತಮ್ಮ ಪ್ರತಿಭೆಯನ್ನು ಜಗಜ್ಜಾಹೀರುಗೊಳಿಸಿದ ಮಿಥಾಲಿ, ಒನ್‌ಡೇ ಕ್ರಿಕೆಟ್‌ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ಟ್ವೆಂಟಿ20 ಕ್ರಿಕೆಟ್‌ಗೆ 2019ರಲ್ಲಿನಿವೃತ್ತಿಯನ್ನು ಘೋಷಿಸಿದ್ದಾರೆ. ಈಗ ಅವರಾಡುವ ಪ್ರತಿ ಪಂದ್ಯ, ಹೊಡೆಯುವ ಪ್ರತಿ ರನ್‌, ಕ್ಯಾಪ್ಟನ್ಸಿ ಪ್ರತಿಯೊಂದೂ ದಾಖಲೆಗಳಾಗಿ ರೂಪಾಂತರವಾಗುತ್ತಿವೆ. ಮೊನ್ನೆಯಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯ ಸ್ಕೋರ್‌ಬೋರ್ಡ್‌ ಸಾಕ್ಷಿಯಾಗಿದೆ.

‘‘ಯಶಸ್ಸಿನೊಂದಿಗೆ ಬರುವ ಸೋಲುಗಳನ್ನು ಸ್ವೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು; ಅವುಗಳಿಂದ ಪಾಠ ಕಲಿಯಬೇಕೇ ಹೊರತು ಬೇಜಾರಾಗಬಾರದು. ವೃತ್ತಿಪರ ಜಗತ್ತಿಗೆ ಕಾಲಿಡುವ ಮುನ್ನ ನಿಮ್ಮ ಆಟವನ್ನು ಎಂಜಾಯ್‌ ಮಾಡಿ,’’ ಎಂದು ಕಿರಿಯರಿಗೆ ಕಿವಿಮಾತು ಹೇಳುವ ಮಿಥಾಲಿ ಸೋಲು ಮತ್ತು ಗೆಲುವುಗಳನ್ನು ಅಷ್ಟೇ ಸಮಾನವಾಗಿ ಸ್ವೀಕರಿಸಿದವರು. ಗೆದ್ದಾಗ ಆಕಾಶಕ್ಕೆ ನೆಗೆಯದೇ; ಸೋತಾಗ ಪಾತಾಳಕ್ಕೆ ಇಳಿಯದೇ ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸುವ ಗುಣವನ್ನು ಬೆಳೆಸಿಕೊಂಡಿದ್ದಾರೆ. ಆದರೆ, ಅವರಲ್ಲಿರುವ ಗೆಲ್ಲುವ ‘ಹಠ’ ಸ್ವಭಾವವೇ ಅವರನ್ನು ಇಲ್ಲಿಯವರೆಗೂ ಕರೆ ತಂದಿದೆ. ಈ ಮನೋಭಾವವನ್ನು ನೀವು ಕ್ರಿಕೆಟ್‌ ಅಂಗಣದಲ್ಲಿಅವರಿಂದ ನಿರೀಕ್ಷಿಸಬಹುದು. ನಾಯಕತ್ವ ಪ್ರದರ್ಶಿಸುವಾಗಲೂ ಸಮಚಿತ್ತ ಭಾವ ಪ್ರದರ್ಶಿಸುತ್ತಲೇ ಗೆಲ್ಲುವ ಹಠವನ್ನು ನಾವು ನೋಡಬಹುದು. ಅವರ ಆಟದಲ್ಲೂಇದೇ ತಾದಾತ್ಮ್ಯತೆಯನ್ನು ನೀವು ಗಮನಿಸಬಹುದು.

ರಾಜಸ್ಥಾನದ ಜೋಧಪುರದ ತಮಿಳು ಕುಟುಂಬದಲ್ಲಿ1982 ಡಿಸೆಂಬರ್‌ 3ರಂದು ಮಿಥಾಲಿ ರಾಜ್‌ ಜನಿಸಿದರು. ತಂದೆ ದೊರೈರಾಜ್‌ ಅವರು ವಾಯುಪಡೆಯಲ್ಲಿಏರ್ಮನ್‌(ವಾರೆಂಟ್‌ ಆಫೀಸರ್‌) ಆಗಿದ್ದರು. ತಾಯಿ ಲೀಲಾ ರಾಜ್‌. ತಮ್ಮ ಹತ್ತನೇ ವಯಸ್ಸಿನಲ್ಲೇ ರಾಜ್‌ ತನ್ನ ಸಹೋದರನೊಂದಿಗೆ ಕ್ರಿಕೆಟ್‌ ಕಲಿಕೆ ಆರಂಭಿಸಿದರು. ಹೈದರಾಬಾದ್‌ನ ಕೀಸ್‌ ಹೈಸ್ಕೂಲ್‌ ಫಾರ್‌ ಗರ್ಲ್ಸ್‌ ಮತ್ತು ಸಿಕಂದರಾಬಾದ್‌ನ ಕಸ್ತೂರ್ಬಾ ಗಾಂಧಿ ಜೂನಿಯರ್‌ ಮಹಿಳಾ ಕಾಲೇಜ್‌ನಲ್ಲಿಓದಿದ್ದಾರೆ. ಸದ್ಯ ಹೈದರಾಬಾದ್‌ನಲ್ಲಿವಾಸ. 14ನೇ ವಯಸ್ಸಿನಲ್ಲೇ ರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ತಂಡಕ್ಕೆ ಎಂಟ್ರಿ ಪಡೆಯುವ ಸಾಧ್ಯತೆಗಳಿತ್ತು. 1997ರ ಮಹಿಳಾ ಕ್ರಿಕೆಟ್‌ ವಿಶ್ವ ಕಪ್‌ ತಂಡಕ್ಕೆ ಮಿಥಾಲಿ ರಾಜ್‌ ಅವರನ್ನು ಪರಿಗಣಿಸಲಾಗಿತ್ತು. ಆದರೆ, ಅಂತಿಮ ತಂಡದಲ್ಲಿಸೇರಿಸಿಕೊಂಡಿರಲಿಲ್ಲ. ಮುಂದೆ 1999ರಲ್ಲಿಮಿಥಾಲಿ ರಾಜ್‌, ಐರ್ಲೆಂಡ್‌ ವಿರುದ್ಧ ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ, ಶತಕ ಬಾರಿಸಿದರು. ಅಲ್ಲಿಂದ ಶುರುವಾದ ಕ್ರಿಕೆಟ್‌ ಜರ್ನಿ ಹಲವು ದಾಖಲೆಗಳೊಂದಿಗೆ ಮುಂದುವರಿದಿದೆ. 

2001-02ರಲ್ಲಿದಕ್ಷಿಣ ಆಫ್ರಿಕಾದ ವಿರುದ್ಧ ಟೆಸ್ಟ್‌ಗೂ ಕಾಲಿಟ್ಟರು. ಲಖನೌದಲ್ಲಿನಡೆದ 

ಟೆಸ್ಟ್‌ನಲ್ಲಿಮೂರನೇ ಟೆಸ್ಟ್‌ನಲ್ಲೇ ಮಿಥಾಲಿ ರಾಜ್‌ 209 ರನ್‌ ಚಚ್ಚುವ ಮೂಲಕ ಕರೆನ್‌ ರೋಲ್ಟನ್‌ ಅವರ ಗರಿಷ್ಠ ವೈಯಕ್ತಿಕ ಸ್ಕೋರ್‌ ದಾಖಲೆಯನ್ನು ಪುಡಿ ಪುಡಿ ಮಾಡಿದರು. ಆಗ ಮಿಥಾಲಿಗೆ ಕೇವಲ 19 ವರ್ಷ. ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ನಲ್ಲೂಅವರು 214 ರನ್‌ ಮಾಡಿದ್ದರು. 2004ರಲ್ಲಿಈ ದಾಖಲೆಯನ್ನು ಪಾಕಿಸ್ತಾನದ ಕಿರನ್‌ ಬಲೂಚ್‌ ಅವರು ವೆಸ್ಟ್‌ ಇಂಡೀಸ್‌ ವಿರುದ್ಧ 242 ರನ್‌ ಗಳಿಸುವ ಮೂಲಕ ಮುರಿದರು. 

ದಕ್ಷಿಣ ಆಫ್ರಿಕಾದಲ್ಲಿನಡೆದ 2005ರ ವಿಶ್ವ ಕಪ್‌ ಪಂದ್ಯಾವಳಿಯಲ್ಲಿತಂಡವನ್ನು ಮುನ್ನಡೆಸಿದ ರಾಜ್‌, ಮೊದಲ ಬಾರಿಗೆ ಭಾರತ ಫೈನಲ್‌ ತಲುಪುವುದಕ್ಕೂ  ಕಾರಣಕರ್ತರಾದರು. ಆದರೆ, ಕಪ್‌ ಗೆಲ್ಲಲಾಗಲಿಲ್ಲ. 2006ರಲ್ಲಿಭಾರತೀಯ ಮಹಿಳಾ ತಂಡ ಮೊದಲ ಬಾರಿಗೆ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯನ್ನು ಗೆದ್ದುಕೊಂಡಿತ್ತು. ಮಿಥಾಲಿ ತಂಡವನ್ನು ಮುನ್ನಡೆಸಿದ್ದರು. ಹಾಗೆಯೇ ಏಷ್ಯಾ ಕಪ್‌ನಲ್ಲಿಒಂದೂ ಪಂದ್ಯವನ್ನು ಸೋಲದೇ ಅಜೇಯರಾಗಿ ಪಂದ್ಯಾವಳಿಯನ್ನು ಗೆದ್ದುಕೊಂಡಿತ್ತು ರಾಜ್‌ ನೇತೃತ್ವದ ಭಾರತೀಯ ತಂಡ.

2013ರ ಮಹಿಳಾ ವಿಶ್ವಕಪ್‌ ಪಂದ್ಯಾವಳಿ ವೇಳೆ ಮಿಥಾಲಿ ಅವರು ಒನ್‌ಡೇ ಕ್ರಿಕೆಟ್‌ನಲ್ಲಿಮೊದಲನೆಯ ರಾರ‍ಯಂಕ್‌ನಲ್ಲಿದ್ದರು. ಮಹಿಳಾ ಒಂಡೇ ಕ್ರಿಕೆಟ್‌ನಲ್ಲಿ5,500 ರನ್‌ ಗಳಿಸಿದ ಎರಡನೇ ಆಟಗಾರ್ತಿ ಎಂಬ ಕೀರ್ತಿಗೆ 2017ರಲ್ಲಿಪಾತ್ರರಾದರು. ಹಾಗೆಯೇ, 20ಟ್ವೆಂಟಿ ಮತ್ತು ಒನ್‌ಡೇ ಕ್ರಿಕೆಟ್‌ನಲ್ಲಿಅತಿ ಹೆಚ್ಚು ಪಂದ್ಯಗಳಿಗೆ ನಾಯಕತ್ವ ವಹಿಸಿದ ಭಾರತದ ಮೊದಲ ಆಟಗಾರ್ತಿ. 2017ರ ಜುಲೈನಲ್ಲಿ6000 ರನ್‌ ಪೂರೈಸಿದ ಮೊದಲ ಆಟಗಾರ್ತಿಯಾದರು. 2017ರ ಮಹಿಳಾ ವಿಶ್ವಕಪ್‌ನಲ್ಲಿಭಾರತೀಯ ತಂಡ ಅದ್ಭುತ ಪ್ರದರ್ಶನ ತೋರಿತ್ತು. ಪರಿಣಾಮ ರಾಜ್‌ ನೇತೃತ್ವದ ತಂಡ ಫೈನಲ್‌ಗೆ ಏರಿತ್ತು. ಆದರೆ, ಅಂತಿಮ ಹಣಾಹಣಿಯಲ್ಲಿಇಂಗ್ಲೆಂಡ್‌ ವಿರುದ್ಧ 9 ರನ್‌ಗಳಿಂದ ಸೋಲಬೇಕಾಯಿತು.

ಸದ್ಯ ಮಿಥಾಲಿ ಅಂತಾರಾಷ್ಟ್ರೀಯ ಮಹಿಳಾ ಒಂದು ದಿನದ ಕ್ರಿಕೆಟ್‌ನಲ್ಲಿ7000 ರನ್‌ ಗಳಿಸಿದ ವಿಶ್ವದ ಮೊದಲ ಆಟಗಾರ್ತಿಯಾಗಿದ್ದಾರೆ. ಹಾಗೆಯೇ ಸತತ ಏಳು ಅರ್ಧ ಶತಕ ಗಳಿಸಿದ ದಾಖಲೆ, ಒನ್‌ಡೇಯಲ್ಲಿಅತಿ ಹೆಚ್ಚು ಅರ್ಧಶತಕ ಗಳಿಸಿದ ದಾಖಲೆ, 2018ರಲ್ಲಿನಡೆದ ಮಹಿಳಾ ಟ್ವೆಂಟಿ20 ವಿಶ್ವಕಪ್‌ನಲ್ಲಿ2000 ರನ್‌ ಪೂರೈಸಿದ ಮೊದಲ ಭಾರತದ ಕ್ರಿಕೆಟರ್‌ ಎಂಬ ದಾಖಲೆ, ಐಸಿಸಿ ಒನ್‌ಡೇ ವಿಶ್ವಕಪ್‌ನಲ್ಲಿಒಂದಕ್ಕಿಂತ ಹೆಚ್ಚು ಬಾರಿ ಫೈನಲ್‌ ಪಂದ್ಯದಲ್ಲಿನಾಯಕತ್ವ(2005 ಮತ್ತು 2017) ವಹಿಸಿದ ಮೊದಲ ಆಟಗಾರ್ತಿ ದಾಖಲೆ, 2019ರಲ್ಲಿನ್ಯೂಜಿಲೆಂಡ್‌ ವಿರುದ್ಧ ಒನ್‌ಡೇ ಸರಣಿಯಲ್ಲಿ200 ಪಂದ್ಯಗಳನ್ನಾಡಿದ ಮೊದಲ ಮಹಿಳಾ ಕ್ರಿಕೆಟರ್‌ ದಾಖಲೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ20 ವರ್ಷ ಪೂರೈಸಿದ ಮೊದಲ ಮಹಿಳಾ ಆಟಗಾರ್ತಿ ದಾಖಲೆ! ಉಶ್ಶಪ್ಪಾ.. ಎಷ್ಟೊಂದು ದಾಖಲೆಗಳು!

ಇಷ್ಟೆಲ್ಲದಾಖಲೆಗಳನ್ನು ಗುಡ್ಡೆ ಹಾಕಿದ ಮೇಲೆ ಪ್ರಶಸ್ತಿಗಳು ಬಾರದೆ ಹೋಗುತ್ತವೆಯೇ? ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಹಲವು ಪ್ರಶಸ್ತಿಗಳು ರಾಜ್‌ ಅವರನ್ನು ಅರಸಿ ಬಂದಿವೆ. 2017ರಲ್ಲಿವಿಸ್ಡನ್‌ ಲೀಡಿಂಗ್‌ ವುಮನ್‌ ಕ್ರಿಕೆಟರ್‌, 2003ರಲ್ಲಿಅರ್ಜುನ್‌ ಅವಾರ್ಡ್‌, 2015ರಲ್ಲಿಪದ್ಮಶ್ರೀ ಪ್ರಶಸ್ತಿ... ಹೀಗೆ ಹಲವು ಪ್ರಶಸ್ತಿಗಳು ಅವರ ಶೋಕೇಶ್‌ ಸೇರಿಕೊಂಡಿವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ20 ವರ್ಷ ಪೂರೈಸಿದ್ದರೂ ಅವರ ಕ್ರಿಕೆಟ್‌ ಪ್ರತಿಭೆಯ ಹೊಳಪು ದಿನದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನೂ ಐದಾರು ವರ್ಷ ಕ್ರಿಕೆಟ್‌ ಆಡುವ ಕ್ಷ ಮತೆ ಅವರಲ್ಲಿದೆ ಎಂಬುದನ್ನು ಅವರು ಗಳಿಸುತ್ತಿರುವ ರನ್‌ಗಳೇ ಸಾರಿ ಹೇಳುತ್ತಿವೆ. ಮೂರೂ ಮಾದರಿಯ ಕ್ರಿಕೆಟ್‌ಗಳಲ್ಲಿಒಂದು ದಿನದ ಕ್ರಿಕೆಟ್‌ ಪಂದ್ಯವನ್ನೇ ಹೆಚ್ಚಾಗಿ ಇಷ್ಟಪಡುವ ಮಿಥಾಲಿಗೆ, ಬ್ಯಾಟಿಂಗ್‌ಗೆ ಸಚಿನ್‌ ತೆಂಡೂಲ್ಕರ್‌; ಕ್ಯಾಪ್ಟನ್‌ಶಿಪ್‌ಗೆ ರಿಕಿ ಪಾಂಟಿಂಗ್‌ ಆದರ್ಶ.

ಮಿಥಾಲಿ ಗೆಜ್ಜೆ ಕಟ್ಟಿಕೊಂಡರೆ ಭರತನಾಟ್ಯದ ಮೂಲಕ ಮನೆಸೂರೆಗೊಳ್ಳುವಂತೆ ಮಾಡಬಲ್ಲರು. ತಾಯಿ ಮತ್ತು ನೃತ್ಯ ಗುರು ತಮ್ಮ ಸ್ಫೂರ್ತಿಯೆಂದು ಅವರು ಆಗಾಗ ಹೇಳುತ್ತಾರೆ. ರಸಮಲಾಯಿ ಮತ್ತು ಪಿಸ್ತಾ ಐಸ್‌ಕ್ರೀಮ್‌ ಇಷ್ಟಪಡುವ ಮಿಥಾಲಿಗೆ ಅಡುಗೆ ಮತ್ತು ಹಾಡಲು ಬರುವುದಿಲ್ಲವಂತೆ. ಹಠವೇ ತಮ್ಮ ದೊಡ್ಡ ಶಕ್ತಿ ಎಂದು ಹೇಳಿಕೊಳ್ಳುವ ಮಿಥಾಲಿ ಅದರಿಂದಲೇ ಇಂದು ಲೆಜೆಂಡ್‌ ಸ್ಥಾನಕ್ಕೇರಿದ್ದಾರೆ. ಶಹಬ್ಬಾಸ್‌ ಮಿಥು!


ಈ ಲೇಖನವು ವಿಜಯ ಕರ್ನಾಟಕ ಪತ್ರಿಕೆಯ 2021ರ ಮಾರ್ಚ್ ತಿಂಗಳ 21ನೇ ತಾರೀಖಿನ ಸಂಚಿಕೆಯಲ್ಲಿ ಪ್ರಕಟವಾಗಿದೆ



 

ಸೋಮವಾರ, ಮಾರ್ಚ್ 15, 2021

How to secure your Facebook profile?: ಫೇಸ್‌ಬಕ್ ಖಾತೆ ಸುರಕ್ಷಿತವಾಗಿಡುವುದು ಹೇಗೆ?

- ಮಲ್ಲಿಕಾರ್ಜುನ ತಿಪ್ಪಾರ
ನಾವು ಈಗ ಸೋಷಿಯಲ್ ಮೀಡಿಯಾ ಯುಗದಲ್ಲಿ ಬದುಕುತ್ತಿದ್ದೇವೆ. ಸೋಷಿಯಲ್ ಮೀಡಿಯಾಗಳಿಲ್ಲದೇ ಬದುಕೇ ಇಲ್ಲ ಎನ್ನುವಷ್ಟರಮಟ್ಟಿಗೆ ನಾವು ಅವುಗಳಿಗೆ ದಾಸರಾಗಿದ್ದೇವೆ. ಈ ಜಾಲತಾಣಗಳಿಂದ ನಮಗೆ ಲಾಭ ಮತ್ತು ನಷ್ಟಗಳೆರಡೂ ಉಂಟು. ಅವುಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಅದು ನಿಂತಿದೆ.

ಸೋಷಿಯಲ್ ಮೀಡಿಯಾಗಳ ಪೈಕಿ ಫೇಸ್‌ಬುಕ್ ಜನಪ್ರಿಯವಾಗಿರುವ ತಾಣವಾಗಿದೆ. ಅಂದಾಜು 2.8 ಶತಕೋಟಿ ಬಳಕೆದಾರರು ಫೇಸ್‌ಬುಕ್‌ನಲ್ಲಿ ಸಕ್ರಿಯವಾಗಿದ್ದಾರೆ ಎಂದರೆ ಅದರ ಅಗಾಧತೆಯನ್ನು ನೀವು ತಿಳಿದುಕೊಳ್ಳಬಹುದು. 

ಭಾರತದಲ್ಲಂತೂ ಫೇಸ್‌ಬುಕ್  ಸೇರಿದಂತೆ ಸೋಷಿಯಲ್ ಮೀಡಿಯಾ ತಾಣಗಳಲ್ಲಿ ಜನರು ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಆನ್‌ಲೈನ್ ಮೂಲಕ ಸ್ನೇಹಿತರನ್ನು ಸಂಪಾದಿಸುವುದು, ನಿಮ್ಮ ಪ್ರೀತಿ ಪಾತ್ರರೊಂದಿಗೆ ಫೋಟೊ, ವಿಡಿಯೋಗಳನ್ನು ಹಂಚಿಕೊಳ್ಳುವುದು ಇತ್ಯಾದಿ ಚಟುವಟಿಕೆಗಳಿಗೆ ಈ ತಾಣಗಳು ಅವಕಾಶವನ್ನು ಕಲ್ಪಿಸಿಕೊಡುತ್ತೇವೆ. ಈ ಫೇಸ್‌ಬುಕ್ ತಾಣವು ಎಲ್ಲೆಲ್ಲೋ ಇದ್ದವರನ್ನು ಒಂದೇ ಕ್ಲಿಕ್‌ನಲ್ಲಿ ಹತ್ತಿರವಾಗಿಸುತ್ತವೆ ಎಂಬುದು ಅಷ್ಟೇ ಸತ್ಯ. ಆದರೆ, ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಅದರಿಂದ ಅಪಾಯಗಳ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆ ಅಷ್ಟೇ ಖರೆ.

ಸಮುದ್ರದ ರೀತಿಯಲ್ಲಿರುವ ಈ ಫೇಸ್‌ಬುಕ್‌ನಲ್ಲಿ ಕೊಂಚ ಯಾಮಾರಿದರೂ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಫೇಸ್‌ಬುಕ್‌ನಲ್ಲಿ ಒಳ್ಳೆಯವರು ಸಕ್ರಿಯರಾಗಿರುವಂತೆ ಕೆಟ್ಟ ಬುದ್ಧಿಯವರೂ ಇದ್ದಾರೆ. ಹಾಗಾಗಿ ನಿಮ್ಮ ಪ್ರೊಫೈಲ್‌ನಲ್ಲಿರುವ ಮಾಹಿತಿಯನ್ನು, ನಿಮ್ಮ ಫೋಟೊಗಳನ್ನು ಕದ್ದು ಕುಕೃತ್ಯಗಳಿಗೆ ಬಳಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ನಾವು ಫೇಸ್‌ಬುಕ್‌ನಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಬಳಕೆದಾರರ ಸುರಕ್ಷತೆಗಾಗಿ ಫೇಸ್‌ಬುಕ್ ಕೂಡ ಹಲವು ಟೂಲ್‌ಗಳನ್ನು ಒದಗಿಸಿದೆ. ಅವುಗಳನ್ನು ಬಳಸಿಕೊಂಡು ನಿಮ್ಮ ಫೇಸ್‌ಬುಕ್ ಪುಟಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದು. 

 ಪ್ರೊಫೈಲ್ ಸುರಕ್ಷತೆಗೆ ಹೀಗೆ ಮಾಡಿ

ಪ್ರೊಫೈಲ್ ಲಾಕ್ ಮಾಡಿ
ಸುರಕ್ಷತೆಯ ದೃಷ್ಟಿಯಿಂದ ಇದೊಂದು ಅತ್ತುತ್ಯಮ ಆಯ್ಕೆಯಾಗಿದೆ. ನೀವು ನಿಮ್ಮ ಪ್ರೊಫೈಲ್‌ ಅನ್ನು ಲಾಕ್ ಮಾಡಿದರೆ, ಯಾರಿಗೂ ನಿಮ್ಮ ಖಾತೆಯ ವಿವರವನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಮ ಫ್ರೆಂಡ್ ಲಿಸ್ಟ್‌ನಲ್ಲಿದ್ದವರಿಗೆ ಮಾತ್ರವೇ ನಿಮ್ಮ ಪ್ರೊಫೈಲ್‌ ಅಕ್ಸೆಸ್ ಸಾಧ್ಯವಾಗುತ್ತದೆ. ಒಂದೊಮ್ಮೆ ಅಪರಿಚಿತರು ನಿಮ್ಮ  ಪ್ರೊಫೈಲ್‌ ನೋಡಬೇಕಾದರೆ ಅವರು ನಿಮಗೆ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸಬೇಕು ಮತ್ತು ಅದನ್ನು ಅಕ್ಸೆಪ್ಟ್ ಮಾಡಿದಾಗ ಮಾತ್ರ ಪ್ರೊಫೈಲ್ ನೋಡಲು ಸಾಧ್ಯವಾಗುತ್ತದೆ. ಪ್ರೊಫೈಲ್ ಲಾಕ್ ಮಾಡಿದರೆ, ಹೊರಗಿನವರಿಗೆ ನಿಮ್ಮ ಟೈಮ್‌ಲೈನ್‌ನಲ್ಲಿರುವ ಯಾವುದೇ ಪೋಸ್ಟ್ ಆಗಲೀ ಅಥವಾ ಇತರ ಮಾಹಿತಿಯನ್ನು ನೋಡಲು ಸಾಧ್ಯವಾಗುವುದಿಲ್ಲ.

ಟೈಮ್‌ಲೈನ್ನಲ್ಲಿ ಏನಿರಬೇಕು?
ಫೇಸ್‌ಬುಕ್‌ ಪುಟದಲ್ಲಿ ನಿಮ್ಮ ಸ್ನೇಹಿತರು ಅನೇಕ ಪೋಸ್ಟ್‌ಗಳಿಗೆ ನಿಮ್ಮನ್ನು ಟ್ಯಗ್ ಮಾಡುತ್ತಿರುತ್ತಾರೆ. ಇದೆಲ್ಲವೂ ನಿಮ್ಮ ಟೈಮ್‌ಲೈನ್‌ನಲ್ಲಿ ಕಾಣಿಸಿಕೊಂಡು ಕಿರಿಕಿರಿ ಮಾಡುತ್ತಿರುತ್ತದೆ. ಇದನ್ನು ತಪ್ಪಿಸಲು  ಫೇಸ್‌ಬುಕ್ ನಿಮಗೆ ಟೈಮ್‌ಲೈನ್ ರಿವ್ಯೂ ಆಯ್ಕೆಯನ್ನು ನೀಡುತ್ತದೆ. ಈ ಟೈಮ್‌ಲೈನ್ ರಿವ್ಯೂ ಟೂಲ್ ಬಳಸಿಕೊಂಡು ಯಾವ ಪೋಸ್ಟ್‌ಗಳು ನಿಮ್ಮ ಟೈಮ್‌ಲೈನ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂಬುದನ್ನು ನಿರ್ಧರಿಸಿಕೊಳ್ಳಬಹುದು. ಇದರಿಂದ ಅನಾವಶ್ಯಕ ಕಿರಿಕಿರಿಯನ್ನು ತಪ್ಪಿಸಿಕೊಳ್ಳಬಹುದು.

 ಆಡಿಯನ್ಸ್ ನಿರ್ಧರಿಸಿಕೊಳ್ಳಿ
ನೀವು ಪೋಸ್ಟ್ ಮಾಡುವ ಇಲ್ಲವೇ, ಷೇರ್ ಮಾಡುವ ಪೋಸ್ಟ್‌ಗಳನ್ನು ಯಾರು ನೋಡಬೇಕು, ನೋಡಬಾರದು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬಹುದು. ಇದಕ್ಕಾಗಿ ಫೇಸ್‌ಬುಕ್ ಒದಗಿಸುವ ಆಡಿಯನ್ಸ್ ಸೆಲೆಕ್ಟರ್ ಆಯ್ಕೆಯನ್ನು ಬಳಸಿಕೊಳ್ಳಬೇಕು. ಈ ಟೂಲ್‌ನಿಂದ  ಬಳಕೆದಾರರು ಪೋಸ್ಟ್‌ಗಳನ್ನು ಯಾರು ವೀಕ್ಷಿಸಬಹುದು ಎಂದು ಸೆಟ್ ಮಾಡಬಹುದು. ಈ ಟೂಲ್‌ನಲ್ಲಿರುವ ಎವರೀವನ್ ಅಥವಾ ಫ್ರೆಂಡ್ಸ್ ಅಥವಾ ನಿಮಗೆ ಬೇಕಾದವರಿಗೆ ಮಾತ್ರವೇ ನಿಮ್ಮ ಪೋಸ್ಟ್ ತಲುಪುವ ಹಾಗೆ ಕಷ್ಟಮೈಸ್ ಕೂಡ ಮಾಡಿಕೊಳ್ಳಬಹುದು. 

ಮ್ಯಾನೇಜ್ ಆಕ್ಟಿವಿಟಿ
ನಿಮ್ಮ ಪೋಸ್ಟ್‌ಗಳನ್ನು ಡಿಲಿಟ್ ಮಾಡಲು ಇಳ್ಲವೇ ಆರ್ಕೈವ್ ಮಾಡಲು ಮ್ಯಾನೇಜ್ ಆಕ್ಟಿವಿಟಿ ನೆರವು ನೀಡುತ್ತದೆ. ಥ್ರ್ಯಾಶ್‌ಗೆ ಕಳುಹಿಸಲಾದ ಪೋಸ್ಟ್‌ಗಳು 30 ದಿನಗಳವರೆಗೂ ಅಂದರೆ ಆಟೋಮ್ಯಾಟಿಕ್ ಆಗಿ ಡಿಲಿಟ್ ಆಗೋವರೆಗೂ ಅಲ್ಲಿಯೇ ಇರುತ್ತವೆ. ಒಂದು ವೇಳೆ ಈ ಪೋಸ್ಟ್‌ಗಳನ್ನು ನೀವು ರಿಸ್ಟೋರ್ ಮಾಡಿಕೊಳ್ಳುವುದಾದರೆ 30 ದಿನಗಳ ಮುಂಚೆಯೇ ಮಾಡಿಕೊಳ್ಳಬೇಕು. ಆ ಬಳಿಕ ಮತ್ತೆ ಅವು ಸಿಗುವುದಿಲ್ಲ.





















(ಈ ಲೇಖನವು ವಿಜಯ ಕರ್ನಾಟಕದ 2021ರ ಮಾರ್ಚ್ 15ರ ಸಂಚಿಕೆಯಲ್ಲಿ ಪ್ರಕಟವಾಗಿದೆ)

ಭಾನುವಾರ, ಫೆಬ್ರವರಿ 28, 2021

Indian desi Twitter 'Koo': ಬನ್ನಿ... Kooಗು ಹಾಕೋಣ!

- ಮಲ್ಲಿಕಾರ್ಜುನ ತಿಪ್ಪಾರ
ದೇಶಿ ಟ್ವಿಟರ್‌’ ಎಂದೇ ಕರೆಯಿಸಿಕೊಳ್ಳುತ್ತಿರುವ  ಕೂ(Koo) ಎಂಬ ಮೈಕ್ರೊ ಬ್ಲಾಗಿಂಗ್‌ ಆ್ಯಪ್‌ಗೆ ಶುಕ್ರ ದೆಸೆ ಆರಂಭವಾಗಿದೆ. 

ರೈತ ಪ್ರತಿಭಟನೆ ಹಾಗೂ ‘ಕೆಂಪು ಕೋಟೆ ಹಿಂಸಾಚಾರ’ದ ಹಿನ್ನೆಲೆಯಲ್ಲಿಕೆಲವು ಟ್ವಿಟರ್‌ ಖಾತೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರಕಾರ ಪಟ್ಟಿ ನೀಡಿತ್ತು. ನೀವು ಹೇಳಿದಂತೆ ಎಲ್ಲವನ್ನೂ ರದ್ದುಗೊಳಿಸಲು ಸಾಧ್ಯವಿಲ್ಲಎಂದು ಟ್ವಿಟರ್‌ ಹೇಳುತ್ತಿದ್ದಂತೆ, ದೇಶಿ ಮೈಕ್ರೊಬ್ಲಾಗಿಂಗ್‌ ‘ಕೂ’ನತ್ತ ಕೇಂದ್ರ ಸಚಿವರು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಕ್ರಿಕೆಟಿ ಗರು, ಗಣ್ಯರು, ಸಿನಿಮಾ ನಟ- ನಟಿಯರು ದಾಂಗುಡಿ ಇಟ್ಟರು.

ಅಷ್ಟೇ ಅಲ್ಲದೇ ದೇಶಿ ಆ್ಯಪ್‌ ಕೂ ಬೆಂಬಲಿಸವಂತೆ ಕರೆ ನೀಡಿದರು. ಕೇಂದ್ರ ಸರಕಾರದ ಬಹಳಷ್ಟು ಇಲಾಖೆಗಳು ಕೂ ಆ್ಯಪ್‌ನಲ್ಲಿ ಖಾತೆ ತೆರೆದವು. ಕಳೆದ ಕೆಲವು ದಿನಗಳಿಂದ ಕೂ ಡೌನ್‌ಲೋಡ್‌ಗಳಲ್ಲಿ10 ಪಟ್ಟು ಹೆಚ್ಚಳವಾಗಿದೆ. ಬಹುಶಃ ಈ ಪ್ರಮಾಣ ಇನ್ನೂ ಹೆಚ್ಚಾಗಬಹುದು. ಇದೀಗ ಎಲ್ಲರ ಬಾಯಲ್ಲೂಈ ಆ್ಯಪ್‌ನದ್ದೇ ‘ಕೂ’ಗು. 

ಏತನ್ಮಧ್ಯೆ, ಕೂ ಆ್ಯಪ್‌ ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡುತ್ತಿದೆ ಎಂದು ಫ್ರೆಂಚ್‌ ಹ್ಯಾಕರ್‌ರೊಬ್ಬರು ಆಪಾದಿಸಿದ್ದರು. ಇದನ್ನು ಕೂ ಆ್ಯಪ್‌ ಅಲ್ಲಗಳೆದಿದೆ. ಜೊತೆಗೆ, ಈ ಆ್ಯಪ್‌ನಲ್ಲಿ ಚೀನಿ ಹೂಡಿಕೆದಾರರು ಬಂಡವಾಳ ತೊಡಗಿಸಿದ್ದಾರೆ ಎಂಬ ಮಾತುಗಳಿದ್ದವು. ಈ ಬಗ್ಗೆ ಸ್ಪಷ್ಟಿಕರಣ ನೀಡಿರುವ ಕೂ ಆ್ಯಪ್‌ ಸಂಸ್ಥಾಪಕ ಹಾಗೂ ಸಿಇಒ ಅಪ್ರಮೇಯ ರಾಧಾಕೃಷ್ಣನ್‌ 

ಅವರು, ‘‘ಭಾರತೀಯರೇ ಸ್ಥಾಪಿಸಿರುವ ಈ ಕಂಪನಿ ಭಾರತದಲ್ಲಿ ನೋಂದಣಿಯಾಗಿದೆ. ಈ ಮೊದಲು ಹೂಡಿಕೆ ಮಾಡಿದ್ದ ಚೀನಿ ಹೂಡಿಕೆದಾರರು ಶೀಘ್ರವೇ ಹೊರ ಬೀಳಲಿದ್ದಾರೆ. ಅಪ್ಪಟ ಭಾರತೀಯವಾಗಿರುವ 3one4 capital  ನೇತೃತ್ವದ ಸಂಸ್ಥೆ ಬೊಂಬಿನೇಟ್‌ ಟೆಕ್ನಾಲಜಿಸ್‌ಗೆ ಫಂಡ್‌ ಮಾಡುತ್ತಿದೆ ಎಂದು ಹೇಳಿದ್ದಾರೆ. 

ಏನಿದು ಕೂ?
ಕೂ ಆ್ಯಪ್‌ ಕೂಡ ಟ್ವಿಟರ್‌ ರೀತಿಯ ಮೈಕ್ರೊಬ್ಲಾಗಿಂಗ್‌ ವೇದಿಕೆಯಾಗಿದೆ. ಬಳಕೆದಾರರು ಆಡಿಯೊ ಕ್ಲಿಪ್ಸ್ ‌ ಸೇರಿದಂತೆ ಮಲ್ಟಿಮೀಡಿಯಾ ಕಂಟೆಂಟ್‌ ಪೋಸ್ಟ್‌ ಮಾಡಬಹುದು. ಟ್ವಿಟರ್‌ ರೀತಿಯಲ್ಲಿ ನಿಗದಿತ ಪದಗಳೊಳಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಅಂದರೆ, 400 ಅಕ್ಷ ರಗಳ ಮಿತಿಯಲ್ಲಿ ಹೇಳಬೇಕಾಗುತ್ತದೆ. ಇಂಗ್ಲಿಷ್‌ ಮಾತ್ರವಲ್ಲದೇ, ಕನ್ನಡ ಸೇರಿದಂತೆ 6 ಭಾರತೀಯ ಭಾಷೆಗಳಿಗೆ ಸಪೋರ್ಟ್‌ ಮಾಡುತ್ತದೆ ಮತ್ತು ಇನ್ನಷ್ಟು ಸ್ಥಳೀಯ ಭಾಷೆಗಳಲ್ಲಿ ಸೇವೆ ದೊರೆಯಲಿದೆ. ಟ್ವಿಟರ್‌ ರೀತಿಯಲ್ಲೇ ಕೂ ಲೋಗೊ ಕೂಡ ಪಕ್ಷಿಯಾಗಿದ್ದು, ಹಳದಿ ಬಣ್ಣದಲ್ಲಿದೆ. ಹ್ಯಾಷ್‌ಟ್ಯಾಗ್‌(#) ಮತ್ತು ಮೆನ್ಷನ್‌(@)ಗಳಿಗೆ ಇದು ಅವಕಾಶ ಕಲ್ಪಿಸಿ ಕೊಡುತ್ತದೆ. ರಿ-ಟ್ವೀಟ್‌ ರೀತಿಯಲ್ಲಿ‘ರಿ-ಕೂ’ಗೂ ಅವಕಾಶವಿದೆ ಇಲ್ಲಿ. ಚಾಟ್‌ ಬದಲಿಗೆ ಡೈರೆಕ್ಟ್ ಮೆಸೆಜ್‌ ಮಾಡಬಹುದು. 

ಯಾವಾಗ ಆರಂಭವಾಯಿತು?
ಎಂಬಿಎ ಪದವೀಧರರಾದ ಅಪ್ರಮೇಯ ರಾಧಾಕೃಷ್ಣನ್‌ ಮತ್ತು ಮಾಯಾಂಕ್‌ ಬಿಡಾವತ್ಕಾ ಅವರ ಕೂ ಆ್ಯಪ್‌ ಸಂಸ್ಥಾಪಕರು. ಈ ಇಬ್ಬರು ವೋಕಲ್‌ ಸಂಸ್ಥಾಪಕರೂ ಹೌದು. ವೋಕಲ್‌ ಎಂಬುದು ಕೋರಾ ರೀತಿಯಲ್ಲಿ ಆಡಿಯೊ-ವಿಡಿಯೊ ನಾಲೆಡ್ಜ್‌ ಷೇರಿಂಗ್‌ ವೇದಿಕೆಯಾಗಿತ್ತು. 2020ರ ಮಾರ್ಚ್‌ ತಿಂಗಳಲ್ಲಿ ಕೂ ಆ್ಯಪ್‌ ಆರಂಭವಾಯಿತು ಮತ್ತು ಕೇಂದ್ರ ಸರಕಾರದ ಆತ್ಮನಿರ್ಭರ್‌ ಭಾರತ್‌ ಚಾಲೆಂಜ್‌ ಟೆಕ್‌ ಇನ್ನೋವೇಷನ್‌ ಗೆದ್ದುಕೊಂಡಿದೆ. ಬೆಂಗಳೂರಿನಲ್ಲೇ ಇದರ ಕಚೇರಿ ಇದೆ. 

ಹೇಗೆ ಡೌನ್‌ಲೋಡ್‌?
ಕೂ ಉಚಿತ ಆ್ಯಪ್‌ ಆಗಿದ್ದು, ಆಂಡ್ರಾಯ್ಡ್‌ ಮತ್ತು ಐಒಎಸ್‌ ವೇದಿಕೆಗಳಲ್ಲಿಲಭ್ಯವಿದೆ. Koo: Connect with Indians in Indian Languages ಶೀರ್ಷಿಕೆಯಡಿ ಪ್ಲೇ ಸ್ಟೋರ್‌ನಲ್ಲಿದ್ದರೆ, Koo: Connect with Top Indians ಹೆಸರಿನಡಿ ಐಒಎಸ್‌ನಲ್ಲಿ ದೊರೆಯುತ್ತದೆ. 

ಸುಧಾರಣೆ ಅಗತ್ಯ
ದೇಶಿ ಟ್ವಿಟರ್‌ ಎಂಬ ಹೆಗ್ಗಳಿಕೆಯನ್ನು ಪಡೆಯುತ್ತಿರುವ ಕೂ ಆ್ಯಪ್‌ ಇನ್ನೂ ಹಲವು ರೀತಿಯಲ್ಲಿ ಸುಧಾರಣೆ ಕಾಣಬೇಕಿದೆ ಎನ್ನುವುದು ಅದನ್ನು ಬಳಸುತ್ತಿರುವವರ ಅನೇಕರ ಅಭಿಪ್ರಾಯವಾಗಿದೆ. ಟ್ವಿಟರ್‌ ರೀತಿಯಲ್ಲಿ ಇದು ಬಳಕೆದಾರರ ಸ್ನೇಹಿಯಾಗಿಲ್ಲ ಎಂಬುದು ಸಾಮಾನ್ಯ ದೂರು. ಊಹೆಗೆ ನಿಲುಕದ ರೀತಿಯಲ್ಲಿ ಬಳಕೆದಾರರನ್ನು ಪಡೆಯುತ್ತಿರುವ ಕೂ ಮುಂಬರುವ ದಿನಗಳಲ್ಲಿ ಬಹುಶಃ ಈ ಎಲ್ಲಕುಂದು ಕೊರತೆಗಳನ್ನು ನೀಗಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದ ಕಂಪನಿಯಾಗಿ ಬೆಳೆಯುವ ಎಲ್ಲ ಅರ್ಹತೆಗಳು ಮತ್ತು ಸಾಮರ್ಥ್ಯವಂತೂ ಇದ್ದೇ ಇದೆ ಎಂಬುದರಲ್ಲಿ ಎರಡು ಮಾತಿಲ್ಲ.



ಭಾನುವಾರ, ಫೆಬ್ರವರಿ 14, 2021

Ghulam Nabi Azad is a Man of Integrity: 'ಆಜಾದ್‌' ಭಾರತದ 'ಬದ್ಧತೆ'ಯ ನಾಯಕ

 ಕಾಂಗ್ರೆಸ್‌ನ ಬಿಕ್ಕಟ್ಟುಗಳಿಗೆ ಪರಿಹಾರ ಸೂಚಿಸುತ್ತಿದ್ದ ಚಾಣಾಕ್ಷ ರಾಜಕಾರಣಿ



- ಮಲ್ಲಿಕಾರ್ಜುನ ತಿಪ್ಪಾರ
ಮೊದಲು ಈ ಘಟನೆ ಓದಿ... ಅದು ರಾಜಮಾತೆ ಸಿಂಧಿಯಾ ಪ್ರತಿಪಕ್ಷ ದ ಉಪ ನಾಯಕಿ­ಯಾಗಿದ್ದ ಸಮಯ. ಸದನದಲ್ಲಿ ಒಮ್ಮೆ ಗುಲಾಂ ನಬಿ ಆಜಾದ್‌ ವಿರುದ್ಧ ಗಂಭೀರ ಆರೋಪ ಮಾಡಿದರು. ಆಗ ಎದ್ದು ನಿಂತ ಆಜಾದ್‌, ‘‘ನಾನು ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಇದರ ತನಿಖೆಗೆ ಸಮಿತಿ ರಚಿಸುವಂತೆ ಕೇಳಿಕೊಳ್ಳುತ್ತೇನೆ. ಸಮಿತಿಯ ನೇತೃತ್ವವನ್ನು ವಾಜಪೇಯಿ ವಹಿಸಿಕೊಳ್ಳಲಿ. ಎಲ್‌.ಕೆ.ಆಡ್ವಾಣಿ ಮತ್ತು ನೀವು(ರಾಜಮಾತಾ) ಸಮಿತಿಯ ಸದಸ್ಯರಾಗಿ. ಹದಿನೈದು ದಿನದಲ್ಲಿ ವರದಿ ನೀಡಲಿ ಮತ್ತು ಅವರು ನೀಡುವ ಶಿಕ್ಷೆಯನ್ನು ಅನುಭವಿಸಲು ಸಿದ್ಧನಾಗಿದ್ದೇನೆ,’’ ಎಂದರು. ಆಗ ಎದ್ದು ನಿಂತ ವಾಜಪೇಯಿ ಸದನದ ಜೊತೆಗೆ ಆಜಾದ್‌ ಅವರಿಗೂ ಕ್ಷ ಮೆ ಕೋರಿ, ‘‘ಅವರ ಬಗ್ಗೆ(ಆಜಾದ್‌) ರಾಜಮಾತಾ ಸಿಂಧಿಯಾಗೆ ಗೊತ್ತಿಲ್ಲ; ನನಗೆ ಅವ­ರೇನು ಎಂಬುದು ಗೊತ್ತು,’’ ಎಂದು ಹೇಳಿ ವಿಷಯವನ್ನು ತಣ್ಣಗಾಗಿಸಿದರು.

ಗುಲಾಂ ನಬಿ ಆಜಾದ್‌ ತಮ್ಮ ರಾಜಕೀಯ ಜೀವನದು­ದ್ದಕ್ಕೂ ಅಂಥದೊಂದು ‘ಪ್ರಾಮಾಣಿಕತೆ’ ಮತ್ತು ‘ಬದ್ಧತೆ’ಯನ್ನು ಕಾಯ್ದು­ಕೊಂಡು ಬಂದಿದ್ದಾರೆ. ಭಾರತೀಯ ರಾಜಕಾರಣದಲ್ಲಿ ಅಜಾತಶತ್ರು ರಾಜಕಾರಣಿಗಳು ವಿರಳ. ಈ ವಿರಳರ ಸಾಲಿನಲ್ಲಿ ಕಾಂಗ್ರೆಸ್‌ನ ಈ ಹಿರಿಯ ನಾಯಕ ನಿಲ್ಲುತ್ತಾರೆ. ನಾಲ್ಕೈದು ದಶಕ ಭಾರತದ ರಾಜಕಾರಣದ ಹಲವು ಪಲ್ಲಟಗಳಿಗೆ ಸಾಕ್ಷಿಯಾದ ಆಜಾದ್‌, ರಾಜ್ಯ­ಸಭೆಯಿಂದ ನಿವೃತ್ತರಾಗುತ್ತಿದ್ದಾರೆ. ಬಿಜೆಪಿ ಸೇರಿ ಹಲವು ಪಕ್ಷ ಗಳು ಅವರ ಮುತ್ಸದ್ದಿತನ, ಬದ್ಧತೆಯನ್ನು ಬಾಯಿತುಂಬ ಕೊಂಡಾಡಿವೆ.

ಪ್ರಧಾನಿ ನರೇಂದ್ರ ಮೋದಿ ಅವರಂತೂ, ಆಜಾದ್‌ ಬಗ್ಗೆ ವಿದಾಯ ಭಾಷಣ ಮಾಡುವಾಗ ಗದ್ಗದಿತರಾದರು. ಮೋದಿ ಅವರು ಆಜಾದ್‌ರನ್ನು ಹೊಗಳಿದ ರೀತಿಯನ್ನು ಹಲವರು, ಹಲವು ರೀತಿ­ಯಲ್ಲೇ ಅರ್ಥೈಯಿಸುತ್ತಿದ್ದಾರೆ. ಕೆಲವರು ಆಜಾದ್‌ ಬಿಜೆಪಿ ತೆಕ್ಕೆಗೆ ಜಾರ­ಬಹುದು; ಬಿಜೆಪಿಗೂ ಕಾಶ್ಮೀರದಲ್ಲಿ ವಿಶ್ವಸನೀಯ, ಮುತ್ಸದ್ದಿಯ ಮುಖ­ವೊಂದು ಆಜಾದ್‌ ರೂಪದಲ್ಲಿ ಸಿಗಬಹುದು ಎಂದು ವಿಶ್ಲೇಷಿಸುತ್ತಿದ್ದಾರೆ. ಆದರೆ, ಅವರು ಬಿಜೆಪಿ ಸೇರುವುದನ್ನು ಒಂದೇ ಏಟಿಗೆ ಹೊಡೆದು ಹಾಕಿದ್ದಾರೆ. ಸಂದರ್ಶನದಲ್ಲಿ, ‘‘ಯಾವಾಗ ಕಾಶ್ಮೀರದಲ್ಲಿ ಕಪ್ಪು ಹಿಮ ಬೀಳುತ್ತದೆಯೋ ಆ ದಿನ ಬಿಜೆಪಿ ಸೇರುತ್ತೇನೆ,’’ ಎಂದು ಸ್ಪಷ್ಪಪಡಿಸಿದ್ದಾರೆ. ಅದರರ್ಥ ಬಿಜೆಪಿ ಮಾತ್ರವಲ್ಲದೇ ಬೇರೆ ಯಾವುದೇ ಪಕ್ಷ ಕ್ಕೂ ಸೇರುವುದಿಲ್ಲಎಂದು ಖಡಕ್ಕಾಗಿ ಹೇಳಿದ್ದಾರೆ. 

ಮೋದಿ ಅವರ ಶ್ಲಾಘನೆ ಹಿಂದಿನ ಕಾರಣವನ್ನು ಬಿಚ್ಚಿಟ್ಟಿ­ದ್ದಾರೆ. 90ರಿಂದಲೂ ಮೋದಿ ಮತ್ತು ನಬಿ ಸ್ನೇಹಿತರು. ಇಬ್ಬರು ತಮ್ಮ ಪಕ್ಷ ದ ಪ್ರಧಾನ ಕಾರ್ಯದರ್ಶಿಗಳಾಗಿದ್ದಾಗ ಟಿವಿ ಚರ್ಚೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು. ಆ ಸಮಯದಲ್ಲಿ ‘ಚಹ ಪೇ ಚರ್ಚಾ’ ನಡೆಯುತ್ತಿತ್ತು. ಬಳಿಕ ಇಬ್ಬರು ಮುಖ್ಯಮಂತ್ರಿಗಳಾದರು. ಪ್ರಧಾನಿ, ಗೃಹ ಸಚಿವರ ಸಭೆಗಳಿಗೆ ಹೋದಾಗ ಭೇಟಿಯಾಗುತ್ತಿದ್ದರು. ಹೀಗೆ ಅವರಿಬ್ಬರ ನಡುವಿನ ಸ್ನೇಹ ಈ ಕ್ಷ ಣದವರೆಗೂ ಜಾರಿಯಲ್ಲಿದೆ. ಕಾಶ್ಮೀರದಲ್ಲಿ 2006ರಲ್ಲಿ ಗುಜರಾತ್‌ನ ಪ್ರವಾಸಿಗರ ಬಸ್‌ ಮೇಲೆ ದಾಳಿ ನಡೆಯಿತು. ಈ ವಿಷಯವನ್ನು ಅಂದು ಸಿಎಂ ಆಗಿದ್ದ ಮೋದಿಗೆ ತಿಳಿಸುವಾಗ ಆಜಾದ್‌ ಅತ್ತಿದ್ದರಂತೆ. ರಾಜ್ಯಸಭೆಯಲ್ಲಿ ಮೋದಿ ಮಾತ­ನಾಡಿದ ಆ ಕ್ಷ ಣವೇ ಅವರಿಬ್ಬರನ್ನು ಭಾವುಕರನ್ನಾಗಿಸಿತು.

ಅದೇನೇ ಇರಲಿ. ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟುಗಳು ಸಂಭವಿಸಿ­ದಾಗ, ಅದನ್ನು ಪರಿಹರಿಸುವ ತಂಡದ ಮುಂಚೂಣಿಯಲ್ಲಿ ಆಜಾದ್‌ ಇರುತ್ತಿದ್ದರು. ಆ ಮೂಲಕ ಅವರೊಬ್ಬ ‘ಟ್ರಬಲ್‌ ಶೂಟರ್‌’ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಇಂದಿರಾ ಗಾಂಧಿ ಅವರಿಂದ ಹಿಡಿದು ಸೋನಿಯಾ ಗಾಂಧಿ ತನಕ ಕಾಂಗ್ರೆಸ್‌ನ ಪ್ರಮುಖ­ರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಂಡು ಬಂದಿದ್ದಾರೆ. ತಾವೊಬ್ಬ ಗಾಂಧಿ ಕುಟುಂಬದ ನಿಷ್ಠ ಎಂಬು­ದನ್ನು ಸಾಬೀತುಪಡಿಸಿದ್ದಾರೆ. ಹಾಗಂತ, ಪಕ್ಷ  ವಿಭಿನ್ನ ದಾರಿಯಲ್ಲಿ ಸಾಗುತ್ತಿ­ದ್ದಾಗ, ವೈಫಲ್ಯ ಸುಳಿಯಲ್ಲಿ ಸಿಲುಕಿದಾಗ ಎಚ್ಚರಿಕೆ ನೀಡುವ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆ-‘ಜಿ23’. ಪಕ್ಷ ದ ನಾಯಕತ್ವವನ್ನು ವಿಮರ್ಶೆಗೊಳಪಡಿಸುವ ಸಂಬಂಧ ಪತ್ರ ಬರೆದ 23 ನಾಯಕರ ಪೈಕಿ ಇವರು ಒಬ್ಬರು. ಮತ್ತೊಂದು ಅರ್ಥದಲ್ಲಿ‘ಜಿ23’ಯ ‘ಅನಧಿಕೃತ’ ವಕ್ತಾರರು.

ಮೇಲಿಂದ ಮೇಲೆ ಚುನಾವಣೆಯನ್ನು ಕಾಂಗ್ರೆಸ್‌ ಸೋಲುತ್ತಿರುವಾಗ ಪಕ್ಷ ದ ತಳಮಟ್ಟದ ನಾಯಕತ್ವದಿಂದ ಹಿಡಿದು ಉನ್ನತ ಮಟ್ಟದ ನಾಯಕತ್ವವರೆಗೂ ಬದಲಾವಣೆ ಅಗತ್ಯ ಎಂಬುದು ಅವರ ವಾದವಾಗಿತ್ತು. ಈ ವಿಚಾರಗಳು ಕಾಂಗ್ರೆಸ್‌ನ ಹಲವು ನಾಯಕರಿಗೆ ಹಿಡಿಸದೇ ಹೋದವು. ಆದರೆ, ಆಜಾದ್‌ ತಾವು ಹೇಳಬೇಕಿದ್ದ ಸತ್ಯವನ್ನು ಹೇಳಿಯೇ ಬಿಟ್ಟಿದ್ದಾರೆ.  ವಿಮರ್ಶೆಗೊಳಪಡಿಸುವ ಕೆಲಸವನ್ನು ಪಕ್ಷ ದ ನಾಯಕತ್ವ ಮಾಡಬೇಕಷ್ಟೇ. ನಾಲ್ಕೈದು ದಶಕಗಳ ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಸಂಸತ್ತಿನಲ್ಲಿಪ್ರತಿಪಕ್ಷ ದ ನಾಯಕನಾಗಿ, ಪಕ್ಷ ದ ಹಲವು ಹುದ್ದೆ ನಿರ್ವಹಿಸಿ, ಹಲವು ರಾಜ್ಯಗಳ ಉಸ್ತುವಾರಿಯಾಗಿ ಅಗಾಧ ಅನುಭವದ ಮೂಟೆ ಆಜಾದ್‌ ಅವರ ಬೆನ್ನಮೇಲಿದೆ.

ಕಾಶ್ಮೀರದ ದೋಡಾ ಜಿಲ್ಲೆಯ ಸೋತಿ ಎಂಬ ಹಳ್ಳಿಯಲ್ಲಿ1949 ಮಾರ್ಚ್‌ 7ರಂದು ಗುಲಾ ನಂಬಿ ಆಜಾದ್‌ ಜನಿಸಿದರು. ರಹಮತುಲ್ಲಾಹ ಬಟ್ಟ ಮತ್ತು ಬಸಾ ಬೇಗಂ ತಂದೆ-ತಾಯಿ. ಹುಟ್ಟಿದೂರಿನಲ್ಲಿಪ್ರಾಥಮಿಕ ಶಿಕ್ಷ ಣ ಮುಗಿಸಿ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಜಮ್ಮುಗೆ ತೆರಳಿ, ಜಿಜಿಎಂ ಸೈನ್ಸ್‌ ಕಾಲೇಜಿನಿಂದ ಡಿಗ್ರಿ ಪಡೆದುಕೊಂಡರು ಆಜಾದ್‌. ಶ್ರೀನಗರದ ಕಾಶ್ಮೀರ ವಿವಿಯಿಂದ 1972ರಲ್ಲಿಪ್ರಾಣಿಶಾಸ್ತ್ರದಲ್ಲಿ ಮಾಸ್ಟರ್‌ ಡಿಗ್ರಿ ಸಂಪಾದಿಸಿದರು.

1973ರಲ್ಲಿ ಭಲೆಸ್ಸಾ ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿಯಾಗಿ ಆಯ್ಕೆಯಾ­ಗುವ ಮೂಲಕ ರಾಜಕೀಯ ಜೀವನಕ್ಕೆ ಅಡಿ ಇಟ್ಟರು. ಎರಡು ವರ್ಷದ ಬಳಿಕ ಜಮ್ಮು-ಕಾಶ್ಮೀರ ರಾಜ್ಯ ಯುವ ಕಾಂಗ್ರೆಸ್‌ನ ಅಧ್ಯಕ್ಷ ರಾಗಿ ಆಯ್ಕೆಯಾ­ದರು. 1980ರಲ್ಲಿಅಖಿಲ ಭಾರತ ಯುವ ಕಾಂಗ್ರೆಸ್‌ ಅಧ್ಯಕ್ಷ ರಾಗಿ ಆಯ್ಕೆ ಯಾದ ಬಳಿಕ ಅವರ ರಾಜಕೀಯ ರಥ ಎಲ್ಲೂನಿಲ್ಲದೇ ಓಡಲಾರಂಭಿಸಿತು. ಹಾಗೆ ನೋಡಿದರೆ,  ಭಾರತದ ರಾಜಕಾರಣದಲ್ಲಿ ಸಕ್ರಿಯವಾಗಿ ಗುರುತಿಸಿ­ಕೊಳ್ಳಲು ಇಂದಿರಾ ಗಾಂಧಿ ಅವರು ಕಾರಣ. ಆಜಾದ್‌ ಅವರಲ್ಲಿ ನಾಯ­ಕತ್ವ, ಸಂಘಟನಾ ಶಕ್ತಿ ಮತ್ತು ಬದ್ಧತೆಯನ್ನು ಗುರುತಿಸಿ ಅವರಿಗೆ ಜವಾಬ್ದಾರಿ ನೀಡಿದರು. ಮುಂದೆ ರಾಜೀವ್‌ ಗಾಂಧಿ ಅವರ ಕಾಲದಲ್ಲಿ ಅವರಿಗೆ ಪ್ರಾಧಾನ್ಯತೆ ಸಿಗುತ್ತಾ ಹೋಯಿತು.  

1980ರಲ್ಲಿ ಮಹಾರಾಷ್ಟ್ರದ ವಶಿಮ್‌ ಲೋಕಸಭಾ ಕ್ಷೇತ್ರದಿಂದ ಆಯ್ಕೆ­ಯಾಗುವ ಮೂಲಕ ಲೋಕಸಭೆಯನ್ನು ಪ್ರವೇಶಿಸಿದರು. 1982ರಲ್ಲಿ ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರಗಳ ಸಚಿವಾಲಯದ ಉಪಸಚಿವರಾಗಿ ಸರಕಾರದಲ್ಲೂ ಪಾಲ್ಗೊಂಡರು. 1984ರಲ್ಲಿ ಮತ್ತೆ ಲೋಕಸಭೆ ಆಯ್ಕೆಯಾದರು. 1990ರಿಂದ 96ರವರೆಗೂ ರಾಜ್ಯಸಭೆಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದರು. ಪಿ.ವಿ.ನರಸಿಂಹರಾವ್‌ ಸರಕಾರದಲ್ಲಿ ಸಂಸದೀಯ ವ್ಯವಹಾರಗಳು ಹಾಗೂ ನಾಗರಿಕ ವಿಮಾನಯಾನ ಸಚಿವಾಲ­ಯಗಳನ್ನು ನಿರ್ವಹಿಸಿದರು. ಆ ನಂತರ ಅವರು ಜಮ್ಮು-ಕಾಶ್ಮೀರದಿಂದ ಸತತವಾಗಿ ರಾಜ್ಯಸಭೆಗೆ ಆಯ್ಕೆಯಾಗುತ್ತಾ ಬಂದಿದ್ದಾರೆ. ಇದರ ಮಧ್ಯೆಯೇ 2005ರಲ್ಲಿ ಕಾಶ್ಮೀರ ಮುಖ್ಯಮಂತ್ರಿಯಾದರು. ಆದರೆ, ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ(ಪಿಪಿಪಿ) ತನ್ನ ಬೆಂಬಲ ವಾಪಸ್‌ ಪಡೆದ ಹಿನ್ನೆಲೆಯಲ್ಲಿ ಅವರು ಸಿಎಂ ಹುದ್ದೆಗೆ ರಾಜಿನಾಮೆ ನೀಡಬೇಕಾಯಿತು.

ಡಾ.ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ­-2ನೇ ಅವಧಿಯಲ್ಲಿ ಆಜಾದ್‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದರು. ನ್ಯಾಷನಲ್‌ ರೂರಲ್‌ ಹೆಲ್ತ್‌ ಮಿಷನ್‌ ವಿಸ್ತರಿಸಿ ಯಶಸ್ವಿಯಾ­ದರು. ಬಳಿಕ ನ್ಯಾಷನಲ್‌ ಅರ್ಬನ್‌ ಹೆಲ್ತ್‌ ಮಿಷನ್‌ ಆರಂಭಿಸಿ, ನಗರ ಪ್ರದೇಶಗಳಲ್ಲಿನ ಕೊಳಗೇರಿ ಮತ್ತು ಬಡವರಿಗೆ ಆರೋಗ್ಯ ಸೇವೆ ಸಿಗುವ ಹಾಗೆ ಮಾಡಿದರು. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಕೊರತೆ­ಯಿಂದಾಗಿ ಟಿವಿ ಮನರಂಜನೆ ಸಿಗುವುದಿಲ್ಲ. ಪರಿಣಾಮ­ವಾಗಿ ‘ಜನಸಂಖ್ಯೆ’ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ಹೇಳುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದರು. ಮದುವೆಗೆ ನಿಗದಿ ಪಡಿಸಲಾಗಿರುವ ವಯೋಮಿತಿಯನ್ನು 25 ಮತ್ತು 30ಕ್ಕೆ ಹೆಚ್ಚಿಸುವ ಮೂಲಕ ಜನಸಂಖ್ಯೆಯನ್ನು ನಿಯಂತ್ರಣ ಮಾಡಬಹುದು ಎಂಬುದು ಅವರ ವಾದ.

2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸೋತು ಸುಣ್ಣವಾಗಿ, ಅಧಿಕಾರವಂಚಿತವಾಯಿತು. ರಾಜ್ಯಸಭೆಯಲ್ಲಿ ಪ್ರತಿಪಕ್ಷ ದ ನಾಯಕನ ಜವಾಬ್ದಾರಿ ಗುಲಾಂ ಹೆಗಲೇರಿತು. ಅಲ್ಲಿಂದ ನಿವೃತ್ತಿಯಾಗೋವರೆಗೂ ಆ ಸ್ಥಾನವನ್ನು ದಕ್ಷ ತೆಯಿಂದ ನಿರ್ವಹಿಸಿದ ಹೆಗ್ಗಳಿಕೆ ಅವರದ್ದು. ಆಜಾದ್‌ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗುತ್ತಾರೋ, ಪಕ್ಷದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೋ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿಲ್ಲ. ಆದರೆ, ಅವರ ಸೇವೆ ದೊರೆಯದೇ ಹೋದರೆ ಅದು ಕಾಂಗ್ರೆಸ್‌ ಪಕ್ಷ ಕ್ಕೆ ಹಾನಿಯೇ ಹೊರತು ಅವರಿಗಲ್ಲ. ಜೊತೆಗೆ, ಅವರು ಸ್ವತಂತ್ರ ಜಮ್ಮು ಮತ್ತು ಕಾಶ್ಮೀರ ರಾಜ್ಯ ಹೋರಾಟದ ‘ಮುಖ’ ವಾಗುವ ಸಾಧ್ಯತೆಗಳಿವೆ.


 

(ಈ ಲೇಖನವು ವಿಜಯ ಕರ್ನಾಟಕದ 2020ರ ಫೆಬ್ರವರಿ 14ರ ಸಂಚಿಕೆಯ ವಕ್ತಿಗತದಲ್ಲಿ ಪ್ರಕಟವಾಗಿದೆ)