ಸೋಮವಾರ, ನವೆಂಬರ್ 11, 2019

Dark Mode: ಜಿ ಮೇಲ್ ಡಾರ್ಕ್‌ ಮೋಡ್‌ಗೆ ಬದಲಿಸುವುದು ಹೇಗೆ?

- ಮಲ್ಲಿಕಾರ್ಜುನ ತಿಪ್ಪಾರ
ದಿನಗಳೆದಂತೆ ಈ 'ಡಾರ್ಕ್ ಮೋಡ್‌' ಕೂಡ 'ಡಾರ್ಕ್ ಹಾರ್ಸ್‌' ರೀತಿಯಲ್ಲೇ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಮೋಡಿ ಮಾಡುತ್ತಿದೆ. ಬಹುತೇಕ ಆ್ಯಪ್‌ಗಳು ಇದೀಗ 'ಡಾರ್ಕ್ ಮೋಡ್‌'ಗೆ ಫೀಚರ್‌ ಅಳವಡಿಸಿಕೊಳ್ಳುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂದರೆ- ವಾಟ್ಸ್‌ಆ್ಯಪ್‌. ಈ ಆ್ಯಪ್‌ ಕೂಡ ಡಾರ್ಕ್ ಮೋಡ್‌ ಫೀಚರ್‌ ಅನ್ನು ಪರಿಚಯಿಸುತ್ತಿದೆ. ಅಂದರೆ, ಬಳಕೆದಾರರು ಡಾರ್ಕ್ ಮೋಡ್‌ಗೆ ಮರುಳಾಗಿದ್ದು, ಅಂಥ ಸೇವೆಯನ್ನು ಎಲ್ಲಆ್ಯಪ್‌ಗಳಿಂದಲೂ ನಿರೀಕ್ಷಿಸುತ್ತಿದ್ದಾರೆ ಎಂದಾಯಿತು.

ಈಗಾಗಲೇ ಗೂಗಲ್‌ ಕೂಡ ಗೂಗಲ್‌ ಮ್ಯಾಫ್ಸ್‌, ಜಿಮೇಲ್‌ ಸೇರಿದಂತೆ ತನ್ನ ಅನೇಕ ಉತ್ಪನ್ನಗಳಿಗೆ ಡಾರ್ಕ್ ಮೋಡ್‌ ಪರಿಚಯಿಸಿದ್ದು, ಬಳಕೆದಾರರ ಮೆಚ್ಚುಗೆ ಗಳಿಸಿದೆ. ಆದರೆ, ಬಹಳಷ್ಟು ಜನರಿಗೆ ಈ ಡಾರ್ಕ್ ಮೋಡ್‌ ಅನ್ನು ಹೇಗೆ ಸಕ್ರಿಯಗೊಳಿಸಬೇಕೆಂಬುದು ಗೊತ್ತಿರುವುದಿಲ್ಲ. ಈ ಹಿನ್ನೆಲೆಯಲ್ಲಿಜಿಮೇಲ್‌ ಅನ್ನು ಡಾರ್ಕ್ ಮೋಡ್‌ಗೆ ಬದಲಿಸುವುದು ಹೇಗೆಂದು ತಿಳಿದುಕೊಳ್ಳೋಣ. ಆಂಡ್ರಾಯ್ಡ್‌, ಮೊಬೈಲ್‌ ಮತ್ತು ಡೆಸ್ಕ್‌ಟಾಪ್‌ಗಳೆರಡಲ್ಲೂಜಿಮೇಲ್‌ಗೆ ಡಾರ್ಕ್ ಮೋಡ್‌ ಲಭ್ಯವಿದೆ.

ಡೆಸ್ಕ್‌ಟಾಪ್‌ನಲ್ಲಿಡಾರ್ಕ್ ಮೋಡ್‌
ಸ್ಮಾರ್ಟ್‌ಫೋನ್‌, ಟ್ಯಾಬ್‌ಗಿಂತ ಡೆಸ್ಕ್‌ಟಾಪ್‌(ಕಂಪ್ಯೂಟರ್‌)ನಲ್ಲೇ ನೀವು ಹೆಚ್ಚಾಗಿ ಜಿಮೇಲ್‌ ಬಳಸುತ್ತಿದ್ದಿರಿ ಮತ್ತು ಜಿಮೇಲ್‌ ಅನ್ನು ಡಾರ್ಕ್ ಮೋಡ್‌ಗೆ ಹೇಗೆ ಬದಲಿಸುವುದು ಗೊತ್ತಿಲ್ಲಎಂದರೆ ಹೀಗೆ ಮಾಡಿ: ಜಿಮೇಲ್‌.ಕಾಮ್‌ಗೆ ಹೋಗಿ. ನಿಮ್ಮ ಖಾತೆ ತೆರೆಯಿರಿ. ಜಿಮೇಲ್‌ ಪೇಜ್‌ನ ಬಲಗಡೆಯ ಮೇಲಗಡೆ ಪ್ರೊಫೈಲ್‌ ಪಿಕ್ಚರ್‌ ಕೆಳಗಿರುವ 'ಸೆಟ್ಟಿಂಗ್ಸ್‌' ಮೇಲೆ ಕ್ಲಿಕ್‌ ಮಾಡಿ. ಬಳಿಕ 'ಥೀಮ್ಸ್‌' ಸೆಲೆಕ್ಟ್ ಮಾಡಿಕೊಳ್ಳಿ. ಬಳಿಕ ನಿಮಗೆ ಥೀಮ್‌ಗಳಿರುವ ಥಂಬ್‌ನೇಲ್‌ಗಳು ಕಾಣ ಸಿಗುತ್ತವೆ ಅಲ್ಲವೇ? ಅವುಗಳನ್ನು ಸ್ಕ್ರಾಲ್‌ ಮಾಡಿ ಆಗ ಬ್ಲ್ಯಾಕ್‌ ಥಂಬ್‌ನೇಲ್‌(ಚಿತ್ರ) ಮೇಲೆ ಕ್ಲಿಕ್‌ ಮಾಡಿ. ಆಗ ನಿಮ್ಮ ಜಿಮೇಲ್‌ ಡಾರ್ಕ್ ಮೋಡ್‌ಗೆ ಹೊರಳುತ್ತದೆ.

ಆಂಡ್ರಾಯ್ಡ್‌ನಲ್ಲಿ ಹೇಗೆ ಮಾಡೋದು?
ನಿಮ್ಮ ಫೋನ್‌ನಲ್ಲಿನೂತನ ಜಿಮೇಲ್‌ ಆ್ಯಪ್‌ ಇನ್ಸ್‌ಟಾಲ್‌ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ ನೀವು ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ ಅಲ್ಲಿ, ಜಿಮೇಲ್‌ ಆ್ಯಪ್‌ ಅಪ್‌ಡೇಟ್‌ ಮಾಡಿಕೊಳ್ಳಿ. ಒಂದೊಮ್ಮೆ ಅಪ್‌ಡೇಟ್‌ ಬಟನ್‌ ಅಲ್ಲಿಕಾಣದಿದ್ದರೆ ಹೊಚ್ಚ ಹೊಸ ಆ್ಯಪ್‌ ಇದೆ ಎಂದರ್ಥ.

ಫೈನ್‌, ಈಗ ಡಾರ್ಕ್ ಮೋಡ್‌ಗೆ ಮಾರ್ಪಾಡಿಸುವುದು ನೋಡೋಣ; ಒಂದು ವೇಳೆ ನೀವು ಆಂಡ್ರಾಯ್ಡ್‌ 10 ಸಿಸ್ಟಮ್‌ ಇದ್ದರೆ ಅದರಲ್ಲಿವೈಡ್‌ ಡಾರ್ಕ್ ಥೀಮ್‌ ಸಕ್ರಿಯವಾಗಿರುತ್ತದೆ ಮತ್ತು ಆ್ಯಪ್‌ ಸ್ವಯಂ ಆಗಿ ಹೊಸ ಲುಕ್‌ಗೆ ಮಾರ್ಪಾಡುಗೊಳ್ಳುತ್ತದೆ. ಇಲ್ಲದಿದ್ದರೆ ಇದನ್ನು ನೀವು ಮ್ಯಾನ್ಯುಯಲ್‌ ಆಗಿ ಮಾಡಿಕೊಳ್ಳಬೇಕು.

ಜಿಮೇಲ್‌ನ ಆ್ಯಪ್‌ ಎಡಗಡೆಯ ಮೇಲ್ಭಾಗದಲ್ಲಿರುವ ಮೆನ್ಯು ಐಕಾನ್‌ ಮೇಲೆ ಟ್ಯಾಪ್‌ ಮಾಡಿದ ಬಳಿಕ ಸ್ಕ್ರಾಲ್‌ ಡೌನ್‌ ಮಾಡಿ ಆಗ ಸೆಟ್ಟಿಂಗ್ಸ್‌ ಕಾಣುತ್ತದೆ; ಅದರ ಮೇಲೆ ಟ್ಯಾಪ್‌ ಮಾಡಿ. ಬಳಿಕ ಜನರಲ್‌ ಸೆಟ್ಟಿಂಗ್ಸ್‌ ಮೇಲೆ ಟ್ಯಾಪ್‌ ಮಾಡಿ; ಇಲ್ಲಿನೀವು ಜಿಮೇಲ್‌ ಥೀಮ್‌ ಅನ್ನು ಲೈಟ್‌, ಡಾರ್ಕ್ ಅಥವಾ ಸಿಸ್ಟಮ್‌ ಡಿಫಾಲ್ಟ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಗಮನಿಸಬೇಕಾದ ಸಂಗತಿ ಏನೆಂದರೆ, ಈ ಡಾರ್ಕ್ ಮೋಡ್‌ ಆಂಡ್ರಾಯ್ಡ್‌ ಪೈ ಅಥವಾ ಅದಕ್ಕೂ ಮೊದಲಿನ ಓಎಸ್‌ಗಳಲ್ಲಿಲಭ್ಯವಿಲ್ಲ. ಹಾಗಿದ್ದೂ, ಡೆಸ್ಕ್‌ಟಾಪ್‌ ಮೋಡ್‌ನಲ್ಲಿಡಾರ್ಕ್ ಮೋಡ್‌ ಬಳಸಬಹುದು. ಈ ಆಯ್ಕೆ ನಿಮಗೆ ಆಂಡ್ರಾಯ್ಡ್‌ ಕ್ರೋಮ್‌ ಹಾಗೂ ಫೈರ್‌ಫಾಕ್ಸ್‌ ಪ್ರಿವಿವ್ಯೂನಲ್ಲಿದೊರೆಯುತ್ತದೆ.ಘ್ಕಿ

ಐಒಎಸ್‌ನಲ್ಲಿ ಆಕ್ಟಿವೇಟ್‌ ಮಾಡೋದು?
ಐಒಎಸ್‌ಗೆ ಇನ್ನೂ ಜಿಮೇಲ್‌ ಡಾರ್ಕ್ ಮೋಡ್‌ ಪರಿಚಯಿಸಿಲ್ಲ. ಆ್ಯಪಲ್‌ ಈ ಫೀಚರ್‌ ಅನ್ನು ಸರ್ವರ್‌ ಸೈಡ್‌ನಲ್ಲಿಆಕ್ಟಿವೇಟ್‌ ಮಾಡದ ಹೊರತು ಬಳಕೆದಾರರಿಗೆ ದೊರೆಯುವುದಿಲ್ಲ. ಒಂದೊಮ್ಮೆ ಅದು ಐಒಎಸ್‌ಗೂ ಪರಿಚಯಗೊಂಡರೆ ಸ್ವಯಂ ಆಗಿ ನಿಮ್ಮ ಐಫೋನ್‌ ಸಿಸ್ಟಮ್‌ ವೈಡ್‌ ಡಾರ್ಕ್ ಮೋಡ್‌ಗೆ ಬದಲಾಗುತ್ತದೆ. ಇಲ್ಲದಿದ್ದರೆ, ಜಿಮೇಲ್‌ ಮೆನ್ಯುಗೆ ಹೋಗಿ, ಅಲ್ಲಿಂದ ಸೆಟ್ಟಿಂಗ್ಸ್‌ ಹೋಗಿ ಮತ್ತು ಥೀಮ್‌ ಮೇಲೆ ಟ್ಯಾಪ್‌ ಮಾಡಿ ಡಾರ್ಕ್ ಸೆಲೆಕ್ಟ್ ಮಾಡಿಕೊಂಡರೆ ಸಾಕು.

ಯಾಕೆ ಡಾರ್ಕ್ ಮೋಡ್‌?
ಗೂಗಲ್‌ ಸಂಸ್ಥೆಯೇ ಸಂಶೋಧನೆ ನಡೆಸಿದ್ದು, ವೈಟ್‌ ಪಿಕ್ಸೆಲ್‌ಗಳಿಗಿಂತಲೂ ಡಾರ್ಕರ್‌ ಪಿಕ್ಸೆಲ್‌ಗಳು ಕಡಿಮೆ ಪವರ್‌ ಬಳಸಿಕೊಳ್ಳುತ್ತವೆ. ಅಂದರೆ, ಡಾರ್ಕ್ ಮೋಡ್‌ನಲ್ಲಿಜಿಮೇಲ್‌ ಬಳಸಿದರೆ ನಿಮ್ಮ ಫೋನ್‌ ಬ್ಯಾಟರಿ ಕೂಡ ದೀರ್ಘ ಕಾಲದವರೆಗೂ ಇರುತ್ತದೆ. ಜತೆಗೆ, ನಿಮ್ಮ ಕಣ್ಣಿಗೂ ದಣಿವಾಗುವುದಿಲ್ಲಎಂಬುದು ನೆನಪಿರಲಿ.

This article has been published in VK on 11 November 2019
ಡಾರ್ಕ್ ಮೋಡ್ ಎಂಬ ಡಾರ್ಕ್ ಹಾರ್ಸ್!


ಸೋಮವಾರ, ಜೂನ್ 24, 2019

Best Yoga Apps: ಯೋಗ ಕಲಿಕೆಗೆ ಆ್ಯಪ್ ಗುರು

- ಮಲ್ಲಿಕಾರ್ಜುನ ತಿಪ್ಪಾರ 
ಭಾರತವು ಯೋಗವನ್ನು ಇಡೀ ಜಗತ್ತಿಗೆ ಕೊಡುಗೆಯಾಗಿ ನೀಡಿದೆ. ಪ್ರಾಚೀನ ಕಾಲದ ಈ ವೈದ್ಯ ಪದ್ಧತಿ ಕೇವಲ ದೈಹಿಕವಾಗಿ ಮಾತ್ರ ಲಾಭವನ್ನು ತಂದುಕೊಡುವುದಲ್ಲದೇ ಮಾನಸಿಕವಾಗಿ ಅಧ್ಯಾತ್ಮಿಕ ದೃಷ್ಟಿಯಲ್ಲೂ ನಿಮ್ಮನ್ನು ಗಟ್ಟಿಗೊಳಿಸುತ್ತದೆ. ಹಾಗಾಗಿಯೇ ಯೋಗವನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ಯಾವುದೇ ಧರ್ಮ, ವರ್ಗ, ಜಾತಿ, ಬಣ್ಣ, ಪ್ರಾದೇಶಿಕ ಹಂಗಿಲ್ಲದೇ ಬೆಳೆಯುತ್ತಿದೆ. ಕಳೆದ ಐದು ವರ್ಷಗಳಿಂದ ವಿಶ್ವಸಂಸ್ಥೆ ಆಚರಿಸಿಕೊಂಡು ಬರುತ್ತಿರುವ 'ಅಂತಾರಾಷ್ಟ್ರೀಯ ಯೋಗ ದಿನಾಚರಣೆ' ಇದಕ್ಕೆ ಸಾಕ್ಷಿಯಾಗುತ್ತಿದೆ. ಯೋಗವನ್ನು ಗುರುವಿನ ನೆರವಿನಿಂದಲೇ ಕಲಿಯಬೇಕು ಎಂಬ ಮಾತಿದೆ. ಇಂದಿನ ಆಧುನಿಕ ಯುಗದಲ್ಲಿ ಈ ಗುರುವಿನ ಸ್ಥಾನವನ್ನು ಆ್ಯಪ್‌ಗಳು ತುಂಬುತ್ತಿವೆ. ಯೋಗಕ್ಕೆ ಸಂಬಂಧಿಸಿದಂತೆ ನೂರಾರು ಆ್ಯಪ್‌ಗಳಿವೆ. ಗೂಗಲ್‌ ಪ್ಲೇ ಸ್ಟೋರ್‌, ಆ್ಯಪಲ್‌ನಲ್ಲಿ ಸಾಕಷ್ಟು ಆ್ಯಪ್‌ಗಳಿದ್ದು, ಆ ಪೈಕಿ ಒಂದಿಷ್ಟು ಆ್ಯಪ್‌ಗಳು ತುಂಬ ಉಪಯುಕ್ತವಾಗಿವೆ. ಗುರು ನೀಡುವ ಮಾರ್ಗದರ್ಶನದಷ್ಟೇ ಶುದ್ಧವಾದ ಪಾಠವನ್ನು ಈ ಆ್ಯಪ್‌ಗಳು ನೀಡುತ್ತವೆ. ಅಂಥ ಕೆಲವು ಉಪಯುಕ್ತ ಆ್ಯಪ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ. 

ಹೆಡ್‌ಸ್ಪೇಸ್‌
ಯಾವುದೇ ಯೋಗ ಮಾಡಲು ಏಕಾಗ್ರತೆಯೂ ಮುಖ್ಯ. ಏಕಾಗ್ರತೆಯನ್ನು ಸಾಧಿಸಲು ಧ್ಯಾನ ನಿಮಗೆ ಹೆಚ್ಚಿನ ನೆರವು ನೀಡುತ್ತದೆ. ಆ ಹಿನ್ನೆಲೆಯಲ್ಲಿ ಹೆಡ್‌ಸ್ಪೇಸ್‌ ನಿಮಗೆ ಧ್ಯಾನದ ಅನೇಕ ಪಾಠಗಳನ್ನು ಹೇಳಿಕೊಡುತ್ತದೆ. ವಿಶೇಷವಾಗಿ ಯೋಗ ಆರಂಭಿಕರಿಗೆ ಇದು ಹೆಚ್ಚಿನ ಸಹಾಯ ಮಾಡಬಲ್ಲದು. ಅನೇಕ ಹೊಸ ಹೊಸ ಫೀಚರ್‌ಗಳನ್ನು ಹೊಂದಿರುವ ಈ ಆ್ಯಪ್‌, ಸ್ಲೀಪ್‌ ವಿಥ್‌ ನರೇಟೆಡ್‌ ಸ್ಟೋರಿಸ್‌ ಎಂಬ ಸೆಕ್ಷ ನ್‌ ಹೊಂದಿದೆ. ಇದು ನಿಮಗೆ ಸುಖವಾದ ನಿದ್ರೆ ಮಾಡಲು ನೆರವು ನೀಡುತ್ತದೆ. 

ಯೋಗ ಗೋ
ಯೋಗಕ್ಕೆ ಸಂಬಂಧಿಸಿದ ಬಹಳಷ್ಟು ಆ್ಯಪ್‌ಗಳು ಯೋಗಾಸನಗಳು ಬಗ್ಗೆ ವಿಶೇಷವಾದ ಮಾಹಿತಿ ನೀಡುತ್ತವೆ. ಆದರೆ, ಈ ಯೋಗ ಗೋ ಆ್ಯಪ್‌ ನಿಮಗೆ ಯೋಗದ ಜತೆಗೆ ಡಯಟ್‌ ಪ್ಲ್ಯಾನ್‌ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡುತ್ತದೆ. ಫಿಟ್ನೆಸ್‌ ಗೋಲ್‌ ಅನ್ನು ನೀವು ನಿರ್ಧರಿಸಿ ಆ ದಿಸೆಯಲ್ಲಿ ಯೋಗ ಗೋ ಆ್ಯಪ್‌ ಮೂಲಕ ಅದನ್ನು ತಲುಪಬಹುದು. ಜತೆಗೆ ಆರೋಗ್ಯಕಾರಿ ಊಟದ ರೆಸೆಪಿಗಳು ಕೂಡ ಈ ಆ್ಯಪ್‌ನಲ್ಲಿವೆ. 

5 ಮಿನಿಟ್‌ ಯೋಗ
ಇದೊಂದು ಅತ್ಯಂತ ಸರಳವಾದ ಯೋಗ ಆ್ಯಪ್‌. ಹೆಸರೇ ಹೇಳುವಂತೆ ಐದು ನಿಮಿಷದಲ್ಲೇ ನಿಮಗೆ ಯೋಗ ಪಾಠ ಮಾಡುತ್ತದೆ. ಜತೆಗೆ, ಡೈಲಿ ರಿಮೈಂಡರ್ಸ್‌, ಟೈಮರ್‌ ಕೂಡ ಒದಗಿಸುತ್ತದೆ. ಇದರಲ್ಲಿರುವ ವಿಡಿಯೊ ಟುಟೊರಿಯಲ್ಸ್‌ ಚೆನ್ನಾಗಿವೆ. ಯೋಗಾಸನದ ಚಿತ್ರಗಳು ಮತ್ತು ವಿವರಣೆಗಳು ಪರಿಪೂರ್ಣವಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಇಲ್ಲಿರುವ ವಿಡಿಯೊಗಳನ್ನು ರನ್‌ ಮಾಡಲು ತುಂಬ ಹೆಚ್ಚಿನ ಡೇಟಾ ಏನೂ ಖರ್ಚು ಮಾಡುವುದಿಲ್ಲ. ಹೆಚ್ಚಿನ ಮಾಹಿತಿ ಬೇಕಿದ್ದರೆ ನೀವು ಹಣ ಕೊಟ್ಟು ಚಂದಾದಾರರಾಗಬೇಕಾಗುತ್ತದೆ ಮತ್ತು ಈ ಆ್ಯಪ್‌ಗೆ 4.5 ರಾರ‍ಯಂಕಿಂಗ್‌ ಅನ್ನು ಬಳಕೆದಾರರು ನೀಡಿದ್ದಾರೆ. 

ಡೌನ್‌ ಯೋಗ
ಯೋಗಕ್ಕೆ ಸಂಬಂಧಿಸಿದಂತೆ ಇದೊಂದು ಅತ್ಯುತ್ತಮ ಆ್ಯಪ್‌ ಆಗಿದ್ದು, ಅದ್ಭುತ ಅನುಭವವನ್ನು ನೀಡುತ್ತದೆ. ಜತೆಗೆ, ಇಲ್ಲಿರುವ ಯೋಗ ಪಾಠಗಳನ್ನು ನಿಮಗೆ ಬೇಕಾದಂತೆ ಕಸ್ಟ್‌ಮೈಸ್‌ ಮಾಡಿಕೊಳ್ಳಬಹುದು. ಜತೆಗೆ, ಗೂಗಲ್‌ ಫಿಟ್ನೆಸ್‌ ಸಪೋರ್ಟ್‌, ಬಿಗಿನರ್ಸ್‌ ಕ್ಲಾಸಸ್‌, ಆಫ್‌ಲೈನ್‌ ಸಪೋರ್ಟ್‌, ವಾಯ್ಸ್‌ ಗೈಡನ್ಸ್‌, ಮ್ಯೂಸಿಕ್‌ ಸೇರಿದಂತೆ ಇನ್ನಿತರ ಸೇವೆಗಳನ್ನು ಈ ಆ್ಯಪ್‌ ಒದಗಿಸುತ್ತದೆ. ಯೋಗ ಆಸನಗಳ ಬಗ್ಗೆ ಅತ್ಯತ್ತಮ ಮಾಹಿತಿಯನ್ನು ಈ ಆ್ಯಪ್‌ ಒಳಗೊಂಡಿದೆ. ಇದು ಕೂಡ ಉಚಿತ ಮತ್ತು ಪ್ರೀಮಿಯಂ ಆಫರ್‌ಗಳನ್ನು ಹೊಂದಿದೆ. ಬಳಕೆದಾರರು 4.9 ಶ್ರೇಯಾಂಕವನ್ನು ಈ ಆ್ಯಪ್‌ಗೆ ನೀಡಿದ್ದಾರೆ. 

ಪಾಕೆಟ್‌ ಯೋಗ
ಯೋಗ ಆ್ಯಪ್‌ಗಳಲ್ಲೇ ಪಾಕೆಟ್‌ ಯೋಗ ಕೂಡ ಅತ್ಯುತ್ತಮ ಆ್ಯಪ್‌ ಎಂದು ಗುರುತಿಸಿಕೊಂಡಿದೆ. ಯೋಗಾಸನ ತಿಳಿಸಿಕೊಡಲು ಈ ಆ್ಯಪ್‌ ಪಠ್ಯ ಮತ್ತು ಇಮೇಜ್‌ಗಳನ್ನು ಬಳಸುತ್ತದೆ. 200ಕ್ಕೂ ಹೆಚ್ಚುವ ಯೋಗಾಸನಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಇದರಲ್ಲಿದೆ. ಪ್ರಾಕ್ಟಿಸ್‌ ಸೆಷನ್‌, ಯೋಗ ಚಟುವಟಿಕೆ ಲಾಗ್‌ ಬುಕ್‌ ಕೂಡ ಇದ್ದು, ಸಂಗೀತ ಕೂಡ ಇದೆ. ವಿಶೇಷ ಎಂದರೆ, ಪಾಕೆಟ್‌ ಯೋಗ ಕರ್ಮ(ಪಾಯಿಂಟ್‌) ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ನೀವು ಎಷ್ಟು ಯೋಗಾಸನಗಳನ್ನು ಮಾಡುತ್ತೀರೋ ಅಷ್ಟು ಕರ್ಮ ನೀವು ಪಡೆದುಕೊಳ್ಳುತ್ತೀರಿ. ಹೀಗೆ ಕರ್ಮ ಪಡೆದುಕೊಳ್ಳುತ್ತ ಹೋದಂತೆ ನೀವು ಇನ್ನೂ ಹೆಚ್ಚಿನ ಫೀಚರ್‌ಗಳನ್ನು ಅನ್‌ಲಾಕ್‌ ಮಾಡುತ್ತ ಹೋಗುತ್ತೀರಿ. ಅದಂರೆ, ಇನ್ನೂ ಹೆಚ್ಚಿನ ಸೌಲಭ್ಯ ದೊರೆಯುತ್ತದೆ. ಈ ಆ್ಯಪ್‌ಗೆ ಬಳಕೆದಾರರು 4.4 ಶ್ರೇಯಾಂಕ ನೀಡಿದ್ದಾರೆ. 

ಟ್ರ್ಯಾಕ್‌ ಯೋಗ 
ಯೋಗಾಸಕ್ತರ ಎಲ್ಲ ಅಗತ್ಯಗಳನ್ನು ಈ ಆ್ಯಪ್‌ ಪೂರೈಸುತ್ತದೆ. ಯೋಗ ಕಲಿಯುಲು ಆರಂಭಿಸುವವರು, ಈಗಾಗಲೇ ಒಂದಿಷ್ಟು ಮಾಹಿತಿ ಹೊಂದಿವರು ಮತ್ತು ತಜ್ಞತೆ ಸಾಧಿಸಿದವರು ಎಂಬ ಮೂರೂ ವರ್ಗದ ಯೋಗಾಸಕ್ತರನ್ನು ಗಮನದಲ್ಲಿಟ್ಟುಕೊಂಡು ಈ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಎಚ್‌ಡಿ ವಿಡಿಯೊ ಕಂಟೆಂಟ್‌ ಒದಗಿಸುತ್ತದೆ. ಲೈಬ್ರರಿ ಇದೆ. ಯೋಗ ಮಾತ್ರವಲ್ಲದೆ ಫ್ರೀಸ್ಟೈಲ್‌ ವರ್ಕೌಟ್‌ಗಳ ಬಗ್ಗೆ ಇಲ್ಲಿ ಮಾಹಿತಿ ದೊರೆಯುತ್ತದೆ. ಪಾಕೆಟ್‌ ಯೋಗದ ಕರ್ಮ ಪಾಯಿಂಟ್‌ ರೀತಿಯಲ್ಲೇ ಈ ಆ್ಯಪ್‌ ಕೂಡ ಕ್ರಿಯಾ ಪಾಯಿಂಟ್‌ ಸಿಸ್ಟಮ್‌ ಹೊಂದಿದ್ದು, ಇದು ಯೋಗದ ಮೇಲೆ ಆಸಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಕ್ರಿಯಾ ಪಾಯಿಂಟ್‌ ಹೆಚ್ಚೆಚ್ಚು ಗಳಿಸಿದಂತೆ ನಿಮಗೆ ಇನ್ನೂ ಹೆಚ್ಚಿನ ಫೀಚರ್‌ಗಳನ್ನು ಅನ್‌ಲಾಕ್‌ ಮಾಡುತ್ತ ಹೋಗಬಹುದು. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 4.5 ಶ್ರೇಯಾಂಕವಿದೆ. 

ಯೋಗ ಡೈಲಿ ಫಿಟ್ನೆಸ್‌
ಉಚಿತ ಯೋಗ ಆ್ಯಪ್‌ಗಳಲ್ಲೇ ಯೋಗ ಡೈಲಿ ಫಿಟ್ನೆಸ್‌ ಅತ್ಯುತ್ತಮ ಆ್ಯಪ್‌ ಎಂದು ಗುರುತಿಸಿಕೊಂಡಿದೆ. ಸರಳ ಫೀಚರ್‌ಗಳನ್ನು ಹೊಂದಿರುವ ಸರಳ ಆ್ಯಪ್‌ ಎಂದು ಹೇಳಬಹುದು. ನಾನಾ ತರಹದ ಎಕ್ಸರ್‌ಸೈಜ್‌, ಆಸನಗಳು ಮತ್ತು 30 ದಿನ ಯೋಗ ಕಲಿಕೆಯ ಕೋರ್ಸ್‌ ಇದೆ. 

ಯೋಗ ಸ್ಟುಡಿಯೊ
ಈ ಆ್ಯಪ್‌ ಅದ್ಭತವಾದ ಲೈಬ್ರರಿ ಹೊಂದಿದ್ದು, ಅನೇಕ ಯೋಗಾಸನಗಳ ಬಗ್ಗೆ ಮಾಹಿತಿ ನೀಡುತ್ತದೆ. ಜತೆಗೆ 70ಕ್ಕ ಹೆಚ್ಚು ಯೋಗ ಮತ್ತು ಧ್ಯಾನದ ಕ್ಲಾಸ್‌ಗಳು ಇಲ್ಲಿವೆ. ಎಚ್‌ಡಿ ವಿಡಿಯೊ ಸೇರಿದಂತೆ ಇನ್ನಿತರ ಹೈಟೆಕ್‌ ಅದ್ಭುತ ಅನುಭವವನ್ನು ಈ ಆ್ಯಪ್‌ ನೀಡುತ್ತದೆ. 

                  Yoga Page

ಬುಧವಾರ, ಮಾರ್ಚ್ 27, 2019

'Q' ಬಗ್ಗೆ ಏನಾದರೂ ಕ್ಲೂ ಇದೆಯಾ?

ಸ್ಮಾರ್ಟ್‌ಫೋನ್‌ಗಳ ಕ್ರಾಂತಿಗೆ ಕಾರಣವಾಗಿರುವ ಆ್ಯಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಮ್‌ ಆಗಾಗ ಹೊಸ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತದೆ. ಆ ಮೂಲಕ ಬಳಕೆದಾರರಿಗೆ ಆ್ಯಂಡ್ರಾಯ್ಡ್‌ ವಿಶಿಷ್ಟ ಅನುಭವವನ್ನು ನೀಡುತ್ತದೆ. ಕಳೆದ ಕೆಲವು ದಿನಗಳಿಂದ ಅತ್ಯಾಧುನಿಕ ತಾಂತ್ರಿಕತೆ ಹಾಗೂ ವಿಶಿಷ್ಟ ಫೀಚರ್‌ಗಳನ್ನು ಹೊಂದಿರುವ ಆ್ಯಂಡ್ರಾಯ್ಡ್‌ ಕ್ಯೂ ಆಪರೇಟಿಂಗ್‌ ಸಿಸ್ಟಮ್‌ ಅನ್ನು ಸರ್ಚ್‌ ಎಂಜಿನ್‌ ದೈತ್ಯ ಗೂಗಲ್‌ ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಕೊನೆಗೆ ಕಳೆದ ವಾರ ಗೂಗಲ್‌ ತನ್ನ ಬಹು ನಿರೀಕ್ಷೆಯ 'ಆ್ಯಂಡ್ರಾಯ್ಡ್‌ ಕ್ಯೂ' ಆಪರೇಟಿಂಗ್‌ ಸಿಸ್ಟಮ್‌ ಅನ್ನು ಅನಾವರಣ ಮಾಡಿದೆ. ಈ ಹೊಸ ಆಪರೇಟಿಂಗ್‌ ಸಿಸ್ಟಮ್‌ ಕ್ಯೂ ಬೀಟಾ ವರ್ಷನ್‌ನಲ್ಲಿದೆ. 

ಪಿಕ್ಸೆಲ್‌, ಪಿಕ್ಸೆಲ್‌ ಎಕ್ಸ್‌ಎಲ್‌, ಪಿಕ್ಸೆಲ್‌2, ಪಿಕ್ಸೆಲ್‌ 2 ಎಕ್ಸ್‌ಎಲ್‌, ಪಿಕ್ಸೆಲ್‌ 3, ಪಿಕ್ಸೆಲ್‌ 3 ಎಕ್ಸ್‌ಎಲ್‌ ಸ್ಮಾರ್ಟ್‌ಫೋನ್‌ಗಳಿಗೆ ಈ ಹೊಸ ವರ್ಷನ್‌ ಸಪೋರ್ಟ್‌ ಮಾಡುತ್ತದೆ. ಈ ಹೊಸ ಒಎಸ್‌ ಬಳಕೆದಾರರ ಖಾಸಗಿತನ ರಕ್ಷ ಣೆಯ ಬಗ್ಗೆ ಹೆಚ್ಚು ಒತ್ತು ನೀಡಿದೆ. ಬಹುಶಃ ಆ್ಯಪ್‌ಗಳಿಗೆ ಸಂಬಂಧಿಸಿದಂತೆ ಖಾಸಗಿತನ ಕಾಪಾಡಿಕೊಳ್ಳಲು ಅತಿ ಹೆಚ್ಚು ನಿಯಂತ್ರಣ ಹೊಂದಿದ ಮೊದಲ ಒಎಸ್‌ ಇದಾಗಿದೆ ಎನಿಸುತ್ತದೆ. ಇದು ಮಡಚಬಲ್ಲ ಸ್ಮಾರ್ಟ್‌ಫೋನ್‌ಗಳಿಗೆ ಸಪೋರ್ಟ್‌ ಮಾಡುತ್ತದೆ. ಈಗಾಗಲೇ ಸ್ಯಾಮ್ಸಂಗ್‌ ಮತ್ತು ಹ್ಯುವಯಿ ಕಂಪನಿಗಳು ತಮ್ಮ ಫೋಲ್ಡೆಬಲ್‌ ಸ್ಮಾರ್ಟ್‌ಗಳನ್ನು ಅನಾವರಣ ಮಾಡಿದ್ದು, ಇವುಗಳಲ್ಲಿ ಕ್ಯೂ ಅಧಿಕೃತವಾಗಿ ಬಳಕೆಯಾಗುವ ಬಗ್ಗೆ ಘೋಷಣೆಯಾಗಬೇಕಿದೆ. ಜತೆಗೆ, ಕ್ಯಾಮೆರಾ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ಸುಧಾರಣೆ, ಎಪಿಐ ಕನೆಕ್ಟಿವಿಟಿ ಸೇರಿದಂತೆ ಇನ್ನಿತರ ಕಾರ್ಯನಿರ್ವಹಣೆಯು ಹೆಚ್ಚು ಶಕ್ತಿಶಾಲಿಯಾಗಿರಲಿದೆ. ಕ್ವಿಕ್‌ ಆ್ಯಪ್‌ ಸ್ಟಾರ್ಟ್‌ಅಪ್‌ ಕೂಡ ಇರಲಿದೆ. ಲೊಕೇಷನ್‌ ಆ್ಯಕ್ಸೆಸ್‌ಗೆ ಸಂಬಂಧಿಸಿದಂತೆ ಬಳಕೆದಾರರು ಹೆಚ್ಚಿನ ನಿಯಂತ್ರಣ ಸಾಧಿಸಲಿದ್ದಾರೆ. ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿರುವ ಆ್ಯಂಡ್ರಾಯ್ಡ್‌ ಕ್ಯೂ ಬಗ್ಗೆ ಸಂಪೂರ್ಣ ಮಾಹಿತಿ ಮೇ ತಿಂಗಳಲ್ಲಿ ಹೊರಬೀಳಲಿದೆ. ಕ್ಯಾಲಿಫೋರ್ನಿಯಾದಲ್ಲಿ ಮೇ 7ರಂದು ನಡೆಯಲಿರುವ ಡೆವಲಪರ್‌ಗಳ ಸಮಾವೇಶದಲ್ಲಿ ಇನ್ನೂ ಹೆಚ್ಚಿನ ಸಂಗತಿಗಳು ಬೆಳಕಿಗೆ ಬರಲಿವೆ. 

ಫೋಲ್ಡೆಬಲ್‌ ಫೋನ್‌ಗೆ ಸಪೋರ್ಟ್‌ 
ಆ್ಯಂಡ್ರಾಯ್ಡ್‌ ಕ್ಯೂ ವಿಶೇಷ ಏನೆಂದರೆ ಇದು ಫೋಲ್ಡೆಬಲ್‌ ಫೋನ್‌ಗೆ ಸಪೋರ್ಟ್‌ ಮಾಡುತ್ತದೆ. ಈ ಹೊಸ ಮಾದರಿಯ ಫೋನ್‌ನಲ್ಲಿರುವ ಆ್ಯಪ್‌ಗಳ ಸುಗಮ ಕಾರ್ಯನಿರ್ವಹಣೆಗೆ ಈ ಹೊಸ ಆಪರೇಟಿಂಗ್‌ ಸಿಸ್ಟಮ್‌ ಹೆಚ್ಚು ಸೂಕ್ತವಾಗಿದೆ. 

ಡಾರ್ಕ್‌ ಮೋಡ್‌ 
ಡಾರ್ಕ್‌ಮೋಡ್‌ನಿಂದ ಬ್ಯಾಟರಿ ಹೆಚ್ಚು ಖರ್ಚಾಗುವುದನ್ನು ತಡೆಯಬಹುದು ಮತ್ತು ಕೆಲವು ಆ್ಯಪ್‌ಗಳ ನಿರ್ವಹಣೆಗೆ ಇದು ಅಗತ್ಯ. ಈ ಹಿನ್ನೆಲೆಯಲ್ಲಿ ಗೂಗಲ್‌ ಕಂಪನಿಯು ತನ್ನ ಹೊಸ ಆಪ್‌ರೇಟಿಂಗ್‌ ಸಿಸ್ಟಮ್‌ನಲ್ಲಿ ಡಾರ್ಕ್‌ಮೋಡ್‌ ಅನ್ನು ಪರಿಚಯಿಸುತ್ತಿದೆ. 

ಸುಧಾರಿತ ಪಿಐಪಿ ಮೋಡ್‌ 
ಅತ್ಯಾಧುನಿಕ ಸ್ಯಾಮ್ಸಂಗ್‌ ಫೋನ್‌ಗಳಲ್ಲಿ ಕೆಲಸ ಮಾಡುವ ರೀತಿಯಲ್ಲೇ ಪಿಐಪಿ ಮೋಡ್‌ ಅನ್ನು ಕ್ಯೂನಲ್ಲೂ ಪರಿಚಯಲಸಲಾಗುತ್ತಿದೆ. ಪಿಐಪಿ ಮೋಡ್‌ನಿಂದಾಗಿ ಬಳಕೆದಾರರು ಸ್ಕ್ರೀನ್‌ ಮೇಲೆ ಬೇರೆ ಬೇರೆ ಆ್ಯಪ್‌ಗಳನ್ನು ಪ್ಲೇಸ್‌ ಮಾಡಿಕೊಳ್ಳಬಹುದು. ವಿಶೇಷ ಎಂದರೆ, ಈ ಎಲ್ಲ ಆ್ಯಪ್‌ಗಳನ್ನು ಏಕ ಕಾಲಕ್ಕೆ ರನ್‌ ಮಾಡಬಹುದು. ಹೀಗೆ ಮಾಡುವುದರಿಂದ ಅದು ಪ್ರೊಡಕ್ಟಿವ್‌ ಆಗಿರುತ್ತವೆ. 

ಮುಖ ಚಹರೆ ಪತ್ತೆ 
2018ರಲ್ಲಿ ಬಹಳಷ್ಟು ಕಂಪನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಫೇಷಿಯಲ್‌ ರೆಕಗ್ನಿಷನ್‌(ಮುಖ ಚಹರೆ ಪತ್ತೆ) ಫೀಚರ್‌ ಅನ್ನು ಅಳವಡಿಸಿದವು. ಈ ಹಿನ್ನೆಲೆಯಲ್ಲಿ ಗೂಗಲ್‌ ತನ್ನ ಕ್ಯೂ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಫೇಷಿಯಲ್‌ ರೆಕಗ್ನಿಷನ್‌ ಸಶಕ್ತವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಮಾಡಿದೆ. ಈ ಫೀಚರ್‌ ಅನ್ನು ಬಳಸಲು ತುಂಬ ಸರಳವಾಗಲಿದೆ. ಇದರಿಂದಾಗಿ ಬರುವ ದಿನಗಳಲ್ಲಿ ಇನ್ನಷ್ಟು ಹ್ಯಾಂಡ್‌ಸೆಟ್‌ಗಳಲ್ಲಿ ಈ ವಿಶಿಷ್ಟತೆಯನ್ನು ನಾವು ಕಂಡುಕೊಳ್ಳಬಹುದು. 

ಇನ್ನಷ್ಟು ಪರ್ಮಿಷನ್‌ಗಳು 
ಕ್ಯೂ ಒಎಸ್‌ನ ಇನ್ನೊಂದು ವಿಶೇಷತೆ ಎಂದರೆ, ಕ್ಲಿಪ್‌ಬೋರ್ಡ್‌ನಲ್ಲಿ ಉಳಿಸಿಕೊಳ್ಳಲಾಗಿರುವ ವಿಷಯಗಳಿಗೆ ಆ್ಯಪ್‌ ಆ್ಯಕ್ಸೆಸ್‌ ಪಡೆಯಲು ಅನುಮತಿ ಕೇಳತ್ತದೆ. ಈ ರೀತಿಯ ವ್ಯವಸ್ಥೆ ಸದ್ಯ ಯಾವ ಫೋನ್‌ನಲ್ಲೂ ಇಲ್ಲ. ಹಾಗಾಗಿ, ನೀವು ಕ್ಲಿಪ್‌ಬೋರ್ಡ್‌ನಲ್ಲಿ ಉಳಿಸಿಕೊಳ್ಳಲಾಗಿರುವ ಯಾವುದೇ ವಿಷಯಗಳಿಗೆ ಆ್ಯಪ್‌ ಪ್ರವೇಶಿಸಬೇಕೆಂದರೆ ಅದಕ್ಕೆ ಅನುಮತಿ ನೀಡಲೇಬೇಕಾಗುತ್ತದೆ. 

ಇನ್ನಷ್ಟು ಪರ್ಮಿಷನ್‌ಗಳು 
ಕ್ಯೂ ಬೀಟಾ ವರ್ಷನ್‌ನಲ್ಲಿ ಈಗಾಗಲೇ ಎರಡು ಹೊಸ ಮಾದರಿ ಸ್ಮಾರ್ಟ್‌ ಲಾಕ್‌ಗಳಿರುವುದು ಗೊತ್ತಾಗಿದೆ. ಮೊದಲನೆಯದು- ಆ್ಯಂಡ್ರಾಯ್ಡ್‌ ಸಾಧನಗಳ ಅನ್‌ಲಾಕ್‌ ಟೈಮ್‌ ಅನ್ನು ಇನ್ನೂ ಹೆಚ್ಚಿಗೆ ಮಾಡಬಹುದು. ಎರಡನೆಯದು- ಟ್ರಸ್ಟೆಡ್‌ ಡಿವೈಸ್‌ ಇನ್ನು ಮುಂದೆ ಮತ್ತಷ್ಟು ಟ್ರಸ್ಟೆಡ್‌ ಡಿವೈಸ್‌ ಆಗಿ ಉಳಿಯುತ್ತದೆ. ಯಾಕೆಂದರೆ, ಹೊಸ ಆಪರೇಟಿಂಗ್‌ ಸಿಸ್ಟಮ್‌ ಇನ್ನೂ ಹೆಚ್ಚಿನ ಖಾಸಗಿತವನ್ನು ಪೊರೆಯುತ್ತದೆ ಮತ್ತು ಹೆಚ್ಚಿನ ಭದ್ರತೆಯನ್ನು ಒದಗಿಸುತ್ತದೆ. 

ಹಳೆ ಆ್ಯಪ್‌ಗಳ ಸೂಚನೆ 
ಆಂಡ್ರಾಯ್ಡ್‌ ಕ್ಯೂ ಒಎಸ್‌ ಮತ್ತೊಂದು ವಿಶೇಷ ಎಂದರೆ, ಇದು ನಿಮ್ಮ ಫೋನ್‌ನಲ್ಲಿರುವ ಹಳೆಯದಾದ ಆ್ಯಪ್‌ಗಳ ಬಗ್ಗೆ ಮುನ್ಸೂಚನೆ ನೀಡುತ್ತದೆ. ಲಾಲಿಪಾಪ್‌ ಅಥವಾ ಅದಕ್ಕಿಂತ ಹಿಂದಿನ ಆಪ್‌ರೇಟಿಂಗ್‌ ಸಿಸ್ಟಮ್‌ಗಳ ಆಧಾರದಲ್ಲಿ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದರೆ ಅಂಥ ಆ್ಯಪ್‌ಗಳು ಕ್ಯೂ ಒಎಸ್‌ಗೆ ಹೊಂದಾಣಿಕೆಯಾಗುವುದಿಲ್ಲ ಎಂಬುದನ್ನು ವಿವರಿಸುತ್ತದೆ. ಆ ಮೂಲಕ ಹಳೆಯ ಆ್ಯಪ್‌ಗಳ ಬಗ್ಗೆ ಬಳಕೆದಾರರಿಗೆ ಮಾಹಿತಿ ಒದಗಿಸುತ್ತದೆ. 

ಶುಕ್ರವಾರ, ಮಾರ್ಚ್ 22, 2019

ಆಪ್‌, ಅಣ್ಣಾ ಚಳವಳಿಯ ಬಳುವಳಿ

2011ರಲ್ಲಿ ಅಣ್ಣಾ ಹಜಾರೆ ಅವರು ಜನ ಲೋಕಪಾಲ್‌ ಜಾರಿಗಾಗಿ ದಿಲ್ಲಿಯಲ್ಲಿ ಸತ್ಯಾಗ್ರಹ ಆರಂಭಿಸಿದ್ದರು. ಈ ವೇಳೆ ಮಾಧ್ಯಮಗಳಲ್ಲಿ ಅರವಿಂದ್‌ ಕೇಜ್ರಿವಾಲ್‌ ಎಂಬ ಹೆಸರು ಆಗಾಗ ಕೇಳಲಾರಂಭಿಸಿತು. ಜನ ಲೋಕಪಾಲ್‌ ರೂಪಿಸಿದ ಪ್ರಮುಖರ ಪೈಕಿ ಕೇಜ್ರಿವಾಲ್‌ ಕೂಡ ಒಬ್ಬರಾಗಿದ್ದು, ಸರಕಾರದ ಜತೆಗಿನ ಮಾತುಕತೆಯಲ್ಲಿ ಭಾಗಿಯಾಗುತ್ತಿದ್ದರು. ಭ್ರಷ್ಟಾಚಾರದ ವಿರುದ್ಧದ ಈ ಚಳವಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಲೋಕಪಾಲ್‌ ಅನುಷ್ಠಾನಕ್ಕೆ ಚಳವಳಿಯೇ ಇರಲಿ ಎಂಬ ಅಣ್ಣಾ ನಿಲುವಿಗೆ ಭಿನ್ನ ಅಭಿಪ್ರಾಯ ಹೊಂದಿದ್ದ ಕೇಜ್ರಿವಾಲ್‌ ಹಾಗೂ ಮತ್ತಿತರು ರಾಜಕೀಯ ಭಾಗವಾಗಿ ಅದನ್ನು ಗುರಿ ಸಾಧಿಸಬೇಕೆಂಬ ವಾದವನ್ನು ಪ್ರತಿಪಾದಿಸಿದರು. ಅಂತಿಮವಾಗಿ 2012ರ ನವೆಂಬರ್‌ 26ರಂದು ಅರವಿಂದ್‌ ಕೇಜ್ರಿವಾಲ್‌ ಹಾಗೂ ಇತರರು ಸೇರಿ 'ಆಮ್‌ ಆದ್ಮಿ ಪಾರ್ಟಿ' ಹುಟ್ಟು ಹಾಕಿದರು. 
ಭಾರತೀಯ ರಾಜಕಾರಣದಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಆಪ್‌ ಕ್ರಮೇಣ ಅದು ಕೂಡ ಇತರ ಪಕ್ಷ ಗಳಂತಾಯಿತು. ಪಕ್ಷ ದ ಸ್ಥಾಪಕರ ಗುಂಪಿನಲ್ಲಿದ್ದ ಪ್ರಶಾಂತ್‌ ಭೂಷಣ್‌, ಯೋಗೇಂದ್ರ ಯಾದವ್‌ ಅವರನ್ನು ಪಕ್ಷ ದಿಂದ ಹೊರ ಹಾಕಲಾಯಿತು.
 2013ರಲ್ಲಿ ನಡೆದ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್‌ 70 ಸ್ಥಾನಗಳ ಪೈಕಿ 28 ಸ್ಥಾನ ಗೆದ್ದುಕೊಂಡಿತು. ಯಾವುದೇ ಪಕ್ಷ ಕ್ಕೆ ಬಹುಮತ ಬಾರದ್ದರಿಂದ ಕಾಂಗ್ರೆಸ್‌ನ ಷರತ್ತುಬದ್ಧ ಬೆಂಬಲದೊಂದಿಗೆ ದಿಲ್ಲಿಯಲ್ಲಿ ಸರಕಾರ ರಚಿಸಿತು. ಅರವಿಂದ್‌ ಕೇಜ್ರಿವಾಲ್‌ ಸಿಎಂ ಆದರು. ಆದರೆ, ಜನ ಲೋಕಪಾಲ್‌ ವಿಧೇಯಕ ಜಾರಿಗೆ ಇತರ ಪಕ್ಷ ಗಳಿಂದ ಬೆಂಬಲ ದೊರೆಯದ್ದರಿಂದ ಕೇವಲ 49 ದಿನಗಳಲ್ಲೇ ಸರಕಾರ ಪತನವಾಯಿತು. 2015ರ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಆಪ್‌ ಭಾರೀ ಜಯ ಸಾಧಿಸಿತು. 70 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ದಿಗ್ವಿಜಯ ಸಾಧಿಸಿತು. ಕೇಜ್ರಿವಾಲ್‌ ಮತ್ತೆ ಮುಖ್ಯಮಂತ್ರಿಯಾದರು. ಕಾಂಗ್ರೆಸ್‌ ಶೂನ್ಯ ಸಾಧನೆ ಮಾಡಿದರೆ, ಬಿಜೆಪಿ ಗೆದ್ದಿದ್ದು ಕೇವಲ ಮೂರು ಕ್ಷೇತ್ರ. ದಿಲ್ಲಿ ಗೆಲುವು ಆಪ್‌ಗೆ ಹುಮ್ಮಸ್ಸು ತಂದಿದ್ದರಿಂದ ಪಂಜಾಬ್‌, ಹರಿಯಾಣ, ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಕ್ಷ ದ ನೆಲೆ ಭದ್ರಪಡಿಸಿಕೊಳ್ಳಲು ಸಾಧ್ಯವಾಯಿತು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಲ್ಲಿ ಮೋದಿ ವಿರುದ್ಧ ಕೇಜ್ರಿವಾಲ್‌ ಸ್ಪರ್ಧಿಸಿ ಸೋತರು. ಈ ಚುನಾವಣೆಯಲ್ಲಿ ಆಪ್‌ ದೇಶಾದ್ಯಂತ ಒಟ್ಟು 434 ಸ್ಥಾನಗಳಲ್ಲಿ ಸ್ಪರ್ಧಿಸಿ, ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಕಂಡಿತು. ಭಾರತೀಯ ರಾಜಕಾರಣದಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಆಪ್‌ ಕ್ರಮೇಣ ಅದು ಕೂಡ ಇತರ ಪಕ್ಷ ಗಳಂತಾಯಿತು. ಪಕ್ಷ ದ ಸ್ಥಾಪಕರ ಗುಂಪಿನಲ್ಲಿದ್ದ ಪ್ರಶಾಂತ್‌ ಭೂಷಣ್‌, ಯೋಗೇಂದ್ರ ಯಾದವ್‌ ಅವರನ್ನು ಪಕ್ಷ ದಿಂದ ಹೊರ ಹಾಕಲಾಯಿತು. ಭ್ರಷ್ಟಾಚಾರ ವಿರೋಧಿ ನೀತಿ, ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಸಮಜಾವಾದಿ ಪಕ್ಷ ದ ಧ್ಯೇಯಗಳಾಗಿವೆ. ಪೊರಕೆ ಪಕ್ಷ ದ ಚಿಹ್ನೆ. 

ಗುರುವಾರ, ಮಾರ್ಚ್ 21, 2019

ಗೆಲ್ಲುವ ಕೂಟ ಅರಸುವ ಎಲ್‌ಜೆಪಿ

2017ರಲ್ಲಿ ಮಹಾಮೈತ್ರಿ ಮುರಿದು ಬಿತ್ತು. ಆಗ ಮತ್ತೆ ನಿತೀಶ್‌ ಕುಮಾರ್‌ ಬಿಜೆಪಿ ಜತೆ ಸಖ್ಯ ಬೆಳೆಸಿ ಸಿಎಂ ಆದರು. ಎನ್‌ಡಿಎ ಭಾಗವಾಗಿದ್ದ ಎಲ್‌ಜೆಪಿ ಕೂಡ ಸರಕಾರದಲ್ಲಿ ಪಾಲುದಾರ ಪಕ್ಷ ವಾಯಿತು. ದಲಿತೋದ್ಧಾರ ಧ್ಯೇಯವನ್ನು ಹೊಂದಿರುವ ಎಲ್‌ಜೆಪಿ ಜಾತ್ಯತೀತ, ಸಮಾಜವಾದಿ ಸಿದ್ಧಾಂತವನ್ನು ಅಳವಡಿಸಿಕೊಂಡಿದೆ. 


ಗೆಲ್ಲುವ ಕೂಟಗಳನ್ನು ಆಯ್ಕೆ ಮಾಡಿಕೊಳ್ಳುವ ರಾಮ್‌ ವಿಲಾಸ್‌ ಪಾಸ್ವಾನ್‌ ನೇತೃತ್ವದ ಲೋಕ ಜನಸಕ್ತಿ ಪಾರ್ಟಿ(ಎಲ್‌ಜೆಪಿ) ಬಿಹಾರದಲ್ಲಿ ಸಕ್ರಿಯವಾಗಿದೆ. 2000ರಲ್ಲಿ ಪಾಸ್ವಾನ್‌ ಅವರು ಲೋಕ ಜನಶಕ್ತಿ ಪಾರ್ಟಿಯನ್ನು ಸ್ಥಾಪಿಸಿದರು. 1969ರಲ್ಲಿ ಸಂಯುಕ್ತ ಸೋಷಿಯಲಿಷ್ಟ್‌ ಪಾರ್ಟಿಯಿಂದ ರಾಜಕೀಯ ಜೀವನ ಆರಂಭಿಸಿದ್ದ ಪಾಸ್ವಾನ್‌, ಎಲ್‌ಜೆಪಿ ಸ್ಥಾಪಿಸುವ ಮುನ್ನ ಜನತಾ ದಳದಲ್ಲಿದ್ದರು. 2004ರ ಚುನಾವಣೆಯಲ್ಲಿ ಯುಪಿಎ ಜತೆ ಮೈತ್ರಿಮಾಡಿಕೊಂಡಿದ್ದ ಅವರು ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡು, ಕೇಂದ್ರದಲ್ಲಿ ಸಚಿವರಾದರು. 2005ರ ಫೆಬ್ರವರಿಯಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆಗೂಡಿ ಸ್ಪರ್ಧಿಸಿ, 29 ಸೀಟುಗಳನ್ನು ಎಲ್‌ಜೆಪಿ ಗೆದ್ದುಕೊಂಡಿತು. ಆದರೆ, ಯಾವುದೇ ಪಕ್ಷ ಕ್ಕೆ ಬಹುಮತ ಬಾರದ್ದರಿಂದ ಸರಕಾರ ರಚನೆಯಾಗಲಿಲ್ಲ. ಕೆಲವು ದಿನಗಳವರೆಗೆ ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಯಿತು. ಮತ್ತೆ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಯು ನೇತೃತ್ವದ ಎನ್‌ಡಿಎ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. 
ಎಲ್‌ಜೆಪಿ 203 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತಾದರೂ ಗೆದ್ದಿದ್ದು ಕೇವಲ 10 ಸ್ಥಾನಗಳು ಮಾತ್ರ. 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್‌ಜಿಪಿ 'ನಾಲ್ಕನೇ ರಂಗ'ದ ಭಾಗವಾಗಿತ್ತು. ಎಸ್‌ಪಿ, ಆರ್‌ಜೆಡಿ ಕೂಡ ಇದರಲ್ಲಿದ್ದವು. ಈ ಪ್ರಯೋಗ ಯಶಸ್ವಿಯಾಗಲಿಲ್ಲ. ಎಲ್‌ಜೆಪಿಗೆ ಒಂದೂ ಸ್ಥಾನ ಬರಲಿಲ್ಲ. ಚುನಾವಣೆ ಬಳಿಕ ಆರ್‌ಜೆಡಿ ಬೇಷರತ್ತಾಗಿ ಯುಪಿಎಗೆ ಬೆಂಬಲ ನೀಡಿತು. 2010ರಲ್ಲಿ ಬಿಹಾರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆರ್‌ಜೆಡಿ ಜತೆಗೂಡಿ ಎಲ್‌ಜೆಪಿ ಚುನಾವಣೆ ಸ್ಪರ್ದಿಸಿತಾದರೂ ಗೆದ್ದಿದ್ದು ಕೇವಲ ಮೂರು ಸ್ಥಾನಗಳು ಮಾತ್ರ. ಬೇರೆ ಬೇರೆ ಪಕ್ಷ ಗಳ ಜತೆ ರಾಜಕಾರಣ ಮಾಡಿದ್ದ ಎಲ್‌ಜೆಪಿ ಮತ್ತು 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾಯಿತು. ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಿ 6 ಕ್ಷೇತ್ರಗಳಲ್ಲಿ ಜಯ ಸಾಧಿಸಿತು. ಕೇಂದ್ರದಲ್ಲಿ ಪಾಸ್ವಾನ್‌ ಮಂತ್ರಿಯಾದರು. 2015ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಭಾಗವಾಗಿ 40 ಸ್ಥಾನಗಳಲ್ಲಿ ಸ್ಪರ್ಧಿಸಿ, ಕೇವಲ 2 ಕ್ಷೇತ್ರದಲ್ಲಿ ಜಯ ಸಾಧಿಸಿತು. ಆರ್‌ಜೆಡಿ-ಕಾಂಗ್ರೆಸ್‌-ಜೆಡಿಯು ಮಹಾಮೈತ್ರಿ ಈ ಚುನಾವಣೆಯಲ್ಲಿ ಬಹುಮತ ಪಡೆದು ಸರಕಾರ ರಚಿಸಿತು. 2017ರಲ್ಲಿ ಮಹಾಮೈತ್ರಿ ಮುರಿದು ಬಿತ್ತು. ಆಗ ಮತ್ತೆ ನಿತೀಶ್‌ ಕುಮಾರ್‌ ಬಿಜೆಪಿ ಜತೆ ಸಖ್ಯ ಬೆಳೆಸಿ ಸಿಎಂ ಆದರು. ಎನ್‌ಡಿಎ ಭಾಗವಾಗಿದ್ದ ಎಲ್‌ಜೆಪಿ ಕೂಡ ಸರಕಾರದಲ್ಲಿ ಪಾಲುದಾರ ಪಕ್ಷ ವಾಯಿತು. ದಲಿತೋದ್ಧಾರ ಧ್ಯೇಯವನ್ನು ಹೊಂದಿರುವ ಎಲ್‌ಜೆಪಿ ಜಾತ್ಯತೀತ, ಸಮಾಜವಾದಿ ಸಿದ್ಧಾಂತವನ್ನು ಅಳವಡಿಸಿಕೊಂಡಿದೆ. 

ಮಂಗಳವಾರ, ಮಾರ್ಚ್ 19, 2019

'ಬಿಸಿ'ಯೇರಿದೆಯಾ ಫೋನು?, ಮಂಡೆ ಬಿಸಿ ಮಾಡಿಕೊಳ್ಳಬೇಡಿ, ಕೂಲ್‌ ಮಾಡಲು ಇಲ್ಲಿದೆ ಪರಿಹಾರ

''ಫೋನ್‌ ತುಂಬಾ ಬಿಸಿಯಾಗುತ್ತದೆ,'' ಎಂದು ನಿಮ್ಮ ಸ್ನೇಹಿತರು ಆಗಾಗ ದೂರುವುದನ್ನು ನೀವು ಕೇಳಿರುತ್ತೀರಿ. ಅಲ್ಲದೇ, ನೀವು ಕೂಡ ಅದೇ ರೀತಿ ಹೇಳಿರುತ್ತೀರಿ. ಇದು ಸ್ಮಾರ್ಟ್‌ಫೋನ್‌ ಬಳಕೆದಾರರ ಸಾಮಾನ್ಯ ದೂರು. ವಿಶೇಷವಾಗಿ ಫೋನ್‌ ರಿಜಾರ್ಜ್‌ ಮಾಡುವಾಗ, ಗೇಮ್‌ ಆಡುವಾಗ, ಸ್ಟ್ರೀಮಿಂಗ್‌ ಕಂಟೆಂಟ್‌ ನೋಡುವಾಗ ಫೋನ್‌ ವಿಪರೀತ ಎನ್ನುವಷ್ಟರ ಮಟ್ಟಿಗೆ ಬಿಸಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿನ ಸಾಮರ್ಥ್ಯವಿರುವ ಬ್ಯಾಟರಿಗಳನ್ನು ಎಲ್ಲ ಕಂಪನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಒದಗಿಸುತ್ತಿವೆ. ಈಗೀಗ 4000 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿಗಳು ಸಾಮಾನ್ಯ ಎನ್ನುವಂತಾಗಿದೆ. ಇಷ್ಟು ದೊಡ್ಡ ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಫೋನ್‌ಗಳನ್ನು ಚಾರ್ಜ್‌ ಮಾಡುವಾಗ ಫೋನ್‌ ಬಿಸಿ ನಮ್ಮ ಅನುಭವಕ್ಕೆ ಬರುತ್ತದೆ. ಹಾಗಾದರೆ, ಫೋನ್‌ ಮಿತಿಮೀರಿ ಬಿಸಿಯಾಗಲು ಕಾರಣ ಏನು ಎಂದು ಹುಡುಕತ್ತಾ ಹೊರಟರೆ ಅನೇಕ ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. ಆ ಪೈಕಿ, ಫೋನ್‌ನ ಹಾರ್ಡ್‌ವೇರ್‌ ಸಮಸ್ಯೆ, ಥರ್ಡ್‌ ಪಾರ್ಟಿ ಚಾರ್ಜರ್‌ ಬಳಕೆ, ಅನವಶ್ಯಕ ಆ್ಯಪ್‌ಗಳು ಬಳಕೆ... ಹೀಗೆ ನಾನಾ ಕಾರಣಗಳಿಂದಾಗಿ ಫೋನ್‌ ಬಿಸಿಯಾಗುತ್ತಲೇ ಇರುತ್ತದೆ. ಆದರೆ, ಫೋನ್‌ ಬಿಸಿಯಾಗಿದೆ ಎಂದು ನೀವು ಮಂಡೆಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ. ಕೆಲವು ಟಿಫ್ಸ್‌ಗಳನ್ನು ಅನುಸರಿಸಿದರೆ ಫೋನ್‌ ಬಿಸಿಯಾಗುವುದನ್ನು ಕಡಿಮೆ ಮಾಡಬಹುದು. 

ಬಿಸಿಲು ತಪ್ಪಿಸಿ 

ಬಹಳ ಸಮಯದವರೆಗೆ ಸ್ಮಾರ್ಟ್‌ಫೋನ್‌ ಮೇಲೆ ಬಿಸಿಲು ಬೀಳದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಅದು ಸ್ಮಾರ್ಟ್‌ಫೋನ್‌ ಬಿಸಿಯಾಗಲು ಕಾರಣವಾಗುತ್ತದೆ. ಅದರಲ್ಲೂ ಪ್ಲ್ಯಾಸ್ಟಿಕ್‌ ವಿನ್ಯಾಸ ಹೊಂದಿರುವ ಫೋನ್‌ಗಳು ಇನ್ನೂ ಹೆಚ್ಚಿಗೆ ಬಿಸಿಯಾಗಬಹುದು. ಅಧ್ಯಯನದ ವರದಿಯೊಂದ ಪ್ರಕಾರ, ದೀರ್ಘ ಸಮಯದವರೆಗೆ ಸ್ಮಾರ್ಟ್‌ಫೋನ್‌ ಬಿಸಿಲಿಗೆ ತೆರೆದುಕೊಂಡರೆ ಅದರ ಟಚ್‌ಸ್ಕ್ರೀನ್‌ ಕಾರ್ಯನಿರ್ವಹಣೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದಯಂತೆ. ಹಾಗಾಗಿ, ಮೊಬೈಲ್‌ಗಳನ್ನು ಸಾಧ್ಯವಾದಷ್ಟು ಬ್ಯಾಗ್‌ಗಳಲ್ಲಿ ಇಡಲು ಪ್ರಯತ್ನಿಸಿ. ಅದರಲ್ಲೂ ಚರ್ಮದ ಬ್ಯಾಗ್‌ಗಳಲ್ಲಿದ್ದರೂ ಇನ್ನೂ ಬೆಟರ್‌. 

ಚಾರ್ಜಿಂಗ್‌ ಮಾಡುವಾಗ ಹುಷಾರ್‌ 

ಚಾರ್ಜಿಂಗ್‌ ಮಾಡುವಾಗ ಫೋನ್‌ ಒಂದಿಷ್ಟು ಉಷ್ಣಾಂಶವನ್ನು ಹೊರ ಹಾಕುತ್ತದೆ. ಹಾಗಾಗಿ, ಫೋನ್‌ ಸ್ವಲ್ಪ ಗಾಳಿಗೆ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು. ಚಾರ್ಜ್‌ ಮಾಡುವಾಗ ಅದನ್ನು ಬೆಡ್‌ ಅಥವಾ ಸೋಫಾ ಮೇಲೆ ಇಟ್ಟರೆ, ಉತ್ಪತ್ತಿಯಾಗುವ ಉಷ್ಣಾಂಶವನ್ನು ಹೊರ ಹಾಕಲು ಸಾಧ್ಯವಾಗುವುದಿಲ್ಲ. ಹಾಗಾದಾಗ ಫೋನ್‌ನ ಶಾಖ ಇನ್ನೂ ಹೆಚ್ಚಾಗತೊಡಗುತ್ತದೆ. ಚಾರ್ಜ್‌ ಮಾಡುವಾಗ ಫೋನ್‌ ಅನ್ನು ಗಟ್ಟಿ ಮೇಲ್ಮೈ ಹೊಂದಿರುವ ವಸ್ತುವಿನ ಮೇಲೆ ಇಡುವುದು ಒಳ್ಳೆಯದು. 

ಬ್ಯಾಕ್‌ ಕೇಸ್‌ ತೆಗೆಯರಿ 

ಫೋನ್‌ ಸುರಕ್ಷ ತೆಗೋಸ್ಕರ ಸಾಮಾನ್ಯವಾಗಿ ಎಲ್ಲರೂ ಬ್ಯಾಕ್‌ ಕೇಸ್‌ ಹಾಕಿರುತ್ತಾರೆ. ಆದರೆ, ಇದು ಚಾರ್ಜಿಂಗ್‌ ಮಾಡುವಾಗ ಫೋನ್‌ನ ಉಷ್ಣಾಂಶ ಹೆಚ್ಚಾಗಲು ಕಾರಣವಾಗುತ್ತದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಚಾರ್ಜ್‌ ಮಾಡುವಾಗ ಹ್ಯಾಂಡ್‌ಸೆಟ್‌ನ ಬ್ಯಾಕ್‌ ಕೇಸ್‌ ತೆಗೆಯಿರಿ. ಇದರಿಂದ ಫೋನ್‌ ಹೀಟ್‌ ಆಗುವುದು ತಡೆಯಬಹುದು ಮತ್ತು ಕೂಲ್‌ ಆಗಿ ಇಡಲು ಸಾಧ್ಯವಾಗುತ್ತದೆ. 

 ರಾತ್ರಿ ಪೂರ್ತಿ ಚಾರ್ಜಿಂಗ್‌ ಮಾಡಬಹುದೇ? 

ಈ ಅಂಶವು ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಅನ್ವಯಿಸುವುದಿಲ್ಲ. ಯಾಕೆಂದರೆ, ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳನ್ನು ರಾತ್ರಿಯಿಡಿ ಚಾರ್ಜಿಂಗ್‌ ಇಟ್ಟರೂ ಫೋನ್‌ ಹೀಟ್‌ ಆಗುವುದಾಗಲೀ, ಬ್ಯಾಟರಿ ನಷ್ಟವಾಗುವುದು ಆಗಲಿ ಆಗುವುದಿಲ್ಲ. ಯಾಕೆಂದರೆ, ಬ್ಯಾಟರಿ ಚಾರ್ಜಿಂಗ್‌ ಆದ ತಕ್ಷ ಣ ಅದಕ್ಕೆ ಕರೆಂಟ್‌ ಪ್ರಸರಣ ತಡೆಯಾಗುವಂತೆ ವ್ಯವಸ್ಥೆ ರೂಪಿಸಲಾಗಿರುತ್ತದೆ. ಆದರೆ, ಇದೇ ಮಾತನ್ನು ಹಳೆ ಮಾದರಿಯ ಫೋನ್‌ಗಳಿಗೆ ಹೇಳುವಂತಿಲ್ಲ. ವಿಶೇಷವಾಗಿ ಬೇಸಿಕ್‌ ಫೋನ್‌ಗಳಲ್ಲಿ ಇಂಥ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ, ರಾತ್ರಿಯಿಡಿ ಫೋನ್‌ ಅನ್ನು ಚಾರ್ಜಿಂಗ್‌ ಮಾಡಿದರೆ ಹೆಚ್ಚು ಹೀಟ್‌ ಆಗುವು ಸಾಧ್ಯತೆ ಹೆಚ್ಚಿರುತ್ತದೆ. 

ಆ್ಯಪ್‌ಗಳ ಬಗ್ಗೆ ಇರಲಿ ಎಚ್ಚರ 

ನಮ್ಮ ಸ್ಮಾರ್ಟ್‌ಫೋನ್‌ಗಳ ಆ್ಯಪ್‌ಗಳಿಂದ ತುಂಬಿ ಹೋಗಿರುತ್ತವೆ. ಬೇಕಾದ್ದು, ಬೇಡವಾದ ಎಲ್ಲ ಆ್ಯಪ್‌ಗಳನ್ನು ನಾವು ಡೌನ್‌ಲೋಡ್‌ ಮಾಡಿಕೊಂಡಿರುತ್ತೇವೆ. ಹೀಗೆ ಡೌನ್‌ಲೋಡ್‌ ಮಾಡಿಕೊಂಡ ಆ್ಯಪ್‌ಗಳ ಪೈಕಿ ಅನೇಕ ಆ್ಯಪ್‌ಗಳು ಬ್ಯಾಕ್‌ಗ್ರೌಂಡ್‌ನಲ್ಲಿ ರನ್‌ ಆಗುತ್ತಲೇ ಇರುತ್ತವೆ ಮತ್ತು ಅವು ಬ್ಯಾಟರಿ ಪವರ್‌ ಅನ್ನು ಕಬಳಿಸುವ ಜತೆಗೆ ಫೋನ್‌ ಹೀಟ್‌ ಆಗಲು ತಮ್ಮ ಕೊಡುಗೆಯನ್ನು ನೀಡುತ್ತವೆ. ಹಾಗಾಗಿ, ಕೆಲಸಕ್ಕೆ ಬಾರದ ಮತ್ತು ಬ್ಯಾಕ್‌ಗ್ರೌಂಡ್‌ನಲ್ಲಿ ರನ್‌ ಆಗುವ ಆ್ಯಪ್‌ ಅನ್ನು ಅನ್‌ಇನ್ಸ್‌ಟಾಲ್‌ ಮಾಡುವುದು ಇದಕ್ಕೆ ಇರುವ ಪರಿಹಾರ. 

ಥರ್ಡ್‌ ಪಾರ್ಟಿ ಚಾರ್ಜರ್‌ ಬೇಡ 

ಥರ್ಡ್‌ ಪಾರ್ಟಿ ಚಾರ್ಜರ್‌ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ನಿಮ್ಮ ಫೋನ್‌ ಯಾವ ಕಂಪನಿಯದ್ದು ಇರುತ್ತದೆ ಅದೇ ಕಂಪನಿ ಒದಗಿಸುವ ಚಾರ್ಜರ್‌ಗಳನ್ನು ಬಳಸುವುದು ಸೂಕ್ತ. ಇಲ್ಲದಿದ್ದರೆ ಬ್ಯಾಟರಿ ಮತ್ತು ಚಾರ್ಜರ್‌ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ಬ್ಯಾಟರಿ ಹೆಚ್ಚಿನ ಪ್ರಮಾಣದಲ್ಲಿ ಹೀಟ್‌ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. 


ಸ್ಟ್ರೀಮಿಂಗ್‌ ಕಂಟೆಂಟ್‌ 

ಫೋನ್‌ ಬಿಸಿಯಾಲು ಸ್ಟ್ರೀಮಿಂಗ್‌ ಕಂಟೆಂಟ್‌ ಕೂಡ ಕಾರಣವಾಗುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ನೀವು ಯೂಟೂಬ್‌ ಅಥವಾ ನೆಟ್‌ಫ್ಲಿಕ್ಸ್‌ನಲ್ಲಿ ಗಂಟೆಗಳ ಕಾಲ ಸ್ಟ್ರೀಮಿಂಗ್‌ ಕಂಟೆಂಟ್‌ ನೋಡುತ್ತಿದ್ದರೆ ಹೀಟ್‌ ಜನರೇಟ್‌ ಆಗುತ್ತದೆ. ಇದಕ್ಕೆ ಕಾರಣ; ಫೋನ್‌ ಪ್ರೊಸೆಸರ್‌ ಮೇಲೆ ಹೆಚ್ಚಿನ ಒತ್ತಡ ಬೀಳುವುದರಿಂದ ಉಷ್ಣಾಂಶ ಹೆಚ್ಚಾಗುತ್ತದೆ. 



ಫೋನ್‌ ಯಾಕೆ ಬಿಸಿಯಾಗುತ್ತದೆ? 

ಫೋನ್‌ ಯಾಕೆ ಬಿಸಿಯಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸರಳವಾಗಿದೆ. ಫೋನ್‌ ಬಿಸಿ ಮಾಡುವ ನಿಜವಾದ 'ಅಪರಾಧಿ'ಗಳೆಂದರೆ ಬ್ಯಾಟರಿ, ಪ್ರೊಸೆಸರ್‌ ಮತ್ತು ಸ್ಕ್ರೀನ್‌. ಈ ಮೂರು ಘಟಕಗಳು ಉಷ್ಣಾಂಶವನ್ನು ಹೊರ ಹಾಕುತ್ತಲೇ ಇರುತ್ತವೆ. ಬ್ಯಾಟರಿಯೊಳಗಿನ ರಾಸಾಯನಿಕಗಳು ವಿದ್ಯುತ್‌ ಅನ್ನು ಉತ್ಪಾದಿಸಿ ನೀಡುವಾಗ ಬಿಸಿ ಸಹಜ. ಅದೇ ರೀತಿ, ಪ್ರೊಸೆಸರ್‌ ಮಾಹಿತಿಯನ್ನು ಅತ್ಯಂತ ವೇಗದಲ್ಲಿ ವರ್ಗಾವಣೆ ಮಾಡುತ್ತದೆ. ಸ್ಕ್ರೀನ್‌ ಬೆಳಕಳನ್ನು ಹೊರ ಚೆಲ್ಲುತ್ತದೆ. ಹೀಗಾಗಿ, ಈ ಎಲ್ಲ ಘಟಕಗಳು ತಮ್ಮ ಕಾರ್ಯವನ್ನು ನಿರ್ವಹಿಸುವಾಗ ಉಷ್ಣಾಂಶ ಹೊರ ಹಾಕುತ್ತವೆ ಮತ್ತು ಅದರ ಒಟ್ಟು ಬಿಸಿ ಅನುಭವ ನಮಗಾಗುತ್ತದೆ. ಈ ಮೂರು ಘಟಕಗಳು ಮಾತ್ರವಲ್ಲದೆ ಇನ್ನು ಅನೇಕ ಅಂಶಗಳು ಫೋನ್‌ ಹೀಟ್‌ ಆಗಲು ಕಾರಣಗಳಾಗುತ್ತದೆ. ಈ ಲೇಖನವು ವಿಜಯ ಕರ್ನಾಟಕಲ್ಲಿ  ಪ್ರಕಟವಾಗಿದೆ.




ಶನಿವಾರ, ಮಾರ್ಚ್ 16, 2019

2014ರಲ್ಲಿ ಬಿಜೆಪಿಗೆ ಭರ್ಜರಿ ಜಯ, ಕಾಂಗ್ರೆಸ್‌ಗೆ ಹೀನಾಯ ಸೋಲು

ಯುಪಿಎ-2 ಅವಧಿಯಲ್ಲಿ ಕಾಂಗ್ರೆಸ್‌ನ ಸ್ವಯಂಕೃತ ಅಪರಾಧಗಳು, ಹಗರಣಗಳೇ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಆ ಪಕ್ಷ ದ ಹೀನಾಯ ಸೋಲಿಗೆ ಕಾರಣವಾಯಿತು. 2004-2009ರ ಅವಧಿಯಲ್ಲಿ ಯುಪಿಎ ಬಗ್ಗೆ ಜನರು ಹೊಂದಿದ್ದ ಸಾವಧಾನ ಭಾವ 2014ರ ಚುನಾವಣೆ ಹೊತ್ತಿಗೆ ಆಕ್ರೋಶವಾಗಿ ಪರಿಣಮಿಸಿತು. ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಮತ್ತು ಅವರ ಸಂಪುಟದ ಅನೇಕ ಸಚಿವರ ವಿರುದ್ಧವೇ ಕಲ್ಲಿದ್ದಲು, 2ಜಿ ಸ್ಪೆಕ್ಟ್ರಮ್‌, ಕಾಮನ್ವೆಲ್ತ್‌, ಆದರ್ಶ ಹೌಸಿಂಗ್‌, ಆಗಸ್ಟಾವೆಸ್ಟಲ್ಯಾಂಡ್‌ ಸೇರಿದಂತೆ ಇನ್ನಿತರ ಹಗರಣಗಳು ಕೇಳಿ ಬಂದವು. ದೇಶದಲ್ಲಿ ಎಷ್ಟೆಲ್ಲ ಭ್ರಷ್ಟಾಚಾರ ನಡೆಯುತ್ತಿದ್ದರೂ ಪ್ರಧಾನಿ ಸಿಂಗ್‌ ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂಬ ಆರೋಪ ಸಾಮಾನ್ಯವಾಗಿತ್ತು. 
ಮತ್ತೊಂದೆಡೆ, ಬಿಜೆಪಿಯು ನರೇಂದ್ರ ಮೋದಿ ಅವರನ್ನು ತಮ್ಮ ಸದೃಢ ನಾಯಕರನ್ನಾಗಿ ಬಿಂಬಿಸಿತಲ್ಲದೇ, ದೇಶವನ್ನು ಮುನ್ನಡೆಸಲು ಇವರೇ ಸೂಕ್ತರು ಎಂದು ಪ್ರಚಾರ ಮಾಡಿತು. ಈ ಅವಧಿಯಲ್ಲಾದ ಒಟ್ಟು ಬೆಳವಣಿಗೆಗಳು ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷ ಗಳ ವಿರುದ್ಧ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದವು. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಖಂಡಿತ ಸೋಲುತ್ತದೆ ಎಂದು ಎಲ್ಲರೂ ಉಹಿಸಿದ್ದರು. ಆದರೆ, ತೀರಾ ಡಬಲ್‌ ಡಿಜಿಟ್‌ಗೆ ಕುಸಿಯುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಅಂತಿಮವಾಗಿ ಫಲಿತಾಂಶ ಹೊರ ಬಿದ್ದಾಗ ಕಾಂಗ್ರೆಸ್‌ 44 ಸ್ಥಾನಗಳನ್ನು ಪಡೆದ ಹೀನಾಯ ಸೋಲು ಕಂಡಿತು. ಮತ್ತೊಂದೆಡೆ ಬಿಜೆಪಿ ಏಕಾಂಗಿಯೇ 282 ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ಜಯ ಸಾಧಿಸಿತು. ಕಪ್ಪು ಹಣದ ವಿರುದ್ಧ ಸಮರ ಸಾರುವ ಭರವಸೆ ನೀಡಿದ್ದ ಮೋದಿ ಅವರು ಪ್ರಧಾನಿಯಾದರು. ವಾಜಪೇಯಿ ಬಳಿಕ ಪ್ರಧಾನಿಯಾದ ಬಿಜೆಪಿ ನಾಯಕ ಎಂಬ ಹೆಗ್ಗಳಿಕೆ ಅವರದ್ದಾಯಿತು. ಈ ಚುನಾವಣೆಯಲ್ಲಿ ಎನ್‌ಡಿಎ ಒಟ್ಟು 336 ಸ್ಥಾನಗಳನ್ನು ಗೆದ್ದರೆ, ಯುಪಿಎ ಗೆದ್ದಿದ್ದು ಕೇವಲ 60 ಸ್ಥಾನ ಮಾತ್ರ. ಅಧಿಕೃತ ಪ್ರತಿಪಕ್ಷ ನಾಯಕ ಇರಲಿಲ್ಲ ಎಂಬುದು 16ನೇ ಲೋಕಸಭೆಯ ವಿಶೇಷ. ಅಧಿಕೃತ ಪ್ರತಿಪಕ್ಷ ವಾಗಬೇಕಿದ್ದರೆ 545 ಸ್ಥಾನಗಳ ಪೈಕಿ ಕನಿಷ್ಠ 55 ಸ್ಥಾನಗಳನ್ನು ಗೆಲ್ಲಬೇಕು. ಆದರೆ, ಯಾವ ಪಕ್ಷ ಕ್ಕೂ ಅಷ್ಟು ಸ್ಥಾನಗಳನ್ನು ಗೆಲ್ಲಲಿಲ್ಲ. ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್‌ ಲೋಕಸಭೆಯಲ್ಲಿ ತನ್ನ ನಾಯಕನನ್ನಾಗಿ ಆಯ್ಕೆ ಮಾಡಿತು. ಈಗ ಮತ್ತೆ ಬಿಜೆಪಿ, ಕಾಂಗ್ರೆಸ್‌ 2019ರ ಚುನಾವಣೆಗೆ ಸಜ್ಜಾಗಿವೆ. 
- ತಿಪ್ಪಾರ

ಈ ಲೇಖನವು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ.