ಮಂಗಳವಾರ, ಫೆಬ್ರವರಿ 19, 2019

ಸ್ವರ್ಗದಂಥ ಕಾಶ್ಮೀರ ನರಕವಾಗಿದ್ದೇಕೆ?


'ಸ್ವರ್ಗಕ್ಕಿಂತ ಸುಂದರ!' ಎಂದು ಕಾಶ್ಮೀರ ಕುರಿತು ಕವಿರತ್ನ ಕಾಳಿದಾಸ ಹೇಳಿದ ಮಾತುಗಳೇನೂ ಅತಿಶೋಯುಕ್ತಿವಲ್ಲ. ಹಿಮಾಲಯ ಗರಡಿಯ ಈ ನಾಡು ಕಣ್ಣಿಗೆ ತಂಪೆರೆಯುವ ಬೀಡು. ಆದರೆ, ರಾಜಕೀಯ ಕಾರಣಗಳಿಂದಾಗಿ ಅದರ ಮಣ್ಣಿನಲ್ಲಿ ನಿತ್ಯ ನೆತ್ತರು ಹರಿಯುತ್ತಿದೆ. 'ಭರತ ವರ್ಷ'ದ ಅವಿಭಾಜ್ಯ ಅಂಗವಾದ ಕಾಶ್ಮೀರವು ಇದೀಗ ಪಾಕಿಸ್ತಾನ-ಭಾರತ ನಡುವಿನ 'ಕದನದ ಕೊಂಡಿ'ಯಾಗಿದೆ. ಕಾಶ್ಮೀರದ ಇಂದಿನ ಪರಿಸ್ಥಿತಿಗೆ ಯಾರು, ಹೇಗೆ, ಯಾಕೆ ಕಾರಣರಾದರು ಎಂದು ವಿಶ್ಲೇಷ ಮಾಡುತ್ತ ಕುಳಿತರೆ ಅದು, ಸತ್ತ ಕತ್ತೆಯ ಕಾಲು ಹಿಡಿದು ಎಳೆದಂತಾಗುತ್ತದೆ. ಆಗಿರುವ ಐತಿಹಾಸಿಕ ಪ್ರಮಾದಗಳನ್ನು ತಿದ್ದಿಕೊಂಡು, ಕಾಶ್ಮೀರಕ್ಕೊಂದು ಹೊಸ ಭರವಸೆಯನ್ನು ನೀಡಬೇಕಾದ, ರಾಜಕೀಯ ಪರಿಹಾರವನ್ನು ಕಂಡುಕೊಳ್ಳಬೇಕಾದ ಅಗತ್ಯ ಈ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. 

ಮುಸ್ಲಿಂ ಅರಸರ ಆಳ್ವಿಕೆ

ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಹೊತ್ತಲ್ಲಿ ಕಾಶ್ಮೀರವನ್ನು ಹಿಂದೂ ರಾಜ ಆಳುತ್ತಿದ್ದ. ಅದಕ್ಕೂ ಮೊದಲು ಈ ರಾಜ್ಯವನ್ನು ಅಂದರೆ, 1346ರಿಂದ 1819ರವರೆಗೆ ಮುಸ್ಲಿಂ ರಾಜರು ಆಡಳಿತ ನಡೆಸಿದ್ದಾರೆ. ಈ ಅವಧಿಯಲ್ಲಿ ಹಿಂದೂ ದೇಗುಲಗಳನ್ನು ನಾಶ ಮಾಡಲಾಯಿತು. ಜನರ ಒತ್ತಾಯದಿಂದ ಇಸ್ಲಾಮ್‌ ಧರ್ಮವನ್ನು ಹೇರಲಾಯಿತು. ಆದರೆ, 1587ರಿಂದ 1752ರವರೆಗಿನ ಮೊಘಲ ಆಡಳಿತದಲ್ಲಿ ಕಾಶ್ಮೀರ ಯಾವುದೇ ಅಪಸವ್ಯಗಳಿಗೆ ಒಳಗಾಗಲಿಲ್ಲ. ನಂತರದ ಆಫ್ಘನ್‌ಆಡಳಿತವನ್ನು ಕತ್ತಲೆ ಅವಧಿ ಎದು ಕರೆಯಲಾಗುತ್ತದೆ. 1819ರಲ್ಲಿ ಮುಸ್ಲಿಂ ಆಡಳಿತ ಕೊನೆಗೊಂಡಿತು. 

ಹಿಂದೂ ಅರಸರ ಆಡಳಿತ 
ಮೊದಲನೆಯ ಸಿಖ್‌ ವಾರ್‌(1846)ರ ಮುಕ್ತಾಯ ಬಳಿಕ ಈಗಿರುವ ಕಾಶ್ಮೀರವನ್ನು ಜಮ್ಮುವಿನಲ್ಲಿ ಆಡಳಿತ ಮಾಡುತ್ತಿದ್ದ ಮಹಾರಾಜ ಗುಲಾಬ್‌ ಸಿಂಗ್‌ ಅವರ ಸುಪರ್ದಿಗೆ ವಹಿಸಲಾಯಿತು. ಬಳಿಕ, ಮಹಾರಾಜ ರಣಬೀರ್‌ ಸಿಂಗ್‌, ಮಹಾರಾಜ ಪ್ರತಾಪ್‌ ಸಿಂಗ್‌, ಮಹಾರಾಜ ಹರಿಸಿಂಗ್‌ ಅವರು ಆಧುನಿಕ ಜಮ್ಮು-ಕಾಶ್ಮೀರ ರಾಜ್ಯಕ್ಕೆ ಅಡಿಪಾಯ ಹಾಕಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಹೊತ್ತಲ್ಲಿ ಕಾಶ್ಮೀರವನ್ನು ಆಳುತ್ತಿದ್ದವರು ರಾಜಾ ಹರಿಸಿಂಗ್‌ ಅವರು. 1880ರಲ್ಲಿ ಬ್ರಿಟಿಷ್‌ ಆಡಳಿತವು ಆಫ್ಘಾನಿಸ್ತಾನ ಮತ್ತು ರಷ್ಯಾಗೆ ಸಂಬಂಧಿಸಿದಂತೆ ಸ್ಪಷ್ಟವಾದ ಗಡಿಗಳನ್ನು ಗುರುತಿಸಿತು. 

ಸ್ವಾತಂತ್ರ್ಯದ ಬಳಿಕ ಕಾಶ್ಮೀರ 

ಭಾರತದಿಂದ ಪಾಕಿಸ್ತಾನ ಪ್ರತ್ಯೇಕತೆಯಲ್ಲೇ ಕಾಶ್ಮೀರ ಬಿಕ್ಕಟ್ಟು ಕೂಡ ಅಡಕವಾಗಿದೆ. ವಿಭಜನೆಯ ಸಮಯದಲ್ಲಿ ಕಾಶ್ಮೀರ ಯಾವ ಕಡೆ ಹೋಗಬೇಕು ಎಂಬ ನಿರ್ಧಾರವನ್ನು ಅಂದಿನ ರಾಜ ಹರಿಸಿಂಗ್‌ ಅವರಿಗೆ ಬಿಡಲಾಯಿತು. ಅವರ ಮುಂದೆ ಕೆಲವು ಷರತ್ತುಗಳೊಂದಿಗೆ ಸ್ವತಂತ್ರ ರಾಷ್ಟ್ರವಾಗುವ ಆಯ್ಕೆಯನ್ನು ನೀಡಲಾಗಿತ್ತು. ಕೆಲವು ತಿಂಗಳು ತೊಳಲಾಡಿದ ಬಳಿಕ ಅವರು, ಭಾರತೀಯ ಒಕ್ಕೂಟ ಜತೆ ಸೇರುವ ನಿರ್ಧಾರಕ್ಕೆ ಬಂದರು. ಮುಸ್ಲಿಂ ಬಾಹುಳ್ಯದ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕೆಂದು ಹಟ ಹಿಡಿದ ಪಾಕಿಸ್ತಾನ, ಕಣಿವೆ ರಾಜ್ಯದ ಮೇಲೆ ಯುದ್ಧ ಸಾರಿತು. ರಾಜಾ ಹರಿಸಿಂಗ್‌ ಭಾರತದ ಆಶ್ರಯಕ್ಕೆ ಬಂದರು. ಭಾರತ ತನ್ನ ಸೇನೆಯನ್ನು ಕಾಶ್ಮೀರಕ್ಕೆ ಕಳುಹಿಸಿ ಕೊಟ್ಟಿತು. ಅದು 1948ರ ಸಮಯ. ಉಭಯ ರಾಷ್ಟ್ರಗಳ ನಡುವಿನ ಮೊದಲ ಯುದ್ಧವದು. ಇದರಲ್ಲಿ ಸೋಲುಂಡಿದ್ದು ಪಾಕಿಸ್ತಾನವೇ. ಕಾಶ್ಮೀರದ ಕೆಲವು ಪ್ರದೇಶದ ಮೇಲೆ ಪಾಕಿಸ್ತಾನ ನಿಯಂತ್ರಣ ಸಾಧಿಸಿದರೆ, ಬಹುತೇಕ ಭಾಗವು ಭಾರತದ ಆಡಳಿತಕ್ಕೆ ಒಳಪಟ್ಟಿತು. 

ವಿಶೇಷ ಸ್ಥಾನಮಾನ 

ಭಾರತ ಒಕ್ಕೂಟ ಸೇರಬೇಕಿದ್ದರೆ ಒಂದಿಷ್ಟು ಭರವಸೆಗಳನ್ನು ಈಡೇರಿಸಬೇಕೆಂಬುದು ಅಂದಿನ ರಾಜಮನೆತನದ ಆಗ್ರಹವಾಗಿತ್ತು. ಇದಕ್ಕೆ ಅಂದಿನ ಪ್ರಧಾನಿ ನೆಹರು ಕೂಡ ಒಪ್ಪಿಗೆ ಸೂಚಿಸಿದ್ದರು. ಇದರ ಪರಿಣಾಮವೇ ಸಂವಿಧಾನದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಯಿತು. ರಕ್ಷ ಣೆ, ಹಣಕಾಸು, ಸಂವಹನ ಮತ್ತು ವಿದೇಶಾಂಗ ವ್ಯವಹಾರಗಳನ್ನು ಹೊರತುಪಡಿಸಿ ಉಳಿದ ಎಲ್ಲ ಆಡಳಿತದಲ್ಲಿ ಕಾಶ್ಮೀರವು ಪ್ರತ್ಯೇಕತೆಯನ್ನು ಹೊಂದಿದೆ. ಇದಕ್ಕಾಗಿ ಸಂವಿಧಾನದ ವಿಧಿ 370ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರನ್ವಯ, ಕಾಶ್ಮೀರವು ತನ್ನದೇ ಸ್ವಂತ ಸಂವಿಧಾನ ಹೊಂದಿದ್ದ, ಕೆಲವೊಂದು ವಿಶೇಷ ಹಕ್ಕುಗಳನ್ನು ಪಡೆದುಕೊಂಡಿದೆ. 

 ಬಿಕ್ಕಟ್ಟಿನ ಸುಕ್ಕುಗಳು

ಕಾಶ್ಮಿರ ಸಮಸ್ಯೆ ಮೂಲ ಹುಡುಕುತ್ತಾ ಹೋದರೆ ಅದು ದೇಶ ವಿಭಜನೆಗೆ ತಂದು ನಿಲ್ಲಿಸುತ್ತದೆ. ಮುಸ್ಲಿಮರೇ ಹೆಚ್ಚಾಗಿದ್ದ ರಾಜ್ಯವನ್ನು ಆಳುತ್ತಿದ್ದ ಹಿಂದೂ ರಾಜ ಹರಿಸಿಂಗ್‌ ಭಾರತದೊಂದಿಗೆ ವಿಲೀನಗೊಳಿಸುವ ನಿರ್ಧಾರ ಸಹಜವಾಗಿ ಪಾಕಿಸ್ತಾನಕ್ಕೆ ಹೊಟ್ಟೆಯುರಿಗೆ ಕಾರಣವಾಯಿತು ಮತ್ತು ಅಲ್ಲಿಂದಲೇ ಕಾಶ್ಮೀರ ಕಣಿವೆಯಲ್ಲಿ ನೆತ್ತರ ಹರಿಯಲು ಆರಂಭವಾಯಿತು. ಬಳಿಕ, ಉಭಯ ರಾಷ್ಟ್ರಗಳ ನಾಯಕರು ಕೈಗೊಂಡ ಕೆಲವು ನಿರ್ಧಾರಗಳು ಸಮಸ್ಯೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದವು. ಭಾರತದ ಅಂದಿನ ಪ್ರಧಾನಿ ಜವಾಹರ ಲಾಲ್‌ ನೆಹರು ಅವರು ಈ ವಿಷಯವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ವಿರುದ್ಧ ಈ ಸಮಸ್ಯೆಯನ್ನು ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಸರಿಯಾದ ಉತ್ತರ ಕೊಟ್ಟವರು ಅಂದಿನ ರಕ್ಷ ಣಾ ಸಚಿವ ವಿ. ಕೆ. ಕೃಷ್ಣ ಮೆನನ್‌ಅವರು. 1950ರಲ್ಲಿ ವಿಶ್ವಸಂಸ್ಥೆಯ ವೇದಿಕೆಯಲ್ಲಿ 8 ಗಂಟೆಗಳ ಕಾಲ ಮಾತನಾಡಿ ಕಾಶ್ಮೀರ ಮೇಲಿನ ಹಕ್ಕು ಪ್ರತಿಪಾದಿಸಿದರು. ಕೊನೆಯದಾಗಿ, ಕಾಶ್ಮೀರ ವಿಷಯವನ್ನು ಮತ್ತೆ ಮತ್ತೆ ಕೆದಕುವುದೆಂದರೆ ಸತ್ತ ಕತ್ತೆಯ ಬಾಲ ಹಿಡಿದು ಎಳೆದಂತೆ'' ಎಂದು ಹೇಳಿದ್ದರು. ಆನಂತರದ ರಾಜತಾಂತ್ರಿಕ ಮಾತುಕತೆಗಳು, ಯುದ್ಧಗಳು ಸಮಸ್ಯೆಯನ್ನು ಮತ್ತಷ್ಟು ವಿಸ್ತಾರಗೊಳಿಸಿದವು. ಯುದ್ಧದಲ್ಲಿ ಗೆಲ್ಲಲಾಗದು ಎಂಬ ಕಟು ವಾಸ್ತವ ಅರಿವಾಗುತ್ತಿದ್ದಂತೆ ಪಾಕಿಸ್ತಾನ, ಭಯೋತ್ಪಾದನೆ ಮೂಲಕ ಗೆಲ್ಲುವ ಹೂಟಕ್ಕಿಳಿಯಿತು; ಶಾಂತಿಮಾತುಕತೆಗಳು ಹಳ್ಳ ಹಿಡಿದವು. ಸೇನೆಯ ಕೈಗೊಂಬೆಯಂತೆ ವರ್ತಿಸುವ ಪಾಕಿಸ್ತಾನದ ಯಾವುದೇ ಸರಕಾರವು ಈವರೆಗೂ ನಿರ್ದಿಷ್ಟವಾಗಿ ಪರಿಹಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಮತ್ತೊಂದೆಡೆ ಭಾರತವು, ಭಯೋತ್ಪಾದನೆ ಕೃತ್ಯ ಮತ್ತು ಅಪ್ರಚೋದಿತ ಕಾಳಗವನ್ನು ಗಡಿಯಲ್ಲಿ ನಿರಂತರ ಎದುರಿಸುತ್ತಲೇ ಬಂದಿದೆ. 

ನೆತ್ತರ ಹರಿಸಿದ ಯುದ್ಧಗಳು

ಇಡೀ ಕಾಶ್ಮೀರವನ್ನು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲೇಬೇಕೆಂಬ ಪಾಕಿಸ್ತಾನದ ದುರಾಸೆಯಿಂದಾಗಿ ಈವರೆಗೆ ನಾಲ್ಕು ಯುದ್ಧಗಳು ಉಭಯ ರಾಷ್ಟ್ರಗಳ ನಡುವೆ ನಡೆದಿವೆ. ಈ ಪೈಕಿ ಮೂರು ಯುದ್ಧಗಳು ನೇರವಾಗಿ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದ್ದರೆ, ಒಂದು ಯುದ್ಧವು ಪೂರ್ವ ಪಾಕಿಸ್ತಾನ ವಿಮೋಚನೆಗೆ ಸಂಬಂಧಿಸಿದ್ದಾಗಿದೆ. ವಿಶೇಷ ಎಂದರೆ, ಈ ನಾಲ್ಕೂ ಯುದ್ಧಗಳಲ್ಲಿ ಭಾರತ ಮೇಲುಗೈಯ ಸಾಧಿಸಿದೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಪಾಕಿಸ್ತಾನ ಮಾತ್ರ ಜಯ ದೊರಕಿದ್ದು ತನಗೇ ಎಂದುಹೇಳಿಕೊಳ್ಳುತ್ತದೆ. 

1947 ಯುದ್ಧ: ಇದನ್ನು ಮೊದಲನೆಯ ಕಾಶ್ಮೀರ ಯುದ್ಧ ಎಂದು ಕರೆಯಲಾಗುತ್ತದೆ. 1947 ಅಕ್ಟೋಬರ್‌ನಲ್ಲಿ ಆರಂಭವಾದ ಯುದ್ಧ ಏಪ್ರಿಲ್‌ 1948ರವರೆಗೆ ನಡೆಯಿತು. ಅಂತಿಮವಾಗಿ ಕಾಶ್ಮೀರ ಕಣಿವೆ, ಜಮ್ಮು ಮತ್ತು ಲಡಾಕ್‌ ಭಾರತದ ವಶವಾದರೆ, ಪಾಕಿಸ್ತಾನಕ್ಕೆ ಅಜಾದ್‌ ಕಾಶ್ಮೀರ ಮತ್ತು ಗಿಲ್ಗಿಟ್‌-ಬಾಲ್ಟಿಸ್ತಾನ ದಕ್ಕಿದವು. ಜತೆಗೆ ಲೈನ್‌ ಆಫ್‌ ಕಂಟ್ರೋಲ್‌ ಗುರುತಿಲಾಯಿತು. 

1965ರ ಯುದ್ಧ: ಪಾಕಿಸ್ತಾನದ ಆಪರೇಷನ್‌ ಗ್ರಿಬ್ರಾಲ್ಟರ್‌ನೊಂದಿಗೆ ಯುದ್ಧ ಕೂಡ ಆರಂಭವಾಯಿತು. ಮೊದಲಿಗೆ ಪಾಕಿಸ್ತಾನದ ಸೇನೆಯ ಕಾಶ್ಮೀರದೊಳಗೆ ನುಸುಳಿತು. ಇದಕ್ಕೆ ಪ್ರತಿಯಾಗಿ ಭಾರತವು ಪೂರ್ಣ ಪ್ರಮಾಣದ ಯುದ್ಧವನ್ನು ಘೋಷಿಸಿತು. 17 ದಿನಗಳ ಕಾಲ ನಡೆದ ಯುದ್ಧದಲ್ಲಿ ಎರಡೂ ಕಡೆ ಅಪಾರ ಸಾವು ನೋವು ಸಂಭವಿಸಿತು. ಅಂತಿಮವಾಗಿ ಪಾಕ್‌ ಅಧ್ಯಕ್ಷ ಅಯೋಬ್‌ ಖಾನ್‌ ಮತ್ತು ಅಂದಿನ ಪ್ರಧಾನಿ ಲಾಲ ಬಹದ್ದೂರ್‌ ಶಾಸ್ತ್ರಿ ತಾಷ್ಕೆಂಟ್‌ನಲ್ಲಿ ತಾಷ್ಕೆಂಟ್‌ ಒಪ್ಪಂದಕ್ಕೆ ಸಹಿ ಹಾಕಿದರು. 

ಪೂರ್ವ ಪಾಕಿಸ್ತಾನ ವಿಮೋಚನೆಕಾಶ್ಮೀರ ಕಾರಣಕ್ಕಾಗಿ 1971ರ ಯುದ್ಧ ನಡೆಯಲಿಲ್ಲ. ಬದಲಿಗೆ ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ) ವಿಮೋಚನೆಗಾಗಿ ನಡೆದ ಈ ಯುದ್ಧವಿದು. ಪಶ್ಚಿಮ ಪಾಕಿಸ್ತಾನದ ದುರಾಡಳಿತಕ್ಕೆ ಬೇಸತ್ತ ಪೂರ್ವ ಪಾಕಿಸ್ತಾನದ ನಾಯಕರು ಬಂಡಾಯವೆದ್ದರು. ಪೂರ್ವ ಪಾಕಿಸ್ತಾನದ ನೆರವಿಗೆ ಧಾವಿಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು, ಪೂರ್ವ ಪಾಕಿಸ್ತಾನವನ್ನು ಪಶ್ಚಿಮ ಪಾಕಿಸ್ತಾನದಿಂದ ಬೇರ್ಪಡಿಸುವ ಮೂಲಕ ಭಾರಿ ಹೊಡೆತವನ್ನು ನೀಡಿದರು. ಅಪಾರ ಪ್ರಮಾಣದ ಸಾವು ನೋವು ಸಂಭವಿಸಿತು. ಪಾಕಿಸ್ತಾನದ ನೌಕಾ ಪಡೆ ಮತ್ತು ವಾಯು ಪಡೆ ಇನ್ನಿಲ್ಲದಂತೆ ಘಾಸಿಗೊಂಡವು. ಪಾಕಿಸ್ತಾನದ 90 ಸಾವಿರ ಸೈನಿಕರು ಸೆರೆಯಾಳಾದರು. ಅಂತಿಮವಾಗಿ ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರ ಉದಯವಾಯಿತು. ಪಾಕಿಸ್ತಾನ ಇನ್ನಿಲ್ಲದಂತೆ ನಷ್ಟ ಅನುಭವಿಸಿತು. 

ಕಾರ್ಗಿಲ್‌ ಯುದ್ಧ-1999:ಎಲ್‌ಒಸಿ ದಾಟಿ ಒಳ ನುಗ್ಗಿದ ಪಾಕಿಸ್ತಾನದ ಪಡೆಗಳು ಕಾಶ್ಮೀರ ಕಾರ್ಗಿಲ್‌ ಜಿಲ್ಲೆಯ ಕೆಲವು ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತವು ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆ ಕೈಗೊಂಡಿತು. ಎರಡು ತಿಂಗಳ ಕಾಲ ಈ ಯುದ್ಧ ನಡೆಯಿತು. ಭಾರತೀಯ ಸೇನೆ ತನ್ನೆಲ್ಲ ಪ್ರದೇಶಗಳನ್ನು ಒಂದೊಂದಾಗಿ ಮರಳಿ ವಶಪಡಿಸಿಕೊಂಡಿತು. ಘನಘೋರ ಯುದ್ಧದ ಸುಳಿವು ಅರಿತ ಅಂತಾರಾಷ್ಟ್ರೀಯ ಸಮುದಾಯವು ಯುದ್ಧ ವಿರಾಮಕ್ಕೆ ಒತ್ತಡ ಹೇರಿದವು. ಯುದ್ಧ ಕೊನೆಯಾಯಿತು. ಎರಡು ಕಡೆ ಅಪಾರ ಸಾವು ನೋವು ಸಂಭವಿಸಿತು. 

ಮಾತುಕತೆ, ಒಪ್ಪಂದಗಳು
ಕಾಶ್ಮೀರ ಮೇಲಿನ ಹಕ್ಕು ಸಾಧನೆಗೆ ಪಾಕಿಸ್ತಾನ ಆಗಾಗ ಯುದ್ಧಕ್ಕೆ ಮುಂದಾದರೂ ಭಾರತವು ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅನೇಕ ಒಪ್ಪಂದ ಮತ್ತು ಮಾತುಕತೆಗಳನ್ನು ಆ ರಾಷ್ಟ್ರದ ಜತೆ ಕೈಗೊಂಡಿದೆ. ಈ ಪೈಕಿ ಕೆಲವು ಯಶಸ್ವಿಯಾದರೆ, ಬಹುತೇಕ ವಿಫಲವಾಗಿವೆ. 

ಶಿಮ್ಲಾ ಒಪ್ಪಂದ:
1971ರ ಯುದ್ಧದಲ್ಲಿ ಪಾಕಿಸ್ತಾನ ಸೋತ ನಂತರ ಏರ್ಪಟ್ಟ ಒಪ್ಪಂದವಿದು. ಪಾಕ್‌ ಅಧ್ಯಕ್ಷ ಝುಲ್ಫಿಕರ್‌ ಅಲಿ ಭುಟ್ಟೊ ಮತ್ತು ಪ್ರಧಾನಿ ಇಂದಿರಾ ಗಾಂಧಿ ಅವರು ಶಿಮ್ಲಾದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು. ಅದರ ಅನ್ವಯ ಭಾರತವು ಸೆರೆಯಾಳಾಗಿಸಿಕೊಂಡಿದ್ದ ಎಲ್ಲ ಪಾಕ್‌ ಸೈನಿಕರನ್ನು ಬಿಟ್ಟಕೊಡುವುದು. ಉಭಯ ರಾಷ್ಟ್ರಗಳ ನಡುವಿನ ಸಮಸ್ಯೆಯನ್ನು ಮಾತುಕತೆಯ ಮೂಲಕ ನಡೆಸಬೇಕೆಂದು ಕರಾರು ಮಾಡಲಾಯಿತು. 

1990ರ ದಶಕ: ಈ ಅವಧಿಯಲ್ಲಿ ಉಭಯ ರಾಷ್ಟ್ರಗಳ ಪ್ರಧಾನಿಗಳು ಎರಡು ಬಾರಿ ಭೇಟಿಯಾಗಿ ಮಾತುಕತೆ ನಡೆಸಿದರು. ಹಾಗೆಯೇ ವಿದೇಶಾಂಗ ಕಾರ್ಯದರ್ಶಿಗಳು ಮೂರು ಸುತ್ತಿನ ಮಾತುಕತೆ ನಡೆಸಿದರು. ಕಾಶ್ಮೀರ ಸಮಸ್ಯೆ ಸೇರಿದಂತೆ ಒಟ್ಟು 8 ವಿಷಯಗಳ ಬಗ್ಗೆ ಚರ್ಚಿಸಲಾಯಿತು. 1997ರಲ್ಲಿ ನಡೆದ ಮಾತುಕತೆ ವಿಫಲವಾದರೆ(ಕಾಶ್ಮೀರ ವಿಷಯಕ್ಕಾಗಿ), 1999ರಲ್ಲಿ ಕೈಗೊಳ್ಳಲಾದ ಪ್ರಯತ್ನದಲ್ಲಿ ಉಭಯ ಪ್ರಧಾನಿಗಳು ಲಾಹೋರ್‌ನಲ್ಲಿ ಮಾತುಕತೆ ನಡೆಸಿ ಮೂರು ಒಪ್ಪಂದಕ್ಕೆ ಸಹಿ ಹಾಕಿದದರು. ಆದರೆ, ಪಾಕಿಸ್ತಾನದಲ್ಲಿ ಸೇನಾಡಳಿತ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಎಲ್ಲ ಮಾತುಕತೆಗಳು ವಿಫಲಗೊಂಡವು. 

ಲಾಹೋರ್‌ಗೆ ಬಸ್‌: ಶಾಂತಿಯ ಸಂದೇಶ ಹೊತ್ತು ಅಂದಿನ ಪ್ರಧಾನಿ ವಾಜಪೇಯಿ ಅವರು 1999ರಲ್ಲಿ ಲಾಹೋರ್‌ ಬಸ್‌ ಯಾತ್ರೆಯನ್ನು ಕೈಗೊಂಡರು. ಫೆಬ್ರವರಿ 21ರಂದು ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿದವು. ಆದರೆ, ಬಸ್‌ ಯಾತ್ರೆ ಮುಗಿಸಿ ವಾಪಸ್‌ ಬರುವಷ್ಟರಲ್ಲಿ ಪಾಕಿಸ್ತಾನದ ಸೇನಾ ಪಡೆಗಳು ಕಾರ್ಗಿಲ್‌ನೊಳಗೆ ನುಸುಳಿಕೊಂಡಿದ್ದವು. ಇದೇ ಮುಂದೆ ಕಾರ್ಗಿಲ್‌ ಯುದ್ಧಕ್ಕೆ ಕಾರಣವಾಯಿತು. 

ಭಯೋತ್ಪಾದನೆ
ಯುದ್ಧದ ಮೂಲಕ ಭಾರತದ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ ಎಂಬುದು ಗೊತ್ತಾಗತ್ತಿದ್ದಂತೆ ಪಾಕಿಸ್ತಾನದ ಸೇನೆ ಭಯೋತ್ಪಾದನೆಗೆ ನೀರೇರಿಯಿತು. ಇದಕ್ಕೆ ಕಾಶ್ಮೀರ ಪ್ರತ್ಯೇಕವಾದಿಗಳೂ ಇಂಬು ನೀಡಿದರು. ಸ್ಥಳೀಯರ ಭಾರತ ವಿರೋಧಿ ಭಾವನೆಯನ್ನೆ ಬಂಡವಾಳವಾಗಿಸಿಕೊಂಡ ಅಲ್ಲಿನ ಸೇನೆ ಉಗ್ರ ಸಂಘಟನೆಗಳು ಎಲ್ಲ ಸಹಕಾರ, ನೆರವು ಒದಗಿಸಿತು. ಈ ವಿಷಯ ಪ್ರತಿ ಭಯೋತ್ಪಾದನೆ ಸಂದರ್ಭದಲ್ಲಿ ಸಾಬೀತಾಗಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಬಲಿಯಾದ ಸೈನಿಕರು, ನಾಗರಿಕರ ಪಟ್ಟಿ ದೊಡ್ಡದಿದೆ. ಜೈಷೆ ಇ ಮೊಹಮ್ಮದ್‌ ಉಗ್ರ ಸಂಘಟನೆ ದಾಳಿಗೆ 2017ರಿಂದ 2019ವರೆಗಿನ ಫೆಬ್ರವರಿ 14ರ ವರೆಗೆ 110ಕ್ಕೂ ಹೆಚ್ಚು ಯೋಧರು ಬಲಿಯಾದರೆ, ಉಗ್ರರನ್ನೂ ಸೇನೆ ಸದೆ ಬಡೆದಿದೆ. ಇದು ಕೇವಲ ಉದಾಹರಣೆಯಷ್ಟೆ. ಒಂದು ಅಂದಾಜಿನ ಪ್ರಕಾರ, 1947ರಿಂದ ಇಲ್ಲಿಯವರೆಗೆ ಯೋಧರು, ನಾಗರಿಕರು ಸೇರಿ 40 ಸಾವಿರದಿಂದ 80 ಸಾವಿರವರೆಗೂ ಜನ ಸತ್ತಿದ್ದಾರೆ. ಇದಕ್ಕೆಲ್ಲ ಕೊನೆ ಹಾಡಬೇಕಾದ ಕಾಲ ಈಗ ಸನ್ನಿಹಿತವಾಗಿದೆ. 


https://vijaykarnataka.indiatimes.com/state/vk-special/how-heaven-of-earth-kashmir-becoming-the-hell-due-to-pakistan-terrorism/articleshow/68052382.cms

President Trump Declares National Emergency in USA

President Trump Declares National Emergency in USA: In International current affairs for UPSC, The US president Donald Trump on 15th February 2019 had declared a national emergency to fund the US-Mexico border without congressional approval.

ಬುಧವಾರ, ಜನವರಿ 30, 2019

ಜಾರ್ಜ್ ನೆನಪು: ನಂದಿದ ಸಮಾಜವಾದದ ಕಿಡಿ

ಮಲ್ಲಿಕಾರ್ಜುನ ತಿಪ್ಪಾರ 

ಭಾರತೀಯ ರಾಜಕೀಯ ದಿಗಂತದಲ್ಲಿ ಜಾರ್ಜ್‌ ಫರ್ನಾಂಡಿಸ್‌ ಎಂಬ ಧ್ರುವತಾರೆ ಅಸ್ತಂಗತವಾಗಿದೆ. ಜಾರ್ಜ್‌ ಅವರು 'ಹೋರಾಟ ರಾಜಕಾರಣ'ದ ಕೊನೆಯ ಕೊಂಡಿ. ಹೋರಾಟದ ಮೂಲಕವೇ ರಾಜಕೀಯ ಏಳ್ಗೆ ಕಂಡು, ಜನ ಮತ್ತು ದೇಶಕ್ಕೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯದನ್ನು ಮಾಡಿದವರು. ಅವರನ್ನು ಕೇವಲ ರಾಜಕಾರಣಿ ಎಂಬ ಒಂದೇ ಪದದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಹೋರಾಟಗಾರ, ಕಾರ್ಮಿಕ ಮುಖಂಡ, ಪ್ರಖರ ಸಮಾಜವಾದಿ, ಸಮತಾವಾದಿ, ಅತ್ಯುತ್ತಮ ವಾಗ್ಮಿ... ಹೀಗೆ ಏನೆಲ್ಲ ವಿಶೇಷಣಗಳನ್ನು ಅವರಿಗೆ ಧಾರಾಳವಾಗಿ ನೀಡಬಹುದು. ಅವರು ಎಂದೂ ತಾವು ನಂಬಿದ ಸಿದ್ಧಾಂತಕ್ಕೆ ತಿಲಾಂಜಲಿ ಇಡಲಿಲ್ಲ. ರಾಜಕೀಯದಲ್ಲಿ ಏರಬೇಕಾದ ಎಲ್ಲ ಮಜಲುಗಳನ್ನು ಏರಿದರು; ಯಾವುದಕ್ಕೂ ರಾಜಿಯಾಗಲಿಲ್ಲ. ಅಧಿಕಾರ ಸುಖ ಅವರನ್ನು ಆಲಸಿಯಾಗಿ ಮಾಡಲಿಲ್ಲ; ಗರ್ವಿಷ್ಠರನ್ನಾಗಿಸಲಿಲ್ಲ. ಅಧಿಕಾರ ಬರುವ ಮುಂಚೆ ಹೇಗಿದ್ದರೋ, ಕುರ್ಚಿಯಲ್ಲಿ ಕುಳಿತಾಗಲೂ ಹಾಗೆಯೇ ಇದ್ದರು. ತಾವು ಏರಿದ ಪ್ರತಿ ಹುದ್ದೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದು ಅವರ ದೊಡ್ಡತನ. 

ಅವರ ಉಡುಗೆ ತೊಡುಗೆ ಸಿಂಪಲ್‌. ಒಂದು ಖಾದಿ ಪ್ಯಾಂಟ್‌; ಇಸ್ತ್ರಿಯಾಗದ ಖಾದಿ ಜುಬ್ಬಾ, ಇಷ್ಟೆ ಅವರ ತೊಡುಗೆ. ಬಿಳಿ ಕೂದಲು ತುಂಬಿದ ತಲೆ, ಮುಖಕ್ಕೊಂದು ಅಗಲವಾದ ಕನ್ನಡಕ ಅವರ ಒಟ್ಟು ವ್ಯಕ್ತಿತ್ವಕ್ಕೆ ಒಂದು ಗಂಭೀರತೆಯನ್ನು ತಂದುಕೊಟ್ಟಿತ್ತು. ಆದರೆ, ಅವರ ಜೀವನ ಮಾತ್ರ ಸರಳವಾಗಿರಲಿಲ್ಲ. ಮೂಲತಃ ಕರ್ನಾಟಕದವರಾದರೂ ಇಡೀ ಭಾರತವೇ ಅವರ ಹೋರಾಟದ ಅಂಗಣವಾಗಿತ್ತು. ಅವರು ಕಾಲಿಟ್ಟ ಕಡೆ ಹೋರಾಟದ ಹೆಜ್ಜೆಗಳು ಮೂಡುತ್ತಿದ್ದವು. ಮಂಗಳೂರು, ಬೆಂಗಳೂರು, ಮುಂಬಯಿ, ಬಿಹಾರ, ದಿಲ್ಲಿ... ಹೀಗೆ ಅವರ ಕಾರ್ಯಕ್ಷೇತ್ರ ಹರಡಿಕೊಳ್ಳುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಯಾವಾಗಲೂ ಚಿಂತನೆಗಳಿರುತ್ತಿದ್ದವು. ಕಾರ್ಮಿಕರ ಶ್ರೇಯೋಭಿವೃದ್ಧಿಯೇ ಮೂಲಮಂತ್ರವಾಗಿತ್ತು. ಅವರ ಹಿತರಕ್ಷ ಣೆಗೆ ಎಂಥ ಹೋರಾಟಕ್ಕೂ ಅಣಿಯಾಗುತ್ತಿದ್ದರು. ಒಮ್ಮೆ ಅವರ ಮುಷ್ಕರ ಕರೆಗೆ ಇಡೀ ದೇಶವೇ ಸ್ತಬ್ಧವಾಗಿತ್ತು; ಅಂಥ ಧೀಃಶಕ್ತಿ ಅವರಲ್ಲಿತ್ತು. ಆದರೆ, ಅವರ ಕೊನೆಯ ದಿನಗಳು ಮಾತ್ರ ಯಾತನಾಮಯವಾಗಿದ್ದವು ಎಂಬುದು ಅವರನ್ನು ಇಷ್ಟಪಡೋರಿಗೆ ಅರಗಿಸಿಕೊಳ್ಳಲಾಗದ ಸಂಗತಿ. 

ಕನ್ನಡದ ಕುವರ:ಜಾರ್ಜ್‌ ಫರ್ನಾಂಡಿಸ್‌ ಕನ್ನಡದವರು ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರು ಕರಾವಳಿಯ ಮಂಗಳೂರಿನವರು. 1930 ಜೂನ್‌ 3ರಂದು ಮಂಗಳೂರಿನ ಕ್ಯಾಥೋಲಿಕ್‌ ಕುಟುಂಬದಲ್ಲಿ ಜನಿಸಿದರು. ತಂದೆ ಜೋಸೆಫ್‌ ಫರ್ನಾಂಡಿಸ್‌, ತಾಯಿ ಅಲಿಶಾ ಮಾರ್ಥಾ ಫರ್ನಾಂಡಿಸ್‌. ಇವರಿಗೆ ಆರು ಮಕ್ಕಳು. ಜಾರ್ಜ್‌ ಹಿರಿಯರು. ಕುಟುಂಬದಲ್ಲಿ ಜಾರ್ಜ್‌ ಅವರನ್ನು ಪ್ರೀತಿಯಿಂದ ಎಲ್ಲರೂ ಜರ್ರಿ ಎಂದು ಕರೆಯುತ್ತಿದ್ದರು. ಜೋಸೆಫ್‌ ಅವರದ್ದು ಕ್ರಿಶ್ಚಿಯನ್‌ ಸಂಪ್ರದಾಯಸ್ಥ ಕುಟುಂಬ. ಹಾಗಾಗಿ, ಹಿರಿಯ ಮಗ ಪಾದ್ರಿಯಾಗಲಿ ಎಂದು ಅವರನ್ನು ಪಾದ್ರಿ ತರಬೇತಿಗೆ ಬೆಂಗಳೂರಿಗೆ ಕಳುಹಿಸಿಕೊಟ್ಟರು. ಆದರೆ ಜಾರ್ಜ್‌ ಪಾದ್ರಿಯಾಗಲಿಲ್ಲ. ಬೆಂಗಳೂರು ಬಿಟ್ಟು ಸೀದಾ ಮುಂಬೈ(ಅಂದಿನ ಬಾಂಬೆ)ಗೆ ತೆರಳಿದರು. ಆಗ ಅವರಿಗೆ ಕೇವಲ 19 ವರ್ಷ. ಮುಂಬೈನ ಬೀದಿಗಳಲ್ಲಿ ಅಲೆಯುತ್ತಿದ್ದ ಜಾರ್ಜ್‌ಗೆ ಪರಿಚಯದವರು ಯಾರೂ ಇರಲಿಲ್ಲ. ಎಷ್ಟೋ ಸಾರಿ ಅವರು ಸಮುದ್ರ ತೀರ ಮತ್ತು ರಸ್ತೆಗಳಲ್ಲಿ ಮಲಗುತ್ತಿದ್ದರು. ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ಸಿಗುವವರೆಗೂ ಕೈಗೆ ಸಿಕ್ಕ ಕೆಲಸಗಳನ್ನು ಮಾಡಿದರು. ಮುಂಬೈಯಲ್ಲಿ ಅವರದ್ದು ಅಕ್ಷ ರಶಃ ಕಷ್ಟದ ಜೀವನವೇ ಆಗಿತ್ತು. 

ಲೋಹಿಯಾ ಮತ್ತು ಡಿಮೆಲ್ಲೊ ಸಂಪರ್ಕ: 
ಮುಂಬೈ ಜೀವನದಲ್ಲಿ ಹೋರಾಟ ಬದುಕು ನಡೆಸುತ್ತಿರುವಾಗಲೇ ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಮತ್ತು ಹಿರಿಯ ಕಾರ್ಮಿಕ ಮುಖಂಡ ಡಿ'ಮೆಲ್ಲೊ ಅವರ ಸಂಪರ್ಕ ಜಾರ್ಜ್‌ಗೆ ದೊರಕಿತು. ಇಲ್ಲಿಂದಲೇ ಜಾರ್ಜ್‌ ಅವರ ಹೋರಾಟದ ಮಜಲುಗಳು ಆರಂಭವಾದವು. ಅದು ಕಾರ್ಮಿಕ ಚಳವಳಿಕ ಉಚ್ಛ್ರಾಯ ಕಾಲ. ಹಾಗಾಗಿ, ನಿಧಾನವಾಗಿ ಕಾರ್ಮಿಕ ಚಳವಳಿಯಲ್ಲಿ ಜಾರ್ಜ್‌ ಅಗ್ರಗಣ್ಯ ನಾಯಕರಾಗಿ ರೂಪುಗೊಂಡರು. ಅಲ್ಲಿಂದ ಅವರು 1961ರಲ್ಲಿ ಬಾಂಬೆ ಮುನ್ಸಿಪಲ್‌ ಕಾರ್ಪೊರೇಷನ್‌ಗೆ ಸ್ಪರ್ಧಿಸಿ ಆಯ್ಕೆಯಾದರು. ಹೋರಾಟದ ಜತೆಗೆ ರಾಜಕೀಯ ಜೀವನವನ್ನು ಆರಂಭಿಸಿದರು. 

ಜಾರ್ಜ್‌ ದಿ ಜೈಂಟ್‌ ಕಿಲ್ಲರ್‌! 
ಕಾರ್ಪೊರೇಷನ್‌ಗೆ ಆಯ್ಕೆಯಾದ ಆರು ವರ್ಷದ ಬಳಿಕ ಜಾರ್ಜ್‌ ಲೋಕಸಭೆ ಸ್ಪರ್ಧೆಗೆ ಮುಂದಾದರು. ದಕ್ಷಿಣ ಮುಂಬೈ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿದರು. ಅವರ ಎದುರಾಳಿ, ಮಹಾರಾಷ್ಟ್ರದ ಅಂದಿನ ಪ್ರಖ್ಯಾತ ಕಾಂಗ್ರೆಸ್‌ ನಾಯಕ ಎಸ್‌.ಕೆ.ಪಾಟೀಲ್‌. ಈ ಚುನಾವಣೆಯಲ್ಲಿ ಜಾರ್ಜ್‌ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಫಲಿತಾಂಶ ಪ್ರಕಟವಾದಾಗ ಮಾತ್ರ ಎಲ್ಲರಿಗೂ ಆಶ್ಚರ್ಯವಾಗಿತ್ತು. ಪ್ರಭಾವಿ ಪಾಟೀಲ್‌ರನ್ನು ಸೋಲಿಸಿ ಜಾರ್ಜ್‌ ಆಯ್ಕೆಯಾಗಿದ್ದರು. ಅಲ್ಲಿಂದಲೇ ಅವರಿಗೆ ಎಛಿಟ್ಟಜಛಿ, Thಛಿ ಎಜಿa್ಞಠಿ ಓಜ್ಝ್ಝಿಛ್ಟಿ ಎಂಬ ಹೆಸರು ಬಂತು. ಇಲ್ಲಿಂದ ಅವರು ರಾಜಕೀಯದಲ್ಲಿ ಹಿಂದಿರುಗಿ ನೋಡಲಿಲ್ಲ. ಹೋರಾಟದ ಜತೆಗೆ ರಾಜಕೀಯದಲ್ಲಿ ಒಂದೊಂದೇ ಮೆಟ್ಟಿಲು ಮೇಲೇರಿದರು. 

ಭೂಗತ ನಾಯಕ:1974ರ ಹೊತ್ತಿಗೆ ದೇಶದಲ್ಲಿ ಜಾರ್ಜ್‌ ಜನಪ್ರಿಯ ಹೆಸರಾಗಿತ್ತು. ಈ ಅವಧಿಯಲ್ಲಿ ಅವರು ರೇಲ್ವೆ ಕಾರ್ಮಿಕರ ಮುಷ್ಕರಕ್ಕೆ ಕರೆ ಕೊಟ್ಟಿದ್ದರು. ಅದು ಎಷ್ಟು ಪರಿಣಾಮಕಾರಿ ಕರೆಯಾಗಿತ್ತು ಎಂದರೆ, ಇಡೀ ದೇಶ ಅಕ್ಷ ರಶಃ ಸ್ತಬ್ಧವಾಗಿತ್ತು. ಈ ಮುಷ್ಕರಕ್ಕೆ ದೇಶದ ಎಲ್ಲ ಉದ್ಯಮ ವಲಯಗಳಿಂದ ಬೆಂಬಲ ದೊರಕಿತ್ತು. ಮೂರು ವಾರಗಳ ಈ ಮುಷ್ಕರ ಅಂದಿನ ಪ್ರಧಾನಿ ಇಂದಿರಾ ಗಾಂಧಿಯಲ್ಲೂ ಅಭದ್ರತೆ ಹುಟ್ಟು ಹಾಕಿತ್ತು ಎಂದರೆ ಅದರ ಪರಿಣಾವನ್ನು ಯಾರಾದರೂ ಊಹಿಸಬಹುದು. ಇದೇ ಸಂದರ್ಭದಲ್ಲಿ 'ಲೋಕ ನಾಯಕ' ಜಯಪ್ರಕಾಶ್‌ ನಾರಾಯಣ್‌ ಅವರ ಮೂವ್‌ಮೆಂಟ್‌ ಫಾರ್‌ ಚೇಂಜ್‌ ಚಳವಳಿಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದಿದ್ದರು. ಆಂತರಿಕವಾಗಿ ಹೆಚ್ಚುತ್ತಿದ್ದ ಸರಕಾರ ವಿರೋಧಿ ಧೋರಣೆ ಮತ್ತೊಂದೆಡೆ ಕೋರ್ಟ್‌ನಲ್ಲಾದ ಹಿನ್ನಡೆಯನ್ನು ಅರಗಿಸಿಕೊಳ್ಳಲಾಗದ ಇಂದಿರಾ ಗಾಂಧಿ 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಪ್ರತಿಪಕ್ಷ ನಾಯಕರು ಜೈಲು ಪಾಲಾದರು. ಆಗ ಜಾರ್ಜ್‌ ಮತ್ತು ಅವರ ಜತೆಗಿದ್ದವರು ಭೂಗತರಾದರು. ಈ ಸಂದರ್ಭದಲ್ಲಿ ಬರೋಡಾದಿಂದ ಡೈನಮೈಟ್‌ ತಂದು ಸರಕಾರಿ ಕಚೇರಿಗಳನ್ನು ಧ್ವಂಸಗೊಳಿಸುವ ಯೋಜನೆ ಜಾರ್ಜ್‌ ಅವರದ್ದಾಗಿತ್ತು. ಆದರೆ, ಕೋಲ್ಕತಾ(ಅಂದಿನ ಕಲ್ಕತ್ತಾ)ದಲ್ಲಿ ಸೆರೆ ಸಿಕ್ಕರು. ಡೈನಮೈಟ್‌ ಕದ್ದ ಆರೋಪವನ್ನು ಜಾರ್ಜ್‌ ಮೇಲೆ ಹಾಕಿ ಅವರನ್ನು 9 ತಿಂಗಳು ಕಾಲ ತಿಹಾರ್‌ ಜೈಲಿನಲ್ಲಿ ಇಡಲಾಯಿತು. ಈ ಪ್ರಕರಣವೇ ಮುಂದೆ 'ಬರೋಡಾ ಡೈನಮೈಟ್‌' ಎಂದು ಪ್ರಖ್ಯಾತವಾಯಿತು. ಜೈಲಿನಲ್ಲಿದ್ದುಕೊಂಡೇ ಬಿಹಾರದ ಮುಜಾಫರ್‌ನಗರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ, ಮೂರು ಲಕ್ಷ ಮತಗಳ ಅಂತರದಿಂದ ಗೆದ್ದರು. ಜಾರ್ಜ್‌ ಅವರನ್ನು ಬಂಧಿಸಿದ ಕ್ಷ ಣದಲ್ಲಿ ಅವರ ಕೋಳ ತೊಟ್ಟ ಕೈ ಮೇಲತ್ತಿದ ಫೋಟೋ ಈ ಗೆಲುವಿನಲ್ಲಿ ಭಾರಿ ಪ್ರಭಾವ ಬೀರಿತ್ತು! 

ಸಚಿವರಾದರು ಜಾರ್ಜ್‌:
 
ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಕಂಡಿತು. ಇದೇ ಮೊದಲ ಬಾರಿಗೆ ಮೊರಾರ್ಜಿ ದೇಸಾಯಿ ನೇತೃತ್ವದ ಪ್ರಥಮ ಕಾಂಗ್ರೆಸ್ಸೇತರ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂತು. ತುರ್ತು ಪರಿಸ್ಥಿತಿಯಲ್ಲಿ ಜೈಲುಪಾಲಾಗಿದ್ದ ನಾಯಕರೆಲ್ಲ ಬಿಡುಗಡೆಗೊಂಡರು. ಜಾರ್ಜ್‌ ಅವರು ದೇಸಾಯಿ ಸಂಪುಟದಲ್ಲಿ ಕೈಗಾರಿಕಾ ಸಚಿವರಾದರು. ಬಂಡವಾಳ ಹೂಡಿಕೆ ನಿಯಮಗಳನ್ನು ಉಲ್ಲಂಘಿಸಿದ್ದ ಅಮೆರಿಕ ಐಬಿಎಂ ಮತ್ತು ಕೊಕಾಕೋಲಾ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡ ಫಲವಾಗಿ ಅವರೆಡೂ ಕಂಪನಿಗಳು ಭಾರತದಿಂದ ಕಾಲು ಕೀಳಬೇಕಾಯಿತು. ಮುಂದೆ ಜನತಾ ದಳ ನಾಯಕ ವಿ.ಪಿ. ಸಿಂಗ್‌ ನೇತೃತ್ವದ ಸರಕಾರದಲ್ಲಿ ರೇಲ್ವೆ ಸಚಿವರಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು. ಪಶ್ಚಿಮ ಕರಾವಳಿಯನ್ನು ಸಂಪರ್ಕಿಸುವ ಕೊಂಕಣ ರೇಲ್ವೆ ಯೋಜನೆ ಅನುಷ್ಠಾನಗೊಳಿಸಿದರು. 

ಬಿಜೆಪಿಯ ಸಖ್ಯ:ಜೆಪಿ ಚಳವಳಿಯಲ್ಲಿ ಉದಯಿಸಿದ ನಾಯಕರ ಜನತಾ ಪರಿವಾರ ದಿಕ್ಕಾಪಾಲಾದ ಸಂದರ್ಭ ಅದು. ರಾಜಕೀಯ ಅನಿವಾರ್ಯತೆ ಮತ್ತು ಕಾಂಗ್ರೆಸ್‌ ವಿರೋಧಿ ನೀತಿಯ ಪ್ರಮುಖ ಧ್ಯೇಯದಿಂದಾಗಿ ಜಾರ್ಜ್‌ ಅವರು ಅನಿವಾರ್ಯವಾಗಿ ಬಿಜೆಪಿಯ ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಆಡ್ವಾಣಿ ಜತೆ ಕೈ ಜೋಡಿಸಬೇಕಾಯಿತು. ವಿಶೇಷ ಎಂದರೆ, ಆರ್‌ಎಸ್‌ಎಸ್‌ ನೀತಿಯನ್ನು ಜಾರ್ಜ್‌ ಟೀಕಿಸುತ್ತಿದ್ದರು. ಹಾಗಿದ್ದೂ ಅವರು ಬಿಜೆಪಿ ಜತೆ ಹೆಜ್ಜೆ ಹಾಕಬೇಕಾಯಿತು. ಜತೆಗೆ ಬಿಜೆಪಿ ನೇತೃತ್ವದ ನ್ಯಾಷನಲ್‌ ಡೆಮಾಕ್ರಟಿಕ್‌ ಅಲಯನ್ಸ್‌-ಎನ್‌ಡಿಎ ಸಂಚಾಲಕರಾದರು. ಯಾರೂ ನಿರೀಕ್ಷಿಸದ ರೀತಿಯಲ್ಲಿ 1998ರಲ್ಲಿ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು. ಆಗ ಜಾರ್ಜ್‌ ಅವರಿಗೆ ರಕ್ಷ ಣಾ ಸಚಿವ ಸ್ಥಾನ ತಾನಾಗಿಯೇ ಒಲಿದು ಬಂತು. ವಿಪರ್ಯಾಸ ಎಂದರೆ, ಜಾರ್ಜ್‌ ತಮ್ಮ ಬದುಕಿನುದ್ದಕ್ಕೂ ಅಣ್ವಸ್ತ್ರಗಳನ್ನು ವಿರೋಧಿಸುತ್ತಲೇ ಬಂದಿದ್ದರು. ಆದರೆ, ಅದೇ ಜಾರ್ಜ್‌ ಅವರು ಅಣ್ವಸ್ತ್ರ ಪರೀಕ್ಷೆಯಲ್ಲಿ ವಾಜಪೇಯಿ ಜತೆ ಪಾಲುದಾರರಾದರು! 

ಬೆನ್ನತ್ತಿದ ವಿವಾದಗಳು:ಜಾರ್ಜ್‌ ಅವರು ರಕ್ಷ ಣಾ ಸಚಿವರಾಗಿದ್ದಾಗಲೇ ಬಾರಾಕ್‌ ಕ್ಷಿಪಣಿ ಮತ್ತು ತೆಹಲ್ಕಾ ಹಗರಣಗಳು ಬೆನ್ನು ಹತ್ತಿದವು. ಇದಕ್ಕಾಗಿ ಅವರು ರಕ್ಷ ಣಾ ಸಚಿವ ಸ್ಥಾನವನ್ನು ತೊರೆಯಬೇಕಾಯಿತು. ಮುಂದೆ ತನಿಖೆ ವೇಳೆ ಜಾರ್ಜ್‌ ಅವರು ನಿರ್ದೋಷಿ ಎಂದು ಸಾಬೀತಾದ ಮೇಲೆ ಮತ್ತೆ ರಕ್ಷ ಣಾ ಸಚಿವರಾದರು. ಆದರೆ, ಕಾರ್ಗಿಲ್‌ ಯುದ್ಧದ ವೇಳೆ ಖರೀದಿಸಲಾದ ಶವಪೆಟ್ಟಿಗೆಗಳ ಹಗರಣ ಮತ್ತೆ ಜಾರ್ಜ್‌ ತಲೆಯೇರಿತು. ತೀರಾ ಇತ್ತೀಚೆಗಷ್ಟೇ ಈ ಹಗರಣದಲ್ಲೂ ಜಾರ್ಜ್‌ ಅವರು ನಿರ್ದೋಷಿ ಎಂದು ಸಾಬೀತಾಯಿತಾದರೂ, ಅದನ್ನು ಕೇಳಿ ಸಂತೋಷ ಪಡುವ ಸ್ಥಿತಿಯಲ್ಲಿ ಜಾರ್ಜ್‌ ಇರಲಿಲ್ಲ. ಸಾಮಾನ್ಯವಾಗಿ ಭಾರತದ ಮಗ್ಗಲು ಮುಳ್ಳು ಪಾಕಿಸ್ತಾನ ಎಂದು ಬಹುತೇಕ ರಾಜಕಾರಣಿಗಳು ಹೇಳುತ್ತಾರೆ. ಆದರೆ, ಜಾರ್ಜ್‌ ಮಾತ್ರ ಭಾರತದ ನಂ.1ವೈರಿ ಪಾಕಿಸ್ತಾನವಲ್ಲ ಚೀನಾ ಎಂದು ಬಹಿರಂಗವಾಗಿ ಹೇಳುವ ಮೂಲಕ ಭಾರಿ ಸಂಚಲನಕ್ಕೆ ಕಾರಣವಾಗಿದ್ದರು. 

ನೇಪಥ್ಯಕ್ಕೆ ಜಾರಿದ ಜಾರ್ಜ್‌:
 
2004ರಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಮರಳಿ ಅಧಿಕಾರ ಹಿಡಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಯಾರೂ ನಿರೀಕ್ಷಿಸದ ರೀತಿಯಲ್ಲಿ ಎನ್‌ಡಿಎ ಸೋಲು ಕಂಡು ಕಾಂಗ್ರೆಸ್‌ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂತು. ಈ ಅವಧಿಯಲ್ಲಿ ದೇಶದ ಇಬ್ಬರು ಪ್ರಮುಖ ನಾಯಕರು ನೇಪಥ್ಯಕ್ಕೆ ಜಾರುವಂತಾಯಿತು. ಒಬ್ಬರು ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ, ಮತ್ತೊಬ್ಬರು ಜಾರ್ಜ್‌. ನಂತರ ಅವರಿಗೆ ಅಲ್ಜೈಮರ್‌ ಕಾಯಿಲೆ ಉಲ್ಬಣಗೊಂಡು ಸಂಪೂರ್ಣವಾಗಿ ಸಾರ್ವಜನಿಕ ಜೀವನದಿಂದ ಮರೆಯಾಗಬೇಕಾಯಿತು. 

ಮರಳಿ ಬಾರದ ಲೋಕಕ್ಕೆ:ಜಾರ್ಜ್‌ ಅದ್ಭುತ ಮಾತುಗಾರರು. ಅವರು ಭಾಷಣಕ್ಕೆ ನಿಂತರೆ ಇಡೀ ಜನಸಮೂಹ ತದೇಕ ಚಿತ್ತದಿಂದ ಆಲಿಸುತ್ತಿತ್ತು. ಸಂಸತ್ತಿನಲ್ಲಿ ಮಾತನಾಡಲು ಆರಂಭಿಸಿದರೆ ಇಡೀ ಸಂಸತ್ತೇ ಕಿವಿಯಾಗುತ್ತಿತ್ತು. ಕೊಂಕಣಿ, ಕನ್ನಡ, ಇಂಗ್ಲಿಷ್‌, ಹಿಂದಿ, ಮರಾಠಿ, ತುಳು, ತಮಿಳು, ಉರ್ದು ಸೇರಿದಂತೆ 10 ಭಾಷೆಗಳಲ್ಲಿ ಜಾರ್ಜ್‌ ನಿರರ್ಗಳವಾಗಿ ಮಾತನಾಡುತ್ತಿದ್ದರು. ಪ್ರಖರ ಸಮಾಜವಾದಿಯಾಗಿದ್ದ ಜಾರ್ಜ್‌ ತುಂಬ ದಿನಗಳ ಕಾಲ ಅನಾರೋಗ್ಯಪೀಡಿತರಾಗಿ ಕೊನೆಯ ದಿನಗಳನ್ನು ಅತ್ಯಂತ ಯಾತನೆಯಲ್ಲಿ ಕಳೆದರು. ಅವರೀಗ ಯಾರೂ ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. 

ಜಾರ್ಜ್‌ ಮ್ಯಾಥ್ಯೂ ಫರ್ನಾಂಡಿಸ್‌ 
ಜನನ: 3 ಜೂನ್‌ 1930, ಮಂಗಳೂರು 
ನಿಧನ: 29 ಜನವರಿ 2019 
ಪತ್ನಿ: ಲೈಲಾ ಕಬೀರ್‌ 
ಪಕ್ಷ ಗಳು: ಸಮತಾ, ಜನತಾ ದಳ, ಜನತಾ ಪಾರ್ಟಿ, ಸಂಯುಕ್ತ ಸೋಷಿಯಲಿಸ್ಟ್‌ ಪಾರ್ಟಿ, ಎನ್‌ಡಿಎ 
ಸಿದ್ಧಾಂತ: ಸಮಾಜವಾದ 
ನಿರ್ವಹಿಸಿದ ಖಾತೆಗಳು: ರಕ್ಷ ಣೆ, ಕೈಗಾರಿಕೆ ಮತ್ತು ರೈಲ್ವೆ

ವಿಯೆಟ್ನಾಮಿಯಾಗಿ ಹುಟ್ಟುವೆ! ''ಒಂದು ವೇಳೆ ಪುನರ್ಜನ್ಮ ಎಂಬುದಿದ್ದರೆ ನಾನು ವಿಯೆಟ್ನಾಮಿಯಾಗಿ(ವಿಯೆಟ್ನಾಮ್‌ ಪ್ರಜೆ) ಹುಟ್ಟುವೆ,'' ಎಂದು ಜಾರ್ಜ್‌ ಒಮ್ಮೆ ಹೇಳಿದ್ದರು. ಒಂದುವರೆ ದಶಕದ ಹಿಂದೆ ಬೆಂಗಳೂರಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಈ ಬಯಕೆಯನ್ನು ಅವರು ಹೊರಹಾಕಿದ್ದರು. ''ವಿಯೆಟ್ನಾಮಿ ಜನರು ತಮ್ಮ ಬದ್ಧತೆಯನ್ನು ಪೂರೈಸಲು ಸಾಯಲು ಸಿದ್ಧರಾಗಿರುತ್ತಾರೆ. ಅಂಥ ಶಿಸ್ತು ಅವರಲ್ಲಿರುತ್ತದೆ. ನಾನು ವಿಯೆಟ್ನಾಮ್‌ನ ಅಭಿಮಾನಿ,'' ಎಂದು ಹೇಳಿದ್ದರು. (ಈ ಲೇಖನವು ವಿಜಯ ಕರ್ನಾಟಕದ 2019ರ ಜನವರಿ 30ರ ಸಂಚಿಕೆಯಲ್ಲಿ ಪ್ರಕಟವಾಗಿದೆ) ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:  

ಸೋಮವಾರ, ಮಾರ್ಚ್ 5, 2018

ಕ್ಷಣ ಕ್ಷಣ ಅನುಭವಿಸಿ, ನೆಮ್ಮದಿಯಾಗಿ ಬದುಕಿ

- ಮಲ್ಲಿಕಾರ್ಜುನ ತಿಪ್ಪಾರ
ರಾಜೇಶ್ ದೊಡ್ಡ ಕಂಪನಿಯೊಂದರಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾನೆ. ಕೈ ತುಂಬ ಸಂಬಳ. ಆದರೂ ಆತನಿಗೆ ಸಂತೋಷವೇ ಇಲ್ಲಘಿ. ಯಾವಾಗಲೂ ಭವಿಷ್ಯದ ಚಿಂತೆ. ಮುಂದೆ ಹಾಗಾದರೆ, ಹೀಗಾದರೆ ಎಂಬ ಕೊರಗು. ಆತನ ಹೆಂಡತಿ ಸುಮಾ ಮಾತ್ರ ತುಂಬ ಪ್ರಾಕ್ಟಿಕಲ್. ಭವಿಷ್ಯದ ಬಗ್ಗೆ ವಿನಾಕಾರಣ ಯೋಚಿಸದೆ, ಭಯಭೀತಗೊಳ್ಳದೇ ವರ್ತಮಾನದ ಬದುಕನ್ನು ಸಂತೋಷವಾಗಿ ಕಳೆಯುವ ಗುಣದವಳು. ತನ್ನ ಗಂಡನಿಗೆ, ಈ ಕ್ಷಣದ ಸಂತೋಷ ಅನುಭವಿಸು, ಯಾಕೆ ಸುಮ್ಮನೇ ಭವಿಷ್ಯದ ಬಗ್ಗೆ ಯೋಚಿಸಿ ಈಗಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತೀಯಾ ಎಂದು ಹೇಳುತ್ತಲೇ ಇರುತ್ತಾಳೆ.
***
ಸುರೇಶ್ ಎಂಬಿಎ ೈನಲ್ ಇಯರ್‌ನಲ್ಲಿ ಓದುತ್ತಿದ್ದಾನೆ. ಆತನಿಗೂ ಯಾವಾಗಲೂ ಭವಿಷ್ಯದ ಬಗ್ಗೆಯೇ ಕಾಳಜಿ. ಪರೀಕ್ಷೆ ಬಗ್ಗೆ ವಿಪರೀತ ಭಯ. ೇಲ್ ಆದರೆ ಏನು ಮಾಡುವುದು ಎನ್ನುವಂಥ ಪ್ರಶ್ನೆಗಳ ಮೂಟೆಯನ್ನು ತಲೆಯಲ್ಲಿ ತುಂಬಿಕೊಂಡು, ಓದಿನ ಮೇಲೂ ಏಕಾಗ್ರತೆ ಸಾಧಿಸಲು ಆಗುತ್ತಿಲ್ಲ. ಆತನ ಗೆಳೆಯ ಸುಜಿತ್ ಮಾತ್ರಘಿ, ಪರೀಕ್ಷೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಈ ಕ್ಷಣದಲ್ಲಿ ಓದುವುದಷ್ಟೇ ಮುಖ್ಯ ಎಂದು ಭಾವಿಸಿ, ಅದನ್ನು ಆನಂದಿಸುತ್ತಲೇ ಮಾಡುತ್ತಾನೆ. ಸುರೇಶ್‌ನಿಗೆ ಸುಜಿತ್ ತಿಳಿ ಹೇಳುತ್ತಾನೆ; ಪರೀಕ್ಷೆಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡ. ನಮ್ಮ ಕೆಲಸ ಚೆನ್ನಾಗಿ ಓದುವುದು. ಹಾಗಂತ ಬರೀ ಓದುವುದಲ್ಲ; ಎಂಜಾಯ್ ಮಾಡುತ್ತಾ ಓದುವುದು. ಹಾಗೆ ಮಾಡಿದರೆ, ನಿನಗೆ ಭಯ ಇರುವುದಿಲ್ಲಘಿ. ಸುಮ್ಮನೆ ಯಾಕೆ ಏನೇನೊ ನಿನ್ನಷ್ಟಕ್ಕೆ ನೀನು ಯೋಚನೆ ಮಾಡಿಕೊಂಡು, ಈ ಕ್ಷಣದ ಸಂತೋಷ ಹಾಳು ಮಾಡಿಕೊಳ್ಳುತ್ತೀಯಾ ಎನ್ನುತ್ತಾನೆ.
***
ಈ ತರಹದ ಸಮಸ್ಯೆಯ ಸುಳಿಯಲ್ಲಿ ಬಹಳಷ್ಟು ಜನರು ಸಿಲುಕಿಕೊಂಡಿದ್ದಾರೆ. ಮುಂದೆ ಆಗಬಹುದಾದ  ಇಲ್ಲವೇ ಘಟಿಸಲು ಸಾಧ್ಯವೇ ಇಲ್ಲದಂಥ ಸಂಗತಿಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತೇವೆ. ಅದೇ ವೇಳೆಯಲ್ಲಿ ಈ ಹೊತ್ತಿನಲ್ಲಿ ನಮಗೆ ದೊರೆಯಬಹುದಾದ ಚಿಕ್ಕ, ಪುಟ್ಟ ಸಂತೋಷ, ನೆಮ್ಮದಿಗಳನ್ನೆಲ್ಲ ಮರೆತು, ನಮ್ಮ ಇಡೀ ಜೀವನವನ್ನು ಗೋಳುಮಯ ಮಾಡಿಕೊಳ್ಳುತ್ತೇವೆ. ಇಂಥ ಸಂದರ್ಭದಲ್ಲಿ ಭಗವಾನ್ ಬುದ್ಧ ಹೇಳಿದ ಮಾತು ಹೆಚ್ಚು ಆಪ್ತವಾಗುತ್ತದೆ. ‘ಭೂತಕಾಲದಲ್ಲಿ ವಾಸಿಸಬೇಡ, ಭವಿಷ್ಯದ  ಬಗ್ಗೆ ಚಿಂತಿಸಬೇಡ; ಈ ಕ್ಷಣದ ಬಗ್ಗೆ ಮನಸ್ಸಿನ ಮೇಲೆ ಏಕಾಗ್ರತೆಯನ್ನು ಸಾಧಿಸು’ ಎನ್ನುತ್ತಾರೆ ಬುದ್ಧಘಿ. ಅಂದರೆ, ನಾವು ಈಗ ಏನು ಮಾಡುತ್ತಿದ್ದೇವೊ ಅದನ್ನೇ ಅಚ್ಚುಕಟ್ಟಾಗಿ, ಯಾವುದಕ್ಕೂ ಚ್ಯುತಿ ಬಾರದಂತೆ ಮಾಡಿಬಿಡಬೇಕು. ಅದು ಬಿಟ್ಟುಘಿ, ಅಯ್ಯೊ ನನಗೆ ಹಿಂದೆ ಹೀಗೆ ಆಗಿತ್ತಲ್ಲ ಎಂಬ ಕೊರಗನ್ನು ವರ್ತಮಾನಕ್ಕೆ ಅನ್ವಯಿಸಿಕೊಂಡು ಕುಳಿತುಕೊಳ್ಳಬಾರದು. ಇದರಿಂದ ನಿಮ್ಮ ಈಗಿನ ಕೆಲಸಗಳ್ಯಾವುವೂ ಸುಗಮವಾಗಿ ಮುಗಿಯುವುದಿಲ್ಲಘಿ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಮನಸ್ಸಿನ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಹಾಗೆಯೇ, ಭವಿಷ್ಯದ ಬಗ್ಗೆ ವಿನಾಕಾರಣ ಅತಿಯಾಗಿ ಚಿಂತಿಸುವುದು ಒಳ್ಳೆಯದಲ್ಲಘಿ. ಕಾರಣವಿಲ್ಲದ ಭಯಪಡುವುದು ತರವಲ್ಲಘಿ. ಹಾಗಂತ, ಭವಿಷ್ಯದ ಕುರಿತು ಯೋಚಿಸುವುದೇ ತಪ್ಪು ಎಂದಲ್ಲಘಿ. ಭವಿಷ್ಯದ ಬಗ್ಗೆ ಯೋಜನೆ ರೂಪಿಸಿಕೊಳ್ಳಿಘಿ, ಗುರಿಗಳನ್ನು ಹಾಕಿಕೊಳ್ಳಿಘಿ. ಆದರೆ, ಭಯಗೊಳ್ಳಬೇಡಿ. ಮೇಲಿಂದ ಮೇಲೆ ಆ ಕುರಿತು ಚಿಂತಿಸುವುದು ಮತ್ತು ಅದರಲ್ಲೇ ಕೊರಗುವುದು ವ್ಯಸನವಾಗಬಾರದಷ್ಟೇಘಿ.
ಹಾಗಾದರೆ, ಈ ಕ್ಷಣದಲ್ಲಿ ಬದುಕುವುದು ಹೇಗೆ? ಈ ಪ್ರಶ್ನೆಗೆ ಜರ್ಮನಿಯ ಖ್ಯಾತ ಟೆನ್ನಿಸ್ ತಾರೆ ಏಂಜಿಲಿಕ್ ಕೆರ್ಬರ್ ಅವರ ಮಾತುಗಳು ಉತ್ತರ ನೀಡಬಲ್ಲವು. ‘‘ಯಾವುದೇ ಸಮಸ್ಯೆಘಿ, ಸಂಗತಿಗಳನ್ನು ತುಂಬಾ ಸಂಕೀರ್ಣಗೊಳಿಸಲು ಹೋಗಬೇಡಿ. ರಿಲಾಕ್ಸ್ ಆಗಿರಲು ಪ್ರಯತ್ನಿಸಿ, ಪ್ರತಿ ಕ್ಷಣವನ್ನು ಎಂಜಾಯ್ ಮಾಡಿ ಮತ್ತು ಅದರ ಸದ್ಬಳಕೆ ಮಾಡಿಕೊಳ್ಳಿ,’’ ಎಂದೆನ್ನುವ ಕೆರ್ಬರ್ ಮಾತುಗಳಲ್ಲಿ ಸತ್ಯವಿದೆ. ನಾವೆಲ್ಲರೂ ತಮ್ಮ ಜೀವನದ ಪ್ರತಿ ಕ್ಷಣಗಳನ್ನು ಸಂಕೀರ್ಣಗೊಳಿಸುತ್ತಲೇ ಹೋಗುತ್ತೇವೆ. ತುಂಬ ಸರಳವಾಗಿ ಬಗೆಹರಿಯಬಹುದಾದ ಸಮಸ್ಯೆಯನ್ನು ಗುಡ್ಡ ಮಾಡಿಟ್ಟು ಬಿಡುತ್ತೇವೆ. ಅಯ್ಯೋ ಹೀಗಾಯ್ತಲ್ಲ ಎಂದು ಕರಬುತ್ತೇವೆ. ಸರಳವಾಗಿ ಮುಗಿಯಬಹುದಾದ ಯಾವುದೋ ಕೆಲಸವನ್ನು ತುಂಬ ದಿನಗಳವರೆಗೆ ಎಳೆದುಕೊಂಡು ಹೋಗುತ್ತೇವೆ. ನಮಗೆ ನಾವೇ ಕಲ್ಪಿತ ಶತ್ರುಗಳನ್ನುಘಿ ಸೃಷ್ಟಿಸಿಕೊಂಡು, ಅವರಿಂದಾಗುವ ಅಪಾಯವನ್ನು ಊಹೆ ಮಾಡಿಕೊಂಡು, ಈಗಿನ ಜೀವನದ, ಈ ಕ್ಷಣದ ಸಂತೋಷವನ್ನು ಕೈ ಚೆಲ್ಲಿ ಬಿಡುತ್ತೇವೆ.
‘ಸಮಯ ಮತ್ತು ಅಲೆಗಳು ಯಾರಿಗೂ ಕಾಯುವುದಿಲ್ಲ’ ಎಂಬ ಮಾತಿದೆ. ಅಂದರೆ, ಪ್ರತಿ ಕ್ಷಣವೂ ಅತ್ಯಮೂಲ್ಯಘಿ. ಅಂಥ ಕ್ಷಣವನ್ನು ಗೋಳಾಟದಿಂದ, ಇನ್ನಾವುದೇ ಭಯದಿಂದ ಕಳೆದುಕೊಳ್ಳುವುದು ಬೇಡ. ಆ ಕ್ಷಣವನ್ನು ಸಂಪೂರ್ಣವಾಗಿ ಅನುಭವಿಸಿ. ವರ್ತಮಾನವೇ ನಿಜವಾದ ಬದುಕು ಎಂಬುದನ್ನು ಅರಿತುಕೊಳ್ಳಿಘಿ. ಈ ಹಿಂದೆ ಆಗಿ ಹೋದ ಘಟನೆಗಳನ್ನು ಈಗ ಮತ್ತೆ ತರಲಾಗುವುದಿಲ್ಲಘಿ. ಹಾಗೆಯೇ, ಮುಂದೆ ಬರಬಹುದಾದುದನ್ನು ತಡೆಯಲಾಗುವುದಿಲ್ಲ. ವಾಸ್ತವ ಹೀಗಿರುವಾಗ ನಾವೇಕೆ, ಈ ಕ್ಷಣದ ಸಂತೋಷವನ್ನು ಹಾಳು ಮಾಡಿಕೊಳ್ಳಬೇಕು ಹೇಳಿ? ನೀವು ಮಾಡುವ ಪ್ರತಿ ಕೆಲಸವನ್ನು ಸಂತೋಷದಿಂದ ಮಾಡಿ, ಪ್ರೀತಿಯಿಂದ ಮಾಡಿ. ಆಗ ಅದರಲ್ಲಿ ದೊರೆಯುವ ಆನಂದ ಪದಗಳಿಗೂ ನಿಲುಕದ್ದುಘಿ. ಅದನ್ನು ಅನುಭವಿಸಿಯೇ ಸವಿಯಬೇಕು. ನಾವು ಯಾವಾಗ, ಬದುಕಿನ ಪ್ರತಿ ಕ್ಷಣವನ್ನು ಅನುಭವಿಸುತ್ತೇವೆಯೋ ಆಗಲೇ ನೆಮ್ಮದಿ ದೊರೆಯುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿಘಿ.

 ಪ್ರತಿ ಕ್ಷಣ ಆನಂದಿಸುವುದು ಹೇಗೆ?
- ಸದ್ಯ ನೀವು ಮಾಡುವ ಕೆಲಸದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿ. ಆ ನಿಟ್ಟಿನಲ್ಲಿ ಮನಸ್ಸನ್ನು ತರಬೇತುಗೊಳಿಸಿ.
- ಖಾಲಿಯಾಗಿ ಇರಬೇಡಿ. ಏನಾದರೂ ಮಾಡುತ್ತಲೇ ಇರಿ ಮತ್ತು ಆ ಪ್ರಕ್ರಿಯೆಯನ್ನು ಅನುಭವಿಸಿ.
- ಪ್ರತಿ ಕ್ಷಣವನ್ನು ವರ್ತಮಾನದಲ್ಲೇ ಅನುಭವಿಸುವ ಮತ್ತು ರಿಲಾಕ್ಸ್ ಆಗುವ ತಂತ್ರಗಳನ್ನು ಕರಗತ ಮಾಡಿಕೊಳ್ಳಿ
- ನಿಮ್ಮ ಸುತ್ತಲಿನ ಬಗ್ಗೆ ಗಮನವಿರಲಿ. ಅಂದರೆ, ದೃಶ್ಯಗಳು, ಧ್ವನಿ, ವಾಸನೆ, ವ್ಯಕ್ತಿಗಳು.. ಇತ್ಯಾದಿ.
- ಇತರರ ಮಾತುಗಳನ್ನು ಗಮನವಿಟ್ಟು ಕೇಳಿ. ಸಂಗೀತವನ್ನು ಆಲಿಸಿ. ಅಷ್ಟೇ ಯಾಕೆ, ವೌನವನ್ನೂ ಗಮನವಿಟ್ಟುಕೊಂಡೇ ಅನುಭವಿಸಿ.
- ನೀವು ತಿನ್ನುವ ಆಹಾರವನ್ನು ಸಂತೋಷವಾಗಿಯೇ ತಿನ್ನಿಘಿ. ಆಗ ಸಿಗುವ ಆನಂದವೇ ಬೇರೆ.


(ಈ ಲೇಖನ ಬೋಧಿವೃಕ್ಷದ ಮಾರ್ಚ್ 4ನೇ ತಾರಿಖಿನ ಸಂಚಿಕೆಯಲ್ಲಿ ಪ್ರಕಟವಾಗಿದೆ)

http://www.bodhivrukshaepaper.com/Details.aspx?id=977&boxid=16579717
ಸೋಮವಾರ, ಸೆಪ್ಟೆಂಬರ್ 11, 2017

ಹುಡುಗನೊಬ್ಬನ ಗಜಲ್‌ಗಳು: ಆ ಕಾಗದಲ್ಲಿದ್ದದ್ದು ಎರಡೇ ಪದ; ಕ್ಷಮಿಸಿ ಬಿಡು

- ಪ್ರದ್ಯುಮ್ನ
ಮಳೆಗಾಲದ ಈ ದಿನಗಳೇ ಹಾಗೆ. ಒಂಚೂರು ನೆನಪುಗಳನ್ನು ಹಸಿ ಹಸಿಯಾಗಿಟ್ಟು, ಮತ್ತೊಂದಿಷ್ಟನ್ನು ಶಾಶ್ವತವಾಗಿ ಶವಾಗಾರಕ್ಕೆ ತಳ್ಳುವ ಸಾಧನ. ಇಂದು ವ್ಯಾಪಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟ ದಿನ ಮಳೆ ಮಾಯ; ಮಾರನೇ ದಿನ ಭೋರ್ಗರೆಯುವ ವರ್ಷಧಾರೆ. ನಮ್ಮ್ಮಳಗಿನ ನೆನಪುಗಳು ಹಾಗೆಯೇ. ಅವು ಜೀವಗೊಳ್ಳಲು ಯಾವುದೇ ಸೂಚನೆಗಳಿಲ್ಲ; ಯಾವುದೋ ಒಂದು ಸಣ್ಣ ನೆಪ ಸಾಕು ಭಗ್ಗನೇ ಪ್ರಜ್ವಲಿಸಲು. ಅಂದು ಹಾಗೆಯೇ ಆಗಿತ್ತು. ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಬೆಳಗ್ಗೆ ಸಂಭವಿಸಬೇಕಾಗಿದ್ದ ಎಲ್ಲ ಕೆಲಸಗಳು ಸುಸೂತ್ರವಾಗಿ ನಡೆಯಲಿಲ್ಲ. ಅರ್ಥಾತ್ ಹಾಲು ಹಾಕುವವನು ಸರಿಯಾದ ಟೈಮ್‌ಗೆ ಬರಲಿಲ್ಲ. ಪೇಪರ್ ಹುಡುಗ ತೊಯ್ದ ತೊಪ್ಪೆಯಾದ ನಾಲ್ಕು ಪೇಪರ್‌ಗಳನ್ನು ರಸ್ತೆಯ ಆ ಬದಿಯಿಂದಲೇ ಇತ್ತ ಎಸೆದು ಪರಾರಿ... ಹೀಗೆ ಎಲ್ಲ ಕೆಲಸಗಳು!
ನೀರಿನಲ್ಲಿ ಅದ್ದಿ ತೆಗೆದಂತಿದ್ದ ಪತ್ರಿಕೆಯ ಒಂದೊಂದು ಪುಟವನ್ನು ಎಚ್ಚರಿಕೆಯಿಂದ ಬಿಡಿಸುತ್ತಿರುವಾಗಲೇ ಮೂಲೆಯೊಂದರಲ್ಲಿ ಪುಟ್ಟ ಸುದ್ದಿ ಕಣ್ಣಿಗೆ ಬಿತ್ತು; ಆತ್ಮಹತ್ಯೆ. ಇಂಥ ಸುದ್ದಿಯನ್ನು ನಾನೇನೂ ಮೊದಲ ಬಾರಿ ಓದುತ್ತಿರಲಿಲ್ಲ. ಆತ್ಮಹತ್ಯೆಗಳ ಸುದ್ದಿಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಆದರೆ, ಈ ಸುದ್ದಿ ಮಾತ್ರ ನನ್ನೊಳಗೇ ಮಾಸದೆ, ಕದಲದೇ ಕುಳಿತ್ತಿದ್ದ ಆ ದುರಂತದ ಅನೇಕ ನೆನಪುಗಳನ್ನು ಬಡೆದೆಬ್ಬಿಸಿತು. ನಾನು ಪ್ರತಿಕ್ಷಣ ಮರೆಯಲು ಕಷ್ಟಪಡುವ ಯಾತನಾಮಯ ನೆನಪುಗಳವು.
****
ಅವಳಾದರೂ ಎಂಥವಳು? ಅವಳನ್ನೊಮ್ಮೆ ನೋಡಿದ ಬಳಿಕ ಮತ್ತೊಮ್ಮೆ ತಿರುಗಿ ನೋಡಲೇಬೇಕೆನ್ನುವ ರೂಪವತಿ. ಆಕೆಗೆ ತನ್ನ ರೂಪ, ಲಾವಣ್ಯದ ಬಗ್ಗೆ ತುಸು ಗರ್ವವೂ ಇತ್ತು. ಇಟ್ಸ್ ನ್ಯಾಚುರಲ್. ಆದರೆ, ಅವಳಲ್ಲಿದ್ದ ಧೈರ್ಯ ಮಾತ್ರ ಅದಮ್ಯ, ಅಚಲ, ಬಂಡೆಯಂಥದ್ದು. ಆ ಗುಣವೇ ನನ್ನನ್ನು ಆಕರ್ಷಿಸಿದ್ದು. ಕಾಲೇಜ್‌ಗೆ ಬರುವಾಗ ಬೀದಿ ಕಾಮಣ್ಣರು ತಿರುಗಿ ಬಿದ್ದಿದ್ದು ಆ ಪುಟ್ಟ ಪಟ್ಟಣದ ಪೂರ್ತಿ ದೊಡ್ಡ ಸುದ್ದಿಯಾಗಿತ್ತು. ಹಾಗಿತ್ತು ಅವಳ ಧೈರ್ಯ. ಕಾಲೇಜಿನಲ್ಲಿ ಅವಳನ್ನು ಕಂಡು ಬಹುತೇಕರೆಲ್ಲರೂ ಮಾರು ದೂರವೇ ಇರುತ್ತಿದ್ದರು. ನಾನೋ ಅವಳನ್ನು ನನಗರಿವಿಲ್ಲದಂತೆ ಹುಚ್ಚನಂತೆ ಪ್ರೀತಿಸುತ್ತಿದ್ದೆ. ಆದರೆ, ಹೇಳುವುದು ಹೇಗೆ? ಅದಕ್ಕೆ ಎಲ್ಲಿಂದ ತರಬೇಕು ಧೈರ್ಯ? ಆದರೆ, ಎಂಥ ಗಟ್ಟಿ ಹುಡುಗಿಯಾದರೂ ಅವಳೊಳಗೆ ಒಬ್ಬ ಮುಗ್ಧೆ ಇರುತ್ತಾಳೆ, ಕರುಣಾಮಯಿ ಇರುತ್ತಾಳೆ. ಯಾಕೆಂದರೆ, ಹೆಣ್ಣೆಂದರೆ ಹಾಗೆ ಅಲ್ಲವೇ? ಅವಳು ಸಹನೆಯ ಪ್ರತಿರೂಪ, ವಾತ್ಸಲ್ಯದ ಗಣಿ. ಪ್ರೀತಿ ತೋರಿದರೆ ತಿರುಗಿ ಅದೇ ಸಿಗುತ್ತದೆ ಎನ್ನುತ್ತಾರಲ್ಲ ಹಾಗೆ ಅವಳಿದ್ದಳು. ಅವಳು ಅಂದರೆ ಅವಳೇ. ಅವಳ ಹಾಗೆ ಮತ್ತಾರು ಇರಲಿಲ್ಲ. ಹಾಗಾಗಿ ಕಾಲೇಜ್‌ನಲ್ಲಿ ಅವಳಿಗೆ ಸ್ಟಾರ್‌ಗಿರಿ ತನ್ನಿಂದತಾನೇ ಒಲಿದು ಬಂದಿತ್ತು. ಆಕೆಯ ಕುಟುಂಬವೂ ಆ ಪಟ್ಟಣದಲ್ಲಿ
ಸ್ಥಿತಿವಂತವಾಗಿತ್ತು; ರೆಪ್ಯೂಟೆಡ್ ಫ್ಯಾಮಿಲಿ. ಆದರೆ, ನಾನು? ನನ್ನಲ್ಲೇ ನನಗೇ ಅನೇಕ ಪ್ರಶ್ನೆಗಳಿದ್ದವು; ಉತ್ತರ ದೊರೆಯುವುದು
ಯಾವ ಸಾಧ್ಯತೆಗಳಿರಲಿಲ್ಲ. ಕಾಲೇಜ್‌ಗೆ ಬರುವುದೇ ದೊಡ್ಡ ಸಾಹಸವಾಗಿರುವಾಗ ಇನ್ನು ಪ್ರೀತಿ, ಪ್ರೇಮಕ್ಕೆ ಎಲ್ಲಿಂದ ಬರಬೇಕು
ಧೈರ್ಯ? ಆದರೂ, ಈ ಹುಚ್ಚುಖೋಡಿ ಮನಸ್ಸು ಕೇಳಬೇಕಲ್ಲ. ಅದು ತನ್ನ ಹುಚ್ಚು ಜಗತ್ತಿನಲ್ಲೇ ಲಂಗು ಲಗಾಮಿಲ್ಲದೇ ಓಡುವ ಕುದುರೆ. ನನ್ನ ಕಲ್ಪನೆಯ ಲೋಕದಲ್ಲಿ ಈ ಕುದುರೆ ಕಟ್ಟಿ ಹಾಕುವ ಧೀಮಂತಿಕೆ ಆಕೆಗೂ ಇರಲಿಲ್ಲ. ಇರಲಾದರೂ ಹೇಗೆ ಸಾಧ್ಯ?
ಆದರೆ, ಅದೊಂದು ದಿನ, ಅಲ್ಲಲ್ಲ ಸುದಿನ ಅದು. ಭೂಮಿ-ಆಕಾಶ ಎಂದಾದರೂ ಒಂದಾದೀತೆ ಎಂದು ಭಾವಿಸಿದ್ದವನ ಭಾಗ್ಯದ ಬಾಗಿಲು ತೆರೆದ ದಿನ. ಅಂದು ಹಾಗೆ ಆಗಿತ್ತು. ಬೆಳಗಿನ ಜಾವದಿಂದಲೇ ಸುರಿಯುತ್ತಿದ್ದ ಮಳೆಗೆ ಕರುಣೆಯೇ ಇರಲಿಲ್ಲ. ಆಕಾಶ ತನ್ನೆಲ್ಲ ಸಿಟ್ಟು, ದುಃಖವನ್ನು ಈ ಕಣ್ಣೀರ ಮೂಲಕ ಹಾಕುತ್ತಿದೆ ಎನ್ನುವಂತಿತ್ತು. ಅದು ಎಂಥ ಮಳೆ, ಭೋರ್ಗರೆಯುವ ಜಲಪಾತದಡಿ ಶಬ್ದ ಕೇಳಿಸುತ್ತದಲ್ಲವೇ, ಹಾಗಿತ್ತು ಮಳೆಯು ಭೂಮಿಗೆ ಅಪ್ಪಳಿಸುವಾಗ ಹೊರಡುವ ಸೌಂಡು. ಅಂದರೆ ನೀವೇ ಊಹಿಸಿ. ಬಹುಶಃ ಅಷ್ಟೊಂದು ಮಳೆಯನ್ನು ಈ ಪಟ್ಟಣ ಹಿಂದೆಂದೂ ಕಂಡಿರಲಿಲ್ಲ. ಮಳೆ ತುಸುವೇ ಬಿಡುವು ಕೊಟ್ಟಿದ್ದ  ಸಮಯದಲ್ಲಿ  ನಾನು ನನ್ನ ತಡಕ್ಲಾಸ್ ಸೈಕಲ್ ಏರಿ ಕಾಲೇಜ್‌ನತ್ತ ಮುಖ ಮಾಡಿದ್ದೆ. ಇನ್ನೇನೂ ಕಾಲೇಜ್ ಅರ್ಧ ಕಿಲೋ ಮೀಟರ್ ಇರಬೇಕು. ಅವಳು ತನ್ನ ಸ್ಕೂಟಿ ತಳ್ಳುತ್ತಾ  ಏದುಸಿರು  ಬಿಡುತ್ತಾ ಹೊರಟಿದ್ದಳು. ನಾನು ಅವಳನ್ನೊಮ್ಮೆ ನೋಡಿ ಮುಗಳ್ನಕ್ಕೆ. ಅವಳ ಕಣ್ಣಿನಲ್ಲಿ ನೆರವಿನ ಬೇಡಿಕೆ; ಅದನ್ನರಿತೇ ಅವಳತ್ತ ಧಾವಿಸಿದೆ. ಇಲ್ಲದಿದ್ದರೆ ಆಕೆಯತ್ತ ಹೋಗುವ ಧೈರ್ಯ ಯಾವ ಹುಡುಗನಿಗಿತ್ತು ಹೇಳಿ? ಅವಳಿಗೆ ಗೊತ್ತಿತ್ತು ಕಾಲೇಜ್ ಬಿಡುವಿನ ವೇಳೆ ನಾನು ಮೋಟಾರ್ ಸೈಕಲ್ ರಿಪೇರಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದದ್ದು. ಆಕೆಯ ಸ್ಕೂಟಿ ಪಕ್ಕಕ್ಕೆ ಹಚ್ಚಿ ಒಂದಿಷ್ಟು ಆ ಕಡೆ, ಈ ಕಡೆ ನೋಡಿದೆ, ಪ್ಲಗ್ ಕ್ಲೀನ್ ಮಾಡಿ ಹಾಕಿದ್ದೇ ತಡ ಸ್ಕೂಟಿ ತನ್ನ ಎಂದಿನ ಲಯಕ್ಕೆ ಮರಳಿತ್ತು. ಅವಳ ಮುಖದಲ್ಲಿ ಖುಷಿಯ ಹೊನಲಿತ್ತು. ಸಣ್ಣಗೆ ಹನಿಯುತ್ತಿದ್ದ ಮಳೆಗೆ ಆಕೆಯ ಮುಖ ತುಂಬ ಮಳೆ ಹನಿಗಳ ಮುತ್ತಗಳಿದ್ದವು!
ನಾನು ಇನ್ನೇನು ಸೈಕಲ್ ಏರಬೇಕನ್ನುವಷ್ಟರಲ್ಲಿ. ‘‘ನಂಗೆ ಗೊತ್ತು. ನೀನು ನನ್ನ ಇಷ್ಟಪಡಿತ್ತಿದ್ದೀಯಾ,’’ ಎಂದವಳೇ ಸ್ಕೂಟಿಯ ಕಿವಿ ಹಿಂಡಿತ್ತಾ, ಮುಗುಳು ನಗೆ ಬೀರಿ ಹೊರಟೇ ಹೋದಳು. ಇತ್ತ ಮಳೆ ಕರುಣೆ ಇಲ್ಲದಂತೆ ಭೋರ್ಗರೆಯಲಾರಂಭಿಸಿತು ಮತ್ತೆ. ಅಲ್ಲಿಗೆ ಎಲ್ಲ ಖಾತ್ರಿಯಾಗಿತ್ತು. ಅವಳ್ಯಾಕೆ ನನ್ನನ್ನು ಇಷ್ಟಪಡುತ್ತಿದ್ದಳು ಎನ್ನುವುದು ಇಂದಿಗೂ ನನಗೆ ಗೊತ್ತಿಲ್ಲ. ಅಂದಿನ ಆ ನಮ್ಮ ಭೇಟಿ ಮುಂದೆ ದಿನವೂ ನಮ್ಮಿಬ್ಬರ ಸ್ನೇಹ ಮತ್ತೊಂದು ಹಂತಕ್ಕೆ ತಲುಪಿ, ಪ್ರೀತಿಯ ಹಡಗಿನಲ್ಲಿ ಪಯಣಿಸಲು ದಾರಿ ಮಾಡಿಕೊಟ್ಟಿತ್ತು. ಅವಳ ಜತೆ ಕಳೆದ ಅಷ್ಟೂ ಕ್ಷಣಗಳು ನನ್ನ ಪಾಲಿನ ಅಮೂಲ್ಯ ರತ್ನಗಳು. ಅವುಗಳಿಗೆ ಬೆಲೆಯೇ ಕಟ್ಟಲಾಗದು.
ನಮ್ಮ ಎಂದಿನ ಭೇಟಿಗಳಲ್ಲಿ ಗೊತ್ತಾಗಿದ್ದು ಏನಂದರೆ; ಅವಳು ತನ್ನ ತಾಯಿಯನ್ನು ಬೆಟ್ಟದಷ್ಟು ಪ್ರೀತಿಸುತ್ತಿದ್ದಳು. ಇನ್‌ಫ್ಯಾಕ್ಟ್, ನನ್ನನ್ನು ಪ್ರೀತಿಸುವುದುಕ್ಕಿಂತಲೂ ಹೆಚ್ಚು. ತಾಯಿಯೇ ಆಕೆಗೆ ಸ್ನೇಹಿತೆ, ಗುರು... ಎಲ್ಲವೂ ಆಗಿದ್ದಳು. ಅಷ್ಟೊಂದು ಗಟ್ಟಿಗತ್ತಿಯಾಗಲು ತಾಯಿಯೇ ಕಾರಣ ಎನ್ನುತ್ತಿದ್ದವಳು, ಆಕೆಯನ್ನು ಯಾವಾಗ ಬೇಕಾದರೂ ನಾನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದೇನೆ ಎಂದು ಕಣ್ಣೀರು ಹಾಕುತ್ತಿದ್ದಳು. ಅವಳು ಇಲ್ಲದಿದ್ದರೆ ತನಗೇ ಬದುಕೇ ಇಲ್ಲ. ನೀನು ನನ್ನ ತಾಯಿಯೇ ಆಗಬೇಕು ಎನ್ನುತ್ತಿದ್ದುದ್ದನ್ನು ನೋಡಿದರೆ, ಇವಳೇನಾ ಕಾಲೇಜಿನಲ್ಲಿ ನಾನು ನೋಡಿದ ಗಟ್ಟಿಗತ್ತಿ ಎಂಬ ಅನುಮಾನ ಬರುತ್ತಿತ್ತು. ಆಂತರ್ಯದಲ್ಲಿ ಅಷ್ಟೊಂದು ಮೃದುವಾಗಿದ್ದಳು.
ಆಕೆ, ಯಾವ ಕ್ಷಣ ತನ್ನ ಜೀವನದಲ್ಲಿ ಬರಬಾರದು ಎಂದು ಹಗಲಿರುವ ಪ್ರಾರ್ಥಿಸುತ್ತಿದ್ದಳು ಆ ಕ್ಷಣ ಬಂದು ಬಿಟ್ಟಿತು. ಇತಿಹಾಸದ ಮೇಷ್ಟ್ರು ತಮ್ಮ ಎಂದಿನ ಕಥನ ಶೈಲಿಯಲ್ಲಿ ಪಾಠ ಮಾಡುತ್ತಿರುವಾಗಲೇ ಅಟೆಂಡರ್ ಬಂದು ಆಕೆಯನ್ನು ಹೊರ ಕರೆದು ತಾಯಿ ಸತ್ತ ಸುದ್ದಿ ಮುಟ್ಟಿಸಿದ್ದ. ಆಕೆಯ ಕಣ್ಣೀರು ಕಂಡೆ ನನಗೆಲ್ಲವೂ ಅರ್ಥವಾಗಿತ್ತು. ಆಕೆಯ ಹಿಂದೆ ನಾನು ಎದ್ದು ಹೊರಟೆ. ಅವಳ ಮುಖ ನೋಡುವ ಧೈರ್ಯ ನನ್ನಲ್ಲಿರಲಿಲ್ಲ. ಕಣ್ಣೀರು ಸುರಿಯುತ್ತಲೇ ಇತ್ತು. ಅಯ್ಯೋ ದೇವರೇ... ಆಕೆಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡೆಂದು ಕೇಳಿಕೊಳ್ಳುವುದನ್ನು ಬಿಟ್ಟರೆ ಆಕೆಯನ್ನು ಸಂತೈಸುವ ದಾರಿ ನನ್ನ ಬಳಿ ಇರಲಿಲ್ಲ.
ಎಲ್ಲವು ಮುಗಿದು ಮತ್ತೆ ಕಾಲೇಜ್‌ಗೆ ಬಂದಾಗ ಆಕೆ ಮೊದಲಿನಂತಿರಲಿಲ್ಲ. ಆಕೆಯ ಕಣ್ಣಲ್ಲಿ ಹೊಳಪು ಮಾಸಿತ್ತು; ಧಾಡಸಿತನದ ಕುರುಹುಗಳು ಮಾಯವಾಗಿದ್ದವು. ರೂಪವತಿಯಾದ ಮುಖವೀಗ ಕಳಾಹೀನವಾಗಿತ್ತು. ತಾಯಿ ಅಗಲಿಕೆ ಆಕೆಯನ್ನು ಹೈರಾಣಾಗಿಸಿತ್ತು. ನನ್ನ ಮಾತುಗಳಿಂದ ಒಂದಿಷ್ಟು ಆಹ್ಲಾದ ತಂದುಕೊಂಡುವಳಂತೆ ಕಾಣುತ್ತಿದ್ದಳಾದರೂ ಮತ್ತೆ ಅದೇ ದುಃಖದ ಮಡುವಿನಲ್ಲೇ ಇರುತ್ತಿದ್ದಳು. ಈಕೆಯನ್ನು ಮೊದಲಿನ ಗಟ್ಟಿಗತ್ತಿ ಹುಡುಗಿಯನ್ನಾಗಿ ಮಾಡುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ ಒಂದಿಷ್ಟು ದಿನಗಳು ಉರುಳಿದವು.
ಅದೊಂದು ದಿನ. ನಾನು ಕನಸು ಮನಸ್ಸಿನಲ್ಲಿ ಎಣಿಸಿರದ ಸುದ್ದಿಯೊಂದು ಅಪ್ಪಳಿಸಿತು. ಆಕೆಯ ಆತ್ಮಹತ್ಯೆಯ ಸುದ್ದಿ ಕೇಳಿದಾಕ್ಷಣ ನಾನು ನಿಂತ ನೆಲ ಕಂಪಿಸಿದಂತಾಯಿತು. ಏನಾಯಿತು ಎನ್ನುವಷ್ಟರಲ್ಲಿ ನಾನು ಪ್ರಜ್ಞೆಯ ಪರಿಧಿ ದಾಟಿ ಹೋಗಿದ್ದೆ; ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದೆ. ಪಕ್ಕದಲ್ಲಿದ್ದ ಸ್ನೇಹಿತ ನನಗೆ ಪ್ರಜ್ಞೆ ಬಂದಿದ್ದು ನೋಡಿ ಖುಷಿಯಾಗಿದ್ದ. ‘‘ಮೂರು ದಿನ ಆಯ್ತು ಕಣೋ ಆಸ್ಪತ್ರೆಯಲ್ಲಿದ್ದೀಯಾ,’’ ಎಂದ. ನಾನು, ‘‘ಅವಳು....’’ ಎನ್ನುವಷ್ಟರಲ್ಲಿ ತನ್ನ ಜೇಬಿನಲ್ಲಿದ್ದ ಮಡಚಿದ ಕಾಗದವನ್ನು ಕೊಟ್ಟ. ಅದರಲ್ಲಿದ್ದದ್ದು ಎರಡೇ ಪದ; ಕ್ಷಮಿಸಿ ಬಿಡು.
****
ಅಂಥ ಧೈರ್ಯವಂತೆ, ಎಂಥ ಸನ್ನಿವೇಶವನ್ನು ಎದುರಿಸುವಂಥ ಛಾತಿ ಇದ್ದ ಹುಡುಗಿ ಆಂತರ್ಯದಲ್ಲಿ ಇಷ್ಟೊಂದು ದುರ್ಬಲಳಾಗಿದ್ದಳೇ? ಈ ಪ್ರಶ್ನೆಗೆ ಅಂದಿನಿಂದ ಇಂದಿಗೂ
ಉತ್ತರ ಹುಡುಕುತ್ತಲೇ ಇದ್ದೇನೆ. ಯಾಕೆಂದರೆ, ಆಕೆಯನ್ನು ನೋಡಿದ ಯಾರೇ ಅವಳು ಹೀಗೆ ಮಾಡಬಹುದು ಎಂದು ಊಹಿಸಲು ಸಾಧ್ಯವಿರಲಿಲ್ಲ; ಹಾಗಿದ್ದಳು ನನ್ನ ಹುಡುಗಿ. ಹೀಗೆ ದುರಂತದ ನೆನಪುಗಳು ಮಳೆಯಲ್ಲಿ ಮತ್ತೆ ಜೀವ ಪಡೆಯುತ್ತಿರುವಾಗಲೇ ಆಕೆ ಕೊಟ್ಟ ಹೋದ ಕಾಗದವನ್ನು ಮತ್ತೊಮ್ಮೆ ಬಿಚ್ಚಿ ನೋಡಿದೆ. ಅವಳ ನಗುವಿನ ಮುಖ ಮಿಂಚಿ ಮರೆಯಾಯ್ತು. ಹೊರಗಡೆ ಮತ್ತೆ ಮಳೆ ಭೋರ್ಗರೆಯಾರಂಭಿಸಿತು. ನನಗೆ ಗೊತ್ತಿಲ್ಲದಂತೆ ಕಣ್ಣ ಹನಿಯೊಂದು ಆ ಕಾಗದ ಮೇಲೆ ಬಿದ್ದು ಇಂಗಿ ಹೋಯಿತು.

(ಈ ಲೇಖನ ವಿಜಯ ಕರ್ನಾಟಕದ ಸೆಪ್ಟೆಂಬರ್ 11, 2017ರ ಸಂಚಿಕೆಯಲ್ಲಿ ಪ್ರಕಟವಾಗಿದೆ.)