ಸೋಮವಾರ, ಅಕ್ಟೋಬರ್ 15, 2007

ಚೆನ್ನೈ ರೋಡಿಗಿಳಿದ ಬಿನ್ನಾಣಗಿತ್ತಿಯರು...!


ಅರೇ.. ಚೆನ್ನೈ ರಸ್ತೆಗಳಲ್ಲಿ ಬಿನ್ನಾಣಗಿತ್ತಿ(ಬೆಡಗಿ)ಯರು ಸುತ್ತುತ್ತಿರಲಿಲ್ಲವೇ ಎಂದು ಪ್ರಶ್ನಿಸಬೇಡಿ. ಬೆಂಗಳೂರಿನ ಎಂಜಿ ರಸ್ತೆಯಲ್ಲಿ ತಿರುಗಾಡುವ ಬಿಂಕದ ಬೆಡಗಿಯರ ಹಾಗೆಯೇ ಚೆನ್ನೈನ ಮೌಂಟ್ ರೋಡ್, ಸ್ಪೆನ್ಸರ್ ಫ್ಲಾಜಾದಲ್ಲಿ ಕಣ್ಣಿಗೆ ಬಿಳುತ್ತಾರೆ. ಕಣ್ಣಿಗೂ ತಂಪು.. ಮನಸ್ಸಿಗೂ ಹಿತ. ಇದು ಪಡ್ಡೆ ಹುಡುಗರ ಘೋಷ ವಾಕ್ಯ.

ಆದರೆ, ನಾನು ಇಲ್ಲಿ ಹೇಳಲು ಹೊರಟಿದ್ದು ತಮ್ಮ ಅಂಗಾಗಳನ್ನು ಬಳಕಿಸುವ ಲತಾಂಗಿಯರ ಬಗ್ಗೆಯಲ್ಲ. ಬದಲಾಗಿ, ಚೆನ್ನೈ ಹೈಟೆಕ್ ಬಸ್‌ಗಳ ಬಗ್ಗೆ. ಚೈನ್ನೈ ರೋಡಿಗೆ ಹೈಟೆಕ್ ಬಸ್ಸುಗಳು ಲಗ್ಗೆ ಇಟ್ಟಿವೆ. ಈ ಹೈಟೆಕ್ ಬಸ್ಸುಗಳನ್ನೇ ನಾನು ಬಿನ್ನಾಣಗಿತ್ತಿಯರು ಎಂದು ಕರೆದಿದ್ದು. ಯಾಕೆಂದರೆ, ಚೆನ್ನೈ ನಗರ ಸಾರಿಗೆ ಬಸ್‌ಗಳನ್ನು ನೀವೊಂದು ಸಾರಿ ಗಮನಿಸಬೇಕು. ಅವು ಯಾವ ರೀತಿಯಾಗಿ ಇವೆ ಎಂದರೆ, ನೂರು ವರ್ಷದ "ಅಜ್ಜಿ"ಯ ಹಾಗೆ ಇವೆ. (ಎಲ್ಲ ಅಜ್ಜಿಯಂದಿರ ಕ್ಷಮೆ ಕೋರಿ)

ಅದಕ್ಕಾಗಿಯೇ ಹೈಟೆಕ್ ಬಸ್ಸುಗಳು ಒಂದು ನಮೂನೆ ಸಂಚಲನ ಮೂಡಿಸಿವೆ ಇಲ್ಲಿಯ ಜನರಿಗೆ. ನಾನು ಚೆನ್ನೈಗೆ ಬಂದು ಸುಮಾರು ಒಂದು ವರ್ಷವಾಗುತ್ತ ಬಂತು. ಚೈನ್ನೈಗೆ ಬಂದ ಮೊದಲ ದಿನವೇ ನನಗೆ ಆಶ್ಚರ್ಯ ತಂದಿದ್ದು ಇಲ್ಲಿಯ ಬಸ್ಸುಗಳು. ಅವುಗಳನ್ನು ನೋಡಿದಾಕ್ಷಣ ನನಗೆ ಈ ಬಸ್ಸುಗಳ ಸ್ವಾತಂತ್ರ್ಯ ಪೂರ್ವದ ಬಸ್ಸುಗಳಿರಬೇಕು ಎಂದು ಕೊಂಡಿದ್ದೆ.

ಆದರೆ, ಲಲನೆಯರು ಹೇಗೆ ಆಧುನೀಕರಣ ಮತ್ತು ಜಾಗತೀಕರಣ ಸೋಂಕಿಗೆ ಒಳಗಾಗಿ ಅಪಡೆಟ್(!) ಆಗುತ್ತಿದ್ದಾರೋ ಹಾಗೆಯೇ ಚೆನ್ನೈ ಬಸ್ಸುಗಳು ಅಪಡೆಡ್ ಆಗುತ್ತಿವೆ. ಕಳೆದ ಆರು ತಿಂಗಳ ಹಿಂದೆ ಸೆಮಿ ಲಕ್ಸುರಿಯಂಥ ಬಸ್ಸುಗಳು ಚೆನ್ನೈ ರಸ್ತೆಗಳನ್ನು ಆವರಿಸಿಕೊಂಡಿವೆ. ಇದೀಗ ಒಂದು ವಾರದಿಂದ ಅಲ್ಲೊಂದು ಇಲ್ಲೊಂದು ಹೈಟೆಕ್(ಬಿನ್ನಾಣಗಿತ್ತಿ) ಬಸ್ಸುಗಳು ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

ಚೆನ್ನೈನಲ್ಲಿ ಪ್ರತಿಯೊಂದು ಆಫೀಸು, ಕಟ್ಟಡ, ಮನೆಗಳಲ್ಲಿ ಕಡ್ಡಾಯವಾಗಿ ಎಸಿ ಹಾಕಿಸಿರುತ್ತಾರೆ. ಆದರೆ, ಈ ಬಸ್ಸುಗಳಲ್ಲಿ ಯಾಕೆ ಆ ರೀತಿ ಮಾಡಬಾರದು ಎಂದು ನಾನು ಚೆನ್ನೈಗೆ ಹೊಸದಾಗಿ ಬಂದಾಗ ಯೋಚಿಸುತ್ತಿದ್ದೆ. ಆದರೆ, ಈಗ ಎಸಿ ಹೈಟೆಕ್ ಬಸ್ಸುಗಳೇ ರೋಡಿಗಿಳಿದಿವೆ.

ಮಾಡ್ ಹುಡುಗಿಯ ಚೆಲುವಿನ ಹಾಗೆ ಈ ಹೈಟೆಕ್ ಬಸ್ಸುಗಳಿಗೆ ಒಂದು ಅಂದವಿದೆ.. ಚೆಂದವಿದೆ. ಅಲ್ಲಲ್ಲಿ ಉಬ್ಬು-ತಗ್ಗುಗಳಿವೆ(?). ನೋಡಲು ನಯನ ಮನೋಹರವಾಗಿವೆ. ಹುಷಾರ್, ಈ ಬಸ್ಸುಗಳು ತುಂಬಾ ದುಬಾರಿ, ಹುಡುಗಿಯರ ಹಾಗೆ....! ಆದರೆ, ಇಲ್ಲಿಯ ಜನಕ್ಕೆ ಸ್ವಾತಂತ್ರ್ಯ ಪೂರ್ವದ(!) ಬಸ್ಸುಗಳ ಮೇಲೆ ಜಾಸ್ತಿ ಮೋಹ ಅನಿಸುತ್ತದೆ. ಯಾಕೆಂದರೆ ಈ 'ಅಜ್ಜಿ' ಬಸ್ಸುಗಳು ಯಾವಾಗಲೂ ಭರ್ತಿಯಾಗಿರುತ್ತವೆ.

ಈ 'ಅಜ್ಜಿ' ಬಸ್ಸುಗಳು ಪ್ರಯಾಣವೇ ಒಂದು ರೀತಿಯದ್ದು. ಬೇಸಿಗೆಯಲ್ಲಂತೂ ಹೇಳತೀರದು ಆ ಗೋಳು. ಯಾವ ಕಡೆಯಿಂದ ಗಾಳಿ ಬರದಂತೆ ಜನ ಜೋತು ಬಿದ್ದಿರುತ್ತಾರೆ. ಭವಿಷಃ ಮನೆಯಲ್ಲಿ ವ್ಯಾಯಾಮ ಮಾಡದವರಿಗೆ ಇಲ್ಲಿ ಒಂದು ತರಹ ವ್ಯಾಯಾಮ ಮಾಡಿದಂತೆ ಅನುಭವಾಗಲಿಕ್ಕೂ ಸಾಕು. ಊಹಿಸಿಕೊಳ್ಳಿ ಹಾಗೆ ಸುಮ್ಮನೆ, ಚೆನ್ನೈನಂತ ಬಿಸಿಲು ನಗರದಲ್ಲಿ 'ಅಜ್ಜಿ'ಕಾಲದ ತುಂಬಿದ ಬಸ್ಸಿನಲ್ಲಿನ ಸ್ಥಿತಿಯನ್ನು..!?

ಈ ಚೆನ್ನೈ ಮಹಾನಗರವೇ ಹಾಗೆ, ಯಾವುದನ್ನು ಅಷ್ಟು ಸುಲಭವಾಗಿ ತನ್ನೊಳಗೆ ಬಿಟ್ಟುಕೊಳ್ಳುವುದಿಲ್ಲ. ಇನ್ನೂ ಊರಾಚೆಯೇ ನಿಲ್ಲಿಸಿ, ಪೂರ್ವಾಪರ ವಿಚಾರಿಸಿ, ತಿಳಿದುಕೊಂಡು ಒಳಗೆ ಬಿಟ್ಟುಕೊಳ್ಳುತ್ತದೆ, ಆಧುನಿಕತೆಗೆ ತೆರೆದುಕೊಳ್ಳುತ್ತದೆ ಅನ್ನಿಸುತ್ತದೆ ನನಗೆ. ಪಕ್ಕದ ಬೆಂಗಳೂರಿನಲ್ಲಿ ಈ ಹೈಟೆಕ್ ಬಸ್ಸುಗಳು ರಸ್ತೆಗಿಳಿದ ಸುಮಾರು ವರ್ಷಗಳೇ ಕಳೆದಿವೆ. ಆದರೆ, ಚೈನ್ನೈಗೆ ಈಗ ಬಂದಿದೆ ಆ ಕಾಲ.

ತನ್ನಷ್ಟಕ್ಕೆ ತಾನೇ ಮಡಿವಂತ ನಗರವೆಂದು ಭಾವಿಸಿಕೊಳ್ಳುವ ಚೆನ್ನೈ. ಮೇಲ್‌ನೋಟಕ್ಕೆ ತುಂಬಾ ಸಾಂಪ್ರದಾಯಿಕ ನಗರವೆಂದು ತೋರಿದರು, ಆ ಆಧುನಿಕತೆ ಹೆಮ್ಮಾರಿ, ಜಾಗತೀಕರಣದ ಬಿರುಗಾಳಿ ಇಲ್ಲಿಯ ಸಾಂಪ್ರದಾಯಿಕ ಬೇರುಗಳನ್ನು ಅಲ್ಲಾಡಿಸಿವೆ.

ಇಲ್ಲಿಗೂ ಅನೇಕ ಬಹುರಾಷ್ಟ್ರೀಯ ಸಾಫ್ಟವೇರ್ ಕಂಪೆನಿಗಳು ಲಗ್ಗೆ ಇಡುತ್ತಿವೆ. ಹೀಗಾಗಿಯೇ ಅರೆ ಮನಸ್ಸಿನಲ್ಲಿಯೇ ಚೆನ್ನೈ ತನ್ನನ್ನು ತಾನು ಈ ಥಳಕು -ಬಳಕು ಮಾದರಿಯ ಜೀವನಕ್ಕೆ ಅನಾವರಣಗೊಳ್ಳುತ್ತಿದೆಯಾ....? ಗೊತ್ತಿಲ್ಲ. ಒಂದು ಅಂತೂ ಸತ್ಯ. ಚೈನ್ನೈಗೆ ಈಗ ಕೇವಲ ಸಾಂಪ್ರದಾಯಿಕ ನಗರವಾಗಿ ಉಳಿದಿಲ್ಲ. ಹೈಟೆಕ್ ಬಿನ್ನಾಣಗಿತ್ತಿಯರೂ ರಸ್ತೆಗಿಳಿದಂತೆ, ತುಂಬಾ ಹಳೆಯ ಚೆನ್ನೈ ಕೂಡಾ ಮತ್ತಷ್ಟು ಯಂಗ್ ಆಂಡ್ ಎನರ್ಜಿಟಿಕ್ ಆಗಿ ಕಾಣುತ್ತಿದೆ.

5 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಚೆನೈನ ಬಸ್ಸುಗಳು 1947 ರ ಮಾದರಿಯಾದರೂ, ಇಲ್ಲಿನ ಡ್ರೈವಿಂಗ್ ಮಾತ್ರ perfect. ರಸ್ತೆ ಅಪಘಾತಗಳು ಕರ್ನಾಟಕಕ್ಕೆ ಹೋಲಿಸಿದರೆ ಚೆನೈದಲ್ಲಿ ಕಡಿಮೆ ಅಂತ ಕಾಣುತ್ತೆ.


ಲೇಖನ ಚೆನ್ನಾಗಿದೆ...

Anu ಹೇಳಿದರು...

Nice Story and good comparison with keen observation.

Parisarapremi ಹೇಳಿದರು...

anthu Chennai gu banthu!! Delhi ge barbeku nOdi ivaru..

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

Thanks for comments

Srikanth - ಶ್ರೀಕಾಂತ ಹೇಳಿದರು...

ನಿಮ್ಮ ಬರವಣಿಗಯ ಶೈಲಿ ನನಗೆ ಬಹಳ ಹಿಡಿಸಿತು. ಹೀಗೇ ಮುಂದುವರಿಸಿ. ನಿಮ್ಮ ಬ್ಲಾಗಿನಲ್ಲಿರುವ "ನನ್ನ ಹಾಡು" ಹಿಂದಿರುವ ಚಿತ್ರ ಅದ್ಭುತ! ಎಲ್ಲಿ ತೆಗೆದ ಫೋಟೋ ಅದು?