ಸೋಮವಾರ, ಮಾರ್ಚ್ 27, 2017

ಹುಡುಗನೊಬ್ಬನ ಗಜಲ್‌ಗಳು: ಹಿಸ್ಟರಿಯಲ್ಲಿ ಢುಮ್ಕಿ ಹೊಡೆದವನ ವಸಂತಗಾನ

ನಿಸರ್ಗಕ್ಕೆ ಹಸಿರು ತೋರಣ ಕಟ್ಟಿದ್ದ ವಸಂತ, ನಮ್ಮ ಒಲುಮೆಗೆ ಆತನೇ ಕಾರಣ


- ಪ್ರದ್ಯುಮ್ನ
ಯುನಿವರ್ಸಿಟಿಯ ಹಾಸ್ಟೆಲ್‌ನ ಆ ಕಿಟಿಕಿಯಾಚೆ ನೋಡುತ್ತಿದ್ದವನಿಗೆ ಸಣ್ಣ ಸವಿನೆನಪೊಂದು ಹಾರಿ ಹೋದ ಅನುಭವ. ಶಿಶಿರ ಕಾಲದಲ್ಲಿ ತನ್ನೆಲ್ಲ ಎಲೆಗಳನ್ನು ಕಳಚಿ, ಅಸ್ಥಿ ಪಂಜರದಂತೆ ಕಾಣುತ್ತಿದ್ದ ಆ ಮರವೀಗ ಹಚ್ಚ ಹಸಿರು ಎಲೆಗಳನ್ನು ಹೊದ್ದುಕೊಂಡು ಮದುವಣಗಿತ್ತಿಯಂತೆ ರೆಡಿಯಾಗಿ ನಿಂತಿದೆ. ಅರೇ, ಎರಡು ವಾರದ ಹಿಂದೆಯಷ್ಟೇ ಒಣಗಿದಂತಿದ್ದ ಆ ಮರಕ್ಕೀಗ ಹಸಿರು ತೋರಣ. ಕಾಲ ಹೇಗೆ ನಮ್ಮ ಸುತ್ತಲಿನ ಪರಿಸರವನ್ನು ತನ್ನ ಆಣತಿಯಂತೆ ಬದಲಾಯಿಸುತ್ತಾ ಹೋಗುತ್ತಾನೆ ಅಲ್ಲವೇ? ಆತನಿಗೆ ಗೊತ್ತಿರದ ಸಂಗತಿ ಯಾವುದೂ ಇಲ್ಲ. ನಾನು ಇಲ್ಲಿಗೆ ಬಂದು ನಾಲ್ಕು ವಸಂತ ಕಳೆದು ಐದನೇ ವಸಂತ ಆರಂಭವಾಯಿತು ನೋಡಲೋ ಎಂಬಂತೆ ಆ ಚಿಗುರೆಲೆಗಳು ಗಾಳಿಗೆ ಹೊಯ್ದಡುತ್ತಿದ್ದವು. ಅದರ ಹಿಂದೆಯೇ ಬಿ.ಆರ್.ಲಕ್ಷ್ಮಣ ರಾವ್ ಅವರ ಪದ್ಯವೊಂದರ;
ಬಂದಂತೆ ಮರು ವಸಂತ
ನೀ ಬಂದೆ ಬಾಳಿಗೆ
ಅನುರಾಗ, ಆಮೋದ
ಎದೆಯಲ್ಲಿ ತುಂಬಿದೆ...
ಎಂಬ ಸಾಲುಗಳು ಸ್ಮೃತಿ ಪಟಲದಲ್ಲಿ ಅಚ್ಚು ಹಾಕಿ ಮರೆಯಾದವು. ಎಷ್ಟು ಬೇಗ ಕಾಲ ಉರುಳಿ ಹೋಯಿತು? ಪಿಎಚ್‌ಡಿಗೋಸ್ಕರ ಈ ಯುನಿವರ್ಸಿಟಿಗೆ ನಿನ್ನೆ ಮೊನ್ನೆಯಷ್ಟೇ ಬಂದಿರುವ ಹಾಗಿದೆ ನನಗೆ. ಇನ್ನು ಒಂದೇ ವರ್ಷ ನನ್ನ ಸಂಶೋಧನೆ ಮುಗಿದು ಡಾಕ್ಟರೇಟ್ ಪದವಿ ಪಡೆಯಲು. ಆದರೆ, ಬೇಸಿಗೆ ಬಂದಾಗಲೆಲ್ಲ ನನ್ನೊಳಗೆ ಆಹ್ಲಾದಕರ ಭಾವನೆಗಳ ಉಬ್ಬರವಾಗುತ್ತವೆ. ನಿಸರ್ಗದಲ್ಲಾಗುವ ಹೊಸತನದ ಚಿಗುರು ನನ್ನೊಳಗೂ ಅನೇಕ ಭಾವನೆಗಳಿಗೆ ಮರಿ ಹಾಕಿ ಬಿಡುತ್ತದೆ. ಇಲ್ಲಿಗೆ ಬರುವ ಮುಂಚೆ, ಊರಲ್ಲಿ ಅಲ್ಲೊಂದು ಇಲ್ಲೊಂದು ಕಾಣುವ ಆಲದ ಮರಗಳು, ಬೇಸಿಗೆಯಲ್ಲಿ ಭರ್ಜರಿ ನೆರಳನ್ನು ನೀಡುತ್ತಿದ್ದವು. ಊರಿನಿಂದ ಒಂದು ಮೈಲು ದೂರ ಇದ್ದ ಕಾಲೇಜು ಸುತ್ತ ಮುತ್ತ ಇದ್ದದ್ದು ನಾಲ್ಕೇ ನಾಲ್ಕು ಈ ಮರಗಳು. ಅವು ಕಾಲೇಜಿನಿಂದ ತುಸು ದೂರವೇ ಇದ್ದವು. ಪತ್ರಾಸ್ ಹೊದಿಕೆಯಿದ್ದ ಆ ಕಾಲೇಜಿನ ಕಟ್ಟಡದಲ್ಲಿ ಕುಳಿತು ಲೆಕ್ಚರ್ ಕೇಳುವುದು ಯಮಯಾತನೆ. ನಮಗೆ ಗೊತ್ತಿಲ್ಲದೆಯೇ ಬೆವರು ತನಗೆ ಹೇಗೆ ಬೇಕೋ ಹಾಗೆ ದಾರಿ ಮಾಡಿಕೊಂಡು ಯಾವುದೇ ಅಡೆ ತಡೆ ಇಲ್ಲದೆ ಇಳಿದು ಬಿಡುತ್ತಿತ್ತು. ಇದೇ ಅನುಭವ ಪಾಠ ಹೇಳುವ ಲೆಕ್ಚರ್‌ಗಳಿಗೂ ಆಗುತ್ತಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ನಮ್ಮ ಇತಿಹಾಸದ ಲೆಕ್ಚರ್‌ರು, ತಮ್ಮ ಪಾಠವನ್ನು ಕಾಲೇಜಿನ ಆಚೆ ಇದ್ದ ಆ ಆಲದ ಮರದ ಬುಡಕ್ಕೆ ಶಿಫ್ಟ್ ಮಾಡುತ್ತಿದ್ದರು. ಆಗ ತಾನೇ ಹಸಿರಿನಿಂದ ಹೊದ್ದು ನಿಂತಿದ್ದ ಆ ಮರದ ಕೆಳಗೆ ಹಾಯ್ ಎನಿಸುವಂಥ ತಂಪು. ಆಗಾಗ ಸುಳಿಯುವ ಗಾಳಿ ನಮ್ಮಲ್ಲಿ ಒಂದು ಹಿತವಾದ ಅನುಭವವನ್ನು ದಾಟಿಸಿಕೊಂಡು ಹೋಗುತ್ತಿತ್ತು. ನಾವೆಲ್ಲ ಒಂದು ಕಡೆ ಕುಳಿತರೆ, ಮತ್ತೊಂದೆಡೆ ಹುಡುಗಿಯರು. ಇತಿಹಾಸದ ಮೇಷ್ಟ್ರು ಷಹಾಜಹಾನ್‌ನ ಪ್ರೇಮ ಪುರಾಣ ಆರಂಭಿಸುತ್ತಿದ್ದಂತೆ ನಮ್ಮ ಮನಸ್ಸು ಪಾಠದ ಮೇಲಿಂದ ವರ್ಗವಾಗಿ ಪಕ್ಕದಲ್ಲಿ ಕುಳಿತಿದ್ದವರ ಕಡೆಗೆ ವಾಲುತ್ತಿತ್ತು. ಗಾಳಿಗೆ ಮುಖವೊಡ್ಡಿ ಪಾಠ ಕೇಳುತ್ತಿದ್ದಂತೆ ಕಾಣುತ್ತಿದ್ದ ಅವರ ಮುಖಗಳು ನಮ್ಮಳಗೆ ನಾನಾ ತರಂಗಗಳನ್ನ ಹುಟ್ಟು ಹಾಕುತ್ತಿದ್ದವು. ಅದರಲ್ಲೂ ಅವಳಿದ್ದಳಲ್ಲ, ಆ ಚೆಲುವೆ, ಅವಳನ್ನು ನೋಡುವುದೇ ಒಂದು ಸುಂದರ ಅನುಭವ; ಅಷ್ಟು ಚೆಲುವೆ ಆಕೆ. ಸುಳಿಯುತ್ತಿದ್ದ ಗಾಳಿಗೆ ಆಕೆಯ ಮುಂಗುರುಳು ಅತ್ತಿಂದ ಇತ್ತ, ಇತ್ತಿಂದ ಅತ್ತ ಹೊಯ್ದಡುತ್ತಿತ್ತು. ಮುಂಗುರುಳನ್ನು ಹತೋಟಿಗೆ ತರಲು, ಬೆರಳುಗಳು ಆಕೆಯ ಅನುಮತಿಯನ್ನು ಕೇಳುತ್ತಿರಲಿಲ್ಲ. ಆದರೆ, ಕೊನೆಗೆ ಸೋಲುತ್ತಿದ್ದದ್ದು ಬೆರಳುಗಳೇ. ಯಾಕೆಂದರೆ, ಆ ಮುಂಗುರುಳಿಗೆ ಗಾಳಿಯ ಬೆಂಬಲ. ಪಾಠ ತನ್ನ ಪಾಡಿಗೆ ತಾನು ನಡೆಯುತ್ತಿರುವಾಗಲೇ ಆಕೆ ಮಿಂಚಿನ ವೇಗದಲ್ಲಿ ನನ್ನತ್ತ ನೋಡಿ ಅಷ್ಟೇ ವೇಗದಲ್ಲಿ ಮುಖ ತಿರುಗಿಸಿದ್ದನ್ನು ಪಕ್ಕದಲ್ಲಿದ್ದ ಗೆಳೆಯ ನೋಡುತ್ತಿದ್ದ. ಅವನಿಗೆ ಗೊತ್ತಿತ್ತು ಆಕೆಯನ್ನು ಬಹಳ ಇಷ್ಟು ಪಡುತ್ತಿದ್ದೆ ಎಂಬುದು. ‘‘ಏ.. ಆಕಿ ನಿನ್ನ ನೋಡಿದ್ಲೋ,’’ ಎಂದು ಮೆಲ್ಲಗೆ ಕಿವಿಯಲ್ಲಿ ಉಸುರುತ್ತಿದ್ದ. ಇದು ದಿನಾ ರಿಪೀಟ್ ಆಗುತ್ತಲೇ ಇತ್ತು. ನನಗೆ ಗೊತ್ತಿಲ್ಲದೆ ಆಕೆ, ಆಕೆಗೆ ಗೊತ್ತಿಲ್ಲದೆ ನಾನು ಪರಸ್ಪರ ನೋಡುವುದು, ಆಗಾಗ ಕಣ್ಣಲ್ಲಿ ಮಾತನಾಡಿಕೊಳ್ಳುವುದು ನಡೆದೇ ಇತ್ತು. ‘ವಸಂತ’ ಕಾಲದ ಹಿಸ್ಟರಿ ಕ್ಲಾಸ್‌ಗಳೆಂದರೆ ನಮ್ಮ ನಡುವಿನ ಪ್ರೇಮ ಪಯಣದ ‘ಇತಿಹಾಸ’ದ ಆರಂಭಕ್ಕೆ ಮುನ್ನುಡಿ ಬರೆದಿದ್ದವು. ಆದರೆ ಎಷ್ಟು ದಿನ ಅಂತ ಹೀಗೆ ನೋಡಿಕೊಂಡಿರುವುದು, ನನ್ನೊಳಗೆ ಪ್ರೇಮ ಚಿಗುರೊಡೆದು ಬೆಳೆದು ಹೆಮ್ಮರವಾಗಿದ್ದನ್ನು ಆಕೆಗೆ ತಿಳಿಸಲೇಬೇಕಿತ್ತು. ಮೋಸ್ಟಲೀ, ಅವಳು ಹಾಗೆ ಅಂದು ಕೊಂಡಿರಬೇಕು ಅನಿಸುತ್ತದೆ. ಇಲ್ಲದಿದ್ದರೆ, ಅಂದು ಯಾಕೆ, ಕ್ಲಾಸ್ ಮುಗಿದ ಬಳಿಕ ಎಲ್ಲರು ಹೋದರೂ ಮರದ ನೆರಳಲ್ಲಿ ಒಬ್ಬಳೇ ನಿಲ್ಲುತ್ತಿದ್ದಳು? ಅದೇನೋ ಹೇಳುತ್ತಾರಲ್ಲ, ‘ವೈದ್ಯ ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದು ಹಾಲು ಅನ್ನ’ ಎನ್ನುವಂಥ ಸ್ಥಿತಿ ನನ್ನದು. ಆ ದೊಡ್ಡ ಮರದ ಕೆಳಗೆ ನಾವಿಬ್ಬರೇ. ಆಹ್ಲಾದಕರವಾಗಿ ಬೀಸುತ್ತಿದ್ದ ಗಾಳಿಗೆ ಮುಖವೊಡ್ಡಿ, ನೋಟ್‌ಬುಕ್ ಎದೆಗವಚಿಕೊಂಡು ನಿಂತಿದ್ದಾಳೆ. ಆಕೆಯನ್ನು ಮಾತನಾಡಿಸಲೇಬೇಕು ಎಂದು ನಿಂತುಕೊಂಡ ನನಗೆ ಮಾತುಗಳೇ ಹೊರಡುತ್ತಿಲ್ಲ. ಈ ಕಣ್ಣಿನ ಭಾಷೆಗಿರುವಷ್ಟು ಧೈರ್ಯ, ಸಂವಹನ ನುಡಿಗಳಿಗಿರುವುದಿಲ್ಲ ಎಂಬ ಆಲೋಚನೆಗಳು ತಲೆಯಲ್ಲಿ ಗಿರಿಕಿ ಹೊಡೆಯುತ್ತಿರುವಾಗಲೇ ಧೈರ್ಯ ಮಾಡಿ, ‘‘ಹಲೋ,’’ ಎಂದೆ, ಆಕೆ  ‘‘ಹಲೋ,’’ ಎಂದಾಗಲೇ ಗೊತ್ತಾಗಿದ್ದು, ನಾನಷ್ಟೇ ಅಲ್ಲ ಆಕೆಗೂ ಮಾತನಾಡಲು ಧೈರ್ಯ ಸಾಲುತ್ತಿಲ್ಲ ಎಂಬುದು. ಐದು, ಹತ್ತು ನಿಮಿಷ ಆದ್ಮೇಲೆ ನಮ್ಮಿಬ್ಬರ ಮಧ್ಯೆ ಅಳುಕು ನಿಧಾನವಾಗಿ ಕರಗಿ ಅದು- ಇದು ಮಾತನಾಡುತ್ತಲೇ, ಮನದಾಳದಲ್ಲಿದ್ದ ಭಾವನೆಗಳಿಗೆ ಮಾತಿನ ರೂಪ ಕೊಟ್ಟು ಒಂದೇ ಉಸಿರಿನಲ್ಲಿ ‘‘ನಂಗೆ ನೀನು ಭಾಳಾ ಇಷ್ಟ,’’ ಎಂದೆ. ಅಷ್ಟೇ ವೇಗದಲ್ಲಿ ಆಕೆ, ‘‘ನನಗೂ...,’’ ಎಂದವಳೆ ಅಲ್ಲಿಂದ ಮಿಂಚಿನ ಓಟದಲ್ಲಿ ಮಾಯವಾದವಳು. ಓಹೋ ಎಂದು ಜೋರಾಗಿ ಕಿರುಚಿ ಮೇಲೆ ನೋಡಿದವನಿಗೆ ಎಲೆಗಳ ಸಂದುಗೊಂದುಗಳಿಂದ ಸೂರ್ಯ ನನ್ನತ್ತಲೇ ಇಣುಕುತ್ತಿದ್ದ. ‘‘ಭಪ್ಪರೇ ಮಗನೆ,’’ ಎಂದಂತಾಯಿತು. ಗಾಳಿಗೆ ಮೆಲ್ಲನೆ ಸದ್ದು ಮಾಡುತ್ತಿದ್ದ ಎಲೆಗಳು, ಅಂದು ಯಾಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದವೋ?
ನಂತರದ ದಿನಗಳಲ್ಲಿ, ಹಿಸ್ಟರಿ ಕ್ಲಾಸ್‌ನಲ್ಲಿ ಅವಳನ್ನು ನೋಡುವುದೇ ಪಾಠವಾಗಿ ಬಿಟ್ಟಿತ್ತು. ಪಕ್ಕದಲ್ಲಿದ್ದ ಗೆಳೆಯ ಆಗಾಗ ತಿವಿಯುತ್ತಾ, ‘‘ಏ ಮಗನ ನೋಡಿದ್ದು ಸಾಕು, ಪಾಠಾನೂ ಸ್ವಲ್ಪ ಕೇಳು..,’’ ಅಂತಿದ್ದ. ನನ್ನ ದುರದೃಷ್ಟಕ್ಕೆ, ಹಿಸ್ಟರಿ ಲೆಕ್ಚರ್ ನನ್ನತ್ತ ಚಾಕ್‌ಪೀಸ್ ಎಸೆದವರೇ, ‘‘ಲೋ ತಮ್ಮ, ಎದ್ದು ನಿಲ್ಲು. ಅಶೋಕ ಏನೇನ್ ಮಾಡಿದ ಹೇಳು,’’ ಅಂದ್ರು. ‘‘ಲಕ್ಷೋಪ ಲಕ್ಷ  ಸೈನಿಕರೊಂದಿಗೆ ಕಳಿಂಗ ಯುದ್ಧ ಮಾಡಿ ಗೆದ್ದ, ಆ ಮೇಲೆ ರಸ್ತೆಗಳಲ್ಲಿ ಗಿಡಗಳನ್ನು ನೆಟ್ಟ,’’ ಎಂದು ಪೆದ್ದು ಪೆದ್ದಾಗಿ, ಹೈಸ್ಕೂಲ್ ಹುಡುಗ ಹೇಳಿದ ಹಾಗೆ ಹೇಳಿದ್ದೇ ತಡ ಇಡೀ ಕ್ಲಾಸ್ ಗೊಳ್ಳೆಂದು ನಕ್ಕಿತು. ಆಕೆಯೂ ತುಸು ಜೋರೇ ನಕ್ಕಳು. ನಾಚಿಕೆಯಿಂದ ತಲೆ ತಗ್ಗಿಸಿದೆ.
ಆ ವಯಸ್ಸಿನಲ್ಲಿ, ನಮ್ಮನ್ನು ಇಷ್ಟಪಡುವ ಜೀವವೊಂದಿದೆ ಎಂದರೆ ಸಾಕು. ಎಲ್ಲವೂ ಆನಂದಮಯವಾಗಿಯೇ ಕಾಣುತ್ತದೆ. ಎಷ್ಟೆಲ್ಲ ಕಷ್ಟಗಳು ಹೂವಿನಂತೆ ಭಾಸವಾಗುತ್ತವೆ. ಕಿಸೆಯಲ್ಲಿ ನಾಲ್ಕು ಕಾಸು ಇಲ್ಲದಿದ್ದರೂ ಶ್ರೀಮಂತನ ಜಂಭಕ್ಕೇನೂ ಕೊರತೆ ಇರಲ್ಲ. ಆಗ, ಮುಂದಿರುವ ಗುರಿ ಮೈ ಮರೆಯುವ ಅಪಾಯಗಳೇ ಹೆಚ್ಚು. ನನಗೂ ಅದೇ ಆಗಿದ್ದು. ಪ್ರೇಮದ ಸುಳಿಯಲ್ಲಿ ಸಿಕ್ಕವನಿಗೆ ಫೈನಲ್ ಡಿಗ್ರಿ ರಿಸಲ್ಟ್ ದೊಡ್ಡ ಶಾಕ್ ನೀಡಿತ್ತು. ಯಾವ ಕ್ಲಾಸ್‌ನಲ್ಲಿ ಪ್ರೇಮ ಶುರುವಾಗಿತ್ತೋ ಅದೇ ಕ್ಲಾಸ್ ಅಂದರೆ, ಹಿಸ್ಟರಿ ಸಬ್ಜೆಕ್ಟ್‌ನಲ್ಲಿ ಢುಮ್ಕಿ ಹೊಡೆದಿದ್ದೆ. ಈ ವಿಷಯ ಅವಳಿಗೆ ಗೊತ್ತಾಗಿ, ಅದೇ ಮರದ ನೆರಳಿನಲ್ಲಿ ನಿಂತಿದ್ದಳು. ಆಕೆ ಅಂದು ಹೇಳಿದ ಮಾತುಗಳು, ಇಂದು ನಾನು ಡಾಕ್ಟರೇಟ್ ಮಾಡುವ ಹಂತಕ್ಕೆ ತಂದು ನಿಲ್ಲಿಸಿವೆ. ಆಕೆಯದ್ದು ನಿಷ್ಕಲ್ಮಷ ಪ್ರೇಮ. ತನ್ನಿಂದಾಗಿ ನನ್ನ ಭವಿಷ್ಯ ಹಾಳಾಯಿತು ಎಂದು ಬಹಳ ದುಃಖದಲ್ಲಿದ್ದಳು.
‘‘ನಮ್ಮಿಬ್ಬರದ್ದು ನಿಜವಾದ ಪ್ರೀತಿಯೇ ಆಗಿದ್ದರೆ, ನೀನು ಹಿಸ್ಟರಿ ಸಬ್ಜೆಕ್ಟ್‌ನಲ್ಲಿ ಪಿಎಚ್‌ಡಿ ಮಾಡಬೇಕು. ಅಲ್ಲಿಯವರೆಗೂ ನಮ್ಮಿಬ್ಬರ ಮಧ್ಯೆ ಯಾವುದೇ ಮಾತುಕತೆ ಇಲ್ಲ. ನೀನು ಬರೋವರೆಗೆ ನಾನು ಕಾಯುತ್ತಿರುತ್ತೇನೆ’’ ಎಂದವಳೇ ತಿರುಗಿ ನೋಡದೆ ಹೊರಟು ಹೋದಳು. ಚೂರು ಗಾಳಿ ಇರಲಿಲ್ಲ. ಎಲೆಗಳ ಸದ್ದಿಲ್ಲ. ಸಂದಿಯಲ್ಲಿ ಸೂಸುತ್ತಿದ್ದ ಸೂರ್ಯನ ಕಿರಣಗಳೂ ಪ್ರಖರವಾಗಿದ್ದವು. ಆಗಲೇ ನಿರ್ಧರಿಸಿದ್ದೆ. ಗೆಲ್ಲಲೇಬೇಕು ನಾನೊಂದು ದಿನ ಎಂದು.
ಅಂದಿನ ನಿರ್ಧಾರವನ್ನು ಪೂರೈಸುವ ಅಂತಿಮ ಘಟ್ಟದಲ್ಲಿದ್ದೇನೆ ಈಗ . ಎಲ್ಲವೂ ನಾನು ಅಂದುಕೊಂಡಂತೆ ಆದರೆ, ಮುಂದಿನ ವಸಂತ ಬರುವುದರೊಳಗೆ ನನ್ನ ಹೆಸರಿನ ಹಿಂದೆ  ‘ಡಾ.’ ಸೇರಿರುತ್ತೆ. ಅದೇ ಮರದ ಕೆಳಗೆ ನಿಂತ ಆಕೆಗೆ ನನ್ನ ಮುಖ ತೋರಿಸುವ ಹಂಬಲ.

This article has been published in VijayKarnataka, on 27 March 2017 edition

ಶನಿವಾರ, ಫೆಬ್ರವರಿ 18, 2017

ಸೋಮವಾರ, ಫೆಬ್ರವರಿ 13, 2017

ಹುಡುಗನೊಬ್ಬನ ಗಜಲ್‌ಗಳು: ಕ್ಯಾಮೆರಾ ಕನ್ಯೆಯ ಔಟ್ ಆಫ್ ಫೋಕಸ್ ಪ್ರೀತಿ

- ಅವಳದೊಂದು ಅದ್ಭುತ ಲೋಕ; ಅದರಲ್ಲಿ ನಾನಿದ್ದೆ ಎಂಬ ಹೆಮ್ಮೆಯಷ್ಟೇ


- ಪ್ರದ್ಯುಮ್ನ
ಮಹಾತ್ಮ ಗಾಂಧಿಯ ರಸ್ತೆಯ ಆ ಕಾಫಿ ಡೇಯ ಮಂದ ಬೆಳಕಿನಲ್ಲಿ ಅವಳ ಮುಖ ಅಸ್ಪಷ್ಟ ಕಾಣುತ್ತಿತ್ತು. ನಮ್ಮಿಬ್ಬರ ತಲೆಯೊಳಗೂ ವಿಚಾರಗಳ ಸ್ಪಷ್ಟತೆ ಇರಲಿಲ್ಲ. ಅಷ್ಟಕ್ಕೂ ಆ ಕಾಫಿ ಡೇ ನಮ್ಮಿಬ್ಬರಿಗೆ ಅಪರಿಚತವೇನೂ ಅಲ್ಲ. ಆದರೆ, ಅಲ್ಲಿರುವ ಎಲ್ಲ ಚೇರ್‌ಗಳೆಲ್ಲ ಭರ್ತಿಯಾಗಿದ್ದರೂ ನಾವಿಬ್ಬರೇ ಅಲ್ಲಿದ್ದೇವೆ ಎಂಬ ಭಾವನೆ ಮನೆ ಮಾಡಿತ್ತು. ಮೊದಲು ಅವಳು ಮಾತು ಆರಂಭಿಸಲಿ ಎಂದು ನಾನು; ನಾನೇ ಮೊದಲು ಮಾತನಾಡಲಿ ಎಂದು ಅವಳು. ಒಬ್ಬರಿಗೊಬ್ಬರು ಬಾಯಿ ಬಿಡುತ್ತಿಲ್ಲ. ಹೀಗೆ ಹತ್ತಾರು ನಿಮಿಷಗಳು ಸರಿದು ಹೋದವು. ಹಿನ್ನೆಲೆಯಲ್ಲಿ  ರಫಿ ಸಾಬ್ ಹಾಡುತ್ತಿದ್ದರು:
ತು ಇಸ್ ತರಹ ಸೇ ಮೇರಿ ಜಿಂದಗಿ ಮೇ ಶಾಮೀಲ್ ಹೈ
ಜಹಾಂ ಭೀ ಜಾಂವೂ ಯೇ ಲಗ್ತಾ ಹೈ ತೇರಿ ಮೆಹಫಿಲ್ ಹೈ
ನಮ್ಮಬ್ಬಿರ ನಡುವಿನ ಏಕಾಂತವನ್ನು ರಫಿ ಸಾಬ್‌ರ  ಈ ಹಾಡು ಮತ್ತಷ್ಟು ಘನ ಘೋರ ಸ್ಥಿತಿಗೆ ತಲುಪುವಂತೆ ಮಾಡುತ್ತಿತ್ತು. ಒಂದು ಹಂತದಲ್ಲಿ ಅವಳನ್ನು ಹಾಗೆಯೇ ಬಿಟ್ಟು ಎದ್ದು ಹೋಗಿ ಬಿಡಲೇ ಎಂಬ ಯೋಚನೆಯೂ ಸುಳಿದು ಹೋಯಿತು. ಮರುಗಳಿಗೆಯಲ್ಲೇ ಬೇಡ, ಇದೇ ಕೊನೆ ಭೇಟಿಯಾಗಬಹುದು. ಮತ್ತೆ ಅವಳು ಸಿಗುತ್ತಾಳೋ ಇಲ್ಲವೋ ಗೊತ್ತಿಲ್ಲ. ಕೊನೆಯ ಅವಕಾಶವನ್ನು ಹೀಗೆ ಫಲಪ್ರದವಿಲ್ಲದೆ ತಪ್ಪಿಸಿಕೊಳ್ಳುವುದು ಬೇಡ ಎಂದು ತಳವೂರಿ ಗಟ್ಟಿಯಾಗಿ ಕುಳಿತೆ. ಅಷ್ಟರಲ್ಲಿ ಆರ್ಡರ್ ಮಾಡಿದ್ದ ಕಾಫಿಯನ್ನು ಹಿಡಿದುಕೊಂಡು ಬಂದ ವೇಟರ್, ನಮ್ಮ ಮುಂದೆ ‘‘ಕಾಫಿ ಪ್ಲೀಸ್,’’  ಎಂದಾಗಲೇ, ಇಬ್ಬರು ‘‘ಇಲ್ಲಿಡಿ,’’ ಎಂದೆವು. ಬಹುಶಃ ಅದೊಂದು ನೆಪ ನಮ್ಮಿಬ್ಬರ ನಡುವೆ ಕವಿದಿದ್ದ ವೌನದ ಕತ್ತಲೆಯನ್ನು ಹೊಡೆದೊಡೆಸಿ, ಮಾತಿನ ಬೆಳಕು ಮೂಡಿಸಲು ಸಾಧ್ಯವಾಯಿತು ಅಂತ ಕಾಣುತ್ತದೆ.
‘‘ನಿಜವಾಗ್ಲೂ ನನ್ ಕ್ಷಮಿಸಿ ಬಿಡು. ಹಾಗಂತ, ನಾನು ಕ್ಷಮೆಗೆ ಯೋಗ್ಯಳು ಎಂದು ಹೇಳುತ್ತಿಲ್ಲ. ಆದರೆ, ಇದನ್ನು ಬಿಟ್ಟು ಬೇರೆ ಯಾವ ಪದಗಳು ಗೊತ್ತಾಗುತ್ತಿಲ್ಲ; ದಾರಿಯೂ ಕೂಡ,’’ ಎಂದು ಒಂದೇ ಉಸಿರಿನಲ್ಲಿ ಹೇಳಿದಳು. ಅಲ್ಲಿಗೆ ಎಲ್ಲವೂ ಸ್ಪಷ್ಟವಾಯಿತು. ಅವಳ ಮುಖವನ್ನೊಮ್ಮೆ ನೋಡಬೇಕು ಎಂದು ಕತ್ತು ಮೇಲೆತ್ತಿ ನೋಡಲು ಪ್ರಯತ್ನಿಸಿದೆ. ಅದಾಗಲೇ ಅವಳ ಕೆನ್ನೆ ಮೇಲೆ ಕಣ್ಣೀರು ಧಾರೆಯಾಗುತ್ತಿತ್ತು. ಆ ಕ್ಷಣದಲ್ಲಿ ಅವಳಿಗೇನು ಹೇಳಬೇಕು ಎಂದು ತೋಚದೆ ಮತ್ತೆ ನನ್ನ ಚಿತ್ತವನ್ನು ಕಾಫಿಯ ಮೇಲೆ ನೆಟ್ಟೆ. ಕಪ್‌ನಿಂದ ಮೇಲೇಳುತ್ತಿದ್ದ ಹಬೆಯ ಚಕ್ರಗಳು ನನ್ನಲ್ಲೇಳುತ್ತಿದ್ದ ದುಃಖದ ಅಲೆಗಳನ್ನೇ ಸಮೀಕರಿಸುತ್ತಿದ್ದವು.
ಕೇವಲ ಆರು ತಿಂಗಳ ಹಿಂದೆ ನಾವು ಹೀಗಿರಲಿಲ್ಲ; ನಮ್ಮ ನಡುವಿನ ಜಗತ್ತೇ ಬೇರೆಯದ್ದಿತ್ತು. ಅವಳೋ ಕ್ಯಾಮೆರಾ ಹೇಗಲಿಗೇರಿಸಿಕೊಂಡು ಹೊರಟಳೆಂದರೆ ಅದಕ್ಕೆ ದಿಕ್ಕು ದಿಸೆ ಇರುತ್ತಿರಲಿಲ್ಲ. ಹೋಗುವ ದಾರಿ ಯಾವುದು, ಅದು ಎಲ್ಲಿಗೆ ತಲುಪುತ್ತದೆ ಎಂಬುದನ್ನೂ ಯೋಚಿಸುತ್ತಿರಲಿಲ್ಲ. ಎದುರಿಗೆ ಸಿಗುವ ಪ್ರತಿ ವ್ಯಕ್ತಿ, ಗಿಡ, ಮರ, ಪ್ರಾಣಿ, ಪಕ್ಷಿ, ಮನೆ, ದಾರಿ ಬದಿಯ ಕಲ್ಲುಗಳನ್ನಿಟ್ಟು ಪೂಜೆ ಮಾಡುವ ದೇವಸ್ಥಾನವಲ್ಲದ ದೇವಸ್ಥಾನ.... ಹೀಗೆ ಕಣ್ಣಿಗೆ ಕಾಣುವ ಎಲ್ಲವೂ ಅವಳ ಕ್ಯಾಮೆರಾದಲ್ಲಿ ಬಂದಿಯಾಗುತ್ತಿದ್ದವು. ಅವಕ್ಕೊಂದು ಕವಿತೆಯ ಸ್ಪರ್ಶ ದಕ್ಕುತ್ತಿತ್ತು. ಅಷ್ಟೂಂದು ಸೃಜನಾತ್ಮಕವಾಗಿ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದಳು. ಅವಳ ಕ್ಯಾಮೆರಾದಲ್ಲಿ ಬಂದಿಯಾಗುವ ಪ್ರತಿ ಚಿತ್ರವೂ ಒಂದೊಂದು ಕತೆ ಹೇಳುತ್ತಿದ್ದವು. ಹಾಗೆ ನೋಡಿದರೆ, ನೈಜದಲ್ಲಿದ್ದ ಚಿತ್ರಗಳಿಗಿಂತ ಆಕೆ ತೆಗೆದ ಚಿತ್ರಗಳು ಹೆಚ್ಚು ಗಮನ ಸೆಳೆಯುತ್ತಿದ್ದವು. ಗೊತ್ತಲ್ಲಿದಂತೆಯೇ ನಿಮ್ಮಳಗೇ ಇಳಿದು ಬಿಡುತ್ತಿದ್ದವು. ಅವಳ ಕ್ಯಾಮೆರಾ ‘ಕಣ್ಣ ಚಳಕ’ ಹಾಗಿತ್ತು. ಅವಳದೊಂದು ಅದ್ಭುತ ಲೋಕ; ಅದರಲ್ಲಿ ನಾನಿದ್ದೆ ಎಂಬ ಹೆಮ್ಮೆಯಷ್ಟೇ ನನ್ನ ಪಾಲಿಗೆ ಈಗ.
ಅಂಥವಳು ನನಗೆ ಸಿಕ್ಕಿದ್ದು ರೋಚಕವೇ. ನಮ್ಮಿಬ್ಬರು ನಡುವೆ ಅಂಥ ಸಾಮತ್ಯಗಳೇನಿಲ್ಲ. ನಾನೋ ಪುಸ್ತಕದ ಹುಳ. ಕೈಗೆ ಸಿಗುವ ಪುಸ್ತಕಗಳನ್ನು ಓದಲು ಕುಳಿತರೆ ಜಗತ್ತೇ ಮರೆತು ಹೋಗುತ್ತಿತ್ತು. ಆದರೆ, ನಮ್ಮಿಬ್ಬರನ್ನು ಬಂಧಿಸಿದ  ಏಕೈಕ ತಂತು; ‘ಮರಗಳ ಪ್ರೇಮ.’ ಅವಳೂ ಅಷ್ಟೇ ಅಭಿವೃದ್ಧಿಯ ನೆಪದಲ್ಲಿ ನಗರದಲ್ಲಾಗುತ್ತಿರುವ ಮರಗಳ ಮಾರಣಹೋಮಕ್ಕೆ ಆಕ್ರೋಶಿತಗೊಳ್ಳುತ್ತಿದ್ದಳು. ಅದನ್ನು ವಿರೋಧಿಸಿ ನಡೆಯುವ ಪ್ರತಿಭಟನೆ, ಚಳವಳಿಗಳೆನ್ನೆಲ್ಲ ತನ್ನ ಕ್ಯಾಮೆರಾ ಕಣ್ಣಲ್ಲಿ ತುಂಬಿಕೊಳ್ಳುತ್ತಿದ್ದಳು. ಇಂಥದ್ದೇ ಒಂದು ಪ್ರತಿಭಟನೆ ವೇಳೆ, ಆಕೆ ಪರಿಚಯವಾಗಿದ್ದು. ಅವಳೇನೂ ಅಂಥ ಹೇಳಿಕೊಳ್ಳುವಂಥ ಚೆಲುವೆಯಲ್ಲ. ಆದರೆ, ಅವಳಿಗಿರುವ ಬದ್ಧತೆ, ಪ್ಯಾಶನ್, ಆತ್ಮವಿಶ್ವಾಸ, ಪರಿಸರ ಕಾಳಜಿ ಅವಳತ್ತ ತುಸು ಹೆಚ್ಚೇ ಯೋಚಿಸುವಂತೆ ಮಾಡಿದ್ದವು. ಪರಿಚಯವಾಗಿದ್ದಾಗ ಹಾಯ್, ಬಾಯ್‌ಗಷ್ಟೇ ಸಿಮೀತವಾಗಿದ್ದ ಸಂಬಂಧ ಅದ್ಯಾವಾಗ ಸ್ನೇಹಕ್ಕೆ ತಿರುಗಿ ಮತ್ತೆ ಪ್ರೇಮಕ್ಕೆ ವಾಲಿತು ಎಂದು ಹೇಳುವುದು ಕಷ್ಟ. ಪ್ರೇಮ ಎಂದರೆ, ‘ಆಗುವುದಲ್ಲ’ ಅದು ‘ಸಂಭವಿಸುವುದು’ ಎಂದು ಅದ್ಯಾರೋ ಹೇಳಿದ್ದರು; ನಾನು ನಂಬಿರಲಿಲ್ಲ. ಆದರೆ ಈಗ ನಂಬದೇ ವಿಧಿಯಿಲ್ಲ. ಹೀಗೆ ಸಂಭವಿಸಿದ ಪ್ರೇಮಕ್ಕೆ ನಂಬಿಕೆಯೇ ಮೂಲದ್ರವ್ಯ. ನಮ್ಮಿಬ್ಬರ ಮಧ್ಯೆ ಈ ಮೂಲದ್ರವ್ಯಕ್ಕೇನೂ ಕೊರತೆ ಇರಲಿಲ್ಲ. ಸಂಭವಿಸಿದ ಪ್ರೇಮ ಹೆಮ್ಮರವಾಗಿ ಬೆಳೆದಿತ್ತು. ಅದರ ತಂಪನೆಯ ನೆರಳಲ್ಲಿ ಇಡೀ ಜಗತ್ತೆಲ್ಲ ಸುಂದರ ತಿಳಿ ಕೊಳದಂತಿತ್ತು. ಅಲ್ಲಿ ಕಷ್ಟಗಳೆಂಬ, ಅಪನಂಬಿಕೆಗಳೆಂಬ ಬಿಸಲಿನ ಪ್ರಖರ ಕಿರಣಗಳು ನಮ್ಮನ್ನು ತಾಕುತ್ತಿರಲಿಲ್ಲ. ಎಲ್ಲವೂ ಚೆಂದ ಇತ್ತು. ಮನವರಿತ ಗೆಳತಿ ಬಳಿ ಇರಲು ಇನ್ನೇನು ಬೇಕು?
ಹೀಗೆ ಎಲ್ಲವೂ ಚೆಂದ ಇದ್ದಾಗಲೇ, ಸರಳ ರೇಖೆಯಲ್ಲಿ ಜೀವನ ಸಾಗುತ್ತಿರುವಾಗಲೇ ಧುತ್ತನೇ ಎದುರಾಗುವ ಸಂಕಷ್ಟಗಳು ನಿಮ್ಮನ್ನು ಇನ್ನಿಲ್ಲದಂತೆ ಹೈರಾಣು ಮಾಡುತ್ತವೆ. ಪ್ರೇಮ ಪ್ರಕರಣಗಳೆಲ್ಲವೂ ಯಶಸ್ವಿಯಾಗಬೇಕೆಂದೇನೂ ರೂಲ್ಸ್ ಇಲ್ಲವಲ್ಲ. ಬಹುಶಃ ಈ ರೂಲ್ಸ್ ನಮ್ಮಿಬ್ಬರಿಗೂ ತುಸು ಹೆಚ್ಚೇ ಅಪ್ಲೈ ಆಯಿತು ಅಂತಾ ಕಾಣುತ್ತದೆ. ಈಗಲೂ ನನಗೆ ನಿರ್ದಿಷ್ಟ ಕಾರಣಗಳು ಹೊಳೆಯುತ್ತಿಲ್ಲ. ನಮ್ಮಿಬ್ಬರ ನಡುವಿನ ಬಾಂಧವ್ಯಕ್ಕೆ ತೊಡಕಾಗಿದ್ದು ಏನು? ಯಾತಕ್ಕಾಗಿ ನಾವಿಬ್ಬರೂ ಈಗ ಒಬ್ಬರನ್ನೊಬ್ಬರನ್ನು ಬಿಟ್ಟು ಅಗಲುವ ಸ್ಥಿತಿಗೆ ಬಂದು ಬಿಟ್ಟಿದ್ದೇವೆ? ಇಂಥ ಪರಿಸ್ಥಿತಿಗೆ ಅಸಲಿಗೆ ಕಾರಣಗಳೇನಾದರೂ ಇವೆಯೇ... ಎಷ್ಟೇ ಯೋಚಿಸಿದರೂ ಉತ್ತರ ಸಿಗುತ್ತಿಲ್ಲ. ನಮ್ಮಿಬ್ಬರನ್ನು ಬಂಧಿಸಿದ ‘ಮರಗಳ ಪ್ರೇಮ’ ಎಂಬ ಬದ್ಧತೆಯೇಕೆ ಇಷ್ಟು ಬೇಗ ಒಣಗಿ ಹೋಯಿತು? ಆದರೆ, ಈಗಂತೂ ಕವಲು ದಾರಿಯಲ್ಲಿ ನಿಂತಿದ್ದೇವೆ. ಸರಳ ರೇಖೆಯ ಜೀವನ, ವಕ್ರರೇಖೆಯಲ್ಲಿ ಅಂತ್ಯವಾಗುತ್ತಿದೆ ಎಂಬುದಂತೂ ಸತ್ಯ. ಇದಕ್ಕೆ ತಾನೇ ಕಾರಣ ಎಂದು, ಕಾರಣ ಹೇಳದೆ ಹೊರಟು ಹೋಗುವ ಸ್ಥಿತಿಯಲ್ಲಿ ಅವಳಿದ್ದಾಳೆ.
ಪ್ರೇಮ ಸಂಬಂಧ ಕಡಿದುಕೊಳ್ಳುವುದಕ್ಕೆ ಈ ಕಾಫಿ ಡೇ ವೇದಿಕೆಯಾಗಿದೆಯಷ್ಟೇ. ಅವಳಿಗೂ ಗೊತ್ತು ನಂಬಿಕೆ ಬುನಾದಿಯ ಮೇಲೆ ಬೆಳೆದ ಪ್ರೇಮವನ್ನು ಕತ್ತರಿಸಿಕೊಳ್ಳುವುದು ಅಷ್ಟು ಸರಳವಲ್ಲ. ಅವಳ ಮುಖದ ಮೇಲೆ ಎದ್ದೇಳುತ್ತಿದ್ದ ಭಾವನೆಗಳೇ ಎಲ್ಲವನ್ನೂ ಹೇಳುತ್ತಿದ್ದವು. ಆದರೆ, ಅವಳು ನಿಶ್ಚಿಯಿಸಿದ್ದಾಳೆ, ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾಳೆಂಬುದಂತೂ ‘‘ಕ್ಷಮಿಸಿ ಬಿಡು,’’ ಎಂದು ಹೇಳುವಾಗಲೇ ಮನವರಿಕೆಯಾಗಿತ್ತು. ಇನ್ನು ಅವಳಿಗೆ ಕಾರಣ ಕೇಳಿಯೂ ಉಪಯೋಗವಿಲ್ಲ. ತಡೆಯುವುದು ಅಸಾಧ್ಯದ ಮಾತು. ಅವಳ ಜೀವನ ಅವಳದ್ದು; ನನ್ನ ಜೀವನ ನನ್ನದು. ಹಾಗಂತ, ಅವಳ ನೆನಪುಗಳಿಂದ ದೂರ ಉಳಿಯತ್ತೇನೆಂದು ಭರವಸೆಯನ್ನಾದರೂ ಹೇಗೆ ಕೊಡಲಿ? ನೆನಪುಗಳಿಲ್ಲದಿದ್ದರೆ ಜೀವನಕ್ಕೇನು ಅರ್ಥವಿದೆ? ಒಣಗಿ ಹೋದ ಬೊಡ್ಡೆಯಿಂದ ಚಿಗುರು ಮತ್ತೆ ಮೂಡದೇ? ನಮ್ಮಿಬ್ಬರ ಜೀವನದಲ್ಲಿ ವಸಂತಗಾನ ಮತ್ತೆ ಶುರುವಾಗಬಹುದು ಎಂದು ಹೇಳಲು ಹೊರಟವನ ಮಾತುಗಳು ಗಂಟಲಲ್ಲೇ ಉಳಿದವು.
ಕಣ್ಣೀರು ಒರೆಸಿಕೊಳ್ಳುತ್ತಾ ಆಕೆ ಎದ್ದು ಹೋಗುವ ಹೊತ್ತಿಗೆ, ಟೇಬಲ್ ಮೇಲಿದ್ದ ಕಾಫಿ ತಣ್ಣಗಾಗಿತ್ತು; ನನ್ನೊಳಗೂ ಅದೇ ಭಾವ. ಹಿನ್ನೆಲೆಯಲ್ಲಿ, ಅದೇ ರಫಿ ಸಾಬ್ ತನ್ನ ತಣ್ಣನೆಯ ದನಿಯ ಹಾಡುತ್ತಿದ್ದರು:
ಇಸ್ಸ ಭರಿ ದುನಿಯಾ ಮೇಂ, ಕೋಯಿ ಭಿ ಹಮಾರಾ ನ ಹುವಾ
ಗೈರ ತೋ ಗೈರ ಹೈ, ಅಪ್ನೋಂ ಕಾ ಸಹಾರಾ ನ ಹುವಾ...




This article has been published in VijayKarnataka, on 13rd Feb 2017 edition

ಶುಕ್ರವಾರ, ಜನವರಿ 13, 2017

ರಾತ್ರಿಗಳು...

ಈ ರಾತ್ರಿಗಳಿಗೇಕಿಲ್ಲ
ಕತ್ತಲೆಯ ಭಯ?
ಚಂದ್ರ, ನಕ್ಷತ್ರಗಳದ್ದೇ
ಇರಬೇಕು ಅಭಯ!
***
ಈ ರಾತ್ರಿಯು ವಿಚಿತ್ರ
ತರುವುದು ಅವಳ
ನೆನಪು ಸಚಿತ್ರ

ಸೋಮವಾರ, ಜನವರಿ 2, 2017

ಹುಡುಗನೊಬ್ಬನ ಗಜಲ್‌ಗಳು: ಅವಳ ಕಣ್ಣಗಳಲ್ಲಿ ಕಾಂತಿ ತುಂಬುವ ಹಂಬಲ

- ಆಕೆ ಬಿಟ್ಟು ಹೋದ ಗಿಫ್ಟ್‌ನೊಂದಿಗೆ ಮತ್ತೆ ಹೊಸ ವರುಷದ ನಿರೀಕ್ಷೆಯಲ್ಲಿ....

- ಪ್ರದ್ಯುಮ್ನ
ಇಡೀ ಜಗತ್ತೇ ಹೊಸ ವರ್ಷದ ಆಚರಣೆಯ ಅಮಲಿನಲ್ಲಿ ಮುಳುಗಿದೆ. ಮಹಾನಗರಗಳ ಪಬ್ಬು, ಕ್ಲಬ್ಬುಗಳಲ್ಲಿ ಮದ್ಯಾರಾಧನೆಯೂ, ಬ್ಯಾಚುಲರ್‌ಗಳ ರೂಮ್‌ಗಳ ತುಂಬ ಬೀಯರ್- ರಮ್ ವಾಸನೆಯೂ, ರಸ್ತೆಗಳ ತುಂಬೆಲ್ಲ ಸೈಲೆನ್ಸರ್ ತೆಗೆದು ಕರ್ಣ ಕರ್ಕಶವಾಗಿ ಚೀರುತ್ತಾ ಓಡುವ ಬೈಕ್‌ಗಳೂ, ಅವುಗಳನ್ನು ಓಡಿಸುವ ನಶೆಯ ಸವಾರರೂ, ಅವರ ಬಾಯಿಂದ ಅಷ್ಟೇ ವಿಕಾರವಾಗಿ ಹೊರಡುವ ಹ್ಯಾಪಿ ನ್ಯೂ ಇಯರ್ ಎಂಬ ಪದಗಳೂ, ಆಕಾಶದ ತುಂಬ ಬಿರುಸು ಬಾಣ ಚಿತ್ತಾರಗಳೂ, ಆ ಸಂತೋಷದ ಕ್ಷಣಗಳೂ... ಇವೆಲ್ಲವೂ ಒಂದು ರೀತಿಯ ಕೊಲಾಜ್. ಇಂಥ ಚಿತ್ರಿಕೆಗಳಿಗೆ ಸಾವಿಲ್ಲ. ಹೊಸ ವರ್ಷವೆಂಬ ಕ್ಯಾನ್ವಾಸ್‌ನಲ್ಲಿ ಪ್ರತಿ ಬಾರಿಯೂ ಒಡಮೂಡಿ, ಸರಿದು ಹೋಗುವ ಚಿತ್ರಗಳು. ಇವಕ್ಕೆ ಕಲಾವಿದನ ಹಂಗಿಲ್ಲ. ಆದರೆ, ಇಂಥ ಸಂತೋಷದ ಕ್ಷಣಗಳನ್ನು ಆಸ್ವಾದಿಸುವ, ರಸಗಳಿಗೆಗಳನ್ನು ಸವಿಯುವ ಸಾಮರ್ಥ್ಯವನ್ನು ನಾನು ಕಳೆದುಕೊಂಡು ಸುಮಾರು ವರ್ಷಗಳಾದವು. ನೀಲಾಕಾಶದಲ್ಲಿ ಚಿತ್ತಾರದ ಸುರುಳಿಗಳು ಬಿಚ್ಚಿಕೊಂಡಾಗಲೆಲ್ಲ ನನ್ನೊಳಗೂ ಭಾವನೆಗಳ ಉಬ್ಬರ. ಅದೆಷ್ಟೋ ಹೊಸ ವರ್ಷಗಳ ಬಂದರೂ, ಹಳೆಯ ನೆನಪಗಳನ್ನೆಲ್ಲ ಗಂಟೆ ಮೂಟೆ ಕಟ್ಟಿಡಲು ಸಾಧ್ಯವಿಲ್ಲ. ಹೊಸ ಹೊಸ ವಸಂತ ತೆರೆದುಕೊಂಡಾಗಲೆಲ್ಲ ನೆನಪುಗಳ ಆಯುಷ್ಯ ಜಾಸ್ತಿಯಾಗುತ್ತಲೇ ಹೋಗುತ್ತದೆ. ಈ ನೆನಪುಗಳೇ ಹಾಗೇ, ಅವುಗಳಿಗೆ ಸಾವಿಲ್ಲ, ಬಣ್ಣವಿಲ್ಲ, ನಿರ್ಗುಣ, ನಿರಾಕಾರ! ಆದರೆ, ಅವುಗಳೊಳಗೇ ತುಂಬಿರುವ ನೋವಿನ ಆಲಾಪನೆ ಮಾತ್ರ ಎಂದಿಗೂ ಸಹಿಸಲು ಅಸಾಧ್ಯ.
ಹೊಸ ವರ್ಷದ ಹಿಂದಿನ ರಾತ್ರಿ ಎಂದರೆ; ನೋವಿನ ಕರಾಳ ರಾತ್ರಿ. ಆ ರಾತ್ರಿಯನ್ನು ನೆನೆಸಿಕೊಂಡರೇ ಈಗಲೂ ಮೈಯಲ್ಲಿ ನಡುಕ. ಉನ್ಮಾದದಲ್ಲಿ ಮಾಡಲು ಹೋದ ಹುಡುಗಾಟಿಕೆ ಇಡೀ ಜೀವನವನ್ನು ನೋವಿನ ಸರಪಳಿಯಲ್ಲಿ ಬಂಧಿಸಿಟ್ಟಿದೆ. ಆಕೆ ಬಿಟ್ಟು ಹೋದ ಹೊಸ ವರ್ಷದ ಗಿಫ್ಟ್ ಬಾಕ್ಸ್ ಇನ್ನೂ ಹಾಗೆಯೇ ಇದೆ; ಭದ್ರವಾಗಿದೆ. ಅದರೊಳಗೇನಿದೆ? ಗೊತ್ತಿಲ್ಲ. ಅದನ್ನು ಒಡೆದು ನೋಡುವ ಸಾಹಸ ಮಾಡಲು ನನ್ನಿಂದ ಸಾಧ್ಯವಿಲ್ಲ. ಅದು ಹಾಗೆಯೇ ಇರಬೇಕು; ಅದು ಆಕೆಯ ನಿಷ್ಕಲ್ಮಶ ಪ್ರೀತಿಯ ಕುರುಹು. ಅದರಲ್ಲಿ ನನಗಾಗಿ ಏನು ಕೊಟ್ಟಿರಬಹದು ಎಂಬೆಲ್ಲ ಲೆಕ್ಕಾಚಾರಗಳೇ, ಊಹೆಗಳೇ ನನ್ನೊಳಗೇ ಆಕೆಯನ್ನು ಜೀವಂತವಾಗಿಟ್ಟಿವೆ. ಒಡೆದು ನೋಡಿದರೆ ಊಹೆಗೂ, ಕಲ್ಪನೆಗೂ ಆಕಾರ ದಕ್ಕಿಬಿಡುತ್ತದೆ. ಅದನ್ನು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ. ಅದು ಹಾಗೆಯೇ ಇದ್ದರೆ ಚೆನ್ನ. ನಿಗೂಢ ಕಾಣಿಕೆಯಾಗಿ, ನನ್ನನ್ನು ಸದಾ ಅವಳ ನೆನಪಿನಲ್ಲಿರುವಂತೆ ಮಾಡುವ ಏಕೈಕ ಸಾಧನವದು. ಮೋಸ್ಟಲೀ... ನನ್ನೊಂದಿಗೇ ಅದರ ಗುಟ್ಟು ಹೊರಟು ಹೋಗಬಹುದು.
ನಾವಾದರೂ ಹೇಗಿದ್ದವು? ಸ್ವರ್ಗಕ್ಕೆ ಕಿಚ್ಚು ಹಚ್ಚುವ ಪ್ರೀತಿಯದು. ನಮ್ಮನ್ನು ನೋಡಿ ಹಲುಬಿದವರು ಅನೇಕರು. ಅದೊಂದು ದಿವ್ಯ ಅನುಭೂತಿ. ಪ್ರೀತಿ ಕೊಟ್ಟು ಪ್ರೀತಿಯನ್ನು ಪಡೆದಾಗಲೇ ದಕ್ಕುವ ಅನನ್ಯ ಅನುಭವವದು; ಅದಕ್ಕೇ ಸಾಟಿಯೇ ಇಲ್ಲ, ಅವಳಿಗೂ. ಸದಾ ಚಟುವಟಿಕೆಯ ಚಿಲುಮೆ ಅವಳು. ಮುಂಗರುಳು ಸರಿಸುತ್ತಾ, ಪಟಪಟನೆ ಮಾತನಾಡುವ ಅವಳನ್ನು ನೋಡುವುದೇ ಚಂದ. ಅವಳ ಬಟ್ಟಲುಗಣ್ಣುಗಳಲ್ಲಿ ನೂರಾರು ಭರವಸೆ, ಏನೇನೋ ಮಾಡುವ ಹುಮ್ಮಸ್ಸು, ಒಮ್ಮೆಲೇ ನಭಕ್ಕೆ ನೆಗೆಯುವ ಅತ್ಯುತ್ಸಾಹ. ಅವಳನ್ನು ನೋಡಿದ ಯಾರಿಗಾದರೂ ಜೀವನೋತ್ಸಾಹ ಇಮ್ಮಡಿಯಾಗುವುದರಲ್ಲಿ ಸಂಶಯವೇ ಇರಲಿಲ್ಲ. ಗಗನಸಖಿಯಾಗಿ ವಿಮಾನದಲ್ಲಿ ಪ್ರಪಂಚ ಪರ್ಯಟನೆ ಮಾಡುವ ಅದಮ್ಯ ಬಯಕೆ ಆಕೆಯದ್ದು. ಆದರೆ?
ಅವಳೆಲ್ಲ ಕನಸುಗಳನ್ನು, ಹೆಬ್ಬಯಕೆಗಳನ್ನು ನಾನೇ ಕೊಂದು ಹಾಕಿದಿನಾ? ಇಂಥದೊಂದು ಗಿಲ್ಟ್ ಕಳೆದ ಐದು ವರ್ಷಗಳಿಂದ ಕಾಡುತ್ತಲೇ ಇದೆ. ನನ್ನಿಂದಾಗಿ ಅವಳ ಬದುಕೇ ಬರ್ಬಾದಾಗಿ ಹೋಯಿತು. ನನ್ನ ಒಂದು ಬೇಜವಾಬ್ದಾರಿ, ಅವಳ ಜೀವನದ ಪಥವನ್ನೇ ಬದಲಿಸಿ ಮುಂದೆ ದಾರಿಯಿಲ್ಲದ ಅಂಚಿನಲ್ಲಿ ತಂದು ನಿಲ್ಲಿಸಿದೆ ಅವಳನ್ನು. ನನ್ನ ಕನಸುಗಳನ್ನೂ ತನ್ನ ಕನಸಗಳೆಂದೇ ಭಾವಿಸಿ, ಸಂಭ್ರಮಸುತ್ತಿದ್ದ ಆಕೆಯಲ್ಲಿ ಕಣ್ಣಗಳಲ್ಲಿ ಆಕೆಯದ್ದೇ ಕನಸುಗಳಿಲ್ಲ. ಅವೆಲ್ಲವೂ ಮುರುಟಿ ಹೋಗಿವೆ. ಅವಳ ಮುಂದೆ ಹೊಸ ವರ್ಷದ ಆಚರಣೆಯ ಬಾಣ ಬಿರುಸಗಳು ಸೃಷ್ಟಿಸುವ ಚಿತ್ತಾರಗಳು ಕೇವಲ ಢಂ.. ಢಂ.. ಎನ್ನುವ ಶಬ್ಧವಷ್ಟೇ. ಅವುಗಳಿಗೆ ಆಕಾರವಿಲ್ಲ, ಸೌಂದರ್ಯವಿಲ್ಲ.
ಅಂದು ಹೀಗೆಯೇ, ಹೊಸ ವರ್ಷದ ಅಮಲಿನಲ್ಲಿ ತೇಲುತ್ತಾ, ಸಂತೋಷದ ರಣಕೇಕೆ ಹಾಕುತ್ತಾ ಹೊರಟಿತ್ತು ನಮ್ಮ ಟೀಮ್. ನನ್ನ ಬೈಕಿನಲ್ಲಿ ಹಿಂದೆ ಕುಳಿತ ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಯಾಕೆ ಗೊತ್ತಾ? ಮುಂದಿನ ವಾರ ಅವಳು ಗಗನಸಖಿಯಾಗಿ ಆಕಾಶದಲ್ಲಿ ಹಾರಾಡುವವಳಿದ್ದಳು. ಏರ್‌ಲೈನ್ಸ್ ಕಂಪನಿಯೊಂದು ಆಕೆಗೆ ಆಫರ್ ಲೆಟರ್ ಕೂಡ ಕೊಟ್ಟಿತ್ತು. ಅದೇ ಹುಮ್ಮಸ್ಸಿನಲ್ಲಿ ನನಗೊಂದು ಪುಟ್ಟ ಆ ‘ಗಿಫ್ಟ್’ ಕೊಟ್ಟಿದ್ದಳು. ನಮ್ಮ ಇಡೀ ಟೀಂಗೆ ಅವಳದ್ದೇ ಪಾರ್ಟಿ. ಎಂಟೊಂಭತ್ತು ಜನರಿದ್ದ ನಾವು, ಹೊಸ ವರ್ಷಕ್ಕೆ ಸೇರುವ ಆ ಬೃಹತ್ ರೋಡಿನಲ್ಲಿ ಕುಣಿದು ಕುಪ್ಪಳಿಸಲು ಅಷ್ಟೇ ವೇಗವಾಗಿ ಹೊರಟಿದ್ದವು. ಗಂಟಲೊಳಗೇ ಇಳಿದು ಹೋಗಿದ್ದು ತುಸು ವಿಸ್ಕಿ ನನ್ನನ್ನು ಸಂಪೂರ್ಣವಾಗಿ ನಿಯಂತ್ರಣ ತೆಗೆದುಕೊಳ್ಳುವ ಸನ್ನಾಹದಲ್ಲಿತ್ತು. ಆದರೆ, ಹುಚ್ಚು ಧೈರ್ಯದಿಂದ ಬೈಕಿ ಆ್ಯಕ್ಸಿಲೆಟರ್ ಕಿವಿಯೊತ್ತಿ ಬುರ್ರೆಂದು ಹೊರಟ ನಮಗೆ, ಮುಂದಾಗುವ ಅಪಘಾತದ ಮುನ್ಸೂಚನೆಯೇ ಇರಲಿಲ್ಲ. ಹಿಂದಿದ್ದ ಅವಳ ದನಿಯಲ್ಲಿ ಸಂತೋಷ ಉನ್ಮಾದವಿತ್ತು, ಕನಸು ಸಾಕಾರಗೊಂಡು ಸಂಭ್ರಮವಿತ್ತು. ಪ್ರೀತಿಸುವವನ ತೋಳು ತೆಕ್ಕೆಯಲ್ಲಿ ಬಂಧಿಯಾಗುವ  ದಿನಗಳ ಬಗ್ಗೆ ಲೆಕ್ಕ ಹಾಕುತ್ತಲೇ, ‘‘ನೋಡು ಇನ್ನೆರಡು ವರ್ಷದಲ್ಲಿ ನಾವಿಬ್ಬರು ಮದ್ವೆ ಆಗೋಣ. ಅಷ್ಟರಲ್ಲಿ ನಾನು ಇಡೀ ಜಗತ್ತು ಸುತ್ತಿ ಬರುತ್ತೇನೆ,’’ ಎಂದು ಹೇಳುತ್ತಿದ್ದ ಆಕೆಯ ಮಾತುಗಳು ಈಗಲೂ ಕಿವಿಯಲ್ಲಿ ಅಷ್ಟೇ ಗಟ್ಟಿಯಾಗಿ ಕೇಳಿಸುತ್ತಲೇ ಇರುತ್ತವೆ. ಆಕೆಯ ಮಾತುಗಳಿಗೆಲ್ಲ ‘‘ಎಸ್ ಬಾಸ್,’’ ಎನ್ನುತ್ತಲೇ ಆ್ಯಕ್ಸಿಲೆಟರ್ ತಿರುವುತ್ತಾ ಹೋದವನಿಗೆ, ಎದುರಾಗಿದ್ದು ನಮ್ಮಂತೆಯೇ ಸಂತೋಷದ ಅಮಲಿನಲ್ಲಿ ತೇಲಾಡುತ್ತಿದ್ದ ಜೋಡಿ ಇದ್ದ ಬೈಕ್. ತಪ್ಪು ಅವರದ್ದಾ..  ನಾನು ಮಾಡಿದ್ದು ತಪ್ಪಾ ಎನ್ನುವುದಕ್ಕಿಂತ, ಏನು ಆಗಬಾರದಿತ್ತೋ ಅದು ಆಗಿ ಹೋಗಿತ್ತು. ನಮ್ಮಿಬ್ಬರ ಬೈಕ್‌ಗಳ ಮುಖಾಮುಖಿ ಡಿಕ್ಕಿಯಿಂದ, ನಾವಿಬ್ಬರು ರೋಡ್ ಡಿವೈಡರ್‌ಗೆ ಬಡಿದಿದ್ದಾಯಿತು. ಅಷ್ಟೇ ಗೊತ್ತು. ಮುಂದೆನಾಯ್ತು? ಕಣ್ತೆರೆದು ನೋಡಿದಾಗ, ನಾವಿದ್ದದ್ದು ಆಸ್ಪತ್ರೆಯಲ್ಲಿ. ತಲೆಗೆ ಸ್ವಲ್ಪ ಪೆಟ್ಟು ಬಿದ್ದು, ಅಂಥ ಅಪಾಯವೇನಾಗಿರಲಿಲ್ಲ ನನಗೆ. ಆದರೆ, ಅವಳಿಗೆ? ಆಕೆ ತನ್ನ ಕಣ್ಣು ಕಾಂತಿಯನ್ನೇ ಕಳೆದುಕೊಂಡಿದ್ದಳು. ಮಿರರ್‌ನ ಚೂರುಗಳ ಆಕೆಯ ದೃಷ್ಟಿಯನ್ನು ತೆಗೆದು ಹಾಕಿದ್ದವು. ಅಲ್ಲಿಗೆ, ಆಕೆಯ ಇಡೀ ಕನಸು ಕತ್ತಲೆಯಲ್ಲಿ ಮುಳುಗಿ ಹೋಗಿತ್ತು. ಅದಕ್ಕೆ ನಾನು ಕಾರಣನಾದ ಗಿಲ್ಟು! ಹೊಸ ವರ್ಷದ ಸಂಭ್ರಮ ಈಗಲೂ ನನಗೆ ಅದೇ ನೋವನ್ನು ನೆನಪಿಸುವ, ಮಾಯದ ಗಾಯವನ್ನು ಮತ್ತೆ ಕೆದುಕುವ ದಿನವಷ್ಟೆ. ನನ್ನ ಬೇಜವಾಬ್ದಾರಿಯ ರೈಡಿಂಗ್ ಆಕೆಯ ಜೀವನದ ಮೇಲೆಯೇ ಭಾರಿ ಸವಾರಿ ಮಾಡಿ ಬಿಟ್ಟಿತ್ತು. ಅವಳೀಗ ಮೊದಲಿನಂತಿಲ್ಲ. ಅವಳಿಗೇ ಇಡೀ ಜಗತ್ತೇ ಕತ್ತಲು. ಆ ಗಾಢ ಕತ್ತಲಿನಲ್ಲಿ ನಾನು ಮಾತ್ರ ಮಿಣುಕುವ ದೀಪ ಅವಳಿಗೆ. ಆದರೆ, ಅವಳಪ್ಪನ ಸಿಟ್ಟಿಗೆ ಸುಮ್ಮನಿದ್ದಾಳೆ; ಅದ ಸಹಜವೂ ಕೂಡ.
ಅವಳು ಜತೆಯಲ್ಲಿ ಇಲ್ಲದಿರಬಹುದು. ಆದರೆ, ಆಕೆ ಕೊಟ್ಟ ಹೋದ ದಿವ್ಯ ಪ್ರೀತಿ, ಅನನ್ಯ ಅನುಭೂತಿ ಇದೆ. ಆಕೆ ಬಿಟ್ಟು ಹೋಗಿರುವ ನೂರಾರು ನೆನಪುಗಳಿವೆ. ಅಷ್ಟು ಸಾಕು. ತೀರಾ ದುಃಖವಾದಾಗ, ಆಕೆಯ ಆ ‘ಗಿಫ್ಟ್ ’ ಮತ್ತೆ ನನ್ನಲ್ಲಿ ಅದಮ್ಯ ಪ್ರೀತಿಯನ್ನು ಸ್ಪುರಿಸುತ್ತದೆ. ನೆನಪುಗಳಿಗೆ ಜೀವ ತುಂಬುತ್ತದೆ. ಆ ಕರಾಳ ರಾತ್ರಿಯ ಕಹಿ ನೆನಪನ್ನು ಮರೆ ಮಾಚುತ್ತದೆ. ಅದುವೇ ಆಕೆಯ ಪ್ರೀತಿಯ ದಿವ್ಯ ಸಾನ್ನಿಧ್ಯವನ್ನು ಕಲ್ಪಿಸುತ್ತದೆ. ನಾನು ಈಗಲೂ ಅವಳ ನಿರೀಕ್ಷೆಯಲ್ಲಿದ್ದೇನೆ, ಆಕೆ ನನ್ನ ಮೇಲಿಟ್ಟಿರುವ ಪ್ರೀತಿಗೆ ಅವರಪ್ಪ ಸೋಲುತ್ತಾನೆಂಬ ನಿರೀಕ್ಷೆಯಲ್ಲಿ ಆಕೆಯೂ ಇದ್ದಾಳೆ, ನಾನು ಕೂಡ. ಆ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ. ಆಕೆಗೆ ಜೀವನಪೂರ್ತಿ ಕಣ್ಣಾಗಿ, ಆಕೆ ಕಂಡ ಕನಸಗಳಿಗೆ ನಾನು ಜೀವ ತುಂಬುತ್ತೇನೆ. ಅವಳ ಕಣ್ಣಲ್ಲಿ ಕಾಂತಿ ತುಂಬುವ ಹಂಬಲ ನನ್ನದು.



This article has published in VijayKarnataka, on 2nd jan 2017 edition

ಸೋಮವಾರ, ನವೆಂಬರ್ 21, 2016

-ಹುಡುಗನೊಬ್ಬನ ಗಜಲ್‌ಗಳು- ನೋಟು ರದ್ದಾಗಿರಬಹುದು; ನನ್ನ ಪ್ರೀತಿಯಲ್ಲ

- ಆಕೆಯ ನೆನಪಿನ ಕುರುಹಾಗಿ, ಸಾಫಲ್ಯಗೊಳ್ಳದ ಪ್ರೇಮದ ಸಂಕೇತವಾಗಿ ನನ್ನಲ್ಲಿದೆ ಆ ನೋಟು

- ಪ್ರದ್ಯುಮ್ನ
ಇವತ್ತ್ಯಾಕೆ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ ಎನ್ನುತ್ತಾ ಹಾಗೆಯೇ ಟಿವಿ ನೋಡುತ್ತಾ ಕುಳಿತೆ. ಕೊನೆಗೆ, ‘‘ಇಂದು ಮಧ್ಯ ರಾತ್ರಿಯಿಂದಲೇ ನಿಮ್ಮ ಕೈಯಲ್ಲಿರುವ 500 ರೂ. ಮತ್ತು 1000 ರೂ. ನೋಟುಗಳಿಗೆ ಮಾನ್ಯತೆ ಇಲ್ಲ. ಅವು ಕೇವಲ ಕಾಗದದ ಚೂರು,’’ ಎಂದು ಮೋದಿ ಹೇಳುತ್ತಿದ್ದಂತೆ, ಅವರು ದೇಶ ಉದ್ದೇಶಿಸಿ ಮಾತನಾಡುತ್ತಿದ್ದರ ಹಿಂದಿನ ಮರ್ಮ ಅರ್ಥವಾಯಿತು. ಅಂದರೆ, ಇನ್ನು ನಮ್ಮ ನೋಟುಗಳೆಲ್ಲ ರದ್ದಿ. ಮನೆಯಲ್ಲಿ ಕಂತೆ ಕಂತೆ ಕಪ್ಪು ಹಣ ಇಟ್ಟುಕೊಂಡವರ ಗತಿ ಹರೋಹರ ಎಂದ ಖುಷಿಯಾದೆ. ಹಾಗೆಯೇ ಮರುಕ್ಷಣದಲ್ಲಿ ನನ್ನ ಹತ್ತಿರ ಎಷ್ಟಿದೆ ಎಂದು ವಾಲೆಟ್ ತೆಗೆದು ನೋಡಿದೆ; ನಾಲ್ಕೈದು 100 ರೂ.ನೋಟಗಳಿದ್ದವು ಮತ್ತು ಆ ‘1000 ರೂ. ನೋಟು’. ಎರಡು ದಿನದ ಮಟ್ಟಿಗೆ ತೊಂದರೆಯಿಲ್ಲ. ಹೇಗಿದ್ದರೂ ಬ್ಯಾಂಕುಗಳು ಶುರುವಾಗುವ ಹೊತ್ತಿಗೆ ಹೋಗಿ ದುಡ್ಡು ಡ್ರಾ ಮಾಡಿಕೊಂಡರಾಯಿತು ಎಂದು ಯೋಚಿಸುತ್ತಾ ಮಲಗಿಕೊಂಡೆ. ನನ್ನ ವಾಲೆಟ್‌ನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ  ಬೆಚ್ಚಗೆ ಕುಳಿತಿದ್ದ ಆ 1000 ರೂ. ನೋಟು ಬೇಡ ಬೇಡ ಎಂದರೂ ಕನಸಲ್ಲಿ ಬಂದು ಹೋಗುತ್ತಿತ್ತು. ಅದೊಂದು ತರಹ ಮಲಗಿಯೂ ಮಲಗಿರದ ಸ್ಥಿತಿ ಆ ರಾತ್ರಿ.
  ಎರಡು ದಿನಗಳ ಬಳಿಕ ನನ್ನ ಬಳಿಯ ನೂರರ ನೋಟುಗಳೆಲ್ಲ ಖಾಲಿಯಾದರೆ, ಆ 1000 ರೂ. ನೋಟು ವಿನಿಮಯ ಮಾಡಿಕೊಳ್ಳಲೇಬೇಕಾದ ಪರಿಸ್ಥಿತಿ ಎದುರಾದರೆ, ಒಂದು ಕ್ಷಣ ಅಧೀರನಾದೆ. ಅದು ಕೇವಲ ನೋಟಲ್ಲ; ಆತ್ಮ ಸಂಗಾತಿ. ಅದು ನೋಟಿನ ನಂಟಲ್ಲ; ಪ್ರೀತಿಯ ಗಂಟು. ಪ್ರೇಮದ ಸಿಂಚನ ಹರಿಸಿದ ಮಳೆಬಿಲ್ಲೆ. ಆ ‘ಬೆಳದಿಂಗಳ ಬಾಲೆ’ ನನ್ನೊಂದಿಗೆ ಅಕ್ಷರಗಳ ಜತೆ ಒಡನಾಡಿದ ಕುರುಹು. ಇಷ್ಟೇ ಆಗಿದ್ದರೆ, ಒಂದು ಕ್ಷಣವೂ ಯೋಚಿಸಿದೆ, ವಿನಿಮಯ ಮಾಡಿಕೊಳ್ಳಬಹುದಿತ್ತು. ಆದರೆ, ಇಂದಿಗೂ ಆ ನೋಟು ನನ್ನೊಳಗೆ ಪ್ರೀತಿಯನ್ನು ಪೊರೆಯತ್ತಿರುವ ನಿತ್ಯ ಸಂಜೀವಿನಿ. ನನ್ನ ಅದೆಷ್ಟೋ ಕವನಗಳಿಗೆ ಸ್ಫೂರ್ತಿಯ ಸೆಲೆ; ಅಮೂರ್ತ ರೂಪದ ಸಾಂಕೇತಿಕ ರೂಪ. ಈಗ ಅವಳೆಲ್ಲಿದ್ದಾಳೋ.... ಹೇಗಿದ್ದಾಳೋ... ಏನು ಮಾಡುತ್ತಿದ್ದಾಳೋ.. ಗೊತ್ತಿಲ್ಲ. ಆಕೆ ಕೊಟ್ಟ ನೋಟು ನನ್ನೊಂದಿಗೇ ಇದೆ, ಆಕೆಯ ನೆನಪಿನ ಕುರುಹಾಗಿ; ಸಾಫಲ್ಯಗೊಳ್ಳದ ಪ್ರೇಮದ ಸಂಕೇತವಾಗಿ.
ಏಳು ವರ್ಷಗಳ ಹಿಂದೆ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ನನ್ನದೊಂದು ಗಜಲ್ ಪ್ರಕಟವಾಗಿತ್ತು. ಈಗಿನಷ್ಟು ಆಗ ಇನ್ನೂ ಎಸ್‌ಎಂಎಸ್, ವ್ಯಾಟ್ಸಾಪ್‌ಗಳಂಥ ಕ್ಷಿಪ್ರ ಸಂದೇಶವಾಹಕಗಳ ಭರಾಟೆ ಇರಲಿಲ್ಲ. ಪತ್ರ ಬರವಣಿಗೆ ಇನ್ನೂ ಜೀವಂತವಾಗಿತ್ತು. ಹಾಗೆ ಬಂದ ಒಂದು ಪತ್ರವೇ, ಈಗ ನನ್ನಲ್ಲಿರುವ 1000 ರೂ. ನೋಟಿನ ಮೂಲ. ನನ್ನ ಗಜಲ್ ಮೆಚ್ಚಿ ಬಂದಿದ್ದ ಆ ಪತ್ರದಲ್ಲಿ ನಾಲ್ಕೇ ನಾಲ್ಕು ಸಾಲು ಬರೆದಿತ್ತು. ಅವು ಅತ್ಯಾಕರ್ಷಕ, ಅರ್ಥಗರ್ಭಿತವಾಗಿದ್ದವು. ಓದಿದ ಕೂಡಲೇ ಬೇರೆಯದ್ದೇ ಭಾವ ಮೂಡಿಸುವಂಥವು. ಸರಿ, ಯಾರೋ ಒಬ್ಬರು ಮೆಚ್ಚಿ ಬರೆದಿದ್ದಾರೆಂದು ಮರು ಉತ್ತರಿಸೋಣ ಎಂದರೆ; ಅದಕ್ಕೆ ವಿಳಾಸ ಇಲ್ಲ. ಇನ್ನೇನು ಮಾಡುವುದು ಎಂದು ಸುಮ್ಮನಾದೆ. ಆದರೆ, ಆ ಪತ್ರಗಳು ಬರುವುದು ನಿಯಮಿತವಾಗುತ್ತ ಹೋದಂತೆ, ಅವಳೊಬ್ಬಳು ಯುವತಿ ಎಂಬುದಂತೂ ಖಚಿತವಾಗಿತ್ತು. ಒಂದೊಂದು ಪತ್ರದಲ್ಲಿ ಒಂದೊಂದು ಭಾವ. ಆದರೆ, ಪತ್ರ ಬರೆಯುವರು ಯಾರೆಂದೂ ಮಾತ್ರ ಗೊತ್ತೇ ಆಗುತ್ತಿಲ್ಲ. ಅದಕ್ಕಾಗಿ ಏನಿಲ್ಲ ಪ್ರಯತ್ನಪಟ್ಟರೂ ಫಲಿತಾಂಶ ಮಾತ್ರ ಶೂನ್ಯ. ಈ ‘ಪತ್ರ ವ್ಯವಹಾರ’ವೇ ನನ್ನ ಮತ್ತೊಂದಿಷ್ಟು ಗಜಲ್ ಕೃಷಿಗೆ ಪೂರಕವಾಯಿತು; ಸ್ಫೂರ್ತಿಯಾಯಿತು. ಮೊದ ಮೊದಲು ಸಾಮಾನ್ಯ ಓದುಗರೊಬ್ಬರ ಅಕ್ಕರೆಯ ಪ್ರೀತಿ ಎಂದು ನಿರ್ಲಕ್ಷ್ಯ ವಹಿಸಿದ್ದವನಿಗೆ ದಿನ ಕಳೆದಂತೆ, ಆಕೆಯ ಕಳುಹಿಸುವ ಪತ್ರಗಳಿಗೆ ಪರವಶನಾದೆ. ನಿಗದಿತ ಸಮಯಕ್ಕೆ ಪತ್ರ ಬರೆದಿದ್ದರೆ ಏನೋ ಚಡಪಡಿಕೆ, ಅವ್ಯಕ್ತ ಆತಂಕಗಳೆರಡೂ ಉಂಟಾಗುತ್ತಿದ್ದವು. ಪತ್ರ ಕೈ ಸೇರಿದ ಬಳಿಕ ಎಲ್ಲವೂ ನಿರಾಳ. ಅಂದ ಹಾಗೆ, ಆಕೆ ಬರೆಯುತ್ತಿದ್ದ ಪತ್ರಗಳೆಂದೂ ನಾಲ್ಕು ಸಾಲುಗಳನ್ನು ಮೀರುತ್ತಿರಲಿಲ್ಲ. ಆದರೆ, ಆ ನಾಲ್ಕು ಸಾಲು ಮಾತ್ರ, ನನಗೆ ನೂರು, ಸಾವಿರ ಸಾಲುಗಳ ರೀತಿಯಲ್ಲಿ ಗೋಚರಿಸುತ್ತಿದ್ದವು. ಅಷ್ಟೊಂದು ಭಾವ, ಲಹರಿ. ಹಾಗೆ ನೋಡಿದರೆ, ನಾನು ಬರೆಯುತ್ತಿದ್ದ, ಗಜಲ್, ಕವನಗಳೆನ್ನೆಲ್ಲ ಆಕೆಯ ಪತ್ರಗಳ ಮುಂದೆ ನಿವಾಳಿಸಿ ಒಗೆಯಬೇಕು, ಹಾಗೆ ಬರೆಯುತ್ತಿದ್ದಳಾಕೆ. ಆದರೇನು ಮಾಡುವುದು, ಇದೆನ್ನೆಲ್ಲ ಹೇಳೋಣ ಎಂದರೆ, ಅವಳ ವಿಳಾಸ ಇಲ್ಲ, ಹೆಸರೂ ಗೊತ್ತಿಲ್ಲ. ಅವಳೊಂದು ರೀತಿ ಬೆಳದಿಂಗಳ ಬಾಲೆಯಾದಳು. ನಿಜವಾಗಿಯೂ ಆಕೆ ನನ್ನ ಪ್ರೀತಿಸುತ್ತಿದ್ದಳಾ? ಅಥವಾ ನಾನೇ ಹಾಗೆ ಅಂದುಕೊಂಡಿದ್ದೇನಾ?, ನಾನೇ ಅವಳನ್ನು ಪ್ರೀತಿಸುತ್ತಿದ್ದೇನಾ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುವುದು ಕಷ್ಟವಾಗುತ್ತಿತ್ತು. ಆಕೆ ಬರೆಯುತ್ತಿದ್ದ ಒಂದೊಂದು ಪತ್ರವೂ ಒಂದೊಂದು ರೀತಿಯಲ್ಲಿರುತ್ತಿತ್ತು. ಉತ್ಕಟ ಪ್ರೇಮ ನಿವೇದನೆಯಂತೆ ಪತ್ರ ಬರೆಯುತ್ತಿದ್ದ ಆಕೆ, ಮತ್ತೊಮ್ಮೆ ಬರೆದಾಗ ಇಡೀ ಜಗತ್ತೇ ನಶ್ವರ, ನಾನು ನೀನು ನಿಮಿತ್ತ ಎನ್ನುವ ವೇದಾಂತಿಯ ಧಾಟಿಯಲ್ಲಿ ಬರೆಯುತ್ತಿದ್ದಳು. ನೆನಪಿರಲಿ... ಎಲ್ಲವೂ ನಾಲ್ಕೇ ನಾಲ್ಕು ಸಾಲುಗಳು! ಅವಳ ಪತ್ರಗಳ ಉದ್ದೇಶಕ್ಕೊಂದು ರೂಪ ಕೊಡುವುದು ಸುಮಾರು ದಿನಗಳವರೆಗೆ ನನಗೆ ಸಾಧ್ಯವಾಗಲೇ ಇಲ್ಲ. ಇದೇ ಗುಂಗಿನಲ್ಲಿ ಹೊರ ಬಂದ ನನ್ನ ಭಾವನೆಗಳು ಗಜಲ್ ರೂಪದಲ್ಲಿ ಪ್ರಕಟವಾಗುತ್ತ ಹೋದಂತೆ, ಮತ್ತಷ್ಟು ಓದುಗರು ಹುಟ್ಟಿಕೊಂಡರು. ಆದರೆ, ಆಕೆ ಯಾರು? ಎಲ್ಲಿದ್ದಾಳೆ? ಎಂಬೆಲ್ಲ ಪ್ರಶ್ನೆಗಳಿಗೆ ಮಾತ್ರ ಇರಲಿಲ್ಲ. ಅಷ್ಟು ಹೊತ್ತಿಗಾಗಲೇ ನಾನು, ಅವಳನ್ನ ಪ್ರೀತಿಸಲಾರಂಭಿಸಿದ್ದೆ. ಅವಳು ಸಿಗುತ್ತಾಳೋ.. ಇಲ್ಲವೋ ಎಂಬುದು ಗೊತ್ತಿಲ್ಲ. ಆದರೂ ಪ್ರೀತಿಸುತ್ತಿದ್ದೆ. ನನ್ನದೇ ಕಲ್ಪನೆಯೊಳಗೆ ಅವಳಿಗೊಂದು ಆಕಾರ, ಬಣ್ಣ, ಸೌಂದರ್ಯವನ್ನು ಕಲ್ಪಿಸಿ ಸಂತೋಷಪಡುತ್ತಿದ್ದೆ. ಒಮ್ಮಮ್ಮೆ ಅವಳ ಪತ್ರಗಳೆನ್ನೆಲ್ಲ ಹರವಿಟ್ಟುಕೊಂಡು, ದೊರೆಯದೇ ಇರುವ ಉತ್ತರಗಳಿಗಾಗಿ ತಡಕಾಡುತ್ತಿದ್ದೆ. ಮತ್ತೆ ಮತ್ತೆ ಓದುತ್ತಿದ್ದೆ; ಮತ್ತೆ ಮತ್ತೆ ಪ್ರೀತಿಸುತ್ತಿದ್ದೆ.
  ಹೀಗೆ ಸಾಗಿತ್ತು ನಮ್ಮ ನಡುವಿನ ಏಕಮುಖಿ ಪ್ರೀತಿಯ ಪಯಣ. ಅವಳೇನೋ ತನ್ನೆಲ್ಲ ಭಾವನೆಗಳನ್ನು ಆ ನಾಲ್ಕು ಸಾಲುಗಳಲ್ಲಿ ಹಂಚಿಕೊಳ್ಳುತ್ತಿದ್ದಳು. ನಾನು ಮಾತ್ರ ಅವಳೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಆಗೀಗ ಪ್ರಕಟವಾಗುತ್ತಿದ್ದ ನನ್ನ ಕವನ, ಗಜಲ್‌ಗಳಲ್ಲಿ ಪ್ರಶ್ನೆಗಳು ಮತ್ತು ಉತ್ತರಗಳನ್ನು ಏಕಕಾಲಕ್ಕೆ ಹುಡುಕಿಕೊಂಡು ಸಂತೋಷ ಪಡುತ್ತಿದ್ದಳು ಎಂಬುದು ಆಕೆಯ ಪತ್ರ ಓದಿದಾಗ ಗೊತ್ತಾಗುತ್ತಿತ್ತು.
  ಎಲ್ಲದಕ್ಕೂ ಒಂದು ಅಂತ್ಯ ಇರುತ್ತದೆ ಅಲ್ಲವೇ? ಈ ನಾಲ್ಕು ಸಾಲು ಬರೆಯುವ ಗೆಳತಿಯ ಪತ್ರಕ್ಕೂ ಅಂತ್ಯ ಇತ್ತು ಅಂತ ಕಾಣುತ್ತದೆ. ಅವತ್ತೊಂದಿನ ಅಂಚೆಯಣ್ಣ ಅಂಚೆ ತಂದುಕೊಟ್ಟಾಗ ಎಂದಿನಂತೆ ಖುಷಿಯಿಂದಲೇ ಪಡೆದು, ಒಡೆದು ನೋಡಿದಾಗ ಆಘಾತ ಕಾದಿತ್ತು. ಒಂದೇ ಒಂದು ಸಾಲು; ‘ಇನ್ನು ನಾನು ನಿಮಗೆ ಪತ್ರ ಬರೆಯಲಾರೆ.’ ಜತೆಗೆ ಸಾವಿರದ ಒಂದು ನೋಟ, ಅದರ ಒಂದು ಬದಿಯಲ್ಲಿ ‘ನಿಮ್ಮನ್ನು ಎಂದೆಂದಿಗೂ ಪ್ರೀತಿಸುವವಳು’ ಒಕ್ಕಣಿಕೆಯಷ್ಟೆ. ಆಗ ನನಗಾದ ಹತಾಶೆ, ದುಃಖ ಹೇಳಲಾರದಷ್ಟು. ನಮ್ಮೆದುರಿಗೆ ನಾವು ತುಂಬ ಇಷ್ಟ ಪಡುವ, ಪ್ರೀತಿಸುವ ವ್ಯಕ್ತಿಯೊಬ್ಬರು ಕಣ್ಮರೆಯಾಗುತ್ತಿದ್ದರೆ ಎಂಥ ನೋವು ಇರುತ್ತದೆಯೋ ಅಂಥ ನೋವು ಅದು. ಯಾರೊಂದಿಗೆ ಹಂಚಿಕೊಳ್ಳಲಿ, ಹೇಗೆ ಹೇಳಲಿ? ಆಗ ನನಗುಳಿದಿದ್ದ ‘ದುಃಖ’ ಮತ್ತು  ಆ ‘ನೋಟು’ ಮಾತ್ರ. ಅವಳ್ಯಾಕೆ ಆ ಸಾವಿರದ ನೋಟು ಮೇಲೆ ನಿಮ್ಮನ್ನು ಎಂದೆಂದೂ ಪ್ರೀತಿಸುವಳು ಬರೆದು ಕೊಟ್ಟಳು ಎಂದು ಈಗಲೂ ಯೋಚಿಸುತ್ತೇನೆ. ಉತ್ತರ ಮಾತ್ರ ಸಿಕ್ಕಿಲ್ಲ. ಬಹುಶಃ ಸಿಗಲು ಸಾಧ್ಯ ಇಲ್ಲ. ಅದು ಆಕೆಗೆ ಮಾತ್ರ ಗೊತ್ತು!
***
  ನೋಟ ಅಮಾನ್ಯತೆಯ ಗೆಲವು, ಸೋಲುಗಳೆರಡೂ ನಡೆದಿದೆ. ಈಗ ನನ್ನ ಬಳಿ ಇರುವ ಆ ಸಾವಿರದ ನೋಟು ವಿನಿಮಯ ಮಾಡಿಕೊಳ್ಳಬೇಕಾದ ಪರಿಸ್ಥಿತಿ. ಹಾಗೆಂದು, ವಿನಿಮಯ ಮಾಡಿಕೊಳ್ಳುತ್ತೇನೆಂದು ಭಾವಿಸಿಕೊಳ್ಳಬೇಕಿಲ್ಲ. ಸರಕಾರವೇನೋ ಆ ನೋಟಗಳ ಜೀವವನ್ನು ತೆಗೆದಿರಬಹುದು. ಆಕೆ ಕೊಟ್ಟ ಆ ನೋಟು ನನ್ನ ಜೀವನವನ್ನೇ ಪೊರೆದಿದೆ. ನೋಟು ರದ್ದಾಗಿರಬಹುದು; ನನ್ನ ಪ್ರೀತಿಯಲ್ಲ. ನೋಟಿಗೆ ವೌಲ್ಯ ಇಲ್ಲದಿರಬಹುದು; ಆಕೆ ಕೊಟ್ಟ ನೋಟಿನ ಬೆಲೆ ಕುಂದಿಲ್ಲ. ಅದು ಕೇವಲ ಸಾವಿರ ಬೆಲೆಯ ನೋಟಲ್ಲ. ಬಹುಶಃ ಆಕೆಗೂ ನನಗೆ ಕೊಟ್ಟ ಆ ಸಾವಿರದ ನೋಟು ಈಗ ನೆನಪಾಗಿರಬಹುದು?

This article has published in VijayKarnataka, on 21st nov 2016 edition