ಶುಕ್ರವಾರ, ಆಗಸ್ಟ್ 26, 2011

ಬದಲಾವಣೆ ರಿಮೋಟ್ ಕಂಟ್ರೋಲ್ಲಾ..?

ನಿರಾಶೆಯಲ್ಲಿ ಮಡುವಿನಲ್ಲಿತ್ತು


ಆ ಸಮುದಾಯ, ಇದು ಇಷ್ಟೇ ಲೈಫು

ಏನೇ ತಿಪ್ಪರಲಾಗ ಹಾಕಿದರೂ

ಬದಲಾಗಲ್ಲ ಸಿಸ್ಟಮ್ಮು

ಟೀವಿ ರಿಮೋಟ್ ಕಂಟ್ರೋಲ್ ಹಿಡಿದುಕೊಂಡೇ

ಹಿಡಿ ಶಾಪ ಹಾಕುತ್ತಿದ್ದರು

ಬದಲಾವಣೆ ಕೂಡಾ ರಿಮೋಟ್

ಹಾಗೇ ಇದ್ದರೆ ಎಷ್ಟು ಚೆನ್ನ

ಎಂದು ಗೊಣಗುತ್ತಿರುವಾಗಲೇ

ಅದ್ಯಾವುದೋ ಹಳ್ಳಿಯಲ್ಲಿ

ಸದ್ದಿಲ್ಲದೇ ಸುಧಾರಿಸಿದ

ಸದ್ದು ಮಾಡುವವರ ಮಧ್ಯೆ

ಕಮ೯ಕ್ಕೆ ತಾರುಣ್ಯ ತಂದುಕೊಟ್ಟ

ಮಹಾತ್ಮನ ಕೋಲು ಹಿಡಿದುಕೊಂಡೇ

ಹೊರಟು ನಿಂತ ಭ್ರಷ್ಟಾಚಾರದ ವಿರುದ್ಧ

ಮತ ಹಾಕುವ ದಿನವನ್ನು ರಜೆಯಾಗಿ

ಅನುಭವಿಸುವ ವಗಾ೯ವಗಿ೯

ಎದ್ದು ನಿಂತಿತ್ತು ಬೆನ್ನು ಹಿಂದೆ, ಮುಂದೆ

ಜೈಕಾರ, ಜೈಘೋಷ

ಅಣ್ಣಾ ಬಂದೇ ಬಿಟ್ಟ, ಗಾಂಧಿ ಪ್ರತಿರೂಪಿ

ತಂದೇ ಬಿಟ್ಟ ಭ್ರಷ್ಟಾಚಾರ ಮುಕ್ತ

ಸ್ವಾತಂತ್ರ್ಯ, ಬದಲಾಗೇ ಹೊಯ್ತು

ಎಂಬ ನಿಟ್ಟಿಸಿರುವ ಬಿಡುವ ಮೊದಲೇ

ಅಲ್ಲಲ್ಲಿ ವೈರುಧ್ಯ, ವೈರತ್ವ ಹೆಡೆ

ಎತ್ತಿ ಕುಕ್ಕುವಾಗಲೇ ಕುಳಿತು ಬಿಟ್ಟ

ಅನ್ನ ನೀರು ಬಿಟ್ಟು ಅಣ್ಣ

ಬದಲಾವಣೆ ರಿಮೋಟ್ ಕಂಟ್ರೋಲ್ಲಾ..?

ಹಾಗಿದ್ದರೆ ಎಷ್ಟು ಚೆನ್ನಣ್ಣ.

ಹೇಗಿದ್ದರೂ ಹಾಗಿದ್ದರೂ

ಏನಂದರೂ ಏನ್ ಅನ್ನದಿದ್ದರೂ

ನಮ್ಮೊಳಗೇ ಕಿಚ್ಚು ಹಚ್ಚಿದ್ದು ಮಾತ್ರ

ನಿಜವಣ್ಣ, ರಜೆಯ ಮಜೆಯಲ್ಲಿದ್ದ

ಮಂದಿಯನ್ನು ಕೊಂಚವಾದರೂ

ಎಬ್ಬಿಸಿದೆಯಲ್ಲ ನಿನಗಿದೋ ಸಲಾಂ





ಗುರುವಾರ, ಆಗಸ್ಟ್ 25, 2011

ಸಾರಿ ಪ್ರೇಮ್... ಯು ಆರ್ ನಾಟ್ ಎ ಜೋಗಿ ಪ್ರೇಮ್!

ತುಂಬಾ ನಿರೀಕ್ಷೆ ಇಟ್ಟುಕೊಂಡು ಜೋಗಯ್ಯ ನೋಡಲು ಹೋಗಿದ್ದೆ. ಆದರೆ, ಸಿನಿಮಾ ನೋಡುತ್ತಿದ್ದ ಅರೆಗಳಿಗೆಯಲ್ಲೇ ನಿರೀಕ್ಷೆಯಲ್ಲಿ ಠುಸ್ ಆಯ್ತು. ಹ್ಯಾಟ್ರಿಕ್ ಸೂಪರ್ ಚಿತ್ರಗಳನ್ನು ನೀಡಿದ್ದ ಪ್ರೇಮ್, ಜೋಗಯ್ಯ ಚಿತ್ರವನ್ನು ಕಥೆಯಿಲ್ಲದೇ ಎಳೆಯಬಾರದಿತ್ತು. ಪ್ರಥಮಾಧ೯ದಲ್ಲಿ ರವಿಶಂಕರ್ ಪಾತ್ರ ನಿಮಗೆ ಕೊಂಚ ರಿಲೀಫ್ ನೀಡುತ್ತದೆ. ಅದೇ ಪಾತ್ರವನ್ನು ದ್ವಿತೀಯಾಧ೯ದಲ್ಲೂ ವಿಸ್ತರಿಸಿದ್ದರೆ ವೀಕ್ಷಕನಿಗೆ ಕೊಂಚವಾದರೂ ನೆಮ್ಮದಿ ಸಿಗುತ್ತಿತ್ತು.


ಅಷ್ಟಕ್ಕೂ ಈ ಚಿತ್ರದ ಕಥೆ ಏನು ಎಂದು ಹುಡುಕಲು ಹೊರಟರೆ ನಿಮ್ಮಂಥ ಮೂಖ೯ರು ಯಾರು ಇಲ್ಲ. ಯಾಕೆಂದರೆ ಕಥೆ ಇಲ್ಲದೆ ಸಿನಿಮಾ ಹೇಗೆ ಮಾಡಬಹುದು ಎಂಬುದನ್ನು ಪ್ರೇಂರಿಂದ ಕಲಿಯಬಹುದು(?). ಕೇವಲ್ ಗಿಮಿಕ್ ಗಳಿಂದ ಚಿತ್ರವನ್ನು ಗೆಲ್ಲಿಸುವುದಾದರೆ ಇಷ್ಟೊತ್ತಿಗೆ ಸುಮಾರು ಚಿತ್ರಗಳು ಗೆಲ್ಲಬೇಕಾಗಿತ್ತು. ಯಾವುದೇ ಗಿಮಿಕ್ ಮಾಡಿದರೂ ಪ್ರೇಕ್ಷಕನನ್ನು ಎರಡು ದಿನಗಳವರೆಗೆ ಚಿತ್ರಮಂದಿರಕ್ಕೆ ಬರವಂತೆ ಮಾಡಬಹುದೇ ಹೊರತು ಪೂತಿ೯ಯಾಗಿಲ್ಲ. ಒಂದು ಚಿತ್ರ ಯಶಸ್ವಿಯಾಗಲು ಗಿಮಿಕ್(ಅತಿಯಾದ ಗಿಮಿಕ್ ಅಲ್ಲ) ಕೂಡಾ ಒಂದು ಅಂಶವಷ್ಟೇ. ಅದನ್ನೇ ನೆಚ್ಚಿಕೊಂಡರೆ ಜೋಗಯ್ಯ ತರಹವಾಗುತ್ತದೆ. ಯಾಕೆಂದರೆ, ಚಿತ್ರ ಬಿಡುಗಡೆಯ ಮುಂಚೆಯೇ ನೀವು ಬೆಟ್ಟದಷ್ಟು ನಿರೀಕ್ಷೆ ಮೂಡಿಸುತ್ತೀರಿ. ಆ ಚಿತ್ರವನ್ನು ನೋಡಿ ಹೊರ ಬಂದಾಗ ಪ್ರೇಕ್ಷಕನ ಮನದಲ್ಲಿ ನಿರೀಕ್ಷೆ ಠುಸ್ಸಾಗಿದ್ದರೆ ಮುಗೀತು ಚಿತ್ರದ ಕಥೆ ಅಲ್ಲಿಗೆ. ನೀವು ಎಷ್ಟು ನಿರೀಕ್ಷೆಯನ್ನು ಹೆಚ್ಚಿಸುತ್ತೀರೋ ಅಷ್ಟೇ ಚೆನ್ನಾಗಿ ಚಿತ್ರವನ್ನು ನಿರೂಪಿಸಬೇಕು. ಆಗಲೇ ಪ್ರೇಕ್ಷಕ ಮರಳಿ ಚಿತ್ರಮಂದಿರಕ್ಕೆ ಹೋಗಲು ಸಾಧ್ಯ. ಆದರೆ, ಪ್ರಚಾರ ಮಾಡಿದಂತೆ ಎಷ್ಟೋ ಸಿನಿಮಾಗಳು ಹಾಗೆ ಇರುವುದೇ ಇಲ್ಲ. ಪ್ರಚಾರ ನಂಬಿ ಚಿತ್ರಮಂದಿರಕ್ಕೆ ಹೋದರೆ ನಿರಾಶೆ ಗ್ಯಾರಂಟಿ. ಜೋಗಯ್ಯ ಕೂಡಾ ಇದೇ ಸಾಲಿಗೆ ಸೇರುತ್ತದೆ.

ಇದರ ಮಧ್ಯೆಯೇ, ಶಿವಣ್ಣ ಜೋಗಯ್ಯದಲ್ಲಿ ಅಚ್ಚರಿ ಮೂಡಿಸುತ್ತಾರೆ. ಅಭಿಯನಕ್ಕೆ ಸಂಬಂಧಿಸಿದಂತೆ ತುಂಬಾ ಸಾಧ್ಯತೆಗಳನ್ನು ಹೊರ ಹಾಕುವುದಕ್ಕೆ ತಮ್ಮಿಂದ ಸಾಧ್ಯ ಎಂಬುದನ್ನು ಮತ್ತೆ ನಿರೂಪಿಸಿದ್ದಾರೆ. ಚಿತ್ರದಲ್ಲಿ ಅವರು ವೈಸ್ ಮಾಡ್ಯೂಲೇಷನ್ ಗೆ ಪ್ರಯತ್ನಿಸಿದ್ದಾರೆ. ಚಿತ್ರ ನೋಡುವಾಗ ಕೆಲವು ಸನ್ನಿವೇಶಗಳಲ್ಲಿ ಅವರ ಮುಖ ಭಾವ ರಾಜಕುಮಾರ ಅವರನ್ನು ನೆನಪಿಸಿದರೆ ಅದು ಅವರ ಅಭಿನಯಕ್ಕೆ ಸಂದ ಜಯ.

ಇನ್ನು ಚಿತ್ರದ ಹಾಡುಗಳ ವಿಷಯಕ್ಕೆ ಬಂದರೆ ವಿ.ಹರಿಕೖಷ್ಣ ಫುಲ್ ಸ್ಕೋರ್ ಮಾಡುತ್ತಾರೆ. ಅದ್ಭುತ ಎನ್ನುವಂಥ ಟ್ಯೂನ್ ಗಳನ್ನು ಕೊಟ್ಟಿಲ್ಲವಾದರೂ ಇಂಪಾಗಿವೆ. ಮನಸ್ಸಿಗೆ ಹಿಡಿಸುತ್ತವೆ. ಹಾಗೆಯೇ ಹಾಡುಗಳನ್ನು ಚಿತ್ರೀಕರಣ ಮಾಡಿರುವ ಪರಿ ಹಾಗೂ ಅವುಗಳ ಕಲ್ಪನೆಯಲ್ಲಿ ಪ್ರೇಮ್ ಗೆಲ್ಲುತ್ತಾರೆ. ಅದೇ ಕಲ್ಪನೆ, ರೀತಿ, ಕ್ರಮವನ್ನು ಸ್ಕ್ರೀನ್ ಪ್ಲೆ, ಕಥೆ, ನಿದೇ೯ಶನದಲ್ಲಿ ತೋರಿದ್ದರೆ ಜೋಗಯ್ಯ ಅದ್ಭುತ ಚಿತ್ರವಾಗುತ್ತಿತ್ತು. ಆದರೆ, ಪ್ರೇಮ್ ಸಂಪೂಣ೯ವಾಗಿ ಎಡವಿದ್ದಾರೆ. ಅವರಷ್ಟೇ ಎಡುವುದಲ್ಲದೇ ಪ್ರೇಕ್ಷಕರನ್ನು ಕೂಡಾ ಎಡುವಂತೆ ಮಾಡುತ್ತಿದ್ದಾರೆ. ನಾವು ಚಿತ್ರವನ್ನು ಹಾಗೆ ತೆಗೆದಿದ್ದೇವೆ. ಹೀಗೆ ತೆಗಿದಿದ್ದೇವೆ. ಅಷ್ಟೊಂದು ಕಷ್ಟಪಟ್ಟಿದ್ದೇವೆ. ಇಷ್ಟೊಂದು ಕಷ್ಟಪಟ್ಟಿದ್ದೇವೆ ಎಂದು ಟೀವಿಗಳಲ್ಲಿ ಹೇಳುತ್ತಿದ್ದಾರೆ ಪ್ರೇಮ್. ನೀವು ಕಷ್ಟಪಟ್ಟಿದ್ದು ನಿಜವೇ ಇರಬಹುದು. ನಿಮ್ಮ ಕಷ್ಟಕ್ಕೆ ಬಲ, ಫಲ ಸಿಗಬೇಕಿದ್ದರೆ ಚಿತ್ರದ ಒಟ್ಟು ಫಲಿತಾಂಶವನ್ನು ನಿಧ೯ರಿಸುತ್ತದೆ ಎಂಬುದನ್ನು ಮರೆಯಬಾರದು. ಪ್ರೇಮ್ ತುಂಬಾ ಕಷ್ಟಪಟ್ಟಿದ್ದಾರೆಂದು ಎಂದು ನಿಮಗಿರುವ ಅಭಿಮಾನಿಗಳು ಚಿತ್ರಮಂದಿರಕ್ಕೆ ಹೋಗಬಹುದು. ಆದರೆ, ಕೇವಲ ಉತ್ತಮ ಚಿತ್ರಗಳನ್ನು ನೋಡಬೇಕು ಎಂದು ಅಭಿಮಾನ ಇಟ್ಟುಕೊಂಡವರನ್ನು ನೀವು ಚಿತ್ರಮಂದಿರಕ್ಕೆ ಎಳೆಯಲು ಸಾಧ್ಯವಿಲ್ಲ. ಅವರೂ ಬಂದಾಗಲೇ ಚಿತ್ರ ಗೆಲ್ಲೋದು. ಅಂದರೆ, ಒಂದು ಚಿತ್ರ ಗೆಲ್ಲಬೇಕಾದರೆ ಎಲ್ಲ ವಗ೯ದ ಜನರು ಬರವಂತಾಗಬೇಕು. ಬರಬೇಕು. ಆಗಲೇ ಗೆಲವು ಅಲ್ಲವೇ..?

ಜೋಗಯ್ಯ ಇಡೀ ಚಿತ್ರವಾಗಿ ಇಷ್ಟ ಆಗೋದಿಲ್ಲ. ಹಾಡುಗಳಿಗೆ ಇಷ್ಟವಾಗುತ್ತದೆ. ಕೆಲವು ದೖಶ್ಯಗಳಾಗಿ ಇಷ್ಟವಾಗುತ್ತದೆ ಅಷ್ಟೆ. ಬಿಡಿ ಬಿಡಿಯಾಗಿ ಚಿತ್ರ ಇಷ್ಟವಾಗುವುದಾದರೆ ಗೆಲ್ಲವುದು ಹೇಗೆ..? ಚಿತ್ರಕಥೆಯಲ್ಲಿ ಬಿಗುವಿಲ್ಲ. ಶಿವಣ್ಣನ ನೂರನೇ ಚಿತ್ರವಾಗಿರುವುದರಿಂದ ಸಶಕ್ತ ವಿಲನ್ ಕ್ಯಾರೆಕ್ಟರೇ ಇಲ್ಲ!!.

ಇದಿಷ್ಟು ಜೋಗಯ್ಯ ನೋಡಿದ ಮೇಲೆ ನನಗನ್ನಿಸಿದ್ದು. ನನಗೆ ಅನ್ನಿಸಿದ ಹಾಗೆಯೇ ನಿಮಗೆ ಅನ್ನಿಸಬೇಕಿಲ್ಲ. ನಿಮಗೆ ಇಷ್ಟವಾಗಬಹುದು. ಪ್ರೇಮ್ ಮೇಲೆ ತುಂಬಾ ಅಭಿಮಾನ ಇಟ್ಟುಕೊಂಡು, ನಿರೀಕ್ಷೆ ಇಟ್ಟುಕೊಂಡಿದ್ದರಿಂದ ನನಗೆ ಹಾಗೆ ಅನ್ನಿಸರಬಹುದು ಕೂಡಾ. ಇದು ನನ್ನ ಪ್ರಾಮಾಣಿಕ ಅನಿಸಿಕೆ ಅಷ್ಟೇ.

ಸಾರಿ ಪ್ರೇಮ್... ಯು ಆರ್ ನಾಟ್ ಎ ಜೋಗಿ ಪ್ರೇಮ್!
ಹೀಗೆ ಹೇಳದೇ ಬೇರೆ ದಾರಿ ಇಲ್ಲ.